ಭಾಗ - ೧೦ ವೇದ ಗಣಿತ ಕಿರು ಪರಿಚಯ: ವಾರಗಳ ಹೆಸರಿನ ಹಿಂದಿರುವ ವೈಜ್ಞಾನಿಕತೆ
ಭಾಗ - ೧೦ ವೇದ ಗಣಿತ ಕಿರು ಪರಿಚಯ: ವಾರಗಳ ಹೆಸರಿನ ಹಿಂದಿರುವ ವೈಜ್ಞಾನಿಕತೆ
ವಿಷಯ: ಭಾರತೀಯ ಕಾಲಗಣನಾ ಪದ್ಧತಿಯಲ್ಲಿ ವಾರಗಳ ಹೆಸರುಗಳನ್ನು ಭಾನುವಾರ, ಸೋಮವಾರ, ಮಂಗಳವಾರ, ಬುಧವಾರ, ಗುರುವಾರ, ಶುಕ್ರವಾರ, ಶನಿವಾರ ಎಂದು ಹೆಸರಿಸಿರುವ ಕ್ರಮದ ಹಿಂದಿರುವ ತರ್ಕ. (ಇವನ್ನು ಸಂಸ್ಕೃತದಲ್ಲಿ ಅನುಕ್ರಮವಾಗಿ ಭಾನುವಾಸರ, ಇಂದುವಾಸರ, ಭೌಮವಾಸರ, ಸೌಮ್ಯವಾಸರ, ಗುರುವಾಸರ, ಶುಕ್ರವಾಸರ, ಶನಿವಾಸರ ಎಂದು ಕರೆಯಲಾಗುತ್ತದೆ).
ವಿವರಣೆ:
೧. ವಾರದ ಹೆಸರುಗಳನ್ನು ನಿಷ್ಕರ್ಷೆ ಮಾಡುವಲ್ಲಿ ಮತ್ತು ಅವನ್ನು ಈಗಿರುವ ಕ್ರಮದಂತೆ ಅಳವಡಿಸಿರುವುದರಲ್ಲಿ ವೈಜ್ಞಾನಿಕತೆ ಅಡಗಿದೆ. ಈ ವಿಷಯಗಳನ್ನು ಸೂಚಿಸುವ ಶ್ಲೋಕವೊಂದು ’ಆರ್ಯಭಟೀಯಂ’ ಕೃತಿಯ ’ಕಾಲಕ್ರಿಯ’ ಅಧ್ಯಾಯದಲ್ಲಿದೆ. ಆ ಶ್ಲೋಕವು ಈ ಕೆಳಕಂಡಂತಿದೆ:
ಭಾನಾಮಥಃ ಶನೈಶ್ಚರ ಸುರಗುರು
ಭೌಮಾರ್ಕ ಶುಕ್ರ ಬುಧ ಚಂದ್ರಾಃ l
ಏಷಾಮಧಶ್ಚ ಭೂಮಿಃ
ಮೇಧೀಭೂತಾ ಖಮಧ್ಯಸ್ಥಾ ll
ಭೂಮಿಯಿಂದ ಗ್ರಹಗಳ ಪರಿಭ್ರಮಣದ ಕಾಲವನ್ನು ಇಳಿಕೆಯ ಕ್ರಮದಲ್ಲಿ (ಅವರೋಹಣ) ಗಣನೆಗೆ ತೆಗೆದುಕೊಂಡು ಕೆಳಗಿನ ಚಿತ್ರವು (ಚಿತ್ರ ೧೦-೧) ಕೊಡುತ್ತದೆ.
ಚಿತ್ರ ೧೦-೧ ಭೂಮಿಯನ್ನು ಕೇಂದ್ರವಾಗಿರಿಸಿ ಗ್ರಹಗಳ ಚಲನೆಯ ಕಕ್ಷೆಯ ವಿಸ್ತೀರ್ಣ ಹಾಗು ಪರಿಭ್ರಮಿಸುವ ಕಾಲಮಾನವನ್ನು ಇಳಿಕೆಯ ಕ್ರಮದಲ್ಲಿ ತೋರಿಸುತ್ತದೆ. ಭೂಮಿಯಿಂದ ಅತ್ಯಂತ ದೂರವಾಗಿರುವ ಗ್ರಹವು ಶನಿಯಾದರೆ ಭೂಮಿಗೆ ಅತ್ಯಂತ ಸಮೀಪವಿರುವ ಗ್ರಹವು ಚಂದ್ರನಾಗಿದೆ. (ಭೂಮಿಯೊಂದಿಗೆ ಸೂರ್ಯನ ಸಾಪೇಕ್ಷ ಗಮನವನ್ನು ಪರಿಗಣಿಸಿ ಅದನ್ನು ಭೂಮಿಯ ಸ್ಥಾನದಲ್ಲೂ ಹಾಗು ಭೂಮಿಯನ್ನು ಸೂರ್ಯನ ಸ್ಥಾನದಲ್ಲೂ ಇರಿಸಲಾಗಿದೆ, ಕೇವಲ ವಿಷಯವನ್ನು ಮಂಡಿಸುವ ಅನುಕೂಲತೆಯ ದೃಷ್ಟಿಯಿಂದ ಹೀಗೆ ಸ್ಥಾನಪಲ್ಲಟಗೊಳಿಸಲಾಗಿದೆ).
೨. ಒಂದು ದಿವಸದ ಕಾಲಮಾನವು ದಿನವೊಂದರ ಬೆಳಿಗಿನ ಸೂರ್ಯೋದಯದಿಂದ ಆರಂಭಿಸಿ ಮರುದಿನ ಬೆಳಗಿನ ಸೂರ್ಯೋದಯದವರೆಗಿನ ’ಅಹೋರಾತ್ರ’ ಕಾಲಮಾನವನ್ನು ಒಳಗೊಂಡಿರುತ್ತದೆ. ’ಅಹ’ ಎಂದರೆ ಸೂರ್ಯೋದಯದಿಂದ ಸೂರ್ಯಾಸ್ತಮಾನದವರೆಗಿನ ಹಗಲಿನ ಕಾಲಮಾನ ಮತ್ತು ರಾತ್ರ ಎಂದರೆ ಸೂರ್ಯಾಸ್ತದಿಂದ ಸೂರ್ಯೋದಯದವರೆಗಿನ ಇರುಳಿನ ಕಾಲಮಾನ. ಒಂದು ವರ್ಷದಲ್ಲಿನ ದಿನದ ಸರಾಸರಿ ಕಾಲಮಾನವನ್ನು ಪರಿಗಣೆನೆಗೆ ತೆಗೆದುಕೊಂಡು ಅದನ್ನು ೨೪ ಹೋರಾಗಳಾಗಿ ವಿಭಜಿಸಲಾಗಿದೆ. ಈ ಪ್ರತಿಯೊಂದು ಭಾಗವನ್ನು ಒಂದು ’ಹೋರಾ’ ಎಂದು ಕರೆಯಲಾಗುತ್ತದೆ. ’ಹೋರಾ’ ಶಬ್ದವನ್ನು ’ಅಹೋರಾತ್ರ’ ಶಬ್ದದ ಮಧ್ಯದ ಅಕ್ಷರಗಳಾದ ’ಹೋ’ ಮತ್ತು ’ರಾ’ಗಳನ್ನು ತೆಗೆದುಕೊಂಡು ರೂಪಿಸಲಾಗಿದೆ. ಒಂದು ’ಹೋರಾ’ದ ಅವಧಿಯು ಒಂದು ಘಂಟೆಗೆ ಸಮವಾದುದು. ವಾಸ್ತವವಾಗಿ ಇಂಗ್ಲೀಷಿನ ಹವರ್ ಎನ್ನುವ ಶಬ್ದದ ಮೂಲವು ಹೋರಾ ಶಬ್ದದಿಂದ ನಿಷ್ಪತ್ತಿಗೊಂಡಿದೆ. ಒಂದು ದಿವಸದಲ್ಲಿ ೨೪ ಹೋರಾಗಳಿರುತ್ತವೆ.
೩. ಗ್ರಹಗಳ ಕಕ್ಷೆಗಳು ಮತ್ತು ವೇಗಗಳಿಗೆ ಸಂಬಂಧವಿದೆ. ಪರಿಭ್ರಮಣಕ್ಕೆ ಹೆಚ್ಚು ಕಾಲವನ್ನು ತೆಗೆದುಕೊಳ್ಳುವ ಗ್ರಹಗಳು ಹೊರಕಕ್ಷೆಯಲ್ಲಿದ್ದರೆ ಕಡಿಮೆ ಕಾಲವನ್ನು ತೆಗೆದುಕೊಳ್ಳುವ ಗ್ರಹಗಳು ಒಳಗಿನ ಕಕ್ಷೆಗಳೊಳಗೆ ಇರುತ್ತವೆ. ಉದಾಹರಣೆಗೆ ಒಂದು ಪರಿಭ್ರಮಣವನ್ನು ಪೂರೈಸಲು ಶನಿ ಗ್ರಹವು ಗುರು ಗ್ರಹಕ್ಕಿಂತ ಹೆಚ್ಚಿನ ಕಾಲಮಾನವನ್ನು ತೆಗೆದುಕೊಳ್ಳುತ್ತದೆ.
೪. ಹೊರಗಿನಿಂದ ಒಳಕಕ್ಷೆಗಳು ಶನಿ ಗ್ರಹದಿಂದ ಆರಂಭಿಸಿ, ಗುರು, ಮಂಗಳ, ಸೂರ್ಯ, ಶುಕ್ರ, ಬುಧ ಮತ್ತು ಚಂದ್ರನೊಂದಿಗೆ ಅಂತ್ಯಗೊಳ್ಳುತ್ತವೆ (ಭೂಮಿಯನ್ನು ಕೇಂದ್ರವಾಗಿರಿಸಿ ಅನುಸರಿಸುವ ಪದ್ಧತಿಯಲ್ಲಿ). ಈ ಎಲ್ಲಾ ಗ್ರಹಗಳೂ ದೈವಾಂಶದಿಂದ ಕೂಡಿವೆ ಎಂದು ಭಾವಿಸಲಾಗುವುದರಿಂದ ಅವುಗಳನ್ನು ಗ್ರಹ ದೇವತೆಗಳು ಅಥವಾ ಗ್ರಹಾಧಿಪತಿಗಳು ಎಂದು ಕರೆಯಲಾಗುತ್ತದೆ.
೫. ಭಾರತೀಯ ಖಗೋಳ ಶಾಸ್ತ್ರದ ಪ್ರಕಾರ ಪ್ರತಿಯೊಂದು ಗ್ರಹವು ಒಂದೊಂದು ದಿನದ ಅಧಿಪತಿಯಾಗಿರುತ್ತದೆ. ಅದರ ವಿವರಗಳನ್ನು ಕೆಳಗೆ ಕೊಟ್ಟಿರುವ ಕೋಷ್ಟಕದಲ್ಲಿ ನೋಡಬಹುದು (ಚಿತ್ರ ೧೦-೨).
ಪ್ರತಿಯೊಂದು ದಿನದ ಅಧಿಪತಿಯೂ ಆ ದಿನದ ಮೊದಲನೇ ಹೋರಾದ ಅಧಿಪತಿಯೂ ಆಗಿರುತ್ತಾನೆ. ಇದೇ ವಿಧವಾಗಿ ೭ ಹೋರಾಗಳಿಗೆ ಏಳು ಅಧಿಪತಿಗಳಿರುತ್ತಾರೆ ಅವುಗಳು ಕ್ರಮವಾಗಿ ಶನಿಯಿಂದ ಆರಂಭವಾಗಿ ಚಂದ್ರನಿಗೆ ಅಂತ್ಯವಾಗುತ್ತವೆ. ಇದು ಪ್ರತಿ ಏಳು ಘಂಟೆಗಳಿಗೆ (ಹೋರಾ) ಒಮ್ಮೆ ಪುನರಾವರ್ತನೆಯಾಗುತ್ತದೆ.
೬. ಒಂದು ಮಾದರಿ ದಿನದಂದು ಸೂರ್ಯೋದಯ ಕಾಲದ ಮೊದಲನೆ ಹೋರಾದ ಅಧಿಪತಿಯು ಶನಿ ಎಂದು ಇಟ್ಟುಕೊಳ್ಳೋಣ. ಆಗ ಎರಡನೆ ಹೋರಾದ ಅಧಿಪತಿಯು ಗುರುವಾಗುತ್ತದೆ, ಮೂರನೆಯದು ಮಂಗಳ, ಸೂರ್ಯ, ಶುಕ್ರ, ಬುಧ ಮತ್ತು ಚಂದ್ರ ಈ ವಿಧವಾಗಿ ಮುಂದುವರೆದು ಆ ದಿನದ ಮೊದಲ ಏಳು ಹೋರಾಗಳು ಮುಗಿಯುತ್ತವೆ. ಎಂಟನೆಯ ಹೋರಾದಿಂದ ಪುನಃ ಶನಿಯು ಅಧಿಪತಿಯಾಗಿ, ಇದು ಪುನರಾವರ್ತನೆಯಾಗುತ್ತದೆ. ಅದೇ ವಿಧವಾಗಿ ೧೫ನೆಯ ಹೋರಾದಲ್ಲಿ ಮತ್ತು ೨೨ನೇ ಹೋರಾಗಳಲ್ಲಿಯೂ ಶನಿಯೇ ಅಧಿಪತಿಯಾಗಿರುತ್ತಾನೆ.
೭. ವಿವಿಧ ಹೋರಾಗಳ ಮೇಲಿನ ಗ್ರಹಗಳ ಆಧಿಪತ್ಯವನ್ನು ಚಕ್ರಾಕಾರವಾಗಿ ಹೀಗೆ ತೋರಿಸಬಹುದು. (ಚಿತ್ರ ೧೦-೩)
೮. ದಿನದ ಮೊದಲನೇ ಹೋರಾದ ಅಧಿಪತಿಯು ಆ ದಿನದ ಅಧಿಪತಿ ಎಂದೂ ಹೇಳಲಾಗುತ್ತದೆ. ಆದ್ದರಿಂದ ಮೊದಲನೇ ಹೋರಾಕ್ಕೆ ಶನಿಯು ಅಧಿಪತಿಯಾದರೆ ಆ ದಿನದ ಅಧಿಪತಿಯೂ ಸಹ ಶನಿಯೇ ಆಗುತ್ತಾನೆ. ಆದ್ದರಿಂದ ಆ ದಿನದ ಹೆಸರನ್ನು ಶನಿಯ ಹೆಸರಿನಿಂದ ಕರೆಯಲಾಗಿದೆ.
೯. ಪ್ರತಿಯೊಂದು ದಿವಸವನ್ನೂ ೨೪ ಹೋರಾಗಳಾಗಿ ವಿಭಜಿಸಿರುವುದರಿಂದ ೨೫ನೇ ಹೋರಾವು ಮರುದಿನದ ಮೊದಲನೇ ಹೋರಾ ಆಗುತ್ತದೆ. ಅದೇ ವಿಧವಾಗಿ ಯಾವುದೇ ದಿನದ ಮೊದಲನೇ ಹೋರಾದಿಂದ ಲೆಕ್ಕ ಹಾಕಿದಾಗ ೨೫ನೇ ಹೋರಾವು ಅದರ ಮುಂದಿನ ದಿನದ ಮೊದಲನೇ ಹೋರಾ ಆಗುತ್ತದೆ.
೧೦. ಗ್ರಹಗಳ ಅಧಿಪತ್ಯದ ಚಕ್ರವನ್ನು ಗಮನಿಸಿದಾಗ, ದಿನದ ಮೊದಲನೇ ಹೋರಾವು ಶನಿಗ್ರಹದ ಅಧಿಪತ್ಯದಿಂದ ಆರಂಭವಾಗಿದ್ದಲ್ಲಿ ಅದರ ೨೫ನೇ ಹೋರಾದ ಅಧಿಪತಿಯು ಸೂರ್ಯನಾಗಿರುತ್ತಾನೆ. ವಾಸ್ತವವಾಗಿ ಈ ೨೫ನೇ ಹೋರಾವು ಮರುದಿನದ ಮೊದಲನೇ ಹೋರಾವಾಗಿರುತ್ತದೆ. ಆದ್ದರಿಂದ ಮರುದಿನದ ಅಧಿಪತಿಯು ಸೂರ್ಯನಾಗಿರುತ್ತಾನೆ. ಆದ್ದರಿಂದ ಆ ದಿನವನ್ನು ಸೂರ್ಯನ ಹೆಸರಿನಿಂದ (ಭಾನು/ರವಿ/ಆದಿತ್ಯ) ಕರೆಯಲಾಗುತ್ತದೆ. ಸಂಸ್ಕೃತದಲ್ಲಿ ಇದನ್ನೇ ಭಾನುವಾಸರೇ ಎಂದು ಕರೆಯಲಾಗಿದೆ.
೧೧. ಇದೇ ತರ್ಕವನ್ನನುಸರಿಸಿ ಭಾನುವಾರದ ಸೂರ್ಯೋದಯದ ಹೋರಾದಿಂದ ಆರಂಭಿಸಿ ಅದರ ೨೫ನೇ ಹೋರಾದ ಅಧಿಪತಿಯು ಚಂದ್ರನಾಗಿರುತ್ತಾನೆ ಹಾಗಾಗಿ ಆ ದಿನವನ್ನು ಚಂದ್ರನ ಇನ್ನೊಂದು ಹೆಸರಾದ ಸೋಮದಿಂದ, ಸೋಮವಾರ (ಇಂದುವಾಸರ) ಎಂದು ಕರೆಯಲಾಗುತ್ತದೆ.
೧೨. ಇದೇ ಪದ್ಧತಿಯನ್ನು ವಾರದ ಇತರೇ ದಿನಗಳಾದ ಮಂಗಳವಾರ/ಕುಜವಾರ (ಭೌಮವಾಸರ), ಬುಧವಾರ (ಸೌಮ್ಯವಾಸರ), ಗುರುವಾರ/ಬೃಹಸ್ಪತಿವಾರ (ಗುರುವಾಸರ) ಮತ್ತು ಶುಕ್ರವಾರಗಳ (ಶುಕ್ರವಾಸರ) ಹೆಸರುಗಳನ್ನು ಇರಿಸಲಾಗಿದೆ.
೧೩. ಮೇಲಿನ ತರ್ಕವನ್ನು ಇನ್ನಷ್ಟು ಸರಳಗೊಳಿಸಬಹುದು. ದಿನದ ನಾಲ್ಕನೇ ಹೋರಾದ ಅಧಿಪತಿಯೇ ೨೫ನೇ ಹೋರಾದ ಅಧಿಪತಿಯೂ ಆಗಿರುತ್ತಾನೆ ಅಂದರೆ ನಾಲ್ಕನೇ ಹೋರಾದ ಅಧಿಪತಿಯೇ ಮರುದಿನದ ಅಧಿಪತಿ ಅಥವಾ ಮರುದಿನದ ಮೊದಲನೇ ಹೋರಾದ ಅಧಿಪತಿಯಾಗಿರುತ್ತಾನೆ.
೧೪. ಕೆಳಗಿನ ಕೋಷ್ಟಕವು (ಚಿತ್ರ ೧೦-೪) ವಾರದಲ್ಲಿನ ವಿವಿಧ ದಿನಗಳ ಮೊದಲನೆ ಹಾಗು ನಾಲ್ಕನೆ ಹೋರಾದ ವಿವರಗಳನ್ನು ಹಾಗು ವಾರಗಳ ಅನುಕ್ರಮವನ್ನು ತೋರಿಸುತ್ತದೆ.
೧೫.ಇದುವರೆಗೆ ಚರ್ಚಿಸಿದ ಎಲ್ಲಾ ವಿಷಯಗಳನ್ನು ಸಂಕ್ಷಿಪ್ತವಾಗಿ ಈ ಕೆಳಗಿನ ಶ್ಲೋಕವು ವಿವರಿಸುತ್ತದೆ.
ಸಪ್ತೈತೇ ಹೋರೇಸಃ ಶನೈಶ್ಚಾರಾಧ್ಯಃ ಯಥಾಕ್ರಮಂ ಶೀಘ್ರಃ l
ಶೀಘ್ರಕ್ರಮಾಚ್ಚತುರ್ಥಾ ಭವಂತಿ ಸೂರ್ಯೋದಯಾತ್ ದಿನಪಃ ll
ಭಾವಾರ್ಥ: ಶನಿಯಿಂದ ಆರಂಭಿಸಿ ತಮ್ಮ ಕಕ್ಷೆಯಲ್ಲಿನ ಪರಿಭ್ರಮಣಗಳ ಸಂಖ್ಯೆಯ ಏರಿಕೆಯ ಅನುಕ್ರಮದಲ್ಲಿ ವಿವಿಧ ಗ್ರಹಗಳು ದಿನದ ವಿವಿಧ ಹೋರಾಗಳ ಅಧಿಪತಿಗಳಾಗಿರುತ್ತಾರೆ ಮತ್ತು ಅವುಗಳ ಅಧಿಪತ್ಯದ ಅವಧಿಯು ಒಂದು ಹೋರಾ ಕಾಲದಷ್ಟು ಇರುತ್ತದೆ. ದಿನದ ಆರಂಭದ ಹೋರಾದಿಂದ ಲೆಕ್ಕ ಹಾಕಿದಾಗ ನಾಲ್ಕನೇ ಹೋರಾದ ಅಧಿಪತಿಯೇ ಮರುದಿನದ ಅಧಿಪತಿ ಮತ್ತು ಮರುದಿನ ಸೂರ್ಯೋದಯಕಾಲದ ಮೊದಲ ಹೋರಾದ ಅಧಿಪತಿಯಾಗಿರುತ್ತಾನೆ. ಸೂರ್ಯೋದಯದ ಆರಂಭವನ್ನೇ ದಿನದ ಆರಂಭ ಕಾಲವನ್ನಾಗಿ ಪರಿಗಣಿಸಲಾಗುತ್ತದೆ.
೧೬. ಆದ್ದರಿಂದ ವಾರದಲ್ಲಿನ ವಿವಿಧ ಹೆಸರುಗಳನ್ನು ಅತ್ಯಂತ ವೈಜ್ಞಾನಿಕವಾಗಿ ನಮ್ಮ ಪೂರ್ವಿಕರು ನಿಷ್ಟತ್ತಿಗೊಳಿಸಿದ್ದಾರೆ.
****
ಆಂಗ್ಲ ಮೂಲ: ಶ್ರೀಯುತ ಡಾ. ರೇಮೆಳ್ಳ ಅವಧಾನಿಗಳು ರಚಿಸಿರುವ ವೇದ ಗಣಿತ -೪, ಪ್ರಕಟಣೆ: ಶ್ರೀ ವೇದಭಾರತಿ, ಭಾಗ್ಯನಗರ VEDIC MATHEMATICS - 4 (PUBLISHED BY SHRI VEDA BHARATHI, AUTHOR: Dr. Remella Avadhanulu)
ಈ ಸರಣಿಯ ಹಿಂದಿನ ಲೇಖನಕ್ಕೆ "ಭಾಗ - ೯ ವೇದ ಗಣಿತ ಕಿರು ಪರಿಚಯ: ಕಟಪಯಾದಿ ಪದ್ಧತಿಯನ್ವಯ ಗ್ರಹಗಳ ಪರಿಭ್ರಮಣ" ಕೆಳಗಿನ ಕೊಂಡಿಯನ್ನು ನೋಡಿ https://sampada.net/blog/%E0%B2%AD%E0%B2%BE%E0%B2%97-%E0%B3%AF-%E0%B2%B5...