ಬಿಸಿಬಿಸಿ ಇಡ್ಲಿ ಭಟ್ಟರ ಕನಸು
ದೂರದ ಹಳ್ಳಿಗೆ ಹೊರಟರು ಭಟ್ಟರು
ಬಗೆಬಗೆ ಬಣ್ಣದ ಆಸೆಯ ಕನಸನು
ನನಸನು ಮಾಡುವ ಹುರುಪನು ಹೊತ್ತು
ಹೊಕ್ಕರು ಹಳ್ಳಿಯ ಗೌಡರ ಮನೆಯನು
ತಮ್ಮಯ ಕನಸಿನ ತಿನಿಸಿನ ಅಂಗಡಿ
ತೆರೆಯುವ ತುಮುಲವ ಕಿವಿಯಲಿ ತುಂಬಲು
ಆಗಲಿ ಭಟ್ಟರೆ ಬನ್ನಿರಿ ಬೇಗನೆ
ಮೀಸೆಯ ತೀಡುತ ಗೌಡರು ನುಡಿದರು
ಅರಳಿದ ಮುಖದಲೆ ವಂದಿಸಿ ಹೊರಟರು
ಬೇಗನೆ ಮರಳಲು ಗೌಡರ ಹಳ್ಳಿಗೆ
ವರದಿಯ ನೀಡುತ ಮಡದಿಗೆ ಹೇಳಲು
ನಾಳೆಯೆ ಹೊರಡುವ ಹಳ್ಳಿಯ ಕಡೆಗೆ
ಹೊರಡುವ ಗಡಿಬಿಡಿ ಭಟ್ಟರ ಮಡದಿಗೆ
ತಿಂಡಿಯ ಅಂಗಡಿ ತೆರೆಯುವ ಹುರುಪಲಿ
ಹೊತ್ತಿಗೆ ಮೊದಲೆ ಛಟ್ಟನೆ ಎದ್ದರು
ಧಡಭಡ ಮಾಡುತ ಗಂಡನ ತಿವಿದರು
ನಿದ್ದೆಯ ಭೂತವೆ ಮೆಟ್ಟಿದೆ ನಿಮ್ಮನು
ಹೊರಡುವ ಯೋಚನೆ ಇಲ್ಲವೆ ನಿಮಗೆ
ಮಡದಿಯು ಸಿಡುಕಲು ಮಿಡುಕುತ ಎದ್ದರು
ನಡೆದರು ಬಯಲಿಗೆ ಧಡಧಡ ಭಟ್ಟರು
ಭಟ್ಟರ ಬಾಯಿಗೆ ನಿದ್ದೆಯ ಬಿಟ್ಟು
ಪಕ್ಕದ ಮನೆಯ ಜನರೂ ಎದ್ದರು
ಗಡಿಬಿಡಿ ಮಾಡುತ ಭಟ್ಟರ ಜೊತೆಯಲಿ
ಜೋಡಿಸಿ ಇಟ್ಟರು ಗಂಟನು ಕಟ್ಟುತ
ಗಾಡಿಯು ಬರಲು ಮನೆಯ ಮುಂದೆಯೆ
ತಾರಕಕೇರಿತು ಭಟ್ಟರ ಬಾಯಿಯು
ಎಲ್ಲರು ಸೇರಿ ಗಾಡಿಯ ತುಂಬಿಸಿ
ಕಳಿಸಿಯೆ ಬಿಟ್ಟರು ಶುಭವನು ಕೋರಿ
ಜೀವನ ಯಾನದ ಸಾಹಸ ಘಟ್ಟದ
ಮೊದಲಿನ ಮೆಟ್ಟಿಲು ಮೆಟ್ಟಿದ ಸಂತಸ
ಭಟ್ಟರ ವಿಜಯದ ಯೋಜಿತ ಫಲಿತಕೆ
ಮುಖದಲಿ ಮಿಂಚಿತು ತೃಪ್ತಿಯ ಹೊನಲು
ಅದೊ ಬಂದೆ ಬಿಟ್ಟಿತು ಹಳ್ಳಿಯು ನೋಡು
ನುಡಿದರು ಮಡದಿಯ ತಟ್ಟುತ ಭಟ್ಟರು
ಧಿಗ್ಗನೆ ಎದ್ದರು ಭಟ್ಟರ ಮಡದಿಯು
ಹಳ್ಳಿಯ ಮುಂದಿನ ಕಟ್ಟೆಯ ನೋಡುತ
ಸುತ್ತಲು ನೆರೆದರು ಹಳ್ಳಿಯ ಹುಡುಗರು
ಓಡಿದನೊಬ್ಬ ಗೌಡರ ಕರೆಯಲು
ಬಡಬಡಿಸುತ ಭಟ್ಟರು ಬಂದರು ಎನ್ನಲು
ಗೌಡಿತಿ ಜೊತೆಯಲೆ ಹೊರಟರು ಗೌಡರು
ಭಟ್ಟರ ಮಡದಿಯ ಗೌಡಿತಿ ನೋಡಲು
ಮನೆಗೇ ಕರೆದರು ಕುಂಕುಮ ಕೊಡಲು
ತಿಂಡಿಯ ಅಂಗಡಿ ವರದಿಯ ಪಡೆಯುತ
ಊರಿನ ಸೂಕ್ಷ್ಮದ ವಿಷಯವ ತಿಳಿಸುತ
ಸ್ನೇಹದ ಸಲುಗೆಯ ಬೆಸುಗೆಯ ಬೆಸೆದರು
ಮಾತಿನ ಗತ್ತಲಿ ಗೌಡಿತಿ ಬಿಡದೆ
ಭಟ್ಟರ ತಿನಿಸಿನ ಅಂಗಡಿ ಮನೆಯನು
ತೋರಿಸಿ ನುಡಿದರು ಗೌಡರು ಗತ್ತಲಿ
ಗಾಳಿ ಬೆಳಕು ನೀರಿಗೆ ಬಿಟ್ಟರೆ
ಬೇರೆ ಬಾಡಿಗೆ ಏನೂ ಬೇಡ
ಶುಚಿ ರುಚಿಯಿಂದಲೆ ಜನರನು ಗೆಲ್ಲಿರಿ
ಒಳ್ಳೆಯ ಹೆಸರಲಿ ಲಾಭವ ಹೊಂದಿರಿ
ಯಾವುದೆ ತೊಂದರೆ ಆಗದು ನಿಮಗೆ
ಅಭಯವ ಕೊಟ್ಟರು ಹಳ್ಳಿಯ ಗೌಡರು
ನಾಳೆಯ ತಿಂಡಿಯು ಇಲ್ಲೇ ಆಗಲಿ
ಎಂದರು ಭಟ್ಟರು ಗೌಡರ ನೋಡುತ
ಭಟ್ಟರ ಮಾತಿಗೆ ಆಗಲಿ ಎನ್ನುತ
ನಡೆದರು ಗೌಡರು ಚಾವಡಿ ಕಡೆಗೆ
ಮುಖದಲೆ ಭಟ್ಟರು ಸಂತಸ ಸೂಸುತ
ರುಬ್ಬುವ ಯಂತ್ರವ ತಂಗಳು ಪೆಟ್ಟಿಗೆ
ಅನಿಲದ ಒಲೆಗಳ ನೀರಿನ ಹಂಡೆಯ
ಜೋಡಿಸಿ ಕೊಂಡರು ಅಡುಗೆಯ ಮನೆಯೊಳು
ನೆನೆಸಿದ ಅಕ್ಕಿ ಉದ್ದಿನ ಬೇಳೆ
ರುಬ್ಬುವ ಯಂತ್ರದಿ ರುಬ್ಬಲು ಹಾಕಿ
ತರತರ ತರಕಾರಿ ಕೊತ್ತುಂಬ್ರಿ ಕರಿಬೇವು
ತರಲು ಹೊರಟರು ಸಂತೆಗೆ ಭಟ್ಟರು
ಕೊಬ್ಬರಿ ಚೆಟ್ನಿ ಬಿಸಿಬಿಸಿ ಸಾಂಬಾರು
ಉದ್ದಿನ ವಡೆ ಉಪ್ಪಿಟ್ಟು ಬೋಂಡಾ
ತಟ್ಟೆ ಇಡ್ಲಿ ಕಾಫಿ ಚಹ ಇಷ್ಟೇ ನಾಳೆಗೆ
ನುಡಿದರು ಭಟ್ಟರು ತರಕಾರಿ ಸುರಿಯುತ
ಎಲ್ಲವ ಹೊಂದಿಸಿ ಮಲಗಲು ಭಟ್ಟರು
ನಿದ್ದೆಯೆ ಸುಳಿಯದು ನಾಳೆಯ ನೆನೆದು
ಕಣ್ಣನು ಮುಚ್ಚಲು ಬಣ್ಣದ ಕನಸು
ಪರಪರ ತುರಿದರು ಕೊಬ್ಬರಿ ತುರಿಯನು
ಪರಪರ ತರಿದರು ಕರಿಬೇವು ಎಲೆಯನು
ಸರಸರ ಹೊಂದಿಸಿ ಸಾಂಬಾರು ಮಸಾಲೆ
ಬರಬರ ರುಬ್ಬುತ ರುಬ್ಬುವ ಯಂತ್ರದಿ
ಸರಸರ ಹೊತ್ತಿಸಿ ಅನಿಲದ ಒಲೆಯನು
ಡಬಡಬ ಸುರಿದರು ಎಣ್ಣೆಯ ಪಾತ್ರೆಗೆ
ಪಟಪಟ ಸಿಡಿಸುತ ಜೀರಿಗೆ ಸಾಸಿವೆ
ಇಂಗಿನ ಜೊತೆಯಲಿ ತೆಂಗಿನ ತುರಿಯನು
ಸುರಿದರು ಭಟ್ಟರು ಮೂಗನು ಸೀಟುತ
ಹೆಚ್ಚಿದ ತರಕಾರಿ ರುಬ್ಬಿದ ಮಸಾಲೆ
ಕೊತಕೊತ ಕುದಿಯುವ ನೀರಿಗೆ ಸೇರಿಸಿ
ಉಪ್ಪು ಹುಳಿಯನು ಹದದಲಿ ಬೆರೆಸಿ
ಮುಖದಲಿ ಹರಿಯುವ ಬೆವರನು ಒರೆಸುತ
ತೆರೆದರು ಭಟ್ಟರು ಕವಳದ ಸಂಚಿಯ
ಹಸಿಹಸಿ ಅಡಕೆಯ ಬಾಯೊಳು ಎಸೆಯುತ
ಚಿಗುರೆಲೆ ಬೆನ್ನಿಗೆ ಸುಣ್ಣವ ಸವರುತ
ಕೈಯಲಿ ತಂಬಾಕು ಸುಣ್ಣವ ತೀಡುತ
ಬಾಯೊಳಗಿಟ್ಟು ನಮಲುತ ಕುಳಿತರು
ಇಂಗು ತೆಂಗಿನ ಸಾಸಿವೆ ಸಿಡಿಸಿದ
ಎಣ್ಣೆಯ ವಗ್ಗರಣೆ ಘಮ್ಮನೆ ಪರಿಮಳ
ಮೂಗಿನ ಕೂದಲು ಉದುರುವ ಪರಿಯಲಿ
ಹರಡಿತು ಹಳ್ಳಿಯ ಮನೆಮನೆಯಲ್ಲಿ
ಅರಳಿದ ಮೂಗಿನ ಹೊರಳೆಗಳೊಂದಿಗೆ
ಛಟ್ಟನೆ ಎದ್ದರು ಗಂಡಸೆರೆಲ್ಲಾ
ಅರಿಯದೆ ನಡೆದವು ಕಾಲುಗಳೆರೆಡು
ಭಟ್ಟರ ತಿಂಡಿಯ ಅಂಗಡಿಯೆಡೆಗೆ
ಗೌಡರು ಬಂದು ಕುಳಿತೇ ಬಿಟ್ಟರು
ಗಡಿಬಿಡಿ ಮಾಡುತ ಭಟ್ಟರು ಬಂದರು
ಫಳಫಳ ಹೊಳೆಯುವ ತಿಂಡಿ ತಟ್ಟೆಯ
ಇಟ್ಟೇ ಬಿಟ್ಟರು ಗೌಡರ ಮುಂದೆ
ಬಿಸಿಬಿಸಿ ಇಡ್ಲಿಯ ತಟ್ಟೆಲಿ ಒಟ್ಟುತ
ಘಮಘಮ ಸಾಂಬಾರು ಸುರಿದೇ ಬಿಟ್ಟರು
ಇಡ್ಲಿಯ ಮೇಲೆಯೆ ಚಟ್ನಿಯ ಮುಕುಟ
ಪಕ್ಕದಲೊಟ್ಟಲು ವಡೆಗಳ ಮಹಡಿ
ಗೌಡರ ಬಾಯಲಿ ನೀರೋ ನೀರು
ಇಡ್ಲಿ ಮುರಿದು ಸಾಂಬಾರಲಿ ಮುಳುಗಿಸಿ
ಚಟ್ನಿಯ ಜೊತೆಯಲಿ ಬಾಯೊಳಗಿಟ್ಟು
ಭಳಿರೇ ಭಟ್ಟರೆ ಎನ್ನುತ ಗೌಡರು
ಭಟ್ಟರ ಬೆನ್ನನು ತಟ್ಟುವ ಹೊತ್ತಿಗೆ
ಭಟ್ಟರ ನಿದ್ದೆಗೆ ಸಿಡುಕಿದ ಮಡದಿಯು
ಬೆನ್ನನು ತಟ್ಟಲು ಧಿಗ್ಗನೆ ಕುಳಿತರು
ಕಣ್‍ಕಣ್ ಬಿಡುತಲಿ ಸುತ್ತಲು ನೋಡುತ
ಗೌಡರು ಇಲ್ಲ ಎಲ್ಲಾ ಕನಸೆ
ತಂಬಿಗೆ ಹಿಡಿದು ನಡೆದರು ಬಯಲಿಗೆ
ಪಿಳಿಪಿಳಿ ನೋಡುತ ಹೆಂಡತಿ ಮುಖವನು.
Comments
ಉ: ಬಿಸಿಬಿಸಿ ಇಡ್ಲಿ ಭಟ್ಟರ ಕನಸು
ತಿರುಕನ ಕನಸು ಕಥೆ ನೆನಪಿಗೆ ತರಿಸಿದಿರಿ. ಚೆನ್ನಾಗಿದೆ.