ಬಸ್ಸಿನಲ್ಲಿ ಸಂಗೀತ ಕಚೇರಿ
ಮಂಗಳೂರಿನ ಕೆಲವು ಬಸ್ಸಲ್ಲಿ ಹೆಚ್ಚು ಜನ. ಕೆಲವಕ್ಕೆ ಕಡಿಮೆ. ಯಾಕೇಂತ ಕೇಳೀದ್ರೆ 'ಇದರಲ್ಲಿ ಸಾಂಗ್ಸ್ ಹಾಕ್ತಾರೆ. ಕೇಳ್ಕೊಂಡು ಕಾಲೇಜಿಗೆ ಹೋಗೋಕೆ ಖುಷಿಯಾಗುತ್ತೆ. ಅದಕ್ಕೆ ನಾವು ದಿನ ಇದೇ ಬಸ್ಸಿಗೆ ಹೋಗ್ತಿವಿ ಬರ್ತೀವಿ' ಅಂತ ಉತ್ತರ. ಹೀಗೆ ಯಾವಾಗ ಆಡಿಯೋ ವ್ಯವಸ್ಥೆ ಇರುವ ಬಸ್ಸಿಗೆ ಜನ ದೌಡಾಯಿಸತೊಡಗಿದರೋ, ಇದನ್ನು ನೋಡಿ ಉಳಿದ ಬಸ್ಸಿನವರು ಕೂಡ ಆಡಿಯೋ ಸಿಸ್ಟಮ್ ಆಳವಡಿಸೋದು ಅನಿವಾರ್ಯವಾಯಿತು.
ಶುರುವಾಯ್ತು ನೋಡಿ ಅಲ್ಲಿಂದ ಜಟಾಪಟಿ. ಒಬ್ಬ ಕನ್ನಡ ಪದ್ಯ (ಮಂಗಳೂರಲ್ಲಿ ಸಿನಿಮಾ ಹಾಡಿಗೂ ಪದ್ಯ ಅಂತಲೇ ಹೇಳ್ತಾರೆ) ಹಾಕಿ ಅಂದ್ರೆ, ಇನ್ನೊಬ್ಬ ಹಿಂದಿ ಪದ್ಯ ಪಾಡ್ಲೆ (ಹಾಕಿ) ಅಂತಾನೆ. ಹೀಗೆ ತರೆಹೆವಾರಿ ಸಾಂಗ್ಸ್ ಬೇಕು. ಬೇಸಿಗೆಯಲ್ಲಿ ಉರಿವ ಬಿಸಿಲು ಒಂದೇ ಬಸ್ಸಿನಲ್ಲಿ ಎರಡು ಬಸ್ಸಿಗಳಿಗಾಗುವಷ್ಟು ಜನ , ಮಧ್ಯೆ ಮಧ್ಯೆ ಸೆಖೆಗೆ ಮಕ್ಕಳ ಬೊಬ್ಬೆ, ಅಯ್ಯೋ ಬೇಡಪ್ಪ ಬೇಡ ಬಸ್ಸಿನ ಸಹವಾಸ ಅನ್ನಿಸದೇ ಇರದು. ಕೆಟ್ಟ ಹಾಡುಗಳನ್ನು ಕೇಳಿ ಬೇಸತ್ತು ಹೆಂಗಸರು ಅದನ್ನು ನಿಲ್ಲಿಸುವಂತೆ ಗಲಾಟೆ ಮಾಡತೊಡಗಿದರೆ, ಬಸ್ಸಿನಲ್ಲಿ ಪ್ರಯಾಣಿಸುವ ರೋಗಿಗಳಿಗೆ, ತಮ್ಮ ತಮ್ಮ ಉದ್ಯೋಗಗಳ ತಲೆ ಬಿಸಿಯಲ್ಲಿರುವವರಿಗೆ ಸಾಂಗ್ಸ್ ಕೇಳೋದು ಕಿರುಚಾಟದಷ್ಟೇ ಕಷ್ಟ ಅನ್ನಿಸತೊಡಗಿತು. ಒಟ್ಟಾರೆ ಬಸ್ಸಿನವರಿಗೆ ಮಂಡೆಬಿಸಿ. ಅತ್ತಪುಲಿ ಇತ್ತ ದರಿ.
ಎಲ್ಲ ಒಂದು ಹಂತಕ್ಕೆ ಬಂದದ್ದು, ಆರ್ ಟಿ ಓ ಅವರು ಬಸ್ಸುಗಳಲ್ಲಿ ಆಡಿಯೋ, ವಿಡಿಯೋ ಬಳಸಬಾರದು ಅಂತ ನಿರ್ದೇಶನ ನೀಡಿದ ಮೇಲೆಯೇ. ಆದರೆ ಇಂದಿಗೂ ಕೆಲವು ಬಸ್ಸುಗಳು ತಮ್ಮ ಕೇಳಿಸುವಿಕೆಯನ್ನು ಕಡಿಮೆ ಮಾಡಿಲ್ಲ ಅನ್ನೋದು ಬೇರೆ ವಿಚಾರ.
ಈಗ ಹೊಸ ಟ್ರೆಂಡ್ ಪ್ರಾರಂಭವಾಗಿದೆ. ಎಲ್ಲರ ಕೈಯಲ್ಲೂ ಮೊಬೈಲ್ ಗಳು ಬಂದಿವೆ. ಸಾಮಾನ್ಯ ಮೊಬೈಲ್ ಗಳಲ್ಲೂ ಎಂ ಪಿ ೩ ಇರುತ್ತದೆ. ಹಾಗಾಗಿ ಬಸ್ಸಿನಲ್ಲಿ ಹಾಕಲಿ ಬಿಡಲಿ. ಬೇಕಾದವರು ತಮ್ಮಷ್ಟಕ್ಕೆ ತಾವು ಸಾಂಗ್ಸ್ ಕೇಳ್ತಾ ಇರ್ತಾರೆ. ಇಷ್ಟೇ ಆಗಿದ್ರೆ ಫೈನ್, ಆದ್ರೆ ಅವರು ಇಡೀ ಬಸ್ಸಿಗೆ ಕೇಳಿಸಬೇಕು ಅಂತ ಹಟ ತೊಟ್ಟಿರುವವರ ಹಾಗೆ ಲೌಡ್ ಸೌಂಡ್ ಇಟ್ಟು ಆನಂದಿಸುತ್ತಾರೆ. ಒಂದೊಂದು ಸಲ ನಾಲ್ಕು ದಿಕ್ಕುಗಳಿಂದಲೂ ಹಾಡು ಕೇಳುವ ಸೌಭಾಗ್ಯ ಸಿಗಬಹುದು. ಒಂದೇ ಸಲಕ್ಕೆ ಭಾವಗೀತೆ, ಭಕ್ತಿಗೀತೆ, ಸಿನಿಮಾ ಹಾಡು ಎಲ್ಲವನ್ನೂ ಕೇಳುವ ಸೌಲಭ್ಯ.
ಹಗಲಾದ್ರೂ ಪರವಾಗಿಲ್ಲ, ರಾತ್ರಿ ಪ್ರಯಾಣದಲ್ಲೂ ಇದೇ ಕಿರಿಕಿರಿ. ಶಾಂತವಾಗಿ ನಿದ್ದೆ ಮಾಡೋಣ ಅಂದ್ರು ಎಲ್ಲಿ ಸಾಧ್ಯ. ಏನ್ ಮಾಡೋದು..... ದಾರಿ ಕಾಣದಾಗಿದೆ ರಾಘವೇಂದ್ರನೇ ಅನ್ನೋ ಹಾಡು ಕೇಳಬೇಕಷ್ಟೇ.
Comments
ಉ: ಬಸ್ಸಿನಲ್ಲಿ ಸಂಗೀತ ಕಚೇರಿ