ಬೆಂಗಳೂರೆಂಬ ರಾಕ್ಷಸ ನಗರಿಯೂ, ಭಯೋತ್ಪಾದನೆಯೂ...

ಬೆಂಗಳೂರೆಂಬ ರಾಕ್ಷಸ ನಗರಿಯೂ, ಭಯೋತ್ಪಾದನೆಯೂ...

ಬೆಂಗಳೂರೆಂಬ ರಾಕ್ಷಸ ನಗರಿಯೂ, ಭಯೋತ್ಪಾದನೆಯೂ...
ಹನೀಫ್, ಕಫೀಲ್ ಮತ್ತು ಸಬೀಲ್‌ರೆಂಬ ಮೂವ್ವರು ಸೋದರ ಸಂಬಂಧಿಗಳ ಭಯೋತ್ಪಾದನಾ ಸಾಹಸಗಳ ಸುದ್ದಿಯಿಂದ ಕಂಗೆಟ್ಟಿರುವ ಬೆಂಗಳೂರಿನ ಜನತೆ ತನ್ನ ಇತ್ತೀಚಿನ ಜಾಯಮಾನಕ್ಕೆ ತಕ್ಕಂತೆ, 'ವಿಪ್ರೋ'ದ ಮುಖ್ಯಸ್ಥ ಅಝೀಂ ಪ್ರೇಮ್ಜಿ ಎಂಬ ಪಾರ್ಸಿ ಉದ್ಯಮಿಯ ಮೂಲಕ ತನ್ನ ಆತಂಕವನ್ನು ವ್ಯಕ್ತಪಡಿಸಿದೆ... ಈ ಪ್ರೇಮ್ಜಿ ಪ್ರಕಾರ, ಬೆಂಗಳೂರು ಭಯೋತ್ಪಾದನೆಯ ತಾಣವಾಗುತ್ತಿರುವುದರಿಂದ ಆಗುತ್ತಿರುವ ದೊಡ್ಡ ತೊಂದರೆ ಎಂದರೆ, ತಮ್ಮಂತಹವರೆಲ್ಲ ಸೇರಿ ರೂಪಿಸಿದ್ದ ಬೆಂಗಳೂರೆಂಬ ವಾಣಿಜ್ಯ ಮುದ್ರೆ (Brand)ಗೆ ಧಕ್ಕೆಯೊದಗಿರುವುದು! ಇನ್ನು ಈ ಹೊತ್ತಿಗಾಗಲೇ ಈ ವಿಷಯದಲ್ಲಿ ಬಾಯಿ ಹಾಕಿ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಬೇಕಿದ್ದ ಇನ್ಫೋಸಿಸ್ನ ನಾರಾಯಣ ಮೂರ್ತಿಯವರು ಇತ್ತೀಚೆಗೆ ರಾಷ್ಟ್ರಗೀತೆ ಗಾಯನದ ಅಧಿಕ ಪ್ರಸಂಗದ ಮೊಕದ್ದಮೆಯನ್ನು ಕುತ್ತಿಗೆಗೆ ತೂಗು ಹಾಕಿಕೊಂಡಿರುವುದರಿಂದಾಗಿ ಸದ್ಯಕ್ಕೆ ಬಾಯಿ ಮುಚ್ಚಿಕೊಂಡಿರುವರಾದರೂ, ಅವರ ವಕ್ತಾರರು ತಮ್ಮ ಕಂಪನಿಯ ವಿಸ್ತರಣೆ ಇನ್ನು ಪುಣೆಯಲ್ಲಿ ಎಂದು ಹೇಳುವ ಮೂಲಕ ಬೆಂಗಳೂರನ್ನು ಕುರಿತ ತಮ್ಮ ಅಸಮಧಾನವನ್ನು ತೋಡಿಕೊಂಡಿದ್ದಾರೆ. ಇದಕ್ಕೆ ಅವರು ಅಭದ್ರತೆಯ ಕಾರಣ ನೀಡಿಲ್ಲವಾದರೂ, ಮೂಲ ಸೌಲಭ್ಯಗಳನ್ನು ಒದಗಿಸುವಲ್ಲಿ ಸರ್ಕಾರದ ವೈಫಲ್ಯವನ್ನು ಅವರು ಮುಂದು ಮಾಡಿದ್ದಾರೆ. ಇನ್ನು ಬಿ.ಟಿ. ರಾಣಿ ಕಿರಣ್ ಮಜುಂದಾರ್‌ದೇನೂ ಸುದ್ದಿಯಿಲ್ಲ. ಬಹುಶಃ ಆಕೆ ಅನಂತಮೂರ್ತಿಯವರು ಕೊಡಲಾಗದ ಕೊಡುಗೆಯನ್ನು ಬೆಂಗಳೂರಿಗೆ ಕೊಟ್ಟೇ ಬೆಂಗಳೂರು ಬಿಡುವ ನಿರ್ಧಾರ ಮಾಡುವರೆಂದು ಕಾಣುತ್ತದೆ! ಒಟ್ಟಿನಲ್ಲಿ ಬೆಂಗಳೂರು ತನ್ನ ಬೆಳವಣಿಗೆಯಲ್ಲಿ ಸೋಲುತ್ತಿರುವ ಸೂಚನೆಗಳು ಬರತೊಡಗಿವೆ... ಏಕೆ?

ಬೆಂಗಳೂರೀಗ ಕನ್ನಡದ ರಾಜಧಾನಿಯಾಗಿದ್ದರೆ ಅದು ವಾಟಾಳ್ ನಾಗರಾಜ್ ಮತ್ತು ಕರ್ನಾಟಕ ರಕ್ಷಣಾ ವೇದಿಕೆಯವರಿಗೆ ಮಾತ್ರ. ಇತರರಿಗೆಲ್ಲ ಅದು ಜಗತ್ತಿನ ಎಲ್ಲರಿಗೂ ಸೇರಿದ ಜಾಗತಿಕ ನಗರ! ಹಾಗಾಗಿ ಬೆಂಗಳೂರೆಂಬುದು ಒಂದು ಜಾಗತಿಕ ವಾಣಿಜ್ಯ ಮುದ್ರೆ . ಈ ಮುದ್ರೆ ಬಿದ್ದದ್ದು ಐ.ಟಿ. ಅಥವಾ ಬಿ.ಟಿ. ಬಂದ ಮೇಲೆ ಎಂಬುದು ನಿಜವಾದರೂ, ಇದರ ಅಚ್ಚು ಸಿದ್ಧವಾಗತೊಡಗಿದ್ದು ದೇವರಾಜ ಅರಸರ ಕಾಲದಲ್ಲಿ ಬಿ.ಟಿ.ಸೋಮಣ್ಣ ಬೆಂಗಳೂರು ನಗರಾಭಿವೃದ್ಧಿ ಮಂಡಳಿಯ ಅಧ್ಯಕ್ಷರಾಗಿ ಆರಂಭಿಸಿದ ನಿವೇಶನ ಹಂಚಿಕೆಯ ಅವ್ಯವಸ್ಥೆಯೊಂದಿಗೆ. ನಗರಾಭಿವೃದ್ಧಿ ಎಂದರೆ ಕೇವಲ ಭೌಗೋಳಿಕ ವಿಸ್ತರಣೆ ಎಂಬ ಸರಳಾರ್ಥದಲ್ಲಿ, ಸಿಕ್ಕ ಸಿಕ್ಕವರಿಗೆ ಎಲೆಯಡಿಕೆ ಮಡಿಚಿ ಕೊಟ್ಟಂತೆ ನಿವೇಶನ ಮಂಜೂರು ಮಾಡುವ ಸೋಮಣ್ಣನವರ ಹುಂಬತನದಿಂದಾಗಿ ಬೆಂಗಳೂರು ಮುಂದಿನ ಹತ್ತಿಪ್ಪತ್ತು ವರ್ಷಗಳಲ್ಲಿ ಎಂತಹ ನಗರವಾಗಿ ಬೆಳೆಯ ಬೇಕೆಂಬ ಕಲ್ಪನೆಯೇ ಅಭಿವೃದ್ಧಿ ಚಿತ್ರದ ಚೌಕಟ್ಟಿನಿಂದ ಮರೆಯಾಗಿ ಹೋಯಿತು. ಮುಂದೆ ಇದು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವೆಂದಾದ ಮೇಲಂತೂ, ಇದರ ಅಧ್ಯಕ್ಷತೆ ಎಂದರೆ ಕಾಸು ಮಾಡಿಕೊಳ್ಳುವ ಮತ್ತು ಮಾಡಿಕೊಡುವ ಫಲವತ್ತಾದ ಜಾಗವಾಗಿ ಮಾರ್ಪಾಡಾದ ಕಾರಣ, ಬೆಂಗಳೂರು ಅಭಿವೃದ್ಧಿ ಎಂಬುದು ಒಂದು ಬೃಹತ್ ರಿಯಲ್ ಎಸ್ಟೇಟ್ ದಂಧೆಯಾಗಿ, ಬೆಂಗಳೂರು ನಗರ ಸಂಪೂರ್ಣ ಹೊರಗಿನ ವಾಣಿಜ್ಯ ಶಕ್ತಿಗಳ ವಸಾಹತುವಾಗಿ ರೂಪುಗೊಳ್ಳತೊಡಗಿತು.

ತೊಂಭತ್ತರ ದಶಕದಲ್ಲಿ ಜಾಗತೀಕರಣ ಆರಂಭವಾಗುವ ಮುನ್ನವೇ, ಬೆಂಗಳೂರು ಕೇಂದ್ರವನ್ನು ಕಳೆದುಕೊಂಡ ವೃತ್ತದಂತೆ ಅಸ್ಥಿರವಾಗಿ ಬೆಳೆಯತೊಡಗಿತ್ತು. ಬೆಂಗಳೂರಿನ 'ಪರಿಮಳ' ನಾಶವಾಗಿ ಮೂಲ ಬೆಂಗಳೂರಿಗರೇ ಇಲ್ಲಿ ಅನಾಥರಂತೆ ಓಡಾಡಬೇಕಾದ ಸಾಂಸ್ಕೃತಿಕ ಸ್ಥಿತ್ಯಂತರವೊಂದು ನಡೆಯತೊಡಗಿತ್ತು. ಬಹು ಹಿಂದಿನಿಂದಲೂ, ತೆಲುಗರು, ತಮಿಳರು ಮಾತ್ರವಲ್ಲ, ಮರಾಠರು ಮತ್ತು ಗುಜರಾತಿಗಳು ಸೇರಿದಂತೆ ಅನೇಕ ಜಾತಿ - ಜನಾಂಗಗಳು ಬೆಂಗಳೂರಲ್ಲಿ ನೆಲೆಸಿ, ಕನ್ನಡಿಗರೊಂದಿಗೆ ಸೇರಿ ರೂಪಿಸಿದ ಒಂದು ಸಾಮಾನ್ಯ ಜೀವನ ಕ್ರಮದ ಮೂಲಕ ನಗರಕ್ಕೆ ತನ್ನದೇ ಆದ ಒಂದು ಸಾಂಸ್ಕೃತಿಕ ಪರಿಮಳವನ್ನು ಸೃಷ್ಟಿಸಿದ್ದವು. ಆದರೆ ಎಪ್ಪತ್ತರ ದಶಕದಲ್ಲಿ ಕರ್ನಾಟಕದ ರಾಜಕಾರಣದಲ್ಲಿ ಹಣದ ಪ್ರಭಾವ ಹೆಚ್ಚಿದಂತೆ ಬೆಂಗಳೂರಿನ ಈ ಪರಿಮಳ ನಾಶವಾಗತೊಡಗಿತು. ವಿಪರೀತ ಹಣದ ಆಕರ್ಷಣೆಗೆ ಒಳಗಾದ ನಮ್ಮ ಆಡಳಿತಗಾರರು ನಗರವೊಂದರ ಅಭಿವೃದ್ಧಿಯ ಪರಿಕಲ್ಪನೆಯಲ್ಲಿ ರಸ್ತೆ, ನೀರು, ಚರಂಡಿ, ದೀಪ, ಉದ್ಯಾನಗಳ ಜೊತೆಗೇ ಅದರ ಮೂಲ ಸಂಸ್ಕೃತಿಯ ಸಂರಕ್ಷಣೆಯ ಅಂಶವೂ ಸೇರಿರಬೇಕೆಂಬ ಅರಿವನ್ನೇ ಕಳೆದುಕೊಂಡು, ಹಣದ ಥೈಲಿ ತಂದವರಿಗೆಲ್ಲಾ ಒಂದಲ್ಲ ಒಂದು ನೆಪದಲ್ಲಿ ನಿವೇಶನ - ಭೂಮಿಯನ್ನು ಹಂಚುತ್ತಾ ಹೋಗಿ, ಇಂದು ಬೆಂಗಳೂರನ್ನು ಒಂದು ರಾಕ್ಷಸ ನಗರಿಯನ್ನಾಗಿ ಪರಿವತರ್ಿಸಿದ್ದಾರೆ.

ಬೆಂಗಳೂರು ಹೊರಕ್ಕೆ ಚಾಚಿಕೊಂಡಷ್ಟೂ ಒಳಕ್ಕೆ ಹಿಚುಕಿಕೊಳ್ಳುತ್ತಾ ಹೋಗುತ್ತಿದ್ದರೆ, ಭೌಗೋಳಿಕವಾಗಿ ವಿಸ್ತರಿಸಿಕೊಂಡಷ್ಟೂ ಅದರೊಳಗಿನ ಜನಕ್ಕೆ ಉಸಿರುಗಟ್ಟುತ್ತಾ ಹೋಗುತ್ತಿದ್ದರೆ ಅದಕ್ಕೆ ಕಾರಣ, ಅದರ ಅಸಮರ್ಪಕ ರಸ್ತೆ - ಸಾರಿಗೆ - ನೀರು - ವಿದ್ಯುತ್ - ಚರಂಡಿ ಇತ್ಯಾದಿ ವ್ಯವಸ್ಥೆಗಳಿಗಿಂತ ಹೆಚ್ಚಾಗಿ, ಅದರ ಸ್ಥಳೀಯ ಸಂಸ್ಕೃತಿಯ ಅಡಿಗಲ್ಲೇ ಅಲುಗಾಡಿ ಹೋಗಿರುವುದೇ ಕಾರಣವಾಗಿದೆ. ಇಂದು ಬೆಂಗಳೂರಿನಲ್ಲಿ ಬೆಂಗಳೂರಿಗನೇ ಅಪರಿಚಿತ - ಅಭದ್ರ! ಅವನ ಭಾಷೆಯಿಂದ ಹಿಡಿದು ಅವನ ಜೀವನ ಕ್ರಮ, ಶೈಲಿ, ಲಯ, ದೃಷ್ಟಿಗಳೆಲ್ಲವೂ ಕಳೆದ ಇಪ್ಪತ್ತು ವರ್ಷಗಳಲ್ಲಿ ಬಂದು ನಗರವನ್ನು ಆಕ್ರಮಿಸಿಕೊಂಡ ಹೊರಗಿನ ಜನಸ್ತೋಮದ ಎದುರು ಗುಜರಿಯಾಗಿ ಹೋದಂತೆ ಕಾಣುತ್ತಿದೆ... ಇದು ಯಾವುದೇ ಜನವಸತಿ ಬೆಳೆಯುವ ರೀತಿಯಲ್ಲ. ಹೊರಗಿನಿಂದ ಬಂದವರು ಮೂಲ ಸಂಸ್ಕೃತಿಯಲ್ಲಿ ಬೆರೆತು ಅದಕ್ಕೆ ಕೊಡುಗೆಗಳನ್ನು ಸಲ್ಲಿಸಿ ಅದನ್ನು ಬೆಳೆಸುವಂತಾಗಬೇಕು. ಅದನ್ನು ವಿಕಾಸ ಎಂದು ಕರೆಯಬಹುದು. ಆದರೆ ಕಳೆದ ಹದಿನೈದು - ಇಪ್ಪತ್ತು ವರ್ಷಗಳಲ್ಲಿ ಬೆಂಗಳೂರಲ್ಲಿ ಅಭಿವೃದ್ಧಿಯ ಹೆಸರಿನಲ್ಲಿ ನಡೆದಿರುವುದು ಸಾಂಸ್ಕೃತಿಕ ಆಕ್ರಮಣ. ಇಂದು ಬೆಂಗಳೂರು ಒಂದು ಊರಾಗಿ ಉಳಿದಿಲ್ಲ. ಬದಲಿಗೆ ಹಲವು 'ಸಂಸ್ಕೃತಿ'ಗಳ ಮೇಲಾಟದಲ್ಲಿ ತೊಡಗಿರುವ ಯುದ್ಧಭೂಮಿಯಂತೆ ಕಾಣುತ್ತಿದೆ. ಇದು ನಗರ ಜೀವನದ ಚಲನಾತ್ಮಕತೆಯ ದೃಷ್ಟಿಯಿಂದ ಅನಪೇಕ್ಷಣೀಯವಲ್ಲವಾದರೂ, ಈ 'ಸಂಸ್ಕೃತಿ'ಗಳು ಮೂಲತಃ ವಾಣಿಜ್ಯೋದ್ದೇಶಗಳ ಸಂಸ್ಕೃತಿಗಳಾಗಿರುವುದರಿಂದ, ಇಂತಹ ಮೇಲಾಟದಲ್ಲಿ ಉದ್ಭವವಾಗುವುದು ಅಮೃತಕ್ಕಿಂತ ವಿಷವೇ ಹೆಚ್ಚು. ಇದು ಇತ್ತೀಚಿನ ದಿನಗಳಲ್ಲಿ ಬೆಂಗಳೂರಿನ ಜನಜೀವನ ಎದುರಿಸುತ್ತಿರುವ ಭಯಂಕರ ಸವಾಲುಗಳಿಂದಲೇ ಸ್ಪಷ್ಟವಾಗುತ್ತಿದೆ.

ಬಡ ಹಾಗೂ ಮಧ್ಯಮ ವರ್ಗದವರ ಪಾಲಿಗೆ ಕ್ಷಿಪ್ರ ಗತಿಯಲ್ಲಿ ಏರುತ್ತಿರುವ ಜೀವನ ವೆಚ್ಚ, ಇದ್ದಕ್ಕಿದ್ದಂತೆ ಸೃಷ್ಟಿಯಾಗುತ್ತಿರುವ ಕಣ್ಣು ಕೋರೈಸುವಂತಹ ಅತಿ ಸಮೃದ್ಧಿಯ ದ್ವೀಪಗಳು, ಇವು ಉದ್ದೀಪಿಸುವ 'ದುಡಿಮೆ'ಯ ಅಡ್ಡದಾರಿಗಳು, ಇದರ ಪರಿಣಾಮವಾಗಿ ಆರಂಭವಾಗಿರುವ ವೈವಿಧ್ಯಮಯ, ನವ ನವೀನ ಹಾಗೂ ಕಲ್ಪನಾತೀತ ಅಪರಾಧಗಳು, ಇವಕ್ಕೆಲ್ಲ ನೆಲೆಯೊದಗಿಸುತ್ತಿರುವ ವಿಕೃತ ಮನರಂಜನಾ ತಾಣಗಳು, ಶಾಂತಿ ಸಾಧನೆಯ ವ್ಯಾಪಾರಿ ಕೇಂದ್ರಗಳು, ವ್ಯಕ್ತಿಗಳು ಮತ್ತು ಸಂಸ್ಥೆಗಳು ರೂಪಿಸಿಕೊಳ್ಳುತ್ತಿರುವ ಖಾಸಗಿ ಭದ್ರತಾ ವ್ಯವಸ್ಥೆಗಳು - ಹೀಗೆ, ಬೆಂಗಳೂರು ಕೇಂದ್ರ ಕಳೆದುಕೊಂಡ ಒಂದು'ಸಂಸ್ಕೃತಿ'ಯಂತೆ 'ಅನಾಗರಿಕ'ವಾಗಿ ಬೆಳೆಯತೊಡಗಿದೆ. ಆದರೆ ನಮ್ಮ ಆಡಳಿತಗಾರರು ಇದೇ ಹೊಸ ನಾಗರಿಕ ಜೀವನವೆಂಬಂತೆ, ಇದಕ್ಕೊಂದು ಸುವ್ಯವಸ್ಥಿತ ರೂಪ ಕೊಡಲು 'ಬೃಹತ್ ಬೆಂಗಳೂರು' ಎಂಬ ಸಾವಿರಾರು ಕೋಟಿ ರೂಪಾಯಿಗಳ ವೆಚ್ಚದ ಹೊಸ ಯೋಜನೆಯನ್ನು ಪ್ರಕಟಿಸಿದೆ! ಆದರೆ ಬೆಂಗಳೂರಿಗಿಂತ ಪ್ರಾಚೀನವಾದ ಹಾಗೂ ದೊಡ್ಡದಾಗಿ ಬೆಳೆಯುತ್ತಿರುವ ಕೊಲ್ಕತ್ತಾವಾಗಲಿ ಅಥವಾ ಚೆನ್ನೈಯಾಗಲಿ ಹೀಗೆ ತಂತಮ್ಮ ಮೂಲ ಚಹರೆಗಳನ್ನು ಕಳೆದುಕೊಂಡು ದೆವ್ವದಂತಹ ನಗರಗಳಾಗಿ, ಅಲ್ಲಿನ ಜನಜೀವನದ 'ಶೀಲ'ದಲ್ಲಿ ಬಿರುಕು ಮೂಡಿಸಿಲ್ಲ. ಈ ನಗರಗಳ ಅಥವಾ ಬೆಂಗಳೂರಿನ ಜೊತೆ ಸ್ಪರ್ಧಿಸಿ ಸರಿಸಮವಾಗಿ ಬೆಳೆಯುತ್ತಿರುವ ಹೈದರಾಬಾದಿನ ಯಾವ ಮೂಲೆಗೆ ಹೋದರೂ, ಅಲ್ಲಿನ ಸ್ಥಳೀಯತೆಯ ಪರಿಮಳ ಅಲ್ಲಿನ ಜೀವನ ಕ್ರಮಗಳ ವಿವಿಧ ಮಾದರಿಗಳ ಮೂಲಕ ನಿಮ್ಮ ಪಂಚೇದ್ರಿಯಗಳಿಗೆ ರಾಚುತ್ತದೆ.

ಈ ಎಲ್ಲ ಮಾದರಿಗಳಿಗೆ ಮೂಲಾಧಾರ ಅಲ್ಲಿನ ಭಾಷೆ. ಬೆಳವಣಿಗೆಯ ಭಾಗವಾಗಿ ನಗರಕ್ಕೆ ಬಂದ ಹೊಸ ಸಂಸ್ಕೃತಿಗಳು ಈ ಭಾಷೆಯ ಮೂಲಕ ಸ್ಥಳೀಯ ಚಹರೆಗಳನ್ನು ಪಡೆದುಕೊಳ್ಳುತ್ತವೆ. ಇಲ್ಲಿ ಭಾಷೆಯೆಂದರೆ ಕೇವಲ ಶಬ್ದಗುಚ್ಛವಲ್ಲ; ಒಂದು ಸಂಸ್ಕೃತಿ ಸಂವಹನ ಮಾಧ್ಯಮ. ನಿಮ್ಮ ಸಾಹಿತ್ಯ, ನಿಮ್ಮ ಸಂಗೀತ, ನಿಮ್ಮ ಮನರಂಜನೆ, ನಿಮ್ಮ ಹಬ್ಬ ಹರಿದಿನಗಳು, ನಿಮ್ಮ ರಾಜಕಾರಣ ಎಲ್ಲವೂ ಈ ಸಂವಹನಕ್ಕೀಡಾಗಿ ಅದೆಲ್ಲವೂ ನಮ್ಮದು ಕೂಡ ಎನಿಸಿಕೊಳ್ಳುತ್ತದೆ. ಈ ಊರುಗಳಲ್ಲಿ ಎಲ್ಲಿಗೆ ಹೋದರೂ, ಹೊರ ರೂಪಗಳಲ್ಲ್ಲಿ ವೈವಿಧ್ಯ - ಏರುಪೇರುಗಳು ಕಂಡರೂ ಒಳಗಿನ ಸತ್ವ ಒಂದೇ ಆಗಿರುತ್ತದೆ - ಅದು ಬಂಗಾಳಿ ಸಂಸ್ಕೃತಿ , ತಮಿಳು ಸಂಸ್ಕೃತಿ ಅಥವಾ ಆಂಧ್ರ ಸಂಸ್ಕೃತಿ. ಇದು ಅಲ್ಲಿ ಸಾಧ್ಯವಾಗಿರುವುದು ನಗರಾಭಿವೃದ್ಧಿಯನ್ನು ಸಂಸ್ಖೃತಿ ಸಂರಕ್ಷಣೆಯನ್ಣು ದೃಷ್ಟಿಯಲ್ಲಿಟ್ಟುಕೊಂಡು ಕೈಗೊಂಡಿರುವ ಸ್ಥಳೀಯ ವಿವೇಕದಿಂದಾಗಿ. ಯಾವುದೇ ಲೌಕಿಕ ಅಭಿವೃದ್ಧಿ ಸ್ಥಿರವಾಗಿರುವುದು ಸಾಂಸ್ಕೃತಿಕ ಅಡಿಪಾಯದ ಮೇಲೆ ಎಂಬ ಮುನ್ನೋಟ ಅಲ್ಲಿನ ಸ್ಥಳೀಯರಲ್ಲಿ ಆ ಮೂಲಕ ಅಲ್ಲಿನ ಆಡಳಿತಗಾರರ ಮನದಲ್ಲಿ ಮನೆ ಮಾಡಿರುವುದರಿಂದಾಗಿ. ಆದರೆ ಬೆಂಗಳೂರಿನ ಸುಖದಾಯಕ ಹವಾಮಾನದಿಂದಾಗಿ ಮೈ ಮರೆತುಹೋದಂತಿರುವ ನಮ್ಮ ಜನ ಹಾಗೂ ಆಡಳಿತಗಾರರಿಬ್ಬರೂ ಬೆಂಗಳೂರನ್ನು ಹೊರಗಿನವರಿಗೆ ದತ್ತು ಕೊಟ್ಟಂತಿದೆ. ಹಾಗಾಗಿಯೇ ಇಂದು ಬೆಂಗಳೂರಲ್ಲಿ ಕನ್ನಡ ಸಂಸ್ಕೃತಿ ಹೋಗಲಿ, ಬೆಂಗಳೂರು ಸಂಸ್ಕೃತಿ ಎಂಬುದೂ ಕಾಣೆಯಾಗಿ; ಸರ್ಕಾರದ ಪರವಾಗಿ 'ಬೆಂಗಳೂರು ಹಬ್ಬ'ವನ್ನು ಆಚರಿಸುವವರು ಅಪ್ಪಟ ಪರದೇಶಿಗಳಂತೆ ಕಾಣುತ್ತಿರುವುದು!

ನನ್ನ ಕಾಲೇಜು ಶಿಕ್ಷಣದ ನಂತರ ಮುವ್ವತ್ತು ವರ್ಷಗಳ ಹಿಂದೆ ಬಿಟ್ಟು ಬಂದ ಮತ್ತು ಆಗಾಗ್ಗೆ ಅನಿವಾರ್ಯವಾದಾಗ ಮಾತ್ರ ಭೇಟಿ ನೀಡುವ ಬೆಂಗಳೂರಿನ ಬಗ್ಗೆ ನಾನು ಇಷ್ಟು ವಿಸ್ತಾರವಾಗಿ ಯೋಚಿಸುವಂತಾದ್ದು, ಮೊನ್ನೆ ಟಿ.ವಿ. ನೋಡುತ್ತಿದ್ದಾಗ ಹನೀಫ್ ಮತ್ತು ಕಫೀಲನ ಮನೆಯವರೆಲ್ಲರೂ - ಆತನ ತಾಯಿಯ ಹರಕು ಮುರುಕು ಕನ್ನಡದ ಹೊರತಾಗಿ - ಕನ್ನಡವೇ ಬಾರದಂತೆ ಸ್ಥಳೀಯ ಮಾಧ್ಯಮದವರೊಂದಿಗೂ ಉರ್ದು ಅಥವಾ ಇಂಗ್ಲಿಷ್ನಲ್ಲೇ ಮಾತನಾಡಿದ್ದನ್ನು ಕಂಡಾಗ. ಇವರಲ್ಲಿ ಬಹುತೇಕರು ನಮ್ಮ ಮಲೆನಾಡಿನ ಮೂಲೆಯ ಹಳ್ಳಿಗಳಲ್ಲಿ ಹುಟ್ಟಿ ಬೆಳೆದವರು. ಆದರೂ ಮನೆಯಲ್ಲಿ ಕನ್ನಡದ ಗಂಧವೇ ಇಲ್ಲವೆಂದರೆ? ಈ ಪ್ರಶ್ನೆಯನ್ನು ನಾನು ಕನ್ನಡಾಭಿಮಾನದ ಪ್ರಶ್ನೆಯಾಗಿ ಖಂಡಿತ ಎತ್ತುತ್ತಿಲ್ಲ. ಅದಕ್ಕೆ ಇದು ಸಂದರ್ಭವೂ ಅಲ್ಲ. ಬದಲಿಗೆ ಹೇಗೆ ಒಂದು ಸಮುದಾಯ ತನ್ನ ಸುತ್ತಲಿನ ಭಾಷೆಯ ಬಗ್ಗೆ ಕುರುಡು ಬೆಳೆಸಿಕೊಂಡು ಇಡಿಯಾದ ಸಮಾಜದೊಂದಿಗೆ ಸಂವಾದವನ್ನೇ ಕಳೆದುಕೊಳ್ಳುತ್ತಾ ಒಂದು ಸಾಂಸ್ಕೃತಿಕ ದ್ವೀಪವಾಗಿ ಉಳಿಯುವ ಮೂಲಕ ತನಗೇ ಗೊತ್ತಿಲ್ಲದಂತೆ ಮೂಲಭೂತವಾದದಲ್ಲಿ ಸೆರೆಯಾಗಬಲ್ಲುದು ಎಂಬುದನ್ನು ಸೂಚಿಸಲು ಮಾತ್ರ. ಹಾಗೇ, ಬೆಂಗಳೂರು ಹೀಗೆ ಒಂದು ಸಾಮಾನ್ಯ ಸಾಂಸ್ಕೃತಿಕ ಚಹರೆಯೇ ಇಲ್ಲದ ನಗರವಾಗಿ ಬೆಳೆಯುವ ಮೂಲಕ ಇಂತಹ ಅನೇಕ ಅಜ್ಞಾತ ಸಾಂಸ್ಕೃತಿಕ ದ್ವೀಪಗಳಿಗೆ ಸುರಕ್ಷಿತ ನೆಲೆಯೊದಗಿಸುತ್ತಾ, ತನ್ನ ಒಡಲಿನ ತುಂಬಾ ಅದೆಷ್ಟು ಅಸಮಾಧಾನ - ಅತೃಪ್ತಿಗಳ ಆಸ್ಫೋಟನಕಾರಿ ಸಿಡಿಮದ್ದುಗಳನ್ನು ತುಂಬಿಕೊಂಡಿರಬಹುದು ಎಂಬ ಆತಂಕ ವ್ಯಕ್ತಪಡಿಸಲು ಮಾತ್ರ.

ಇಂದು ಬೆಂಗಳೂರು ಮುಸ್ಲಿಂ ಮೂಲಭೂತವಾದಿ ಭಯೋತ್ಪಾದಕರ ಒಂದು ಮುಖ್ಯ ಕೇಂದ್ರವಾಗಿ ಬೆಳೆಯುತ್ತಿದೆ ಎಂಬ ಪ್ರಚಲಿತ ಅನುಮಾನದ ಹಿನ್ನೆಲೆಯಲ್ಲಿ ಹೇಳುವುದಾದರೆ, ಮೊದಲಿಗೆ ಕರ್ನಾಟಕದ ಮುಸ್ಲಿಂ ಸಮುದಾಯ ನಿಸ್ಸಂಕೋಚವಾಗಿ ತನ್ನ ಒಳಗನ್ನೊಮ್ಮೆ ಸಂಪೂರ್ಣವಾಗಿ ಪರಿಶೀಲಿಸಿಕೊಳ್ಳಬೇಕಿದೆ. ಹೊರಗಿನ ಮೂಲಭೂತವಾದಿಗಳ ಪ್ರಚಾರಕ್ಕೆ ಮನಸ್ಸು ಕೊಡುವಂತಹ ದೌರ್ಬಲ್ಯಗಳು ತನ್ನಲ್ಲೇನಿವೆ ಮತ್ತು ಇದ್ದರೆ ಅವಕ್ಕೇನು ಕಾರಣ ಎಂಬುದನ್ನು ಪರಿಶೀಲಿಸಿಕೊಳ್ಳಬೇಕಿದೆ. ಅನೇಕ ಉದಾರವಾದಿ ಮುಸ್ಲಿಂ ಸ್ನೇಹಿತರನ್ನು ಹೊಂದಿರುವ; ಆದರೆ ಇತ್ತೀಚಿನ ಪ್ರಕ್ಷುಬ್ಧ ಕೋಮುವಾದಿ ವಾತಾವರಣದಲ್ಲಿ ಅವರೆಲ್ಲ ಒಂದಿಷ್ಟು ವಿಚಲಿತರೂ, ಖಿನ್ನರೂ ಆಗಿರುವುದನ್ನು ನೋಡುತ್ತಿರುವ ನನಗೆ, ಕರ್ನಾಟಕದ ಮುಸ್ಲಿಮರು ತಮ್ಮ ಮಕ್ಕಳು ಮೂಲಭೂತವಾದಿಗಳ ಪ್ರಭಾವಕ್ಕೆ ಸಿಗದಂತೆ ತಡೆಯಲು ಬಳಸಬಹುದಾದ ಸುಲಭ ಸಾಧನವಾಗಿ ಕಾಣುತ್ತಿರುವುದೆಂದರೆ ಕನ್ನಡ ಭಾಷೆ. ಕರಾವಳಿ (ಹಾಗೂ ಕನ್ನಡವನ್ನೇ ಮನೆಮಾತಾಗುಳ್ಳ ಪಿಂಜಾರರನ್ನು) ಬಿಟ್ಟರೆ, ಕರ್ನಾಟಕದ ಉಳಿದ ಭಾಗಗಳಲ್ಲಿ ಮುಸ್ಲಿಮರಲ್ಲಿ ಬಹುಪಾಲು ಜನ ಕನ್ನಡದಿಂದ ದೂರವೇ ಉಳಿದಿದ್ದಾರೆ. ಶಿವಮೊಗ್ಗದಂತಹ ಅಚ್ಚ ಕನ್ನಡ ಊರಿನಲ್ಲೂ ಕನ್ನಡ ಬಾರದ ಮುಸ್ಲಿಮರಿದ್ದಾರೆಂದರೆ? ಹೀಗಾಗಿಯೇ ಇವರು ಮುಚ್ಚಿಕೊಂಡ ಸಮಾಜಗಳಾಗಿ ತಮ್ಮ ಮಕ್ಕಳಿಗೆ - ಮೊಮ್ಮಕ್ಕಳಿಗೆ ಲಾಡೆನ್ ಎಂದೋ ಸದ್ದಾಂ ಎಂದೋ ಹೆಸರಿಟ್ಟುಕೊಂಡು ಹೆಮ್ಮೆ ಪಡುವ ಅವಿವೇಕದಲ್ಲಿ ಬಾಳುತ್ತಾ, ಹಿಂದೂ ಕೋಮುವಾದಿಗಳನ್ನು ಕೆರಳಿಸಬಲ್ಲವರಾಗಿದ್ದಾರೆ.

ಈ ಅವಿವೇಕವನ್ನು, ತಮ್ಮದೇ 'ಅಜೆಂಡಾ'ದ ಕಾರಣದಿಂದಾಗಿ ಸಲ್ಲದ ವಿವರಣೆ ನೀಡುತ್ತಾ ಸಮರ್ಥಿಸುವ ಕೆಲವು ಬೇಜವಾಬ್ದಾರಿ 'ಜಾತ್ಯತೀತ' ಗುಂಪುಗಳೂ ನಮ್ಮ ಮದ್ಯೆ ಇವೆ. ಇವು ಮಾರುವೇಷದ ಮುಸ್ಲಿಂ ಕೋಮುವಾದಿ ಗುಂಪುಗಳ ಸಹಚರಿಗಳಲ್ಲದೆ ಮತ್ತೇನಲ್ಲ ಎಂದು ಅರಿತು ಮುಸ್ಲಿಮರು ಕನ್ನಡ ಕಲಿಯಲು, ಅದರಲ್ಲಿ ಅಭಿವ್ಯಕ್ತಿ ಸಾಧಿಸಲು ಪ್ರಯತ್ನಿಸಬೇಕಿದೆ. ಆ ಮೂಲಕ ತನ್ನಾಚೆಯ ಸಮಾಜದೊಂದಿಗೂ ಸಂವಾದ ಸಾಧ್ಯವಾಗಿ ದೃಷ್ಟಿ ದಿಗಂತಗಳು ವಿಸ್ತರಿಸಿಕೊಳ್ಳುತ್ತವೆ. ಧರ್ಮವನ್ನು ಕೂಡ ತನ್ನದೇ ಕಣ್ಣುಗಳಿಂದ ನೋಡುವ ಧೈರ್ಯ ಮತ್ತು ಸಾಮಥ್ರ್ಯ ಒದಗಿ ಬರುತ್ತದೆ. ಹುಂಬ ಹುಂಬಾಗಿ, ರಾಜಕೀಯವಾಗಿ ತನ್ನ ವಿರುದ್ಧವೇ ಇರಬಹುದಾದ ಜಾಗತಿಕ ಇಸ್ಲಾಂ ಜೊತೆಗೆ ಗುರುತಿಸಿಕೊಂಡು ತಾನಿರುವ ಪ್ರದೇಶದಲ್ಲೇ ವಿಕಾಸಗೊಂಡ ಇಸ್ಲಾಮನ್ನು ಮರೆಯುವ ವಿಸ್ಮೃತಿಗೆ ಒಳಗಾಗುವುದು ತಪ್ಪುತ್ತದೆ. ಹೀಗಾಗಿ ಕನ್ನಡ ಶಿಕ್ಷಣವೆನ್ನುವುದು ಮುಸ್ಲಿಮರಲ್ಲಿ ಭಯೋತ್ಪಾದನೆಯನ್ನು ಪ್ರಚೋದಿಸುವ ಮೂಲಭೂತವಾದದ ವಿರುದ್ಧ ಒಂದು ಪ್ರತಿರೋಧ ಶಕ್ತಿಯಾಗಿ ಕೆಲಸ ಮಾಡಬಲ್ಲುದಾಗಿದೆ. ಈ ರೀತಿಯಲ್ಲಿ ಸ್ಥಳೀಯ ಸಂಸ್ಕೃತಿಯೊಂದಿಗೆ ಒಂದಾಗಲೇಬೇಕಾದ ಅನಿವಾರ್ಯತೆಯಿರುವ ಚೆನ್ನೈ ಅಥವಾ ಕೊಲ್ಕೊತ್ತಾದಂತಹ ನಗರಗಳಲ್ಲಿ ಸ್ಥಳೀಯರಿಂದ ಕುಮ್ಮಕ್ಕು ಪಡೆದ ಭಯೋತ್ಪಾದನೆಯ ಚಟುವಟಿಕೆ ಇಲ್ಲವೇ ಇಲ್ಲವೆನ್ನುವಷ್ಟು ಕಡಿಮೆ ಎಂಬುದನ್ನೂ ನಾವು ಗಮನಿಸಬಹುದಾಗಿದೆ. ಆದುದರಿಂದ ಬೆಂಗಳೂರಲ್ಲಿ ಭಯೋತ್ಪಾದನೆ ವಿರುದ್ಧದ ಕಾರ್ಯಕ್ರಮದಲ್ಲಿ ಮುಸ್ಲಿಮರೂ ಸೇರಿದಂತೆ ಎಲ್ಲ ಕನ್ನಡೇತರರಿಗೆ ಕನ್ನಡ ಕಲಿಕೆಯನ್ನೂ ಒಂದಂಶವನ್ನಾಗಿ ಅಳವಡಿಸಿಕೊಳ್ಳುವಂತೆ ಸರ್ಕಾರದ ಮೇಲೆ ಒತ್ತಾಯ ಹೇರಬೇಕಿದೆ. ಬೆಂಗಳೂರಿನ ಸಾಂಸ್ಕೃತಿಕ ಪುನರುಜ್ಜೀವನ ಇದರೊಂದಿಗೇ ಆರಂಭವಾಗಬೇಕಿದೆ. ಬಹುಶಃ ಇದೊಂದೇ ಬೆಂಗಳೂರು ಹೊರಗಿನ ಭಾರಗಳಿಂದ ಸೋಲದಂತೆ ಅದನ್ನು ಉಳಿಸುವ ಮಾರ್ಗವಾಗಿದೆ.

ಅಂದ ಹಾಗೆ: ಯಡಿಯೂರಪ್ಪನವರಿಗೆ ಅಧಿಕಾರ ಹಸ್ತಾಂತರವಾಗದಿದ್ದಲ್ಲಿ ಹೋರಾಟ ಆರಂಭಿಸುವುದಾಗಿ ವೀರಶೈವ ಸ್ವಾಮಿಯೊಬ್ಬರು ಗುಟುರು ಹಾಕಿದ್ದಾರೆ! ಈ ಮೂಲಕ ಧರ್ಮವನ್ನು ಜಾತಿಯ ಮಟ್ಟಕ್ಕೆ ಇಳಿಸಿರುವ ಈ ಸ್ವಾಮಿ, ಯಡಿಯೂರಪ್ಪ ಯಾರ ಪ್ರತಿನಿಧಿಯಾಗಿ ಮುಖ್ಯಮಂತ್ರಿಯಾಗಲಿದ್ದಾರೆ ಎಂಬುದನ್ನೂ ಸೂಚಿಸಿದ್ದಾರೆ. ಈ ಬಗ್ಗೆ ಯಡಿಯೂರಪ್ಪ ಏನು ಹೇಳುತ್ತಾರೆ ಎಂದು ಕರ್ನಾಟಕದ ಜನತೆ ಕುತೂಹಲದಿಂದ ಕಾಯುತ್ತಿದೆ.

Rating
No votes yet

Comments