ಬುಕ್- ಫೇಸ್‌ಬುಕ್
"ಮನುಷ್ಯರಿಂದ ಪುಸ್ತಕಗಳು ಎಷ್ಟೋ ವಾಸಿ... ಎಲ್ಲಾ ಸಮಯದಲ್ಲಿ ಖುಷಿ ಕೊಡದಿದ್ದರೂ ಯಾವತ್ತೂ ನೋವನ್ನುಂಟು ಮಾಡುವುದಿಲ್ಲ". ಇದು ಇತ್ತೀಚೆಗೆ ನನ್ನ ಸ್ನೇಹಿತನೊಬ್ಬ, ಫೇಸ್ ಬುಕ್ ನಲ್ಲಿ ದಾಖಲಿಸಿದ ಸ್ಟೇಟಸ್. ಯಾವತ್ತೂ ತಾನಾಯಿತು ತನ್ನ ಕೆಲಸವಾಯಿತು ಎಂದುಕೊಂಡಿರುತ್ತಿದ್ದ ಆತನಿಗೆ ಇದೇನಾಯಿತಪ್ಪ ಅಂದುಕೊಂಡೆ. ಹೆಚ್ಚು ಕಡಿಮೆ ನನ್ನ ಅಭಿಪ್ರಾಯವೂ ಅದೇ ಆಗಿದ್ದುದರಿಂದ ಲೈಕ್ ಬಟನ್ ಒತ್ತಿದೆ. ಪೇಸ್ ಬುಕ್‌ನಿಂದ ಲಾಗ್ ಔಟ್ ಆದ ನಂತರವೂ ಈ ವಿಚಾರ ನನ್ನ ತಲೆಯಲ್ಲಿ ಕೊರೆಯುತ್ತಿತ್ತು. ಇದರ ಬಗ್ಗೆ ಯೋಚಿಸುತ್ತಾ ಹೋದ ಹಾಗೆ ಗೆಳೆಯನ ಈ ವಾಕ್ಯದಲ್ಲಿ ೯೯% ರಷ್ಟು ನಿಜಾಂಶ ಇದೆ ಎಂದು ಅರಿವಾಯಿತು.
ಸ್ನೇಹಿತರ ಜತೆ ಹೆಚ್ಚಾಗಿ ಕಾಲಕಳೆಯುತ್ತಿದ್ದ ನನಗೆ ಸ್ನೇಹದಲ್ಲಿನ ಬೇಸರದ ಅನುಭವಗಳು ಹೆಚ್ಚೇನು ಆಗಿರದಿದ್ದರೂ ಒಂದೆರಡು ಬಾರಿ ಆಗಿರುವುದಂತೂ ನಿಜ. ಆಗೆಲ್ಲಾ ಯಾಕಾದರೂ ಬೇಕಿತ್ತು ಈ ಉಸಾಬರಿ ಅನ್ನಿಸಿದ್ದೂ ಸುಳ್ಳಲ್ಲ. ಎಲ್ಲರೂ ಒಂದೇ ಮನಸ್ಥಿತಿಯುಳ್ಳವರು ಅಥವಾ ಹೊಂದಾಣಿಕೆಯ ಸ್ವಭಾವದವರಾಗಿದ್ದರೆ ಅಂತಹ ಸ್ನೇಹ ಯಾವತ್ತೂ ಹಸಿರಾಗಿರುತ್ತದೆ. ಆದರೆ ಸ್ನೇಹದ ಗುಂಪಿನಲ್ಲಿ ಒಂದೆರಡು ಮುಂಗೋಪಿಗಳಿದ್ದರೆ, ಅಥವಾ ಎಲ್ಲವೂ ತಾನು ಹೇಳಿದ್ದೇ ಸರಿ ಎನ್ನುವಂತಹ ಮನಸ್ಥಿತಿಗಳಿದ್ದರೆ ಅಂತಹ ಸ್ನೇಹ ಸಂಬಂಧಗಳನ್ನು ಮುಂದುವರೆಸಿಕೊಂಡು ಹೋಗುವಲ್ಲಿ ಅನೇಕ ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಆಗೆಲ್ಲಾ ಮೇಲಿನ ವಾಕ್ಯವೇ ಎಷ್ಟೋ ವಾಸಿ ಎಂದೆನಿಸದೇ ಇರಲಿಲ್ಲ. ಗೆಳೆಯನಿಗೂ ಇಂತಹುದೇ ಅನುಭವವಾಗಿ ಈ ವಾಕ್ಯವನ್ನು ದಾಖಲಿಸಿರಬಹುದು ಅಂದುಕೊಳ್ಳುತ್ತೇನೆ.
ಹೆಚ್ಚಲ್ಲದಿದ್ದರೂ ಸಾಮಾನ್ಯವಾಗಿ ಓದುವ ಹವ್ಯಾಸ ಇರುವ ನನಗೆ ಯಾವುದಾದರೂ ಲೇಖನಗಳು, ಪುಸ್ತಕಗಳು ಕುತೂಹಲ ಮೂಡಿಸುವಂತಿದ್ದರೆ ಅದನ್ನು ಓದಿ ಮುಗಿಸುವವರೆಗೂ ಮನಸ್ಸಿಗೆ ಏನೋ ಒಂದು ರೀತಿಯ ಅಸಮಾಧಾನ. ಪುಸ್ತಕಗಳು ಅಥವಾ ಓದುವಿಕೆ ಮನಸ್ಸನ್ನು ತುಂಬಾ ಖುಷಿಗೊಳಿಸದಿದ್ದರೂ ಯಾವುದೇ ರೀತಿಯ ಬೇಸರವನ್ನುಂಟು ಮಾಡುವುದಿಲ್ಲ. ಕೆಲವು ಪುಸ್ತಕಗಳು, ಬರಹಗಳು ಮನಸ್ಸಿಗೆ ಒಂದು ರೀತಿಯ ಸಂತೋಷ, ಸಮಾಧಾನ ಹಾಗೂ ವಿಷಯದ ಜ್ಞಾನ ಸಂಗ್ರಹಣೆ ಮಾಡುವಂತಿರುತ್ತದೆ. ಒಮ್ಮೆ ಓದಲು ಕುಳಿತರೆ, ಉತ್ತಮ ಪುಸ್ತಕ, ಬರಹಗಳಾದರೆ ಓದಿ ಮುಗಿಸುವವರೆಗೂ ಹಸಿವು, ನಿದ್ದೆಯ ಪರಿವೇ ಇರುವುದಿಲ್ಲ. ಇನ್ನು ಕೆಲವು ಬರಹಗಳು ಮನಸ್ಸಿಗೆ ಹಿಡಿಸದಿದ್ದರೂ ಅವು ಯಾವುದೇ ರೀತಿಯ ನೋವನ್ನುಂಟು ಮಾಡುವುದಿಲ್ಲ. ಒಳ್ಳೆಯ ವಿಷಯಗಳಾದರೆ ಮನಸ್ಸಿನಲ್ಲೇ ಇರುತ್ತದೆ. ಸಾಮಾನ್ಯವಾದವುಗಳಾದರೆ ಬೇಗನೇ ಮರೆತು ಹೋಗುತ್ತದೆ. ಇತ್ತೀಚೆಗಂತೂ ನಾನು ಅನಿವಾರ್ಯವಾಗಿ ಪುಸ್ತಕಗಳನ್ನು ಹಿಡಿದು ಕೂರುವಂತಾಯಿತು. ಉಳಿದೆಲ್ಲಾ ಗೆಳತಿಯರು ಧಾರಾವಾಹಿಗಳನ್ನು ನೋಡಿಕೊಂಡು ಹರಟೆ ಹೊಡೆಯುತ್ತಾ ಸಮಯ ವ್ಯರ್ಥ ಮಾಡುತ್ತಾ, ಅದರಲ್ಲಿ ತೋರಿಸುವಂತಹ ಸನ್ನಿವೇಶಗಳನ್ನು ಏನೋ ರಾಷ್ಟ್ರೀಯ ಸಮಸ್ಯೆ ಎಂಬಂತೆ ಚರ್ಚಿಸುತ್ತಿರುವಾಗ, ಪುಸ್ತಕ ಓದುತ್ತಾ ಕೂತಿರುವ ನನಗೆ ಪುಸ್ತಕವೇ ಎಷ್ಟೋ ವಾಸಿ ಎಂಬ ಗೆಳೆಯನ ವಾಕ್ಯ ಆಗಾಗ ನೆನಪಾಗುತ್ತಿರುತ್ತದೆ. ಅದು ನಿಜವೂ ಹೌದು.
ಟಿ.ವಿಯ ಪಕ್ಕದಲ್ಲೇ ಕೂತಿರುತ್ತಾರಾದರೂ ಕಿವಿಯೇ ನಿಶ್ಯಬ್ಧವಾಗುವಂತೆ ಜೋರಾಗಿ ವಾಲ್ಯೂಮ್ ಕೊಟ್ಟು ನೋಡುತ್ತಿದ್ದವರು, ನಾನು ಓದುತ್ತಿದ್ದೇನೆ ಎಂಬ ಕಾರಣಕ್ಕಾಗಿ ನಾಲ್ಕು ಗೋಡೆಗಳ ಮಧ್ಯೆ ಮಾತ್ರ ಕೇಳಿಸುವಂತೆ ಇಡುತ್ತಿದ್ದಾರೆ. ಮೊದಲಾದರೆ ಪಕ್ಕದ ನಾಲ್ಕೂ ರೂಮುಗಳಲ್ಲೂ ಟಿ.ವಿ.ಶಬ್ದ ಪ್ರತಿಧ್ವನಿಸುತ್ತಿತ್ತು. ಕರ್ಕಶ ಶಬ್ದವನ್ನು ಕೇಳಲಾಗದ ನಾನು ಹೇಗಪ್ಪಾ ಇಲ್ಲಿ ಹೊಂದಿಕೊಳ್ಳುವುದು ಅಂದುಕೊಳ್ಳುತ್ತಿದ್ದೆ. ಪುಸ್ತಕ ಹಿಡಿದು ಕೂತ ಮೇಲಂತೂ ಸಮಸ್ಯಗಳೆಲ್ಲಾ ಒಂದೊಂದಾಗಿ ಪರಿಹಾರವಾಗುತ್ತಿದೆ. ಸಮಯ ಸಿಕ್ಕಂತೆಲ್ಲಾ ವಟ ವಟ ಮಾತನಾಡುತ್ತಿರುವ ರೂಮೇಟ್ಸ್ ಗಳು ಕೂಡಾ ಓದುತ್ತಿದ್ದೇನೆ ಎಂಬ ಕಾರಣಕ್ಕಾಗಿ ಹಾಲ್ ನಲ್ಲಿ ಟಿವಿ ನೋಡಲು ಹೋಗುತ್ತಾರೆ. ಹೀಗಾಗಿ ಏಕಾಂತದಲ್ಲಿ ಕೂತು ಓದುವ ಖುಷಿ ನನ್ನ ಪಾಲಿನದ್ದು. ಎಲ್ಲಾ ಸಮಯದಲ್ಲೂ ಇವು ಖುಷಿ ಕೊಡದಿದ್ದರೂ ಕೂಡಾ ಯಾವತ್ತೂ ಬೇಸರವನ್ನುಂಟು ಮಾಡುವುದಿಲ್ಲ. ಒಳ್ಳೆಯ ವಿಷಯಗಳನ್ನು ಮಾತ್ರ ನಮ್ಮಲ್ಲಿ ಅಳವಡಿಸಿಕೊಂಡು ಇತರ ವಿಚಾರಗಳನ್ನು ಮರೆತು ಬಿಡೋದು, ಅಲ್ವಾ?
ಇತ್ತೀಚೆಗೆ ಎಲ್ಲೋ ಒಂದು ಕಡೆ ಓದಿದ ನೆನಪು- ಪುಸ್ತಕಗಳನ್ನು ಓದುವುದರಿಂದ ವಿಷಯದ ಸಂಗ್ರಹಣೆ ಜತೆಗೆ ಹೆಚ್ಚಿನ ಸಮಸ್ಯೆಗಳಿಗೆ ಪರಿಹಾರವೂ ದೊರಕುತ್ತದೆ.