ಬದುಕು... ಮನುಕುಲಕ್ಕೆ ಸಾವಿನ ಕೊಡುಗೆ!!

ಬದುಕು... ಮನುಕುಲಕ್ಕೆ ಸಾವಿನ ಕೊಡುಗೆ!!

 


ಸಾವಿನ ನಂತರದ ಬದುಕು ಸಾವಿರಾರು ವರ್ಷಗಳಿಂದ ಇಡಿಯ ಮನು ಕುಲವನ್ನೇ ಕುತೂಹಲಕ್ಕೀಡು ಮಾಡಿದ ಒಂದು ಚಿಂತನೆ.
ನಾವುಗಳು ಹಳೆಯ ಕಪ್ಪು-ಬಿಳುಪು ಚಲನ ಚಿತ್ರಗಳಲ್ಲಿ ನೋಡಿರುವಂತೆ, ಯಾರೋ ಒಬ್ಬ ಮಹಾನ್ ಶಕ್ತಿಶಾಲಿ ಮಾಂತ್ರಿಕನ ಪ್ರಾಣ ಒಂದು ನಿಗೂಢ ಗುಹೆಯಲ್ಲಿನ ಪಂಜರದಲ್ಲಿರುವ ಗಿಳಿಯಲ್ಲಿ ಅಡಗಿರುತ್ತದೆ. ಅದರಂತೆಯೇ ಯಾವುದಾದರೂ ಪ್ರಾಣಿಗಳಲ್ಲಿ ಅಲ್ಲದೆ ಶರೀರದ ಯಾವುದೋ ಒಂದು ನಿರ್ದಿಷ್ಟ ಅಂಗದಲ್ಲಿ ಇರುವುದನ್ನು ನೋಡಿದ್ದೇವೆ. ಅಷ್ಟೇ ಏಕೆ, ಮಹಾಭಾರತದಲ್ಲಿ ಕಂಡಿರುವಂತೆ, ದುರ್ಯೋಧನನ ಪ್ರಾಣ ಅವನ ಉರುಗಳಲ್ಲಿರುತ್ತದೆ. ಅಂತೆಯೇ ಶ್ರೀಕೃಷ್ಣನ ಪ್ರಾಣ ಅವನ ಕಾಲಿನ ಹೆಬ್ಬೆರಳುಗಲ್ಲಿರುತ್ತದೆ. ಇವೆಲ್ಲವನ್ನೂ ಕಂಡಾಗ,ಭಾರತದಲ್ಲಿಯೇ ಈ ಬಗ್ಗೆ (ಸಾವಿನ ನಂತರದ ಬದುಕು) ಇರುವ ಕಲ್ಪನೆಗಳು ಮತ್ತು ಪುರಾಣಗಳಲ್ಲಿರುವ ಪುರಾವೆಗಳು, ನಮ್ಮನ್ನು ಈ ಕುರಿತು ಆಲೋಚಿಸಲು ಹಚ್ಚುತ್ತದೆ.

ಈ ಬಗೆಗಿನ ಯೋಚನೆ ಹೊಳೆದಾಗಲೆಲ್ಲ, ನಮ್ಮ ಮನಸಿಗೆ ಮೊದಲು ಅರಿವಾಗುವುದು ಸತ್ಯವಾನ ಮತ್ತು ಸಾವಿತ್ರಿಯ ಪ್ರಸಂಗ. ಮೃತ್ಯುದೇವನಾದ ಯಮರಾಜನು ತನ್ನ ಕೈಯಲ್ಲಿ ಪಾಶವನ್ನು ಹಿಡಿದು, ಮಹಿಷಾರೂಢನಾಗಿ ಸತ್ಯವಾನನ ಪ್ರಾಣವನ್ನು ಕೊಂಡೊಯ್ಯಲು ಮುಂದಾದಾಗ, ಸಾವಿತ್ರಿಯ ಪತಿವ್ರತಾ ಶಕ್ತಿಗೆ ಸೋತು ವರ ಕೊಡಲು ಮುಂದಾದಾಗ, ಸಾವಿತ್ರಿ ವರವನ್ನು ಕೋರುವ ಬಗೆಯೂ ವಿಭಿನ್ನವಾದುದು. ತಾನು ತನ್ನ ತಂದೆಗೆ ಒಬ್ಬಳೇ ಮಗಳಾಗಿರುವುದರಿಂದ, ತನ್ನ ಒಬ್ಬಂಟಿ ತಂದೆಗಾಗಿ ಮೊಮ್ಮಕ್ಕಳನ್ನು ಕರುಣಿಸಬೇಕೆಂದು ಕೋರುತ್ತಾಳೆ. ಆಗ ಯಮರಾಜನಿಗೆ ಸತ್ಯವಾನನನ್ನು ಬದುಕಿಸದೆ ಬೇರೆ ದಾರಿಯೇ ಉಳಿಯುವುದಿಲ್ಲ. ಆದರೆ ಆಕೆಯು ಎಲ್ಲಿಯೂ ತನ್ನ ಗಂಡನನ್ನು ಬದುಕಿಸು ಎಂದು ನೇರವಾಗಿ ಕೇಳುವುದಿಲ್ಲ. ಇದು ಸಾವಿನ ಹಾಗು ಜೀವನದ ಮಹತ್ತನ್ನು ಸಾರುತ್ತದೆ.

ಇಂದು ವಿಶ್ವದೆಲ್ಲೆಡೆ ತಾಂತ್ರಿಕತೆ ಎಷ್ಟೇ ಮುಂದುವರೆದಿರಬಹುದು ಅಲ್ಲದೆ ಈಗ ಭೂಲೋಕದ ಅಶ್ವಿನಿ ದೇವತೆಗಳಾಗಿರುವ ವೈದ್ಯರು, ಸಂತರು ಈ ಸಾವನ್ನು ಕೆಲ ಕಾಲ ಮುಂದು ಹಾಕಬಹುದಾದರೂ ಸಾವನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ . ಕಡೆಗೆ ಈ ಎಲ್ಲ ತರ್ಕ, ಜಿಜ್ಞಾಸೆ, ಸಂಸ್ಕೃತಿ, ಸಂಪ್ರದಾಯ, ಮೌಲ್ಯ ಎಲ್ಲವೂ ಸಾವಿನ ಅನಿವಾರ್ಯತೆಯನ್ನು, ನಿಶ್ಚಿತತೆಯನ್ನು ಸಾರಿ ಹೇಳುತ್ತದೆ. ಸಾವಿನ ಸಮಯದಲ್ಲಿ ಮನುಷ್ಯನಿಗೆ ಬದುಕಬೇಕೆಂಬ ಹಂಬಲ ಅತಿಯಾಗಿರುತ್ತದೆ. ಕೆಲವರು ತಮ್ಮನ್ನು ಬದುಕಿಸಿ ಎಂದು ಮನೆಯವರಲ್ಲಿ ಅಲವತ್ತುಕೊಳ್ಳುತ್ತಿರುತ್ತಾರೆ. ಇದು ಜೀವನದ ಪ್ರಾಮುಖ್ಯತೆಯನ್ನು ತೋರುತ್ತದೆ. ಹೀಗೆಯೇ, ಸಾವಿನ ಮೂಲಕ, ಮಾನವ ಕುಲಕ್ಕೆ ಜೀವನ ಒಂದು ದೊಡ್ಡ ಕೊಡುಗೆ ಎಂಬುದನ್ನು  ಪ್ರತಿ ಸಾವಿನಲ್ಲೂ ಸಾಧಿಸುತ್ತದೆ.

Rating
No votes yet

Comments