ಬೀದಿಗೆ ಬಂದ ವೈಮನಸ್ಯ
ರಾಜ್ಯಪಾಲರು, ಮುಖ್ಯಮಂತ್ರಿ ನಡುವಣ ವೈಮನಸ್ಯ ಬೀದಿಗೆ ಬಂದಿದೆ. ಇದು ರಾಜ್ಯಪಾಲರ ಅಧಿಕಾರ ಚಲಾವಣೆಯ “ರೆಕಾರ್ಡ್” ಆಗುತ್ತದೋ, ಇಲ್ಲಾ ಮುಖ್ಯಮಂತ್ರಿಗಳ ಅಧಿಕಾರ ವ್ಯಾಖ್ಯಾನದ “ರೆಕಾರ್ಡೇ” ಆಗುತ್ತದೋ ಎಂಬುದು ಕುತೂಹಲ. ಇದು ಟಿವಿ ಸೀರಿಯಲ್ ಕುತೂಹಲದಂತಾಗದೆ, ಗಂಭೀರಸ್ಥರನ್ನು ಪ್ರಮಾಣಿಕ ಚಿಂತನೆಗೆ ಹಚ್ಚಲಿ!
“ಎಂಥದೋ ದೇವರಿಗೆ, ಇನ್ನೆಂಥದೋ ಪೂಜಾರಿ”ಯಂತೆ! ಆ ಹೊಲಸು ಮಾತಿನ ಗಾದೆಯಂತಿದೆ, ಈ ಸನ್ನಿವೇಶ. ಆದರೆ ನಮ್ಮ ಪ್ರಜಾಸತ್ತಾ ಪ್ರಹಸನದಲ್ಲಿ, ಆ “ದೇವರು”, ದೇವರಾಗೇ ಉಳಿದಿರುವುದಿಲ್ಲ; “ಪೂಜಾರೀ” ಪೂಜಾರಿಯಾಗೇ ಇರುವುದಿಲ್ಲ. ಸ್ಥಾನ ಅದಲು-ಬದಲಾಗುವುದೂ ಉಂಟು!
ಆಡಳಿತದ ಚುಕ್ಕಾಣಿ ಹಿಡಿದ ಮಹೋದಯರು, ಮತದಾರ ಮಹಾಜನತೆಯೆದುರು ಉಢಾಫೆ ಹೊಡೆಯುವುದು ಸಾಮಾನ್ಯ. ಅದೇ “ಧಿಮಾಕ”ನ್ನೇ ರಾಜ್ಯಪಾಲರೆಂಬ, ಲೋಕಾಯುಕ್ತವೆಂಬ ಪ್ರಾಧಿಕಾರಗಳ ಮುಂದೂ ತೋರುವುದು ವಿಪರ್ಯಾಸ! ‘ಹಿಂದೆ ಆಡಳಿತ ನಡೆಸಿದವರು ಮಾಡಿದ ‘ಭಕ್ಷಣೆ’ಯನ್ನೇ ನಾವೂ ಮಾಡುತ್ತೇವೆ; ಇದೇನು ಮಹಾ?; ಇದ್ದಬದ್ದ ಎಲ್ಲಾ ನೆಲವನ್ನೂ, ಅದರೊಳಗಿನ ಖನಿಜಸಂಪತ್ತನ್ನೂ ಅನಾಮತ್ತೂ ನುಂಗಿ ನೀರು ಕುಡಿಯುವುದೇ ‘ಅಧಿಕಾರ’!; ಅದು, ‘ಸಾಮಾಜಿಕ ನ್ಯಾಯ’ದಂತೆ, ಪಾಳಿ-ಪಾಳಿಯ ಮೇಲೆ ಬೇರೆ ಬೇರೆ ಪಕ್ಷಗಳಿಗೆ ಸಿಗುತ್ತದೆ; ಸಿಕ್ಕಾಗ, ತಮ್ಮ ಮನೆ, ಮನೆತನ, ಬಾಲಬಡುಕ ಚೇಲಾಗಳು ಮತ್ತು ಪರಿವಾರದ ಅಭಿವೃದ್ಧಿ ಮಾಡಿಕೊಳ್ಳುತ್ತೇವೆ; ಕೇಳುವುದಕ್ಕೆ ಪ್ರತಿಪಕ್ಷದವರ‍್ಯಾರು?’ -ಇದು ಆಳುವವರ ನಿಲವು!
ದೂರು, ರಾಜ್ಯಪಾಲರಿಗೆ ಹೋಗುತ್ತದೆ; ಅವರು ಏನಾದರೂ ಮಾಡಲೇಬೇಕಲ್ಲಾ? ಇದು ಸಾಂವಿಧಾನಿಕವಾಗೇ ಇರಬೇಕೆಂಬುದು, ನೈತಿಕ ನಿರೀಕ್ಷೆ. ಅದರಲ್ಲಿ ಒಳಗೊಳಗೇ ಸೂಕ್ಷ್ಮ ರಾಜಕೀಯ ವ್ಯವಹಾರಸ್ತಿಕೆಯೂ ಇದ್ದರೆ Legal ನಿಯಂತ್ರಣವುಂಟೇ?
ಇಂದು ರಾಜ್ಯಪಾಲರಾಗಿರುವವರು ನಾಳೆ ತಮ್ಮ ರಾಜ್ಯದ ಮುಖ್ಯಮಂತ್ರಿಯೋ, ಕೇಂದ್ರದ ಕ್ಯಾಬಿನೆಟ್ ಮಂತ್ರಿಯೋ ಆಗುವುದು ಅಸಂವಿಧಾನಿಕವೇನೂ ಅಲ್ಲ. ಅದರಮೇಲೆ ಕಣ್ಣಿರಬಾರದೆಂಬುದು ಆತ್ಮವುಳ್ಳವರ ಅಂತರಂಗ ಸಾಕ್ಷಿಗೆ ಬಿಟ್ಟ ವಿಚಾರ. ಅವರು ಆ ಆತ್ಮಸಾಕ್ಷಿಗಿಂತಾ ಪಕ್ಷ ಹೈಕಮಂಡ್‌ಗೇ ಹೆಚ್ಚಿನ “ಪಾತಿವ್ರತ್ಯ” ತೋರಿದರೂ ಸಂವಿಧಾನವೇನೂ “ಬೇಡ” ಎನ್ನುವುದಿಲ್ಲವಲ್ಲಾ?!
Comments
ಉ: ಬೀದಿಗೆ ಬಂದ ವೈಮನಸ್ಯ