ಬಸವಣ್ಣನವರ ವಚನಸುಧೆ 2

ಬಸವಣ್ಣನವರ ವಚನಸುಧೆ 2

ಲೋಕದ ಡೊಂಕ ನೀವೇಕೆ ತಿದ್ದುವಿರಿ? (ಡೊಂಕ=ದೋಷ)
ನಿಮ್ಮ ನಿಮ್ಮ ತನುವ ಸಂತೈಸಿಕೊಳ್ಳಿ (ತನು=ದೇಹ)
ನಿಮ್ಮ ನಿಮ್ಮ ಮನವ ಸಂತೈಸಿಕೊಳ್ಳಿ
ನೆರೆಮನೆಯ ದುಃಖಕ್ಕೆ ಅಳುವವರ ಮೆಚ್ಚ
ಕೂಡಲಸಂಗಮದೇವಾ.

ಕುರಿವಿಂಡು ಕಬ್ಬಿನ ಉಲಿವ ತೋಂಟವ ಹೊಕ್ಕು (ಉಳಿ=ರಸಪೂರ್ಣ)
ತೆರನನರಿಯದೆ ತನಿರಸದ (ತನಿರಸ=ಸವಿಯಾದ ರಸ, ತೆರ= ರೀತಿ)
ಹೊರಗಣೆಲೆಯನೆ ಮೇದುವು!
ನಿಮ್ಮನರಿವ ಮದಕರಿಯಲ್ಲದೆ (ಮದಕರಿ=ಮದ್ದಾನೆ)
ಕುರಿ ಬಲ್ಲುದೆ, ಕೂಡಲಸಂಗಮದೇವಾ?

ಭಕ್ತನೆನಿಸುವೆನಯ್ಯಾ ಮೆಲ್ಲ ಮೆಲ್ಲನೆ
ಯುಕ್ತನೆನಿಸುವೆನಯ್ಯಾ ಮೆಲ್ಲ ಮೆಲ್ಲನೆ
ಸಾರಿ ಶರಣನೆನಿಸುವೆನಯ್ಯಾ ಮೆಲ್ಲ ಮೆಲ್ಲನೆ
ಎಡಹುಗುಳಿಗಳ ದಾಂಟಿ ಬರಬರ ಲಿಂಗೈಕ್ಯ ನೆನಿಸುವೆನಯ್ಯಾ
ಕೂಡಲಸಂಗಮದೇವಾ,
ನಿಮ್ಮಿಂದ ಧಿಕನೆನಿಸುವೆನಯ್ಯಾ

ಉಳ್ಳವರು ಶಿವಾಲಯವ ಮಾಡಿಹರು,
ನಾನೇನು ಮಾಡುವೆ ಬಡವನಯ್ಯಾ?
ಎನ್ನ ಕಾಲೇ ಕಂಬ, ದೇಹವೇ ದೇಗುಲ,
ಶಿರ ಹೊನ್ನ ಕಳಶವಯ್ಯಾ.
ಕೂಡಲಸಂಗಮದೇವಾ ಕೇಳಯ್ಯಾ
ಸ್ಥಾವರಕ್ಕಳಿವುಂಟು, ಜಂಗಮಕ್ಕಳಿವಿಲ್ಲ. (ಸ್ಥಾವರ=ಚಲಿಸದಿರುವುದು, ಜಂಗಮ=ಚಲನಶೀಲವಾದದ್ದು )

ಅರೆವನಯ್ಯಾ ಸಣ್ಣವಹನ್ನಕ್ಕ,
ಒರೆವನಯ್ಯಾ ಬಣ್ಣಗಾಣ್ಬನ್ನಕ್ಕ. (ಒರೆ=ಒರೆಗಲ್ಲಿನಲ್ಲಿ ಉಜ್ಜು)
ಅರೆದರೆ ಸಣ್ಣವಾಗಿ ಒರೆದರೆ ಬಣ್ಣವಾದರೆ
ಕೂಡಲಸಂಗಮದೇವನೊಲಿದು ಸಲಹುವನು.

ಇದರಲ್ಲಿ ಏನಾದರು ತಪ್ಪುಗಳಿದ್ದರೆ ಮತ್ತು ಏನಾದರು ಬದಲಾವಣೆಗಳಿದ್ದರೆ ದಯವಿಟ್ಟು ಸರಿಪಡಿಸಿ ಅಥವಾ ನನಗೆ ಸೂಚಿಸಿ.

Rating
No votes yet