ಭಗವದ್ಗೀತೆ , ಕರ್ಮ ,ಧರ್ಮ ಇತ್ಯಾದಿ.

ಭಗವದ್ಗೀತೆ , ಕರ್ಮ ,ಧರ್ಮ ಇತ್ಯಾದಿ.

ಮನುಷ್ಯ ನೂರು ವರ್ಷಗಳ ಕಾಲ ಬದುಕಬೇಕು , ಕರ್ಮ ಮಾಡುತ್ತಲೇ ಬದುಕಬೇಕು ಏಂದು ಒಂದು ಮಾತಿದೆ. ( ಯಾವುದೋ ಉಪನಿಷತ್ ) ಫಲಾಪೇಕ್ಷೆ ಇಲ್ಲದೆ ಕರ್ಮ ಮಾಡಬೇಕು ಎಂದು ಭಗವದ್ಗೀತೆ ಯಲ್ಲಿ ಹೇಳಿದೆ. ಇಲ್ಲಿ ಕರ್ಮ ಎಂದರೆ ಯಾವುದು ? ಕರ್ಮ ಎಂದರೆ ಕೆಲಸವೇ ? , ಅಥವಾ ಸಾಂಪ್ರದಾಯಿಕ ಧಾರ್ಮಿಕ ಆಚರಣೆಗಳೇ ಎಂಬ ಸಂಶಯ ನನಗೆ ಉಂಟಾಗಿತ್ತು.
ಆಗ ಕರ್ನಾಟಕ ಕುಲಪುರೋಹಿತ ಆಲೂರು ವೆಂಕಟರಾಯರು ಬರೆದ ಗೀತಾಪರಿಮಳ ಎಂಬ ಪುಸ್ತಕದ pdf ಅನ್ನು ಅಂತರ್ಜಾಲದಲ್ಲಿ ಯಾರೋ ನನ್ನೊಂದಿಗೆ ಹಂಚಿಕೊಂಡರು.
ಭಗವದ್ಭಕ್ತಿ , ಆಧ್ಯಾತ್ಮ ಸೃಷ್ಟಿ ಮುಂತಾದ ವಿಷಯಗಳಲ್ಲಿ ರುಚಿ ಇಲ್ಲದ ನಾನು ಮನುಷ್ಯನ ಬದುಕಿಗೆ ದಾರಿತೋರುವ ಒಂದು ಒಟ್ಟಾರೆ ಸೂತ್ರವನ್ನು ಹುಡುಕುತ್ತಿದ್ದ ನನಗೆ ಈ ಪುಸ್ತಕದ ಕೆಲ ಸಾಲುಗಳೂ ಮತ್ತೆಲ್ಲೋ ಓದಿ ಮನಸೆಳೆದಿದ್ದ ಕೆಲ ಕತೆಗಳೂ , ಕೆಲ ಕಲ್ಪನೆಗಳೂ ನೆರವಾಗಿ ನನಗೆ ತೋಚಿದ ಸಂಗತಿಗಳು ಇವು.
ಕರ್ಮ ಎಂದರೆ ಕೆಲಸ , ಅಷ್ಟೇ . ಮನುಷ್ಯ ಬಹಳ ಕಾಲ ಬದುಕುವ ಆಸೆ ಇಟ್ಟುಕೊಳ್ಳಬೇಕು. ನಿರಾಶೆ ಕೂಡದು.
ಮನುಷ್ಯ ಬದುಕಿನುದ್ದಕ್ಕೂ ಏನಾದರೂ ಕೆಲಸ ಮಾಡುತ್ತ ಇರಬೇಕು. ದುಡಿಯದೇ ಉಣ್ಣಕೂಡದು.( ಗಾಂಧಿ)
ಈ 'ಏನಾದರೂ' ಕೆಲಸ ಯಾವುದು ?
ಜಗತ್ತಿನ ಚಕ್ರ ನಡೆಯಲು ಅನುಕೂಲವಾದದ್ದು. ( 'ಗೀತಾಪರಿಮಳ' ) ಜಗತ್ತಿಗೆ ತೊಂದರೆ ಆಗುವಂಥದ್ದು ಖಂಡಿತ ಅಲ್ಲ.
ಮತ್ತು ವ್ಯಕ್ತಿಯ ಗುಣ ಮತ್ತು ಸ್ವಭಾವಕ್ಕೆ ತಕ್ಕಂತಹದ್ದು . ಇದನ್ನು ಆಯಾ ವ್ಯಕ್ತಿಯೇ ಕಂಡುಕೊಳ್ಳಬೇಕು. ನಾನು ಇಂಥದ್ದನ್ನು ಮಾಡಬೇಕು, ಇಂಥದ್ದನ್ನು ಮಾಡಬಾರದು. ಇದು ನನ್ನ ಕೆಲಸ, ಇದು ನನ್ನ ಕೆಲಸ ಅಲ್ಲ,ಇದು ನನ್ನ ಸ್ವಭಾವಕ್ಕೆ, ಗುಣಧರ್ಮಕ್ಕೆ , ನನ್ನ ಐಡೆಂಟಿಟಿ ( ಅಸ್ಮಿತೆ , ನಾನು ನನ್ನನ್ನು ಏನೆಂದು ಗುರುತಿಸಿಕೊಳ್ಳುತ್ತೇನೋ ಅದು ) ಗೆ ತಕ್ಕಂತಹದ್ದು. ( ಇಲ್ಲಿ ಕತೆ , ಉದಾಹರಣೆ ಕೊಟ್ಟರೆ ಬರಹ ದೊಡ್ಡದಾಗುವುದು , ಬೇಡ )
ಮತ್ತೆ ಈ ಕೆಲಸವನ್ನು ಮಾಡುವ ಬಗೆ ಹೇಗೆ ? ಇದನ್ನೆಲ್ಲ ಭಗವದ್ಗೀತೆ ಯಲ್ಲೇ ಹೇಳಿದೆ. ಪರಿಣಾಮ, ಫಲಿತಾಂಶ ದ ಬಗ್ಗೆ ತಲೆ ಕೆಡಿಸಿಕೊಳ್ಳದೆ , ಅಹಂಕಾರ, ಮೋಹವಿಲ್ಲದೆ ಇತ್ಯಾದಿ. ಈ ಗುಣಗಳ ದೊಡ್ಡ ಪಟ್ಟಿಯೇ ಗೀತೆಯಲ್ಲಿ ಇದೆ. ಬೇಕಾದರೆ ಗೀತೆಯನ್ನೇ ನೋಡಿ.

Rating
No votes yet