ಬ್ರಹ್ಮಾಂಡರ ಬೇಟಿ - ಜಯಂತನ ಬಲೆಯಲ್ಲಿ ಬ್ರಹ್ಮಾಂಡರು
ಬ್ರಹ್ಮಾಂಡರ ಬೇಟಿ - ಜಯಂತನ ಬಲೆಯಲ್ಲಿ ಬ್ರಹ್ಮಾಂಡರು
ಇಲ್ಲಿಯವರೆಗೂ . ...
ಬ್ರಹ್ಮಾಂಡರು ನಗುತ್ತ ಅಂದರು ,
‘ಇದೇನಯ್ಯ ಜಗತ್ತಿಗೆ ಗೊತ್ತಿದೆ, ನಿನಗೆ ಗೊತ್ತಿಲ್ಲವೆ? , ನನ್ನ ಮೇಲೆ ರೇಪ್ ಕೇಸ್ ಬಂದುಬಿಟ್ಟಿದೆ ಕಣಯ್ಯ, ಅದಕ್ಕೆ ತಲೆ ತಪ್ಪಿಸಿ ಓಡಾಡುತ್ತ ಇದ್ದೀನಿ, ಈ ಪೋಲಿಸರು ಯಾವಾಗ ಬರುತ್ತಾರೋ ಗೊತ್ತಾಗಲ್ಲ ನೋಡು, ಅದಕ್ಕೆ ನನ್ನ ಎಚ್ಚರದಲ್ಲಿ ನಾನು ಇದ್ದೇನೆ’
ಶ್ರೀನಾಥನ ಮುಖ ಗಂಭೀರವಾಯಿತು, ಛೇ ! ಇವನೂ ಇದೇ ಗುಂಪಿಗೆ ಸೇರಿದವನ , ಸನ್ಯಾಸಿಯಾಗಿ ಹೆಣ್ಣು ಅಂದರೆ ಮರ್ಯಾದೆ ಬೇಡವಾ ? ಇಂತಹವರನ್ನು ಮಾತನಾಡಿಸುವುದೇ ತಪ್ಪು ಎಂದುಕೊಂಡು,
‘ಏನು ನಿನ್ನ ಮೇಲು ಅದೇ ಕೇಸಾ , ಗೊತ್ತಾಯ್ತು ಬಿಡಯ್ಯ, ನಾನು ಎದ್ದು ಹೋಗುತ್ತೇನೆ ಬಿಡು, ನಿನ್ನ ಸಹವಾಸ ಬೇಡ’
ಎನ್ನುತ್ತ ಎದ್ದು ನಿಂತರು .
ಮುಂದೆ ಓದಿ..
‘ಲೋ ಶ್ರೀನಾಥ ನೀನೂ ಸಹ ನನ್ನ ನಂಬುವದಿಲ್ಲವೇನೊ, ನೀನು ನನ್ನ ಚಿಕ್ಕವಯಸಿನಿಂದ ನೋಡಿದವನು ಹೆಣ್ಣು ಮಕ್ಕಳು ಅಂದರೇ ಆಗೋದೆ ಇಲ್ಲ ನಂಗೆ ಸ್ವಲ್ಪ ದೂರ ದೂರಾನೆ , ಅದು ಏನೋ ಮಾಡಲು ಹೋಗಿ ಏನೋ ಆಯ್ತು ಕಣಯ್ಯ , ಬಾಲ್ಯ ಸ್ನೇಹಿತ ಅಂತ ಸಲಹೆ ಕೇಳಿದರೆ , ಪರಿಸ್ಥಿತಿ ಹೀಗೆ ಆಯಿತು ನೋಡು’
ಶ್ರೀನಾಥನಿಗೆ ಕುತೂಹಲ ಕೆರಳಿತು
‘ಅದೇನಪ್ಪ ಅಂತ ಎಡವಟ್ಟು ಆಗಿದ್ದು, ಬಾಲ್ಯಸ್ನೇಹಿತ ಅಂದರೆ ಯಾರು ನಾನಂತು ನಿನಗೆ ಯಾವುದೇ ಸಲಹೆ ಕೊಡಲಿಲ್ಲವಲ್ಲ”
ಬ್ರಹ್ಮಾಂಡರು ನೊಂದು ಹೇಳಿದರು
‘ನೀನಲ್ಲಪ್ಪ , ಈಗ ಆಗಿರುವ ಸಮಸ್ಯೆ ಪರಿಹರಿಸಲು ನೀನು ಸಹಾಯ ಮಾಡಲು ಆಗುತ್ತ ಎಂದು ಕೇಳಲೇ ಕರೆದಿದ್ದು, ನಮ್ಮಿಬ್ಬರ ನಡುವೆ ಇದ್ದನಲ್ಲಪ್ಪ, ಎಂತದೋ ಜಯಂತ್ ನಾರಿಮನ್ ಅಂತ ಅವನ ಹೆಸರಿತ್ತಲ್ಲಪ್ಪ, ನಿನಗೆ ನೆನಪಿಲ್ಲವ ಅವನೇ ಈ ಪರಿಸ್ಥಿತಿ ತಂದಿಟ್ಟ’’
ಶ್ರೀನಾಥನಿಗೆ ಕುತೂಹಲ ಅನ್ನಿಸಿತು,
‘ಜಯಂತ್ ಅವನು ನಮ್ಮ ಜೊತೆ ಹೈಸ್ಕೂಲಿನಲ್ಲಿ ಓದುತ್ತ ಇದ್ದವನಲ್ಲವೇ , ನನಗೆ ನೆನಪಿದೆ ಅವರ ಅಪ್ಪ ತಮಿಳುನಾಡಿನಿಂದ ಬಂದಿದ್ದವರು, ಇಲ್ಲಿ ನೆಲೆಸಿದ್ದರು, ಈಗ ಅವನು ಬೆಂಗಳೂರಿನಲ್ಲಿ ಪ್ರಖ್ಯಾತ ಕ್ರಿಮಿನಲ್ ಲಾಯರ್ ಅಲ್ಲವೆ , ಅವನಿಂದ ನಿನಗೆ ಏನು ತೊಂದರೆ ಆಯಿತು, ಅವನು ಹೈಸ್ಕೂಲಿನಲ್ಲಿರುವಾಗಲೇ ಸಾಕಷ್ಟುತರಲೇ ನನಗೆ ನೆನಪಿದೆ’
ಬ್ರಹ್ಮಾಂಡರು ಹೇಳಿದರು
‘ಹೌದಪ್ಪ, ನಾನು ಹೋಗಿ ಅವನ ಕೈಲಿ ಸಿಕ್ಕಿಕೊಂಡೆ ನೋಡು, ಮನುಷ್ಯ ಆ ಕಡೆ ಈ ಕಡೆ ಎಂದು ಎರಡು ಕಡೆಯೂ ಸೇರಿ ನನ್ನ ತ್ರಿಶಂಕು ಮಾಡಿಬಿಟ್ಟಿದ್ದಾನೆ, ನಿನ್ನ ಹತ್ತಿರ ಎಂತ ಗುಟ್ಟು, ನನ್ನ ಆಶ್ರಮಕ್ಕೆ ಭಕ್ತ ಜನ ಬರೋದೆ ಕಡಿಮೆ ಆಗಿ ಹೋಗಿತ್ತು, ಇರೋರೆಲ್ಲ, ಆ ನಿಮಿಷಾನಂದ , ಮತ್ತೊಂದು ಅದ್ಯಾವುದೊ ಇದೆಯಲ್ಲಪ್ಪ ಚಂದ್ರಾಪುರ ಗೋಮಠ ಅಂತ ಎಲ್ಲರೂ ಹುಡುಕಿ ಹುಡುಕಿ ಹೋಗೋರು, ಅವರಿಗೆ ಹಣದ ಸುರಿಮಳೆ ನನಗೆ ಬಣ, ಬಣ. ಆಗ ಭಕ್ತರನ್ನೆಲ್ಲ ನನ್ನ ಆಶ್ರಮಕ್ಕೆ ಸೆಳೆಯಬೇಕೆನಿಸಿತು, ಅದಕ್ಕೆ ಏನು ಮಾಡಬಹುದೆಂದು , ಚಿಂತಿಸಿದೆ, ಅದೇನೊ ಬಾಲ್ಯ ಮಿತ್ರ ಎಂದು ಅದೆ ಜಯಂತ ನಾರಿಮಮ್ ಹತ್ರ ಸಲಹೆ ಕೇಳಿದೆ ನೋಡು ನನ್ನ ಜೀವನವೇ ಮುಂಡಾಮೋಚ್ಕೊಂಡು ಹೋಯಿತು’
ಶ್ರೀನಾಥ ಕೇಳಿದರು
‘ಅದೆಂತದಪ್ಪ ಅವನು ಕೊಟ್ಟ ಸಲಹೆ ನಿನ್ನ ಹಾಳು ಮಾಡಿದ್ದು ‘
ಅದಕ್ಕೆ ಗಣೇಶ ಉರುಫ್ ಬ್ರಹ್ಮಾಂಡರು ಕೊಂಚ ಸಂಕೋಚದಿಂದ ನುಡಿದರು.
‘ಅದೇ ಅಪ್ಪ ಆ ನಿಮಿಷಾನಂದ , ಚಂದ್ರಾಪುರ ಗೋಮಠ ಇವರೆಲ್ಲರ ಮೇಲೆ ರೇಪು ಅದು ಇದು ಅಂತ ಕೇಸಿದೆಯಲ್ಲಪ್ಪ, ಹಾಗಾಗಿ ಅವರ ಹೆಸರು ಪ್ರಖ್ಯಾತವಾಗಿ ಹೋಗಿದೆ, ಜನರೆಲ್ಲ ಅಲ್ಲೇ ಏನೊ ಇರಬೇಕು ಅಂತ ಆಕರ್ಷಣೆಗೆ ಒಳಗಾಗ್ತಾರೆ, ಅದಕ್ಕೆ ನೀನು ಸಹ ಅಂತದೇನಾದರು ಕೇಸು ನಿನ್ನ ಮೇಲೆ ಬರುವಂತೆ ಮಾಡು, ಆಗ ನಿನ್ನ ಹೆಸರು ಆಶ್ರಮದ ಹೆಸರು ಎಲ್ಲವೂ ಮಾಧ್ಯಮಗಳಲ್ಲಿ ಪತ್ರಿಕೆಗಳಲ್ಲಿ ಬಂದು ನಿನ್ನ ಹೆಸರು ಎಲ್ಲ ಕಡೆ ಪ್ರಖ್ಯಾತವಾಗಿ, ಜನರೆಲ್ಲ ನಿನ್ನ ಕಡೆ ಬರುವಂತಾಗುತ್ತೆ ಎಂದು ಆ ಜಯಂತ ನನ್ನ ತಲೆ ಕೆಡಸಿದೆನಪ್ಪ, ಹಾಗಾಗಿ ನಾನು ಇರಬಹುದೇನೊ ಅಂತ ನಂಬಿಬಿಟ್ಟೆ ನೋಡು ಈಗ ತಗ್ಲಾಕೊಂಡು ಬಿಟ್ಟಿದ್ದೇನೆ’
ಶ್ರೀನಾಥರು
‘ಹೌದೇ, ಅದು ಅಷ್ಟು ಸುಲುಭವಲ್ಲವಲ್ಲ ಸುಖಾಸುಮ್ಮನೆ ಕೇಸು ಬಿಲ್ಡ್ ಅಪ್ ಮಾಡೋದು, ಅದಕ್ಕೆ ಸಾಕ್ಷಿ ಎಲ್ಲ ಬೇಕಾಗುತ್ತಲ್ಲ’ ಬುದ್ಧಿವಂತಿಕೆಯಿಂದ ಕೇಳಿದರು .
ಬ್ರಹ್ಮಾಂಡರು
‘ಅಯ್ಯೋ , ಮುಂಡಾಮೋಚ್ತು , ಅದೇನಪ್ಪ ಎಲ್ಲ ಸಾಕ್ಷೀನು ನಾನೇ ಕೊಟ್ಟಿದ್ದೀನಲ್ಲಪ್ಪ, ಪೋಟೊ ಗಳು , ವಿಡಿಯೋ ಎಲ್ಲವನ್ನು ನಿಜ ಅನ್ನುವಂತೆ ಚಿತ್ರಿಸಿ ನಾನೆ ಒಪ್ಪಿಸಿ ಮಣ್ಣು ತಿಂದಿದ್ದೇನೆ , ಹಾಳಾದ ಜಯಂತ ನನ್ನ ತಲೇ ಮೇಲೆ ಕಲ್ಲು ಎಳೆದುಬಿಟ್ಟಿದ್ದಾನೆ “
ಇದೇನು ವಿಚಿತ್ರವಾಗಿದೆಯಲ್ಲ ಎಂದುಕೊಳ್ಳುತ್ತ ಶ್ರೀನಾಥರು
‘ಹೌದೇ, ಇದೇನು ಹೀಗೆ ಆಗಿದೆಯಲ್ಲ, ಸರಿ , ನೀನು ಎಂತದೋ ಸಾಕ್ಷಿ ಕೊಟ್ಟರು, ರೇಪ್ ಅಂದರೆ ಒಂದು ಹುಡುಗಿ ಬೇಕಾಗುತ್ತೆ ಅಲ್ಲವೇನಯ್ಯ , ಅದಕ್ಕೆ ನೀನೇನಯ್ಯ ಮಾಡಿದೆ ‘ ಕುತೂಹಲದಿಂದ ಕೇಳಿದರು.
‘ಅಯ್ಯೋ , ನನಗೆ ಅದೆಲ್ಲ ಎಲ್ಲಿ ಗೊತ್ತಾಗುತ್ತೆ, ಅದನ್ನು ಅವನೇ ಏರ್ಪಾಡು ಮಾಡಿದ್ದನಪ್ಪ, ಅವನೇ ಕರೆತಂದ ಆಕೆಯನ್ನು , ನಾನು ಸುಮ್ಮನೆ ಅವರು ಕೇಳಿದಂತೆ ಪೋಸ್ ಕೊಟ್ಟೆ ಅಷ್ಟೆ ಕಣಯ್ಯ, ಅದು ಹೀಗೆ ಕುತ್ತಿಗೆಗೆ ಸುತ್ತಿಕೊಳ್ಳುತ್ತೆ ಅಂತ ಗೊತ್ತಾಗಲಿಲ್ಲ, ನಿನಗೆ ಗೊತ್ತ ನಮ್ಮ ಕ್ಲಾಸಿನಲ್ಲಿದ್ದಳಲ್ಲ ಒಬ್ಬಳು ಅಯಂಗಾರಿ ಹುಡುಗಿ ಮಂಜುಳ ಅಂತ , ಅವಳನ್ನೆ ಕಣೋ , ಆ ಜಯಂತ ಕರೆತಂದಿದ್ದು, ನನ್ನ ಜೊತೆ ಕೂಡಿಸಿ ನಿಲ್ಲಿಸಿ , ಪಕ್ಕದಲ್ಲಿ ಮಲಗಿಸಿ ಫೋಟೋ ತೆಗೆಸಿದ, ನಂತರ ಅವಳ ಕೈಯಲ್ಲೆ , ಫೋಟೊಗಳೆಲ್ಲ ಪತ್ರಿಕೆ, ಟೀವಿ ತಲುಪುವಂತೆ ಮಾಡಿದ ‘
ಬ್ರಹ್ಮಾಂಡರು ಚಿಂತೆಯಿಂದ ಹೇಳಿದರು
ಶ್ರೀನಾಥರಿಗೆ ನಗು ಉಕ್ಕಿ ಬರುತ್ತಿತ್ತು,
ಈ ಗಣೇಶ ಹೆಸರಿಗೆ ಗಣೇಶನಾದರು ಬುದ್ಧಿವಂತಿಕೆಯಲ್ಲಿ ಮೊದಲಿನಿಂದಲೂ ಅಷ್ಟಕಷ್ಟೆ, ಆ ಜಯಂತ ಹಾಗು ಮಂಜುಳ ಮೊದಲಿನಿಂದಲೂ ಜೊತೆ , ಪಕ್ಕ ಕ್ರಿಮಿನಲ್ ಮೈಂಡ್ , ಇವನಿಗೆ ತಿಳಿದಿರುವುದೇ , ಹೋಗಿ ಹೋಗಿ ಸಕ್ಕತ್ ಹಳ್ಲಕ್ಕೆ ಬಿದ್ದಿದಾನೆ
‘ಅದು ಸರಿ ಈಗ ನಿನ್ನ ಕ್ರಿಮಿನಲ್ ಲಾಯರ್ ಏನು ಹೇಳುತ್ತಿದ್ದಾನೆ ‘
ಬ್ರಹ್ಮಾಂಡರು ಹೇಳಿದರು,
‘ಅಯ್ಯೋ ಮೊಂಡಾಮೋಚ್ತು ಅವನ ಲಾಯರ್ ಗಿರಿಗೆ , ಅದೇನು ಹೇಳಲಪ್ಪ, ಈಗ ಜಯಂತ್ ತಾನೇ ಕೇಸು ನಡೆಸುತ್ತಿದ್ದಾನೆ, ಇನ್ನು ಬೈಲ್ ತೆಗೆದುಕೊಳ್ಳಲೆ ಅವನಿಗೆ ಆಗುತ್ತಿಲ್ಲ, ದಿನಾ ಬಂದು ಹಣ ಮಾತ್ರ ಕೀಳುತ್ತಿದಾನೆ, ಇಲ್ಲಿಯವರೆಗೂ ಐವತ್ತು ಲಕ್ಷಕ್ಕು ಜಾಸ್ತಿ ಅವನಿಗೆ ಕೊಟ್ಟಾಯ್ತು, ಅವನಿಗೆ ಸಾಲುತ್ತಿಲ್ಲ, ಇದು ರೇಪ್ ಕೇಸ್ ಬೈಲ್ ಸಿಗಲ್ಲ, ಅಲ್ಲದೆ ಶಿಕ್ಷೆ ಜಾಸ್ತಿ, ತಪ್ಪಿಸುವುದು ತುಂಬಾ ಕಷ್ಟ, ಕೋರ್ಟ್ ಪೋಲಿಸು ಅಂತ ಖರ್ಚಾಗುತ್ತೆ, ಕಡಿಮೆ ಅಂದರೂ ಬೈಲ್ ಸಿಗಲು ಎರಡು ಕೋಟಿ ಸಿದ್ದ ಮಾಡಿಕೋ ಅಂತಿದ್ದಾನಪ್ಪ, ನನ್ನ ಹತ್ತಿರ ಅಷ್ಟೊಂದು ಹಣವೆಲ್ಲಿದೆ ಮೊದಲೆ ಲಾಸಿನಲ್ಲಿ ನಡೆಯುತ್ತಿರುವ ಆಶ್ರಮ ಇದು ‘
‘ಹೋಗಲಿ , ಆಕೆ ಇದ್ದಾಳಲ್ಲ, ಅವನ ಸ್ನೇಹಿತೆ, ಮಂಜಳ , ಅವಳನ್ನೆ ಕರೆದು ಮಾತಾನಾಡಬೇಕಿತ್ತು, ಈ ರೀತಿ ಇದು ಸುಮ್ಮನೆ ಸೃಷ್ಟಿ ಮಾಡಿದ ಕೇಸು, ಅಂತ ಅವಳ ಹತ್ತಿರ ಒಂದು ಮಾತು ಹೇಳಿಸಿಬಿಟ್ಟರೆ ಆಗುತ್ತಿತ್ತು, ಕೇಸು ಬಿದ್ದು ಹೋಗುತ್ತೆ ‘
ಬ್ರಹ್ಮಾಂಡರು ಕೊರಗುತ್ತ,
‘ಎಲ್ಲಯ್ಯ ಆಕೆ ಕೈಗೆ ಸಿಗೋಲ್ಲ, ಸಿಂಗಪುರಕ್ಕೆ ಕಳಿಸಿಬಿಟ್ಟಿದ್ದಾನೆ, ಈ ದ್ರೋಹಿ, ಅವಳು ಕೇಸು ವಾಪಸ್ ಪಡೆಯಲು ಐದು ಕೋಟಿ ಕೇಳುತ್ತಿದ್ದಾಳೆ ಅನ್ನುತ್ತಾನೆ ಅವನು ‘
ಶ್ರಿನಾಥ ಯೋಚಿಸಿದರು, ಇವನು ಸರಿಯಾದ ಬಲೆಯಲ್ಲಿ ಸಿಕ್ಕಿ ಹಾಕಿಕೊಂಡಿದ್ದಾನೆ , ಹೇಗೆ ಬಚವಾಗುತ್ತಾನೆ ತಿಳಿಯುತ್ತಿಲ್ಲವೇ ಎಂದು ಕೊಳ್ಳುತ್ತ ,
‘ನನಗೂ ಅನ್ನಿಸಿತ್ತಯ್ಯ, ನಿನ್ನನ್ನು ನೋಡುವಾಗ, ಅಲ್ಲ ನೀನು ಕಡಿಮೆ ಅಂದರೆ ಇನ್ನೂರು ಕೇಜಿ ಮೇಲಿದ್ದಿ, ಇನ್ನು ನೀನು ರೇಪು ಅದು ಇದು ಅಂತ ಹೊರಟರೆ ಅಷ್ಟೆ, ನೀನು ಮೈಮೇಲೆ ಬಿದ್ದರೆ ಅದು ಯಾವ ಪ್ರಾಣಿಯಾಗಲಿ ಉಸಿರು ನಿಂತು ಸಾಯುವದಷ್ಟೆ ಸಾದ್ಯ, ದೇಹದ ಎಲ್ಲ ಮೂಳೆಗಳನ್ನು ಗಂಟು ಕಟ್ಟಬೇಕಾದ್ದೆ, ಹಾಗಿರಲು ಆಕೆ ಇನ್ನು ಬದುಕಿದ್ದಾಳೆ ಅಂದರೆ ಅದೇ ಸಾಕು ನೀನು ಏನು ಮಾಡಿಲ್ಲ ಅಂತ ಹೇಳೋಕ್ಕೆ ಸಾಕ್ಷಿ ’ ‘
ಶ್ರೀನಾಥ ಗಣೇಶರನ್ನ ರೇಗಿಸಲು ಹೇಳಿದ್ದರು , ಆದರೆ ಗಣೇಶ ಅಮಾಯಕರಂತೆ
‘ಹೌದೇನಯ್ಯ ಹಾಗಾದರೆ ಅದೇ ಸಾಕ್ಷಿ ಆಗುತ್ತೆ ಅಲ್ವೇ ಕೋರ್ಟಿಗೆ’ ಎಂದು ಕೇಳಿದರು
ಶ್ರೀನಾಥರಿಗೆ ಈಗ ಅರಿವಾಯಿತು, ಇದು ಬಡ ಪ್ರಾಣಿ ಅಮಾಯಕ ಎಂದು , ಆದರೆ ಇವನನ್ನು ಕಾಪಾಡುವ ದಾರಿಯೊಂದನ್ನು ಯೋಚಿಸಬೇಕಲ್ಲ ಅಂದುಕೊಂಡರು
ಮುಂದಿನ ಬಾಗ :
ಬ್ರಹ್ಮಾಂಡರ ಬೇಟಿ - ಬ್ರಹ್ಮಾಂಡರ ಕನಸಿನಲ್ಲಿ ಶನಿ
Comments
ಉ: ಬ್ರಹ್ಮಾಂಡರ ಬೇಟಿ - ಜಯಂತನ ಬಲೆಯಲ್ಲಿ ಬ್ರಹ್ಮಾಂಡರು
ಪಾರ್ಥರೆ, ಭಾರೀ ತಿರುವು....ನಾನು ತಿಳಿದದ್ದು- ನಮ್ಮ ಸಂಪದಿಗ ಜಯಂತ್ ತನ್ನ ಸಿನೆಮಾದಲ್ಲಿ ಬ್ರಹ್ಮಾಂಡರನ್ನು ಒತ್ತಾಯಿಸಿ ರೇಪ್ ಸೀನಲ್ಲಿ ಬಳಸಿಕೊಳ್ಳುವನು ಅಂತ...ಈಗ ಬ್ರಹ್ಮಾಂಡರನ್ನು ಅವರ ಗೆಳೆಯ ಶ್ರೀನಾಥ ಹೇಗೆ ರಕ್ಷಿಸುವನೋ...ಕುತೂಹಲಕಾರಿಯಾಗಿದೆ!(ಬ್ರಹ್ಮಾಂಡರಿಗೇ ತಿಳಿಯದೇ....ಅಂತ ಅನೇಕರು ಕೇಳಿಯಾರು-ನಮ್ಮ ಲಕ್ಷಾಂತರ ಲೀಲೆಯಲ್ಲಿ ಇದೂ ಒಂದು.ನಾವು ಮರೆತುಬಿಡುವೆವು. ಭಕ್ತರು ನೆನಪಿಸುವಾಗ ಸಂತೋಷವಾಗುವುದು.ಇದನ್ನು ಓದಿದ, ಕೇಳಿದ, ಪ್ರತಿಕ್ರಿಯೆ ನೀಡಿದ ಎಲ್ಲರಿಗೂ ಆರೋಗ್ಯ, ಐಶ್ವರ್ಯ ಲಭಿಸಲಿ ಎಂದು ವಿಶೇಷ ಪೂಜೆ ಮಾಡಿ ಆಶೀರ್ವದಿಸುವೆವು)
ಉ: ಬ್ರಹ್ಮಾಂಡರ ಬೇಟಿ - ಜಯಂತನ ಬಲೆಯಲ್ಲಿ ಬ್ರಹ್ಮಾಂಡರು
ಗಣೇಶರು ಕೊಟ್ಟ ಸುಳಿವು ಶ್ರೀನಾಥರ ಉಪಯೋಗಕ್ಕೆ ಬರಬಹುದು!