ಬೋರಂಗಿ - ಲಕ್ಷ್ಮೀಕಾಂತ ಇಟ್ನಾಳ
ಕಡ್ಡಿಪೆಟ್ಟಿಗೆಯಲ್ಲಿ ಬೋರಂಗಿಗಳ ಹಿಡಿದು
ಬನ್ನಿ ತಪ್ಪಲು ತಿನ್ನಿಸಿದೆವು ಹಿಡಿದು,
ಕೆಂಪು ನಗಾರಿ, ಹಸಿರು ಸಜ್ಜಿ, ಬಣ್ಣ ಬಣ್ಣದ
ಕುಡ್ಡ ಬೋರಾಣಿಗಳ ಕೈಬೆರಳ ಮೇಲೆ ಹಿಡಿದು
ಆ ಪುಟ್ಟಲೋಕದ ಪಾಪದ ಕೂಸುಗಳು,
ಕಡ್ಡಿಪೆಟ್ಟಿಗೆಯೊಳಗೆ ಸೆಟೆದು ಸತ್ತಮೇಲೆ
ಕಿತ್ತುಹಾಕಿ ರೆಕ್ಕೆ, ಬಿಳಿಯ ತತ್ತಿ ಕೊಂದು, ನಾವು
ಪರಿಸರಪ್ರೇಮಿ, ಪಕ್ಷಿಪ್ರೇಮಿ ಬಹುರಂಗಿಗಳು!!
ಈಗಲೂ ಹಾಗೆ, ಬೋರಂಗಿಗಳು ನಾವು
ಕೆಲವರ ಕೈಯಲ್ಲಿಯ ಕಡ್ಡಿಪೆಟ್ಟಿಗೆಗಳಲ್ಲಿ!
Rating
Comments
ಉ: ಬೋರಂಗಿ - ಲಕ್ಷ್ಮೀಕಾಂತ ಇಟ್ನಾಳ
ಇಟ್ನಾಳರೇ, ನನಗೆ ಬೋರಂಗಿ ಎಂದರೆ ಏನು ಎಂದು ನಿಜಕ್ಕೂ ತಿಳಿದಿಲ್ಲ. ಬಹುಷಃ ಅದೊಂದು ಜೀರುಂಡೆಯಂತಹ ಕೀಟವಿರಬಹುದೇನೋ!
In reply to ಉ: ಬೋರಂಗಿ - ಲಕ್ಷ್ಮೀಕಾಂತ ಇಟ್ನಾಳ by kavinagaraj
ಉ: ಬೋರಂಗಿ - ಲಕ್ಷ್ಮೀಕಾಂತ ಇಟ್ನಾಳ
ಕವಿನಾ ಸರ್ ವಂದನೆಗಳು. ಉತ್ತರ ಕರ್ನಾಟಕದ ಬಹುತೇಕ ಭಾಗಗಳು ಸಣ್ಣ ಸಣ್ನ ಬೆಟ್ಟಗಳು, ಗುಡ್ಡಗಳು ಕುರುಚಲುಗಳು ಹೇರಳವಿವೆ. ಇಲ್ಲಿಗೆ ಪ್ರತಿಯೊಬ್ಬ ಅಂದಿನ ಕಾಲದ ಹುಡುಗರು ಸಮೀಪದ ಗುಡ್ಡಗಳಲ್ಲಿ ಸಿಗುತ್ತಿದ್ದ, ಬೋರಂಗಿಗಳನ್ನು ಹುಡುಕುತ್ತ ಹೋಗುತ್ತಿದ್ದೆವು. ಒಂದೊಂದು ತರಹದ (ಕೀಟಗಳ ಪ್ರಬೇಧ) ಬೋರಂಗಿಗಳು ಒಂದೊಂದು ಸಣ್ಣ ಸಣ್ನ ಪೊದೆಯಂತಹ ಗಿಡಗಳಲ್ಲಿ ಸಿಗುತ್ತಿದ್ದವು.. ಇದು ಆಗ ಗೊತ್ತಾಗದೇ ಇಡೀ ಗುಡ್ಡವನ್ನೇ ಸುತ್ತುತ್ತಿದ್ದೆವು, ಉದಾ: ಗುಡಿಸುವ ಕಸಬರಿಗೆಗಳನ್ನು ಮಾಡುವ ಕುರುಚಲು (ಈಚಲವಲ್ಲ) ಕಂಟಿಗಳ ಎಲೆಗಳಲ್ಲಿ ಕುರುಡು (ಕುಡ್ಡ) ಬೋರಾಣಿಗಳು 1 ಸೆಂಮೀ ನಿಂದ 2 ಸೆಂಮಿ ಅಳತೆಗಳವು ಬಣ್ನ ಬಣ್ನದ ರೆಕ್ಕೆಗಳಿಂದ ಕೂತಿರುತ್ತಿದ್ದವು. ಬಲು ಚುರುಕು, ಇವುಗಳನ್ನು ಹಿಡಿದು ಕಡ್ಡಿ ಪೆಟ್ಟಿಗೆಯಲ್ಲಿ ಹಿಟ್ಟು, ಇಲ್ಲ ಎಲೆಗಳನ್ನು ತುಂಬಿ, ಇವುಗಳನ್ನು ಅದರಲ್ಲಿ ಬಿಡುತ್ತಿದ್ದೆವು, ನಗಾರಿ ಬೋರಂಗಿಗಳ ಬಣ್ನ ಮೆರೂನ. ಇದು ತುಸು ದೊಡ್ಡದು. ಸುಮಾರು 5 ಸೆಂ.ಮೀ ಅಳತೆಯದು,' ಬಣದರಿಬಿ' ಗಿಡದಲ್ಲಿ ಇರುತ್ತದಂತೆ. ನಮ್ಮೂರಲ್ಲಿ ಕಟ್ಟಿಗೆ ಹೊರೆ ತರುತ್ತಿದ್ದ ಲಂಬಾಣಿ ಮಹಿಳೆಯರು ಇವುಗಳನ್ನು ಹಿಡಿದು, ಸೆರಗಲ್ಲಿ ಕಟ್ಟಿಕೊಂಡು ತಂದು ಮಾರುತ್ತಿದ್ದರು. ಇವು ಬಲು ಸುಂದರ, ಇನ್ನು ಸಜ್ಜಿ ಬೋರಾಣಿಗಳು ಸಜ್ಜಿ, ಜೋಳದ ಹೊಲದಲ್ಲಿ ಸಿಗುತ್ತಿದ್ದವು. ಅದೊಂತರಹ ಕೀಟಗಳು. ನಿಚ್ಚಳ ಹಸಿರು ಬಣ್ಣ. ಇವೆಲ್ಲವುಗಳ ಕುತ್ತಿಗೆ ಭಾಗದಲ್ಲಿ ಎಳೆಯಂತಹ ದಾರ ಕಟ್ಟಿ ಇವುಗಳನ್ನು ಹಾರಿ ಮೋಜು ಅನುಭವಿಸುತ್ತಿದ್ದೆವು. ಇವುಗಳಿಲ್ಲದೆಯೇ ಉತ್ತರ ಕರ್ನಾಟಕದಲ್ಲಿ ಬಾಲ್ಯವೇ ಇಲ್ಲ. ಒಂದು ಎರಡು ದಿನಗಳಲ್ಲಿ ಕಡ್ಡಿಪೆಟ್ಟಿಗೆಯಲ್ಲಿ ತತ್ತಿಗಳನ್ನು ಹಾಕುತ್ತಿದ್ದವು. ಹೆಚ್ಚು ಕಡಿಮೆ ಬಿಳಿ ಬಣ್ಣದವು. ಎಂದೂ ಮರಿಯಾಗಿದ್ದು ಕಾಣೆ. ಸುಮಾರು ಒಂದು ವಾರವಿದ್ದು, ಹೆಚ್ಚಾಗಿ ಪೆಟ್ಟಿಗೆಯಲ್ಲಿ ಸಾಯುವುದೇ ಹೆಚ್ಚು. ಇವುಗಳ ಒಡನಾಟದ ಬದುಕು ನೆನೆಯಲು ಬಲು ಚೆನ್ನ. ಅವುಗಳು ಬೆರಳನ್ನು ಕಡಿಯುತ್ತಿದ್ದವು. ಆ ಖುಷಿ ಮತ್ತೇ ಬಂದೀತೇ . ಎಲ್ಲವೂ ನೆನಪು ಮಾತ್ರ. ಗೊತ್ತಿದ್ದನ್ನು ಹಂಚಿಕೊಂಡಿದ್ದೇನೆ. ಇನ್ನೂ ಮಾಹಿತಿಗಳು ಇರಬಹುದು.ಧನ್ಯವಾದಗಳು ಸರ್.
In reply to ಉ: ಬೋರಂಗಿ - ಲಕ್ಷ್ಮೀಕಾಂತ ಇಟ್ನಾಳ by lpitnal
ಉ: ಬೋರಂಗಿ - ಲಕ್ಷ್ಮೀಕಾಂತ ಇಟ್ನಾಳ
ಮಾಹಿತಿಗಾಗಿ ವಂದನೆಗಳು.