ಬ್ರಹ್ಮಾಂಡರ ಬೇಟಿ - ಬ್ರಹ್ಮಾಂಡರ ಕನಸಿನಲ್ಲಿ ಶನಿ

ಬ್ರಹ್ಮಾಂಡರ ಬೇಟಿ - ಬ್ರಹ್ಮಾಂಡರ ಕನಸಿನಲ್ಲಿ ಶನಿ

ಬ್ರಹ್ಮಾಂಡರ ಬೇಟಿ -  ಬ್ರಹ್ಮಾಂಡರ ಕನಸಿನಲ್ಲಿ ಶನಿ

ಇಲ್ಲಿಯವರೆಗೂ...

 
ನೀನು ಮೈಮೇಲೆ ಬಿದ್ದರೆ  ಅದು ಯಾವ ಪ್ರಾಣಿಯಾಗಲಿ ಉಸಿರು ನಿಂತು ಸಾಯುವದಷ್ಟೆ ಸಾದ್ಯ,  ದೇಹದ ಎಲ್ಲ ಮೂಳೆಗಳನ್ನು ಗಂಟು ಕಟ್ಟಬೇಕಾದ್ದೆ, ಹಾಗಿರಲು ಆಕೆ ಇನ್ನು ಬದುಕಿದ್ದಾಳೆ ಅಂದರೆ ಅದೇ ಸಾಕು ನೀನು ಏನು ಮಾಡಿಲ್ಲ ಅಂತ ಹೇಳೋಕ್ಕೆ ಸಾಕ್ಷಿ ’     ಶ್ರೀನಾಥ ಗಣೇಶರನ್ನ ರೇಗಿಸಲು ಹೇಳಿದ್ದರು , ಆದರೆ ಗಣೇಶ ಅಮಾಯಕರಂತೆ

 

‘ಹೌದೇನಯ್ಯ ಹಾಗಾದರೆ ಅದೇ ಸಾಕ್ಷಿ ಆಗುತ್ತೆ ಅಲ್ವೇ ಕೋರ್ಟಿಗೆ’ ಎಂದು ಕೇಳಿದರು . ಶ್ರೀನಾಥರಿಗೆ ಈಗ ಅರಿವಾಯಿತು, ಇದು ಬಡ ಪ್ರಾಣಿ ಅಮಾಯಕ ಎಂದು , ಆದರೆ ಇವನನ್ನು ಕಾಪಾಡುವ ದಾರಿಯೊಂದನ್ನು ಯೋಚಿಸಬೇಕಲ್ಲ ಅಂದುಕೊಂಡರು

ಮುಂದುವರೆದಿದೆ...

ಶ್ರೀನಾಥ ಹಿಂದನದೆಲ್ಲವನ್ನೂ  ಯೋಚಿಸುತ್ತ ಕೇಳಿದರು ,

‘ಸರಿಯಪ್ಪ, ಏನೋ ಒಂದು ಯೋಚಿಸೋಣ ಬಿಡು, ಪ್ರತಿ ಸಮಸ್ಯೆಗೂ ಒಂದು ಪರಿಹಾರ ಇರುತ್ತಲ್ಲ, ಆದರೆ ನೀನು ಸ್ಕೂಲಿನಲ್ಲಿ ಒಂತರ ಇದ್ದೆ, ಪೆದ್ದ ಪೆದ್ದ ನಂತೆ, ಈಗ ಅದೇನು ಇಷ್ಟು ದೊಡ್ಡದಾಗಿ ಬೆಳೆದುಬಿಟ್ಟಿದ್ದಿ. ಇಷ್ಟು ದೊಡ್ಡ ಆಶ್ರಮ,  Tv - 90 ಯಲ್ಲಿ ದಿನ ಭವಿಷ್ಯ,  ನಿನ್ನನ್ನು ಕಾಯುತ್ತ ಕುಳಿತಿರುವ ಸಾವಿರಾರು ಜನ , ಇಷ್ಟೆಲ್ಲ ಹೇಗೆ ಸಾದ್ಯವಾಯಿತು’
ಬ್ರಹ್ಮಾಂಡರಿಗೆ ಪೆದ್ದ ಅಂದದ್ದು  ಒಂತರ ಆಯಿತು ಆದರು ನಗುತ್ತ ಹೇಳಿದರು ,

ಅವರ ನಗುವೆಂದರೆ ಭೂಮಿ ಅದುರಿದಂತೆ ಅಂದು ಕೊಂಡರು ಶ್ರೀನಾಥ.

‘ನನಗೆ ಅದೆಲ್ಲ ಎಲ್ಲಪ್ಪ ಗೊತ್ತಿತ್ತು,  ಭವಿಷ್ಯವೂ ಗೊತ್ತಿರಲಿಲ್ಲ ಎಂತ ಭೂದಿಯೂ ಗೊತ್ತಿರಲಿಲ್ಲ. ಒಮ್ಮೆ ಹೀಗೆ ಯಾವುದೋ ಕೆಲಸಕ್ಕೆ ಹೋಗಿದ್ದೆ, ಸ್ನೇಹಿತರೊಬ್ಬರಿಗೆ ಗಂಡು ಮಗುವಾಗಿತ್ತು,ಅವರು ಆ ಮಗುವಿನ ಜಾತಕ ಬರೆಸಬೇಕು ಯಾರಾದರು ಒಳ್ಳೆಯ ಜ್ಯೋತಿಷಿಗಳಿದ್ದಾರ ಎಂದು ಕೇಳಿದರು , ನನಗೆ ನಮ್ಮ ಮನೆ ಹತ್ತಿರವೇ ಇದ್ದ ಕೃಷ್ಣಶಾಸ್ತ್ರಿಗಳು ನೆನಪಿಗೆ ಬಂದರು, ಆ ಮನುಷ್ಯ ಪಾಪ ಮನೆಗೆ ಬಂದವರಿಗೆ , ಜಾತಕ ಬರೆದುಕೊಡೋದು ಇಂತವೆಲ್ಲ ಮಾಡ್ತಿದ್ದ, ಒಳ್ಳೆ ಕೈ ಅಂದುಕೋ ,

ಸರಿ ಸ್ನೇಹಿತನಿಗೆ ನಾನು ಜಾತಕ ಬರೆಸುತ್ತೇನೆ ಎಂದು ಹೇಳಿ ವಿವರ ಪಡೆದೆ, ಅವರು ವಿವರದೊಂದಿಗೆ ಐದುನೂರು ರೂಪಾಯಿ ಕೊಟ್ಟು ಜಾತಕ ಬರೆಸಿಕೊಡುವಂತೆ ಕೇಳಿದರು’

ಶ್ರೀನಾಥ ಕೇಳುತ್ತಿದ್ದರು ಆಸಕ್ತಿಯಿಂದ ಗಣೇಶರ ಮಾತುಗಳನ್ನು

‘ ಆ ಕೃಷ್ಣ ಶಾಸ್ತ್ರಿ  ವಿದ್ಯೆಯಲ್ಲಿ ಬುದ್ದಿವಂತ ಆದರೆ ವ್ಯವಹಾರದಲ್ಲಿ ಪೆದ್ದನಪ್ಪ, ನಾನು ಕೇಳಿದ ಜಾತಕ ಬರೆದುಕೊಟ್ಟು, ನಾನು ಕೊಟ್ಟ  ಇಪ್ಪತ್ತು ರುಪಾಯಿಯನ್ನು ತೆಗೆದುಕೊಂಡ, ಆವತ್ತಿನಿಂದ ಅದು ಒಂದು ಹಣಕ್ಕೆ ದಾರಿಯಾಯಿತು, ಎಲ್ಲರ ಹತ್ತಿರ ಜಾತಕ ಬರೆಸುತ್ತೇನೆ ಅದು ಇದು ಹೇಳುವುದು, ಐದುನೂರು,  ಸಾವಿರ ಪಡೆಯುವುದು, ಇವರ ಹತ್ತಿರ ಬಂದು ಐವತ್ತೋ ನೂರೋ ಕೊಟ್ಟು  ಜಾತಕ ಬರೆಸುವುದು,  ಬರುತ್ತ ಬರುತ್ತ ನನಗೆ ಜಾತಕದ ವಿವರಗಳೆಲ್ಲ ಬಾಯಿಪಾಠವಾದವು, ಆ ಶಾಸ್ತ್ರಿಗಳು ನಾನು ತರುತ್ತಿರುವ ವ್ಯವಹಾರ ನೋಡಿ ಖುಷಿಯಾಗಿ , ಜಾತಕದ ಬಗ್ಗೆ ,  ಗ್ರಹಗಳು ಯಾವ ಮನೆಯಲ್ಲಿದ್ದರೇ ಏನು  ಫಲ, ಇಂತಹುದನ್ನೆಲ್ಲ ನನಗೆ ವಿವರಿಸುತ್ತಿದ್ದರು. ಕ್ರಮೇಣ ನನಗೆ ಈ ಗ್ರಹಗತಿಗಳು , ಫಲ ಇಂತಹುದೆಲ್ಲ  ಹೇಳಲು ತಿಳಿಯುವಂತಾಯಿತು.  ಜಾತಕ ಶಾಸ್ತ್ರಿಗಳ ಕೈಲಿ ಬರೆಸಿ, ಇತರರಿಗೆ ನಾನು ಜಾತಕದ ವಿವರಗಳನ್ನೆಲ್ಲ ನನ್ನದೆ ಶೈಲಿಯಲ್ಲಿ ಹೇಳುತ್ತಾ ಹೋದೆ, ಕ್ರಮೇಣ ನನ್ನ ಬಾಯಲ್ಲಿ ಭವಿಷ್ಯ ಬಂದರೆ ಅದು ನಿಜವಾಗುತ್ತೆ ಅಂತ ಎಲ್ಲರೂ ಅಂದುಕೊಳ್ಳ ತೊಡಗಿದರು, ನಾನು ಹೇಳುವ ಪರಿಹಾರಗಳನ್ನು ಎಲ್ಲರೂ ಪಾಲಿಸತೊಡಗಿದರು’

ಶ್ರೀನಾಥ ಕೇಳಿದರು ,

‘ಅದು ಸರಿಯಪ್ಪ, ಆದರೆ ಅದೇನು ಬೆಳಗ್ಗೆ ಭವಿಷ್ಯ ನಾನು ನೋಡಿದ್ದೀನಿ, ಟೀವಿನಲ್ಲಿ, ಇಂತಹ ದೋಷಕ್ಕೆ , ಅಲ್ಲಿ ಹೋಗಿ ಇಲ್ಲಿ ಹೋಗಿ ಅನ್ನೋದು, ಅದು ದಾನ ಮಾಡಿ ಇದು ದಾನ ಮಾಡಿ ಅನ್ನೋದು ಇವೆಲ್ಲ ಹೇಗೆ, ನೀನು ಅದೇನೊ ಹೇಳ್ತೀಯಲ್ಲ ಶನಿದೇವರ ಗುಡಿಗೆ ಹೋಗಿ ಎಣ್ಣೆ ದೀಪ ಹಚ್ಚಿ ಇವೆಲ್ಲ ನಿಜವಾ ?”

‘ಅಯ್ಯೋ ನಿನ್ನಾಣೆಗು ನಿಜಾ ಅಂತೀನಿ ’

ಎನ್ನುವ ಗಣೇಶರ ಮಾತಿಗೆ ಬೆಚ್ಚಿಬಿದ್ದರು ಶ್ರೀನಾಥ, ಗಣೇಶ ಹೇಳಿದ

’ನೋಡು ಯಾರಿಗೂ ಹೇಳಿದರೆ ನಂಬಲ್ಲ, ನಾನು ಆಶ್ರಮ ಕಟ್ಟಿ ಎಲ್ಲ ಆಗಿತ್ತಲ್ಲಪ್ಪ, ಜನರೆಲ್ಲ ನನ್ನ ಹತ್ರ ಬರೋರು. ಆಗ ಒಂದು ದಿನ ಶನಿವಾರ ರಾತ್ರಿ , ಊಟ ಮುಗಿಸಿ ಮಲಗಿದ್ದೆ. ಎಂತದೋ ಕನಸು. ನೋಡು ’

ಎನ್ನುತ್ತ ಕನಸಿನ ವಿವರವನ್ನೆಲ್ಲ ತಿಳಿಸಿದರು ಗಣೇಶ ,

ಕನಸಿನಲ್ಲಿ ಗಣೇಶ ಉರುಫ್ ಬ್ರಹ್ಮಾನಂದರು ಅದೇನೊ ಯಾವುದೋ ಲೋಕಕ್ಕೆ ಹೊರಟು ಹೋಗಿದ್ದರು. ಸುತ್ತಲೂ ನೋಡುವಾಗ ಅದು ಶನಿಲೋಕ ಎಂದು ಅರಿವಿಗೆ ಬಂದಿತ್ತು. ಎದುರಿನ ಸಿಂಹಾಸನದಲ್ಲಿ ಶನಿರಾಜ ವಿರಾಜಮಾನನಾಗಿ ಕುಳಿತ್ತಿದ್ದ. ಪಕ್ಕದಲ್ಲಿಯೆ ಅವನ ಮಂತ್ರಿ ಯಾರೋ ಹೆಸರು ತಿಳಿಯದು.

’ಪ್ರಭು ಇವನೇ ಗಣೇಶ ಉರುಫ್ ಬ್ರಹ್ಮಾನಂದರು ಎಂದು ಭೂಲೋಕದ ಗುರುಗಳು, ನೀವು ನೋಡಬೇಕು ಅಂದಿರಲ್ಲ ಕರೆಸಿದ್ದೇನೆ” ಎಂದ

ಗಣೇಶರಿಗೆ ಕಾಲಲ್ಲಿ ನಡುಕ, ಇದೇನು ಗ್ರಹಚಾರ ಬಂತಪ್ಪ, ಯಮಧರ್ಮರಾಜ ಒಬ್ಬನನ್ನು ಬಿಟ್ಟು ಯಾವುದೇ ದೇವತೆಗಳು ಕರೆಸಿದರು ಸಹ ಸಂತೋಷವಾಗಿ ಹೋಗಬಹುದು ಎಂದುಕೊಂಡಿದ್ದೆ , ಹಾಗಿರಲು ಈ ಶನಿ ಕರೆಸಿದ್ದಾನೆ ಅಂದರೆ ನನ್ನ ಗ್ರಹಗತಿ ಕೆಟ್ಟಿರಬೇಕು. ಊರಿನವರೆಲ್ಲರ ಜಾತಕ ನೋಡೊ ನಾನು ನನ್ನ ಜಾತಕವನ್ನೆ ಬರೆಸಲಿಲ್ಲವಲ್ಲ ಎಂದೆಲ್ಲ ಚಿಂತಿಸುತ್ತಿದ್ದರು . ಆಗ ಶನಿದೇವನು, ಗಣೇಶರತ್ತ ನಗುತ್ತ ನುಡಿದ

’ಹೆದರಬೇಡಿ ಬ್ರಹ್ಮಾಂಡರೇ, ನಿಮಗೆ ಯಾವದೇ ಕೇಡಿಲ್ಲ, ನಮಗೆ ನಿಮ್ಮ ಬಗ್ಗೆ ಇರುವ  ಸಂತೋಷವನ್ನು ತಿಳಿಸಲು ಕರೆಸಿದ್ದೇವೆ ’ ಎಂದರು.

ಗಣೇಶರಿಗೆ ಆಶ್ಚರ್ಯ,

ಇದೇನು ನಾನು ಶನಿದೇವನಿಗೆ ಸಂತಸವಾಗುವ ಕೆಲಸ ಏನು ಮಾಡಿರಬಹುದು ಎಂಬ ಯೋಚನೆ.

’ನೋಡಿ ಯಾವುದೇ ದೈವವನ್ನು ಕಾಣುವಾಗಲು ಅಡ್ಡಬಿದ್ದು ನಮಸ್ಕರಿಸುತ್ತೀರಿ ನನಗೆ ನಮಸ್ಕಾರವೂ ಇಲ್ಲ ಅಷ್ಟು ಕೆಟ್ಟವರೋ ನಾವು’

ಎಂದರು ನಗುತ್ತ ಶನಿದೇವ

’ಅಯ್ಯೋ ಹಾಗಲ್ಲ ಪ್ರಭು, ಖಂಡೀತ ನೀವು ಪೂಜನೀಯರು, ನಮಸ್ಕರಿದರೆ ತಮಗೆ ಬೆನ್ನು ತೋರಿಸಬಾರದೋ ಬಹುದೋ ಎಂಬ ಗೊಂದಲದಲ್ಲಿದ್ದೆ, ಹಾಗಾಗಿ ನಮಸ್ಕರಿಸಲಿಲ್ಲ, ದಯಮಾಡಿ ಕ್ಷಮಿಸಿ’

ಎನ್ನುತ್ತ ಉದ್ದಕ್ಕೆ ಮಲಗಿ ನಮಸ್ಕರಿಸಿದರು,

ಮನದಲ್ಲಿ ’ ಸ್ವಾಮಿ ನಿನ್ನ ಎದುರಿಗೆ ಆನೆಯಂತೆ ಮಲಗಿರುವೆ ಎಂದು ನನ್ನ ಹೆಗಲ ಮೇಲೆ ಹತ್ತ ಬೇಡಪ್ಪ “ ಎನ್ನುತ್ತ ಪ್ರಾರ್ಥಿಸಿದರು

ಶನಿದೇವನು ಜೋರಾಗಿ ನಗುತ್ತ

’ಬ್ರಹ್ಮಾಂಡ ಸ್ವಾಮಿಗಳೆ , ನಾವು ಕಾಗೆಯ ಮೇಲೆ ಸವಾರಿ ಮಾಡುವರಪ್ಪ, ನೀವು ಆನೆಯಂತೆ ಇದ್ದೀರಿ ನಿಮ್ಮ ಹೆಗಲ ಮೇಲೆ ಏರುವದಿಲ್ಲ ದೈರ್ಯವಾಗಿರಿ ’ ಎಂದರು.

ಗಣೇಶರಿಗೆ ಮನದಲ್ಲಿಯೇ ನಾಚಿಕೆ

’ಸರಿ, ಇರಲಿ ನಮ್ಮ ಸಂತೋಷದ ಕಾರಣ ತಿಳಿಸಿಬಿಡುತ್ತೇವೆ. ಈ ಪ್ರಕೃತಿಯಲ್ಲಿ ಎಲ್ಲರಿಗೂ ಒಂದು ಕೆಲಸ ನಿಯಮಿಸಲಾಗಿದೆಯಷ್ಟೆ, ಅದರಂತೆ ನಮಗೂ ಸಹ. ಯಾರಿಗೆ ಶನಿದೋಷವೊ, ಅಷ್ಟಮದಲ್ಲಿ ಶನಿಯೋ, ಏಳರ ಕಾಟವೋ ಆಗೆಲ್ಲ ನಾವು ಸಹ ನಮ್ಮ ಕರ್ತವ್ಯ ಅಂದರೆ ಅಂತವರನ್ನು ಹಿಡಿದು ಪೀಡಿಸುವುದು, ಕಷ್ಟಕೊಡುವುದು ನಮ್ಮ ಕರ್ತವ್ಯವಾಗಿದೆ. ಆದರೆ ಈ ಕಲಿಗಾಲ ಬಂದಂತೆ ಅದೇನೊ, ಅತೀವ ಜನಸಂಖ್ಯೆ, ಎಲ್ಲೆಲ್ಲಿ ಅಂತ ಸುತ್ತುವುದು. ಈ ಜನರೋ ಒಂದು ಕಡೆ ಇರಲಾರರು, ಬಸ್ಸು ಕಾರು ವಿಮಾನ ಎಂದು ಒಂದು ಪ್ರದೇಶದಿಂದ ಮತ್ತೊಂದಕ್ಕೆ, ಒಂದು ದೇಶದಿಂದ ಮತ್ತೊಂದಕ್ಕೆ ಸುತ್ತುತ್ತ ಇದ್ದರೆ, ನಾವಾದರು ಹೇಗೆ ಲೆಕ್ಕ ಇಡುವುದು. ಪ್ರತಿಯೊಬ್ಬರ ಹತ್ತಿರವೂ ಹೋಗಿ ಇವರ ಗ್ರಹಗತಿಗಳೇನು ಎಂದು ಪರಿಶೀಲಿಸುವುದು ತುಂಬಾ ತ್ರಾಸಧಾಯಕ ಅಲ್ವೇ ?”

ಶನಿದೇವರ ಪ್ರಶ್ನೆಗೆ ಉತ್ತರಿಸಲು ತೋಚದೆ ಬ್ರಹ್ಮಾಂಡಗುರುಗಳು ಹಲ್ಲು ಕಿರಿದರು. ಶನಿದೇವ ತನ್ನ ಮಾತನ್ನು ಮುಂದುವರೆಸಿದರು

’ಅಲ್ಲದೆ ಈ ಪ್ರವೈಟ್ ಕಂಪನಿಸಳಲ್ಲಿ ಇದ್ದಂತೆ , ಈಗಲೀಗ ನಮಗೂ ನಮ್ಮ ಕೆಲಸದ ಪ್ರಮಾಣವನ್ನು ಅಳೆಯುವ ಪದ್ದತಿಗಳೆಲ್ಲ ಬಂದಿದೆ. ನೋಡಿ, ಎಲ್ಲಿ ಹೋದರು ಅದೇ ಕತೆ. ನ್ಯಾಯವಾಗಿರುವರಿಗೆ ತಕ್ಕ ಫಲವಿಲ್ಲ ಅಲ್ಲವೆ . ಆ ಇಂದ್ರ, ವರುಣ ವಾಯು ಮುಂತಾದವರೆಲ್ಲ ಮೇಲಿನವರಿಗೆ ಪ್ರಿಯರು, ಹಾಗಾಗಿ ಅವರು ತಮ್ಮ ಕರ್ತವ್ಯ ಮಾಡದಿದ್ದರೂ ಕೇಳುವರಿಲ್ಲ, ಅಲ್ಲವೆ, ಈಗ ನೀವೇ ಹೇಳಿ ಭೂಮಿಯಲ್ಲಿ ಸರಿಯಾಗಿ ಮಳೆ ಬೆಳೆ ಎಲ್ಲ ಆಗುತ್ತಿದೆಯೆ? ’

ಬ್ರಹ್ಮಾಂಡಸ್ವಾಮಿಗಳಿಗೆ ಅಯೋಮಯ, ಈ ಶನಿದೇವ ಏನು ಹೇಳುತ್ತಿರುವ ಎಂದು. ತಲೆ ಆಡಿಸುತ್ತ

’ಇಲ್ಲ ಸ್ವಾಮಿ , ಎಲ್ಲ ಕಾಲದ ಮಹಿಮೆ , ಕಲಿಗಾಲ ಮಳೆಯೂ ಇಲ್ಲ ಬೆಳೆಯೂ ಇಲ್ಲ ’

’ನೋಡಿದರಾ ನೀವು ಮನುಷ್ಯರು ಹೀಗೆ ಹೇಳುವಿರಿ, ಅದೇ ಮಾತನ್ನು ಹೇಳುತ್ತ  , ಕಾಲವನ್ನು ದೂರುತ್ತ ,ಇಂದ್ರ ವರುಣರು ತಮ್ಮ ಕೆಲಸ ತಪ್ಪಿಸಿ ತಿರುಗುತ್ತಿರುವರು.  ಆದರೆ ವರ್ಷಕೊಮ್ಮೆ ಕೊಡುವ ಸೆಲ್ಫ್ ಅಪ್ರೈಸಲ್ ನಲ್ಲಿ ಅವರಿಗೆ ಪ್ರತ್ಯೇಕ ಗುಣಗಳು. ನಮಗೆ ಹಾಗು ಯಮರಾಜರಿಗೆ ನೋಡಿ ಕೆಲಸ ತಪ್ಪಿಸುವ ಹಾಗೆ ಇಲ್ಲ . ಏನು ಮಾಡಿದರು ನಮ್ಮಗೆ ಕೊಡುವ ಗುರಿಯಲ್ಲಿ  ೬೦-೬೫ %  ಮುಟ್ಟುವದರಲ್ಲಿ ಸುಸ್ತಾಗಿ ಹೋಗುತ್ತಿತ್ತು. ಆದರೆ ಒಮ್ಮೆ ನೀವು ಬಂದಿರಿ  ನೋಡಿ ನಮ್ಮ ಕೆಲಸ ಸುಲುಭವಾಯಿತು’

’ಆ,,,,,, ’

ಗಣೇಶ ಉರುಫ್ ಬ್ರಹ್ಮಾಂಡ ಗುರುಗಳಿಗೆ ಆಶ್ಚರ್ಯ, ಇದೇನು ಇವರ ಮಾತು ಎಂದು

ನಗುತ್ತ ನುಡಿದರು ಶನಿದೇವರು

’ಆಶ್ಚರ್ಯ ಬೇಡ, ವಿವರಿಸುವೆವು, ಮೊದಲಾದರೆ ನಾವು ಭಾರತ ಪೂರ್ತಿ ಸುತ್ತತ್ತ ಇದ್ದೆವು, ಈಗ ಸುತ್ತುವುದನ್ನು ಬಿಟ್ಟು,  ನಿಮ್ಮ ಹಾಗು ಇತರೆ ಭವಿಷ್ಯ ಹೇಳುವವರ ಆಶ್ರಮಗಳಲ್ಲಿ ನಮ್ಮ ಕಾರ್ಯಾಲಯದ ಬ್ರಾಂಚ್ ಗಳನ್ನೆ ಶುರುಮಾಡಿರುವೆವು. ಏನೇನೊ ಕಷ್ಟಗಳು ಇವೆ ಎಂದು ಭ್ರಮಿಸಿ ನಿಮ್ಮ ಹತ್ತಿರ ಎಲ್ಲರೂ ಬರುತ್ತಿದ್ದರು, ನೀವುಗಳ ಆ ಜಾತಕ ನೋಡಿ  ಶನಿ ಆಮನೆಯಲ್ಲಿದ್ದಾನೆ, ಈ ಮನೆಯಲಿದ್ದಾನೆ ಎಂದು ಹೇಳುತ್ತಿದ್ದಿರಿ . ಆದರೆ ನಾನು ಯಾವ ಮನೆಯಲ್ಲಿ ಇರದೇ ನಿಮ್ಮದೆ ಆಶ್ರಮದಲ್ಲಿ ಸ್ಥಿರವಾಗಿದ್ದೆವು, ಅಲ್ಲಿ ಬರುವ ಭಕ್ತರನ್ನು ನೋಡುವಾಗಲೆ ತಿಳಿಯುತ್ತಿತ್ತು, ಇವನಿಗೆ ಯಾವ ಕಷ್ಟ ಕೊಡಬೇಕು, ಎಷ್ಟು ಪ್ರಮಾಣದಲ್ಲಿ ಇವನಿಗೆ ಹಿಂಸೆ ಕೊಡಬಹುದು ಎಂದು. ಮೊದಲಾದರೆ ಇಂತಹುವರೆನ್ನ ಹುಡುಕುತ್ತ ಭೂಮಿಯಲ್ಲಿ ಸುತ್ತವ ಶ್ರಮವಿತ್ತು, ಈಗ ಅವರೇ ನೀವಿರುವ ಅಂದರೆ ನಾವಿರುವ ಜಾಗಕ್ಕೆ ಬಂದು , ನಮ್ಮ ಕೆಲಸ ಸುಲುಭ ಮಾಡುತ್ತಿದ್ದರು. ನಾನು ಅಲ್ಲಿಯೆ ಅವರ ಮೇಲೆ ದೃಷ್ಟಿ ಬೀರಿಬಿಡುತ್ತಿದೆ.

ಬ್ರಹ್ಮಾಂಡರೆ ನೀವು ನಂಬುತ್ತೀರೋ ಇಲ್ಲವೋ, ಮೊದಲಾದರೆ ನಮ್ಮ ಕೆಲಸದ ಪರಿಮಾಣ ೬೦-೬೫% ದಾಟುತ್ತಿರಲಿಲ್ಲ, ಎಷ್ಟೋ ಜನ ನಮ್ಮ ಕೈಯಿಂದ ಪಾರಾಗಿ ತಪ್ಪಿಸಿಕೊಂಡು  ಬಿಡುತ್ತಿದ್ದರು. ಈಗ ನಮ್ಮ ಕೆಲಸದ ಪರಿಮಾಣ  98% (ಪ್ರತಿಶತ) ಮುಟ್ಟಿದೆ ಗೊತ್ತಾ?”

ಶನಿದೇವ ಸಂತಸದಿಂದ ವಿವರಿಸುತ್ತಿದ್ದರೆ, ಬೆರಗಾಗುವ ಸ್ಥಿತಿ ಗಣೇಶರದು.

’ಅಯ್ಯೋ ಭಕ್ತರೇ, ನೀವೆಲ್ಲ ಕಷ್ಟ ಪರಿಹಾರಕ್ಕೇ ಎಂದು ಬರುತ್ತಿದ್ದರೆ , ಅಲ್ಲಿ ಬರುತ್ತಿದ್ದ ಕಾರಣಕ್ಕೆ  ಶನಿದೇವರ ದೃಷ್ಟಿಗೆ ಅಹಾರವಾಗುತ್ತಿದ್ದೀರ ಎಂದು ಮರುಗಿದರು’

’ಅಲ್ಲದೇ ನೀವು ಹೇಳುತ್ತಿದ್ದಿರಲ್ಲಪ್ಪ, ಶನಿದೇವರ ಆ ದೇವಾಲಯಕ್ಕೆ ಹೋಗಿ, ಇಂತಹ ಊರಿಗೆ ಹೋಗಿ, ಇಂತಹ ದೇವಾಲಯ ದರ್ಶಿಸಿ ಎಂದು, ನಮಗೆ ಉಪಕಾರವಾಗುತ್ತಿತ್ತು, ನಿಮ್ಮ ಆಶ್ರಮದಲ್ಲಿ  ಕಣ್ಣು ತಪ್ಪಿಸಿದವರು, ಅಲ್ಲೆಲ್ಲ ಸಿಕ್ಕಿ ಬೀಳುತ್ತಿದ್ದರು ಬಿಡಿ’

ಎಂದು ದೊಡ್ಡದಾಗಿ ನಕ್ಕರು ಶನಿದೇವರು.

ಗಣೇಶರು ಈಗ ನಿಜಕ್ಕು ಬೆವೆತರು, ದೈವದ ಸಂಕಲ್ಪ ನಮಗೆ ಅರ್ಥವೇ ಆಗುವದಿಲ್ಲವಲ್ಲ. ಕಷ್ಟಪರಿಹಾರಕ್ಕೆಂದೆ ನಮ್ಮ ಬಳಿ ಬಂದು ಕಷ್ಟವನ್ನು ಅಹ್ವಾನಿಸುತ್ತಿದ್ದಾರಲ್ಲ ಈ ಭಕ್ತರು ಎಂದು ಒಂದು ಕ್ಷಣ ಅನ್ನಿಸಿತು. ಆದರೆ ಈಗ ಈ ವಿಷಯವೆಲ್ಲ ಶನಿದೇವರ ಅರಿವಿನಲ್ಲಿದೆ, ನಾನು ಹೋಗಿ ಯಾರು ಬರಬೇಡಿ ಅಂದರೆ ನನಗೆ ಕಷ್ಟ , ಎಲ್ಲ ಭಕ್ತರ ಕಷ್ಟವನ್ನು ನನಗೆ ಕೊಟ್ಟುಬಿಟ್ಟಾನು ಕೋಪದಿಂದ ಎಂದು ಚಿಂತಿಸಿ ನಿಂತಿದ್ದರು .

’ನಿಮ್ಮ ಚಿಂತನೆ ಸರಿಯೇ, ನಡೆಯುವುದು ಹಾಗೆ ನಡೆಯಲಿ, ಯಾವುದನ್ನು ತಡೆಯಬೇಡಿ, ನಮ್ಮ ಕೆಲಸಕ್ಕೆ ಸಹಾಯಕರಾಗಿರಿ ನಿಮಗೆ ಒಳ್ಳೆಯದು ಆಗುತ್ತದೆ , ನನಗೆ ಸಹಾಯ ಮಾಡಿರುವಿರಿ ನಿಮ್ಮ ಬೇಡಿಕೆ ಏನಾದರು ಇದೇಯೋ ’ ಎಂದರು ಶನಿದೇವ

’ಶನಿದೇವ ಸ್ವಾಮಿ, ನಿನ್ನ ಕೆಲಸಕ್ಕೆ ನನ್ನ ಅರಿವಿಲ್ಲದೆ ನಾನು ಸಹಾಯ ಮಾಡಿರುವುದು ನನಗೆ ಸಂತಸ ತಂದಿದೆ. ನೀನು ಅಪ್ಪಣೆ ಕೊಟ್ಟರೆ ನಾನು ಹೊರಡುತ್ತೇನೆ. ನೀನು ಕರೆಸಿರುವಿ, ಅಪ್ಪಣೆ ಕೊಟ್ಟರೆ ಒಂದು ವರ ಕೇಳುವೆ ’ ಎಂದರು ಗಣೇಶರು

’ಕೇಳಿ ಕೇಳಿ ನಿಮ್ಮ ಬಗ್ಗೆ ಸುಪ್ರೀತರಾಗಿದ್ದೇವೆ, ಆದರೆ ನಡೆಯುವಂತದ್ದು ಮಾತ್ರ ಕೇಳಿ, ಹಿರಣ್ಯಕಷಿಪ್ಪುವಿನಂತೆ ಅತಿ ಬುದ್ಧಿ ಉಪಯೋಗಿಸಬೇಡಿ’  ನಗುತ್ತ  ನುಡಿದರು ಶನಿದೇವ

ಗಣೇಶರು ಸಹ ನಗುತ್ತ

’ಇಲ್ಲ ಶನಿದೇವ ಅಂತಹ ಕೋರಿಕೆಯಲ್ಲ, ನಾನು ನಿನಗೆ ಸಹಾಯಕನಾಗಿರುವದರಿಂದ ನಿನ್ನ ಅನುಗ್ರಹ ಬೇಡುತ್ತಿರುವೆ, ನೀನು ಎಂದಿಗೂ ನನ್ನ ಮೇಲೆ ನಿನ್ನಿ ದೃಷ್ಟಿಯನ್ನು ಬೀರಬಾರದು. ನೇರವಾಗಿ ನನ್ನ ನೋಡಬಾರದು’

ಗಹಗಹಿಸಿ ನಕ್ಕ,

’ಸರಿ ಒಪ್ಪಿಗೆ ಎಂದೇ ಭಾವಿಸಿ, ವರ ಕೊಟ್ಟಾಯ್ತು,  ಎಂದಿಗೂ ನಿಮ್ಮ ಮೇಲೆ ನಾನು ನೇರ ದೃಷ್ಟಿಯನ್ನು ಬೀರುವದಿಲ್ಲ ಆಯ್ತೆ’

ಎಂದರು ಶನಿದೇವರು.

ಗಣೇಶರು ವರ ಪಡೆದ ಸಂತಸದಿಂದಿರುವಾಗಲೆ ಕನಸು ಮಾಯವಾಗಿ ಎಚ್ಚರವಾಗಿತ್ತು, ಗಣೇಶರಿಗೆ.

ಮುಂದಿನ ಬಾಗದಲ್ಲಿ
ಬ್ರಹ್ಮಾಂಡರ ಬೇಟಿ -  ಬ್ರಹ್ಮಾಂಡರ ಮೇಲೆ ಶನಿದೇವರ ವಕ್ರದೃಷ್ಟಿ

Rating
No votes yet

Comments

Submitted by ಗಣೇಶ Sun, 12/21/2014 - 00:15

ಪಾರ್ಥರೆ,
ಇದನ್ನು ಓದಿದವರು ಇನ್ನು ಜ್ಯೋತಿಷಿಗಳ ಬಳಿ ಹೋಗಲು ಹೆದರುವರು :).
ಅದಿರ್ಲಿ...
ಭಕ್ತಾದಿ ಜನರೆ,
ಉಳಿದ ಜ್ಯೋತಿಷಿಗಳಿಗೆ ಈ ವಿಷಯ ಗೊತ್ತಿಲ್ಲ. ಆದ್ದರಿಂದ ನೀವು ಜ್ಯೋತಿಷ್ಯ ಕೇಳಲು ಅಲ್ಲಿ ಹೋದರೆ ಶನಿಯ ನೇರ ದೃಷ್ಟಿಗೊಳಗಾಗುವಿರಿ. ನಮ್ಮಲ್ಲಿ ಬನ್ನಿ...
ಶನಿ ಶಾಂತಿ ಹೋಮ ಮಾಡಿ ನಮ್ಮಲ್ಲಿ ಬಂದಿರುವ ಭಕ್ತಜನರಿಗೆ ಶನಿಯಿಂದ ಏನೂ ತೊಂದರೆಯಾಗದಂತೆ ನೋಡಿಕೊಳ್ಳುವೆವು.ದಕ್ಷಿಣೆ ಜತೆ ಹೋಮಕ್ಕೆ ೫೦೦೮ರೂ ಎಕ್ಸ್‌ಟ್ರಾ ಕೊಡಬೇಕು.
-ಅಂ.ಭಂ.ಸ್ವಾಮಿ
(ಈಗ ಶನಿಯ ವಕ್ರ ದೃಷ್ಟಿಯ ಬಗ್ಗೆ ಪಾರ್ಥಸಾರಥಿಯವರ ಗ್ರಂಥಪಾಠದ ಅಧ್ಯಯನ ಮಾಡಲು ಹೋಗುವೆವು)