ಬರಲಿರುವ ದುರ್ದಿನಗಳ ಮುನ್ಸೂಚನೆಗಳು...
ಬರಲಿರುವ ದುರ್ದಿನಗಳ ಮುನ್ಸೂಚನೆಗಳು...
ಹೋದ ವಾರ ರಾಷ್ಟ್ರದ ಆತ್ಮಸಾಕ್ಷಿಯನ್ನು ಬುಡಸಮೇತ ಅಲುಗಾಡಿಸಿ, ನಮ್ಮ ಇಡೀ ನಾಗರಿಕ ಸಮಾಜ ತಲೆತಗ್ಗಿಸುವಂತೆ ಮಾಡಿದ್ದು, ಬಿಹಾರದ ಭಾಗಲ್ಪುರದಲ್ಲಿ ಸರಗಳ್ಳನೊಬ್ಬನನ್ನು ನಮ್ಮ ಸಮಾಜ ನಡೆಸಿಕೊಂಡ ರೀತಿ. ಅವನನ್ನು ಬೀದಿಯಲ್ಲೇ ಒದ್ದು, ಸಿಕ್ಕದ್ದರಲ್ಲಿ ಬಡಿದು ಅರ್ಧಜೀವ ಮಾಡಿದ್ದಲ್ಲದೆ, ಅರೆಬೆತ್ತಲಾಗಿದ್ದ ಆತನನ್ನು ಪೋಲೀಸನೊಬ್ಬ ತನ್ನ ಮೋಟರ್ ಸೈಕಲ್ಲಿಗೆ ಕಟ್ಟಿಕೊಂಡು ಹಳ್ಳ ಕೊಳ್ಳಗಳ ಆ ಗಲೀಜು ರಸ್ತೆಯಲ್ಲಿ ಎಳೆದುಕೊಂಡು ಹೋದದ್ದನ್ನು ನಾವು ಬಹುತೇಕ ಎಲ್ಲ ಟಿ.ವಿ.ವಾಹಿನಿಗಳಲ್ಲಿ ನೋಡಿದ್ದೇವೆ. ಇದರಲ್ಲಿ ನನ್ನ, ಬಹುಶಃ ನಿಮ್ಮೆಲ್ಲರ ಎದೆ ನಡುಗಿಸಿದ್ದು, ಪೋಲೀಸರ ದೌರ್ಜನ್ಯವಲ್ಲ. ಮೊನ್ನೆ ಮೈಸೂರು ಬಳಿ ಚಾಮಲಾಪುರ ಉಷ್ಣ ಸ್ಥಾವರ ವಿರೋಧಿ ರೈತ ಚಳುವಳಿಕಾರ ಮೇಲೆ ಪೋಲೀಸರು ಎರಗಿ ನಡೆಸಿದ ಅಮಾನುಷ ಹಲ್ಲೆ, ನಮ್ಮ ಪೋಲೀಸ್ ಪಡೆ ಇಂದು ಹೇಗೆ ತನ್ನೆಲ್ಲ ಸಾಮಾಜಿಕ ವಿವೇಕ ಕಳೆದುಕೊಂಡು ವ್ಯವಸ್ಥೆಯ ಒಂದು ಭಾಗವಾಗಿ ಹೋಗಿದೆ ಎಂಬುದರ ಸಮೀಪ ದರ್ಶನವೇ ಆಗಿದೆ. ಆದುದರಿಂದ ಭಾಗಲ್ಪುರ ಪ್ರಕರಣದಲ್ಲಿ ಎದೆ ಝಲ್ಲೆನಿಸಿದ್ದು, ಪೋಲೀಸರ ವರ್ತನೆಯಲ್ಲ;ಅದನ್ನು ಸುಮ್ಮನೆ ನಿಂತು ನೋಡುತ್ತಿದ್ದ ಹಾಗೂ ಅದರಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದ ನಮ್ಮ ನಿಮ್ಮಂತವರ ಸಾರ್ವಜನಿಕರ ಕ್ರೌರ್ಯ.
ಒಬ್ಬ ಸಾಮಾನ್ಯ ಬೀದಿ ಬದಿಯ ಬಡ ಕಳ್ಳನ ಬಗ್ಗೆ ಸಾರ್ವಜನಿಕರು ತೋರಿದ ಈ ಕ್ರೌರ್ಯ, ಒಂದು ಹನಿ ಬೆವರು ಸುರಿಸದೆ ಕೋಟ್ಯಾಂತರ ರೂಪಾಯಿಗಳನ್ನು ಲೂಟಿ ಮಾಡುತ್ತಿರುವ ನಮ್ಮ ರಾಜಕಾರಣಿಗಳ (ಈಗ ಸಾರ್ವಜನಿಕವಾಗಿಯೇ ಪ್ರಕಟವಾಗುತ್ತಿರುವ ಇವರ ಆಸ್ತಿ ಪಾಸ್ತಿಗಳ ವಿವರಗಳನ್ನೂ, ಪ್ರಮಾಣದ ಏರಿಕೆಯ ಗತಿಯನ್ನು ಗಮನಿಸಿ - ಮೊನ್ನೆ ಮೊನ್ನೆಯವರೆಗೆ ಪೋಲೀಸ್ ಪೇದೆಯಾಗಿದ್ದು, ಮಂತ್ರಿಯಾದ ಮೂರು ವರ್ಷಗಳಲ್ಲಿ ಒಬ್ಬಾತ ಈಗ ಅಧಿಕೃತವಾಗಿ ಘೋಷಿಸಿರುವ ಆಸ್ತಿಯ ಮೌಲ್ಯ 90 ಕೋಟಿ ರೂಪಾಯಿಗಳು!), ಅಧಿಕಾರಿಗಳ, ಮಧ್ಯವರ್ತಿಗಳ, ಬೇನಾಮಿ ಉದ್ದಿಮೆದಾರರ, ಸುಪಾರಿ ಕೊಲೆಗಾರರ, ಭೂಗತ ಜಗತ್ತಿನ ದೊರೆಗಳ ವಿರುದ್ಧ ಏನೂ ಮಾಡಲಾಗದ ನಮ್ಮ ಅಸಹಾಯಕತೆಯ ವಿಕ್ಷಿಪ್ತ ಅಭಿವ್ಯಕ್ತಿಯೋ ತಿಳಿಯದಾಗಿದೆ... ಇದು ಇಡೀ ಸಮಾಜ ತನ್ನೆಲ್ಲ ಸಂವೇದನೆಯ ಸೂಕ್ಷ್ಮಗಳನ್ನು ಕಳೆದುಕೊಳ್ಳುತ್ತಿರುವ ಸೂಚನೆಯೂ ಆಗಿದ್ದರೆ ಆಶ್ಚರ್ಯವಿಲ್ಲ. ಹಾಗಿದ್ದಲ್ಲಿ, ರಾಷ್ಟ್ರ ಒಂದು ದೊಡ್ಡ ಸಾಮಾಜಿಕ ದುರಂತದ ಅಂಚಿನಲ್ಲಿದೆಯೆಂದೇ ಹೇಳಬೇಕು!
ಮಾರನೆಯ ದಿನ ಈ ಘಟನೆ ಭಾಗಲ್ಪುರದಲ್ಲಿ ಕೋಮು ಗಲಭೆಯಾಗಿ ಪರಿವರ್ತಿತವಾದದ್ದು, ನಂತರ ಆಗ್ರಾದಲ್ಲಿ ಪೋಲೀಸರ ಅಚಾತುರ್ಯದಿಂದಾಗಿ ಸಂಭವಿಸಿದ ರಸ್ತೆ ಆಕಸ್ಮಿಕವೊಂದು ಅಲ್ಲಿನ ಅಲ್ಪಸಂಖ್ಯಾತರನ್ನು ಕೆರಳಿಸಿ ಒಂದೆರಡು ನರಬಲಿಗೆ, ಕೋಟ್ಯಾಂತರ ರೂಪಾಯಿಗಳ ಆಸ್ತಿ - ಪಾಸ್ತಿ ನಷ್ಟಕ್ಕೆ ಹಾಗೂ ನಂತರದಲ್ಲಿ ಕೋಮು ಗಲಭೆಗೆ ತಿರುಗಿದ್ದು ಏನನ್ನು ಸೂಚಿಸುತ್ತದೆ? ಇತ್ತೀಚೆಗೆ ತಾನೇ ಹರ್ಯಾಣದಲ್ಲಿ ಯಾತ್ರೆ ಹೊರಟಿದ್ದ ಶಿವಭಕ್ತರಿಬ್ಬರ ಮೇಲೆ ಲಾರಿ ಹರಿದು, ಅದರಿಂದ ಕೆರಳಿದ ಶಿವಭಕ್ತರು ಅಮಾಯಕರ ಹತ್ತಾರು ವಾಹನಗಳಿಗೆ ಬೆಂಕಿ ಹಾಕಿ ಸುಟ್ಟದ್ದಲ್ಲದೆ, ಎರಡು ದಿನಗಳ ಕಾಲ ದೆಹಲಿ - ಜೈಪುರ ರಾಷ್ಟ್ರೀಯ ಹೆದ್ದಾರಿಯನ್ನೇ ರಣರಂಗವನ್ನಾಗಿ ಪರಿವರ್ತಿಸಿದ್ದನ್ನೂ ಇಲ್ಲಿ ನೆನಪಿಸಿಕೊಳ್ಳಬಹುದು. ಹಾಗೇ ಮೊನ್ನೆ ನಮ್ಮ ಕೋಲಾರದಲ್ಲಿ 'ಅಪರಾಧಿ'ಗಳ ಬಿಡುಗಡೆ ಸಂಬಂಧ ಇದ್ದಕ್ಕಿದ್ದಂತೆ ಸ್ಫೋಟಗೊಂಡ ಕೋಮು ಗಲಭೆ ಮತ್ತು ಬೆಳಗಾವಿಯಲ್ಲಿ ಸುಪಾರಿ ಕೊಲೆಗಾರರನ್ನು ಬಂಧಿಸಲಾಗದ ಪೋಲೀಸ್ ವ್ಯವಸ್ಥೆ ವಿರುದ್ಧ ಮಹಿಳೆಯರು ಸ್ವಯಂಸ್ಫೂರ್ತಿಯಿಂದ ಸಂಘಟಿತರಾಗಿ ನಡೆಸಿದ ಅಭೂತಪೂರ್ವ ಪ್ರತಿಭಟನೆಯನ್ನು ಗಮನಿಸಬೇಕು. ಇವೆಲ್ಲ ನೈತಿಕವಾಗಿ ಅವನತಿಗೊಂಡಿರುವ ನಮ್ಮ ಒಟ್ಟಾರೆ ರಾಜಕಾರಣದ ಫಲಗಳೇ ಆಗಿವೆ. ನಮ್ಮ ಹೊಸ ಅಭಿವೃದ್ಧಿ ನೀತಿ ಸೃಷ್ಟಿಸುತ್ತಿರುವ ಸಾಮಾಜಿಕ ಒಡಕಿನ ಪ್ರತೀಕಗಳೇ ಆಗಿವೆ. ಬರಲಿರುವ ದಿನಗಳ ಸಾಮಾಜಿಕ ಅಶಾಂತಿಯ, ಅಭದ್ರತೆಯ ಆತಂಕದ ಮುನ್ಸೂಚನೆಗಳೇ ಆಗಿವೆ.
ಆದರೆ ನಮ್ಮ ರಾಷ್ಟ್ರ ಹಾಗೂ ರಾಜ್ಯ ರಾಜಕಾರಣ ಇದರ ಬಗ್ಗೆ ತಲೆಕೆಡಿಸಿಕೊಳ್ಳದೆ, ಹೇಗೆ ನಿರುಮ್ಮಳವಾಗಿ ತನ್ನ ದಂಧೆಯನ್ನು ಮುಂದುವರಿಸಿಕೊಂಡು ಹೋಗುತ್ತಿದೆ ನೋಡಿ. ನಮ್ಮ ರಾಜ್ಯದ ಅಧಿಕಾರ ಹಸ್ತಾಂತರದ ನಾಟಕವನ್ನೇ ಗಮನಿಸಿ. ಅಪ್ಪ ಇನ್ನೂ ನಿಗೂಢಾರ್ಥಗಳಲ್ಲಿ ಗೊಣಗಾಡುತ್ತಿರುವರಾದರೂ; ಮಗ, ಈ ನಾಟಕದಿಂದಾಗಿ ಜನಾಭಿಪ್ರಾಯ ತನ್ನ ವಿರುದ್ಧ ತಿರುಗಿ ಬೀಳುತ್ತಿದೆ ಎಂದೆನ್ನಿಸಿಯೋ ಏನೋ, ಕೊಟ್ಟ ಮಾತಿಗೆ ತಪ್ಪುವ ಕಳಂಕ ಬೇಡವೆಂಬ ನೈತಿಕ ಕಾರಣ ಕೊಟ್ಟು ಈಗ ಮತ್ತೆ ಅಧಿಕಾರ ಹಸ್ತಾಂತರ ಖಚಿತ ಎನ್ನತೊಡಗಿದ್ದಾರೆ. ಆದರೆ ಇದು, ತಡವಾಗಿಯಾದರೂ ಜಾಗೃತಗೊಂಡ ನೈತಿಕ ಪ್ರಜ್ಞೆಯ ಆಧಾರದ ನಿರ್ಧಾರವೋ ಅಥವಾ ಯಾವನಾದರೂ ತಲೆತಿರುಕ ಜ್ಯೋತಿಷಿಯೊಬ್ಬನ ಕವಡೆಯಾಟವನ್ನು ಆಧರಿಸಿದ ನಿರ್ಧಾರವೋ ಇನ್ನೂ ಸ್ಪಷ್ಟವಾಗಿಲ್ಲ. ಏಕೆಂದರೆ, ಈ ಅಪ್ಪ ಮಕ್ಕಳ ರಾಜಕಾರಣ ರಾಜ್ಯದ ಜನಶಕ್ತಿಯ ಲೆಕ್ಕಾಚಾರಕ್ಕಿಂತ ಆಕಾಶದಲ್ಲಿನ ಗ್ರಹ ಗತಿಗಳ ಲೆಕ್ಕಾಚಾರವನ್ನು ಹೆಚ್ಚು ಅವಲಂಬಿಸಿರುವಂತೆ ತೋರುತ್ತಿದೆ! ತಮಿಳ್ನಾಡಿನ ನವಗ್ರಹ ದೇವಾಲಯಗಳಲ್ಲಿ ಕುಟುಂಬದ ಶ್ರೇಯೋಭಿವೃದ್ಧಿಗಾಗಿ ನಡೆಯುವ ಪೂಜೆ - ಪುನಸ್ಕಾರಗಳಿರಲಿ, ವಿಧಾನ ಸಭೆಯ ಅಧಿವೇಶನ, ಸಂಪುಟ ಸಭೆಯ ಆರಂಭದ ದಿನ - ಘಳಿಗೆಯಿಂದ ಹಿಡಿದು, ತಾವು ಕೂತ ಆಕಾಶದಲ್ಲಿರುವ ಹೆಲಿಕಾಪ್ಟರ್ ನೆಲ ಮುಟ್ಟಬೇಕಾದ ಘಳಿಗೆಯನ್ನೂ ರಾಹು ಕಾಲ - ಗುಳಿಕ ಕಾಲಗಳನ್ನು ನೋಡಿ ನಿರ್ಧರಿಸುವಂತಹ ಮೂಢಜನರ ಕೈಗೆ ನಮ್ಮ ಆಡಳಿತ ಸಿಕ್ಕಿ ಹಾಕಿಕೊಂಡಿರುವ ಬಗ್ಗೆ ಕರ್ನಾಟಕದ ಜನತೆ ನಿಜವಾಗಿಯೂ ಚಿಂತೆ ಮಾಡಬೇಕಿದೆ. ಹಾಗಾಗಿ, ಕುಮಾರಸ್ವಾಮಿಯವರ ರಾಜಕೀಯ ಭವಿಷ್ಯದ ದೃಷ್ಟಿಯಿಂದ ಅವರ ಸದ್ಯದ ಅಧಿಕಾರ ತ್ಯಾಗ, ಅಕ್ಟೋಬರ್ ಮೂರರವರೆಗೆ ಕಾಯದೆ ಅದಕ್ಕೆ ಮುನ್ನವೇ ಒಂದು ಶುಭ ದಿನದಂದು ಆಗಬೇಕೆಂದು ಆಸ್ಥಾನ ಜ್ಯೋತಿಷಿ ಸೂಚಿಸಿದ್ದರೆ ಆಶ್ಚರ್ಯವಿಲ್ಲ! ಹಾಗಾಗಿಯೇ ಈಗ ಅಧಿಕಾರಾವಧಿಯ ಮುನ್ನವೇ ಅಧಿಕಾರ ತ್ಯಾಗ ಮಾಡುವ 'ದೊಡ್ಡ' ಮಾತು ಕೇಳಿ ಬರುತ್ತಿದೆ... ಅದೂ, ದಸರಿಘಟ್ಟದ ಚೌಡೇಶ್ವರಿ ಕುಮಾರಸ್ವಾಮಿಯವರೇ ಮುಖ್ಯಮಂತ್ರಿಯಾಗಿ ಮುಂದುವರಿಯಲಿ ಎಂದು ಆಶೀರ್ವದಿಸಿ ಕೊಟ್ಟಿರುವ ತೆಂಗಿನಕಾಯನ್ನು ಅವರ ಪಕ್ಷದ ಗೆಣೆಕಾರರು ತಂದೊಪ್ಪಿಸಿದ ಮೇಲೂ ಎಂದರೆ, ಅಧಿಕಾರ ತ್ಯಾಗದ ಯೋಚನೆಯ ಹಿಂದೆ ಎಷ್ಟು ದೊಡ್ಡ ಯೋಜನೆ ಇರಬಹುದು!
ಅದೇನೇ ಇರಲಿ, ಅಧಿಕಾರ ತ್ಯಾಗಕ್ಕಾಗಿ ಎಲ್ಲ ಸಿದ್ಧತೆ ಆರಂಭವಾಗಿದೆ. ಸಿಕ್ಕ ಸಿಕ್ಕ ಕಡೆ ಶಂಕುಸ್ಥಾಪನೆ (ಕೆಲವು ಕಡೆ ಎರಡನೇ ಬಾರಿಗೆ!) ನಡೆಯುತ್ತಿದೆ - ವಿಶೇಷವಾಗಿ ಹಾಸನ, ರಾಮನಗರ, ಮೈಸೂರು, ಶಿವಮೊಗ್ಗಗಳಲ್ಲಿ! ಕೋಟ್ಯಾಂತರ ರೂಪಾಯಿಗಳ ವೆಚ್ಚದ ಕಾರ್ಯಕ್ರಮಗಳನ್ನು (ಒಂದು ಲೆಕ್ಕಾಚಾರದ ಪ್ರಕಾರ ಒಂದು ವಾರದಲ್ಲಿ ಮೂರು ಸಾವಿರ ಕೋಟಿ ರೂಪಾಯಿಗಳ ಮೌಲ್ಯದ ಯೋಜನೆಗಳ ಪ್ರಕಟಣೆ/ಶಂಕುಸ್ಥಾಪನೆಯಾಗಿದೆ!) ಘೋಷಿಸಲಾಗುತ್ತಿದೆ. ಪತ್ರಿಕೆ ಹಾಗೂ ಟಿ.ವಿ.ವಾಹಿನಿಗಳಿಗೆ ಸರ್ಕಾರದ ಸಾಧನೆಗಳ 'ಆಗರ - ಸಾಗರ'ಗಳನ್ನು ಪ್ರಚುರ ಪಡಿಸುವ ಜಾಹೀರಾತುಗಳ ಸುಗ್ಗಿಯೋ ಸುಗ್ಗಿ! ಗ್ರಾಮ ವಾಸ್ತವ್ಯ ಈಗ ದಿನವಹಿ ಆಧಾರದ ಮೇಲೆ ನಡೆಯಲಾರಂಭಿಸಿದೆ. ನಮ್ಮ ಮುಖ್ಯಮಂತ್ರಿಗಳು ಯಾವಾಗ ಆಲೋಚನೆ ಮಾಡುತ್ತಾರೋ, ಯಾವಾಗ ಆಡಳಿತ ಮಾಡುತ್ತಾರೋ ಎಂದು ಜನತೆ ಆಶ್ಚರ್ಯ ಪಡುವಷ್ಟು ಅವರು ಹಗಲು ರಾತ್ರಿ ಊರೂರು ತಿರುಗುತ್ತಿದ್ದಾರೆ! ಗ್ರಾಮ ವಾಸ್ತವ್ಯಕ್ಕೆ ಬೆಳಗಿನ ಝಾವ ಅವಸರಸರವಾಗಿ ಬಂದು ಆರತಿ ಎತ್ತಿಸಿಕೊಂಡು, ರಾತ್ರಿಯೆಲ್ಲ ಕಾದು ನಿಂತ ಜನರ ಅಹವಾಲು ಪತ್ರಗಳನ್ನು ಬಾಚಿಕೊಂಡು ಮುಂದಿನ ಶಂಕುಸ್ಥಾಪನೆಗೋ, ಗ್ರಾಮ ವಾಸ್ತವ್ಯಕ್ಕೋ ತೆರಳುತ್ತಿದ್ದಾರೆ ! ಅದರ ಮಧ್ಯೆ, ಇಷ್ಟು ವರ್ಷ ಅಧಿಕಾರ ನಡೆಸಿದವರು ಏನೇನು ಮಾಡಿದ್ದಾರೆಂಬುದು ತಮಗೆ ಗೊತ್ತಿದೆ, ಇವರಿಂದ ತಾನೇನೂ ಪಾಠ ಕಲಿಯುವ ಅಗತ್ಯವಿಲ್ಲ ಎಂಬ ದೀರ್ಘ ರಾಜಕಾರಣದ ಅನುಭವವಿರುವಂತೆ ಠೇಂಕಾರದ ಮಾತುಗಳನ್ನಾಡುವ ಆಕ್ರಮಣಕಾರಿ ಶೈಲಿಯ ರಾಜಕಾರಣವನ್ನೂ ಅವರು ಇತ್ತೀಚೆಗೆ ರೂಢಿಸಿಕೊಂಡಿದ್ದಾರೆ.
ಯುವ ಮುಖ್ಯಮಂತ್ರಿಗಳು ಗ್ರಾಮ ವಾಸ್ತವ್ಯದ ಯೋಜನೆ ಆರಂಭಿಸಿದಾಗ, ಅದು ಆಡಳಿತಗಾರರ ಅನೌಪಚಾರಿಕ ಜನಸಂಪರ್ಕದ ಅತ್ಯುತ್ತಮ ಹಾಗೂ ನವೀನ ಮಾದರಿಯೆಂದು ಎಲ್ಲರ ಗಮನ ಸೆಳೆದಿತ್ತು. ಆದರೆ ಅದು ಒಂದು ಅಧಿಕೃತ ಕಾರ್ಯಕ್ರಮದ ರೂಪ ತಳೆದು, ರಾಜಕೀಯ ಲಾಭ ಪಡೆಯುವ ಪ್ರಚಾರದ ಕಾರ್ಯಕ್ರಮವಾಗತೊಡಗಿದಾಗ ಅದರ ಆಕರ್ಷಣೆ - ನಾವೀನ್ಯತೆಗಳೆಲ್ಲಾ ಅಳಿಸಿಹೋದವು. ಗ್ರಾಮ ವಾಸ್ತವ್ಯವೆಂದರೆ, ಮುಖ್ಯಮಂತ್ರಿ ತಾವು ಆಳುವ ನಾಡಿನ ಪ್ರಾತಿನಿಧಿಕ ಗ್ರಾಮಗಳು ನಿಜವಾಗಿ ಹೇಗಿವೆ ಎಂಬುದನ್ನು ಕಣ್ಣಾರೆ ಕಂಡು, ಸ್ಥಳೀಯರೊಂದಿಗೆ ಕೂತು ವಿವರವಾಗಿ ಚರ್ಚಿಸಿ, ಅಲ್ಲಿನ ಹಳ್ಳಿಗಾಡಿನ ಸಮಸ್ಯೆಗಳನ್ನು ಅರ್ಥ ಮಾಡಿಕೊಳ್ಳುವ ಮೂಲಕ ತಮ್ಮ ಆಡಳಿತ ನೀತಿಗಳಲ್ಲಿ ಬದಲಾವಣೆಗಳನ್ನು ಮಾಡಿಕೊಳ್ಳುವುದಕ್ಕೆ ಆಧಾರವಾಗುವಂತಹ ಕಾರ್ಯಕ್ರಮವಾಗುತ್ತದೆಂದು ಭಾವಿಸಲಾಗಿತ್ತು. ಆದರೆ ಅದಕ್ಕೆ ಬದಲಾಗಿ ಈಗ ಕಾಣುತ್ತಿರುವುದು, ಆಯ್ದ ಊರಿನಲ್ಲಿ ಮುಂಚೆಯೇ ಅಷ್ಟಿಷ್ಟು ಅಭಿವೃದ್ಧಿ ಕಾಮಗಾರಿ ಮಾಡುವ ಮೂಲಕ ಊರನ್ನು ಅಚ್ಚುಗಟ್ಟುಗೊಳಿಸಿ, ಆಯ್ದ ಮನೆಯಲ್ಲಿ ಮುಖ್ಯಮಂತ್ರಿಗೆಂದೇ ವಿಶೇಷ ಸೌಲಭ್ಯಗಳನ್ನು ನಿರ್ಮಿಸಿ ವಾಸ್ತವ್ಯವನ್ನು ಆಯೋಜಿಸುವ ಕಾರ್ಯಕ್ರಮವಾಗಿದ್ದು, ಇದು ಯೋಜನೆಯ ಮೂಲೋದ್ದೇಶವನ್ನೇ ಹಾಳುಗೆಡಹಿದೆ. ಅಲ್ಲದೆ, ವಾಸ್ತವ್ಯಕ್ಕೆ ಬರುವುದೇ ಬೆಳಗಿನ ಝಾವ. ಉಂಡು, ಎರಡು - ಮೂರು ಗಂಟೆ ಮಲಗಿ ಮುಂದಿನ ಊರಿಗೆ ಎದ್ದು ಹೋಗುವ ಈ ನಾಮಕಾವಸ್ತೆ ಗ್ರಾಮ 'ವಾಸ್ತವ್ಯ'ದಿಂದ , ಉನ್ನತ ರಾಜಕಾರಣಿಗಳ ಮುಖಗಳನ್ನೇ ಕಾಣದ ಆ ಗ್ರಾಮಗಳ ಜನರಲ್ಲಿ ಉಂಟಾಗುವ ಆ ಕ್ಷಣದ ರೋಮಾಂಚನ ಹಾಗೂ ಸಂಭ್ರಮಗಳ ಹೊರತಾಗಿ, ಒಟ್ಟಾರೆ ರಾಜ್ಯದ ಅಭಿವೃದ್ಧಿಗೆ ಏನು ಉಪಯೋಗವಾಗುವುದೋ ಮುಖ್ಯಮಂತ್ರಿಗಳೇ ಹೇಳಬೇಕು. ಹಾಗಾಗಿ, ವಿರೋಧ ಪಕ್ಷದವರು ಗ್ರಾಮ ವಾಸ್ತವ್ಯದ ಬಗ್ಗೆ ಶ್ವೇತ ಪತ್ರ ಹೊರಡಿಸುವಂತೆ ಕೇಳಿರುವುದು ನ್ಯಾಯೋಚಿತವಾಗಿಯೇ ಇದೆ. ಏಕೆಂದರೆ, ವಿರೋಧ ಪಕ್ಷದವರು ಅದರಿಂದ ಏನಾದರೂ ಕಲಿಯುವಂತಿದ್ದರೆ, ಕಲಿಯುವಂತಾಗಲಿ. ಆದರೆ, ಕುಮಾರಸ್ವಾಮಿಯವರು ಈ ಬಗ್ಗೆ ಉದ್ರಿಕ್ತರಾಗಿ ಪ್ರತಿಕ್ರಿಯಿಸಿರುವುದೇಕೋ ತಿಳಿಯದಾಗಿದೆ.
ಅತ್ತ ಮುಖ್ಯಮಂತ್ರಿ ಅಧಿಕಾರ ತ್ಯಾಗದ ಉದ್ರೇಕದಲ್ಲಿದ್ದರೆ, ಇತ್ತ ಭಾವಿ ಮುಖ್ಯಮಂತ್ರಿ ಅಧಿಕಾರ ನಿರೀಕ್ಷೆಯ ಉದ್ರೇಕದಲ್ಲಿದ್ದಂತೆ ತೋರುತ್ತದೆ! ಅವರು ಮೊನ್ನೆ ಶಿವಮೊಗ್ಗದಲ್ಲಿ, ಗೋಸಮ್ಮೇಳನದ ಖ್ಯಾತಿಯ ರಾಮಚಂದ್ರಾಪುರ ಮಠದವರು ಭೂ ಒತ್ತುವರಿ ಮಾಡಿಕೊಂಡಿದ್ದಾರೆಂದು ಕೆಲವರು ಮಾಡಿರುವ ಆಪಾದನೆ ಬಗ್ಗೆ ಕೆರಳಿ, ಆ ಮಠಕ್ಕೆ ಮತ್ತೆ 85 ಲಕ್ಷ ರೂಪಾಯಿಗಳ ವಿಶೇಷ ಕೊಡುಗೆ ಪ್ರಕಟಿಸಿದ್ದಾರೆ! ಆ ಭೂ ಒತ್ತುವರಿ ಆಪಾದನೆಯನ್ನು ಪರಿಶೀಲಿಸಲು ಹೋದ ತಹಸೀಲ್ದಾರರ ಪೂರ್ವಾಪರಗಳನ್ನು ಅವರ ಗೈರುಹಾಜರಿಯಲ್ಲಿ ಏಕವಚನದಲ್ಲಿ ವಿಚಾರಿಸಿಕೊಂಡು, ಅವರ ಮೇಲೆ ಹರಿಹಾಯ್ದಿದ್ದಾರೆ... ಬರಲಿರುವ ತಮ್ಮ ಮುಖ್ಯಮಂತ್ರಿತ್ವದ ದಿನಗಳು ಹೇಗಿರುತ್ತವೆಂಬುದರ ಸೂಚನೆಯನ್ನೂ ನೀಡಿದ್ದಾರೆ. ಅದೂ, ಅಧಿಕಾರವಿನ್ನೂ ಮಾರು ದೂರವಿರುವಾಗಲೇ! ಆ ದೂರವನ್ನು ಕಡಿಮೆ ಮಾಡಿಕೊಳ್ಳಲು, ತಮ್ಮ ಶಿಕಾರಿಪುರದಲ್ಲಿನ ಮಹಿಳಾ ಅಭಿಮಾನಿಗಳಿಗೆ ತಮ್ಮ ಪರವಾಗಿ ದೇವರಿಗೆ ಒಂದು ಹೂವು ಹೆಚ್ಚು ಹಾಕುವಂತೆ ಮನವಿಯನ್ನೂ ಮಾಡಿದ್ದಾರೆ! ಅಂತೂ ಕರ್ನಾಟಕಕ್ಕೆ ನವಗ್ರಹಗಳ ಹಾಗೂ ಕ್ಷುದ್ರದೇವತೆಗಳ ಕಾಟ ತಪ್ಪಿ,, ಸುವಾಸಿನಿಯರಿಂದ ಸೇವಿಸಲ್ಪಡುವ ಶಿಷ್ಟ ದೇವತೆಗಳ ಹಾಗೂ ಅವುಗಳ ಈ ಲೋಕದ ಖಜಾಂಚಿಗಳಾದ ಮಠಾಧಿಪತಿಗಳ ಪ್ರಭುತ್ವ ಶುರುವಾಗುತ್ತಿರುವಂತಿದೆ...
ಈ ಮಧ್ಯೆ ಸದ್ಯಕ್ಕೆ ಎಲ್ಲೂ ಸಲ್ಲದಿರುವ ಪಿ.ಜಿ.ಆರ್. ಸಿಂಧ್ಯಾ ಬಾಂಬೊಂದನ್ನು ಸಿಡಿಸಲು ಪ್ರಯತ್ನಿಸಿದ್ದಾರೆ. ಯಡಿಯೂರಪ್ಪ ತಮ್ಮ ಪಕ್ಷದೊಳಗಿನ ಕಾಟ ತಡೆಯಲಾರದೆ, ಹಿಂದೊಮ್ಮೆ ದೇವೇಗೌಡರ ಪಕ್ಷ ಸೇರಲು ಹೊರಟಿದ್ದರು ಎಂದು ಅವರು ಹೇಳಿರುವ ವಿಚಾರ ಅಷ್ಟೇನೂ ಆಸ್ಫೋಟನಕಾರಿಯಲ್ಲದಿದ್ದರೂ, ಅದು ಸದ್ಯದ ಸಂದರ್ಭದಲ್ಲಿ ಹೊರಡಿಸುವ ರಾಜಕೀಯ ಅರ್ಥ ಬಿ.ಜೆ.ಪಿ.ಯಲ್ಲಿ ಅನೇಕ ತಲ್ಲಣಗಳನ್ನು ಉಂಟು ಮಾಡಬಲ್ಲುದಾಗಿದೆ. ಅಪ್ಪ ಮಕ್ಕಳು ಕಳೆದ ಒಂದೂವರೆ ವರ್ಷದಿಂದ ಬಿ.ಜೆ.ಪಿ.ಯ ಅನೇಕ ಶಾಸಕರನ್ನು 'ಮುದ್ದು' ಮಾಡುತ್ತಾ ಬಂದಿರುವ ರೀತಿ, ಯಡಿಯೂರಪ್ಪನವರ ಕೈಗೆ ಬಂದಂತಿರುವ ಮುಖ್ಯಮಂತ್ರಿ ಗಾದಿಯ ತುತ್ತು ಬಾಯಿಗೆ ಬರುವಂತಾಗುವ ಹೊತ್ತಿಗೆ ಯಾವ ರೂಪ ಪಡೆಯುತ್ತದೋ ಹೇಳಲಾಗದು! ದೇವೇಗೌಡರಾಗಲೇ, ಸ್ಥಳೀಯ ಚುನಾವಣೆಗಳನ್ನು ಎದುರಿಸುವ ನೆಪದಲ್ಲಿ ಮಿರಾಜುದ್ದೀನ್ ಪಟೇಲ್ ಎಂಬ ಅನಾಮಿಕ ನಾಯಕನನ್ನು ತಮ್ಮ ಪಕ್ಷದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ತಂದು ಕುಳ್ಳರಿಸಿ, ತಮ್ಮ ಪಂಚೆಗೆ ಸುತ್ತಿದ ಬೆಲ್ಟನ್ನು ಬಿಗಿ ಮಾಡಿಕೊಂಡು ಹೊಸ ರಾಜಕೀಯ ಕಸರತ್ತಿಗೆ ಸಿದ್ಧವಾದಂತಿದೆ. ಈ ಸಂಬಂಧ ಏರ್ಪಾಡಾಗಿದ್ದ ಅಲ್ಪಸಂಖ್ಯಾತರ ಸಭೆಯಲ್ಲಿ ಮಾತನಾಡುತ್ತಾ, ಬಿ.ಜೆ.ಪಿ. ತಲೆ ಮೇಲೆ ತೂಗುಕತ್ತಿ ಆಡುತ್ತಿದೆ ಎಂದಷ್ಠೆ ಹೇಳಿ, ಆ ಕತ್ತಿ ಅಧಿಕಾರದ್ದೋ, ಬಲಿಯದ್ದೋ ಎಂದು ಹೇಳದೆ ಅಷ್ಟಕ್ಕೇ ತಮ್ಮ ಮಾತನ್ನು ಅರ್ಥಪೂರ್ಣವಾಗಿ ನಿಲ್ಲಿಸಿದ್ದಾರೆ. ಈಗ ಆಯ್ಕೆ ಯಡಿಯೂರಪ್ಪನವರ ಮುಂದಿದೆ!
ಅಂದಹಾಗೆ: ದೇವೇಗೌಡರು ತಾವು ತಮ್ಮ ಪಕ್ಷದ ರಾಷ್ಟ್ರೀಯ ಅಧ್ಯಕ್ಷರೆನ್ನಿಸಿಕೊಳ್ಳಲೆಂದೇ ಕರ್ನಾಟಕಕ್ಕೆ ಪ್ರತ್ಯೇಕ ರಾಜ್ಯಾಧ್ಯಕ್ಷರನ್ನು ನೇಮಿಸುತ್ತಿದ್ದಾರೆಂದು ಕಾಣುತ್ತದೆ! ಏಕೆಂದರೆ, ಕರ್ನಾಟಕದ ಹೊರತಾಗಿ ಇನ್ನಾವ ರಾಜ್ಯದಲ್ಲಿ ತಮ್ಮ ಪಕ್ಷದ ಉಸಾಬರಿಯನ್ನು ತಾವು ನೋಡಿಕೊಳ್ಳಬೇಕಾಗಿದೆಯೆಂದು ಅವರು ಇನ್ನೊಬ್ಬರನ್ನು ಇಲ್ಲಿ ನೇಮಕ ಮಾಡುತ್ತಾರೆ? ಗೌಡರಿಗೆ ತಮ್ಮ ರಾಜಕೀಯ ಬಂದೂಕು ಹಾರಿಸಲು ಪ್ರಕಾಶರ ಹೆಗಲು ಸರಿಹೋಗದೆ, ಈಗವರು ಮಿರಾಜುದ್ದೀನ್ ಪಟೇಲರೆಂಬ ಅಲ್ಪಸಂಖ್ಯಾತರ ನಾಯಕನ ಹೆಗಲನ್ನು ಪರೀಕ್ಷಿಸಲು ಹೊರಟಿರುವಂತೆ ಕಾಣುತ್ತದೆ!
Comments
ಉ: ಬರಲಿರುವ ದುರ್ದಿನಗಳ ಮುನ್ಸೂಚನೆಗಳು...