ಬಾಲಕರಿಗೆ ಆಶೀರ್ವಾದ

Submitted by kavinagaraj on Tue, 12/18/2012 - 15:31

 

ರಾಗ: ನೀಲಾಂಬರಿ
ಅನ್ನದಾನವನ್ನೆ ಮಾಡು ಕನ್ಯದಾನವನ್ನೆ ಮಾಡು
ನಿನ್ನ ನಂಬಿದರ ಪೊರೆದುನ್ನತ ಹರ್ಷದಿ ಬಾಳು
ಸನ್ನುತ ಸರ್ವಲೋಕಗಳನ್ನು ರಕ್ಷಿಸುವನಾಗು ಪ್ರ-
ಸನ್ನ ಮೂರುತಿಯಾಗು
ರನ್ನದ ರಾಶಿಗಳನ್ನು ಚಿನ್ನದ ಆಭರಣಗಳನ್ನು 
ಭೂಸುರರಿಗಿತ್ತು ಮನ್ನಿಸು ಉದಾರನಾಗು
ಮನ್ನೆಯರೆಲ್ಲರು ಬಂದು
ನಿನ್ನನೋಲೈಸಲೆಂದು ಅಪರ್ಣೆ ಪರಸಿದಳು || ೧ ||
 
ಕೋಟಿ ಗೋದಾನವ ಮಾಡು ಸಾಟಿಯಿಲ್ಲದಂಥಾ ಪಂಚ
ಕೋಟಿ ಗಜದಾನ ಶತಕೋಟಿಯಶ್ವದಾನಗಳ
ಮೀಟಾದ ಬ್ರಾಹ್ಮಣರಿಗಿತ್ತು ಕೀರ್ತಿವಂತನಾಗು ಕಿ-
ರೀಟಿ ಶೌರ್ಯದೊಳಾಗು ಮೀಟಾದ ಮಂತ್ರಿಗಳ ಕಿ-
ರೀಟ ರತ್ನ ಕಾಂತಿಗಳ ಕೋಟಿ ನಿನ್ನ ಪಾದದಲ್ಲಿ
ಧಾಟಿಯಾಗಿರುವನಾಗು
ಲೂಟಿಸಿ ವೈರಿಗಳನು ಗೋಟುಗೊಳಿಸುವ ಶಶಿ
ಜೂಟ ಭಕ್ತನಾಗು                       || ೨ ||
 
ಇತ್ತೆರದೆ ಬೀಸುತಿಹ ಮುತ್ತಿನ ಚಾಮರ ಶ್ವೇತ 
ಛ್ಛತ್ರ ಸೀಗುರಿಗಳ ಮೊತ್ತದ ಸಾಲೊಳಗೆ ಒ-
ಪ್ಪುತ್ತಲಿರುವವನಾಗು ಸತ್ಯವಂತನಾಗು ಸುವ್ರತ ನೀನಾಗು
ಪೆತ್ತವರು ನೋಡಿ ನಲಿವುತ್ತಿರಲು ಭೂಸುರರು 
ಮುತ್ತಿನಕ್ಷತೆಯನಾಂತು
ಪೃಥ್ವಿಯವೊಳಗೆಲ್ಲಾ ಸ-
ರ್ವೋತ್ತಮ ಪುರುಷನಾಗೆನುತ್ತ
ಮಸ್ತಕದಿ ತಳಿವುತ್ತ ಪರಸಿದರು                || ೩ ||
 
ಇಂದ್ರನಾಗು ಭೋಗದೊಳು ಸತ್ಯವಾಕ್ಯದೊಳು ಹರಿ-
ಶ್ಚಂದ್ರನಾಗು ಪಾಲನೆಯ ಮಾಡುವುದರೊಳಗೆ ಉ-
ಪೇಂದ್ರನಾಗು ಬುದ್ಧಿಕೌಶಲದೊಳು ತಿಳಿಯಲು ನಾ-
ಗೇಂದ್ರ ನೀನಾಗು
ಚಂದ್ರನಾಗು ಶಾಂತಿಯೊಳಗೆಂದು ವಂದಿಮಾಗಧರ
ವೃಂದ ಕರವೆತ್ತಿ ಜಯವೆಂದು ಪೊಗಳುತ್ತಿರಲಾ-
ಚಂದ್ರಾರ್ಕವು ಸೌಖ್ಯದಿ ಬಾಳೆಂದು ಸಾನಂದದೊಳಾಗ
ಇಂದಿರೆ ಪರಸಿದಳು                         || ೪ ||
 
ಧೀರನಾಗುದಾರನಾಗು ಸೂರಿಜನವಾರಕೆ ಮಂ-
ದಾರನಾಗು ಸಂಗರ ಶೂರನಾಗು ವೈರಿ ಜ-
ಝ್ಝಾರನಾಗು ಮಣಿಮಯ ಹಾರನಾಗು
ವೀರಾಧಿವೀರ ನೀನಾಗು
ಭೂರಮಣನಾಗು ಮಂತ್ರಿವಾರ ಸಂರಕ್ಷಕನಾಗು
ಕಾರುಣ್ಯ ಸಾಗರನಾಗು ಕಾಮಿತಫಲಿದನಾಗು
ಶ್ರೀ ರಾಮೇಶನ ಪಾದಾಬ್ಜ ವಾರಿಜ ಭಕ್ತನಾಗೆಂದು
ಶಾರದೆ ಪರಸಿದಳು                          || ೫ ||
 
ಇದು ಲಿಂಗಣ್ಣಕವಿಯ ಮಗ ಕವಿ ವೆಂಕಣ್ಣನ
(೧೮ನೆಯ ಶತಮಾನ) ರಚನೆ
 
ಬ್ಲಾಗ್ ವರ್ಗಗಳು
Rating
No votes yet

Comments

Prakash Narasimhaiya

Wed, 12/19/2012 - 10:25

ಆತ್ಮೀಯ ನಾಗರಾಜರೆ,
ಪದ್ಯವಂತು ಸೊಗಸಾಗಿದೆ. ಆದರೆ, ಇಷ್ಟೆಲ್ಲಾ ಆಗಲು ಅವನು ದೇವರೇ ಆಗಬೇಕು. ಕವಿಯ ಆಶಯದಲ್ಲಿ ಅದೆಷ್ಟು ಕನಸುಗಳಿವೆ ಎಂಬುದು ಇಲ್ಲ ಪ್ರಖರವಾಗಿ ಗೋಚರಿಸುತ್ತಿದೆ.
ಈಗ ಇಷ್ಟಂತೂ ಹೇಳಬಹುದು, ಏನಾದರು ಆಗು ಮೊದಲು ಮಾನವನಾಗು. ಉತ್ತಮ ಪದ್ಯ ಪರಿಚಯಿಸಿದ ನಿಮಗೆ ಧನ್ಯವಾದಗಳು. ರಚಿಸಿದ ಹಿರಿಯರಿಗೆ ಗೌರವಪೂರ್ಣ ನಮನಗಳು.