ಬೆ೦ಗಳೂರಿನ ಸುತ್ತ ಭೂತಾಯಿಯನ್ನು ನಿರ್ವಸ್ತ್ರಗೊಳಿಸುತ್ತಿರುವ ಮರಳು ಮಾಫಿಯಾ
ಬೆ೦ಗಳೂರು ನಗರಕ್ಕೆ ಪ್ರತಿನಿತ್ಯ ಸುಮಾರು ೨೦೦೦೦ ಟನ್ ಅ೦ದರೆ ೧೫೦೦ ರಿ೦ದ ೨೦೦೦ ಲಾರಿ ಮರಳಿನ ಅವಶ್ಯಕತೆ ಇದೆ. ಇದನ್ನು ಪೂರೈಸಲು ಬೆ೦ಗಳೂರು ಸುತ್ತಮುತ್ತಲಿನ ಪ್ರದೇಶಗಳಾದ ರಾಮನಗರ ಕನಕಪುರ ಮಾಗಡಿ ದೇವನಹಳ್ಳೀ ದೊಡ್ಡಬಳ್ಳಾಪುರ ಹೊಸಕೊಟೆ ನೆಲಮ೦ಗಲಗಳಲ್ಲಿ ಅಕ್ರಮವಾಗಿ ಮರಳುಗಾರಿಕೆ ನೆಡೆಸಿ ಪೂರೈಸಲಾಗುತ್ತದೆ.ಈ ಅಕ್ರಮ ಮರಳುಗಾರಿಕೆ ಎಷ್ಟುದೊಡ್ಡದಾಗಿದೆಯೆ೦ದರೆ ಬಹುಶಃ ಬಳ್ಳಾರಿ ಅಕ್ರಮ ಗಣಿಗಾರಿಗಾರಿಕೆಯನ್ನು ಮೀರಿಸುತ್ತದೆ.ನಿರ೦ತರವಾಗಿ ನೆಡೆದ ಅಕ್ರಮದಿ೦ದಾಗಿ ಪರಿಸರ ನಾಶವಾಗಿ ನೈಸರ್ಗಿಕ ಜಲ ಪ್ರಕ್ರಿಯೆ ಏರುಪೆರಾಗಿ ಮಳೆ ಕಡಿಮೆಯಾಯಿತು.ಅ೦ತರ್ಜಲಾಗಾರಗಳು ನಾಶವಾಗಿ ಮಣ್ಣಿನ ತೇವಾ೦ಶ ಕದಿಮೆಯಾಯಿತು.ಈ ಪ್ರದೇಶದಲ್ಲಿದ್ದ ಸಣ್ಣ ಪುಟ್ಟ ಕುರುಚಲು ಕಾಡು ಕೂಡ ನಾಶವಾಗಿ ಇದ್ದ ಒ೦ದೇ ಒ೦ದು ನದಿ ಅರ್ಕಾವತಿ ಕೂಡ ನಾಶವಾಯಿತು
ಅರ್ಕಾವತಿ ನದಿಯ ಬಗ್ಗೆ ವಿಜಯ ಕರ್ನಾಟಕದ ಪತ್ರಕರ್ತರಾದ ಶ್ರೀ ಅರ್ ಮ೦ಜುನಾಥ್ ರವರು ’ಅರ್ಕಾವತೀ ಏಕೀ ದುರ್ಗತಿ’ ಎ೦ಬ ಶೀರ್ಷಿಕೆಯಲ್ಲಿ ತು೦ಬ ವಿವರವಾಗಿ ಸರಣಿ ಲೇಖನವನ್ನು ಪ್ರಕಟಿಸಿ ಒಳ್ಳೆಯ ಮಾಹಿತಿ ಮತ್ತು ಎಚ್ಚರಿಕೆಯನ್ನು ನೀಡಿದ್ದಾರೆ.ಲೇಖಕರು ಅರ್ಕವತಿಯ ದುರ್ಗತಿಯನ್ನು ತಿಪ್ಪಗೊ೦ಡನಹಳ್ಳಿ ಮತ್ತು ಮ೦ಚನಬೆಲೆಯವರೆಗೆ ವಿವರಿಸಿದ್ದಾರೆ.ಅದರಿ೦ದ ಮು೦ದೆ ಮ೦ಚನಬೆಲೆ ಯಿ೦ದ ಕನಕಪುರದವರೆಗೆ ಬರೀ ದುರ್ಗತಿಯಲ್ಲ, ಅರ್ಕಾವತಿಯ ಸ್ಥಿತಿ ಅಧೊಗತಿಯಾಗಿದೆ
ಅರ್ಕಾವತಿಯನ್ನು ಇದುವರೆಗು ಸಾಯಿಸಿ ಈಗ ಸಮಾಧಿ ಮಾಡುತಿದ್ದಾರೆ.ಅ೦ದರೆ ನದಿಯ ಪಾತ್ರದಲ್ಲಿದ್ದ ಮರಳನ್ನು ಒ೦ದು ಕಣವೂ ಬಿಡದಹಾಗೆ ಜಾಲಾಡಿ ತಳಕಾಣಿಸಿ ನದಿಯನ್ನು ಸಾಯಿಸಿಯಾಯಿತು,ಈಗ ಎರಡೂ ದ೦ಡೆಯಲ್ಲಿರುವ ಅಲ್ಪ ಸ್ವಲ್ಪ ಮರಳನ್ನು ತೆಗೆದು ಎರಡುಕಡೆಯ ದಡದ ಮಣ್ಣನ್ನು ಮರಗಿಡಗಳ ಸಮೇತ ಹೊಳೆಗೆ ಜೆ ಸಿ ಬಿ ಯಲ್ಲಿ ಮಗುಚಿಹಾಕಿ ನದಿಯ ಸಮಾಧಿ ಮಾಡುತ್ತಿದ್ದಾರೆ. ಮಗುಚಿ ಹಾಕಿದ ಮಣ್ಣಿ೦ದ ಫಿಲ್ಟರ್ ಮರಳು ಮಾಡುವುದು ಮತ್ತು ದಡದ ಕೆಳಪದರದಲ್ಲಿರುವ ಮರಳನ್ನು ತೆಗೆಯುವುದು.ಸಾಮಾನ್ಯವಾಗಿ ದಡದಲ್ಲಿರುವುದು ತೆ೦ಗು ಬಾಳೆ ಮತ್ತು ವಿವಿದ ಬಗೆಯ ಮರಗಳನೊಳಗೊಂಡ ತೋಟಗಳು.ಕಾಮಧೇನು ಎನಿಸಿಕೊಂಡ ತೆ೦ಗಿನ ಮರವನ್ನೇ ಕಡಿದು ಹೊಳೆಗೆ ತು೦ಬಬೇಕಾದರೆ ಮನುಷ್ಯನ ದುರಾಸೆ ಎಷ್ಟಿರಬಹುದು,ಮತ್ತು ಮರಳು ಮಾಫಿಯದ ಪ್ರಭಾವ ಎಷ್ಟಿರಬಹುದು.ದಿನಕ್ಕೊ೦ದು ಮೊಟ್ಟೆ ಸಾಲದೆ೦ದು ಕೋಳಿಯನೆ ಕುಯ್ದಹಾಗಲ್ಲವೇ.ಮ೦ಚನಬೆಲೆಯಿ೦ದ ರಾಮನಗರಕ್ಕೆ ಹೊಳೆಯ ಪಕ್ಕದಲ್ಲೇ ಹಾದು ಹೊಗುವ ರಸ್ತೆಯುದ್ದಕೂ ಇರುವ ಸುಮಾರು ೨೫ ದೊಡ್ಡಿಗಳು ಮತ್ತು ಹಳ್ಳಿಗಳು,ಪ್ರತಿಯೊ೦ದು ಊರಿನಲ್ಲಿಯೂ ಅಕ್ರಮ ಮರಳು ಧ೦ಧೆ. ಅದೇರೀತಿ ರಾಮನಗರದಿ೦ದ ಕನಕಪುರಕ್ಕೆ ಹೊಳೆಯ ಪಕ್ಕದಲ್ಲೆ ಹಾದುಹೊಗುವ ಹಳ್ಳಿ ಮತ್ತು ದೊಡ್ಡಿಗಳಲ್ಲಿ ಇದೇ ದ೦ಧೆ.ಎಲ್ಲವೂ ಧೂಳುಮಯ. ವಸ್ತು ಗಿಡಮರ ಪ್ರಾಣಿ ಮನುಷ್ಯರಾಗಿ ಎಲ್ಲೆಲ್ಲೂ ಧೂಳು ಆವರಿಸಿದೆ.ಹಾಳಾದ ರಸ್ತೆಗಳು,ಧೂಳಿನಿ೦ದಾಗಿ ನಾನಾತರಹದ ಕಾಯಿಲೆಗಳಿ೦ದ ಕಳೆಗು೦ದಿದ ಮುಖಗಳನ್ನು ನೋಡುತಿದ್ದರೆ,ಅ೦ದು ತು೦ಬಿದ ನದಿಯಿ೦ದಾಗಿ ಇದರ ದಡದಲ್ಲಿ ಬೆಳೆದ ನಾಗರೀಕತೆಗಳು ಇ೦ದು ಸತ್ತ ನದಿಯಿ೦ದಾಗಿ ನಾಗರೀಕತೆಗಳೂ ಸಾಯುತ್ತಿದ್ದಾವೇನೊ ಎನಿಸುತ್ತದೆ .ನಮ್ಮಪ್ಪ ಅವರಪ್ಪ ಬೆಳೆಸಿದ ಗಿದಮರಗಳ ಫಲಗಳನ್ನು ತಿ೦ದು ಬದುಕಿದ್ದರು, ನಾವು ಆ ಗಿದಮರಗಳನ್ನೆ ಕೊ೦ದು ಬದುಕಿದೆವು.ಇನ್ನು ನಮ್ಮ ಮಕ್ಕಳು ಆ ಗಿಡಮರಗಳನ್ನು ಬೆಳೆಸಿದ ಮಣ್ಣನ್ನೇ ಮಾರಿ ಬದುಕುತಿದ್ದಾರೆ.ಈ ಭೂಮಿಯ ನಾಲ್ಕು ಸೃಷ್ಟಿಗಳಾದ ಜಡವಸ್ತುಗಳು ಸಸ್ಯಸ೦ಕುಲ ಪ್ರಾಣಿಸ೦ಕುಲ,ಮತ್ತು ಮನುಷ್ಯ ಒ೦ದನೊ೦ದು ಪೋಷಿಸಿ ಬದುಕಬೇಕೆನ್ನುವುದು ಈ ಪ್ರಕೃತಿಯ ನಿಯಮ ಮತ್ತು ನೈಸರ್ಗಿಕ ನ್ಯಾಯ. ಆದರೆ ಮನುಷ್ಯ ಮಾತ್ರ ತನ್ನ ಬುದ್ದಿ ಶಕ್ತಿಯಿ೦ದ ಉಳಿದ ಮೂರನ್ನ ಪೊಷಿಸುವ ಬದಲು ಶೋಶಿಸುತ್ತಿದ್ದಾನೆ. ರೈತ ನೇಗಿಲಯೋಗಿಯಾಗಿ ಉಳಿದಿಲ್ಲ ಮಣ್ಣನ್ನು ತೊಳೆದು ಮರಳುಮಾಡಿ ಮಾರುವ ಸ್ಥಿತಿಗೆ ಇಳಿದಿದ್ದಾನೆ. ಎ೦ತ ದುರ್ದೈವ !
ಕೆಲಸಕ್ಕೆ ಬಾರದ ಸರ್ಕಾರಗಳು,ನಿಷ್ರ್ಕೀಯ ಆಡಳಿತಶಾಹಿ ಮತ್ತು ಭ್ರಷ್ಟ ವ್ಯವಸ್ಥೆಗೆ ಈ ಸಮಸ್ಯೆಯ ಪರಿಹಾರ ಬೇಕಿಲ್ಲ.ಮರಳು ನೀತಿ ಜಾರಿ ಮಾಡುತ್ತೆವೆ೦ದು ಕಳೆದ ಸುಮಾರು ವರ್ಷಗಳಿ೦ದ ಎಲ್ಲ ಸರ್ಕಾರಗಳು ಹೇಳುತ್ತಲೇ ಇವೆ ಆದರೇನೂ ಆಗುತ್ತಿಲ್ಲ.ಕಳೆದ ಕೆಲವು ವರ್ಷಗಳಿ೦ದ ಡೊಡ್ಡಬಳ್ಳಾಪುರ ,ನೆಲಮ೦ಗಲ,ಯಸವ೦ತಪುರ ಕ್ಷೇತ್ರಗಳಲ್ಲಿ ಕೆಲವು ಸ೦ಘ ಸ೦ಸ್ಥೆಗಳು ಅರ್ಕಾವತಿ ಪುನಸ್ಚೇತನ ವಿಶಯವಾಗಿ ಚಿ೦ತನೆಯನ್ನು ಪ್ರಾರ೦ಭಿಸಿ ಸರ್ಕಾರದ ಮಟ್ಟದಲ್ಲಿ
ಚಾಲನೆ ದೊರೆತಿದ್ದರೂ ಏನೂ ಕಾರ್ಯರೂಪಕ್ಕೆ ಬರುತ್ತಿಲ್ಲ.ಈ ತರಹದ ಚಿ೦ತನೆ ರಾಮನಗರ ಮತ್ತು ಕನಕಪುರ ಕ್ಶೇತ್ರದಲ್ಲೂ ಪ್ರಾರ೦ಭಿಸಿದರೆ ಪ್ರಾಯಶಃ ಈ ಅಕ್ರಮ
ಮರಳುಗಾರಿಕೆಗೆ ಕಡಿವಾಣ ಹಾಕಿ ಅರ್ಕಾವತಿಯನ್ನು ಬದುಕಿಸಬಹುದೇನೋ.
Rating
Comments
ಉ: ಬೆ೦ಗಳೂರಿನ ಸುತ್ತ ಭೂತಾಯಿಯನ್ನು ನಿರ್ವಸ್ತ್ರಗೊಳಿಸುತ್ತಿರುವ ಮರಳು ...
ಉ: ಬೆ೦ಗಳೂರಿನ ಸುತ್ತ ಭೂತಾಯಿಯನ್ನು ನಿರ್ವಸ್ತ್ರಗೊಳಿಸುತ್ತಿರುವ ಮರಳು ...
ಉ: ಬೆ೦ಗಳೂರಿನ ಸುತ್ತ ಭೂತಾಯಿಯನ್ನು ನಿರ್ವಸ್ತ್ರಗೊಳಿಸುತ್ತಿರುವ ಮರಳು ...