' ಬದುಕಿನ ದಿವ್ಯ ಕ್ಷಣ '
ಸಾವು
ಬದುಕಿನ ಒಂದು ದಿವ್ಯ ಕ್ಷಣ
ಅದು ದೊಡ್ಡವ ಸಣ್ಣವ
ಬಡವ ಬಲ್ಲಿದ ಆ ಜಾತಿ ಈ ಜಾತಿ
ಆ ದೇಶದವ ಈ ದೇಶದವ
ಜ್ಞಾನಿ ಅಜ್ಞಾನಿ ಎನ್ನುವ ಬೇಧ ಅದಕಿಲ್ಲ
ಅವರು ಯಾರೆ ಇರಲಿ
ಜವರಾಯ ಬಂದೆರಗಿ ಬಿಡುತ್ತಾನೆ ಆತ
ಜೀವಾತ್ಮಗಳನು ಮುಕ್ತಗೊಳಿಸುತ್ತಾನೆ
ಹೀಗಾಗಿ ಅದೊಂದು ‘ದಿವ್ಯ ಕ್ಷಣ’
ಸ್ವಾಭಾವಿಕ ಅಸ್ವಾಭಾವಿಕ ಆತ್ಮಹತ್ಯೆ
ಕೊಲೆ ಅಪಘಾತದ ಸಾವು ಅದು
ಯಾವ ಸಾವೆ ಇರಲಿ ಅದು
ಶೂನ್ಯವನು ಸೃಷ್ಟಿಸುವಂತಹುದು
ಆದರೆ ದೈನಂದಿನ ಬದುಕು !
ಆ ಶೂನ್ಯವನು ತುಂಬುತ್ತ
ಸಾಗುವಂತಹುದು
ಸಜ್ಜನರ ಸಾವು
ಒಂದು ತುಂಬಲಾರದ ನಷ್ಟ
ಆ ಸಾವಿನ
ನಿರ್ವಾತವನು ತುಂಬುವುದು ಕಷ್ಟ
ಆದರೆ ದುಷ್ಟರ ಸಾವಿನ ನಿರ್ವಾತ
ಬಹು ಬೇಗ ತುಂಬಿ ಬಿಡುತ್ತೆ
ಸಾವಿಗೆ ಯಾವುದೆ ವ್ಯತ್ಯಾಸವಿಲ್ಲ
ಅದು ಬದುಕಿನ ನಿರಂತರತೆಗೆ
ವ್ಯತ್ಯಾಸವನು ತಂದೊಡ್ಡುವಂತಹುದು
ನಮ್ಮ ಅವಲಂಬಿತರು
ಗತಿಸಿ ಹೋದಾಗ ಒಂದು ತರಹದ
ಮಂಕು ಆವರಿಸಿ ಬಿಡುತ್ತದೆ
ನಾವೂ ಸತ್ತು ಹೋಗಿ ಬಿಡೋಣವೆ
ಎಂಬ ಭಾವ ಸುಳಿದು
ಯಾತನೆಯನ್ನುಂಟು ಮಾಡುತ್ತೆ
ಸಾವಿಗೆ ಕಾರಣಗಳು ಹಲವು ವಿಧ
ಅದಕೆ ವಯೋಬೇಧ ಲಿಂಗಬೇಧ
ವರ್ಣಬೇಧ ಯಾವುದೂ ಇಲ್ಲ
ಕಾಲವೆಂಬುದು ಸಾವಿನ ದುಃಖದ
ಪರಮೌಷಧಿ
ಭಾವ ಜೀವಿಗಳಿಗೆ
ಸಾವು ಒಂದು ಮರೆಯಲಾಗದ
ಆಘಾತ ! ಆದರೆ ನಿರ್ಭಾವುಕ ಕ್ರಮೇಣ
ಆ ನೋವಿನಿಂದ ಹೊರಬಂದು
ಬದುಕಿಗೆ ಹೊಂದಿ ಕೊಳ್ಳುತ್ತಾನೆ ಸುಖ
ದುಃಖಗಳೆರಡೂ ಆ-ಜನ್ಮ ಬಂಧುಗಳು
ಜನನ ಸಾವಿನ ದುಃಖವನ್ನು
ಮರೆಸಿ ಬಿಡುತ್ತೆ ಸಾವು
ಜೀವನದ ನಶ್ವರತೆಯ ದರ್ಶನ
ಮಾಡಿಸುತ್ತೆ ಬದುಕು ಜನನ ಮರಣಗಳ
ಒಂದು ನಿರಂತರ ‘ಜೀವನ ಚಕ್ರ’
ಜೀವನದ ನಶ್ವರತೆಯ ಅರಿವಿದ್ದೂ
ಮನುಷ್ಯ ನಾನು ನನ್ನದು ಎನ್ನುವ
ಅಹಂನಲ್ಲಿಯೆ ಬದುಕಿಕೊಂಡು ಬರುತ್ತಾನೆ
ಇದೊಂದು ಜೀವನ್ಮುಖಿ ಧೋರಣೆ
ಉತ್ಸಾಹ ಬದುಕಿನ ಧೋರಣೆಯಾಗಬೇಕು
ಆಗ ಮಾತ್ರ ಅದು ಸಹನೀಯ
ವಯಸ್ಸು ಆದಂತೆ ಮನಸು
ಮಾಗಿದಂತೆ ಯೌವನ ಹಿಮ್ಮೆಟ್ಟಿದಂತೆ
ಬದುಕಿನ ಜಿಜ್ಞಾಶೆ ಕಾಡ ತೊಡಗುತ್ತೆ
ಯಾಕೆ ? ಗೊತ್ತಿಲ್ಲ !
ಇದು ಸಾವಿನ ಭಯದಿಂದ
ಹುಟ್ಟಿದ ವೇದಾಂತವೆ ? ಅದು
ಬದುಕಿನ ಸಿದ್ಧಾಂತ ಜೊತೆಗೆ
ಜೀವನಾನುಭವ ಕೂಡ ಅದು
ಕೊಡಮಾಡುವ ವ್ಯಕ್ತಿತ್ವ
ಜೀವನದ ಊರುಗೋಲು !
ಜೀವಿಸುವ ಪ್ರತಿಯೊಂದು
ಋತುವೂ ಮಹಾನ್ ಋತುವೆ
ಒಂದೊಂದು ಚಣವೂ
ದಿವ್ಯಾನುಭೂತಿಯ ಚಣ !
ಆವರಿಸುವ ವಯಸ್ಸು
ದೇಹಕ್ಕೆ ಹೊರತು ಮನಸಿಗಲ್ಲ
ಸಾವು ತನ್ನ ಕಪ್ಪು ಚಾದರವನ್ನು
ಹರಡುವ ಚಣದ ವರೆಗೂ
ಸಂತಸದಿಂದ ಬದುಕಿ ಬಿಡಬೇಕು
ಯಾಕೆಂದರೆ ಜೀವನ ನಶ್ವರವಾದರೂ
ಬದುಕಿನಲಿ ಬರುವ
ಒಂದೊಂದು ಕ್ಷಣವೂ ದಿವ್ಯ ಕ್ಷಣ !
***
ಚಿತ್ರ ಕೃಪೆ : ಗೂಗಲ್ ಇಮೇಜ್ ನಿಂದ
Comments
ಉ: ' ಬದುಕಿನ ದಿವ್ಯ ಕ್ಷಣ '
ಸಾವೊಂದು ದಿವ್ಯಕ್ಷಣ..
ಹಾಗೇ ಬದುಕಿನಲಿ ಬರುವ ಒಂದೊಂದು ಕ್ಷಣವೂ ದಿವ್ಯ ಕ್ಷಣ..
ಪಾಟೀಲರೆ, ಕವನ ಚೆನ್ನಾಗಿದೆ.
In reply to ಉ: ' ಬದುಕಿನ ದಿವ್ಯ ಕ್ಷಣ ' by ಗಣೇಶ
ಉ: ' ಬದುಕಿನ ದಿವ್ಯ ಕ್ಷಣ '
ganesha ravarige vandanegalu
naanu upayogisuva kampyootarinalli monneyinda tondare kaanisi kondide. kannadalli uttarisalaguttilla. snehitara lyapatapinalli e kavanavannu ninne haakidde. tamma pratikriyege dhanyavaadagalu.
ಉ: ' ಬದುಕಿನ ದಿವ್ಯ ಕ್ಷಣ '
ಪಾಟೀಲರೆ ನಮಸ್ಕಾರ. ಸಾವು ಬದುಕಿನ ನಡುವಿನ ಸುತ್ತೋಲೆಯನ್ನು ಬಿಚ್ಚಿಟ್ಟರೆ ಪ್ರಸ್ತುತಗೊಳ್ಳುವ ದಿವ್ಯ ಕ್ಷಣಗಳನ್ನು ಅನುಭಾವಿಸಿದರೆ ಬದುಕಿನ ಸಾರ್ಥಕತೆಗೊಂದು ಅರ್ಥ ಸಿಗುತ್ತದೆ. ಸಾವಿನ ಲಹರಿಯನ್ನು ಬದುಕಿನ ಹಿನ್ನಲೆಯಲ್ಲಿ ವಿಶ್ಲೇಷಿಸಿದ ಕವನ ಸಾವು ಬದುಕೆರಡರ ಅನಿವಾರ್ಯತೆಯನ್ನು ಎತ್ತಿ ತೋರಿದ ಹಾಗೆ ಸಾವಿನ ಹಿಂದಿನ ವಿಷಾದ ಭಾವವನ್ನು ಸಹ ದಿವ್ಯ ಗಳಿಗೆಯಾಗಿ ಕಟ್ಟಿಕೊಡುವ ಗ್ರಹಿಕೆ ಚೆನ್ನಾಗಿ ಮೂಡಿದೆ. ಧನ್ಯವಾದಗಳು.
ಉ: ' ಬದುಕಿನ ದಿವ್ಯ ಕ್ಷಣ '
ನಿಮ್ಮ ಬಂಧುವೊಬ್ಬರ ನಿಧನದ ಸಲುವಾಗಿ ಹೊರಗೆ ಇದ್ದುದಾಗಿ ಒಂದು ಬರಹಕ್ಕೆ ನಿಮ್ಮ ಪ್ರತಿಕ್ರಿಯೆಯಿಂದ ತಿಳಿಯಿತು. ಆ ಸಂದರ್ಭದಲ್ಲಿ ಉದಿಸಿದ ಭಾವಸ್ಫುರಣ ಹಂಚಿಕೊಂಡಿರುವುರೆಂದು ತೋರುತ್ತದೆ. ವಾಸ್ತವ ಚಿತ್ರಣ!
In reply to ಉ: ' ಬದುಕಿನ ದಿವ್ಯ ಕ್ಷಣ ' by kavinagaraj
ಉ: ' ಬದುಕಿನ ದಿವ್ಯ ಕ್ಷಣ '
ಕವಿ ನಾಗರಾಜ ರವರಿಗೆ ವಂದನೆಗಳು
ಇತ್ತೀಚಿನ ದಿನಗಳಲ್ಲಿ ಸಮೀಪದ ಸಂಬಂಧಿಗಳ ಮತ್ತು ಹೊರ ಜಗತ್ತಿನ ಅನೇಕ ಸಾಧಕರ ಸಾವುಗಳು ನನ್ನನ್ನು ಕೆಲವು ಕ್ಷಣ ವಿಚಲಿತನನ್ನಾಗಿ ಮಾಡಿದ್ದು ಸುಳ್ಳಲ್ಲ. ಹೀಗಾಗಿ ನನ್ನ ಇತ್ತೀಚಿನ ಕೆಲವು ಕವನಗಳಲ್ಲಿ ಸಾವನ್ನು ಕುರಿತು ಪದೆ ಪದೆ ಬಂದಿದೆ ಎನಿಸುತ್ತೆ. ತಮ್ಮ ಗ್ರಹಿಕೆಗೆ ಧನ್ಯವಾದಗಳು.