ಬೇಂದ್ರೆಯವರ ಕವಿತೆಗಳು: ಪರಾಗ
ಈ ಕವಿತೆಯನ್ನು ನೋಡಿ. ಬೇಂದ್ರೆಯವರು ೧೯೩೭ರಲ್ಲಿ ಪ್ರಕಟಿಸಿದ್ದು. ಸಖೀಗೀತದಲ್ಲಿದೆ. ಇದನ್ನು ಯುವ ಕವಿಗಳ ಕವನಸಂಕಲನಕ್ಕೆ ಮುನ್ನುಡಿಯಾಗಿ ಬರೆದದ್ದು ಎಂದು ಎಲ್ಲೋ ಓದಿದ ನೆನಪು.
ಪರಾಗ
ಬಾ ಭೃಂಗವೆ ಬಾ, ವಿರಾಗಿಯಂದದಿ
ಭ್ರಮಿಸುವೆ ನೀನೇಕೇ?
ಕಂಪಿನ ಕರೆಯಿದು ಸರಾಗವಾಗಿರೆ
ಬೇರೆಯ ಕರೆ ಬೇಕೇ?
ಬರಲಿಹ ಕಾಯಿಯ ಪಾಡಿನ ರುಚಿಯೂ
ಇದರೊಳು ಮಡಗಿಹುದು.
ನಾಳಿನ ಹಣ್ಣಿನ ರಸವಿಲ್ಲಿಯ ಮಕ
ರಂದದೊಳಡಗಿಹುದು.
ಕವನಕೋಶದೀ ಕಮಲ ಗರ್ಭದಲಿ
ಪರಾಗವೊರಗಿಹುದು.
ನಿನ್ನ ಮುಖಸ್ಪರ್ಶವೂ ಸಾಕು; ಹೊಸ
ಸೃಷ್ಟಿಯೆ ಬರಬಹುದು. ಬಾ ಭೃಂಗವೆ, ಬಾ...
ಈ ಕವಿತೆಯನ್ನು ನುಡಿಯುತ್ತಿರುವುದು ಒಂದು ಹೂ. ತನ್ನ ಕಂಪಿನ ಮೂಲಕ ದುಂಬಿಯನ್ನು ಬಾ ಎಂದು ಕರೆಯುತ್ತಿದೆ. ದುಂಬಿ ಬಂದೆರಗಿದರೆ ಮಾತ್ರವೇ ಮತ್ತೆ ಹೊಸ ಸೃಷ್ಟಿ ಎಂದು ಹೇಳುತ್ತಿದೆ. ಕೊನೆಯ ನಾಲ್ಕು ಸಾಲುಗಳನ್ನು ನೋಡಿ. ಕವನಕೋಶ ಎಂಬ ಮಾತಿದೆ. ಅದು ಮನಸ್ಸನ್ನು ಹಿಡಿದಾಗ ಇಡೀ ಪದ್ಯವೇ ಕವಿತೆಯು ಓದುಗರನ್ನು ಕುರಿತು ನೀಡುತ್ತಿರುವ ಕರೆಯೋಲೆ ಎಂದು ಹೊಳೆಯುತ್ತದೆ. ಕವಿತೆ ಹೂವು, ಓದುಗರು ದುಂಬಿಗಳು, ಓದುಗರಿಲ್ಲದೆ ಕವಿತೆ ಸ-ಫಲವಾಗುವುದೇ ಇಲ್ಲ. ಅಥವಾ, ಓದಿದಾಗ ಮಾತ್ರ ಕವಿತೆ ಸಂಭವಿಸುತ್ತದೆ.
ಈ ಕವಿತೆಯಲ್ಲಿ ಬಳಕೆಯಾಗಿರುವ ಪದಗಳನ್ನು ಕೊಂಚ ಗಮನಿಸಿದರೆ ಅವುಗಳಿಗೆ ಇರುವ ವಿವಿಧ ಅರ್ಥಗಳು ಹೇಗೆ ಬಿಡಿಸಲಾರದಂತೆ ಬೆರೆತಿವೆ ಎಂದು ತಿಳಿಯುತ್ತದೆ. “ರಾಗ” ಎಂಬ ಪದದ ವಿವಿಧ ರೂಪಗಳನ್ನು ಗಮನಿಸಿ. ಕವಿತೆಯ ಹೆಸರು ಪರಾಗ. ದುಂಬಿ ವಿರಾಗಿಯಂತೆ ಭ್ರಮಿಸುತ್ತಿದೆ. ಕಂಪಿನ ಕರೆಯು ಸರಾಗವಾಗಿದೆ. ದುಂಬಿಯನ್ನು ಭ್ರಮರ ಎಂದಿರುವುದೂ ಅತ್ಯಂತ ಸೂಕ್ತ. ಯಾವುದು ಭ್ರಮಿಸುತ್ತದೋ ಅದು ಭ್ರಮರ. ಭ್ರಮಿಸು ಅನ್ನುವುದಕ್ಕೆ ಭ್ರಮಣ, ಎಂದರೆ ಸುತ್ತಾಡು ಮತ್ತು ಇಲ್ಲದ್ದನ್ನು ಕಲ್ಪಿಸಿಕೋ ಎಂಬ ಎರಡೂ ಅರ್ಥಗಳಿವೆಯಲ್ಲವೆ! ದುಂಬಿ ಇರುವ ಹೂವನ್ನು ಬಿಟ್ಟು ಎಲ್ಲೆಲ್ಲೋ ಅಲೆಯುವುದು ಯಾಕೆ? ಹಾಗೆ ಅಲೆಯುವುದಕ್ಕೆ ವಿರಾಗವೇ ಕಾರಣ. ವಿರಾಗವೆಂದರೆ ವೈರಾಗ್ಯ ಎಂಬ ಅರ್ಥ ಮಾತ್ರವಲ್ಲ. ರಾಗವಿಲ್ಲದ್ದು ಅಂತಲೂ ಆಗುತ್ತದೆ. ರಾಗವೆಂದರೆ ಪ್ರೀತಿ (ಅನು-ರಾಗ), ಕೆಂಪು ಬಣ್ಣ (ರಾಗ-ರಂಜಿತ ಸಂಜೆ) ಸಂಗೀತದ ರಾಗ ಅನ್ನುವ ಅರ್ಥಗಳೆಲ್ಲ ಇವೆ. ಬದುಕಿನಲ್ಲಿ ಆಸಕ್ತಿ ಇಲ್ಲದಂತೆ, ಇನಿದಾದ ರಾಗವಿಲ್ಲದಂತೆ, ಬಣ್ಣಗಳ ವರ್ಣವೈವಿಧ್ಯವಿಲ್ಲದಂತೆ, ವಿರಾಗಿಯಾಗಿ ಯಾಕೆ ಭ್ರಮಿಸುತ್ತೀಯೆ ಎಂದು ದುಂಬಿಯನ್ನು ಹೂವು ಕೇಳುತ್ತಿದೆ. ಹೂವಿನ ಕರೆ ಸರಾಗವಾಗಿದೆ. ಅದು ಕಂಪಿನ ಕರೆ. ಸರಾಗ ಅನ್ನುವ ಪದದಲ್ಲಿ ಕೊಂಚ ವಿರಮಿಸಿ ಧ್ಯಾನಿಸಿನೋಡಿ. ಸರಾಗವೆಂದರೆ ಸಲೀಸು, ಸುಲಭ; ಸರಾಗವೆಂದರೆ ವಿರಾಗ ಎಂಬುದರ ಅರ್ಥದ ವಿರುದ್ಧ ಭಾವ; ಸರಾಗವೆಂದರೆ ರಾಗ ಸಹಿತವಾದದ್ದು; ಹೂವಿನ ಬಣ್ಣದ ವೈವಿಧ್ಯ! ಇದಕ್ಕಿಂತ ಬೇರೆಯ ಆಹ್ವಾನ ಬೇಕೇ? ಕವಿತೆ ಹುಟ್ಟುವುದೇ ಬದುಕಿನ ಆಸಕ್ತಿ, ಪ್ರೀತಿ, ರಾಗದಿಂದ. ಅದಕ್ಕೆ ವಿಮುಖವಾಗಿ ವಿರಾಗಿಯಂತೆ ಭ್ರಮಿಸುವುದೇಕೆ ಅಂತ ಕೇಳುತ್ತಿದೆ ಕವಿತೆ ಎಂಬ ಹೂವು.
ಹೂವು ಎಂದರೆ ಕೇವಲ ಹೂವಲ್ಲ. ಅದು ಮುಂದೆ ಆಗಲಿರುವ ಕಾಯಿಯ ಪಾಡಿನ ಸ್ಥಿತಿಯ ಇನ್ನೊಂದು ರೂಪ. ಪಾಡು ಎಂದರೆ ಸ್ಥಿತಿಯೂ ಹೌದು, ಹಾಡು ಕೂಡ ಹೌದು. ಆ ಕಾಯಿ ಹಣ್ಣಾದಾಗ ತುಂಬಿಕೊಳ್ಳಲಿರುವ ಮಕರಂದವೂ ಹೂವಿನಲ್ಲಿ ಅಡಗಿ ಕೂತಿದೆ. ರಾಗದಲ್ಲಿ ಅನೇಕ ಸ್ವರಗಳು ಮೇಳೈಸಿಕೊಂಡಿರುವಂತೆ ಹೂವಿನಲ್ಲೂ ಕಾಯಿಯ ಪಾಡು, ಹಣ್ಣಿನ ರಸ, ಮತ್ತೆ ಹೊಸದಾದ ಹೂವಿನ ಬೀಜ ಎಲ್ಲ ಮಡಗಿವೆ, ಅಡಗಿವೆ. ಅಲ್ಲ, ಒರಗಿ ಕಾಯುತ್ತಿವೆ.
ಕವನಕೋಶದ ಕಮಲಗರ್ಭ ಅದು. ಕವಿತೆಯಂಬ ಹೂವಿನ ಪರಾಗಕ್ಕೆ, ಹೂಗಳ ರೇಣುವಿಗೆ, ಪರರ ರಾಗಾಸಕ್ತಿಗಾಗಿ ಕಾದಿರುವ ಸತ್ವಕ್ಕೆ, ದುಂಬಿಯ ಮುಖ ಸ್ಪರ್ಶವಾದರೆ ಸಾಕು, ಹೊಸ ಸೃಷ್ಟಿಯೇ ಬರಬಹುದು. ಹೂವಿನ ಸತ್ವಕ್ಕೆ ದುಂಬಿಯ ಸ್ಪರ್ಶ, ಕವಿತೆಗೆ ಓದುಗರ ಮನಸ್ಪರ್ಶ. ಕವಿತೆ ಓದುಗರ ಮನಸ್ಥಿತಿಗೆ ತಕ್ಕ ಹಾಗೆ ಬೇರೆಯದೇ ರೀತಿಯಲ್ಲಿ ಅವರ ಮನಸ್ಸಿನಲ್ಲಿ ಮೂಡಿ, ಅಲ್ಲಿಂದ ಇನ್ನೊಂದು ಮನಸ್ಸಿಗೆ ತಲುಪಿ, ಮತ್ತೊಂದೇ ಆಕಾರ, ರೂಪ, ಸತ್ವ ಪಡೆದು ಹೊಸ ಹೊಸ ಸೃಷ್ಟಿಗಳಾಗಿ ಜನ್ಮ ತಳೆಯುತ್ತಾ ಹೋಗುತ್ತದೆ. ಹಾಗೆ ಓದುಗರ ಮನಸ್ಸಿನಲ್ಲಿ ಮೂದಿಕೊಂಡಾಗ ಮಾತ್ರವೇ ಕವಿತೆ ಹುಟ್ಟುತ್ತದೆ.
ಬರೆದದ್ದು, ಪ್ರಿಂಟಾದದ್ದು, ಕವಿತೆಯಲ್ಲ. ಓದುಗರ ಸ್ಪರ್ಶದಿಂದ ಅವರ ಮನಸ್ಸಿನಲ್ಲಿ ಮೂಡಿಕೊಳ್ಳುವುದೇ ಕವಿತೆ. ಅದು ಹುಟ್ಟುವುದು, ಬೆಳೆಯುವುದು, ಮತ್ತೊಂದು ಕವಿತೆಯಾಗಿ ಮರು ಹುಟ್ಟುಪಡೆಯುವುದು ಎಲ್ಲವೂ ಕವಿತೆ-ಓದುಗರ ಮನಸ್ಸಂಪರ್ಕದಿಂದ ಮಾತ್ರವೇ.
ನಿಮಗೆ ಏನನ್ನಿಸಿತು ಹೇಳಿ.
ಈ ಕವಿತೆಯ ಇನ್ನೊಂದು ಮುಖ “ಹದಾ ಇಲ್ದಾ ಪದಾ ಇಲ್ಲ” ಅನ್ನುವ ಕವಿತೆಯಲ್ಲಿದೆ. ಅದು ಇನ್ನೊಮ್ಮೆ.
Comments
ಶ್ರೋಡಿಂಗರ್ಸ್ ಕ್ಯಾಟ್
In reply to ಶ್ರೋಡಿಂಗರ್ಸ್ ಕ್ಯಾಟ್ by Yamini
ಕ್ವಾಂಟಂ ಬೆಕ್ಕು ಮತ್ತು ಕವಿತೆಯ ಅರ್ಥ