ಬಾಳ ಬೆಳದಿಂಗಳು (ಕಥೆ) - ಭಾಗ ೨

ಬಾಳ ಬೆಳದಿಂಗಳು (ಕಥೆ) - ಭಾಗ ೨

    


ಭಾಗ ೧


http://sampada.net/blog/shamzz/14/12/2010/29486


 


                                                                   ಭಾಗ ೨


 


ಮರುದಿನ ಎದ್ದವನೇ ರಮೇಶ್ ತನ್ನ ಜಾಗಿಂಗ್, ಸ್ನಾನ ಮುಗಿಸಿ ದಿನಪತ್ರಿಕೆ ಹಿಡಿದು ಹಜಾರಕ್ಕೆ ಬಂದ. ಪತ್ರಿಕೆ ಕೈಯಲ್ಲಿ ಇದ್ದರೂ ದೃಷ್ಟಿ ಮಾತ್ರ ರಸ್ತೆ ಕಡೆಗೆ ನೆಟ್ಟಿತ್ತು. ಸಮಯ ೮:೦೦ ಘಂಟೆಯಾಗುತ್ತಾ ಬಂತು. ಈಗ ರಮೇಶನ ಕಾತುರತೆಯು ಜಾಸ್ತಿಯಾಯಿತು. ಎದ್ದು ಗೇಟ್ ಕಡೆಗೆ ನಡೆದ. ಇಲ್ಲ ಅವಳ ಪತ್ತೆ ಇಲ್ಲ. ೮:೨೦ ಆದರೂ ಅವಳ ಆಗಮನವಾಗಲಿಲ್ಲ. ಅಷ್ಟರಲ್ಲಿ ಅಲ್ಲಿ ಬಂದ ಸರೋಜಮ್ಮ "ರಾಮೂ ಅಲ್ಲೇನು ಮಾಡುತ್ತಿದ್ದೀಯ?" ಎಂದು ಹತ್ತಿರ ಬಂದರು. ರಮೇಶ್ "ಹೀಗೆನೇ ಕೈತೋಟದಲ್ಲಿ ಸ್ವಲ್ಪ ಹೊತ್ತು ಸುತ್ತಾಡೋಣ ಅನ್ನಿಸಿತು,  ಅದಕ್ಕೆ ಇಲ್ಲಿ ಬಂದೆ". ಮಗನನ್ನು ಸೂಷ್ಮವಾಗಿ ಗಮನಿಸಿದ ಅವರು, "ರಾಮು ಇವತ್ತು ಆಫೀಸಿಗೆ ಹೋಗಬೇಡ ಕಣೋ, ಒಂದು ದಿನ ಮನೆಯಲ್ಲೇ ಇದ್ದು ರೆಸ್ಟ್ ತಗೋ" ಅಂದರು. ಅದಕ್ಕೆ ರಮೇಶ್, "ಇಲ್ಲಮ್ಮ, ನಿನ್ನೆ ಕೂಡ ಬೇಗ ಬಂದಿದ್ದೆ ತಾನೇ, ಆ ಕೆಲಸವೇ ಬಾಕಿ ಇದೆ. ಇವತ್ತು ಕೂಡ ರಜೆ ಹಾಕಿದ್ರೆ ಬೇರೆಯವರಿಗೂ ತೊಂದರೆ ಆಗುತ್ತದೆ, ನಾನು ಹೋಗಲೇ ಬೇಕು" ಎಂದು ಒಳನಡೆದ.ಈಗ ಸರೋಜಮ್ಮನಿಗೆ ಆಶ್ಚರ್ಯವಾಯಿತು. 'ಇದೇನು ಹೀಗೆ ಮಾತಾಡ್ತಾ ಇದ್ದಾನೆ? ನಿನ್ನೆ ಕೆಲಸ ಇರ್ಲಿಲ್ಲ ಹಾಗೆ ಬೇಗ ಬಂದೆ ಅಂದ. ಈಗ ನೋಡಿದ್ರೆ ನಿನ್ನೆ ಕೆಲಸ ಬಾಕಿ ಇದೆ ಅಂತಾನೆ. ಏನಾಗಿದೆ ಇವನಿಗೆ? ಏನಾದರೂ ಆಗಲಿ, ಈಗ ಮಗನ ಮುಂದೆ ಈ ವಿಷಯ ಎತ್ತುವುದು ಬೇಡ' ಎಂದು ಯೋಚಿಸಿದ ಅವರು ತಿಂಡಿ ಕೊಡಲು ಮಗನ ಹಿಂದೆ ನಡೆದರು.


 


"ಗಣೇಶ್ ಗಣೇಶ್, ಏನೋ ಇದು? ಫೈಲೆಲ್ಲ ಯಾಕೆ ಹೀಗಿದೆ? ಸರಿಯಾಗಿ ಜೋಡಿಸಿದಬಾರದಾ  ನೆಟ್ಟಗೆ ಕೆಲಸ ಮಾಡ್ಲಿಕ್ಕೂ ಬರಲ್ಲ. ಎಲ್ಲ ನಾನು ಬಂದು ಹೇಳಿದ ನಂತರ ನಿನ್ನ ಕೈ ಕಾಲು ಓಡೋದು". ಬೊಬ್ಬೆ ಕೇಳಿ ಓಡಿ ಬಂದ ಆಫೀಸ್ ಬಾಯ್ ಗಣೇಶ್ ರಮೇಶನ ಸಿಟ್ಟಿನಿಂದ ಕೆಂಪಾದ ಮುಖವನ್ನು ನೋಡಿ ಹೆದರಿದ. ಟೇಬಲ್ ಕಡೆ ನೋಡಿದ ಅವನಿಗೆ ಅಚ್ಚರಿಯಾಯಿತು. ನೀಟಾಗಿ ೨ ಸಾಲಿನಲ್ಲಿ ಬೆಳಗ್ಗೆ ತಾನೇ ಜೋಡಿಸಿಟ್ಟ ಫೈಲುಗಳು ಹಾಗೆ ಇವೆ. ದಿನವೂ ತನ್ನ ಕೆಲಸವನ್ನು ರಮೇಶ್ ಅದೇ ದಿನ ಮುಗಿಸುತ್ತಿದ್ದ. ಮರುದಿನಕ್ಕೆ ಬೇಕಾದ ಫೈಲುಗಳ ಪಟ್ಟಿಯನ್ನು ಗಣೇಶನ ಕೈಗೆ ಕೊನೆಯಲ್ಲಿ ಕೊಟ್ಟು ಬರುತ್ತಿದ್ದ. ಗಣೇಶ್ ಆ ಎಲ್ಲಾ  ಫೈಲುಗಳನ್ನು ಬೆಳಗ್ಗೆಯೇ ೧ ಸಾಲಿನಲ್ಲಿ ಜೋಡಿಸಿಡುತ್ತಿದ್ದ. ಆದರೆ ನಿನ್ನೆ ದಿನ ರಮೇಶ್ ಬೇಗನೆ ಮನೆಗೆ ಹೋಗಿದ್ದರಿಂದ ಕೆಲವು ಸಹಿಯಾಗಳು ಬಾಕಿಯಾದ ಫೈಲುಗಳು, ಇನ್ನು ಕೆಲವು ಪೂರ್ಣ ಮಾಡದ ಫೈಲುಗಳನ್ನು ಕೂಡ ಅಲ್ಲೇ ಇಟ್ಟಿದ್ದ ಗಣೇಶ್. ಹಾಗೂ ಇವತ್ತಿಗೆ ಅಗತ್ಯ ಇರುವ ಫೈಲುಗಳ ಪಟ್ಟಿಯನ್ನು ಅದೇ ಆಫೀಸಿನಲ್ಲಿ ಕೆಲಸ ಮಾಡುತ್ತಿದ್ದ ರಮೇಶನ ಅಚ್ಚು ಮೆಚ್ಚಿನ ಗೆಳೆಯ ಗೋಪಿಯಿಂದ ಪಡೆದು ಅವುಗಳನ್ನೂ ಇನ್ನೊಂದು ಸಾಲಿನಲ್ಲಿ ಜೋಡಿಸಿಟ್ಟಿದ್ದ.


 


"ಸರ್, ನಿನ್ನೆಯ ಕೆಲವು ಪೂರ್ಣ ಮಾಡಲು ಬಾಕಿ ಇರುವ ಫೈಲುಗಳನ್ನು ಇಲ್ಲೇ ಇಡು ಎಂದು ನೀವೇ ತಾನೇ ಹೇಳಿದ್ದು, ಅದಕ್ಕೆ ಅವುಗಳನ್ನು ಟೇಬಲ್ ಮೇಲೆಯೇ ಬಿಟ್ಟಿದ್ದೇನೆ" ಗಣೇಶನ ಮಾತು ಪೂರ್ಣವಾಗುವ ಮೊದಲೇ ರಮೇಶ್ , "ಸರಿ ಸರಿ, ಮಾತಾಡ್ತಾ ಇಲ್ಲೇ ನಿಲ್ಬೇಡ. ಹೋಗಿ ೧ ಕಾಫಿ ತಾ. ಅದು ನಾನೇ ಹೇಳ್ಬೇಕ ನಿಂಗೆ" ಎಂದು ರೇಗಿದ. ತಕ್ಷಣ ಅಲ್ಲಿಂದ ಹೊರನಡೆದ ಗಣೇಶ 'ಏನಾಗಿದೆ ರಮೇಶ್ ಸರ್ ಗೆ? ಯಾವತ್ತೂ ಹೀಗೆ ನನ್ನ ಮೇಲೆ ರೇಗಿದವರಲ್ಲ. ಮನೆಯಲ್ಲೇನಾದರೂ ತೊಂದರೆಯಾಗಿರಬಹುದ?' ಎಂದೆಲ್ಲ ಚಿಂತಿಸುತ್ತಾ ಕ್ಯಾಂಟೀನ್ ಕಡೆಗೆ ನಡೆದ. ಗಣೇಶ್ ಅಲ್ಲಿಂದ ಹೋದ ಸ್ವಲ್ಪ ಹೊತ್ತಲ್ಲೇ ತನ್ನ ತಪ್ಪಿನ ಅರಿವಾದ ರಮೇಶನಿಗೆ ಬಹಳ ಬೇಸರವಾಯಿತು. ಯಾವತ್ತೂ ಯಾವ ವಿಷಯವನ್ನೂ ಗಂಭೀರವಾಗಿ ತೆಗೆದುಕೊಳ್ಳದೆ, ಸದಾ ತನ್ನ ಆಫೀಸಿನಲ್ಲಿ ಕೆಲಸ ಮಾಡುವ ಪ್ರತಿಯೊಬ್ಬರ ಜೊತೆ ನಗುಮಖದಿಂದ ಮಾತನಾಡುತ್ತಾ, ಉನ್ನತ ಸ್ಥಾನದಲ್ಲಿ ಇದ್ದರೂ ಅದನ್ನು ತೋರಿಸದೆ ಕೆಲಸದಲ್ಲಿ ಎಲ್ಲರಿಗೂ ನೆರವಾಗುತ್ತ ಇದ್ದ ರಮೇಶ್ ಇಂದು ತನ್ನ ಮನಸ್ಸಿನ ಸ್ವಾಧೀನವನ್ನು ಕಳೆದುಕೊಂಡಿದ್ದ.


 


ತಕ್ಷಣ ತನ್ನ ಗೆಳೆಯ ಗೋಪಿಯ ನೆನಪಾಯಿತು. ಬಾಲ್ಯದ ದಿನದಿಂದ ರಮೇಶ್ ತನ್ನ ಎಲ್ಲ ಸಿಹಿ ಕಹಿಯನ್ನು ಹಂಚುತ್ತಿದ್ದದ್ದು ಗೋಪಿ ಜೊತೆ ಮಾತ್ರ. ಗೆಳೆಯನ ಜೊತೆ ಹೇಳಿಕೊಂಡರೆ ಮನಸ್ಸಿನ ದುಗುಡ ಕಮ್ಮಿಯಾಗಬಹುದೆನ್ದೆನಿಸಿತು. ತಕ್ಷಣ ಗೋಪಿಯ ಮೊಬೈಲಿಗೆ ಫೋನ್ ಹಾಯಿಸಿದ. ಅತ್ತ ಫೋನ್ ರಿಸೀವ್ ಮಾಡಿದ ಗೋಪಿ, "ಹಾಯ್ ರಾಮು ಗುಡ್ ಮಾರ್ನಿಂಗ್, ನಾನೇ ಈಗ ಫೋನ್ ಮಾಡ್ಬೇಕು ಅಂತ ಇದ್ದೆ ಕಣೋ. ನಾನು ೧ ವಾರ ಆಫೀಸಿಗೆ ಬರಕ್ಕಾಗಲ್ಲ. ಚಿಕ್ಕಮ್ಮ, ಚಿಕ್ಕಪ್ಪ ಮನೆಗೆ ಬರ್ತಿದ್ದಾರೆ. ಇವತ್ತಿಗೆ ಬೇಕಾದ ಎಲ್ಲಾ ಫೈಲುಗಳ ಲಿಸ್ಟನ್ನು ಗಣೇಶ್ ಕೈಗೆ ನಿನ್ನೆಯೇ ಕೊಟ್ಟಿದ್ದೇನೆ. ಎಲ್ಲ ಸರಿಯಾಗಿದೆಯಾ ನೋಡು. ಅದೆಲ್ಲ ಇರಲಿ. ನಿನ್ನ ತಲೆನೋವು ಹೇಗಿದೆ ಈಗ?" ಎಂದು ಕೇಳಿದ. ಈಗಂತೂ ರಮೇಶನಿಗೆ ಇನ್ನಷ್ಟು ಬೇಸರವಾಯಿತು. "ಈಗ ಪರವಾಗಿಲ್ಲ, ಸರಿ ಕಣೋ ಇನ್ನೊಮ್ಮೆ ಫೋನ್ ಮಾಡ್ತೇನೆ" ಎಂದು ಫೋನಿಟ್ಟ.


 


'ಏನಾಗಿದೆ ನನಗೆ? ಯಾಕೆ ಹೀಗೆಲ್ಲಾ ಆಡ್ತಾ ಇದ್ದೇನೆ? ನಾವಿಬ್ಬರೂ ಒಬ್ಬರನ್ನೊಬ್ಬರು ಪ್ರೀತಿಸ್ತಾ ಇಲ್ಲ. ಪ್ರೀತಿ ದೂರದ ಮಾತು, ಮೊದಲ ದಿನದ ನಂತರ ಒಂದು ಮಾತನ್ನೂ ಆಡಿಲ್ಲ. ಆದರೂ ಆ ಚೆಲುವೆಯೇಕೆ ನನ್ನನ್ನು ಹೀಗೆ ಕಾಡುತ್ತಿದ್ದಾಳೆ?' ರಮೇಶನ ಎಲ್ಲಾ ಪ್ರಶ್ನೆಗಳು ಪ್ರಶ್ನೆಗಳಾಗಿಯೇ ಉಳಿದವು. ಉತ್ತರ ಹುಡುಕುವುದು ಅವನಿಗೆ ಸಾಧ್ಯವಾಗಲಿಲ್ಲ. ಕೊನೆಗೂ ಎಲ್ಲ ಯೋಚನೆಗಳನ್ನು ಬದಿಗಿಟ್ಟು, ತನ್ನ ಕೆಲಸ ಕಾರ್ಯಗಳಲ್ಲಿ ತೊಡಗಿದ. ನಡುವೆ ಗಣೇಶನಲ್ಲಿ ತನ್ನ ಬೆಳಗ್ಗಿನ ವರ್ತನೆ ಬಗ್ಗೆ ಕ್ಷಮೆಯಾಚಿಸಿದ.


 


೪ -೫ ದಿನಗಳು ಕಳೆದವು. ಅವಳ ಮುಖದರ್ಶನವಾಗಲೇ ಇಲ್ಲ. ರಮೇಶನಿಗೆ ಈಗ ಯಾವ ಕೆಲಸ ಕಾರ್ಯಗಳಲ್ಲಿಯೂ ಮೊದಲಿನ ಆಸಕ್ತಿ ಇಲ್ಲ. ಗೋಪಿಯು ತನ್ನ ಕುಟುಂಬದವರೊಡನೆ ಪ್ರವಾಸದಲ್ಲಿರುವುದರಿಂದ ಅವನ ಜೊತೆಯೂ ತನ್ನ ಅಳಲನ್ನು ಹೇಳಿಕೊಲ್ಲಲಾಗಲಿಲ್ಲ. ನಿರಾಸಕ್ತಿಯಿಂದಲೇ ತನ್ನ ದಿನಚರಿಯನ್ನು ಮುಗಿಸುತ್ತಿದ್ದ. ಮೊದಲೆಲ್ಲ ಮನೆಗೆ ಬಂದ ತಕ್ಷಣ ತನ್ನನ್ನು ಗೋಳು ಹೊಯ್ದುಕೊಳ್ಳುತ್ತಿದ್ದ ಮಗ ಈಗೀಗ ೫ ನಿಮಿಷ ಮುಖ ಕೊಟ್ಟು ಮಾತೂ ಆಡದ್ದನ್ನು ಕಂಡು ಸರೋಜಮ್ಮನೂ ಚಿಂತಾಕ್ರಾಂತರಾದರು. ಏನಾಯಿತು ಎಂದು ಕೇಳಿದರೂ ಮಗ ಮನ ಬಿಚ್ಚಿ ಹೇಳ್ತಾ ಇರಲಿಲ್ಲ. ಈಗ ಜಾಗಿಂಗ್, ದಿನಪತ್ರಿಕೆ ಓದುವ ಹವ್ಯಾಸವನ್ನೂ ಬಿಟ್ಟಿದ್ದ ರಮೇಶ್. ಶೇವ್ ಮಾಡುವುದಾಗಲೀ, ಬಟ್ಟೆ ಕಡೆ ಗಮನ ಕೊಡುವುದಾಗಲೀ, ಮೊದಲಿನಂತೆ ಮನೆಯಲ್ಲಿ ಆಫೀಸಲ್ಲಿ, ಎಲ್ಲರೊಂದಿಗೆ ನಗುಮಖದಿಂದ ಮಾತನಾಡುವುದಾಗಲೀ ಅವನಿಂದ ಸಾಧ್ಯಾವಾಗುತ್ತಿರಲಿಲ್ಲ. 


 


ಆ ದಿನ ಭಾನುವಾರ. ಸರೋಜಮ್ಮ ರಾಯರು ದಂಪತಿಗಳು ಪೂಜೆ ಮುಗಿಸಿ ತಿಂಡಿಗೆ ಕುಳಿತರು. ರಮೇಶ್ ಇನ್ನೂ ಎದ್ದಿರಲಿಲ್ಲ. ಮಗ ಅವನಾಗಿಯೇ ಏಳಲಿ ಎಂದು ಸರೋಜಮ್ಮನೂ ಅವನನ್ನು ಎಬ್ಬಿಸಲು ಹೋಗಲಿಲ್ಲ. ರಾಯರಿಗೆ ರಮೇಶನ ಇತ್ತೀಚೆಗಿನ ನಿರಾಸಕ್ತಿಯ ಬಗ್ಗೆ ತಿಳಿದಿರಲಿಲ್ಲ. ಸರೋಜಮ್ಮನೂ ಹೇಳಿರಲಿಲ್ಲ. ಅವರಿಗೆ ತಿಳಿದಿತ್ತು, ರಾಯರಿಗೆ ಹೇಳಿದರೂ ಅಷ್ಟೇನೂ ಪ್ರಯೋಜನವಿಲ್ಲವೆಂದು. ರಾಯರು ಮೊದಲಿನಿಂದಲೂ ನಿರ್ಲಿಪ್ತ ಭಾವದ ಮನುಷ್ಯ. ಯಾರೊಡನೆಯೂ ಹೆಚ್ಚು ಮಾತನಾಡುವವರಲ್ಲ. ಸರಕಾರೀ ಕಛೇರಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಅವರು ೬ ತಿಂಗಳ ಹಿಂದಷ್ಟೇ ನಿವೃತ್ತಿಯಾಗಿದ್ದರು. ನಿವೃತ್ತಿ ಹೊಂದಿದ ನಂತರ ಕೂಡ ಬೆಳಗ್ಗೆ, ಸಂಜೆ ತಲಾ ೧ ಘಂಟೆಯ ವಾಕಿಂಗ್ ಬಿಟ್ಟರೆ ಹೆಚ್ಚಿನ ಸಮಯವನ್ನು ಮನೆ ಅಥವಾ ಊರಿನ ಪಬ್ಲಿಕ್ ಲೈಬ್ರರಿಯಲ್ಲಿ ಕಳೆಯುತ್ತಿದ್ದರು. ಬಾಲ್ಯದಿಂದಲೂ ಅವರಿಗೆ ಸಾಹಿತ್ಯದಲ್ಲಿ ತುಂಬಾ ಆಸಕ್ತಿ. ಮನೆಯಲ್ಲಿಯೂ ಹೆಂಡತಿ, ಮಗನೊಡನೆ ಮಿತಿಯಾಗಿ ಮಾತಾಡುತ್ತಿದ್ದರು. ಇದೆಲ್ಲ ತಿಳಿದಿದ್ದರಿಂದಲೇ ಸರೋಜಮ್ಮನು ಇಷ್ಟು ದಿನ ರಾಯರೊಡನೆ ರಮೇಶನ ಬಗ್ಗೆ  ಹೇಳಿರಲಿಲ್ಲ. ಆದರೆ ಮಗನ ದಿನದಿಂದ ದಿನಕ್ಕೆ ಬದಲಾವಣೆಯಾಗುತ್ತಿರುವ ಹಾವ ಭಾವಗಳನ್ನು ನೋಡಿ ಇಂದು ಪತಿಯೊಡನೆ ಇದರ ಬಗ್ಗೆ ಮಾತನಾಡಲೇ ಬೇಕು ಅಂತ ನಿರ್ಧರಿಸಿದ್ದರು.


 


ತಿಂಡಿ ತಿನ್ನುವವರೆಗೆ ಸರೋಜಮ್ಮ ಸುಮ್ಮನಿದ್ದರು. ತಿಂಡಿಯಾದ ಬಳಿಕ ತಟ್ಟೆಗಳನ್ನು ಅಡುಗೆ ಮನೆಗೆ ತೆಗೆದುಕೊಂಡು ಹೋಗಿ, ಎಲ್ಲ ಸ್ವಚ್ಛ ಮಾಡಿಯಾದ ನಂತರ ನಡುಕೊಣೆಗೆ ಬಂದು ಟಿವಿಯಲ್ಲಿ ವಾರ್ತೆ ನೋಡುತ್ತಿದ್ದ ಪತಿಯ ಬಳಿ ಕುಳಿತರು. "ರೀ.. ನನಗೆ ನಿಮ್ಮ ಜೊತೆ ಸ್ವಲ್ಪ ಮಾತನಾಡಬೇಕು" ಅಂತ ಹೇಳಿ ಮಾತು ಶುರು ಮಾಡಿದರು. "ಹಾ ಹೇಳು" ಅಂದ ರಾಯರು ಟಿವಿಯಿಂದ ದೃಷ್ಟಿ ಅಲ್ಲಾಡಿಸಲಿಲ್ಲ. ಈಗಂತೂ ಸರೋಜಮ್ಮ ಸ್ವಲ್ಪ ಗಂಭೀರವಾಗಿ "ಸ್ವಲ್ಪ ಟಿವಿ ಆಫ್ ಮಾಡಿ, ನನಗೆ ರಾಮು ಬಗ್ಗೆ ಮಾತನಾಡಬೇಕು, ಇತ್ತೀಚಿಗೆ ಅವನನ್ನು ಗಮನಿಸಿದ್ದೀರಾ ನೀವು?" ಎಂದು ಕೇಳಿದರು. "ಅವನನ್ನು ಬಾಲ್ಯದಿಂದಲೂ ನೋಡುತ್ತಿದ್ದೇನೆ, ಇನ್ನು ವಿಶೇಷವಾಗಿ ಏನು ಗಮನಿಸೋದು" ಅಂದರು ರಾಯರು. ಅದೇನು ತಮಾಷೆ ಮಾಡ್ತಾ ಇದ್ದಾರೋ ಅಥವಾ ನಿರಾಸಕ್ತಿ ತೋರಿಸ್ತಿದ್ದಾರೋ ಅಂತ ಗೊತ್ತಾಗಲಿಲ್ಲ ಸರೋಜಮ್ಮನಿಗೆ. ಏನಾದರೂ ಅಗಲಿ ಇವತ್ತು ಇವರೊಡನೆ ಎಲ್ಲವನ್ನೂ ವಿವರವಾಗಿ ಹೇಳಲೇ ಬೇಕೆಂದು ನಿರ್ಧರಿಸಿದ ಅವರು ರಾಯರ ಕೈಯಿಂದ ರಿಮೋಟ್ ತೆಗೆದು ಟಿವಿ ಆಫ್ ಮಾಡಿದರು.


 


"ಏನೇ ನಿಂದು? ನೆಟ್ಟಗೆ ವಾರ್ತೆ ನೋಡಲಿಕ್ಕೂ ಬಿಡ್ತಾ ಇಲ್ಲ ನೀನು? ಅದೇನಾಗಿದೆ ರಾಮುಗೆ ಅಂತ ಹೀಗಾಡ್ತಿದ್ದೀಯ ನೀನು?" ರಾಯರು ರೇಗಿದರು. "ಅಲ್ರೀ ನಿಮಗೆ ಆ ಪುಸ್ತಕ, ವಾರ್ತೆ ಬಿಟ್ಟರೆ ಮನೆಯಲ್ಲಿ ಬಿರುಗಾಳಿ ಬಂದರೂ ಗೊತ್ತಾಗಲ್ಲ. ೧ ವಾರದಿಂದ ರಾಮು ಯಾವುದರಲ್ಲಿಯೂ ಆಸಕ್ತಿ ತೋರಿಸ್ತಾ ಇಲ್ಲ. ಶೇವ್ ಮಾಡ್ತಾ ಇಲ್ಲ, ಜಾಗಿಂಗ್ ಹೋಗ್ತಾ ಇಲ್ಲ, ತಿಂಡಿ ತಿನಿಸೂ ಅಷ್ಟಕ್ಕಷ್ಟೇ. ಕೆಲವೊಮ್ಮೆ ಆಫೀಸಿನಿಂದ ಬರುವಾಗ ಕೂಡ ಘಂಟೆ ೯:೦೦ ಆಗ್ತದೆ. ನಿಮಗೆ ಇದು ಯಾವುದರ ಬಗ್ಗೆಯಾದರೂ ಅರಿವಿದೆಯ?" ಎಂದು ಕೇಳಿದರು. ವಿಷಯ ಯಾಕೋ ಗಂಭೀರವಿದೆ ಅಂತ ಅರಿವಾದ ರಾಯರು ಸ್ವಲ್ಪ ತಣ್ಣಗಾದರು. "ಯಾಕೆ ಏನಾಯಿತು ಅವನಿಗೆ? ಆಫೀಸಿನಲ್ಲಿಯೇನಾದರೂ ತೊಂದರೆಯಾಗಿದೆಯ? ನೀನು ವಿಚಾರಿಸಲಿಲ್ಲವಾ" ಅಂತ ಕೇಳಿದರು. "ಅಯ್ಯೋ ಹೇಳಲಿಕ್ಕೆ ಕೇಳಲಿಕ್ಕೆ ಅವನು ಸರಿಯಾಗಿ ನನ್ನ ಹತ್ರ ಮಾತಾಡಿದರೆ ತಾನೇ? ಆಫೀಸಿನಿಂದ ಬಂದು ಊಟ ಮಾಡಿ ಕೋಣೆ ಸೇರಿದರೆ ಮತ್ತೆ ಅವನ ಮುಖದರ್ಶನವಾಗುವುದು ಬೆಳಗ್ಗೆ ಆಫೀಸಿಗೆ ಹೊರಟು ತಿಂಡಿಗೆ ಬಂದು ಕುಳಿತಾಗಲೇ. ಮೌನವಾಗಿ  ತಿಂದು  ಎದ್ದು ಪುನಃ ಆಫೀಸಿಗೆ ಹೋಗ್ತಾನೆ" ಅಂದರು ಸರೋಜಮ್ಮ. ಯಾವತ್ತೂ ಅಷ್ಟು ಖಿನ್ನವದನರಾಗಿರದ ಸರೋಜಮ್ಮನನ್ನು ನೋಡಿದ ರಾಯರು, "ಸರೂ ತಲೆಬಿಸಿ ಮಾಡಬೇಡ. ಇವತ್ತು ಹೇಗೂ ಮನೆಯಲ್ಲೇ ಇರ್ತಾನೆ. ತಿಂಡಿ ಆದ ನಂತರ ನಾನೇ ಅವನ ಜೊತೆ ವಿಚಾರಿಸ್ತೇನೆ" ಅಂದರು. "ಸರಿ" ಅಂದ ಸರೋಜಮ್ಮ ನೆಮ್ಮದಿಯ ಉಸಿರು ಬಿಟ್ಟರು.


 ಭಾಗ ೩ http://sampada.net/blog/shamzz/16/12/2010/29516

Rating
No votes yet

Comments