ಭಾಗ - ೧೦ ಭೀಷ್ಮ ಯುಧಿಷ್ಠಿರ ಸಂವಾದ: ಶರಭಮೃಗದ ಉಪಾಖ್ಯಾನ

ಭಾಗ - ೧೦ ಭೀಷ್ಮ ಯುಧಿಷ್ಠಿರ ಸಂವಾದ: ಶರಭಮೃಗದ ಉಪಾಖ್ಯಾನ

ಶರಭಮೃಗದ ಉಪಾಖ್ಯಾನ
(ಭೀಷ್ಮ ಯುಧಿಷ್ಠಿರ ಸಂವಾದ ಅರ್ಥಾತ್ ರಾಜನೀತಿ ಶಾಸ್ತ್ರದಿಂದ ಆಯ್ದ ಮತ್ತೊಂದು ನೀತಿ ಕಥೆ) 
        ಯುಧಿಷ್ಠಿರನು ಕೇಳಿದನು, "ಪಿತಾಮಹಾ, ರಾಜ್ಯದಲ್ಲಿ ವಿವಿಧ ಪದವಿಗಳನ್ನು ನಿರ್ವಹಿಸಲು ಸಮರ್ಥರಾದವರು, ಸಜ್ಜನರಾದವರು ಲಭ್ಯರಿಲ್ಲದೇ ಹೋದಲ್ಲಿ ರಾಜನಾದವನು ಏನು ಮಾಡಬೇಕು? ಆಡಳಿತ ಯಂತ್ರವು ಯಾವಾಗಲೂ ಸರಿಯಾಗಿ ನಡೆಯಬೇಕೆಂದರೆ ಆ ಕಾರ್ಯಭಾರವನ್ನು ವಹಿಸಿಕೊಂಡವರು ಮತ್ತು ರಾಜ್ಯವನ್ನು ಸರಿಯಾದ ದಿಶೆಯಲ್ಲಿ ಮುನ್ನಡೆಸುವವರು ಈ ರಾಜೋದ್ಯೋಗಿಗಳೇ ಅಲ್ಲವೇ? ಅವರನ್ನು ಉದ್ಯೋಗದಲ್ಲಿ ನಿಯುಕ್ತಗೊಳಿಸುವುದಕ್ಕೆ ಮೊದಲು ಅಥವಾ ಅವರನ್ನು ನಿಯಮಿಸಿದ ಮೇಲಾಗಲಿ ರಾಜನು ತೆಗೆದುಕೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳೇನು? ದಯಮಾಡಿ ವಿವರಿಸುವಂತಹವರಾಗಿರಿ." 
        ಭೀಷ್ಮನು ಹೀಗೆ ಉತ್ತರಿಸಿದನು. "ಕುಂತೀಪುತ್ರನೇ! ಈ ವಿಷಯದಲ್ಲಿ ಸ್ವಯಂ ಪರಶುರಾಮರೇ ಹೇಳಿದ ಪ್ರಾಚೀನ ಗಾಥೆಯೊಂದಿದೆ, ಅದನ್ನು ಹೇಳುತ್ತೇನೆ, ಕೇಳುವಂತಹವನಾಗು"
        "ಒಂದು ದಟ್ಟವಾದ ಅರಣ್ಯದಲ್ಲಿ ಓರ್ವ ಮಹರ್ಷಿಯು ತಪಗೈಯ್ಯುತ್ತಿದ್ದನು. ಅವನು ಜಿತೇಂದ್ರಿಯನೂ, ಸರ್ವಭೂತ ದಯಾಪರನೂ, ಉಪವಾಸಾದಿ ವ್ರತ ದೀಕ್ಷಾಪರನೂ ಆಗಿದ್ದ. ಅವನ ತಪಶ್ಶಕ್ತಿಯಿಂದಾಗಿ ಕಾಡಿನಲ್ಲಿದ್ದ ಕ್ರೂರ ಮೃಗಗಳೂ ಸಹ ಸ್ನೇಹಪೂರ್ವಕವಾಗಿ ವರ್ತಿಸುತ್ತಿದ್ದವು. ಸಿಂಹಗಳು,  ಹುಲಿಗಳು, ಚಿರತೆಗಳು, ಆನೆಗಳು, ಒಂಟೆಗಳು, ತೋಳಗಳು, ನರಿಗಳು, ನಾಯಿಗಳು, ಒಂದೇನು.... ಸಕಲ ಪ್ರಾಣಿಗಳೂ ಆ ಮುನಿಯ ಬಳಿಗೆ ಬಂದು ಆತನ ಕ್ಷೇಮ ಸಮಾಚಾರವನ್ನು ವಿಚಾರಿಸಿಕೊಂಡು ಹೋಗುತ್ತಿದ್ದವು. ಶಿಷ್ಯರಂತೆಯೇ ಅವು ಅವನ ಪಾದಸೇವೆ ಮಾಡಿ ತಮ್ಮ ದಾರಿ ಹಿಡಿದು ಹೊರಟು ಹೋಗುತ್ತಿದ್ದವು."
       "ಹೀಗಿರಲಾಗಿ ಊರ ನಾಯಿಯೊಂದು ಬಂದು ಋಷಿಯ ಆಶ್ರಮದಲ್ಲಿ ಸೇರಿಕೊಂಡಿತು. ಉಳಿದ ಜಂತುಗಳಂತೆಯೇ ಅದು ಕೂಡಾ ಮಹರ್ಷಿಗಳ ಕಣ್ಣಂಚಿನಲ್ಲೇ ಜೀವಿಸುತ್ತಿತ್ತು. ಈ ನಾಯಿಯ ಮೇಲೆ ಮುನಿಗೆ ಅದೇಕೋ ಮಮಕಾರವುಂಟಾಯಿತು. ಅವನು ಅದನ್ನು ವಿಶೇಷ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದ. ಆ ನಾಯಿಯೂ ಸಹ ಮಹರ್ಷಿಗಳನ್ನು ಶ್ರದ್ಧಾಭಕ್ತಿಗಳಿಂದ ಸೇವಿಸುತ್ತಿತ್ತು. ಎಷ್ಟೇ ಆಗಲಿ ನಾಯಿಗಳು ವಿಶ್ವಾಸಕ್ಕೆ ಮತ್ತೊಂದು ಹೆಸರಲ್ಲವೇ, ಇನ್ನು ಹೇಳುವುದೇನಿದೆ ಅಷ್ಟು ಚೆನ್ನಾಗಿ ಅದು ಮಹರ್ಷಿಯೊಂದಿಗೆ ವಿಶ್ವಾಸದಿಂದಿತ್ತು. ಆದರೇನು ಆ ನಾಯಿಗಳಿಗೂ ಒಂದು ವಕ್ರಬುದ್ಧಿಯಿರುತ್ತದೆ, ಯಾರಾದರೂ ಒಂದು ಚೂರುಪಾರು ತಿಂಡಿ ಎಸೆದರೆ ಅವರನ್ನು ನೋಡಿ ಬಾಲ ಅಲ್ಲಾಡಿಸುತ್ತವೆ, ಅದಕ್ಕೇ ’ನಾಯಿ ಬಾಲ ಡೊಂಕು’ ಎನ್ನುವ ನಾನ್ನುಡಿ ಇರುವುದು".
       "ಒಂದು ಬಾರಿ ಅಡವಿಯಲ್ಲಿದ್ದ ಚಿರತೆಯೊಂದು ಮುನಿಗಳ ಸಾಕು ನಾಯಿಯನ್ನು ನೋಡಿತು. "ಆಹಾ! ನನಗೆ ಆಹಾರವು ಸಿಕ್ಕಿತು" ಎಂದು ಸಂಭ್ರಮಿಸಿತು. ಅದು ನಾಯಿಯ ಮೇಲೆರಗಿ ಆಕ್ರಮಣ ಮಾಡಿತು. ಆ ನಾಯಿಯು ಅದರಿಂದ ತಪ್ಪಿಸಿಕೊಂಡು ಮುನಿಯ ಪಾದಗಳ ಮೇಲೆ ಬಿದ್ದು "ನನ್ನನ್ನು ರಕ್ಷಿಸಿ ಮಹಾಸ್ವಾಮಿ" ಎಂದು ಬೇಡಿಕೊಂಡಿತು. ಮುನಿಯು ಅದಕ್ಕೆ ಅಭಯವಿತ್ತು, "ನಿನಗೆ ಇನ್ನು ಮೇಲೆ ಈ ಸಂಕಷ್ಟವಿರಬಾರದು, ಆದ್ದರಿಂದ ನಿನ್ನನ್ನೇ ಚಿರತೆಯಾಗಿ ಮಾರ್ಪಡಿಸುತ್ತಿದ್ದೇನೆ" ಎಂದು ಹೇಳಿ ಮುನಿಯು ತನ್ನ ತಪೋಬಲದಿಂದ ಆ ಶುನಕವನ್ನು ಚಿರತೆಯನ್ನಾಗಿ ಮಾರ್ಪಡಿಸಿದನು."
       "ಈ ಹೊಸ ಚಿರತೆಯನ್ನು ನೋಡಿ ನಿಜವಾದ ಚಿರತೆ ಏನೂ ಮಾಡಲಾರದೆ ಹೊರಟು ಹೋಯಿತು. ಈಗ ಈ ನಾಯಿ ಚಿರತೆ ನಿರ್ಭಯದಿಂದ ತಿರಗತೊಡಗಿತು. ಸ್ವಲ್ಪ ದಿವಸಗಳಿಗೆ ಇದರ ಮೇಲೆ ದೊಡ್ಡ ಹುಲಿಯೊಂದು ಆಕ್ರಮಣ ಮಾಡಿತು. ಆಗ ಈ ಚಿರತೆಗೆ ಭಯವುಂಟಾಯಿತು. ಅದನ್ನು ನೋಡಿದ ಮಹರ್ಷಿಗಳು ಅದನ್ನು ಒಂದು ಹೆಬ್ಬುಲಿಯನ್ನಾಗಿ ಮಾರ್ಪಡಿಸಿದರು. ಆ ಹೆಬ್ಬುಲಿ ಸ್ವಚ್ಛಂದವಾಗಿ ಭೇಟೆಯಾಡುತ್ತಾ ಕಾಲಕಳೆಯತೊಡಗಿತು. ಸ್ವಲ್ಪ ದಿವಸಗಳಿಗೆ ಈ ಹೆಬ್ಬುಲಿಯ ಮೇಲೆ ಸಿಂಹವೊಂದು ಆಕ್ರಮಣ ಮಾಡಿತು. ಆಗ ಮಹರ್ಷಿಯು ಅದನ್ನು ಒಂದು ಬಲಿಷ್ಠವಾದ ಸಿಂಹವನ್ನಾಗಿ ಮಾರ್ಪಡಿಸಿದ. ಈ ಸಿಂಹಕ್ಕೂ ಕಷ್ಟಗಳು ತಪ್ಪಲಿಲ್ಲ. ಅದರ ಮೇಲೂ ಸಹ ಶರಭಮೃಗವೊಂದು ದಾಳಿ ಮಾಡಿತು. ಆ ಶರಭಕ್ಕೆ ಎಂಟು ಕಾಲುಗಳಿರುತ್ತವೆ. ಅದಕ್ಕೆ ನೆತ್ತಿಯ ಮೇಲೆ ಕಣ್ಣುಗಳಿರುತ್ತವೆ. ಅದು ರಕ್ತವನ್ನು ಕುಡಿದು ಜೀವಿಸುವ ಪ್ರಾಣಿ ಅಂತಹ ಪ್ರಾಣಿಯಿಂದ ರಕ್ಷಿಸಲು ಮುನಿಯು ಆ ಸಿಂಹವನ್ನೇ ಶರಭವನ್ನಾಗಿ ಮಾಡಿದ." 
       "ಈ ವಿಧವಾಗಿ ಒಂದು ಯಃಕಶ್ಚಿತ್ ಶುನಕವನ್ನು ಮುನೀಶ್ವರನು ಶರಭಮೃಗದ ಸ್ಥಾಯಿಗೆ ಏರಿಸಿದ. ಶರಭದ್ದು ಈಗ ಇಷ್ಟಾರಾಜ್ಯವಾಯಿತು. ಅಡವಿಯಲ್ಲಿದ್ದ ಮೃಗಗಳೆಲ್ಲಾ ಇದರ ಭಯಕ್ಕೆ ಚಲ್ಲಾಚದುರಾಗಿ ಓಡಿಹೋದವು. ಶರಭ ಮೃಗಗಳು ರಕ್ತಹೀರಿ ಬದುಕುವ ಪ್ರಾಣಿಗಳು. ಸಹಜವಾಗಿ ಈ ಶರಭಕ್ಕೆ ರಕ್ತವನ್ನು ಹೀರಲು ಪ್ರಾಣಿಗಳು ಸಿಗದೆ ಅದರ ರಕ್ತದಾಹ ಹೆಚ್ಚಾಯಿತು. ಕಂದಮೂಲಗಳನ್ನು ತಿನ್ನುವ ಪ್ರಕೃತಿ ಅದರದ್ದಲ್ಲ. ನಾಯಿಯನ್ನು ಕರೆದುಕೊಂಡು ಹೋಗಿ ಸಿಂಹಾಸನದ ಮೇಲೆ ಕೂರಿಸಿದರೆ ಅದು ತನ್ನ ವಕ್ರಬುದ್ಧಿಯನ್ನು ಬಿಟ್ಟೀತೆ? ಈಗ ಅದಕ್ಕೆ ಶುನಕದ ರೂಪವಿರದೇ ಇದ್ದುದರಿಂದ ಅದರ ಸಹಜವಾದ ಗುಣವಾದ ವಿಶ್ವಾಸದ ಬುದ್ಧಿಯನ್ನೂ ಅದು ಕಳೆದುಕೊಂಡಿತ್ತು. ಅದರ ಕಣ್ಣೀಗ ತನ್ನನ್ನು ಈ ಸ್ಥಾಯಿಗೆ ಏರಿಸಿದ ಮುನಿಯ ಮೇಲೆ ಬಿತ್ತು. ಈಗ ತನ್ನ ಮೇಲೆ ನಿಯಂತ್ರಣ ಹೊಂದಿರುವವನು ಈ ಮುನಿ ಮಾತ್ರ ಅವನನ್ನು ನಿವಾರಿಸಿಕೊಂಡರೆ ಈ ಕಾಡಿಗೆಲ್ಲಾ ನಾನೇ ರಾಜ ಎಂದು ಅದು ಭಾವಿಸಿತು. ಅದು ಕೃತಘ್ನನಾಗಿ ತನ್ನನ್ನು ಸಾಕಿಸಲುಹಿದ ಮುನಿಯನ್ನೇ ತಿನ್ನಲು ಹೊರಟು ನಿಂತಿತು". 
       "ತನ್ನ ಜ್ಞಾನನೇತ್ರದಿಂದ ಮುನಿಗೆ ಈ ಕೃತಘ್ನ ಶುನಕದ ಕುಟಿಲತೆಯು ಅರ್ಥವಾಯಿತು"
      "ಶರಭಮೃಗವು ಮುನಿಯ ಆಶ್ರಮಕ್ಕೆ ಬಂದಿತು. ಆಗ ಮಹರ್ಷಿಯು ಅದನ್ನುದ್ದೇಶಿಸಿ, "ಸಾಕು ಮಾಡು ನಿನ್ನ ಪ್ರತಾಪವನ್ನು. ಮೊದಲು ನೀನು ನಾಯಿಯಾಗಿದ್ದೆ, ಆಮೇಲೆ ಚಿರತೆಯಾದೆ, ಕ್ರಮೇಣ ಹುಲಿ, ಸಿಂಹನಾಗಿ ಈಗ ಶರಭಮೃಗವಾಗಿದ್ದೀಯ. ಈ ಸ್ಥಾನದಲ್ಲಿ ಅಹಂಕಾರದಿಂದ ಮೆರೆಯುತ್ತಾ ರಕ್ತದಾಹದಿಂದ ಇದ್ದೀಯ. ನೀಚನಾದ ನಿನ್ನನ್ನು ಹತ್ತಿರಕ್ಕೆ ಬಿಟ್ಟುಕೊಂಡು ಪ್ರೇಮಾದರಗಳನ್ನು ತೋರಿಸಿದ್ದು ನನ್ನದೇ ತಪ್ಪು. ನೀನು ನಾಯಿಯಾಗಿಯೇ ಇರು" ಎಂದು ಅದನ್ನು ಶಪಿಸಿದನು. 
         "ಮಹರ್ಷಿಯು ಶಾಪವನ್ನು ಕೊಡುತ್ತಲೇ ಅಹಂಕಾರ, ಗರ್ವ, ಕೃತಘ್ನತೆ, ದುಷ್ಟಬುದ್ಧಿ, ಮೂರ್ಖತ್ವ, ಅಧಿಕಾರಮದ ಮೊದಲಾದವುಗಳನ್ನು ಮೈಗೂಡಿಸಿಕೊಂಡಿದ್ದ ಶರಭಮೃಗವು ಪುನಃ ಯಃಕಶ್ಚಿತ್ ಶುನಕವಾಯಿತು".
         "ಆದ್ದರಿಂದ ಧರ್ಮನಂದನನೇ! ರಾಜೋದ್ಯೋಗಿಗಳನ್ನು ಮತ್ತು ಪ್ರಧಾನ ಹುದ್ದೆಗಳಿಗೆ ಅಧಿಕಾರಿಗಳನ್ನು ನೇಮಿಸಿಕೊಳ್ಳುವ ಪೂರ್ವದಲ್ಲಿ ಅವರ ಸಾಮರ್ಥ್ಯ, ಚಾಕಚಕ್ಯತೆ, ವ್ಯವಹಾರ ಕುಶಲತೆ, ಮೊದಲಾದ ಗುಣಗಳನ್ನು ಪರೀಕ್ಷಿಸುವುದಲ್ಲದೆ, ಅವರ ನಡವಳಿಕೆ, ಸೇವಾ ಪರಾಯಣತೆ, ಧ್ಯೇಯನಿಷ್ಠೆ, ಮೊದಲಾದವುಗಳನ್ನೂ ಸಹ ಪರಿಶೀಲಿಸಬೇಕು. ಇಲ್ಲದಿದ್ದರೆ ಅವರು ’ಉಂಡ ಮನೆಯ ಗಳ ಹಿರಿ’ಯುತ್ತಾರೆ!" 
 
*****
(ಆಧಾರ - ಶ್ರೀಯುತ ದೋನೇಪುಡಿ ವೆಂಕಯ್ಯನವರು ತೆಲುಗಿನಲ್ಲಿ ರಚಿಸಿರುವ ಭೀಷ್ಮ ಯುಧಿಷ್ಠಿರ ಸಂವಾದ ಅರ್ಥಾತ್ ರಾಜನೀತಿ ಶಾಸ್ತ್ರ ಎಂಬ ಗ್ರಂಥದಿಂದ ಆಯ್ದ ಭಾಗದ ಅನುವಾದ. ಈ ಸರಣಿಯನ್ನು ಈ ಹಿಂದೆ ಮೊಗಹೊತ್ತಗೆ - ಫೇಸ್ ಬುಕ್ಕಿನಲ್ಲಿ ನನ್ನ ವ್ಯಕ್ತಿಗತ ಪುಟದಲ್ಲಿ ಪ್ರಕಟಿಸಲಾಗಿತ್ತು).  
 
ಹಿಂದಿನ ಲೇಖನ ಭಾಗ - ೯ ಭೀಷ್ಮ ಯುಧಿಷ್ಠಿರ ಸಂವಾದ: ಒಂಟೆಯ ಉಪಾಖ್ಯಾನ ಓದಲು ಈ ಕೆಳಗಿನ ಕೊಂಡಿಯನ್ನು ನೋಡಿ https://sampada.net/blog/%E0%B2%AD%E0%B2%BE%E0%B2%97-%E0%B3%AF-%E0%B2%AD...

Rating
No votes yet

Comments

Submitted by makara Wed, 09/26/2018 - 16:20

ಹಿಂದಿನ ಲೇಖನ ಭಾಗ - ೯ ಭೀಷ್ಮ ಯುಧಿಷ್ಠಿರ ಸಂವಾದ: ಒಂಟೆಯ ಉಪಾಖ್ಯಾನ ಓದಲು ಈ ಕೆಳಗಿನ ಕೊಂಡಿಯನ್ನು ನೋಡಿhttps://sampada.net/blog/%E0%B2%AD%E0%B2%BE%E0%B2%97-%E0%B3%AF-%E0%B2%AD...

Submitted by makara Fri, 09/28/2018 - 09:45

ಈ ಲೇಖನದ ಮುಂದಿನ ಭಾಗ - ೧೧ ಭೀಷ್ಮ ಯುಧಿಷ್ಠಿರ ಸಂವಾದ: ಶೀಲವೆಂದರೇನು? ಓದಲು ಈ ಕೆಳಗಿನ ಕೊಂಡಿಯನ್ನು ನೋಡಿhttps://sampada.net/blog/%E0%B2%AD%E0%B2%BE%E0%B2%97-%E0%B3%A7%E0%B3%A7-...