ಬೆಣ್ಣೆಹೂವು ಮತ್ತು ಅಶ್ವಮೇಧ

ಬೆಣ್ಣೆಹೂವು ಮತ್ತು ಅಶ್ವಮೇಧ

ಅಶೋಕ ಹೆಗಡೆಯವರು ನಮ್ಮ ತಲೆಮಾರಿನವರಾಗಿರುವುದೇ ಇದಕ್ಕೆ ಕಾರಣ ಅನಿಸುತ್ತಿಲ್ಲ. ಅಶೋಕ ಹೆಗಡೆಯವರು ೨೦೦೬ರಲ್ಲಿ ಬರೆಯುತ್ತಿರುವಾಗಲೂ ತಮ್ಮ ಕಥಾನಕದ ಕಾಲಕ್ಕೆ ಮತ್ತು ವಸ್ತುವಿಗೆ ನಿಷ್ಠರಾಗಿಯೇ ಸಮಕಾಲೀನತೆಯನ್ನು ಸಾಧಿಸಿದ್ದಾರೆ. ಹಾಗಾಗಿಯೇ ಜಿ ಎಸ್ ಅಮೂರರು ಮುನ್ನುಡಿಯಲ್ಲಿ ಅಶೋಕರು ತಮ್ಮ ಸಮಕಾಲೀನ ಅನುಭವಗಳಿಗೂ ಕಾದಂಬರಿಯಲ್ಲಿ ಭಾಷೆ ಮತ್ತು ಆಕಾರಗಳನ್ನು ಕೊಡಲಿ ಎಂದು ಬರೆದಿದ್ದಾರೆ. ಅಷ್ಟರ ಮಟ್ಟಿಗೆ ಅಶ್ವಮೇಧ ಕಾದಂಬರಿ ತಡಕುವ ಆಯಾಮಗಳು ಇವತ್ತಿನ ನಮ್ಮ ಬದುಕಿನ ಪರಿಧಿಗೆ ಕೊಂಚ ಹೊರಗಿನವಾಗಿಯೇ ಉಳಿಯುತ್ತವೆ ಅನಿಸಿದರೆ ಅಚ್ಚರಿಯಿಲ್ಲ.

ಮೂಲಭೂತವಾಗಿ ಇಲ್ಲಿ ದಲಿತರ ಅಥವಾ ಅಸ್ಪೃಶ್ಯರ ಮತ್ತು ಅರೆ ಅಸ್ಪೃಶ್ಯರ ತುಳಿತಕ್ಕೆ ಯಾವುದೇ ಕ್ಷತ್ರಿಯ ಜಮೀನ್ದಾರನೋ ಭೂಮಾಲಕನೋ ಕಾರಣವಾಗಿರದೆ ಬ್ರಾಹ್ಮಣ ವರ್ಗ ಕಾರಣವಾಗಿರುವುದು ಮತ್ತು ಒಂದು ಮಠ ಈ ಎಲ್ಲ ಮೇಲ್ಜಾತಿಯವರು ನಡೆಸುತ್ತ ಬಂದ ಅನ್ಯಾಯ ಶೋಷಣೆಗಳ ಮೂಲಧಾತುವಿನಂತೆ ನಿಲ್ಲುವುದು ಗಮನಾರ್ಹವಾಗಿದೆ. ಯಾಕೆಂದರೆ ಬ್ರಾಹ್ಮಣ ವರ್ಗ ಜಾತೀಯತೆ ಮತ್ತು ಅಸ್ಪೃಶ್ಯತೆಗೆ ನೇರವಾಗಿಯೇ ಹೊಣೆಯೆಂಬುದನ್ನು ಬಿಟ್ಟರೆ ಆರ್ಥಿಕವಾಗಿ ಮತ್ತು ರಾಜಕೀಯವಾಗಿ ಬ್ರಾಹ್ಮಣ ವರ್ಗ ಇತರ ಜಾತಿಯವರನ್ನು ತುಳಿದು ನಿಂತ ಕತೆ ಹೇಳುವ ಕತೆ ಕಾದಂಬರಿಗಳು ನಮ್ಮಲ್ಲಿ ಬಹಳ ಕಡಿಮೆ. ಅಲ್ಲದೆ ಇವತ್ತು ಮನುಷ್ಯ ಮನುಷ್ಯರ ನಡುವಿನ ಹೋರಾಟಗಳಿಗೆ ಜಾತಿಯೇ ಬಹುಮುಖ್ಯ ಕಾರಣವಾಗಿ ಉಳಿದಿರುವಂತೆಯೂ ಕಾಣುವುದಿಲ್ಲ ಅಲ್ಲವೆ? ಅಂದ ಮಾತ್ರಕ್ಕೆ ಜಾತಿ ಆಧಾರಿತ ಸಮಸ್ಯೆಗಳೆಲ್ಲ ಪರಿಹಾರವಾಗಿವೆ ಎಂದೇನಲ್ಲ. ಬಹುಷಃ ಹಾಗಾಗಿಯೇ ಇರಬೇಕು, ಎಸ್ ಆರ್ ವಿಜಯಶಂಕರ, ಕೆ ಸತ್ಯನಾರಾಯಣ ಮೊದಲಾದವರು "ಭಾರತ ಅನೇಕ ಶತಮಾನಗಳನ್ನು ಏಕಕಾಲದಲ್ಲಿ ಬದುಕುತ್ತಿರುವ ದೇಶ" ಎಂದಿರುವುದು. ಹಲವು ನೆಲೆಗಳಲ್ಲಿ ಜಾತಿ ಇಂದಿಗೂ ನಮ್ಮ ಬದುಕಿನ ಬಹು ಮುಖ್ಯ ಇಶ್ಯೂವಾಗಿಯೇ ಉಳಿದಿರುವುದು ಸತ್ಯ.

ಜಾತಿಯ ನೆಲೆಯಲ್ಲಿ ಹುಟ್ಟುವ ಸಂಘರ್ಷಗಳು ಧರ್ಮದ ನೆಲೆಯ ಪ್ರಶ್ನೆಗಳ ಎದುರು ಹೆಚ್ಚು ಸಂಕೀರ್ಣವೂ, ವೈರುಧ್ಯಮಯ ನಿಲುವಿಗೆ ಕಾರಣವಾಗುವಂಥದ್ದೂ ಆಗಿರುತ್ತ, ಸಮಕಾಲೀನ ಜಗತ್ತಿನಲ್ಲೇ ವರ್ಗ ಸಂಘರ್ಷ ಮತ್ತು ಜಾತೀವಾರು ಸಂಘರ್ಷಗಳು ಈ ಧಾರ್ಮಿಕ ನೆಲೆಯಲ್ಲಿ ಪಡೆದುಕೊಳ್ಳುತ್ತಿರುವ ವಿಚಿತ್ರ ನೆಲೆಗಳನ್ನು ನಾವು ಪ್ರತಿನಿತ್ಯ ಕಾಣುತ್ತಿರುವಾಗಲೂ (ಉದಾ: ಕನಕ ಗೋಪುರದ ವಿಚಾರದಲ್ಲಿ ನಮ್ಮ ಕುರುಬರು ಮತ್ತು ಉಡುಪಿಯ ವೈದಿಕ ಬ್ರಾಹ್ಮಣರು ತಳೆಯುವ ನಿಲುವು ಮತ್ತು ಧೋರಣೆಗಳ ನಡುವೆ ಆಂತರಿಕ ಭಿನ್ನತೆ ಇರುತ್ತ ಹಿಂದೂ ಮುಸ್ಲಿಂ ಪ್ರಶ್ನೆಯ ಎದುರು ಈ ಎರಡೂ ವರ್ಗದವರಲ್ಲಿ ಅದು ತಳೆಯುವ ರೂಪಾಂತರ; ಅಮೆರಿಕದ ಆಕ್ರಮಣಕಾರೀ ಧೋರಣೆಯ ಬಗ್ಗೆ ಸಾಮಾನ್ಯವಾಗಿ ಇರುವ ಮುಸ್ಲಿಂ ವಿರೋಧಿ ಸಮರ್ಥನೆ ಮತ್ತು ಅಮೆರಿಕದಿಂದ ಅಂಥದೇ ಆಕ್ರಮಣವನ್ನು ಎದುರಿಸುತ್ತಿರುವ ಕೆಲವು ಕರಿಯರ ಮತ್ತು ತೈಲ ಉತ್ಪಾದಿಸುತ್ತಿರುವ ರಾಷ್ಟ್ರಗಳ ಸಂದರ್ಭದಲ್ಲಿ ಅದು ಪಡೆಯುತ್ತಿರುವ ವಿರೋಧ ಇತ್ಯಾದಿ) ಅಂಥ ಸಂದರ್ಭಗಳೆದುರು ಕಾದಂಬರಿ ಕಾಲಾತೀತವಾಗಲಾರದ ನಿಷ್ಠುರತೆಯನ್ನೂ ಬದ್ಧತೆಯನ್ನೂ ಕಾಪಾಡಿಕೊಂಡು ಬಂದಿರುವುದು ಕೃತಿಯ ಹೆಚ್ಚುಗಾರಿಕೆಯನ್ನಾಗಿಯೂ ಮಿತಿಯನ್ನಾಗಿಯೂ ಕಾಣುವುದು ಸಾಧ್ಯವಿದೆ.

ಕೃತಿಯ ಸಮಕಾಲೀನತೆಯ ಪ್ರಶ್ನೆಯನ್ನು ಚರ್ಚಿಸುವಾಗ ಕೃತಿ, ಕೃತಿಯ ಕಾಲಮಾನಕ್ಕೆ ಸಮಕಾಲೀನವಾಗಿರಬೇಕೆ, ಓದುಗನ ಓದಿನ ಕಾಲಕ್ಕೆ (ಅಥವಾ ಅದು ಪ್ರಕಟವಾದ ಕಾಲಕ್ಕೆ) ಸಮಕಾಲೀನವಾಗಿರಬೇಕೆ ಎನ್ನುವ ಪ್ರಶ್ನೆ ಇದೆ. ಏನಿದ್ದರೂ ಒಂದು ಸಾಹಿತ್ಯ ಕೃತಿ ನನ್ನ ಓದಿಗೆ ಮುಖ್ಯವೆನಿಸಲು ಅದು ನನ್ನ ಇಂದಿನ ಬದುಕಿಗೆ ನೀಡುವ ಕಾಣ್ಕೆ ಏನು ಎಂಬುದೇ ಮಾನದಂಡ. ಈ ಮಾನದಂಡದಿಂದ ಅಶೋಕರ ಅಶ್ವಮೇಧ ಮುಖ್ಯವೆನಿಸಲು ಇರುವ ಅನೇಕ ಕಾರಣಗಳಲ್ಲಿ ಅದು ಎತ್ತುವ ಧರ್ಮ ಮತ್ತು ದೈನಂದಿನಗಳ ನಡುವಿನ ಸಂಘರ್ಷ ಕೂಡ ಒಂದು.

ತನ್ನ ಮಗಳು ಅಸ್ಪೃಶ್ಯ ಮನೆಗೆಲಸದವಳ ಮಗನೊಂದಿಗೆ ಮದುವೆಯ ದಿನವೇ ಓಡಿ ಹೋದುದು ಅರಿವಿಗಿಳಿಯುತ್ತಲೇ ಅರೆಹುಚ್ಚನಂತಾಗುವ ಗಣೇಶ ಹೆಗಡೆ ಧಾರ್ಮಿಕ ಜಿಜ್ಞಾಸೆಗೆ ತೊಡಗುವುದಾಗಲೀ ತನಗಿರುವ ಆರ್ಥಿಕ, ರಾಜಕೀಯ ಗುರುತ್ವಗಳನ್ನು ಬಳಸಿಕೊಂಡು ದಲಿತನನ್ನು ಕೊಚ್ಚಿಹಾಕುವ ಹೆಜ್ಜೆ ಇಡುವ ಪ್ರಮೇಯವಾಗಲೀ ಬರುವುದೇ ಇಲ್ಲ. ಆದರೆ ಇದೆಲ್ಲಕ್ಕಿಂತ ಹೆಚ್ಚಿನದನ್ನು ಈ ಪಾತ್ರದ ಮೂಲಕ ಅಶೋಕರು ಆಗಗೊಡುವುದನ್ನು ಹೇಳುವುದು ನನ್ನ ಉದ್ದೇಶ. ಅದು, ತಾನು ನೆಚ್ಚಿ ಓಡಿ ಹೋದ ಕೃಷ್ಣನಿಂದ ಏನನ್ನೂ ಪಡೆಯಲಾರದ ನಿರ್ಮಲೆ ಮತ್ತೆ ಊರಿಗೇ ಹಿಂದಿರುಗಿ ಬಂದ ಸಂದರ್ಭದಲ್ಲಿ ಈ ಗಣೇಶ ಹೆಗಡೆ ಮತ್ತು ಊರಿನ ಹತ್ತು ಸಮಸ್ತರು (ಬ್ರಾಹ್ಮಣರೇ ಎಂದು ಹೇಳಬೇಕಾದ್ದಿಲ್ಲ ಅನಿಸುತ್ತದೆ) ಅವಳನ್ನು ಎದುರಿಸುವ ರೀತಿ. ಗಣೇಶ ಹೆಗಡೆ ನಿರ್ಮಲೆಯನ್ನು ದೇವಿಯ ಮಗಳು ಬೆಳ್ಳಿ ಎಂದು ಗುರುತಿಸುವ ಸಂದರ್ಭ ಒಂದು. ಊರಿನ ಇತರ ಪ್ರಭಾವೀ ಬ್ರಾಹ್ಮಣರಿಗೆ ಇದು ಕೇವಲ ಗಣೇಶ ಹೆಗಡೆಯವರ ತೋಟದ ಪ್ರಶ್ನೆಯಾಗಿ ಮಾತ್ರ ಕಾಡುವುದು ಇನ್ನೊಂದು. ಇವೆರಡರ ನಡುವೆ ಒಂದಕ್ಕೊಂದು ಸಂಬಂಧ ಇಲ್ಲವೆನ್ನುತ್ತೀರಾ? ಸ್ವಲ್ಪ ಯೋಚಿಸಿ.

ಗಣೇಶ ಹೆಗಡೆಯ ಅರೆ ಹುಚ್ಚು ನಿಗೂಢವಾಗುವುದು ಇಂಥಲ್ಲೇ. ಇಂಥ ಇನ್ನೊಂದು ಸಂದರ್ಭ, ಸಾಯುವ ಮುನ್ನ ಆತ ನಿರ್ಮಲೆಯ ಕೈಗೆ ಕೊಡಲೆಂದೇ ಮುಷ್ಟಿಯಲ್ಲಿ ಬಿಗಿ ಹಿಡಿದಿದ್ದ ಬೆಣ್ಣೆ ಹೂವು. ಮಗಳನ್ನು ದೇವಿಯ ಮಗಳು ಬೆಳ್ಳಿ ಎಂದು ಗುರುತಿಸುವ ಗಣೇಶ ಹೆಗಡೆಗೆ ತನ್ನ ಮಗಳು ನಿರ್ಮಲೆಗೆ ಬೆಣ್ಣೆ ಹೂವೆಂದರೆ ಪಂಚಪ್ರಾಣ ಎಂಬುದು ತಿಳಿದಿತ್ತು!

ತನ್ನ ದೇಶ ಕಾಲದ ಪರಿಮಿತಿಯಲ್ಲಿ ಸನಾತನಿಯಾದ, ಬ್ರಾಹ್ಮಣನಾದ ಮತ್ತು ಮನುಷ್ಯನೂ ಆದ ಗಣೇಶ ಹೆಗಡೆ ವರ್ತಿಸುವ ರೀತಿ ಎಷ್ಟು ಸೂಕ್ಷ್ಮವಾಗಿದೆ, ಅರ್ಥಪೂರ್ಣವಾಗಿದೆ ಎಂಬುದನ್ನು ಗಮನಿಸಿದರೆ ಏನೆನಿಸುತ್ತದೆ? ನಿಮ್ಮ ಮನಸ್ಸಿನಲ್ಲಿ ಶ್ರೀನಿವಾಸ ಶ್ರೋತ್ರಿಗಳೂ, ನರಸಿಂಹ ಗೌಡರೂ, ಪ್ರಾಣೇಶಾಚಾರ್ಯರೂ ಕುಳಿತಿರುವಾಗಲೇ ಈ ಗಣೇಶ ಹೆಗಡೆಯವರಿಗೂ ಸ್ವಲ್ಪ ಸ್ಥಳ ಕೊಡಿ.

Rating
No votes yet

Comments