ಬೆರಗಿನ ಡೋಲು

ಬೆರಗಿನ ಡೋಲು

ಬೆರಗಿನ ಡೋಲು ನನ್ನೊಳಗೆ ಬಡಿಯುತಿದೆ
ನದಿಯೊಳಗೆ ಮೀನು ಕುಣಿಯುತಿವೆ
ನೆಲದ ಮೇಲೆ ಗಂಡಸರು ಹೆಂಗಸರು ಕುಣಿಯುತಾರೆ
ನನ್ನ ಡೋಲಿನ ತಾಲಕ್ಕೆ

ಆದರೆ, ಮರಗಳ ಹಿಂದೆ ನಿಂತು
ನಡುವಲ್ಲಿ ಎಲೆಗಳ ಧರಿಸಿ
ಅವಳು ಮುಗುಳ್ನಕ್ಕಳಷ್ಟೇ, ತಲೆಯಾಡಿಸಿ

ಆದರೂ, ನನ್ನ ಡೋಲು ಬಡಿಯುತ್ತಿತ್ತು
ಗಾಳಿ ತರಂಗಗಳೆಬ್ಬಿಸಿ, ತನ್ನ ತೀವ್ರ
ಗತಿಯಿಂದ, ಜೀವಿತರನ್ನು, ಮೃತರನ್ನು
ತಮ್ಮ ನೆರಳುಗಳೊಂದಿಗೆ ಹಾಡಿ ಕುಣಿಯಲು
ಉದ್ದೀಪಿಸುತ್ತ

ಆದರೆ, ಮರಗಳ ಹಿಂದೆ ನಿಂತು
ನಡುವಲ್ಲಿ ಎಲೆಗಳ ಧರಿಸಿ
ಅವಳು ಮುಗುಳ್ನಕ್ಕಳಷ್ಟೇ, ತಲೆಯಾಡಿಸಿ

ಆಗ ಡೋಲು ಬಡಿಯತೊಡಗಿತು ನೆಲದ
ವಸ್ತುಗಳೊಂದಿಗೆ ಲಯದಲ್ಲಿ
ಆಗಸದ ಕಣ್ಣುಗಳ ಬರಮಾಡಿ
ಸೂರ್ಯ, ಚಂದ್ರ ಮತ್ತು ನದಿಯ ದೇವತೆಗಳ
ಮತ್ತು ಮರಗಳು ಕುಣಿಯತೊಡಗಿದವು

ಮೀನು ಮಾನವರಾಗಿ
ಮಾನವರು ಮೀನಾಗಿ
ಮತ್ತು ಎಲ್ಲ ಬೆಳವಣಿಗೆಯೂ ನಿಂತು

ಆದರೆ, ಮರಗಳ ಹಿಂದೆ ನಿಂತು
ನಡುವಲ್ಲಿ ಎಲೆಗಳ ಧರಿಸಿ
ಅವಳು ಮುಗುಳ್ನಕ್ಕಳಷ್ಟೇ, ತಲೆಯಾಡಿಸಿ

ಮತ್ತಾಗ, ನನ್ನೊಳಗಿನ ಡೋಲು
ಬಡಿತ ನಿಲ್ಲಿಸಿತು -
ಮಾನವರು ಮಾನವರಾಗಿ
ಮೀನುಗಳು ಮೀನಾಗಿ
ಮತ್ತು ಸೂರ್ಯ, ಚಂದ್ರರೆಲ್ಲ
ತಂತಮ್ಮ ಜಾಗಕ್ಕೆ ತಿರುಗಿ ಹಾಗೂ
ಸತ್ತವರು ಮರಳಿ, ಮತ್ತು
ಅವಳ ತಲೆಯಿಂದ ಎಲೆಗಳು ಹೊರಹೊಮ್ಮಿ

ಮತ್ತು ಮರಗಳ ಹಿಂದೆ ನಿಂತಳು ಅವಳು
ಕಾಲಿಂದ ಬೇರುಗಳು ಮೊಳೆದು
ಎಲೆಗಳು ತಲೆಯಿಂದ ಬೆಳೆದು
ಮೂಗಿಂದ ಹೊಗೆ ಉಗುಳಿ
ಮತ್ತು ಅವಳ ನಗೆಸೂಸುವ ತುಟಿಗಳು
ಕಗ್ಗತ್ತಲ ಕಾರುವ ಗವಿಗಳಾಗಿ ಬದಲಿ

ಆಗ, ನಾನಾಗ ನನ್ನ ಡೋಲೆತ್ತಿ
ತೆರಳಿಬಿಟ್ಟೆ: ಮತ್ತೆಂದೂ ಅಂತೆಯೇ
ಜೋರಾಗಿ ಡೋಲು ಬಡಿಯದೇ.

---- ಗೇಬ್ರಿಯಲ್ ಒಕಾರಾ (The Mystic Drum)

ನೈಜೀರಿಯಾದ ಕವಿ, ಕಾದಂಬರಿಗಾರ ಒಕಾರಾ ತಮ್ಮ ಆಧ್ಯಾತ್ಮಿಕ ಹಾಗೂ ಪ್ರಾಯೋಗಿಕ ಬರವಣಿಗೆಗಾಗಿ ಪ್ರಸಿದ್ಧರು. ೧೯೭೯ ರಲ್ಲಿ Commonwealth Poetry Prize ಪಡೆದ ಒಕಾರಾ ತಮ್ಮ ಬರಹಗಳಲ್ಲಿ ಆಫ್ರಿಕದ ಜಾನಪದ, ಆಧ್ಯಾತ್ಮ, ಸಂಗೀತ ಹಾಗೂ ಲಯಗಾರಿಕೆಯನ್ನು ತರುವ ಮೂಲಕ ತಮ್ಮದೇ ಆದ ಸಂವೇದನಾಶೀಲ ಸೃಜನಶೀಲತೆಯ ರೂಪವನ್ನು ತಂದರು. ಅವರ ಬರಹಗಳಲ್ಲಿ ಆಫ್ರಿಕಾದ ಪುರಾತನ ಸಂಸ್ಕೃತಿ ಆಧುನಿಕ ಸಂಸ್ಕೃತಿಯೊಂದಿಗೆ ಮುಖಾಮುಖಿಯಾಗುವಲ್ಲಿನ ಹಿಂಸೆಯ ರೂಪಕಗಳನ್ನು ಕಾಣುತ್ತೇವೆ.
ನಾನು ಇಲ್ಲಿ ಅನುವಾದಿಸಿರುವ ಅವರ ಕವನವು ಮಿಸ್ಟಿಕ ಡ್ರಮ್ ಎಂಬ ಹೆಸರಿನದು. ಇಲ್ಲಿ ಸಂಸ್ಕೃತಿಯೊಂದರಲ್ಲಿನ ಪಾರಲೌಕಿಕ ತತ್ವಕ್ಕೆ ಸಂವಾದಿಯಾಗಿ
ಬರುವ ಡೋಲು, ತನ್ನ ಪ್ರಸ್ತುತ ಪರಿಸರದೊಂದಿಗೆ ಕೊಂಡಿ ಕಳೆದು ಕೊಂಡಾಗ ಹುಟ್ಟುಕೊಳ್ಳುವ ಭೀಕರತೆಯ ಚಿತ್ರವಿದೆ. ಮೂಲದಲ್ಲಿ ಕವಿ ಮಾಡುವ ಭಾಷಾ ಪ್ರಯೋಗಗಳಿಗೆ ತಕ್ಕ ಪರಿಣಾಮಗಳನ್ನು ಅನುವಾದದಲ್ಲಿ ತರಲಾಗಿಲ್ಲ. ಸಂಕೇತಗಳ ದಟ್ಟತೆ ಹಾಗೂ ಲಯ ಮುಖ್ಯವಾಗುವ ಈ ಕವನದಲ್ಲಿ ಡೋಲು ಬಡಿಯುವುದನ್ನು ಜೀವ ಸಾರವೇ ಆಗಿ ಕಾಣಲಾಗಿದೆ. ಇಲ್ಲಿ ಬರುವ ಅವಳು ಪ್ರಕೃತಿ ನಿಯಮದಂತೆ ತೋರುತ್ತಾಳೆ. ಇಲ್ಲಿ ಜೀವಗಳ ನಡುವೆ, ಸಾವು-ಇರವುಗಳ ನಡುವೆ ಸಾಗಾಟವಿದೆ. ಅವುಗಳು ಜೀವವೈಭವದ ತತ್ಪರತೆಯಲ್ಲಿ ಒಂದಾದರೆ, ಡೋಲಿನ ಲಯ ನಿಂತಂತೇ ಮುರಿಯುವ ಸಂವಾದ ಈ ಐಕ್ಯತೆಯನ್ನು ಕೊನೆಗೊಳಿಸಿ, ಏಕ-ಏಕವಾಗಿಸುತ್ತದೆ.
ಇಲ್ಲಿ ಡೋಲು ಬಡಿಯುವ ಕ್ರಿಯೆ ಸಾಂಸ್ಕೃತಿಕ ಆಚರಣೆಯಾಗಿ ಬರುತ್ತದೆಯಾದರೂ ಅನುಷ್ಟಾನವಾಗಿಯಲ್ಲ. ಇಲ್ಲಿ ಮುಖ್ಯವಾಗಿ ಕಾಣುವ ಸಕಲ ಜೀವ-ನಿರ್ಜೀವಗಳ ಐಕ್ಯತೆ ಹಾಗೂ ಅವುಗಳ ಕೊಡುಕೊಳ್ಳುವ ವ್ಯವಹಾರ ಆಧುನಿಕತೆಯನ್ನು ಪ್ರಶ್ನಿಸುವ ಮೂಲಧಾತು. ಇದು ಹೊಸದೆಂದು ನಾನು ಹೇಳುತ್ತಿಲ್ಲ, ಆದರೆ ಈ ಕವನದಲ್ಲಿ ವ್ಯಕ್ತವಾಗಿರುವ ಪರಿ ನನಗೆ ಇಷ್ಟವಾಯಿತು. ಇದು ನನಗೆ ವೇದ್ಯವಾದ ಅರ್ಥ.

Rating
No votes yet