ಬಿನ್ನಹ

ಬಿನ್ನಹ

ಬೆಳದಿಂಗಳ ಹಂಬಲದ ನಾನು,
ಕತ್ತಲು ಕವಿದ ಮನದಂಗಳದ ಮೂಲೆಯಲ್ಲಿ ಹಣತೆ ಹಚ್ಚಿಟ್ಟರೆ
ಬಿರುಗಾಳಿ ಎಬ್ಬಿಸಿ ನಂದಿಸುತ್ತೀ ಯಾಕೆ ಬದುಕೇ?

 

ಎದೆಯ ಬಟ್ಟಲಲ್ಲಿ ಕಂಬನಿಗಳ ತುಂಬಿ ಬಾನ ಚಂದಿರನ
ಹಿಡಿದಿಟ್ಟು ಕಣ್ಣು ತಂಪಾಗಿಸುತ್ತಿದ್ದೇನೆ,
ಬಟ್ಟಲನ್ನ ಕಾಲಲ್ಲಿ ಒದ್ದುಕೊಂಡು ಹೋಗುತ್ತೀ ಯಾಕೆ ಬದುಕೇ?

 

ನಾನಿಲ್ಲಿ ಬಂಜರು ಕಣಿವೆಯಲ್ಲಿ ನಿಂತು
ಬೆಟ್ಟದ ತುದಿಯ ಹಸಿರ ಹಂಬಲದಿಂದ ದಿಟ್ಟಿ ಮೇಲಕ್ಕೆತ್ತಿದೇನೆ,
ಕಾಲಡಿಯ ನೆಲವೇ ಕುಸಿವಂತ ವೀರಗಾಸೆಯಾಡುತೀ ಯಾಕೆ ಬದುಕೇ?

 

ಇಂಪಾದ ರಾಗಗಳನ್ಯಾರೋ ದೂರದಲ್ಲಿ ಉಲಿಯುತ್ತಿದಾರೆ,
ಕೇಳಲು ಮೈಯಿಡೀ ಕಿವಿಯಾಗಿಸಿಕೊಂಡಿದೇನೆ,
ರಾಗಗಳ ಕತ್ತು ಹಿಸುಕುತ್ತೀ ಯಾಕೆ ಬದುಕೇ?

 

ಸಿಡಿವ ನರಗಳ ಸಮಾಧಾನಿಸಲೆಂದು ಪುಸ್ತಕಗಳ ಕೈಗೆತ್ತಿಕೊಂಡರೆ
ಎಲ್ಲ ಪುಟಗಳಲ್ಲೂ ರಕ್ತದ ಶಾಯಿ ತುಂಬಿರುತ್ತೀ ಯಾಕೆ ಬದುಕೇ?

 

ನಾನು ಕಾಣುತ್ತಿರುವುದೆಲ್ಲ ಕನಸಷ್ಟೇ ,
ನನಸಾಗುವುದಿಲ್ಲಅಂತ ಗೊತ್ತಿದೆ, ನನ್ಗೂ.

 

ಅದನ್ನೇ ಮತ್ತೆ ಮತ್ತೆ ನೆನಪಿಸಿ
ಭಾವದೊರತೆಯ ಬತ್ತಿಸಬೇಡ ಬದುಕೇ,

 

ಬದುಕೇ, ನಿನ್ನ ದಮ್ಮಯ್ಯ
ಕನಿಷ್ಠ ಕನಸ ಕಾಣಲು ಬಿಡು;
ಇಲ್ಲಾ ಈ ಹೃದಯದ ಮಿಡಿತವ ತಪ್ಪಿಸಿಡು.

 

ವರ್ಷಗಳ ಹಿಂದಿನ ಈ ಬಿನ್ನಹಕ್ಕೆ ಬದುಕು ಕರುಣಾಪೂರ್ಣಳಾಗಿ ಭೂಮಿತೂಕದ ಪ್ರೀತಿಯಿಂದ ನನ್ನನ್ನು ಅಪ್ಪಿಕೊಂಡಿದೆ॥
ಕನಸುಗಳ ಹಸಿರುಹಾದಿಯಲ್ಲಿ ಜೀವನ್ಮುಖೀ ಮಲ್ಲಿಗೆಗಳು ಅರಳಿವೆ। ಆ ತೂಕ ನಿಭಾಯಿಸುವ ಜವಾಬ್ದಾರಿ, ಆ ಪ್ರೀತಿಯನ್ನ
ಸವಿದು ಹಂಚುವ ಕೃತಜ್ಞತೆಯನ್ನು ನಾನೀಗ ನಿಭಾಯಿಸಬೇಕಿದೆ

Rating
No votes yet