ಬೆನ್ನ ಮೇಲಿನ ಕೂದಲು
ನಮ್ಮ ಪೂರ್ವಿಕರ ಬಳುವಳಿ ಅಂತ ಮುಜುಗರದಿಂದ ಹೇಳ್ತಾರೆ, ಹಸಿರು ನೀಲಿ ಅಂತ ಕೂಡ ಹೇಳ್ತಾರೆ. ಕಂಡವರಿಗೇ ಗೊತ್ತು. ನನಗೆಲ್ಲಿ ಆ ಭಾಗ್ಯ?
ಕಾಣಬೇಕೆಂದರೆ ಎರಡೆರಡು ಕನ್ನಡಿ, ಹಿಂದಕ್ಕೊಂದು ಮುಂದಕ್ಕೊಂದು ಇಲ್ಲದಿದ್ದರೆ ಸಲ್ಲ, ಅಷ್ಟೇ ಅಲ್ಲ, ಎಡಕ್ಕೆ ಕೈ ಹಾಕಿ ಕನ್ನಡಿಯ ಬಲವನ್ನು ಹಿಡಿಯಬರದಿದ್ದರೂ ಸಲ್ಲ. ಉಳಿದವರಿಗೆ ಸದಾ ಕಾಣುತ್ತಿದ್ದ ಇದು ಅಂತೂ ಕನ್ನಡಿಯಲ್ಲಿ ಕಡೆಗೂ ಕಂಡು ಕೆಣಕಿತು.
ಹಟತೊಟ್ಟೆ. ಕೈ ತಿರುಚಿಕೊಂಡು ಹಿಂಚಾಚಿದೆ. ಬೆರಳ ತುದಿಗಷ್ಟೆ ತಾಕಿತು, ಇಲ್ಲವೇ ಇಲ್ಲ ಎಂಬಂತೆ ಕಾಣೆಯಾಯಿತು. ಮತ್ತಷ್ಟು ಚಾಚಿದೆ. ಸಟ್ಟನೆ ಭುಜ ಉಳುಕಿತು. ಅಷ್ಟೆ.
ಕಾಲ ಉರುಳಿದಂತೆ ಈಗದು ಉಳಿದಿದೆ ಪರರ ವರದಿಯಲ್ಲಿ, ನನ್ನ ತಲೆಯಲ್ಲಿ ಮತ್ತು ಕನ್ನಡಿಯಲ್ಲಿ ಮಾತ್ರ.
Rating