ಭಗತ್ ಸಿಂಗ್: ದಾರಿ ಆವುದಯ್ಯ ವೈಕುಂಠಕೆ?
ಕೆಲವು ದಿನಗಳ ಹಿಂದೆ "Poverty Talk - A new fashion" ಅಂತ ಒಂದು ಲೇಖನ ಬರೆದಿದ್ದೆ. ಅದನ್ನು ಓದಿ ನನ್ನ ಗೆಳೆಯನೊಬ್ಬ, ".. ಜೀವನದಲ್ಲಿ ಯಾರೂ ಮತ್ತೊಬ್ಬರನ್ನು ಸಹಾನುಭೂತಿಯಿಂದ ನೋಡುವುದೇ ಇಲ್ಲ, ಎಲ್ಲರಿಗೂ ತಮ್ಮದೇ ಚಿಂತೆ, ಎಲ್ಲರೂ ಸ್ವಾರ್ಥಿಗಳು! life ಅಲ್ಲಿ practical ಆಗಿ ಇರಬೇಕು[...]" ಎಂದಿದ್ದ. ಅವನಿಗೆ ಸರಿಯಾದ ಉತ್ತರ ಕೊಡಲು ತಿಣುಕಾಡಿದೆ. "ಬದುಕಲು ಎರಡೇ ದಾರಿಗಳಿವೆ; ಒಂದು ಆದದ್ದಾಯಿತೆಂದು ತೆಪ್ಪಗಿರೋದು, ಇನ್ನೋಂದು, ಆಗಿರೋದನ್ನು ಜವಾಬ್ದಾರಿಯಿಂದ ತಿದ್ದಿ, ಹೊಸ ಬದಲಾವಣೆಯನ್ನು ತರುವುದು. " ಎಂದು Rang de Basanti ಸಿನಿಮಾದಲ್ಲಿ ಅಮೀರ ಖಾನ್ ಹೇಳೊ ಹಾಗೆ ಹೇಳಿದ್ದರೆ ಚನ್ನಾಗಿತ್ತೋ ಏನೋ. ಅವನ ಅಭಿಪ್ರಾಯ ಹೊಸದೇನಲ್ಲ, ದಿನಬೆಳಗಾದರೆ ಒಬ್ಬರಿಲ್ಲ ಒಬ್ಬರು ಹೇಳುವುದು ಅದನ್ನೆ. ಅವನ ಪ್ರತಿಕ್ರಿಯೆಯಲ್ಲಿ ಸತ್ವ ಇದೆ ಅನಿಸುತ್ತೆ. ಅಲ್ಲಿ ಎರಡು ತದ್ವಿರುದ್ಧವಾದ ದೃಷ್ಟಿಕೋನಗಳಿವ. ಒಂದು ನಮ್ಮ ಸುತ್ತ ಮುತ್ತ ಏನೇ ಆದರೂ ನಮ್ಮಷ್ಟಕ್ಕೆ ನಾವು (practical ಆಗಿ) ಇರುವುದು, ಇನ್ನೊಂದು, ಬದಲಾವಣೆಗಾಗಿ ಶ್ರಮಿಸವುದು (Exceptional). "practical" ಆಗಿ ಇರಬೇಕು ಎಂಬ ಮಾತನ್ನು ಮಾನವೀಯತೆಯ ದೃಷ್ಟಿಯಿಂದ, ಸಹಾನುಭೂತಿಯಿಂದ ಅರ್ಥಮಾಡಿಕೊಳ್ಳಲು ಪ್ರಯತ್ನಿಸಿದೆ. ಪ್ರತಿಯೊಬ್ಬ ಮನಷ್ಯನ ಜೀವನದಲ್ಲಿ ಅವನದೇ ಆದ ಕೆಲವು ಆದ್ಯತೆಗಳಿವೆ. ಅವರವರ ಆದ್ಯತೆಗೆ ತಕ್ಕಂತೆ ಅವರು ವರ್ತಿಸುವುದು ಅತೀ ಸಹಜ. ಉದಾಹರಣೆಗೆ, ಒಬ್ಬ ವ್ಯಕ್ತಿಯ ಆದ್ಯತೆ ಹಣ ಗಳಿಸುವುದೇ ಆದರೆ ಅವನ ದಾರಿ "practical" ಆಗಿರುವುದು ಸರ್ವೇ ಸಾಮಾನ್ಯ. ಆದರೆ ಅವನ ಆದ್ಯತೆ ನಮ್ಮ ಸುತ್ತ ಮುತ್ತ ಇರುವ ಸಮಾಜವನ್ನು ಅತ್ಯುನ್ನತ ಮಟ್ಟಕ್ಕೆ ಕೊಂಡ್ಯೊಯ್ಯುವುದಾದರೆ, ಸಹಜವಾಗಿ ಅವನ ದಾರಿ "Exceptional" ಆಗಿರುತ್ತದೆ.
"ದಾರಿ ಆವುದಯ್ಯ ವೈಕುಂಠಕೆ?" "practical" ಅಥವ "Exceptional"? "practical" ದೃಷ್ಟಿಯಿಂದ ನೋಡಿದರೆ ಒಮ್ಮೊಮ್ಮೆ ಹೀಗೆನಿಸಲೂ ಬಹುದು, "ನಾವು ಊಹಿಸಿಕೊಂಡಿರುವ ಜಗತ್ತು, ನೈಜವಾದ ಜಗತ್ತಿಗಿಂತ ಎಷ್ಟೋ ಚಿಕ್ಕದು. ಅನ್ಯಾಯದ ವಿರುದ್ಢ ಎಷ್ಟೇ ತಿಣುಕಾಡಿದರು, ಕೊನೆಗೆ ಗೆಲ್ಲುವುದು ಅನ್ಯಾಯವೇ. ನನ್ನೊಬ್ಬನಿಂದ ಏನಾಗುತ್ತದೆ? ಶತಕೋಟಿ ಭಾರತೀಯರ ದೃಷ್ಟಿಕೋನ ಬದಲಿಸುವುದು ಒಬ್ಬನಿಂದಾಗದು. ನಮಗಿರುವುದು ಒಂದೇ ಒಂದು ಜೀವನ, ಅದನ್ನಾದರೂ ಸಂತೃಪ್ತಿಯಿಂದ ಕಳೆದರೆ ಸಾಕು, ಸಮಾಜಕ್ಕೆ ಏನಾದರೇನು?" ಈ ದೃಷ್ಟಿಕೋನ ನಿಮಗೆ ಸರಿ ಇರಬಹುದು ಅಂತ ಅನಿಸಿದರೆ, ಒಂದು ಕ್ಷಣ ವಿಚಾರಿಸಿ ನೋಡಿ, ಅದು ಕೇವಲ ನಿಮ್ಮ ಮನೋಭಾವನೆ ಮಾತ್ರ! "Exceptional" ದೃಷ್ಟಿಯಿಂದ ನೋಡಿದರೆ ಹೀಗನಿಸಬಹುದು, "ಸಮಾಜದಲ್ಲಿ ಆಗಬಾರದೇನಾದರು ಆಗಿ ಹೋದರೆ, ಸಮಾಜವೇ ಹೀಗೆ, ನಮ್ಮಿಂದೇನಾಗುತ್ತದೆ ಎನ್ನುವುದಕ್ಕಿಂತ ನಮ್ಮಿಂದಾಗುವುದರಲ್ಲಿ ಸ್ವಲ್ಪವನ್ನಾದರೂ ಮಾಡಬಹುದಲ್ಲ? ಅದಿರಲಿ, ಜಗತ್ತನ್ನೇ ಬದಲಿಸಬೇಕೆಂಬ ಹುಚ್ಚಿಗಿಂತ ನಮ್ಮನ್ನು ನಾವಾದರೂ ಬದಲಿಸಿಕೊಳ್ಳಬಹುದಲ್ಲ? ನಾವೆಲ್ಲರೂ ಬದಲಾದರೆ ನಾವಿರುವ ಸಮಾಜ ಬದಲಾದಂತಲ್ಲವೆ? ಅದಕ್ಕೆ ಬೇಕಾಗಿರುವುದು ಒಂದು "ಪ್ರಾರಂಭ" ಮಾತ್ರ. ಮನೆಯಲ್ಲಿನ ಕಸವನ್ನು ರಸ್ತೆಯ ಮೇಲೆ ಎಸೆಯದೆ, ಕಸದ ಗುಂಡಿಯಲ್ಲಿ ಹಾಕುವುದೂ ಒಂದು ಉತ್ತಮ ಪ್ರಾರಂಭವಾಗಬಹುದು! ಹಿಂದೊಮ್ಮೆ ಜೆಮ್ಶೆಟ್ಜಿ ಟಾಟಾ ಭಾರತಲ್ಲೇ ಉಕ್ಕನ್ನು ತಯಾರಿಸಬೇಕೆಂಬ ಮಹಾದಸೆ ಮುಂದಿಟ್ಟಾಗ, ಬ್ರಿಟೀಷರು, "ಒಂದು ವೇಳೆ ಭಾರತೀಯರು ಉಕ್ಕನ್ನು ತಯಾರಿಸಿದರೆ, ಬ್ರಿಟೀಷರು ಅದನ್ನು ತಿನ್ನಬಹುದು!" ಎಂದು ಚೇಷ್ಟೆ ಮಾಡಿದರು. ಆದರೆ ಇವತ್ತು, ಟಾಟಾ ಮತ್ತು ಮಿತ್ತಲ್ ಉಕ್ಕಿನ ಸಂಸ್ಥೆಗಳು ಜಗತ್ತಿನ ಉಕ್ಕಿನ ಮಾರುಕಟ್ಟೆಯನ್ನು ತಮ್ಮ ಮುಷ್ಟಿಯಲ್ಲಿ ಹಿಡಿದಾಡಿಸುತ್ತಿಲ್ಲವೇ? ಟಾಟಾ ಮಾಡಿದ ಒಂದು "ಪ್ರಾರಂಭ" ಭಾರತೀಯರಿಗೆಲ್ಲ ಹೆಮ್ಮೆಯ ಸಂಗತಿ. ಅದಲ್ಲದೆ, ತಮ್ಮ ಜೀವನವನ್ನೇ ಬಲಿ ಕೊಟ್ಟು, ಕ್ರಾಂತಿಕಾರಿ ರಾಷ್ಟ್ರೀಯತೆಯ ಭಾವನೆಗಳ ಬೀಜವನ್ನು ಸಹಸ್ರಾರು ಯುವಕರಲ್ಲಿ ಬಿತ್ತಿ, ಭಗತ್ ಸಿಂಗ್ ಮಾಡಿದ "ಪ್ರಾರಂಭ" ಹೃದಯ ಕಲಕುವಂತಾಗಿದ್ದರೂ, ಅದು ನಮ್ಮೆಲ್ಲರಿಗೂ ಹೆಮ್ಮೆಯ ಸಂಗತಿ. ಭಗತ್ ಸಿಂಗ್ ರಂತಹ ಹುತಾತ್ಮರಿಗೆ ಸ್ವಾತಂತ್ರ್ಯದ ಮಹೋನ್ನತ ಕನಸು ಏಕಿತ್ತು? "ಕೇವಲ ಒಬ್ಬನನ್ನು ಗಲ್ಲಿಗೇರಿಸಿದರೆ, ಇಡೀ ದೇಶವನ್ನು ಕೊಂದಂತಾಗುವುದೇ?" ಎನ್ನುವ ಧೈರ್ಯ ಎಲ್ಲಿಂದ ಬಂತು? ಸಂಸತ್ತಿನಲ್ಲಿದ್ದ "ಕಿವುಡರನ್ನು" ಕೇಳುವಂತೆ ಮಾಡುವ ಶಕ್ತಿ ಭಗತ್ ಸಿಂಗ್ ಅವರಿಗೆ ಎಲ್ಲಿಂದ ದಕ್ಕಿತು? ಉತ್ತರ ಇಷ್ಟೇ, ಅವರು ಆರಿಸಿಕೊಂಡ ದಾರಿ "Exceptional" ಆಗಿತ್ತು.
ಭಗತ್ ಸಿಂಗ್ ಕ್ರಾಂತಿಕಾರಿಯಾಗಿದ್ದರೂ, ತಮ್ಮ ವಿಚಾರಗಳನ್ನು ಯಾವತ್ತಾದರು ಸಮರ್ಥಿಸಿಕೊಂಡಿದ್ದರೇ? ಹೌದು. ಸುಖದೇವ್ ಅವರಿಗೆ ಬರೆದ ಪತ್ರದಲ್ಲಿ, "ನನ್ನ ಕ್ರಾಂತಿಕಾರಿ ವಿಚಾರಗಳನ್ನು ಸಮರ್ಥಿಸಿಕೊಳ್ಳದೇ ಇರಲು ನನ್ನಿಂದಾಗದು. ನಾನು ಕ್ರಾಂತಿಯ ಮಹತ್ವಾಕಾಂಕ್ಷೆಗಳಿಂದ ತುಂಬಿ ಹೋಗಿದ್ದೇನೆ. ಸ್ವಾತಂತ್ರ್ಯ ಸಮರದ ಆಕರ್ಷಣೆ ನನ್ನ ವಿಚಾರಧಾರೆಗಳನ್ನು ಉಕ್ಕಿ ಹರಿಸುತ್ತಿವೆ. ನನ್ನ ಜೀವನದ ಬಗ್ಗೆ ನನಗೆ ಭರವಸೆಯಿದೆ, ಪ್ರೀತಿಯಿದೆ, ಸಹಾನಭೂತಿಯಿದೆ, ಆದರೆ ಸ್ವಾತಂತ್ರ್ಯಕ್ಕಾಗಿ ಎಲ್ಲವನ್ನು ತ್ಯಾಗ ಮಾಡುವ ವಜ್ರದಂತಹ ಕಠೋರವಾದ ಮನಸ್ಸೂ ನನ್ನಲ್ಲಿದೆ!" ಜೈಲಿನ ಅಧಿಕಾರಿಗೆ ಬರೆದ ಪತ್ರದಲ್ಲಿ, "...ಇನ್ನೇನು ಸ್ವಾತಂತ್ರ್ಯ ಹೋರಾಟದ ಕೊನೆಯ ಸಮರ ಪ್ರಾರಂಭವಾಗುತ್ತದೆ. ಆ ಸಮರ ನಿರ್ಣಯಕಾರಿಯಾಗಿರುತ್ತದೆ. ಕ್ರಾಂತಿಕಾರಿ ಸಮರದಲ್ಲಿ ಪಾಲ್ಗೊಂಡು ವಿಧಿವಶವಾದರೂ ನಾವೇ(ಭಗತ್ ಸಿಂಗ್, ಸುಖದೇವ್, ರಾಜಗುರು) ಧನ್ಯರು!" ಭಗತ್ ಸಿಂಗ್ ಅವರು ಮಾಡಿದ ಆ ತ್ಯಾಗ, ಸ್ವಾತಂತ್ರ್ಯ ಹೋರಾಟದ ಜ್ಯೋತಿಯನ್ನು ಬೆಳಗಿಸಿತು. ಸ್ವಾತಂತ್ರ್ಯದ ಕನಸು ನನಸಾದರೂ ಅದನ್ನು ನೋಡಿ ಆನಂದಿಸಲು ಭಗತ್ ಸಿಂಗ್ ಇವತ್ತು ನಮ್ಮ ಮುಂದಿಲ್ಲ. ಇವತ್ತಿಗೂ ಅವರ ಹೆಸರನ್ನು ನೆನೆಸಿಕೊಂಡರೆ ಸಾಕು, ಹೃದಯದಲ್ಲಿ ಮಿಂಚು ಓಡಾಡಿದ ಅನುಭವವಾಗುತ್ತದೆ!
ಭಗತ್ ಸಿಂಗ್ ಅವರನ್ನು ನಾವು ಕಳೆದುಕೊಂಡಿರಬಹುದು, ಆದರೆ ಅವರ ಕ್ರಾಂತಿಕಾರಿ, ಸಮಾಜವಾದಿ, ಪ್ರಜಾಪ್ರಭುತ್ವದ ವಿಚಾರಗಳು ಇಂದಿಗೂ ನಮಗೆ ದಾರಿದೀಪಗಳು. ಆಗಸ್ಟ್ ೮, ೧೯೨೯ ರಂದು, ಸಂಸತ್ ಸಭೆಯಲ್ಲಿ ಬಾಂಬಿನ ಜೊತೆ ಎಸೆದ ಕಾಗದಗಳಲ್ಲಿ, "ಒಬ್ಬ ವ್ಯಕ್ತಿಯನ್ನು ಕೊಲ್ಲುವುದು ಸುಲಭವಾಗಿರಬಹುದು, ಆದರೆ ಅವನ ವಿಚಾರಗಳನ್ನು ಕೊಲ್ಲುವುದು ಅಸಾಧ್ಯ. ಅನೇಕ ಸಾಮ್ರಾಜ್ಯಗಳು ಹೇಳಹೆಸರಿಲ್ಲದಂತೆ ಮಾಯವಾದವು, ಆದರೆ ವಿಚಾರಗಳು ಎಂದೆಂದಿಗೂ ಅಮರ[...]" ಎಂದು ಬರೆದಿತ್ತು. ಕಲ್ಪನೆ ಅಥವ ವಿಚಾರದ ಶಕ್ತಿಯೇ ಅಂಥದ್ದು. ಸಾಧನೆಯ ಕಲ್ಪನೆ/ವಿಚಾರ ಮನಸ್ಸಿನಲ್ಲಿದ್ದು, ನಮ್ಮ ಮನೋವೃತ್ತಿ(mood ಅನ್ನಬಹುದೇ?) ಸಮತೋಲನದಲ್ಲಿಟ್ಟುಕೊಂಡರಾಯಿತು, ಅದಕ್ಕೆ ಬೇಕಾಗುವ ಎಲ್ಲ ಸಾಮಾಗ್ರಿಗಳನ್ನು ಸಹಜವಾಗಿಯೇ ಪಡೆದುಕೊಳ್ಳಬಹುದು. ಆದರೆ ಎಲ್ಲಕ್ಕಿಂತ ಮುಖ್ಯವಾಗಿ ಬೇಕಾಗಿರುವುದು ಒಂದು "ಪ್ರಾರಂಭ" ಮಾತ್ರ. ಬದುಕು ನಿರ್ಧಾರಗಳ ಮಹಾಪೂರ. ಜೀವನದ ಪ್ರತಿಯೊಂದು ಘಟ್ಟದಲ್ಲಿ ನಾವು ಕೆಲವು ನಿರ್ಧಾರಗಳನ್ನು ತೆಗೆದುಕೊಳ್ಳಲೇ ಬೇಕು. ಅದು ಒಳ್ಳೆಯದಾಗಿರಬಹುದು, ಕೆಟ್ಟದ್ದಾಗಿರಬಹುದು. ಜೀವನದಲ್ಲಿ "practical" ಆಗಿ ಇರಬೇಕೋ, "Exceptional" ಆಗಿ ಇರಬೇಕೋ ಎನ್ನುವ ನಿರ್ಧಾರ ನಿಮ್ಮ ಕೈಯಲ್ಲಿದೆ. ಒಂದು ವೇಳೆ ಅದು "Exceptional" ಆಗಿರದೇ ಇದ್ದರೂ, ಆ ಎರಡು ದಾರಿಗಳ ಮಧ್ಯ ಇರುವ ಸಮತೋಲನ (balanced middle path) ಕಾಪಾಡಿಕೊಂಡರೆ ಸಾಕು, ನಮ್ಮಿಂದ ಮತ್ತೊಬ್ಬರಿಗೆ ಸ್ವಲ್ಪವಾದರೂ ಸಹಾಯವಾದೀತು.
ಸ್ನೇಹಿತರೆ, ೨೭ನೇ ಸೆಪ್ಟೆಂಬರ್ ೨೦೦೭, ಭಗತ್ ಸಿಂಗ್ ಅವರ ಜನ್ಮಶತಮಾನೋತ್ಸವ! ದೇಶದೆಲ್ಲೆಡೆ ಜನ್ಮಶತಮಾನೋತ್ಸವದ ತಯಾರಿ ಭರದಿಂದ ಸಾಗುತ್ತಿರುವುದು ಸಂತೋಷದ ವಿಷಯ. ನಾವೂ ಸಂಭ್ರಮಿಸೋಣ, ಒಂದು ಹೊಸ "ಪ್ರಾರಂಭದೊಂದಿಗೆ!"
ಭಗತ್ ಸಿಂಗ್ ಅವರ ಬದುಕಿನ ಬಗ್ಗೆ ಇನ್ನಷ್ಟು Links:
1. ದಟ್ಸ್ ಕನ್ನಡದಲ್ಲಿ ಭಗತ್ ಸಿಂಗ್ ಅವರ ಬಗ್ಗೆ
2. ವಿಕಿಪೀದಿಯದಲ್ಲಿ ಭಗತ್ ಸಿಂಗ್ ಅವರ ಬಗ್ಗೆ
3. kannada.webdunia.com ದಲ್ಲಿ
4. ಕಲರವ ಬ್ಲಾಗ್ ನಲ್ಲಿ