ಬೆಂಗಳೂರಲ್ಲಿ ದೇಶದ ಸ್ವತಂತ್ರ ಸಾಫ್ಟ್ ವೇರ‍್ ಆಂದೋಲನದ ಚರಿತ್ರೆಯಲ್ಲಿ ಬರೆದ ಹೊಸ ಅಧ್ಯಾಯ
ಬೆಂಗಳೂರಲ್ಲಿ ಇಂದು ದೇಶದ ಸ್ವತಂತ್ರ ಸಾಫ್ಟ್ ವೇರ‍್ ಆಂದೋಲನದ ಚರಿತ್ರೆಯಲ್ಲಿ ಒಂದು ಹೊಸ ಅಧ್ಯಾಯ ಬರೆಯಲಾಯಿತು. ಎರಡು ಚಾರಿತ್ರಿಕ ಘೋಷಣೆಗಳನ್ನು ಬೆಂಗಳೂರಿನ ಸೆಂಟ್ರಲ್ ಕಾಲೇಜು ಆವರಣದ ಜ್ಞಾನಜ್ಯೋತಿ ಸಭಾಂಗಣದಲ್ಲಿ ನಡೆದ ೨ ದಿನಗಳ ರಾ಼ಷ್ಟ್ರೀಯ ಸಮ್ಮೇಳನದ ಸಮಾರೋಪದಲ್ಲಿ ಮಾಡಲಾಯಿತು.
ಸ್ವತಂತ್ರ ತಂತ್ರಾಂಶ ಚಳುವಳಿ ಬೆಂಬಲಿಸಿ ಪ್ರಮುಖ ಲೇಖಕರು, ಬುಧ್ಧಿಜೀವಿಗಳು ನೀಡಿದ ಹೇಳಿಕೆ ಒಂದು. ಈ ಹೇಳಿಕೆಗೆ ಸಹಿ ಹಾಕಿದವರಲ್ಲಿ ರಾಷ್ಟಕವಿ ಡಾ. ಜಿ.ಎಸ್ ಶಿವರುದ್ರಪ್ಪ, ಪ್ರೊ. ಬರಗೂರು ರಾಮಚಂದ್ರಪ್ಪ, ಚೆನ್ನವೀರ ಕಣವಿ, ಪ್ರೊ. ಚಿದಾನಂದ ಗೌಡ, ಡಾ. ಶ್ಯಾಮಸುಂದರ ಬಿದರಕುಂದಿ ಸೇರಿದ್ದಾರೆ. ’ಸ್ವತಂತ್ರ ತಂತ್ರಾಂಶ ಚಳುವಳಿಯು ಸಮಾಜದಲ್ಲಿ ಕಲಿಕೆ, ಜ್ಞಾನ, ಸ್ವಾವಲಂಬನೆ, ಮತ್ತು ಸ್ವಾತಂತ್ರ್ಯವನ್ನು ಜನತೆಗೆ ಒದಗಿಸುವ ದಾರಿಯನ್ನು ತೆರೆಯುತ್ತದೆ’..ಸ್ವಾತಂತ್ರ್ಯದ ಮೌಲ್ಯಗಳನ್ನು ಪ್ರತಿಪಾದಿಸುವ ಸ್ವತಂತ್ರ ತಂತ್ರಾಂಶವು ಕನ್ನಡ ಪರವೂ ಜನಪರವೂ ಆಗಿರುವದರಿಂದ ಇದಕ್ಕೆ ನಾನು ಸಂಪೂರ್ಣ ಬೆಂಬಲ ನೀಡುತ್ತೇನೆ. ಎಲ್ಲಾ ಜನಸಮುದಾಯವು ಇದನ್ನು ಬೆಂಬಲಿಸಬೇಕೆಂದು ನಾನು ವಿನಂತಿಸುತ್ತೇನೆ.’ ಎಂದು ಅವರು ಹೇಳಿದ್ದಾರೆ.
ಎರಡನೇಯದು ಭಾರತ ಸ್ವತಂತ್ರ ತಂತ್ರಾಂಶ ಆಂದೋಲನ (ಎಫ್‌ಎಸ್.ಎಂ.ಐ.) ರಚನೆ. ಸಮ್ಮೇಳನವನ್ನು ಜಂಟಿಯಾಗಿ ಸಂಘಟಿಸಿದ್ದ ೧6 ಸ್ವತಂತ್ರ ಸಾಫ್ಟ್ ವೇರ‍್ ಆಂದೋಲನ ಸಂಘಟನೆಗಳು ಬೆಂಗಳೂರಿನ ಶಿಕ್ಷಕರ ಸದನದಲ್ಲಿ ಸಭೆ ಸೇರಿ ಒಂದು ರಾಷ್ಟ್ರೀಯ ಒಕ್ಕೂಟ ರಚಿಸಲು ನಿರ್ಧರಿಸಿದವು. ಈ ಹೊಸ ರಾಷ್ಟ್ರ ಮಟ್ಟದ ಸಂಘಟನೆಯ ಹೆಸರು ಭಾರತ ಸ್ವತಂತ್ರ ತಂತ್ರಾಂಶ ಆಂದೋಲನ (ಎಫ್‌ಎಸ್.ಎಂ.ಐ.). ಈ ನಿರ್ಧಾರದಿಂದ ಸ್ವತಂತ್ರ ಸಾಫ್ಟ್ ವೇರ‍್ ರಾಷ್ಟ್ರ ಮಟ್ಟದ ಆಂದೋಲನವಾಗಿ ಹೊಮ್ಮಿ ಚಾರಿತ್ರಿಕ ಮುನ್ನಡೆ ಸಾಧಿಸಿದೆ.
ಬೆಂಗಳೂರಿನ ಶಿಕ್ಷಕರ ಸದನದಲ್ಲಿ ಆಯಾ ರಾಜ್ಯ ಮಟ್ಟದ ಮತ್ತು ಇತರ ಕ್ಷೇತ್ರವಾರು ಸ್ವತಂತ್ರ ಸಾಫ್ಟ್ ವೇರ‍್ ಸಂಘಟನೆಗಳ ಸಮ್ಮೇಳನಗಳಲ್ಲಿ ಚುನಾಯಿತ ೨೭೫ ಪ್ರತಿನಿಧಿಗಳು ಈ ಚಾರಿತ್ರಿಕ ನಿರ್ಧಾರ ಕೈಗೊಂಡರು. ಕರ್ನಾಟಕದ ಎಫ್‌ಎಸ್.ಎಂ.ಕೆ, ಆಂಧ್ರದ ಸ್ವೇಚ್ಛಾ, ತಮಿಳುನಾಡಿನ ಎಫ್.ಎಸ್.ಎಫ್.ಟಿ.ಎನ್., ಪಶ್ಚಿಮ ಬಂಗಾಳದ ಎಫ್.ಎಸ್.ಎಂ.ಡಬ್ಲ್ಯೂ.ಬಿ., ಮುಂತಾದ ರಾಜ್ಯ ಮಟ್ಟದ ಸಂಘಟನೆಗಳಲ್ಲದೆ ನಾಲೆಜ್ ಕಾಮನ್ಸ್, ಅಕಾಡೆಮಿಕ್ ಇನಿಶಿಯೆಟಿವ್ಸ್, ಕಂಪ್ಯೂಟರ‍್ ಟೀಚರುಗಳ ಸಂಘಟನೆ - ಈ ೧೬ ಸಂಘಟನೆಗಳಲ್ಲಿ ಸೇರಿವೆ.
ಕೂಲಂಕಷ ಚರ್ಚೆಯ ನಂತರ ಸಭೆ ಹೊಸ ಸಂಘಟನೆಯ ಉದ್ದೇಶಗಳು, ಕೆಲಸಗಳು ಮತ್ತು ಸಂಘಟನಾ ರಚನೆ ವಿವರಗಳಿರುವ ಒಂದು ನಿರ್ಣಯವನ್ನು ಸರ್ವಾನುಮತದಿಂದ ಅಂಗೀಕರಿಸಿತು. ಸಭೆ ೬೯ ಸದಸ್ಯರ ಒಂದು ಜನರಲ್ ಕೌನ್ಸಿಲ್, ೨೮ ಸದಸ್ಯರ ಕಾರ್ಯಕಾರಿ ಸಮಿತಿ, ೯ ಪದಾಧಿಕಾರಿಗಳನ್ನು ಚುನಾಯಿಸಿತು. ಪದಾಧಿಕಾರಿಗಳ ಹೆಸರುಗಳು ಹೀಗಿವೆ : ಅಧ್ಯಕ್ಷ – ಜೋಸೆಫ್ ಥಾಮಸ್, ಪ್ರಧಾನ ಕಾರ್ಯದರ್ಶಿ - ಕಿರಣ್ ಚಂದ್ರ, ಉಪಾಧ್ಯಕ್ಷರು - ಪ್ರೊ. ಗೋಪಿನಾಥ್ (ಐ.ಐ.ಎಸ್.ಸಿ), ಪ್ರೊ. ದೆಬೇಶ್ ದಾಸ್, ಪ್ರಬೀರ‍್ ಪುರಕಾಯಸ್ಥ, ಕಾರ್ಯದರ್ಶಿಗಳು - ಜೈ ಕುಮಾರ‍್, ಡಾ. ನಂದಿನಿ ಮುಖರ್ಜಿ, ಸಿದ್ದಾರ್ಥ, ಖಜಾಂಚಿ - ಪ್ರತಾಪ್ ರೆಡ್ಡಿ
ಎಫ್‌ಎಸ್.ಎಂ.ಐ ಸ್ವತಂತ್ರ ಸಾಫ್ಟ್ ವೇರ‍್ ಆಧಾರಿತ ಕಂಪ್ಯೂಟರ‍್ ಸಾಕ್ಷರತೆ ಬಳಕೆಯ ವ್ಯಾಪಕ ಪ್ರಸಾರಕ್ಕೆ ಶ್ರಮಿಸುವ, ಡಿಜಿಟಕ್ ಕಂದಕ ಮುಚ್ಚುವ, ಬಾರತೀಯ ಬಾಷೆಗಳಲ್ಲಿ ಐಟಿ ಬಳಕೆಗೆ ಉತ್ತೇಜನ ನೀಡುವ, ಶಿಕ್ಷಣ ಆಡಳಿತ ಮುಂತಾದ ಎಲ್ಲಾ ರಂಗಗಳಲ್ಲಿ ಸ್ವತಂತ್ರ ಸಾಫ್ಟ್ ವೇರ‍್ ಬಳಕೆಯ ಪ್ರಸಾರ ಮತ್ತು ಅದಕ್ಕೆ ಉತ್ತೇಜನ ನೀಡುವ ನೀತಿಗಳಿಗೆ ಒತ್ತಾಯಿಸುವ, ಜ್ಞಾನದ ಉತ್ಪಾದನೆ ಬಳಕೆ ಪ್ರಸಾರಕ್ಕೆ ಅಡ್ಡಿ ಒಡ್ಡುವ ಪೇಟೆಂಟ್ ಮುಂತಾದ ಕ್ರಮಗಳನ್ನು ವಿರೋಧಿಸುವ, ದೇಶದ ಸಮಾಜದ ಅಗತ್ಯಗಳಿಗೆ ಬೇಕಾದ ಸಾಫ್ಟ ವೆರ‍್ ತಯಾರಿಗೆ ಕ್ರಮ ಕೈಗೊಳ್ಳುವ ಉದ್ದೇಶ ಹೊಂದಿದೆ.
ಸಾಫ್ಟ ವೇರ‍್, ಜ್ಞಾನ, ವಿಜ್ಞಾನ-ತಂತ್ರಜ್ಞಾನ, ಸಮಾಜದ – ಇವುಗಳ ಸ್ವಾತಂತ್ರ‍್ಯ ಕಾಪಾಡಲು ಶ್ರಮಿಸುವ ಎಲ್ಲಾ ವ್ಯಕ್ತಿಗಳು ಚಳುವಳಿಗಳು ಸಂಘಟನೆಗಳ ಜತೆ ಕೆಲಸ ಮಾಡ ಬಯಸುತ್ತದೆ ಎಫ್‌ಎಸ್.ಎಂ.ಐ. ಇಂತಹ ಎಲ್ಲರನ್ನು ಎಫ್‌ಎಸ್.ಎಂ.ಐ ಸೇರಲು ಆಹ್ವಾನಿಸಿದೆ.