ಬಿಡಿಎ ಎಂಬ ರಕ್ಕಸ!

ಬಿಡಿಎ ಎಂಬ ರಕ್ಕಸ!

ಚಿತ್ರ

"ಅಲ್ಲಾ, ನೀವೆಲ್ಲ ಯಾಕೆ ಅವರನ್ನ ಒಳಗಡೆ ಪ್ರವೇಶ ಮಾಡೋಕ್ ಬಿಟ್ರಿ? ಎಲ್ಲರೂ ಒಟ್ಟಿಗೆ ನಿಂತುಕೊಂಡಿದ್ದಿದ್ರೆ ಅವರೇನು ಮಾಡೋಕಾಗ್ತಿತ್ತು?"
"ಏನ್ ಮಾಡೋದಪ್ಪಾ, ಮುಂಡೇವು ದುಡ್ಡು ಅಂದ್ರೆ ಬಾಯಿ ಬಿಡ್ತಾವೆ, ಅದೂ ಅಲ್ದೇ ಅವ್ರೆಲ್ಲ ಎಕರೆಗಟ್ಲೆ ಜಮೀನು ಮಡ್ಗಿರೋರು, ನಂದು ಒಂದು 10 ಕುಂಟೆ ಅದೆ ಅಷ್ಟೆಯಾ, ಊರೆಲ್ಲ ಒಂದಾದ್ರೆ ನಾನ್ ತಾನೆ ಏನ್ ಮಾಡಕ್ಕಾಯ್ತದೆ ಹೇಳು"
"ಆದ್ರೂ.... ಇರೋ ಜಮೀನೆಲ್ಲ ಕೊಟ್ಬಿಟ್ರೆ ಜೀವನ ಹೆಂಗೆ ತಾತ?"
"ಅದೆಷ್ಟೋ ದುಡ್ಡು ಕೊಡ್ತಾರಂತೆ ಮಗಾ, ಕೊಟ್ಟಷ್ಟು ಕೊಡ್ಲಿ, ತರಕಾರಿ ಗಾಡಿನೋ, ಟೀ ಅಂಗಡೀನೋ ಮಾಡ್ಕಂಡು ಜೀವನ ತಳ್ಳೋದು ಅಷ್ಟೆಯಾ"
ಬೆಂಗಳೂರಿನ  ಹೊರವಲಯದಲ್ಲಿರೋ ಹಳ್ಳಿಯೊಂದರಲ್ಲಿ ಸಹಜವಾಗಿ (ಮಾಜಿ)ರೈತರೊಬ್ಬರ ಜೊತೆ ಮಾತಾಡುವಾಗ ಅವರ ಬಾಯಿಂದ ಬಂದ ಮಾತುಗಳಿವು. ಹೌದು ನಾವು ಮಾತಾಡ್ತಾ ಇರೋದು 'ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ'ದ ಬಗ್ಗೆ. ಈ ಬಿಡಿಎ ಅನ್ನೊ ಭೂತ ಸರ್ಕಾರದ ಜೊತೆಗೂಡಿ ಬೀಸಿರೋ ಬಲೆಗೆ ಸಿಕ್ಕಿ ಬಿದ್ದ ಅನೇಕ ಅಸಹಾಯಕ ರೈತರ ಅಳಲೂ ಕೂಡ ಇವೆಯೇ. ಹಾಗೆಯೇ ಅಂತರ್ಜಾಲದಲ್ಲಿ ಇದರ ಬಗ್ಗೆ ಒಂದಿಷ್ಟು ಮಾಹಿತಿ ಕಲೆ ಹಾಕಿದಾಗ ಒಮ್ಮೆ ವಿಸ್ಮಿತನಾದೆ. ನಾಡಪ್ರಭು ಕೆಂಪೇಗೌಡ ಬಡಾವಣೆಯ ಯೋಜನೆಯಡಿಯಲ್ಲಿ ಸ್ವಾದೀನವಾಗಿರೋದು ಬರೋಬ್ಬರಿ 4800 ಎಕರೆಗಳಷ್ಟು ಉಳುಮೆ ಜಮೀನು!  ನಗರದಿಂದ 20 ಕಿ.ಮೀ ಆಚೆಯಲ್ಲಿರುವ ಸುಮಾರು 30 ಹಳ್ಳಿಗಳು ಬಲವಂತವಾಗಿ ಅಭಿವೃದ್ಧಿಗೆ ಅಣಿಯಾಗಿರೋದನ್ನು ನೋಡಿ ಅಚ್ಚರಿಯಾಯಿತು. ಪ್ರತಿದಿನ ಬೆಳಗಾದರೆ ನಮ್ಮಪ್ಪ, ಲಾಯರ್ - ರೆಜಿಸ್ಟರೇಷನ್ ಕಛೇರಿ ಅಂತ ಯಾಕೆ ಓಡಾಡುತ್ತಿರುತ್ತಾರೆ ಎಂದು ಗೊತ್ತಾಯಿತು. ಇರುವ ಒಂದು ಸೈಟ್ ಉಳಿಸಿಕೊಳ್ಳಲು ಅವರು ಇಷ್ಟು ಕಷ್ಟಪಟ್ಟರೆ, ಇನ್ನು ಹತ್ತಾರು ಎಕರೆ ಜಮೀನು ಕಳೆದುಕೊಂಡವರ ಪಜೀತಿ ಏನು?
ಹೆಚ್ಚಾಗಿ ರಾಗಿ ಭತ್ತ ತೆಂಗು ಬೆಳೆಯೋ ಈ ಜಮೀನುಗಳೆಲ್ಲ ಇಂದು ಜೆಸಿಬಿಗಳ ಅಟ್ಟಹಾಸಕ್ಕೆ ಮಣಿದು ಬಟಾಬಯಲಾಗಿ ಕೂತಿವೆ. ಮೈಸೂರು ರಸ್ತೆಯ ಆಸುಪಾಸಿನಲ್ಲಿ ಬರುವ ನೂರಾರು ಎಕರೆ ನೆಲದಲ್ಲಿ ಅಪಾರ್ಟ್ ಮೆಂಟುಗಳು, ಹೆಸರಿಗೆ ಬಾರದ ಕಾಲೇಜುಗಳು, ಕೈಗಾರಿಕಾ ಉದ್ಯಮಗಳು ತಲೆ ಎತ್ತಿ ನಿಂತಿವೆ. ಮುಗ್ದ ರೈತರಿಗೆ ಕೋಟಿಯ ಆಮಿಷವನ್ನೊಡ್ಡಿ , ಧಿಡೀರ್ ಸಾಹುಕರರನ್ನ ಮಾಡುವ ಭರವಸೆಯನ್ನಿತ್ತು ತನ್ನ ಬೇಳೆ ಬೇಯಿಸಿಕೊಂಡಂತಿವೆ ನೀತಿಗೆಟ್ಟ ಸರ್ಕಾರಗಳು. ಸೈಕಲ್ ಕೊಳ್ಳಲೂ ಕಷ್ಟವಿದ್ದ ರೈತರು ಏಕಾಏಕಿ Fortuner ಕಾರ್ ನಲ್ಲಿ ಓಡಾಡುವ ದುರಾಸೆಯಿಂದ, ಅಂಧರಂತೆ ಅನ್ನಕ್ಕೆ ಆಧಾರವಾಗಿರುವ ಜಮೀನನ್ನು ಸರ್ಕಾರಕ್ಕೆ ಬಿಟ್ಟು ಕೊಡುತ್ತಿದ್ದಾರೆ. ಪೂರ್ವಜರು ಮಾಡಿಟ್ಟ ಆಸ್ತಿಯನ್ನು ದುಡ್ಡಿನ ಆಸೆಗೆ ಬಲಿಕೊಡುತ್ತಿರೋ ಮಂದಿ ಒಂದೆಡೆಯಾದರೆ, ಕಷ್ಟಪಟ್ಟು ಪೈಸೆಗೆ ಪೈಸೆ ಸೇರಿಸಿ ನೆಲೆ ಕಂಡುಕೊಳ್ಳೋ ಆಸೆಯಿಂದ ಒಂದೋ ಎರಡೋ ನಿವೇಶನ ಕೊಂಡವರ ಗೋಳು ಯಾವ ಭಂಡ ಸರ್ಕಾರಕ್ಕೂ ಮುಟ್ಟುತ್ತಿಲ್ಲ. ಇದರ ವಿರುದ್ಧ ಭಂಡಾಯ ಸತ್ಯಾಗ್ರಹಗಳನ್ನು ಮಾಡಿದವರಿಗೆ ಲಾಠಿಸೇವೆ, ಜೈಲುವಾಸ ಕರುಣಿಸಿದ್ದೂ ಉಂಟು.
ಇವತ್ತಿಗೂ ಯಾವೊಬ್ಬ ರೈತನಿಗೂ ಪರಿಹಾರದ ಕುರಿತು ನೇರವಾಗಿ ಸರ್ಕಾರದ ಜೊತೆ ಮಾತಾಡಲು ಅವಕಾಶ ದೊರೆತಿಲ್ಲವಂತೆ. ಅಕ್ಷರ ಙಾನವೇ ಇಲ್ಲದ ಅನೇಕರಿಗೆ ನೊಟಿಸ್ ಅಂದರೆ ಏನು ಅಂತ ಗೊತ್ತಾಗುವುದಾದರೂ ಹೇಗೆ? ಇದು ಸಾಲದೆ ಇವರ ಮತ ಪಡೆದು ಗೆದ್ದ ಪಂಚಾಯಿತಿ ಸದಸ್ಯರುಗಳು ಇವರ ಮನವೊಲಿಸಲು ಮಧ್ಯವರ್ತಿಗಳಾಗಿದ್ದಾರೆ. ಧಿಡೀರ್ ಸಿರಿತನದ ಆಸೆಯಲ್ಲಿ ಕೆಲವರು, ಜಮೀನಲ್ಲಿ ಕಷ್ಟಪಡೋದು ತಪ್ಪಿತು ಎನ್ನುವ ಹಲವರು, ಪ್ರಪಂಚವನ್ನೇ ಕೊಳ್ಳಬಲ್ಲೆವು ಅನ್ನೋ ಅಹಂಕಾರದಲ್ಲಿ ಕೆಲ ಯುವಕರು, ಅಸಹಾಯಕತೆಯಿಂದ ಸುಮ್ಮನಾದ ಮುಗ್ದರು. ಇವೆಲ್ಲವನ್ನೂ ಬಂಡವಾಳ ಮಾಡಿಕೊಂಡ ಸರ್ಕಾರ ಕೊನೆಗೆ ನಾಶ ಮಾಡಲು ಹೊರಟಿರುವುದು ನಮ್ಮ ಪಕೃತಿಯನ್ನು, ನಮ್ಮ ಭವಿಷ್ಯದ ಪೀಳಿಗೆಯನ್ನು ಎಂದರೆ ತಪ್ಪಲ್ಲ!
ಅಷ್ಟಕ್ಕೂ ಬೆಂಗಳೂರನ್ನ ಇಷ್ಟು ದೊಡ್ಡ ಮಟ್ಟಕ್ಕೆ ವಿಸ್ತರಿಸುವ ಅವಶ್ಯಕತೆಯಾದರೂ ಏನು? ನಗರದ ಒಳಗಡೆಯೇ ಇರುವ ಅದೆಷ್ಟೋ ಕೆರೆಗಳು ಒಣಗಿವೆ, ಟ್ರಾಫಿಕ್ ಸಮಸ್ಯೆಯಂತೂ ಬಗೆಹರಿಯುವಂತಿಲ್ಲ. ಒಳಚರಂಡಿ ವ್ಯವಸ್ಥೆಯಿಂದ ಹಿಡಿದು ರಸ್ತೆಯ ಮೇಲಿನ ಆಳುದ್ದ ಗುಂಡಿಗಳು, ಕಸ ವಿಲೇವಾರಿ ಹೀಗೆ ಹತ್ತು ಹಲವಾರು ಸಮಸ್ಯೆಗಳು ಬೆಂಗಳೂರಿನಲ್ಲಿಯೇ ಇದ್ದರೂ, ನಗರದಿಂದ 20 ಕಿ.ಮೀ ಆಚೆ ಇರುವ ರೈತರ ಜಮೀನನ್ನು ಅಭಿವೃದ್ಧಿಗೊಳಿಸೋ ಅವಶ್ಯವಿದೆಯೇ? ನಾ ಕಂಡಂತೆ ಈ ಬಿಡಿಎ ನಿವೇಶನಗಳಿಗೆ ಅರ್ಜಿ ಸಲ್ಲಿಸುವವರು, ಅದರ ಸವಲತ್ತು ಪಡೆಯುವವರಲ್ಲಿ ಬಹುತೇಕ ಮಂದಿ ನೆರೆ ರಾಜ್ಯಗಳಿಂದ ವಲಸೆ ಬಂದವರೇ. ಅಲ್ಲಾ ಸ್ವಾಮಿ, ಯಾವುದೋ ಊರಿಂದ ಬರುವವರಿಗೆ comfort life ಒದಗಿಸೋ ಸಲುವಾಗಿ, ನಮ್ಮ ರೈತರ ಹೊಟ್ಟೆ ಮೇಲೆ ಹೊಡೆಯುವುದು ಯಾವ ಸೀಮೆ ನ್ಯಾಯ?! ಅದೆಷ್ಟೋ ರೈತರು ತಮ್ಮ ಜಮೀನಿನಲ್ಲಿಯೇ ಕಟ್ಟಿರೋ ಅಪಾರ್ಟ್ ಮೆಂಟ್ ಗಳಲ್ಲಿ ಸೆಕ್ಯೂರಿಟಿ ಗಾರ್ಡ್ , ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದಾರೆ ಎಂದರೆ ರೈತರು ಅವಸಾನದ ಅಂಚಿನಲ್ಲಿದ್ದಾರೆ ಅನ್ನೋದು ಖಚಿತವಾಗುತ್ತಿದೆ. 'ರೈತ ಬಾಂಧವರು, ನೇಗಿಲಯೋಗಿಗಳು, ದೇಶದ ಬೆನ್ನೆಲುಬು' ಅಂತೆಲ್ಲಾ ಭಾಷಣ ಬಿಗಿದವರೆಲ್ಲಾ ನನಗೊಂದು ನಮ್ಮಪ್ಪಂಗೊಂದು ಅಂತ ಸೈಟ್ ಮಾಡಿಕೊಳ್ಳೋ ತವಕದಲ್ಲಿದ್ದಾರೆ.
ಹೀಗೆ ಅಭಿವೃದ್ಧಿ ಎಂಬ ಮಂತ್ರ ಬಳಸಿಕೊಂಡು ರೈತರ ಜಮೀನುಗಳನ್ನು, ಅವರ ಬದುಕುಗಳನ್ನು ಕಬಳಿಸಿ, ಕೆರೆ, ಗಿಡ ಮರಗಳನ್ನು ನಾಶ ಮಾಡುತ್ತಾ ಹೋದರೆ ಕೊನೆಗೆ ನಾವೆಲ್ಲರು ಮಣ್ಣು ತಿನ್ನಬೇಕಾದೀತು.ಇವೆಲ್ಲವುಗಳ ನಂತರವೂ ಅನೇಕ ರೈತರು ತಮ್ಮ ಪರಿಹಾರ ಹಣಕ್ಕಾಗಿ ಮನೆ ಕಛೇರಿಗಳಿಗೆ ಅಲೆದು ಚಪ್ಪಲಿ ಸವೆಸುತ್ತಿದ್ದಾರೆ. ಇನ್ನೊಂದೆಡೆ ಕೆಲವರು ವರುಷದ ಕೂಳು ಮರೆತು ಹರುಷದ ಕೂಳಿಗೆ ಆಸೆ ಪಡುತ್ತಿದ್ದಾರೆ. ಈ ನೀತಿಗೆಟ್ಟ ಸರ್ಕಾರಗಳು ರೈತರನ್ನು ದುಡ್ಡಿರುವ ದೊಡ್ಡವರ ಕಾಲು ನೆಕ್ಕುವಂತೆ ಮಾಡುವ ಮೊದಲು,ನಾವುಗಳು ಅವರಿಗೆ ಇದರ ಅರಿವು ಮೂಡಿಸುವ ಅಗತ್ಯವಿದೆ. ನಮ್ಮ ಹಸಿವನ್ನು ಇಂಗಿಸಿದ ರೈತರು ಅಳಿವಿನ ಅಂಚಿನಲ್ಲಿರಬೇಕಾದರೆ ಅವರನ್ನು ಕಾಪಾಡುವುದು ನಮ್ಮ ಧರ್ಮ. ದೇಶದ ಬೆನ್ನೆಲುಬಿಗೆ ನಾವು ಕೊಡುವ ಒಂದು ಉಡುಗೊರೆ. ಎಲ್ಲರು ಕೂಗಿ ಹೇಳಿ "ಇರುವ ಬೆಂಗಳೂರನ್ನು ಅಭಿವೃದ್ದಿಸಿ, ಹೊಸ ಬೆಂಗಳೂರಿನ ಸೃಷ್ಟಿಯ ಅಗತ್ಯವಿಲ್ಲ"ಎಂದು.
 
PC: Google

Rating
No votes yet