ಬಿಎಸ್ಸೆನ್ನೆಲ್ ಕಾರ್ಯವೈಖರಿ

ಬಿಎಸ್ಸೆನ್ನೆಲ್ ಕಾರ್ಯವೈಖರಿ

ಬಿಎಸ್ಸೆನ್ನೆಲ್ ಕೆಲಸ/ಕಾರ್ಯದ ಬಗ್ಗೆ ನಾನಂತೂ ಇದುವರೆಗೆ ಯಾವುದೇ ಒಳ್ಳೆಯ ಮಾತು ಕೇಳಿಲ್ಲ.. ನನ್ನ ಸ್ವಂತ ಅನುಭವಗಳೂ ಇದಕ್ಕೆ ಹೊರತಲ್ಲ..

ಘಟನೆ-1:

8 ತಿಂಗಳ ಹಿಂದೆ ನಾನು ಮನೆ ಬದಲಾಯಿಸುವ ಸಮಯದಲ್ಲಿ ಫೋನ್ ಶಿಫ್ಟ್ ಬಗ್ಗೆ ವಿಚಾರಿಸಲು ಬಿಎಸ್ಸೆನ್ನೆಲ್ ಕಛೇರಿಗೆ (ಡಿವಿಜಿ ರಸ್ತೆ) ಹೊದಾಗ ಅವರು ಹೇಳಿದ್ದು 'ನೀವು ಮನೆ ಬದಲಾಯಿಸಿದ ಮೇಲೆ ಫೋನ್ ಶಿಫ್ಟ್ ಮಾಡಿಸಿಕೊಳ್ಳಿ, 2 ದಿನದಲ್ಲಿ ಮಾಡಿಕೊಡ್ತೀವಿ' ಅಂತಾ. ನನಗೆನೋ ಒಳಗೇ ಅನುಮಾನ. ಯಾಕಂದ್ರೆ ನಮ್ಮ ಕಸಿನ್ ಮನೇಲಿ ಫೋನ್ ಶಿಫ್ಟ್ ಮಾಡಿಸಿದಾಗ ಸುಮಾರು 15 ದಿನ ತೊಗೊಂಡಿದ್ರು.

ಇದಾದ ಮೇಲೆ ವಾರದ ಕೊನೆಯಲ್ಲಿ ಮನೆ ಶಿಫ್ಟ್ ಮಾಡಿದೆ (ನಮ್ಮ ಏರಿಯಾದಲ್ಲಿಯೇ 2 ಕ್ರಾಸ್ ಪಕ್ಕದಲ್ಲಿ). ಪುನಃ ಬಿಎಸ್ಸೆನ್ನೆಲ್ ಕಛೇರಿಗೆ ಹೋಗಿ ಅರ್ಜಿ ಕೊಟ್ಟು ಬಂದೆ. ಇದರ ಬಗ್ಗೆ ಕೆಳಗಿನ ಮನೆಯವರ ಹತ್ರ ಮಾತನಾಡುತಿದ್ದಾಗ ಅವರು ಹೇಳಿದ್ದು 'ಅಯ್ಯೋ 2-3 ದಿನ ಅಲ್ಲ..15-20 ದಿನಾ ಖಂಡಿತಾ ತೊಗೊತಾರೆ. ನಮ್ಮದೂ ಇಂಟರ್ನೆಟ್ ಕೆಲ್ಸ ಮಾಡ್ತಾ ಇಲ್ಲ. ಕಂಪ್ಲೇಂಟ್ ಕೊಟ್ಟು 10 ದಿನಾ ಆಯಿತು' ಅಂದ್ರು. ನನಗೂ ತಲೆ ಕೆಡೋಕೆ ಶುರುವಾಯ್ತು. ಏನು ಮಾಡ್ಬೇಕು ಅಂತಾ ಯೋಚಿಸ್ತಿದ್ದಾಗ ಅವ್ರೇ ಐಡಿಯಾ ಕೊಟ್ರು. 'ನನ್ ಹತ್ರ ಈ ಏರಿಯ ಲೈನ್ ಮನ್ ನಂಬರ್ ಇದೆ. ಬೇಕಾದ್ರೆ ಮಾತಾಡಿ' ಅಂತಾ. ಹೆಸ್ರು ಕೇಳಿದ ತಕ್ಷಣ ನನಗೆ ಗೊತಾಯ್ತ. ಯಾಕಂದ್ರೆ ಇದೇ ಲೈನ್ ಮನ್ ನನ್ನ ಹಳೆ ಮನೆಯಲ್ಲಿ ಫೋನ್ ಇನ್ಸ್ಟಾಲ್ ಮಾಡಿದ್ದು. ಮತ್ತೆ ಅವಾಗ ನಾನೇನು ದುಡ್ಡು ಕೊಟ್ಟಿರಲಿಲ್ಲ. ಬೈದು ಕಳಿಸಿದ್ದೆ. ಮತ್ತೆ ಈಗ ಫೋನ್ ಮಾಡಿದಾಗ ಅವ್ನು 'ಇಲ್ಲೆ ಮೈನ್ ರೋಡ್ ನಲ್ಲಿ ರಿಪೇರಿ ಮಾಡ್ತಾ ಇದೀನಿ' 2-3 ಘಂಟೆ ಬಿಟ್ಟು ಬರ್ತೀನಿ' ಅಂದ. ಆ ಜಂಕ್ಷನ್ ಬಾಕ್ಸ್ ಹೊಸಮನೆಗೆ ಹತ್ರ ಇರೋದ್ರಿಂದ ನಾನೆ ಅಲ್ಲಿಗೆ ಹೊದೆ.

ಅವ ನನ್ನ ಗುರ್ತು ಹಿಡಿದ. ನಾನು ಫೋನ್ ಶಿಫ್ಟ್ ಬಗ್ಗೆ ಕೇಳಿದಾಗ 'ನಮಗೆ ಇನ್ನು ಆರ್ಡರ್ ಬಂದಿಲ್ಲ. 2-3 ದಿನಾ ಆಗಬಹುದು' ಅಂದ. ನಾನು 'ಸರಿ. 3 ದಿನದಲ್ಲಿ ಶಿಪ್ಟ್ ಆಗತ್ತಾ' ಅಂತ ಕೇಳ್ದೆ. ಅದಕ್ಕೆ ಅವನು 'ಆರ್ಡರ್ ಬಂದಮೇಲೆ 2-3 ದಿನ ಆಗತ್ತೆ. ಆರ್ಡರ್ ಯಾವಾಗ ಬರತ್ತೆ ಅಂತಾ ಹೇಳೋಕೆ ಆಗಲ್ಲ. ಬೇಕಿದ್ರೆ ನೀವು ಕಸ್ಟಮರ್ ಕೇರ್ ಗೆ ಫೋನ್ ಮಾಡಿ' ಅಂದ.

ನನಗೆ ಇಷ್ಟೊತ್ತಿಗೆ ಅರ್ಥ ಆಗಿತ್ತು. ಅವನಿಗೆ 50 ರೂ ಕೊಟ್ಟು ಇದೇ ದಿನ ಶಿಫ್ಟ್ ಮಾಡಿದ್ರೆ ಇನ್ನೂ ಕೊಡ್ತೀನಿ ಅಂದೆ. ಅವನು ನೀವು ನಡೀರಿ ಸಾರ್. ನಾನು ವೈರ್ ತೊಗೊಂಡು ಬರ್ತೀನಿ ಅಂದ. ನಂಬ್ತೀರೋ ಇಲ್ಲೋ.. ಸಾಯಂಕಾಲದೊಳಗೆ ಲೈನ್ ಎಳೆದು ಆಗಿತ್ತು.. ಮರುದಿನ 10 ಘಂಟೆಗೆ ಫೋನ್ + ಇಂಟರ್ನೆಟ್ ಎಲ್ಲಾ ವರ್ಕ್ ಆಗ್ತಾ ಇತ್ತು

--- **** ----

ಇದಕ್ಕೆ ಸ್ವಲ್ಪ ವ್ಯತಿರಿಕ್ತವಾದ ಇನ್ನೊಂದು ಘಟನೆಯ ಬಗ್ಗೆ ಮುಂದೆ ಬರೆಯುತ್ತೇನೆ..

- ಗುರುರಾಜ್

Rating
No votes yet