ಬೆಳಕು

ಬೆಳಕು

ಚಿತ್ರ

ತುಟಿಯಲೊತ್ತಿಟ್ಟಿರುವ ಸೊಗದಕೊಳಲಿನ ಹೊಳಪು

ಮುಡಿಯಲೇರಿಹ  ನವಿಲ ಗರಿಯ ಮೆರುಗು

ಸೆಳೆವ ನೀಲಕೆ  ಸಿಗ್ಗು ತಂದವನ  ಮೈಬಣ್ಣ

ಬೆಳಕ ತೋರಲಿಯೆನಗೆ ಕಡೆಯ ಪಯಣದಲಿ!

 

ಸಂಸ್ಕೃತ ಮೂಲ (ವೇದಾಂತ ದೇಶಿಕನ ಗೋಪಾಲವಿಂಶತಿ, ಪದ್ಯ ೧೨):

ಅಧರಾಹಿತ ಚಾರು ವಂಶ ನಾಳಾಃ

ಮುಕುಟಾಲಂಬಿ ಮಯೂರ ಪಿಂಛಮಾಲಾಃ

ಹರಿನೀಲಶಿಲಾ ವಿಭಂಗ ನೀಲಾಃ

ಪ್ರತಿಭಾಃ ಸಂತು ಮಮ ಅಂತಿಮ ಪ್ರಯಾಣೇ

 

ಒಂದು ಹೊಸ ಪದ್ಯ ಕಂಡು ಅದನ್ನು ಕನ್ನಡಿಸುವಾಗ ಹಲವು ಬಾರಿ ನಾನು ಇದರಲ್ಲಿ ಆಸಕ್ತಿಯಿರುವ ನನ್ನ ಗೆಳೆಯರೊಂದಿಗೆ ಅದನ್ನು ಮೊದಲು ಹಂಚಿಕೊಳ್ಳುವುದುಂಟು. ಅಂಥ ಸಂದರ್ಭದಲ್ಲೆಲ್ಲಾ ಅವರುಗಳು ನನಗಿಂತ ಚೆನ್ನಾಗಿ ಅವುಗಳನ್ನು ಅನುವಾದ ಮಾಡುತ್ತಾರೆ ಅನ್ನುವುದೂ ಗುಟ್ಟೇನಲ್ಲ. ಈ ಬಾರಿ ಗೆಳೆಯ ಜೀವೆಂ ಅವರು ಇದೇ ಪದ್ಯಕ್ಕೆ  ಮಾಡಿದ ಅನುವಾದ ಹೀಗಿದೆ:

ಹೊಳೆವ ಮುಕುಟದಮೇಲೆ ನಲಿವ ಶಿಖಿ ಪಿಂಛವು ಪ-

ವಳದ ಬಳ್ಳಿಯ ಪೋಲ್ವ ತುಟಿಗಿಟ್ಟ ಕೊಳಲು

ಸೆಳೆವ ನೀಲವೆ ನಾಚುವಂತಿರುವ ಮೈ ಬಣ್ಣ-

ವುಳಿಯಲಿದು ಕಂಗಳಲಿ ಕಡೆಯ ನೋಟ

 

ನಮ್ಮಿಬ್ಬರ ಪದ್ಯಗಳೂ ಪಂಚಮಾತ್ರಾ ಚೌಪದಿಯಲ್ಲೇ ಇದ್ದರೂ, ನಾನು ಪ್ರಾಸವನ್ನು ಬಿಟ್ಟೆ. ಜೀವೆಂ ಅವರು ಅದನ್ನು ಎತ್ತಿ ಹಿಡಿದಿದ್ದಾರೆ.

-ಹಂಸಾನಂದಿ

ಕೊ: ಹಾಕಿರುವ ಚಿತ್ರ ಹಿಂದೂ ದಿನಪತ್ರಿಕೆಯ ಕಲಾವಿದರಾದ ಮಿತ್ರ ಕೇಶವ್ ವೆಂಕಟರಾಘವನ್ ಅವರ ಬ್ಲಾಗ್ ನಿಂದ. ಅವರು ಈ ಚಿತ್ರವನ್ನು ರಚಿಸಲು ಸ್ಫೂರ್ತಿ ಕೂಡ ಗೋಪಾಲವಿಂಶತಿಯ ಇದೇ ಪದ್ಯ ಅನ್ನುವುದು ಕುತೂಹಲದ ಸಂಗತಿ.

ಕೊ.ಕೊ: ಸಾಮಾನ್ಯವಾಗಿ ಸಂಸ್ಕೃತದಲ್ಲಿ ‘ಳ’ಕಾರವಿಲ್ಲದಿದ್ದರೂ, ದಾಕ್ಷಿಣಾತ್ಯರು ಬರೆದಿರುವಾಗ ಲಳಯೋರಭೇದಃ ಎಂಬಂತೆ ನಮ್ಮ ನುಡಿಗಳಲ್ಲಿರುವ ರೂಢಿಯಂತೆ ಲ ಕಾರವನ್ನು ಳಕಾರವಾಗಿ ಬಳಸಿರುವುದುಂಟು. ಇಲ್ಲಿ ಮೂಲದಲ್ಲಿ ಹೇಗಿದೆಯೋ ನೋಡಿಲ್ಲದಿದ್ದರೂ, ನಾನು ವೇದಾಂತ ದೇಶಿಕರು ‘ನಾಳಾಃ’ ಎಂಬ ಪ್ರಯೋಗ ಮಾಡಿರಬಹುದೆಂಬ ಊಹೆಯಿಂದ ಹಾಗೆ ಬರೆದಿದ್ದೇನೆ.

 

 

Rating
No votes yet