ಬೇಸಿಗೆ

ಬೇಸಿಗೆ

ಈಗ ಬೆಂಗಳೂರು ಬೇಸಿಗೆ = ಶಿವಮೊಗ್ಗ, ಮೈಸೂರು ಬೇಸಿಗೆ!

ಬೆಂಗಳೂರಿನಲ್ಲಿ ಬೇಸಿಗೆಯೇ ಇರುತ್ತಿರಲಿಲ್ಲವಂತೆ! ಶಿವಮೊಗ್ಗಕ್ಕೆ ಬರುತ್ತಿದ್ದ ನಮ್ಮ cousinಉ ಯಾವಾಗಲೂ ಬೆಂಗಳೂರಿನ ಗುಣಗಾನ ಮಾಡುತ್ತಿದ್ದ. ಆದರೆ ನಾವುಗಳು ಬೆಂಗಳೂರು ಸೇರುವಷ್ಟರಲ್ಲಿ ಬೇಸಿಗೆಯಲ್ಲಿ ಬೆಂದು ಹೋಗುವಷ್ಟು ಬಿಸಿಲು ಬೆಂಗಳೂರಿನಲ್ಲಿಯೂ ಇತ್ತು.
ಪಕ್ಕದ ಆಂಧ್ರದ ಕಡೆಗೆ ಇರುವ ಕೆಲವು ಬಡಾವಣೆಗಳು, ಏರ್ಪೋರ್ಟ್ ರೋಡು ಕಡೆ ಈಗಲೂ ಬಿಸಿಲು ಜೋರಾದರೆ ಕಾಲಿಡಲೂ ಕಷ್ಟವಾಗುವ ಹಾಗಿವೆ.
ಜಯನಗರ, ಜೆ ಪಿ ನಗರ ಕೊನೆಗೆ ಮಲ್ಲೇಶ್ವರದ ಕೆಲವು ಏರಿಯಾಗಳು ಹಾಗೆ ನೋಡಿದರೆ ಸಾಕಷ್ಟು ಕೂಲ್ ಆಗಿರುತ್ತವೆ. ಜಯನಗರದಲ್ಲಿ ಲಾಲ್ ಬಾಗ್ ಸುತ್ತ ಮುತ್ತ ಈ ಬೇಸಿಗೆಯಲ್ಲೂ ಸ್ವಲ್ಪ ತಂಪು ವಾತಾವರಣವಿರುತ್ತದೆ. ಇನ್ನು ಇರೋ ಕೆಲವು ಮರಗಳನ್ನು ಕಾಪಾಡಿಕೊಂಡು ಹೋದರೆ ಬೆಂಗಳೂರಿನ ಮರ್ಯಾದೆಯಾದರೂ ಉಳಿಯಬಹುದೆಂಬ hope ಒಂದೆಡೆಯಿದ್ದರೂ ಹೆಚ್ಚುತ್ತಿರುವ ಮಾಲಿನ್ಯ ಅದೆಷ್ಟು ಮರಗಳನ್ನು ಹಾಗೇ ಬಿಡುತ್ತವೋ ಕಾದು ನೋಡಬೇಕು.

*******

ಬೇಸಿಗೆ nostalgia

ಭದ್ರಾ ನದಿ ದಂಡೆಯ ಮೇಲಿರುವ ಹಳ್ಳಿ (ಈಗ ತಾಲೂಕಾಗಿರಬಹುದು) ಹೊಳೆಹೊನ್ನೂರಿನಲ್ಲಿ ನಮ್ಮ ಅಜ್ಜನ ಮನೆಯಿತ್ತು. ಅವರ ಮನೆಗೆ ನಾವು ಹೋಗುತ್ತಿದ್ದುದು ಆಗೊಮ್ಮೆ ಈಗೊಮ್ಮೆ - ಬೇಸಿಗೆ ರಜೆಯಲ್ಲಿಯೇ ಹೆಚ್ಚು. ಅಜ್ಜನ ಮನೆ ಸಂಪೂರ್ಣ ಮಣ್ಣಿನಲ್ಲಿ ಕಟ್ಟಿದ್ದು! ಫ್ಯಾನು ಇರಲಿಲ್ಲ,
"ತೆಗೀರೋ ಅತ್ಲಾಗೆ! ಅದೇನು ಫ್ಯಾನು ಫ್ಯಾನು ಅಂತ ಹೊಡ್ಕೋತೀರ? ಹೊರ್ಗಡೆ ತಣ್ಣಗ್ ಗಾಳಿ ಬೀಸ್ತಾ ಇದೆ. ಅಲ್ ಹೋಗ್ ಕೂತ್ಕಳಿ " ಅಂತ ಬೈಯುತ್ತಿದ್ದರು. ಅವರ ಊರು ಆಗ ಹಾಗೆಯೇ ಇತ್ತು, ಕೂಡ. ಹೊರಗೆ ತಂಪಾದ ಗಾಳಿ ಬೀಸುತ್ತಿತ್ತು. ಮಣ್ಣಿನ ಮನೆಯ ಮುಂದೆ ಜಗಲಿ ಇತ್ತು. ಅಲ್ಲಿ ಕುಳಿತರೆ ಪಕ್ಕದಲ್ಲಿ ಅಜ್ಜ ಕಟ್ಟಿಸಿದ್ದ ಚಿಕ್ಕ ದೇವಸ್ಥಾನವಿದ್ದರಿಂದ ಅಕ್ಕ ಪಕ್ಕ ಖಾಲಿ ಜಾಗ ಇದ್ದು ಗಾಳಿ ಹೆಚ್ಚು ಸೊಂಪಾಗಿ ಬೀಸುತ್ತಿತ್ತು.
ಭದ್ರಾ ನದಿ ಮಾತ್ರ ನಾನು ನೋಡಿದಂತೆ ಯಾವತ್ತೂ ಶುಭ್ರವಾಗಿರಲಿಲ್ಲ. ನಮ್ಮ ತಂದೆಯವರು ಸಣ್ಣವರಿದ್ದಾಗ ನದಿಯಲ್ಲಿ ಈಜುತ್ತಿದ್ದರಂತೆ - ಆಗ ನದಿ ಶುಭ್ರವಿತ್ತಂತೆ... ಈಗ ಮಾತ್ರ ಆ ಕಪ್ಪು ನೀರು ನೋಡಿದರೆ ಈಜುವುದಿರಲಿ ಹತ್ತಿರ ಸುಳಿಯೋದೂ ಕಷ್ಟ!

ಚಿತ್ರದುರ್ಗದಲ್ಲಿ ಯದ್ವಾತದ್ವಾ ಬಿಸಿಲು! ಬೇಸಿಗೆ, ಚಳಿಗಾಲ ಅನ್ನೋದೇ ಅಲ್ಲಿ ಇರಲಿಲ್ಲ ಅನ್ಸತ್ತೆ. ಒಣಕಲು ಹವಾಮಾನ, ನೀರಿನ ಪರದಾಟ (ಆಗ ೩ - ೪ ದಿನಕ್ಕೊಮ್ಮೆ ನೀರು ಬಿಡುತ್ತಿದ್ದರು, ಮನೆಯಿಂದ ದೂರ ಒಂದು ನಲ್ಲಿಯಲ್ಲಿ ಮಾತ್ರ ಮುನ್ಸಿಪಾಲಿಟಿ ನೀರು ಬರುತ್ತಿತ್ತು. ಯಾರಾದರೂ ಕೊಡ ಹಿಡಿದುಕೊಂಡು ಹೋಗಿ ನೀರು ಹೊತ್ತು ತಂದರೆ ಮಾತ್ರ ಮನೆಗೆ ನೀರು!). ನಮ್ಮ ಡ್ಯಾಡಿ ನಾಲ್ಕು ಕಬ್ಬಿಣದ ಡ್ರಮ್ಮುಗಳನ್ನ ತಂದಿಟ್ಟಿದ್ದರು. ಮೂರು ನಾಲ್ಕು ದಿನಗಳಿಗೊಮ್ಮೆ ಎಲ್ಲರೂ ಕೊಡ ಹಿಡಿದು ಹೋಗಿ ನೀರು ತುಂಬಿಸಿಕೊಂಡು ಬಂದು ಹಾಕುತ್ತಿದ್ದುದು ನೆನೆಸಿಕೊಂಡರೆ ನಗು ಬರುತ್ತೆ! :)
ಚಿತ್ರದುರ್ಗಕ್ಕೆ ನಮ್ಮ ಅಜ್ಜ ಭೇಟಿ ಕೊಟ್ಟರೆ ಯಾವತ್ತೂ ಫ್ಯಾನ್ ಹಾಕಿಕೊಳ್ಳುತ್ತಿರಲಿಲ್ಲ. ಹೊರಗೆ ಖುರ್ಚಿ ಹಾಕಿಕೊಂಡು ತಣ್ಣನೆ ಗಾಳಿ ಬೀಸುವುದೆಂದು ಕುಳಿತುಕೊಳ್ಳುತ್ತಿದ್ದರು. ಗಾಳಿ ಮಾತ್ರ ಬೀಸುತ್ತಿರಲಿಲ್ಲ. ಬೀಸಿದರೂ ತಣ್ಣಗಿರುತ್ತಿರಲಿಲ್ಲ.

ಶಿವಮೊಗ್ಗದಲ್ಲಿ ಮಾತ್ರ ನೀರಿನ ಕೊರತೆಯಿರಲಿಲ್ಲ. ಸಿಹಿಯಾಗಿರೋ ತುಂಗಾ ನೀರು ದಿನಕ್ಕೊಂದು ಸಾರಿನೋ ಎರಡು ದಿನಕ್ಕೊಮ್ಮೆನೊ ಸೀದ ಕೆಳಗಿದ್ದ sumpಗೆ ಬರ್ತಾ ಇತ್ತು. ಆದರೆ ಮಲೆನಾಡಿಗೆ ಹತ್ತಿರವಾದರೂ, ಶಿವಮೊಗ್ಗೆಯ ಬಿಸಿಲಿನದ್ದು ಅತಿರೇಕದ ಝಳ. ಸ್ವಲ್ಪ ಹೊತ್ತು ಸೈಕಲ್ ಹೊರಗೆ ಒರಗಿಸಿಟ್ಟು ಬಂದಿದ್ದರೆ ಸಾಕು ಸೀಟುಗಳು ಚುರುಕ್ ಮುಟ್ಟಿಸುತ್ತಿದ್ದವು.

*******

AC ಬೇಕು

ಹಿಂದೊಮ್ಮೆ ಕೂಲರ್ ತಂದು ಮನೆಯೆಲ್ಲಾ 'ಕೂಲ್' ಮಾಡಬೇಕಿದ್ದ ಕೂಲರ್ ನಮ್ಮನ್ನೆಲ್ಲಾ ಫೂಲ್ ಮಾಡಿ ಫೌಲ್ ವಾಸನೆ ಹೊರಗೆಡವತೊಡಗಿದ್ದಾಗ ಅದನ್ನು ಯಾರಿಗೋ 'ದಾನ' ಮಾಡಿ ನಮ್ಮಣ್ಣ ಅದಕ್ಕೆ ಇತಿಶ್ರೀ ಹಾಡಿದ್ದ. ಮುಂದೆ ಕೊಂಡು ತಂದರೆ ಕೂಲರ್ ಬೇಡ, AC ನೇ ತರಬೇಕು ಎಂದೇ ನಿರ್ಧಾರವಾಗಿತ್ತು.
ನನ್ನ ಸ್ನೇಹಿತರೆಲ್ಲ ತಣ್ಣಗೆ AC ಇರುವ ಆಫೀಸಿನಲ್ಲಿ ಕುಳಿತು ಕೆಲಸ ಮಾಡುತ್ತಿರುವಾಗ ನಾನೇಕೆ ಶೆಕೆಯಲ್ಲಿ ಕುಳಿತು ಚರ್ಮ ಸುಟ್ಟುಕೊಳ್ಬೇಕು ಅಂತಂದ್ಕೊಂಡು ಏ ಸಿ ರೇಟು ವಿಚಾರಿಸಲು ಹೋದೆ. ಶೋ ರೂಮ್ ಗೆ ಕಾಲಿಟ್ಟು price ಕೇಳಿದಾಗ heavy ಶಾಕ್ ಆಗಿ ಮನೆಗೆ ವಾಪಸ್ ಓಡ್ದೆ. ಸದ್ಯ ಈ‌ ಸಲ ಬೇಗ ಮಳೆ ಬಂದ್ರೆ ಸಾಕು!

Rating
No votes yet

Comments