ಬಿ.ಪಿ, .ಶುಗರ್ ನಿಂದ ದೂರ ಉಳಿಯಬೇಕೆ?
ಇಂದು ಸಾಮಾನ್ಯವಾಗಿ ನನ್ನ ಯಾರೇ ಸ್ನೇಹಿತರನ್ನು ನೋಡಿದರೂ ನಾನೂ ಸೇರಿದಂತೆ ನಿತ್ಯವೂ ಒಂದಿಲ್ಲಾ ಒಂದು ಮಾತ್ರೆ ತೆಗೆದುಕೊಂಡೇ ಜೀವನ ಯಾತ್ರೆ ನಡೆಸುವಂತಹ ಸ್ಥಿತಿ. ಇದು ಎಷ್ಟರ ಮಟ್ಟಿಗೆ ಅಭ್ಯಾಸವಾಗಿಹೋಗಿದೆ ಎಂದರೆ ,ಪರ ಸ್ಥಳಗಳಿಗೆ ಪ್ರಯಾಣಕ್ಕೆ ಹೊರಡುವಾಗ ನಾಲ್ಕೈದು ದಿನಗಳಿಗಾಗುವಷ್ಟು ಬಟ್ಟೆ, ಸೋಪು, ಟೂತ್ ಪೇಸ್ಟ್ ಇತ್ಯಾದಿ ದೈನಂದಿನ ಅಗತ್ಯಗಳಿಗೆ ಬೇಕಾದುದನ್ನು ಸಿದ್ಧತೆ ಮಾಡಿಕೊಂಡು ಪ್ರಯಾಣ ಬೆಳೆಸುತ್ತಿದುದು ಸರ್ವೇ ಸಾಮಾನ್ಯ.ಆದರೆ ಇತ್ತೀಚೆಗೆ ಅದರೊಟ್ಟಿಗೆ ಸೇರ್ಪಡೆಯಾಗಿ ಪ್ರಥಮ ಆಧ್ಯತೆ ಪಡೆದಿರುವ ವಸ್ತುಗಳೆಂದರೆ ಸಾಮಾನ್ಯವಾಗಿ ಬಿ.ಪಿ. ಅಥವಾ ಶುಗರ್ ಅಥವಾ ಎರಡಕ್ಕೂ ಔಷಧಿ.ಇದರ ಬಗ್ಗೆ ಯಾರಿಗೊ ಏನೂ ಅನ್ನಿಸುವುದೇ ಇಲ್ಲ! ನಿತ್ಯವೂ ಸ್ನಾನ ,ಊಟ ಮಾಡುವಂತೆ, ಮಾತ್ರೆಯನ್ನೂ ನುಂಗುವ ಅಭ್ಯಾಸ! ಯಾಕೆ ಹೀಗೆ? ಇನ್ನು ಮುಂದೆ ಮಾತ್ರೆ ಇಲ್ಲದೆ ಜೀವನ ಮಾಡಲು ಸಾಧ್ಯವೇ ಇಲ್ಲವೇ? ವೈದ್ಯರುಗಳಂತೂ ಒಂದು ಹೆಜ್ಜೆ ಮುಂದೆ ಹೋಗಿ " ನೀವು ಯಾವುದೇ ಕಾರಣಕ್ಕೂ ಮಾತ್ರೆಯನ್ನು ನಿಮ್ಮ ಕಡೆಯ ತನಕ ನಿಲ್ಲಿಸಲೇ ಕೂಡದು! ಎಂಬ ಎಚ್ಚರಿಕೆಯನ್ನೂ ಸಹ ಕೊಡುತ್ತಾರೆ.
ಆದರೆ "ನಿಮಗೆ ಬಿ.ಪಿ. ಅಥವಾ ಶುಗರ್ ಬರಲು ಕಾರಣವೇನು? ನಿಮ್ಮ ದೈನಂದಿನ ಜೀವನ ಕ್ರಮವನ್ನು ನೀವು ಸರಿಪಡಿಸಿಕೊಳ್ಳಬೇಕು,ಎಂಬ ಸಲಹೆಯನ್ನು ಯಾರೋ ಅಪರೂಪಕ್ಕೊಬ್ಬ ವೈದ್ಯರು ಹೇಳಬಹುದು. ಹದಿನೈದು ವರ್ಷಗಳ ಹಿಂದಿನ ಪ್ರಸಂಗ.ನನ್ನ ತಮ್ಮ ನನಗಿಂತ ಮೂರು ವರ್ಷಕ್ಕೆ ಚಿಕ್ಕವನು. ಹಳ್ಳಿಯಲ್ಲಿ ಶ್ರಮ ಜೀವನ ಮಾಡುವವನು. ಬಹುಷ: ಗ್ಯಾಸ್ಟ್ರಿಕ್ ಸಮಸ್ಯೆ ಯಿಂದಾಗಿ ಎದೆಯಲ್ಲಿ ಸ್ವಲ್ಪ ಉರಿ ಹಾಗೂ ನೋವು ಕಾಣಿಸಿಕೊಂಡಿದೆ.ನಮ್ಮ ಹಳ್ಳಿಯಿಂದ ಹಾಸನಕ್ಕೆ ಬಂದು ವೈದ್ಯರೊಬ್ಬರಲ್ಲಿ ತೋರಿಸಿದ್ದಾನೆ.ವೈದ್ಯರು ಆರಂಭದಲ್ಲಿಯೇ ನನ್ನ ತಮ್ಮನಿಗೆ ಕೇಳಿದ ಪ್ರಶ್ನೆ" ಜೊತೆಯಲ್ಲಿ ಯಾರು ಬಂದಿದ್ದಾರೆ?!" ಆಗಲೇ ನನ್ನ ತಮ್ಮನಿಗೆ ಭಯ ಹೆಚ್ಚಾಗಿದೆ. ತನಗೆ ಏನೋ ಆಗಬಾರದ್ದು ಆಗಿಬಿಟ್ಟಿದೆ ಎಂದು ಆತಂಕಕ್ಕೆ ಒಳಗಾಗಿದ್ದಾನೆ.ಅವನನ್ನು ನೋಡಿದ ವೈದ್ಯರು, ಔಷಧಿ ಕೊಟ್ಟು, ಇನ್ನು ಎಂಟು ದಿನಗಳಲ್ಲಿ ಮತ್ತೆ ಬಂದು ತೋರಿಸಿ, ನಿಧಾನವಾಗಿ, ಜೋಪಾನವಾಗಿ ಬ್ಯಾಕ್ ಇಂಜಿನ್ ಆಟೋದಲ್ಲಿಯೇ ನಿಮ್ಮಣ್ಣನ ಮನೆಗೆ ಹೋಗಿ, ಬಸ್ ನಲ್ಲಿ ಹಳ್ಳಿಗೆ ಹೋಗ ಬೇಡಿ, ಎಂದೆಲ್ಲಾ ಹೇಳಿದ್ದಾರೆ. ಸರಿ, ನನ್ನ ತಮ್ಮ ಆಟೊ ಹಿಡಿದು ಮನೆಗೆ ಬಂದ. ಬಂದವನೇ " ಡಾಕ್ಟರ್ ಹೆಚ್ಚು ಆಯಾಸ ಮಾಡಿಕೊಳ್ಳ ಬೇಡಿ, ರೆಸ್ಟ್ ತೆಗೆದುಕೊಳ್ಳಿ, ಬಿಡದೆ ಈ ಮಾತ್ರೆಗಳನ್ನು ತೆಗೆದುಕೊಳ್ಳಿ, ಅಂತಾ ಹೇಳಿದ್ದಾರೆ. ಅಂತ ಬಲು ಆತಂಕದಲ್ಲಿಯೇ ಹೇಳಿದ.ನಾನು ಆ ಕೂಡಲೇ "ಏನೂ ಆಗುವುದಿಲ್ಲ ಊಟಮಾಡಿ ಮಲಗಿಕೋ, ಎಂದೆ" "ಊಟ ಸೇರುವ ಹಾಗಿಲ್ಲ, ಎಂದ. ನಿಧಾನವಾಗಿ ವಿಚಾರಿಸಿದಾಗ ಎರಡು ದಿನಗಳ ಹಿಂದೆ ಒಂದು ಶ್ರಾದ್ಧದ ಊಟ ಮಾಡಿದ್ದಾನೆ. ಒಡೆ-ಆಂಬೊಡೆ ಎಲ್ಲಾ ಹೊಟ್ಟೆಗೆ ಸ್ವಲ್ಪ ಹೆಚ್ಚೇ ಸೇರಿರಬಹುದು,ಮೂರ್ನಾಲ್ಕು ಬಗೆಯ ಗೊಜ್ಜುಗಳು, ಎಲ್ಲಕ್ಕೂ ಚೆನ್ನಾಗಿಯೇ ಎಣ್ಣೆ ಹಾಕಿರುತ್ತಾರೆ. ಬಾಯಿಗೆ ರುಚಿಯಾಗಿತ್ತು, ಜೀರ್ಣಿಸಿಕೊಳ್ಳುವ ಸಾಮರ್ಥ್ಯವನ್ನು ಕಳೆದುಕೊಂಡ ಹೊಟ್ಟೆ ಮುಷ್ಕರ ಹೂಡಿತ್ತು, ಪರಿಣಾಮ ವೈದ್ಯರಲ್ಲಿಗೆ ತಂದು ಬಿಟ್ಟಿತ್ತು!! ನಾನು ನಾಲ್ಕು ದಿನ ನಮ್ಮ ಮನೆಯಲ್ಲಿಟ್ಟುಕೊಂಡಿದ್ದು ನನ್ನ ತಮ್ಮನಿಗೆ ಹೇಳಿದೆ" ನಿನಗೇನೂ ಆಗಿಲ್ಲ, ಎಣ್ಣೆಯಿಂದ ಕರಿದ ಪದಾರ್ಥಗಳನ್ನು ಹೆಚ್ಚು ತಿನ್ನಬೇಡ, ಕಾಫಿಯನ್ನು ಹೆಚ್ಚು ಕುಡಿಯಬೇಡ. ಸ್ವಲ್ಪ ಹೆಚ್ಚು ನೀರು ಕುಡಿ.ಹೇಗೂ ತೋಟದಲ್ಲಿ ತೆಂಗಿನ ಮರ ಇದೆ.ಎಳನೀರು ಕುಡಿ, ಅನ್ನಕ್ಕಿಂತ ಹೆಚ್ಚು ತರಕಾರಿ ತಿನ್ನು, ಅನ್ನ ಕಮ್ಮಿ ಮಾಡು, ಎಂದು ಸರಳವಾದ ಸಲಹೆ ನೀಡಿದೆ. ನಮ್ಮ ಮನೆಯಲ್ಲಿದ್ದ ಎರಡು ಮೂರು ದಿನ ಆಹಾರದ ವಿಚಾರದಲ್ಲಿ ಹಿತ-ಮಿತವಾಗಿರುವಂತೆ ನೋಡಿಕೊಂಡೆ, ಸ್ವಲ್ಪ ಹೆಚ್ಚೇ ನೀರನ್ನು ಒತ್ತಾಯಪೂರ್ವಕವಾಗಿ ಕುಡಿಸಿದೆ. ಮೂರ್ನಾಲ್ಕು ದಿನಗಳಲ್ಲಿ ತಾನೂ ಈಗ ಪೂರ್ಣ ಆರೋಗ್ಯವಾಗಿದ್ದೀನೆಂದು ಅವನಿಗೆ ಭರವಸೆ ಬಂದಮೇಲೆ, ಹಳ್ಳಿಗೆ ಕಳಿಸಿದೆ. ಆನಂತರ ಅಂತಹ ಪರಿಸ್ಥಿತಿ ಮತ್ತೆ ಬರಲಿಲ್ಲ. ಕಾರಣ ಅವನಿಗೆ ಏನೂ ಆಗಿರಲಿಲ್ಲ. ವೈದ್ಯರು ಚೆನ್ನಾಗಿಯೇ ಹೆದರಿಸಿದ್ದರು[ಇದು ನಡೆದ ಘಟನೆ ಯಾದ್ದರಿಂದ ಓದುಗರಾದ ವೈದ್ಯ ಮಿತ್ರರು ಅನ್ಯಥಾ ಭಾವಿಸಬಾರದು, ಅವರಲ್ಲಿ ಕ್ಷಮೆ ಕೋರಿ,ಎಲ್ಲಾ ವೈದ್ಯರೂ ಹಾಗೆ ಇರುವುದಿಲ್ಲ ಎಂಬ ಮಾತನ್ನೂ ಹೇಳಲು ಇಚ್ಛಿಸುತ್ತೇನೆ] ಈ ಒಂದು ಘಟನೆ ತಿಳಿಸಲು ಕಾರಣ ಇದೆ. ನನ್ನ ಜೀವನದಲ್ಲೂ ಹೀಗೆ ಸಾಕಷ್ಟು ಅನುಭವವಾಗಿದೆ. ಎಲ್ಲರ ಜೀವನದಲ್ಲೂ ಆಗಿರಲು ಸಾಧ್ಯ. ನಮ್ಮ ಶರೀರ ಅಸ್ವಸ್ಥವಾಗುವ ಕಾರಣ ಬಹುಪಾಲು ನಮಗೆ ತಿಳಿದೇ ಇರುತ್ತದೆ. ಆದರೂ ತಪ್ಪು ಮಾಡುತ್ತೇವೆ. ನಮ್ಮ ಜೀವನ ಕ್ರಮ ಹಾಗೂ ಆಹಾರ ಕ್ರಮವನ್ನು ತಿದ್ದಿಕೊಳ್ಳುವುದಿಲ್ಲ.ನಮಗೆ ಸರಿಯಾದ ಮಾರ್ಗದರ್ಶನ ಸಿಕ್ಕರೆ ನಾವೆಲ್ಲರೂ ನಿರೋಗಿಯಾಗಿ ಬಾಳಲು ಸಾಧ್ಯ.ಅಂತಹ ಒಂದು ಅವಕಾಶ ನನಗೆ ಲಭಿಸಿತ್ತು. ಇಬ್ಬರು ಯೋಗಾಚಾರ್ಯರೊಡನೆ ಐದು ದಿನ ಒಂದು ಉಚಿತ ಯೋಗ ಶಿಬಿರದಲ್ಲಿರುವ ಅವಕಾಶ ಸಿಕ್ಕಿತ್ತು. ಅವರ ಮಾರ್ಗದರ್ಶನ ಬಹಳ ಉಪಯುಕ್ತವೆನಿಸಿತು. ನನಗೆ ಸಿಕ್ಕ ಮಾರ್ಗದರ್ಶನ ಸಂಪದಿಗರಿಗೆ ಬೇಡವೇ ? ಸಂಪದಿಗರ ಪ್ರಯೋಜನಕ್ಕಾಗಿ ಲೇಖನದ ಕೊನೆಯಲ್ಲಿ ಕೊಂಡಿ ನೀಡಿರುವೆ.
----------
ಇಂದಿನ ದೈನಂದಿನ ಜೀವನದ ಕ್ರಮ, ನಾವು ಸೇವಿಸುವ ಆಹಾರ, ಗಾಳಿ, ನೀರು...ಎಲ್ಲದರ ಪರಿಣಾಮವಾಗಿ ಸಾಮಾನ್ಯ ಜನರ ಸ್ವಾಸ್ಥ್ಯದ ಮೇಲೆ ದುಷ್ಪರಿಣಾಮ ಉಂಟಾಗಿ ,ಜನರಲ್ಲಿ ಬಿ.ಪಿ, ಸಕ್ಕರೆ ಖಾಯಿಲೆ, ಮಾನಸಿಕ ಒತ್ತಡಗಳು ಹೆಚ್ಚಾಗಿರುವುದು ಸರ್ವೇ ಸಾಮಾನ್ಯವಾಗಿದೆ. ಇದಕ್ಕೆಲ್ಲಾ ವೈದ್ಯರಲ್ಲಿ ತಾತ್ಕಾಲಿಕ ಔಷಧಿಯನ್ನು ಪಡೆದು ನಿತ್ಯವೂ ಔಷಧದ ಮೇಲೆಯೇ ದಿನಕಳೆಯುತ್ತಿರುವ ಸಂಖ್ಯೆಗೇನೂ ಕೊರತೆ ಇಲ್ಲ. ಆದರೆ ಇದು ಅನಿವಾರ್ಯವೇ? ನಮ್ಮ ಆರೋಗ್ಯ ಸುಧಾರಣೆಯಾಗಲಾರದೇ? ...ಖಂಡಿತವಾಗಿಯೂ ಎಲ್ಲರಲ್ಲೂ ತಮ್ಮ ಆರೋಗ್ಯವೃದ್ಧಿಸಿಕೊಳ್ಳುವ ಸಾಮರ್ಥ್ಯವನ್ನು ಆ ಭಗವಂತನು ಕೊಟ್ಟಿದ್ದಾನೆ. ಅದಕ್ಕೆ ಮಾರ್ಗದರ್ಶನದ ಅಗತ್ಯವಿದೆ.
Comments
ಉ: ಬಿ.ಪಿ, .ಶುಗರ್ ನಿಂದ ದೂರ ಉಳಿಯಬೇಕೆ?