ಬದುಕೆಂಬ ಕಲ್ಪನೆಯ ನಡುವೆ ಸಾವೆಂಬ ವಾಸ್ತವ!

ಬದುಕೆಂಬ ಕಲ್ಪನೆಯ ನಡುವೆ ಸಾವೆಂಬ ವಾಸ್ತವ!

ನೀರಿನಲ್ಲಿ ಮುಳುಗಿ ವಿದ್ಯಾರ್ಥಿ ಸಾವು! ಎಂಬ ತಲೆಬರಹದಡಿಯಲ್ಲಿ ಪ್ರಕಟವಾದ ಸುದ್ಧಿ ನನ್ನ ಗಮನಕ್ಕೆ ಇನ್ನೂ ಬಂದಿರಲಿಲ್ಲ. ನಾಗೇಶ ಸಾಯಂಕಾಲ ನಿರುದ್ವಿಗ್ನ ಸ್ಥಿತಿಯಲ್ಲಿ ಹೇಳಿದ "ಕಾಡುಅಗ್ರಹಾರದ ಐನೋರ್ ಮಗ ನೀರ್ನಲ್ಲಿ ಮುಳುಗಿ ಸತ್ತೋದ್ನಂತೆ" ಎಂಬ ವಿಷಯ ಗಂಭೀರತೆಯನ್ನ ಅರಿಯಲು ಸಾಧ್ಯ್ವವಾಗಿರಲಿಲ್ಲ. ಆದರೆ ಬೆಳಗ್ಗೆ ಅಮ್ಮ ಕಾಫಿ ಕುಡಿಯುವಾಗ ಬಂಡೆಬೊಮ್ಮಸಂದ್ರದ ಐನೋರ ದೊಡ್ಡಮಗ ನೀರಿನಲ್ಲಿ ಮುಳುಗಿ ತೀರಿಕೊಂಡ ವಿಷಯ ತಿಳಿಸಿದಾಗ ಆಘಾತವಾಗದೆ ಇರಲಿಲ್ಲ.ಹೌದು,ದೇವರ ಬಗೆಗಿನ ನನ್ನ ಶೋಧನೆ ಇತ್ತೀಚಿನದಲ್ಲ.ನಾನು ಸಣ್ಣವನಾಗಿದ್ದಾಗ ಹಣೆಮೇಲಿನ ಕುಂಕುಮದ ಹೊರತಾಗಿ ಹೊಸಿಲು ದಾಟುತ್ತಿರಲಿಲ್ಲ.ದಾರಿಯಲ್ಲಿ ಸಿಕ್ಕ ಯಾವುದೇ ವಿಚಿತ್ರಾಕಾರದ ಕಡ್ಡಿ ನನಗೆ ಅಪರೂಪವಾದ ಮಂತ್ರದಂಡ.ಅಕಾಲಿಕ ವಿದ್ಯುತ್ ಕಡಿತದಿಂದಾಗಿ ಅಪರೂಪಕ್ಕೆ ದೂರದರ್ಶನದಲ್ಲಿ ಪ್ರಸಾರವಾಗುತ್ತಿದ್ದ ಚಲನಚಿತ್ರ ತಪ್ಪಿಹೋಗುತ್ತದೆಂಬ ಕಾರಣಕ್ಕೆ ತಪಸ್ಸಿಗೂ ಕುಳಿತುಕೊಂಡದ್ದಿದೆ.ಅದಕ್ಕೆ ವಿರುದ್ಧವಾಗಿ ಧಾರ್ಮಿಕ ಆಚರಣೆಗಳನ್ನ,ಪೂಜೆ ಪುನಸ್ಕಾರಗಳನ್ನ,ಆಗೋಚರವಾದ ದೈವೀ ಆಥವಾ ದೆವ್ವ ಶಕ್ತಿಗಳನ್ನ,ಮೂರ್ತಿಪೂಜೆಯನ್ನ ದಿಕ್ಕರಿಸುವ ಅಥವ ಅದನ್ನ ಒಪ್ಪಿಕೊಳ್ಳುವ ಸಹನೆ ಕೂಡ ನನ್ನಲ್ಲಿ ಇಲ್ಲದಾಯಿತು.ಇವತ್ತಿಗೂ ನನ್ನಲ್ಲಿ ದೇವರನ್ನ ಕಾಣಬೇಕೆಂಬ ಉತ್ಕಟೇಚ್ಚೆ ಇಲ್ಲ.ಒಂದು ಭವ್ಯವಾದ ದೈವಿಕತೆಯಲ್ಲಿ ನಂಬಿಕೆಯಿದೆ,ಧರ್ಮ ನನಗೆ ಧಾರ್ಮಿಕತೆಗಿಂತ ಹೆಚ್ಚು ಅಂತ ಅನ್ನಿಸುತ್ತಿಲ್ಲ.ಹೀಗಿರುವಾಗ ನಾನು ಬಂಡೆಬೊಮ್ಮಸಂದ್ರದ ಐನೋರ (ವೈಧಿಕ)ರ ಹತ್ತಿರ ಹೋಗುವುದಕ್ಕೆ ಒಂದು ಸಕಾರಣವಿದೆ,ಅದೇನೆಂದರೆ ಈ ವೈಧಿಕರ ಬಗ್ಗೆ ನಾನು ಮೊದಲು ಕೇಳಿದ್ದು ನಾಗೇಶನಿಂದಲೇ(ನನ್ನ ಆಪ್ತಸ್ನೇಹಿತ),ನಿಜ ಹೇಳಬೇಕೆಂದರೆ ನನಗೆ ಇವತ್ತಿಗೂ ಅವರ ಹೆಸರು ಗೊತ್ತಿಲ್ಲ.ಸ್ಥಳೀಯ ವ್ಯಕ್ತಿಯೊಬ್ಬ ಗವಿಗುಡಿಯಲ್ಲಿ(ಇದು ನಮ್ಮ ಕಡೆ ಪುರಾತನ ಸ್ಥಳವೆಂಬ ಪ್ರತೀತಿಯಿದೆ) ಹನ್ನೆರಡು ವರ್ಷ ತಪಸ್ಸಿಗೆ ಕೂತು ದೈವಸಾಕ್ಷಾತ್ಕಾರಕ್ಕಾಗಿ ಧ್ಯಾನಿಸಿದ್ದರೆಂಬ ವಿಷಯ ಮತ್ತು ಆ ವ್ಯಕ್ತಿ ಇಂದು ತನ್ನದೇ ಭೂಮಿಯಲ್ಲಿ ದೇವಸ್ಥಾನವೊಂದನ್ನು ಕಟ್ಟಿಕೊಂಡು ವೈಧಿಕ ಕಾರ್ಯದಲ್ಲಿ ತೊಡಗಿ ಸ್ಥಳೀಯವಾಗಿ ತುಂಬಾ ಪ್ರಸಿದ್ಧರಾಗಿದ್ದಾರೆಂಬ ವಿಷಯ ನನಗೆ ಅಸ್ಪಷ್ಟವಾಗಿ ಈ ಐನೋರ ಬಗ್ಗೆ ತಿಳಿದಿತ್ತು,ಜೊತೆಗೆ ಇವರು ಅಮೇರಿಕಾ ಪ್ರವಾಸ ಕೂಡ ಮಾಡಿದ್ದರೆಂಬ ಸುದ್ಧಿ ನನಗೆ ಇವರ ಬಗೆಗಿನ ಕುತೂಹಲ ಹೆಚ್ಚಾಗಲು ಕಾರಣವಾಗಿತ್ತು,ಇದಿಷ್ಟೂ ಬಂಡೆಬೊಮ್ಮಸಂದ್ರದ ಐನೋರ ಬಗೆಗಿನ ನನ್ನ ಪೂರ್ವಗ್ರಹ,

ಇತ್ತೀಚೆಗೆ ನನ್ನ ಅಮ್ಮನ ಆರೋಗ್ಯ ಹದಗೆಟ್ಟುತ್ತಿರುವುದರ ಬಗ್ಗೆ ನನಗೆ ಭಯವಿತ್ತು,ಎಲ್ಲ ತರಹದ ವೈದ್ಯಕೀಯ ತಪಾಸಣೆ ಒಳಪಡಿಸಿದ್ದಾಗಿಯೂ ಎಡಪಾರ್ಶ್ವ,ಎಡಗೈ,ಮತ್ತು ಎಡಕಾಲು ನೋವಿನ ಕಾರಣ ಗೊತ್ತ್ತಾಗಿರಲಿಲ್ಲ.ಅಮ್ಮನಿಗೆ ಸಮಧಾನವಾಗಲೆಂಬ ಕಾರಣಕ್ಕೆ(ಗುಣವಾಗುವುದಾದರೆ ಆಗಲಿ ಎಂಬ ಕಾರಣಕ್ಕೆ) ನಾನು ಐನೋರ ಬಳಿ ಅಮ್ಮನನ್ನ ಕರೆದುಕೊಂಡು ಹೋಗುವ ಅವಕಾಶ ಒದಗಿ ಬಂತು.ಬಹುಶಃ ಈ ವರ್ಷದ ಮಾರ್ಚಿ ತಿಂಗಳಿನ ಮೊದಲ ವಾರದಲ್ಲಿರಬಹುದು. ಸುಮಾರು ಒಂದೂವರೆ ಎಕರೆ ಜಮೀನಿನ ಮುಂಬಾಗದಲ್ಲೇ ಸಿದ್ಧಿವಿನಾಯಕನ ದೇವಸ್ಥಾನ ಅದರ ಹಿಂಭಾಗದಲ್ಲಿ ಅವರು ವಾಸಿಸಲು ಮನೆ ಮತ್ತು ಅದಕ್ಕೆ ಹೊಂದಿಕೊಂಡಂತೆ ಒಂದು ಅತಿಥಿ ಗೃಹವನ್ನ ಅಂದರೆ ಬಂದವರಿಗೆ ವೈಧಿಕ ಪರಿಹಾರ ಕಾರ್ಯಗಳಿಗಾಗಿ ಕಟ್ಟಿಸಿದ್ದಾರೆ,ನಾವು ನೇರವಾಗಿ ಆ ಕೋಣೆಯೊಳಗೆ ಹೋಗಿ ಈಚಿನ ಕೋಣೆಯೊಳಗೆ ಕುಳಿತುಕೊಂಡೆವು,ಸಾಮಾನ್ಯವಾಗಿ ಬಂದವರು ಕುಳಿತುಕೊಳ್ಲುವ ಸ್ಥಳವದು. ಇನ್ನೂ ಐನೋರು ಆ ಕೋಣೆಯೊಳಗೆ ಬಂದಿರಲಿಲ್ಲ,ಸರಿ ನಾನೂ ಕೋಣೆಯನ್ನ ಸೂಕ್ಷ್ಮವಾಗಿ ಗಮನಿಸುತ್ತಾ ಕುಳಿತಿದ್ದೆ, ಆ ಕೋಣೆಯಲ್ಲಿ ಮುಖ್ಯವಾಗಿ ನನ್ನ ಗಮನ ಸೆಳದದ್ದು ಅಲ್ಲಿ ಒಂದು ಗೋಡೆಗೆ ಒರಗಿಸಿ ಇಟ್ಟಿದ್ದ ಅಲ್ಮೆರಾ! ಅದರಲ್ಲಿ ಪುಸ್ತಕಗಳನ್ನ ಜೋಡಿಸಿಡಲಾಗಿತ್ತು.ಪುಸ್ತಕಗಳನ್ನ ಯಾವತ್ತಿಗೂ ಬೆರಗಿನಿಂದ ನೋಡುವ ನಾನು ಇಂತಹ ಸದವಕಾಶವನ್ನ ಕಳೆದುಕೊಳ್ಳುವ ದಡ್ಡತನ ಮಾಡುತ್ತೇನೆಯೇ.ಒಂದೊಂದಾಗಿ ಪ್ರತಿ ಪುಸ್ತಕದ ಮೇಲೂ ಕಣ್ಣಾಡಿಸುತ್ತಾ ಬಂದೆ. tell me what types of book you read,i will tell you what you are! ಅನ್ನೋ ಮಾತೊಂದಿದೆ ನನಗೂ ಐನೋರ ಅಭಿರುಚಿಯನ್ನ ತಿಳಿದು ಕೊಳ್ಳುವ ಹಂಬಲವಿತ್ತು.ಸಹಜವಾಗಿ ವೇದಗಳ ಪುಸ್ತಕಗಳು ನನಗೆ ಪ್ರಾರಂಭದಲ್ಲೇ ಗೋಚರಿಸಿದವು.ತದನಂತರ ಜೋತಿಷ್ಯಕ್ಕೆ ಸಂಬಂಧಪಟ್ಟವು ಮತ್ತು ಮಂತ್ರಗಳ ಪುಸ್ತಕಗಳು ಯಥೇಚವಾಗಿದ್ದವು.ನಿಜಕ್ಕೂ ನನಗೆ ಆಶ್ಚರ್ಯವಾದ ವಿಷಯ ಬೇರೆಯೇ ಇದೆ, ಕುಮಾರವ್ಯಾಸಭಾರತ,ಜೈಮಿನಿಭಾರತ,ವಾಲ್ಮೀಕಿ ರಾಮಾಯಣ,ಶಿಮರಾಮ್ ಕಾರಂತರ ಮೂಕಜ್ಜಿಯ ಕನಸುಗಳು,ವಿವೇಕಾನಂದರ ಚರಿತ್ರೆಯ ಸಂಪುಟಗಳು, ಹೀಗೆ ಹಲವಾರು ಬಾಯಲ್ಲಿ(ನನ್ನಂಥಹ ಪುಸ್ತಕಪ್ರೇಮಿಗಳಿಗೆ) ನೀರೂರಿಸುವ ಪುಸ್ತಕಗಳ ಭಂಡಾರವೇ ಅಲ್ಲಿತ್ತು. ಅಂದಿಗೆ ನನ್ನ ಐನೋರರ ಬಗೆಗಿನ ದೃಷ್ಟಿಕೋನ ಸ್ವಲ್ಪ ಬದಲಾಯಿತು.ಅದೇ ಅಲ್ಮೆರಾದ ಎಡಭಾಗಕ್ಕೆ ನನ್ನ ಕಣ್ಣುಗಳು ಅಚಾನಕ್ಕಾಗಿ ದೃಷ್ಟಿಹಾಯಿಸಿದವು.ಸುಮಾರು ಹತ್ತಕ್ಕಿಂತ ಹೆಚ್ಚು ಪ್ರಶಸ್ತಿ ಪತ್ರಗಳ ಸಾಲು! ಅವುಗಳೆಲ್ಲವು ಸಂಗೀತ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದವುಗಳೇ ಹಾಗಿದ್ದವು.ಕುತೂಹಲದಿಂದ ಗಮನಿಸಿದೆ, ಸಿ,ಅಶ್ವಥ್ ರಿಂದ ಬಹುಮಾನ ಸ್ವಿಕರಿಸುತ್ತಿರುವ ಒಬ್ಬ ಹದಿಹರೆಯದ ಹುಡುಗನ ಭಾವಚಿತ್ರ.ಪ್ರಶಸ್ತಿ ಪತ್ರಗಳ ಮೇಲಿನ ಹೆಸರನ್ನ ಗಮನಿಸಿದೆ, ಕಾರ್ತಿಕ್ ಎಂಬುದಾಗಿತ್ತು.ಆನಂತರ ಸುಮಾರು ಮೂರುಬಾರಿ ಹೋದಾಗಲೂ ಆ ಅಲ್ಮೆರಾದಲ್ಲಿನ ಪುಸ್ತಕ ಮತ್ತು ಕಾರ್ತಿಕನ ಸಾಧನೆಗಳನ್ನ ನೋಡುತ್ತಾ ಕೂರುವುದೇ ನನ್ನ ಕಾಯಕವಾಯ್ತು. ಕಾರ್ತಿಕನ ಬಗ್ಗೆ ಎಲ್ಲಿಲ್ಲದ ಆಸಕ್ತಿ ನನ್ನಲ್ಲಿ ಮೂಡಿದ್ದು ಸುಳ್ಳಲ್ಲ.ಅವನನ್ನ ಪ್ರತ್ಯಕ್ಷ ಕಾಣಬೇಕೆಂಬ ಹಂಬಲವು ಅಕಾರಣವಾಗಿ ನನ್ನಲ್ಲಿ ಹುಟ್ಟಿತ್ತು.ಮೊನ್ನೆ ಭಾನುವಾರಕ್ಕೆ ಎಂಟು ದಿವಸದ ಹಿಂದೆ ನಾನು ನನ್ನಮ್ಮ ಅಲ್ಲಿಗೆ ಹೋಗಿದ್ದೆವು.ಕಾರ್ತಿಕನನ್ನ ನೋಡುವ ಅವಕಾಶ ನನಗೆ ಆ ದಿನ ಸಿಕ್ಕಿತು. ಸಿದ್ಧಿವಿನಾಯಕ ದೇವಸ್ಥಾನದಲ್ಲಿ ಪೂಜೆ ಮಾಡುತ್ತಿದ್ದ ಕಾರ್ತಿಕನನ್ನ ನೋಡಲು ಅನಾಪೇಕ್ಷಿತವಾಗಿ ದೇವಾಲಯದೊಳಕ್ಕೆ ಹೋದೆ, ಕಂಚಿನಂಥಹ ಕಂಠ ಆತನದು(ಇದರಲ್ಲಿ ಅತಿಶಯೋಕ್ತಿಯಿಲ್ಲ),ಹಾಡುತ್ತಾ ಪೂಜೆ ಮಾಡುತ್ತಿದ್ದವನನ್ನ ನೋಡಿ ಖುಷಿಯಾಯ್ತು.ಅದು ನಾನು ಕಾರ್ತಿಕನನ್ನ ನೋಡಿದ ಮೊದಲನೇ ಭೇಟಿ! ದುರದೃಷ್ಟವಶಾತ್ ಅದು ಕೊನೆಯದು ಎಂಬ ವಿಷಯ ಖಂಡಿತ ಗೊತ್ತಿರಲಿಲ್ಲ.ನಾನು ಕಂಡ ಅಥವಾ ಕೇಳಿದ ಸಾವುಗಳಲ್ಲಿ ತುಂಬಾ ಕ್ಷುಲಕ ಕಾರ್ತಿಕನದು.ಭರವಸೆಯ ಆಶಾಕಿರಣವೊಂದು ಕನಸಿನಂತೆ ಕೈ ಜಾರಿದ್ದು ನನ್ನ ಬದುಕಿನ ಅರ್ಥೈಸುವಿಕೆಗೆ ಒಂದು ಹೊಸ ಗೋಜಲು.

Rating
No votes yet

Comments