ಬಳಿ ಬಂದವರಿಗೆಲ್ಲ ಗಂಧವನ್ನು ಹಂಚಿದವನು - ಕಿ.ರಂ

ಬಳಿ ಬಂದವರಿಗೆಲ್ಲ ಗಂಧವನ್ನು ಹಂಚಿದವನು - ಕಿ.ರಂ

ಗಂಧದವನೊಡನೆ ಗುದ್ದಾಡಿದವನು ನಾನು!

ಇಂದು ಅವರು ಇಲ್ಲ.

ನನ್ನಂತೆಯೇ ಅನೇಕ ಜನರು ಈ ಗಂಧದವನೊಡನೆ ಗುದ್ದಾಡಿ ಪುನೀತರಾಗಿದ್ದರು. ಎಲ್ಲರನ್ನೂ ಪುನೀತರಾಗಿಸಿ, ಯಾರಿಗೂ ಹೆಚ್ಚು ತೊಂದರೆಯನ್ನು ಕೊಡದೆ ಗಂಧದವನು ಸದ್ದಿಲ್ಲದೇ ತನ್ನ ವ್ಯಾಪಾರವನ್ನು ಮುಗಿಸಿ ಇಂದು ಹೊರಟುಹೋಗಿಹನು.

ಹೌದು. ನಾನು ಮಾತನಾಡುತ್ತಿರುವುದು ನಿನ್ನೆ ರಾತ್ರಿ ನಮ್ಮನ್ನು ಬಿಟ್ಟು ಹೋದಂತದ ಕಿತ್ತಾನಿ ರಂಗಣ್ಣ ನಾಗರಾಜ್ ಅವರ ಬಗ್ಗೆಯೆ.

------------

೧೯೮೧. ನಾನು ಎಂ.ಬಿ.ಬಿ.ಎಸ್ ಸೇರಿದ್ದ ಮೊದಲ ವರ್ಷ.

ಕ್ರೈಸ್ಟ್ ಕಾಲೇಜಿನ ವತಿಯಿಂದ ಬೇಂದ್ರೆ ಅವರ ಕವನ ವಿಮರ್ಶಾ ಸ್ಪರ್ಧೆಯನ್ನು ಏರ್ಪಡಿಸಿದ್ದರು. ನಾನು ಮೂಲತಃ ವಿಜ್ಞಾನ ವಿದ್ಯಾರ್ಥಿ. ನನ್ನ ಕನ್ನಡದ ಅರಿವು ಮಾಧ್ಯಮಿಕ ಶಾಲೆ ೭ ನೆಯ ತರಗತಿ ಮಾತ್ರ. ಆದರೆ ಕನ್ನಡ  ಸಾಹಿತ್ಯವನ್ನು ಸ್ವ-ಆಸಕ್ತಿಯಿಂದ ಒಂದಷ್ಟು ಓದಿಕೊಂಡಿದ್ದೆ. ಹಾಗಾಗಿ ಈ ಸ್ಪರ್ಧೆಯಲ್ಲಿ  ಭಾಗವಹಿಸಲು ಇಚ್ಛಿಸಿ, ಬೇಂದ್ರೆಯವರ "ಹಕ್ಕಿ ಹಾರುತಿದೆ ನೋಡಿದಿರಾ?" ಎಂಬ ಕವನವನ್ನು ವಿಮರ್ಶೆಗೆ ಆಯ್ಕೆ ಮಾಡಿಕೊಂಡೆ. ನನಗೆ ತಿಳಿದ ಹಾಗೆ-ಅರ್ಥವಾದ ಹಾಗೆ ಸಿದ್ಧತೆಯನ್ನು ನಡೆಸಿಕೊಂಡು ಸ್ಪರ್ಧೆಗೆ ಹೋದೆ.

 

ಬೇಂದ್ರೆ ಕವನ ವಿಮರ್ಶೆಗೆ ತೀರ್ಪುಗಾರರಾಗಿ ಬಂದಿದ್ದವರು ಕಿ.ರಂ.ನಾಗರಾಜ್ ಹಾಗೂ ದೇಶ ಕುಲಕರ್ಣಿ. ಇಬ್ಬರೂ ಬೇಂದ್ರೆ ಸಾಹಿತ್ಯವನ್ನು ಕರತಲಾಮಲಕ ಅರಿತವರು. ಹಾಗಾಗಿ ತೀರ್ಪುಗಾರರಾಗಲು ಯೋಗ್ಯರಾಗಿದ್ದರು. ಈ ಬಗ್ಗೆ ಎರಡು ಮಾತಿಲ್ಲ.

 

ನನ್ನ ಅವಕಾಶ ಬಂದಾಗ, ನಾನು ಕಾಲವೆಂಬ ಹಕ್ಕಿ ಹೇಗೆ ಬ್ರಹ್ಮಾಂಡಗಳ ಆಚೆಗೂ ಚಾಚಿದೆ ತನ್ನಯ ಚುಂಚ ಎಂಬುದನ್ನು ವಿವರಿಸಲು ಸಾಹಿತ್ಯಕ್ಕಿಂತ ವಿಜ್ಞಾನವನ್ನು ಹೆಚ್ಚು ಆಧರಿಸಿದೆ. ವಾಸ್ತವದಲ್ಲಿ ಕಾಲ ಎನ್ನುವುದು ಭೂಮಿಯ ಮೇಲೆ ಕಾಣುವ "ಭ್ರಮೆ". ಸೂರ್ಯ ಹುಟ್ಟಿದಾಗ ಬೆಳಗಾಗುತ್ತದೆ. ಸೂರ್ಯ ಮುಳುಗಿದಾಗ ರಾತ್ರಿಯಾಗುತ್ತದೆ. ಈ ಎರಡು ಪ್ರಾಕೃತಿಕ ಘಟನೆಗಳ ನಡುವಿನ ಅವಧಿಯನ್ನು ೨೪ ಗಂಟೆಗಳಾಗಿ ವಿಂಗಡಿಸಿಕೊಂಡಿದ್ದೇವೆ. ಒಂದು ವೇಳೆ ನಾವು ಭೂಮಿಯನ್ನು ಬಿಟ್ಟು ಬಾಹ್ಯಾಕಾಶದಲ್ಲಿ ನಿಲ್ಲಲು ಸಾಧ್ಯವಾದರೆ, ಅಲ್ಲಿ ಸೂರ್ಯನು ಹುಟ್ಟುವುದೂ ಇಲ್ಲ. ಮುಳುಗುವುದೂ ಇಲ್ಲ. ಅಲ್ಲಿ ಭೂಮಿಯ ಮೇಲೆ ನಾವು ಯಾವುದನ್ನು ಕಾಲ ಎಂದು ಕರೆಯುತ್ತೇವೆಯೋ, ಆ ಕಾಲಕ್ಕೆ ಅಸ್ತಿತ್ವವಿಲ್ಲ. ಆದರೂ ಕಾಲ ಎನ್ನುವುದು ತನ್ನದೇ ಆದ ಸ್ವರೂಪದಲ್ಲಿ ಇರಲೇಬೇಕು. ಬ್ರಹ್ಮಾಂಡ ಸ್ಫೋಟಿಸಿತು ಎನ್ನುತ್ತೇವೆ. ನೀಹಾರಿಕೆಗಳು ರೂಪುಗೊಂಡಿತು ಎನ್ನುತ್ತೇವೆ. ಸೂರ್ಯ, ಸೌರಮಂಡಲಗಳು ಹುಟ್ಟಿದೆವು ಎನ್ನುತ್ತೇವೆ. ಇವನ್ನು ಲೆಕ್ಕ ಹಾಕಲು ಕಾಲ ಎನ್ನುವುದು ಒಂದು ಇರಬೇಕಲ್ಲ ಎಂದು ಹೇಳಿದೆ. ಎಲ್ಲಕ್ಕಿಂತ ಮುಖ್ಯವಾಗಿ ನಾವು ಬೆಳಕಿನ ವೇಗದಲ್ಲಿ ಚಲಿಸುವುದು ಸಾಧ್ಯವಾದಲ್ಲಿ ಕಾಲ ಎನ್ನುವುದಕ್ಕೆ ಅಸ್ತಿತ್ವವಿರುವುದೇ ಇಲ್ಲ... ಬೇಂದ್ರೆಯವರು ತಮ್ಮ  ಕವನದಲ್ಲಿಭೂಮಿಯ ಮೇಲೆ ನಾವು ಯಾವುದನ್ನು ಕಾಲ ಎಂದು ಸ್ವೀಕರಿಸಿದ್ದೇವೆಯೋ, ಆ ಕಾಲದ ಜೊತೆಗೆ ವಿಜ್ಞಾನ ಪರಭಾಷೆಯಲ್ಲಿ ಹೇಳುವ ಕಾಲದ ಬಗ್ಗೆಯೂ ಸೂಚನೆಯನ್ನು ನೀಡಿದ್ದಾರೆ.... ಹೀಗೆ ನನ್ನ ವಾದ ಮುಂದುವರೆಯಿತು.

 

ನೀಡಿದ್ದ ೨೦ ನಿಮಷಗಳ ಅವಧಿಯ ನನ್ನ ವಿಮರ್ಶಾ ಮಂಡನೆಯಲ್ಲಿ ಸಾಹಿತ್ಯಕ್ಕಿಂತ ಹೆಚ್ಚು ವಿಜ್ಞಾನವೇ ಇದ್ದಿರಬೇಕು. ಸಹ ಸ್ಪರ್ಧಿಗಳ ಗಡಚಿಕ್ಕುವ ಚಪ್ಪಾಳೆಯಧ್ವನಿಯಲ್ಲಿ ನಾನು ನನ್ನ ಮಂಡನೆಯನ್ನು ಮುಗಿಸಿದೆ.

 

ಪ್ರತಿ ವಿದ್ಯಾರ್ಥಿಯ ವಿಷಯ ಮಂಡನೆಯ ನಂತರ ಕಿ.ರಂ ಅಥವ ದೇಶ ಕುಲಕರ್ಣಿಯವರು ಬೇಂದ್ರೆ ಅವರ ಕವನವನ್ನು ನಾವು ಹೇಗೆ ಅರ್ಥ ಮಾಡಿಕೊಂಡಿದ್ದೇವೆ ಎಂಬುದನ್ನು ಆಧರಿಸಿ  ಪ್ರಶ್ನೆಯನ್ನು ಕೇಳುತ್ತಿದ್ದರು. ನಾವು   ಸೂಕ್ತ ಉತ್ತರವನ್ನು ನೀಡಬೇಕಾಗಿತ್ತು. ನಾವು ನೀಡುವ ಉತ್ತರದ ಮೇಲೆ ಅಂಕ ನಿರ್ಧಾರವಾಗುತ್ತಿತ್ತು. ನಂತರ ತೀರ್ಪುಗಾರರು ವಿದ್ಯಾರ್ಥಿಯ ಮಂಡನೆಯ ಬಗ್ಗೆ ತಮ್ಮ ಅಭಿಪ್ರಾಯವನ್ನು ತಿಳಿಸಿ, ಎಲ್ಲಿ ನಾವು ನಮ್ಮನ್ನು ಸುಧಾರಿಸಿಕೊಳ್ಳಬೇಕು ಎಂದು ತಿಳಿಸುತ್ತಿದ್ದರು.

 

ನನ್ನ ಮಂಡನೆಯ ನಂತರ ಕಿ.ರಂ. ಅವರು "ಚೆನ್ನಾಗಿ ಮಾತನಾಡಿದೆ. ಆದರೆ ನೀನು ಯಾವಾಗಲೂ ಕವಿತೆಯ ಒಳಗೆ ನಿಂತು ವಿಮರ್ಶೆ ಮಾಡಬೇಕು. ಕವಿತೆಯ ಹೊರಗೆ ನಿಂತು ವಿಮರ್ಶೆ ಮಾಡಬಾರದು" ಎಂದರು. ಕಿ.ರಂ ಅವರು ಮುಖ್ಯವಾಗಿ ನಾನು ಕಾಲ ಮತ್ತು ಬ್ರಹ್ಮಾಂಡದ ಬಗ್ಗೆ ನೀಡಿದ ವೈಜ್ಞಾನಿಕ ವಿವರಣೆಯ ಬಗ್ಗೆ ಆಕ್ಷೇಪವನ್ನು ಎತ್ತಿದ್ದರು.

 

ನಾನು "ಯಾಕೆ ಕಾವ್ಯದ ಹೊರಗೆ ನಿಂತು ವಿಮರ್ಶೆ ಮಾಡಬಾರದು. ಕಾವ್ಯದ ಒಳಗೆ ನಿಂತರೆ ಕಾವ್ಯ ಕುಬ್ಜವಾಗಿ ಕಾಣುತ್ತದೆ. ಕಾವ್ಯದ ಹೊರಗೆ ನಿಂತು ನೋಡಿದರೆ, ಕಾವ್ಯ ಎಷ್ಟು ಎತ್ತರವಾಗಿದೆ, ಎಷ್ಟು ವಿಶಾಲವಾಗಿದೆ ಎಂದು ತಿಳಿಯುತ್ತದೆ. ಕಾವ್ಯದ ಒಳಗೆ ನಿಂತು ವಿಮರ್ಶೆ ಮಾಡುವ ಹಾಗೆ ಕಾವ್ಯದ ಹೊರಗೂ ನಿಂತು ನೋಡಬೇಕು" ಎನ್ನುವುದು ನನ್ನ ವಾದವಾಗಿತ್ತು.

 

ನಮ್ಮ ವಾದವೇ ೨೦ ನಿಮಿಷಗಳನ್ನು ಮೀರಿತು. ನಾನು ಕಿ.ರಂ ಅವರ ನಿಲುವನ್ನು ಒಪ್ಪಲೇ ಇಲ್ಲ. ಕೊನೆಗೆ ದೇಶ ಕುಲಕರ್ಣಿ ಅವರು ಮಧ್ಯೆ ಬಂದು ನಮ್ಮ ವಾದವನ್ನು ನಿಲ್ಲಿಸಿದರು. ಸ್ಪರ್ಧೆ ಮುಂದುವರೆಯಲು ಅವಕಾಶವನ್ನು ಮಾಡಿದರು.

 

ತೀರ್ಪುಗಾರರು ತೀರ್ಪನ್ನು ನಿರ್ಣಯಿಸಲು ಒಳಗೆ ಹೋದರು. ಆಗ ನನ್ನ ಜೊತೆಯಲ್ಲಿದ್ದವರು ನಾನು ತೀರ್ಪುಗಾರರ ಜೊತೆಯಲ್ಲಿ ವಾದ ಮಾಡಬಾರದಾಗಿತ್ತು. ಬರುವ ಬಹುಮಾನ ತಪ್ಪಿ ಹೋಗುವುದು ಖಂಡಿತ ಎಂದರು. ನನಗೆ ಬಹುಮಾನ ಬರದಿದ್ದರೂ ಚಿಂತೆಯಿಲ್ಲ. ನನ್ನ ತಿಳಿವಳಿಕೆಯನ್ನು ತಪ್ಪು ಎನ್ನುವುದನ್ನು ನಾನು ಒಪ್ಪಲಾರೆ ಎಂದು ವಾದಿಸಿದೆ.

 

ಸ್ಪರ್ಧೆಯ ಫಲಿತಾಂಶವನ್ನು ಘೋಷಿಸಿದರು. ನನಗೆ ಎರಡನೆಯ ಬಹುಮಾನ ಬಂದಿತ್ತು!

ಕಿ.ರಂ ನನ್ನ ಹುಡುಗುತನವನ್ನು ಅಥವ ದುಡುಕುತನವನ್ನು ಲೆಕ್ಕಕ್ಕೆ ತೆಗೆದುಕೊಂಡಿರಲಿಲ್ಲ. ಆಗ ನಾನು "ನನ್ನ ತಿಳಿವಳಿಕೆಯ ಸರಿ!" ಎಂದು ಬೀಗಿದ್ದೆ.

------------

ನಂತರ... ನಾನು ಸಗಣಿಯವನು ಎಂಬುದು ತಿಳಿಯಿತು. ನನ್ನ ಪುಣ್ಯ.ಗಂ ಧದವನೊಡನೆ ಗುದ್ದಾಡಿದ ಕಾರಣ ಒಂದಷ್ಟು ಗಂಧ ನನ್ನ ಮೈಗೂ ಅಂಟಿತು. ಇಲ್ಲದಿದ್ದರೆ ನಾನು ಜೀವನ ಪರ್ಯಂತ ಸಗಣಿಯ ದುರ್ಗಂಧವನ್ನೇ ಶ್ರೀಗಂಧ ಎಂದು ತಿಳಿದು ಬದುಕನ್ನು ನಡೆಸಬೇಕಾಗುತ್ತಿತ್ತು. ಕಿ.ರಂ ನಾನು ಕೃತಜ್ಞ.

------------

ಕಿ.ರಂ. ಅವರು ಶನಿವಾರ ರಾತ್ರಿ, ಅದೇ ಬೇಂದ್ರೆಯವರ ಕವನಗಳ ಬಗ್ಗೆ ಎರಡು ಗಂಟೆಗಳ ಕಾಲ ಮಾತನಾಡಿ, ಮನೆಗೆ ಹೋಗುವ ಹಾದಿಯಲ್ಲಿ ತೀವ್ರ ಹೃದಯಘಾತಕ್ಕೆ ತುತ್ತಾಗಿ ತಮ್ಮ ಎಲ್ಲ ಗಂಧದೊಡನೆ ಹೋಗಿಯೇ ಬಿಟ್ಟರು.

 

ಬೇಂದ್ರೆಯವರ ಕವನ ’ಜೋಗಿ’ ಯನ್ನು ನೆಪವನ್ನಾಗಿ ಇಟ್ಟುಕೊಂಡು ಬದುಕಿನ ದ್ವಂದ್ವವನ್ನು ಬೇಂದ್ರೆಯವರು ಹೇಗೆ ಸೊಗಸಾಗಿ ತಮ್ಮ ಕವನಗಳಲ್ಲಿ ಕಟ್ಟಿಕೊಡುತ್ತಾರೆ ಎನ್ನುವುದನ್ನು ಸೋದಾಹರಣವಾಗಿ ವಿವರಿಸಿದರು.  ಹುಟ್ಟು-ಸಾವು ಹೇಗೆ ಪಕ್ಕ ಪಕ್ಕದಲ್ಲಿಯೇ ತಮ್ಮ ಅಸ್ತಿತ್ವಗಳನ್ನು ಕಂಡುಕೊಳ್ಳುತ್ತವೆ ಎಂದು ವಿವರಿಸುತ್ತಾ ಸಾವಿನ ಜೊತೆಯಲ್ಲಿ ಹೊರಟೇಹೋದರು.

------------

ಕಿ.ರಂ. ಕನ್ನಡ ಸಾಹಿತ್ಯವನ್ನು ಆಳವಾಗಿ ಅಧ್ಯಯನ ಮಾಡಿದ್ದರು. ಸಾಹಿತ್ಯದಲ್ಲಿ ಲವಲೇಷವೂ ಆಸಕ್ತಿಯಿಲ್ಲದ ವಿದ್ಯಾರ್ಥಿಯು ಒಮ್ಮೆ ಕಿ.ರಂ. ಅವರ ಭಾಷಣವನ್ನು ಕೇಳೀದರೆ ಸಾಕು. ಅವನು ತನ್ನ ಭಿಪ್ರಾಯವನ್ನು ಅಲ್ಲಿಯೇ ಬದಲಿಸಿಕೊಳ್ಳುತ್ತಿದ್ದನು.

 

ಕಿ.ರಂ ಅವರು ತಮ್ಮ ವಿದ್ಯಾರ್ಥಿಗಳನ್ನು ಬಹಳ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದರು. ಎದುರಿಗೆ ಸಿಕ್ಕ ಕೂಡಲೇ ಏನು ಬರೆದಿದ್ದೀಯ. ಓದು. ಕೇಳುತ್ತೇನೆ ಎನ್ನುತ್ತಿದ್ದರು. ಹುಡುಗ ಎಲ್ಲಿ ತಪ್ಪಿದ್ದಾನೆ ಅಥವ ಹೇಗೆ ಬರೆದಿದ್ದರೆ ಹೆಚ್ಚು ಅರ್ಥವತ್ತಾಗಿರುತ್ತಿತ್ತು ಎಂಬುದನ್ನು ತಿಳಿ ಹೇಳುತ್ತಿದ್ದರು.

 ಕಿ.ರಂ ವಸ್ತುನಿಷ್ಟ ವಿಮರ್ಶಕರು. ಮುಖಸ್ತುತಿ ಅವರಿಗೆ ಗೊತ್ತಿರಲಿಲ್ಲ. ತಾವು ನಂಬಿದ್ದನ್ನು ಧೈರ್ಯವಾಗಿ ಹೇಳುತ್ತಿದ್ದರು. ಮುಲಾಜಿಗೆ ಎಂದೂ ಸಿಕ್ಕಿ ಹಾಕಿಕೊಳ್ಳುತ್ತಿರಲಿಲ್ಲ. ಲಘು ಸಾಹಿತ್ಯವನ್ನು ಎಂದಿಗೂ ಒಪ್ಪುತ್ತಿರಲಿಲ್ಲ. ಅವರ ಲೆಕ್ಕದಲ್ಲಿ ಕೆ.ಎಸ್.ನ ಹಾಗೂ ಸು.ರಂ.ಎಕ್ಕುಂಡಿಯವರು ಕವಿಗಳೇ ಆಗಿರಲಿಲ್ಲ. ಆಧುನಿಕರಲ್ಲಿ ಬೇಂದ್ರೆ ಹಾಗೂ ಅಡಿಗರನ್ನು ಬಹುವಾಗಿ ಮೆಚ್ಚುತ್ತಿದ್ದರು.

ಎಲ್ಲಕ್ಕಿಂತ ಮುಖ್ಯವಾಗಿ ಒಂದು ಒಳ್ಳೆಯ ಕೃತಿಯನ್ನು ಓದುವುದು ಹೇಗೆ ಎಂಬುದನ್ನು ಹೇಳುತ್ತಿದ್ದರು.

-----------

ಕಿ.ರಂ. ಸ್ವತಃ ಬರೆದದ್ದು ಕಡಿಮೆ. ಆದರೆ ಬರೆಯುವವರನ್ನು ಬೆಳೆಸಿದರು. ಇದು ಬಹಳ ಮುಖ್ಯ.

----------

ಮನೆಯಲ್ಲಿಯೇ ’ಕಾವ್ಯಮಂಡಲ’ವನ್ನು ಕಟ್ಟಿದರು. ಇತ್ತೀಚಿಗೆ ಎಚ್.ಎಸ್.ಶ್ರೀಮತಿಯವರಿಂದ ’ಸೆಕಂಡ್ ಸೆಕ್ಸ್’ ಕೃತಿಯನ್ನು ಕನ್ನಡಕ್ಕೆ ಅನುವಾದಿಸಿ ಪ್ರಕಟಿಸಿದ್ದರು. ಇದೊಂದು ಅದ್ವಿತೀಯ ಕೃತಿ. ಸಂಪದದಲ್ಲಿರುವ ಗಂಡು-ಹೆಣ್ಣು ಇಬ್ಬರೂ ಓದಲೇಬೇಕಾದಂತಹ ಒಂದು ಮೈಲಿಗಲ್ಲಿನ ಕೃತಿ.

----------

ಬೆಂಗಳೂರು ದೂರದರ್ಶನವು ಕಿ.ರಂ ಅವರನ್ನು ಸಂಚಯ ಕಾರ್ಯಕ್ರಮಕ್ಕೆ  ಆಹ್ವಾನಿಸಿತ್ತು. ಕಿ.ರಂ ಅವರು ಮೂರು ಸಲ ಮುದ್ರಣ ಕಾರ್ಯವನ್ನು ಮುಂದಕ್ಕೆ ಹಾಕಿದ್ದರು. ಇದೇ ಆಗಸ್ಟ್ ೧೧, ಬುಧವಾರ ಖಂಡಿತಾ ಬರುತ್ತೇನೆ ಎಂದು ಆಶ್ವಾಸನೆಯನ್ನು ನೀಡಿ ಬಾರದೂರಿಗೆ ಹೋಗಿಬಿಟ್ಟರು. ಹೀಗೇ ಹುಟ್ಟೂರಿನ ಜನರ ಪ್ರೀತಿ-ಆದರಗಳನ್ನು ಸವಿಯಲು ಬರುವೆನು ಎಂದು ಮಾತುಕೊಟ್ಟು, ಈಗ "ವಚನಭ್ರಷ್ಟ" ರಾದರು.

----------

ಕಿ.ರಂ ಅವರನ್ನು ’ನಡೆದಾಡುವ ವಿಶ್ವಕೋ”, ’ಆಧುನಿಕ ಸರ್ವಜ್ಞ’ ಹೀಗೆಲ್ಲ ಸಮಕಾಲೀನ ಸಾಹಿತಿಗಳು ಹೇಳುವರು. ಇವೆಲ್ಲ ನಿಜವಿರಬಹುದು. ಆದರೆ ಅವರ ಕುಡಿತ ಹಾಗೂ ಧೂಮಪಾನ-ಇವೆರಡೇ ಅವರನ್ನು ಕೊಂದದ್ದು ವಿಪರ್ಯಾಸ. ಇದು ನನ್ನ ಅನಿಸಿಕೆ. ೬೫ ವರ್ಷ ಖಂಡಿತಾ ಸಾಯುವ ವಯಸ್ಸಲ್ಲ.

----------

ಮನುಷ್ಯ ಏಕೆ ಚಟಕ್ಕೆ ಒಳಗಾಗುತ್ತಾನೆ? ’ಇದಮಿತ್ಥಂ’ ಎಂಬ ಉತ್ತರ ನನಗಿನ್ನೂ ದೊರೆತಿಲ್ಲ.

----------

ಕಿ.ರಂ ಅವರು ಹೆಚ್ಚು ಬರೆಯದಿದ್ದರೂ, ಸಾವಿರಾರು ವಿದ್ಯಾರ್ಥಿಗಳನ್ನು ಬೆಳೆಸಿದ್ದಾರೆ. ಕಿ.ರಂ ಅವರು ಹೊರಡುವ ಮೊದಲು ತಮ್ಮ ಗಂಧದ ಬಟ್ಟಲನ್ನು ಯಾರ ಕೈಗಾದರೂ ಕೊಟ್ಟೇ ಇರುತ್ತಾರೆ ಎಂದು ನನ್ನ ನಂಬಿಕೆ. ಕೊಡಲಿ.  ಗಂಧದವರೊಡನೆ ಗುದ್ದಾಡುವ ಭಾಗ್ಯ ಸದಾ ನಮ್ಮ ಪಾಲಿಗಿರಲಿ.

----------

ನಾಸೋ

http://www.hindu.com/2010/08/04/images/2010080453960501.jpg

Rating
No votes yet

Comments