ಬೆಂಗಳೂರು – ಹುಡುಗಿ

ಬೆಂಗಳೂರು – ಹುಡುಗಿ

ಹೋದ ಸಲ ನಿನ್ನನ್ನು ಭೇಟಿಯಾದಾಗ ನಾವು ಹೇಗಿದ್ದೆವು? ಎಲ್ಲಾ ಹೇಗಿತ್ತು? ಮರೆತೇ ಹೋಗಿದೆ. ಅಂತಹ ದಿನಗಳಿವು. ದೂರದಿಂದಲೇ ಮಾತಾಡುತ್ತಿದ್ದೆವು. ಆದರೂ ಮುಖಾಮುಖಿಯಾಗುವ ಚಂದವೇ ಬೇರೆ ತಾನೆ? ಇದು ನಿನಗೂ ಗೊತ್ತು. ಆದರೂ ನಿನಗೆ ಒಂದು ಗುಟ್ಟು ಹೇಳಬೇಕು. ಇದನ್ನು ಹಿಂಜರಿಕೆಯಿಂದಲೇ ಹೇಳುತಾ ಇದ್ದೀನಿ. ಈ ಸಲ ನಿನ್ನನ್ನ ನೋಡಬೇಕು ಅನ್ನೋ ಉಮೇದು ಯಾಕೋ ಮುಂಚಿನಷ್ಟು ಇಲ್ಲ. ಈ ಸಲ ಎಲ್ಲ ತುಸು ಯಾಂತ್ರಿಕ ಅನ್ನಿಸ್ತಾ ಇದೆ.

ಆದರೂ ನಾನು ಅಲ್ಲಿಗೆ ಬಂದಕೂಡಲೇ ಅಪ್ಪಿಕೋತೀವಿ. ಮುದ್ದಾಡತೀವಿ. ಒಬ್ಬರನ್ನೊಬ್ಬರು ಕಣ್ಣಲ್ಲಿ ಕಣ್ಣಿಟ್ಟು ದೀರ್ಘವಾಗಿ ನೋಡುತೀವಿ. ಕಳೆದ ದಿನಗಳ ಬಗ್ಗೆ, ಅವುಗಳಲ್ಲಿ ಕಳೆದು ಹೋದ ಸಾಧ್ಯತೆಗಳ ನೆನಪಾಗಿ ನಿಟ್ಟುಸಿರು ಬಿಡತೀವಿ ಅಂತೆಲ್ಲಾ ಅನಿಸದೇ ಇಲ್ಲ.  ಇದನ್ನು ನಿರ್ಲಜ್ಜೆಯಿಂದ ಹೇಳಬಲ್ಲೆ. ಯಾಕೆಂದರೆ ನನ್ನೆಲ್ಲಾ ಮಾನಗೆಟ್ಟ ಕೆಲಸಗಳನ್ನು ನೀನು ನೋಡಿದ್ದೀಯ, ನಕ್ಕಿದ್ದೀಯ, ಒಪ್ಪಿಕೊಂಡಿದ್ದೀಯ.

ಈ ಸಲ ನೀನು ಎಂದಿನಂತೆ ಸುಂದರವಾಗಿ ಮಲಗಿರುವಾಗ ಭಾನುವಾರ ನಡುರಾತ್ರಿ ಬಂದು ಇಳಿತೀನಿ. ಆ ಹೊಂಬಣ್ಣದ ದೀಪದ ಬೆಳಕಲ್ಲಿ ಬದಲಾಗಿದ್ದನ್ನು, ಬದಲಾಗದ್ದನ್ನು ನಿದ್ದೆಗಣ್ಣಲ್ಲೇ ಹೀರಿಕೊಳ್ಳುತ್ತಾ ನಿನಗೆ ಎಚ್ಚರವಾಗದಂತೆ ಸದ್ದುಮಾಡದೆ ಮನೆ ಸೇರಿಕೋತೀನಿ.

ಸೋಮವಾರ ಬೆಳಿಗ್ಗೆ ನೀನೆದ್ದು ಕಣ್ಣುಜ್ಜಿಕೊಳ್ಳುವಾಗ ಎದುರಿಗೆ ಬರುತೀನಿ. ನೀನು ನಿರ್ಲಕ್ಷ್ಯದಿಂದ ನನ್ನ ಪರಿಚಯವೇ ಇಲ್ಲವೆಂಬಂತೆ ಮುಖ ತಿರುಗಿಸುತ್ತೀಯ. ನಿನ್ನನ್ನು ಒಲಿಸಿಕೊಳ್ಳಲು ನಾನು ಪಾಡು ಪಡುತೀನಿ. ನನ್ನನ್ನು ಮರೆತದ್ದು ನೆನಪಾಗಿ ನೀನು ಮೆಲ್ಲಗೆ ನಗುವಾಗ ನಾನು ಹೊರಡುವ ದಿನ ಬಂದಿರತ್ತೆ. ಅಷ್ಟರಲ್ಲಿ ನೀನು ನನ್ನನ್ನು ನಿನ್ನದೇ ಗೆರೆಗಳಲ್ಲಿ ಕೊರೆದು ಚಿತ್ರಿಸು, ನಾನು ನಿನ್ನನ್ನ ನನ್ನದೇ ಗೊಗ್ಗರು ದನಿಯ ಹಾಡಲ್ಲಿ ಕಟ್ಟಿ ಹಾಕ್ತೀನಿ.

ಈ ಸಲ ತುಸು ಬೇರೆ ಬಗೆಯಾಗಬಹುದು. ಯಾಕೆಂದರೆ ನಾನೂ ನಿನ್ನಷ್ಟೇ ನಿರ್ಲಕ್ಷದಿಂದ ಇರಬೇಕು, ಹಾಗೆ ಹೀಗೆ ಅಂತ ಅಂದಕೊಂಡಿದ್ದೀನಿ. ಎದುರಾದಾಗ ಏನಾಗುತ್ತದೋ ಅನ್ನೋ ಕುತೂಹಲದಲ್ಲಿ ಇದ್ದೀನಿ. ನನ್ನ ಲೆಕ್ಕಾಚಾರ ತಲೆಕೆಳಗಾಗಬಹುದು ಅನ್ನೋ ಭಯವಿಲ್ಲ. ಏನೋ ನಿರಾಳ ಆವರಿಸಿಕೊಂಡಿದೆ.

ಸಿಗುವ. ನನ್ನ ಚುಂಬನಕ್ಕೆ ಕಾಯುತ್ತಿರು.

Rating
No votes yet