" ಬೇಗುದಿ "

" ಬೇಗುದಿ "

  
 
ನಟ್ಟ ನಡು ರಾತ್ರಿ ನಿದ್ರೆ ಬರುತ್ತಿಲ್ಲ
ಹಾಸಿಗೆಯಲ್ಲಿ ಸುಮ್ಮನೆ ಹೊರಳಾಟ
ಎದ್ದು ಶತಪಥ ತಿರುಗುತ್ತೇನೆ
ನೀಗದ ಬೇಗುದಿ ಬೇಸರ
ಲೈಟ್ ಹಾಕಿ ಟೇಬಲ್ ಮೇಲಿನ 
ಪುಸ್ತಕ ಎಳೆದು ಕೊಳ್ಳುತ್ತೇನೆ ಇನ್ನೇನು
ಓದಿನಲ್ಲಿ ಮಗ್ನವಾಗಬೇಕು 
ವಿಷಯದ ಆಳಕ್ಕಿಳಿಯಬೇಕು 
ನನ್ನವಳ ಬೇಸರದ ಧ್ವನಿ ಏನ್ರಿ 
ರಾತ್ರಿಯಾದರೂ ಸ್ವಲ್ಪ ನೆಮ್ಮದಿಯಾಗಿ 
ಮಲಗಲು ಬಿಡಬಾರದೆ
ಎಂತಹ ಓದೋ ಏನು ಸುಡುಗಾಡೋ!
ಮೂರು ಕಾಸಿನ ಪ್ರಯೋಜನವಿಲ್ಲ
 
ಜೊತೆಗೆ ಮಗಳ ಸೇರ್ಪಡೆ 
ಅಪ್ಪ ನೀನು ಓದದೆ ಹೋದರೆ  
ಯಾರು ಏನೂ ಆಕ್ಷೇಪಿಸುವುದಿಲ್ಲ 
ಎಂಬ ಗೊಣಗಾಟ
ರೇಡಿಯೊ ಆನ್ ಮಾಡಲೆ ಯೋಚಿಸುತ್ತೇನೆ
ಮತ್ತೆ ಆಕ್ಷೇಪಣೆಯ ಧ್ವನಿಗಳು
ಗರಿಗೆದರುತ್ತವೆ ಎನಿಸಿ ಸುಮ್ಮಗಾಗುತ್ತೇನೆ
ಯೋಚನೆ ಕಾಡಲು ತೊಡಗುತ್ತದೆ
ಹೆಂಡತಿ ಸರಿ ಅನಕ್ಷರಸ್ಥೆ! 
ಆದರೆ ಮಗಳು ಅಕ್ಷರಸ್ಥೆಯಲ್ಲವೆ?
ಅವಳಿಂದಲೂ ಆಕ್ಷೇಪಣೆಯ ಮಾತು 
ಶಿಕ್ಷಣ ಮನುಷ್ಯನನ್ನು ಅಸೂಕ್ಷ್ಮವಾಗಿಸಿ
ಬಿಡುತ್ತದೆಯೆ? ನನಗೆ ಗೊತ್ತಿಲ್ಲ!
ಯಾಕೋ! ಗತಿಸಿದ ಅಮ್ಮ ನೆನಪಾಗಿ 
ಮನವನಾವರಿಸಿ ಬಿಡುತ್ತಾಳೆ
 
ಇವಳಿಗೆ ಅಕ್ಷರಾಭ್ಯಾಸವಾದರೂ ಆಗಿದೆ
ಅಮ್ಮ ಶಾಲೆಯ ಮುಖವನ್ನೆ ನೋಡದವಳು
ಕಷ್ಟ ಕಾರ್ಪಣ್ಯಗಳ  ಮಧ್ಯದಲ್ಲಿಯೆ
ಬದುಕು ನಡೆಸಲಿಲ್ಲವೆ?
ಅವಳ ಶಾಂತಿ ಶಿಸ್ತು ಸಹನೆ ಸರಳತೆ 
ಅವಳೊಂದು ಕೋಮಲ ಭಾವಗಳ ಗಣಿ!
ತನಗಿಲ್ಲದಿದ್ದರೂ ನನಗೆ ಉಣಿಸಿ ನನ್ನ
ಬಾಲಿಶತನ ಸಿಟ್ಟು ಸೆಡವು ಅನಾದರಗಳಿಗೆ
ಒಮ್ಮೆಯೂ ಸಿಡುಕಲಿಲ್ಲ ಬೇಸರಗೊಳ್ಳಲಿಲ್ಲ 
ಅವಳ ಶಾಂತ ಮೂರ್ತಿ ಮನದಲುದ್ಭವಿಸಿ
ಸರ್ವವ್ಯಾಪಿಯಾಗಿ ಹರಡಿ ವ್ಯಾಪಿಸುತ್ತಿದ್ದಾಳೆ
ತನಗಾಗಿ ಏನೂ ಕೇಳಲಿಲ್ಲ ಕೊರತೆಗಳ 
ಪಟ್ಟಿ ಎದುರಿಗಿಡಲಿಲ್ಲ ದುಡಿದು 
ತಂದುದರಲ್ಲೆ ಅಚ್ಚು ಕಟ್ಟಾಗಿ ಮನೆ ನಡೆಸಿದವಳು 
ಬದುಕಿನ ಧೀರ್ಘ ಕಾಲದಲಿ ಒಮ್ಮೆಯೂ 
ನನ್ನ ಅಂತರಂಗಕಿಳಿಯಲಿಲ್ಲ
ಬದುಕಿದಾಗ ಅರ್ಥವಾಗದ ಅವಳು
ಈಗ ಎನ್ನ ಬದುಕಿನ ಸಂಧ್ಯಾ ಕಾಲದಲಿ 
ಅರ್ಥವಾಗುತ್ತಿದ್ದಾಳೆ ಕಣ್ತುಂಬಿ ಭಾವ 
ಬಿಕ್ಕಳಿಸಿ ಬಂತು ಆಕೆಯನು ನಾನು ಸರಿಯಾಗಿ 
ನಡೆಸಿಕೊಳ್ಳಲಿಲ್ಲವೆ ಎಂದು
 
ಭಾವಗಳ ಓತ ಪ್ರೋತದಲಿ ಗೋಡೆಯೆಡೆಗೆ
ಮುಖ ಮಾಡಿ ಕಿಟಕಿಯೆಡೆಗೆ ಕಣ್ಣಾಗುತ್ತೇನೆ
ತೂರಿ ಬರುವ ತಂಗಾಳಿ ಶುಭ್ರ ಬೆಳದಿಂಗಳ ರಾತ್ರಿ 
ಕಿಟಕಿ ಗಾಜಿನಲಿ ತೆರೆದ ಆಕಾಶ ಚುಕ್ಕಿಗಳ ಮಿನುಗಾಟ
ಚಂದ್ರಮನ ನೆಳಲು ಬೆಳಕಿನ ಆಟ
ನೀರವ ಸುಂದರ ರಾತ್ರಿಯಲ್ಲಿ ಅಡ್ಡಾಡಿ ಬರಲೆ!
ಇದೇನು ನಿನ್ನ ಹುಚ್ಚು ಎಂದಾರು 
 
ಹಿರಿ ಕಿರಿ ಜೀವಗಳ ತಿಕ್ಕಾಟ ಅವರವರವೆ ಭಾವ
ಅವರವರವೆ ಗ್ರಹಿಕೆಗಳು ತಮ್ಮ ನಿಲುವುಗಳೆ 
ಸರಿ ಎನುವ ಆತ್ಮರತಿ ಒಂದು ಭಾವುಕ ನೆಲೆಯ
ಜೀವನಾನುಭವದ ಗ್ರಹಿಕೆಯಾದರೆ
ಮತ್ತೊಂದು ವಿದ್ಯೆ ಮತ್ತು ಬುದ್ಧಿವಂತಿಕೆಯ ಭಾರದಿಂದ 
ನರಳುವ ರೂಕ್ಷ ಭಾವದ ಅಸ್ಮಿತೆ
ಯಾರನ್ನು ಸಂತೈಸುವುದು ಯಾರನ್ನು ಬಿಡುವುದು
ಇಬ್ಬರೂ ನನ್ನ ಬದುಕಿನ ಎರಡು ಕಣ್ಣುಗಳು 
ನನ್ನ ಮೂಕ ವೇದನೆ ಅವರೇಕೆ ಅರ್ಥೈಸಿ ಕೊಳ್ಳುತ್ತಿಲ್ಲ
ಉಮ್ಮಳಿಕೆಯೊಂದು ನಾಭಿಯಿಂದ ಹುಟ್ಟುತ್ತದೆ
 
ನಾನು ಏಕಾಂಗಿಯಾದೆನೆ ಅಶರೀರಿ ಅಮ್ಮ 
ನನ್ನೆದುರು ನಿಲ್ಲುತ್ತಾಳೆ 
ಮೈದಡವುತ್ತಾಳೆ ತಲೆ ನೇವರಿಸುತ್ತಾಳೆ 
ಮುಗುಳ್ನಗುತ್ತಾಳೆ ಮಗು ! ನೀನು ಜೀವನದಲ್ಲಿ 
ಕಲಿತದ್ದು ಇಷ್ಟೆಯೆ? ಎಂದು ಕೇಳಿದಂತಾಗುತ್ತದೆ
ನೀನೀಗ ಹಿರಿಯ ಜೀವ ತಾಳ್ಮೆ ಸಹನೆ 
ಉದಾರತನಗಳು ಮುಖ್ಯ ನಿನಗಾಗಿ ಜೀವಿಸಬೇಡ
ನಿನ್ನ ನಂಬಿದವರಿಗಾಗಿ ಜೀವಿಸು
ನಿರಾಳವಾಗುತ್ತಿ ಬದುಕು ಕಠಿಣವೆನಿಸುವುದಿಲ್ಲ 
ಬೆಂಕಿಯಲ್ಲಿ ಕಾದ ಕಬ್ಬಿಣವೆ ಬಾಗುತ್ತದೆ
ಸಂವೇದನೆಯೆ ಇಲ್ಲದ ಲೋಹವೆ ಬಾಗುವಾಗ 
ಹೃದಯ ಭಾವನೆ ಆತ್ಮಗಳಿರುವ ಜೀವ ನೀನು 
ಅದಕ್ಕಿಂತ ಕಡೆಯೆ ಎಂದಂತಾಗುತ್ತದೆ
 
ಹಕ್ಕಿಗಳ ಕಲರವ ಮೂಡಣದ ಅರುಣೋದಯದ ಛಾಯೆ
ಮಸೀದಿಯಿಂದ ಕೇಳಿ ಬರುವ ನಮಾಜಿನ ಓದು 
ಹೊಂಗಿರಣಗಳ ಜೊತೆ ತೇಲಿ ಬರುತಿಹ 
ಭಕ್ತಿ ಭಾವಗಳ ಬಡಿದೆಬ್ಬಿಸು ದೇವ ನಾಮಸ್ಮರಣ ಗೀತೆ
ಮೈ ಮುದುರಿ ಏಳುತ್ತೇನೆ ಮುಖವನ್ನು ಎರಡೂ 
ಹಸ್ತಗಳಿಂದ ಸವರಿ ‘ಕರಾಗ್ರೆ ವಸತೆ ಲಕ್ಷ್ಮೀ’ ಹೇಳುತ್ತ
ಕಣ್ದೆರೆಯುತ್ತೇನೆ ಮಡದಿ ಕಾಫಿ ಲೋಟ ಹಿಡಿದು ಬರುತ್ತಾಳೆ
ಅಪ್ಪ ! ನೀನು ಸ್ನಾನ ತಿಂಡಿ ಮುಗಿಸಿ ರೆಡಿಯಾದರೆ
ಸ್ಕೂಟಿಯಲಿ ಬಸ್ ಸ್ಟ್ಯಾಂಡಿನಲಿ ನಿನ್ನನ್ನು ಬಿಟ್ಟು 
ಮುಂದೆ ಹೋಗುತ್ತೇನೆ ಎನ್ನುತ್ತಾಳೆ 
ಹಗುರ ಮನದಿಂದ ದೈನಂದಿನ ಬದುಕಿಗೆ ತೆರೆದು 
ಕೊಳ್ಳುತ್ತೇನೆ ಅಶರೀರಿ ಅಮ್ಮ ಮತ್ತೆ ನನ್ನ 
ಮನದಾಳದಲಿ ಲೀನಳಾಗುತ್ತಾಳೆ 
ಏಳು ಬೀಳುಗಳ ಬದುಕು ಮತ್ತೆ ಸಾಗಿದೆ
ಎಂದಿನಂತೆ ಅಮ್ಮನ ಗಾಢ ನೆನಪಿನಲಿ!
 
                       *
 

Rating
No votes yet

Comments

Submitted by kavinagaraj Tue, 03/01/2016 - 14:55

ಸಂಬಂಧಗಳ ಅನುಬಂಧ, ಒಳಕುದಿಗಳ ಸುಂದರ ಅನಾವರಣ ಮಾಡಿರುವಿರಿ, ಪಾಟೀಲರೇ. ಧನ್ಯವಾದಗಳು.

Submitted by RAMAMOHANA Tue, 03/01/2016 - 15:38

In reply to by kavinagaraj

ಇರುಳ‌ ವಿರುದ್ಧ‌ ಬೆಳಕಿನ‌ ಯುದ್ಧ‌ ಕೊನೆಯಿಲ್ಲದ‌ ಹೋರಾಟ‌.....
ಬದುಕಿನ‌ ನಡೆ, ಹೊಸ‌ ಚಿಗುರು ಹಳೆ ಬೇರು ಕೂಡಿರಲು ಮರ‌ ಸೊಬಗು....
ಆದ್ರೆ ಈ ಕಾಲದ ಜಂಜಡದ‌ ಬದುಕಿನಲ್ಲಿ ಭಾವನೆಗಳಿಗೆ ಬೆಲೆ ಇಲ್ಲದಾಗಿದೆ ಎಂಬುದೆ ವೇದನೆ ಪಾಟೀಲರೆ.
ಕವನದ‌ ಸಾಲುಗಳಲ್ಲಿ ಮನಸ್ಸಿನ‌ ಆಳ‌ ಚೆನ್ನಗಿ ಮೂಡಿದೆ...
ಧನ್ಯವಾದಗಳು.
ರಾಮೋ.

Submitted by H A Patil Thu, 03/31/2016 - 20:04

In reply to by RAMAMOHANA

ರಾಮ ಮೋಹನರವರಿಗೆ ವಂದನೆಗಳು
ಕವನವನ್ನು ನೀವು ಗ್ರಹಿಸಿದ ರೀತಿ ಅದನ್ನು ಅಕ್ಷರ ರೂಪದಲ್ಲಿ ಪ್ರತಿಕ್ರಿಯಿಸಿದ್ದು ಅರ್ಥಪೂರ್ಣವಾಗಿದೆ ಧನ್ಯವಾದಗಳು.

Submitted by H A Patil Thu, 03/31/2016 - 20:02

In reply to by kavinagaraj

ಕವಿ ನಾಗರಾಜರವರಿಗೆ ವಂದನೆಗಳು
ಸಕಾಲದಲ್ಲಿ ಪ್ರತಿಕ್ರಿಯಿಸಲು ಆಗಲಿಲ್ಲ ಎಲ್ಲರ ಕ್ಷಮೆಯಿರಲಿ ಕವನದ ವಿಮರ್ಶಾತ್ಮ ಪ್ರತಿಕ್ರಿಯೆಗೆ ಧನ್ಯವಾದಗಳು

Submitted by ravindra n angadi Wed, 03/02/2016 - 12:32

ನಮಸ್ಕಾರ ಸರ್
ತುಂಬಾ ಚನ್ನಾಗಿದೆ ಸರ್ ಹೆಂಡತಿಗೆ ಹೇಳಲಾಗದು ತಾಯಿಯನ್ನು ಬಿಡಲಾಗದು ಗಂಡು ಮಕ್ಕಳ ಜೀವನವೆ ಹಾಗೆ ಆಗಿದೆ.
ಧನ್ಯವಾದಗಳೊಂದಿಗೆ .

Submitted by H A Patil Thu, 03/31/2016 - 20:07

In reply to by ravindra n angadi

ರವೀಂದ್ರ ಅಂಗಡಿಯವರಿಗೆ ವಂದನೆಗಳು
ಕವನ ಕುರಿತ ಉತ್ತಮ ಗ್ರಹಿಕೆ ಮತ್ತು ಪ್ರತಿಕ್ರಿಯೆಗೆ ಧನ್ಯವಾದಗಳು.

Submitted by H A Patil Thu, 03/31/2016 - 20:10

In reply to by ravindra n angadi

ರವೀಂದ್ರ ಅಂಗಡಿಯವರಿಗೆ ವಂದನೆಗಳು ಕವನದ ಗ್ರಹಿಕೆ ಮತ್ತು ಪ್ರತಿಕ್ರಿಯೆಗೆ ಧನ್ಯವಾದಗಳು.

Submitted by swara kamath Wed, 03/02/2016 - 13:05

ಪಾಟೀಲರಿಗೆ ನಮಸ್ಕಾರಗಳು
ಇಲ್ಲಿ ಮನಸ್ಸಿಗೆ ವಿರೇಚಕವಾಗಿ ಹೊಮ್ಮುವ ಬೇಗುದಿಯ ಬಣ್ಣನೆ ಓದುಗರ ಆತ್ಮಕ್ಕೆ ನೇರವಾಗಿ ಮುಟ್ಟುತ್ತೆ .ಅಂತಹ ಸಂದರ್ಭ ದಲ್ಲಿ ಮನಸ್ಸಿಗೆ ಸಮಧಾನ ನೀಡುವುದು ನಮಗೆ ಆಪ್ತರೆನಿಸಿದವರ ಸಲಹೆಗಳು.
ವಂದನೆಗ‌ಳು

Submitted by H A Patil Thu, 03/31/2016 - 20:14

In reply to by swara kamath

ರಮೇಶ ಕಾಮತರಿಗೆ ವಂದನೆಗಳು
ನಿಮ್ಮ ಪ್ರತಿಕ್ರಿಯೆ ಓದಿದೆ ನಿಮ್ಮ ಗ್ರಹಿಕೆ ಮತ್ತು ಭಾವನೆಯ ಅಭಿವ್ಯಕ್ತಿ ಕವನದ ಗಹನತೆಯನ್ನು ಹೆಚ್ಚಿಸಿದೆ ಧನ್ಯವಾದಗಳು.

Submitted by nageshamysore Wed, 03/02/2016 - 17:58

ಪಾಟೀಲರೆ ನಮಸ್ಕಾರ.. ನೀವು ಎಳೆ ಎಳೆಯಾಗಿ ಬಿಡಿಸಿಟ್ಟ ಸಂಬಂಧಗಳ ನಡುವಿನ ಪರಿಪರಿ ದ್ವಂದ್ವ ಮತ್ತು ಅದರ ಹೊದರಿನಲ್ಲೆ ಬಿಚ್ಚಿಕೊಳ್ಳುವ ಬಾಂಧವ್ಯದ ಆತ್ಮೀಯ ಸಾಮೀಪ್ಯ, ಮಾತಾಗದೆ ಕ್ರಿಯೆಯಾಗುವ ಅಚ್ಚರಿ, ಮುನಿಸಿನಿಂದ ಮುದದವರೆಗೆ ತೂಗುಯ್ಯಾಲೆಯಂತೆ ಹೊಯ್ದಾಡುವ ಪರಿ - ಎಲ್ಲವು ಪ್ರತಿಯೊಬ್ಬರ ಅನುಭವವೂ ಹೌದು. ಕವನದ ಅಂತರ್ಗತ ಭಾವ ಮನ ಮುಟ್ಟಿತು !

Submitted by H A Patil Thu, 03/31/2016 - 20:23

In reply to by nageshamysore

ನಾಗೇಶ ಮೈಸೂರುರವರಿಗೆ ವಂದನೆಗಳು
ಬೇಗುದಿ ಕವನ ನಿಮ್ಮ ಗ್ರಹಿಕೆಯಲ್ಲಿ ಹೊಸ ಅರ್ಥ ಪಡೆದು ಕೊಂಡು ಭಿನ್ನ ಆಯಾಮ ಪಡೆದುಕೊಂಡಿದೆ ಅದನ್ನು ನೀವು ಅದ್ಭುತವಾಗಿ ಪ್ರತಿಕ್ರಿಯಿಸಿದ್ದೀರಿ ಧನ್ಯವಾದಗಳು.