ಬೆಳದಿಂಗಳ ಬಿಸಿಲು - ಲಕ್ಷ್ಮೀಕಾಂತ ಇಟ್ನಾಳ
ಚಿತ್ರ
ಬೆಳದಿಂಗಳ ಬಿಸಿಲು - ಲಕ್ಷ್ಮೀಕಾಂತ ಇಟ್ನಾಳ
ಇನಿಯನ ನೋಡಲು ತರುಣಿಯ ಕಣ್ಣಲಿ
ಛಕ್ಕನೆ ಬೆಳ್ಳಿಯ ಮಿಂಚುಗಳು
ಒಲುಮೆಯ ಚಿಲುಮೆಯ ರಾಗರಂಗಿನ
ಹೂ ಭಾವ ಚಿಮ್ಮುವ ಹಣತೆಗಳು
ವರುಣನ ಕರುಣೆಗೆ ಕಾತರ ಇಳೆಗೆ
ಸ್ವಾತಿಯ ಮುತ್ತಿನ ಮಳೆಹನಿಗೆ
ಚಂದಿರ ತಾ ಹಣಿಕಿದ ಮೋಡದಿ,
ನಾಚಿಕೆ ವರಿಸಿತು ನೈದಿಲೆಗೆ
ನದಿಗಳ ಅಲೆಯಲಿ ಫಳ ಫಳ ಹೊಳೆಯುವ
ಸೂರ್ಯನ ಮಿಂಚಿನ ಕಣ್ಣುಗಳು
ಅರಳಿದ ಎದೆಯಲಿ ಪುಟಿ ಪುಟಿದೇಳುವ
ಮೀಟುವ ಊಟೆಯ ಭಾವಗಳು
ಹೃದಯದ ಪ್ರೀತಿಯ ಚಿಲುಮೆಯ ಸೆಲೆಯು
ಕಾದಿದೆ ಕುಳಿತು ಮೋಹದಲಿ,
ಓಡುವ ಬದುಕಿನ ಸಾಗುವ ಹೆಜ್ಜೆಗೆ,
ಕಾಣದು ಒಲುಮೆಯು, ದಾಹದಲಿ,
ಬೆಳದಿಂಗಳ ಮನೆ ತಂಪಿನ ಪರಿಸರ
ಮೆಲ್ಲಗೆ ಸುಡುಬಿಸಿಲಾಗುತಿದೆ
ನಿದಿರೆಯು ಬಾರದೆ ಕನಸುಗಳಿಲ್ಲದೆ
ನೆಮ್ಮದಿ ಬದುಕು ಮುರುಟುತಿದೆ
(ಚಿತ್ರಗಳ ಕೃಪೆ : ಅಂತರ್ಜಾಲ)
Rating
Comments
ಉ: ಬೆಳದಿಂಗಳ ಬಿಸಿಲು - ಲಕ್ಷ್ಮೀಕಾಂತ ಇಟ್ನಾಳ
ಲಕ್ಮೀಕಾಂತ ಇಟ್ನಾಳ ರವರಿಗೆ ವಂದನೆಗಳು
'ಬೆಳದಿಂಗಳ ಬಿಸಿಲು' ಬೆಚ್ಚಗಿನ ನವಿರಾದ ಅನುಭವ ನೀಡುವ ಸರಳ ಸುಂದರ ಮನಕೆ ಮುದ ಕೊಡುವ ಕವನ. ಸೂರ್ಯ, ಇನಿಯ, ನೈದಿಲೆ, ಒಲುಮೆ, ಹಣತೆ ಒಂದೊಂದು ಪದ ಪ್ರಯೋಗವೂ ಇಲ್ಲಿ ಸಾರ್ಥಕತೆ ಪಡದಿವೆ, ಕವನಕ್ಕೆ ಸಶಕ್ತತೆಯ ಆಯಾಮವನ್ನು ನೀಡಿವೆ. ಸುಂದರ ಭಾವನೆ, ಅದರ ಅಭಿವ್ಯಕ್ತಿ ಕ್ರಮ ಹಿಡಿಸಿತಗು ಧನ್ಯವಾದಗಳು.
In reply to ಉ: ಬೆಳದಿಂಗಳ ಬಿಸಿಲು - ಲಕ್ಷ್ಮೀಕಾಂತ ಇಟ್ನಾಳ by H A Patil
ಉ: ಬೆಳದಿಂಗಳ ಬಿಸಿಲು - ಲಕ್ಷ್ಮೀಕಾಂತ ಇಟ್ನಾಳ
ಹಿರಿಯರಾದ ಪಾಟೀಲ ರವರಿಗೆ, ಲಕ್ಷ್ಮೀಕಾಂತ ಇಟ್ನಾಳ ರ ವಂದನೆಗಳು. ತಮ್ಮ ಸುಂದರವಾದ ಪ್ರತಿಕ್ರಿಯೆಗೆ ಧನ್ವ ಸರ್. ಬಹುತೇಕರು ತಮ್ಮ ಜೀವನದಲ್ಲಿ ಮೂಡಿದ ಬೆಳದಿಂಗಳನ್ನು ಹಿಡಿದಿಡದೇ, ಅನುಭವಿಸದೇ, ಬಿಸಿಲಿಗೆ ಒಡ್ಡಿಕೊಳ್ಳುವ ಪ್ರಕ್ರಿಯೆ ಈ ಸಾಲುಗಳಿಗೆ ಸ್ಪೂರ್ತಿಯಾಯಿತು.