ಭಾಗ - ೧೧ ಮನುವಿನ ಧರ್ಮ: ಮನು ಶೂದ್ರ ದ್ವೇಷಿಯೇ?

ಭಾಗ - ೧೧ ಮನುವಿನ ಧರ್ಮ: ಮನು ಶೂದ್ರ ದ್ವೇಷಿಯೇ?

ಚಿತ್ರ

        ಇಂತಹ ಜಾತಿಯಲ್ಲಿ ಹುಟ್ಟಿರುವುದರಿಂದ ಇವರು ಉತ್ತಮರು, ಅವರು ನೀಚರು........ ಇವರದು ಉನ್ನತವಾದ ಜಾತಿ, ಅವರದು ಹೀನವಾದ ಜಾತಿ.....  ಎನ್ನುವ ಜಾತಿ ಅಹಂಕಾರವಿರುವವರು ಎಷ್ಟು ಕೀಳಾಗಿ ಆಲೋಚಿಸಿ ಪ್ರಚಾರ ಮಾಡಿದರೂ ಸಹ...... 
        ವಾಸ್ತವವಾಗಿ ಮನುಷ್ಯರೆಲ್ಲರದೂ ಒಂದೇ ಜಾತಿ. ಭರತಖಂಡದಲ್ಲಿ ಜನಿಸಿದವರೆಲ್ಲರದೂ ಒಂದೇ ವಂಶಾವಳಿ! ಒಂದೇ ರಕ್ತ (ಡಿ.ಎನ್.ಎ)! ಆ ಜನಾಂಗಕ್ಕೆ ನಮ್ಮ ಪೂರ್ವಿಕರು ಇಟ್ಟ ಹೆಸರು "ಶೂದ್ರ" ಎಂದು. 
ಜನ್ಮನಾ ಜಾಯತೇ ಶೂದ್ರಃ ಸಂಸ್ಕಾರಾತ್ ದ್ವಿಜ ಉಚ್ಛತೇ l
ವೇದ ಪಠಣಾತ್ ಭವೇತ್ ವಿಪ್ರಃ ಬ್ರಹ್ಮ ಜಾನಾತಿ ಬ್ರಾಹ್ಮಣಃ ll
        ಹೀಗೆಂದು ಋಗ್ವೇದದ ೫ನೇ ಮಂಡಲದ ಆತ್ರೇಯ ಸ್ಮೃತಿಯು ಹೇಳುತ್ತದೆ. ಇದರರ್ಥ ಹುಟ್ಟುವಾಗ ಮಾನವರೆಲ್ಲರೂ ಶೂದ್ರರೇ, ಅವರಲ್ಲಿ ವಿದ್ಯಾ ಸಂಸ್ಕಾರ ಪಡೆದವರು ದ್ವಿಜರೆಂದು ಕರೆಯಲ್ಪಡುತ್ತಾರೆ. ಅವರಲ್ಲಿ ವೇದಾಧ್ಯಯನವನ್ನು ಕೈಗೊಂಡವರು ವಿಪ್ರರೆನಿಸಿಕೊಳ್ಳುತ್ತಾರೆ ಮತ್ತು ಬ್ರಹ್ಮಜ್ಞಾನವನ್ನು ಹೊಂದಿದವರು ಬ್ರಾಹ್ಮಣರೆನಿಸುತ್ತಾರೆ. 
      ವಿದ್ಯಾಸಂಸ್ಕಾರವನ್ನು ಪಡೆಯಲು ಪ್ರತಿಯೊಬ್ಬರಿಗೂ ಅರ್ಹತೆ ಇದೆ. ನನಗೆ ವಿದ್ಯೆಯನ್ನು ಕಲಿಸಿ ಎಂದು ಬೇಡುವ ಪ್ರತಿಯೊಬ್ಬನಿಗೂ ಅವನ ಕುಲಗೋತ್ರ, ತಂದೆ-ತಾಯಿಗಳ ಜಾತಿ, ಮೊದಲಾದವುಗಳನ್ನು ಪರಿಗಣಿಸದೆ ಗುರುಕುಲಗಳ ಗುರುಗಳು ಉಪನಯನ ಸಂಸ್ಕಾರವನ್ನು ನೆರವೇರಿಸಿ ವಿದ್ಯೆಯನ್ನು ಕಲಿಸಿಕೊಡಬೇಕು. ಈ ವಿಧವಾಗಿ ಶೂದ್ರ ಎನ್ನುವ "ಒಂದೇ ಜಾತಿ"ಯಲ್ಲಿ ಜನಿಸಿದ ಮನುಜರಲ್ಲಿ ಕೆಲವರು ವಿದ್ಯಾ ಸಂಸ್ಕಾರದ ಮೂಲಕ ವಿದ್ಯಾಜನ್ಮ ಎನ್ನುವ ಎರಡನೇ ಹುಟ್ಟನ್ನು ಪಡೆದು ದ್ವಿಜರಾಗುತ್ತಾರೆ. ಆ ದ್ವಿಜರಲ್ಲಿ ಆಡಳಿತ, ರಾಜ್ಯರಕ್ಷಣೆ, ಪ್ರಜಾಸಂರಕ್ಷಣೆ ಮೊದಲಾದ ವೃತ್ತಿಗಳನ್ನು ಇಷ್ಟಪಟ್ಟು ಕೈಗೊಳ್ಳುವವರು ಕ್ಷತ್ರಿಯರು ಎಂದು ಕರೆಯಲ್ಪಡುತ್ತಾರೆ. ವ್ಯವಸಾಯ, ಪಶುಸಂಗೋಪನೆ, ವ್ಯಾಪಾರ ಮೊದಲಾದ ವೃತ್ತಿಗಳನ್ನು ಆಯ್ದುಕೊಳ್ಳುವವರು ವೈಶ್ಯರು ಎಂದು ಕರೆಯಲ್ಪಡುತ್ತಾರೆ. ವೇದಾಧ್ಯಯನ, ಅಧ್ಯಾಪನ, ಯಜ್ಞಗಳನ್ನು ಮಾಡುವುದು ಮತ್ತು ಮಾಡಿಸುವುದನ್ನು ವೃತ್ತಿಯನ್ನಾಗಿ ಸ್ವೀಕರಿಸಿದವರು ವಿಪ್ರರು ಎಂದು ಹೇಳಲ್ಪಡುತ್ತಾರೆ. ಅಹಂಕಾರ, ಮಮಕಾರಗಳನ್ನು ತ್ಯಜಿಸಿ, ಇಂದ್ರಿಯಗಳನ್ನು ಜಯಿಸಿ, ಬ್ರಹ್ಮತತ್ತ್ವವನ್ನು ಅರಿತು, ಬ್ರಹ್ಮಜ್ಞಾನವನ್ನು ಹೊಂದಿ, ಲೋಕ ಕ್ಷೇಮವನ್ನು ಬಯಸಿ, ಸಮಾಜಹಿತಕ್ಕೋಸ್ಕರ ಕಷ್ಟಪಡುವವರು ಬ್ರಾಹ್ಮಣ ಎನ್ನುವ ಸರ್ವೋತ್ತಮ, ಸರ್ವಶ್ರೇಷ್ಠ ವರ್ಗಕ್ಕೆ ಸೇರುತ್ತಾರೆ. ಅವರನ್ನು ಎಲ್ಲರೂ ಪೂಜ್ಯಭಾವದಿಂದ ನೋಡುತ್ತಾರೆ ಮತ್ತು ಅವರಿಗೆ ಅತ್ಯಂತ ಗೌರವಯುತವಾದ ಸ್ಥಾನವನ್ನು ಕೊಡುತ್ತಾರೆ. 
       ಇದು ಆರ್ಷೇಯ ಧರ್ಮದಲ್ಲಿನ ವರ್ಣವ್ಯವಸ್ಥೆ. ಇದರಲ್ಲಿ ತಪ್ಪಿದೆ ಎಂದು ಭುಜದ ಮೇಲೆ ತಲೆಯಿರುವ ಯಾರಾದರೂ ಹೇಳಬಲ್ಲರೇ? ವಿದ್ವಾಂಸರಿಗೆ, ಉತ್ತಮ ಮನುಜರಿಗೆ ಪೂಜ್ಯಸ್ಥಾನವನ್ನು ಕೊಡಬೇಕೆಂದು ಹೇಳುವುದು ಅಪರಾಧವೇ? ಹೋಗಲಿ ಆ ಪೂಜ್ಯ ಸ್ಥಾನವನ್ನು ಕೇವಲ ಒಂದು ಜನಾಂಗಕ್ಕೆ ಅಥವಾ ಒಂದು ನಿರ್ಧಿಷ್ಠ ಕುಲಗೋತ್ರಗಳಲ್ಲಿ ಹುಟ್ಟಿದವರು ಮಾತ್ರ ಹೊಂದಬಲ್ಲರೆ ಹೊರತು ಇತರ ನಿಮ್ನ ಜನಾಂಗಗಳಲ್ಲಿ ಹುಟ್ಟಿದವರಿಗೆ ಆ ಸ್ಥಾನವನ್ನು ಪಡೆಯುವ ಯೋಗ್ಯತೆಯಿಲ್ಲ ಎಂದರೆ ಅದು ನೂರಕ್ಕೆ ನೂರರಷ್ಟು ಅಪರಾಧವೇ ಸರಿ. ಇಂತಹ ನಿಷೇಧವು ಆರ್ಷ ಧರ್ಮದಲ್ಲಿ ಎಲ್ಲಿಯೂ ಇಲ್ಲ. ಮಾನವನಾಗಿ ಜನಿಸಿದ ಪ್ರತಿಯೊಬ್ಬರಿಗೂ ಅತ್ಯುನ್ನತವಾದ ಗೌರವಸ್ಥಾನವನ್ನು ಹೊಂದುವ ಯೋಗ್ಯತೆ ಇದೆ ಎಂದು ಧರ್ಮಶಾಸ್ತ್ರವು ಹೇಳುತ್ತದೆ. 
        ಶೂದ್ರೇಣ ಹಿ ಸಮಸ್ತಾವತ್ ಯಾವದ್ವೇದೇ ನ ಜಾಯತೇ  l (ಮನುಸ್ಮೃತಿ ೨-೧೭೨)
       ಉಪನಯನ, ವಿದ್ಯಾಸಂಸ್ಕಾರಗಳು ಆಗುವವರೆಗೆ ಪ್ರತಿಯೊಬ್ಬರೂ ಶೂದ್ರರೇ ಎಂದು ಮನುಸ್ಮೃತಿಯು ಹೇಳುತ್ತದೆ. ಇದು ಉಪನಯನ ಸಂಸ್ಕಾರವನ್ನು, ವಿದ್ಯಾಜನ್ಮ ಎನ್ನುವ ದ್ವಿಜತ್ವವನ್ನು ಶೂದ್ರರಿಗೆ ನಿಷೇಧಿಸಿದಂತಾಗುತ್ತದೆಯೇ? ಹುಟ್ಟುವಾಗಿನ ಶೂದ್ರತ್ವದಿಂದ ವಿದ್ಯೆ, ಉತ್ತಮ ಸಂಸ್ಕಾರಗಳ ಮೂಲಕ ದ್ವಿಜತ್ವವನ್ನು ಹೊಂದುವ ಹಕ್ಕು, ಅಧಿಕಾರ, ಪ್ರತಿ ಮಾನವನಿಗೂ ಇದೆ ಎಂದು ಉದ್ಘೋಷಿಸುವ ಮನುಸ್ಮೃತಿಯು ಶೂದ್ರರನ್ನು ದ್ವೇಷಿಸುತ್ತದೆಂದು, ಕೀಳಾಗಿ ಕಾಣುತ್ತದೆಂದು ಅದರ ಮೇಲೆ ಮುದ್ರೆಯೊತ್ತುವುದನ್ನು ವಿವೇಕವಿರುವವರು ಮಾಡಬಹುದೇ? 
        ನಿರ್ಧಿಷ್ಠವಾದ ಕೆಟ್ಟ ಕೆಲಸಗಳನ್ನು ಮಾಡಿದ್ದಕ್ಕೆ ಶೂದ್ರವರ್ಣಕ್ಕೆ ಮನು ವಿಧಿಸಿದ ಶಿಕ್ಷೆಯನ್ನು........ ನಮ್ಮ ಕಾಲದಲ್ಲಿ ಮೂರುಸಾವಿರಕ್ಕೂ ಮೇಲ್ಪಟ್ಟು ಇರುವ ಶೂದ್ರಜಾತಿಗಳಿಗೆ, ಉಪಜಾತಿಗಳಿಗೆ ತದನಂತರ ನಮ್ಮಿಂದ ಸೇರಿಸಲ್ಪಟ್ಟ ಜಾತಿಗಳಲ್ಲಿರುವವರ ಮೇಲೆಲ್ಲಾ ಮನುವು ದ್ವೇಷ, ವೈಷಮ್ಯಗಳಿಂದ ಕೂಡಿದ ಪಕ್ಷಪಾತ ತೋರಿದನೆಂದು ಭಾವಿಸುವುದು ತಪ್ಪು. ಅಪರಾಧಗಳಿಗೆ ಕೊಡುವ ಶಿಕ್ಷೆಗಳ ವಿಷಯದಲ್ಲಿ ಮನು ಆಧುನಿಕ ಶಿಕ್ಷಾಸ್ಮೃತಿಗಳಿಗಿಂತ ಎಷ್ಟೋ ಯೋಜನಗಳಷ್ಟು ಮುಂದಿದ್ದಾನೆ. ಅಜವನ್ನೂ, ಗಜವನ್ನೂ ಒಂದೇ ಗೂಟಕ್ಕೆ ಕಟ್ಟುವ, ಬಲವಂತನಿಗೂ, ಬಲಹೀನನಿಗೂ ಒಂದೇ ವಿಧವಾದ ಶಿಕ್ಷೆಯನ್ನು ವಿಧಿಸುವ ಇಂದಿನ ನ್ಯಾಯ ಪ್ರಹಸನಕ್ಕೆ ಮನು ಸಂಪೂರ್ಣ ವಿರುದ್ಧ. ಬ್ರಾಹ್ಮಣನು ಎಂತಹ ಘೋರವಾದ ಅಪರಾಧವನ್ನು ಮಾಡಿದರೂ ಸಹ ಹಗುರವಾದ ದಂಡನೆಯ ಮೂಲಕ ಶಿಕ್ಷಿಸಬೇಕೆಂದೂ, ಅದೇ ಶೂದ್ರನು ಮಾಡಿದ ಸಣ್ಣ ಅಪರಾಧಕ್ಕೂ ಸಹ ಕಠಿಣವಾಗಿ ಶಿಕ್ಷಿಸಿ, ಚಿತ್ರಹಿಂಸೆಯನ್ನು ಕೊಟ್ಟು ವಧಿಸಬೇಕೆಂದು ಕೆಲವು ಅಗ್ರವರ್ಣದ ದುರಹಂಕಾರಿಗಳು ಕಾಲಾಂತರದಲ್ಲಿ ಸೇರಿಸಿದ ತಪ್ಪು ಶ್ಲೋಕಗಳಿಗೂ ಮನುಸ್ಮೃತಿಯ ಮೌಲಿಕ ತತ್ತ್ವಗಳಿಗೂ ಯಾವುದೇ ವಿಧವಾದ ಹೋಲಿಕೆಯಿಲ್ಲ. ಅವು ದುರುದ್ದೇಶದಿಂದ ಕೂಡಿದ ಪ್ರಕ್ಷಿಪ್ತಗಳೆಂದು ಮನುಸ್ಮೃತಿಯನ್ನು ಸಂಪೂರ್ಣವಾಗಿ ಅಧ್ಯಯನ ಮಾಡಿದ ಯಾರಿಗಾದರೂ ಸುಲಭವಾಗಿ ಅರ್ಥವಾಗುತ್ತದೆ. 
        ವಿದ್ಯಾಸ್ಥಾಯಿ, ಉತ್ತಮ ಗುಣಗಳು, ಉನ್ನತ ಸಂಸ್ಕಾರಗಳನ್ನು ಆಧರಿಸಿ ಮೇಲಿನ ಮೂರು ವರ್ಣಗಳಿಗೆ ಒಂದಕ್ಕಿಂತ ಮತ್ತೊಂದಕ್ಕೆ ಅಧಿಕವಾದ ಗೌರವಸ್ಥಾನಗಳನ್ನು ಕೊಡುವುದಕ್ಕೆ ಮಾತ್ರ ಮನು ಪರಿಮಿತನಾಗಿಲ್ಲ. ತಪ್ಪು ಮಾಡಿದರೆ ಆ ವರ್ಣಗಳಿಗೆ ವಿಧಿಸುವ ಶಿಕ್ಷೆಯ ಪ್ರಮಾಣವೂ ಸಹ ಅದೇ ಸ್ಥಾಯಿಯಲ್ಲಿರುವಂತೆ ಆದೇಶಿಸಿದ್ದಾನೆ. ಒಂದು ಅಪರಾಧವನ್ನು ಮಾಡಿದಾಗ ಶೂದ್ರನಿಗೆ ವಿಧಿಸುವ ಶಿಕ್ಷೆಯ ಪ್ರಮಾಣಕ್ಕೆ ದುಪ್ಪಟ್ಟು ಶಿಕ್ಷೆಯನ್ನು ವೈಶ್ಯನಿಗೆ ವಿಧಿಸಬೇಕು. ಅದೇ ರೀತಿ ವೈಶ್ಯನಿಗೆ ವಿಧಿಸುವ ಶಿಕ್ಷೆಯ ದುಪ್ಪಟ್ಟು ಶಿಕ್ಷೆಯನ್ನು ಕ್ಷತ್ರಿಯನಿಗೆ ಮತ್ತು ಅದಕ್ಕೆ ದುಪ್ಪಟ್ಟು ಅಂದರೆ ಶೂದ್ರನಿಗೆ ವಿಧಿಸಲ್ಪಡುವ ಶಿಕ್ಷೆಗಿಂತ ಎಂಟು ಪಟ್ಟು ಶಿಕ್ಷೆಯನ್ನು ಬ್ರಾಹ್ಮಣನಿಗೆ ವಿಧಿಸಬೇಕೆನ್ನುವುದು ಮನುವಿನ ನ್ಯಾಯ. 
ಅಷ್ಟಾಪಾದ್ಯಂ ತು ಶೂದ್ರಸ್ಯ ಸ್ತೇಯೇ ಭವತಿ ಕಿಲ್ಭಿಷಂ l
                             ಷೋಡಶೈವ ತು ವೈಶ್ಯಸ್ಯ ದ್ವಾತ್ರಿಂಶತ್ ಕ್ಷತ್ರಿಯಸ್ಯ ಚ ll (ಮನುಸ್ಮೃತಿ ೮-೩೩೭)
ಬ್ರಾಹ್ಮಣಸ್ಯ ಚತುಷ್ಷಷ್ಟಿಃ ಪೂರ್ಣಂ ವಾಪಿ ಶತಂ ಭವೇತ್ l
                    ದ್ವಿಗುಣಾ ವಾ ಚತುಷ್ಷಷ್ಠಿಸ್ತಿದ್ದೋಷ ಗುಣವಿದ್ಧಿ ಸಃ ll (ಮನುಸ್ಮೃತಿ ೮-೩೩೮)
        ಭಾವಾರ್ಥ: ತಾನು ಮಾಡಿದ ಅಪರಾಧವನ್ನು ಅಂಗೀಕರಿಸಿದ ಶೂದ್ರನಿಗೆ ಎಂಟು ಭಾಗಗಳಷ್ಟು ಶಿಕ್ಷೆಯನ್ನು ವಿಧಿಸಿದರೆ.... ಅವನ ಸ್ಥಾನದಲ್ಲಿ ವೈಶ್ಯನಿದ್ದರೆ ಅವನಿಗೆ ೧೬ ಭಾಗಗಳಷ್ಟು, ಕ್ಷತ್ರಿಯನಿಗಾದರೆ ೩೨ ಭಾಗಗಳಷ್ಟು ಮತ್ತು ಅದೇ ತಪ್ಪನ್ನು ಬ್ರಾಹ್ಮಣನಾದವನು ಮಾಡಿದರೆ ೬೪ ಅಥವಾ ೧೦೦ ಅಥವಾ ೧೨೮ ಭಾಗಗಳಷ್ಟು ಶಿಕ್ಷೆಯನ್ನು ವಿಧಿಸಬೇಕು. ಸಾಮಾನ್ಯ ಪ್ರಜೆಗಿಂತ ತಿಳುವಳಿಕೆಯುಳ್ಳವನಿಗೆ ಹೆಚ್ಚಿನ ದಂಡನೆಯನ್ನು ವಿಧಿಸಬೇಕು ಎನ್ನುವುದು ಇದರಿಂದ ವಿಧಿತವಾಗುತ್ತದೆ. 
ಏನೂ ತಿಳಿಯದ ಪಾಮರಿನಿಗಿಂತ ಎಲ್ಲವನ್ನೂ ತಿಳಿದ ಪಂಡಿತನು ಹೆಚ್ಚಿನ ದಂಡನೆಗೆ ಅರ್ಹನೆನ್ನುವುದು ಮನುವಿನ ಆಲೋಚನೆ. ಇದು ಒಳಿತಲ್ಲವೇ? 
        ಇಂದಿನ ಕಾಲಮಾನದಲ್ಲಿ ಶೂದ್ರರು ಎಂದು ಪರಿಗಣಿಸಲ್ಪಟ್ಟಿರುವ ಜಾತಿಗಳು ಮನುವಿನ ಕಾಲದಲ್ಲಿ ಅಸ್ತಿತ್ವದಲ್ಲೇ ಇರಲಿಲ್ಲ. ಬ್ರಾಹ್ಮಣ, ಕ್ಷತ್ರಿಯ, ವೈಶ್ಯ ಜಾತಿಗಳ ಕೆಳಗೆ ಸೇರಿಸಲು ಸಾಧ್ಯವಾಗದ ಜಾತಿಗಳನ್ನೆಲ್ಲಾ ಇಂದು ನಾವು ಶೂದ್ರ ಜಾತಿಗಳೆಂದು ಪರಿಗಣಿಸುತ್ತಿದ್ದೇವೆ. ಅವುಗಳಲ್ಲಿ ಪ್ರತಿಯೊಂದು ಜಾತಿಗೂ, ಉಪಜಾತಿಗೂ ಒಂದೊಂದು ನಿರ್ಧಿಷ್ಟವಾದ ಪ್ರತ್ಯೇಕವಾದ ಹೆಸರುಗಳಿವೆ. ವಾಸ್ತವವಾಗಿ ಶೂದ್ರ ಜಾತಿ ಎನ್ನುವ ಪ್ರತ್ಯೇಕವಾದ ಜಾತಿ ಯಾವ ಕಾಲಕ್ಕೂ ಇರಲಿಲ್ಲ. 
      ಗುಣವನ್ನು, ಸ್ವಭಾವವನ್ನು, ಯೋಗ್ಯತೆಯನ್ನು, ಸಾಮರ್ಥ್ಯವನ್ನು ಆಧರಿಸಿ ಮನುಷ್ಯರನ್ನು ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರ, ಎನ್ನುವ ನಾಲ್ಕು ವರ್ಣಗಳಾಗಿ ಮನುವು ವಿಭಾಗಿಸಿದ್ದಾನೆ. ಇಂತಿಂತಹ ವೃತ್ತಿಗಳನ್ನು, ಕೆಲಸಗಳನ್ನು ಇಂತಿಂತಹ ವರ್ಣಗಳವರು ಮಾಡಬೇಕೆನ್ನುವ ವರ್ಗೀಕರಣವು ಮನುಸ್ಮೃತಿಯಲ್ಲಿ ಇಲ್ಲ. ಇಂತಿಂತಹ ವೃತ್ತಿಗಳನ್ನು, ಕೆಲಸಕಾರ್ಯಗಳನ್ನು ಶೂದ್ರ ವರ್ಣದವರು ಮಾಡಬೇಕೆಂದಾಗಲಿ, ಆಯಾ ವೃತ್ತಿಗಳನ್ನಾಗಲಿ, ವ್ಯಾಪರಗಳನ್ನಾಗಲಿ ಅಥವಾ ಸೇವಾಕಾರ್ಯಗಳನ್ನು ಮಾಡುವವರು, ಅವರ ಕುಟುಂಬಗಳಲ್ಲಿರುವವರು, ಅವರಿಗೆ ಜನಿಸಿದವರು ಎಂದೆಂದಿಗೂ ಶೂದ್ರರಾಗಿಯೇ ಜೀವಿಸತಕ್ಕದ್ದೆನ್ನುವ ಕಟ್ಟಳೆಯನ್ನು ಮನುವು ಆದೇಶಿಸಿಲ್ಲ. ಉಪನಯನ ಸಂಸ್ಕಾರವನ್ನು ಪಡೆದು, ವಿದ್ಯಾಭ್ಯಾಸವನ್ನು ಕೈಗೊಂಡು, ಉತ್ತಮವಾದ ಗುಣಗಳನ್ನು ಸಂಪಾದಿಸಿಕೊಂಡು ದ್ವಿಜತ್ವವನ್ನು ಹೊಂದುವ ಅವಕಾಶವನ್ನು ಕೊಟ್ಟಿರುವ ಮನುವನ್ನು ಶೂದ್ರದ್ವೇಷಿಯಾಗಿ ಚಿತ್ರೀಕರಿಸುವುದು ಅನ್ಯಾಯವಲ್ಲದೆ ಮತ್ತೇನೂ ಅಲ್ಲ. 
        ಹೋಗಲಿ, ಹಾಗೆ ಸಾಮಾಜಿಕ ಶ್ರೇಣಿಯಲ್ಲಿ ಮೇಲಕ್ಕೇರಲು ಪ್ರಯತ್ನಿಸದೆ, ದ್ವಿಜತ್ವವನ್ನು ಬಯಸದೆ ಶೂದ್ರರಾಗಿಯೇ ಉಳಿದುಕೊಂಡ ಜಾತಿಯವರನ್ನು ನಿಕೃಷ್ಟ ಭಾವನೆಯಿಂದ ಕೀಳಾಗಿ ಕಾಣಬೇಕೆಂದು ಮನುವು ಹೇಳಿದ್ದಾನೆಯೇ? 
ವೈಶ್ಯಶೂದ್ರಾವಪಿ ಪ್ರಾಪ್ತೌ ಕುಟುಂಬೇತಿಥಿ ಧರ್ಮಿಣೌ l
                                      ಭೋಜಯೇತ್ ಸಹ ಭೃತ್ತ್ಯೆಸ್ತಾವಾ ನೃಶಂಸ್ಯಂ ಪ್ರಯೋಜಯನ್ ll (ಮನುಸ್ಮೃತಿ ೩-೧೧೨)
ಭುಕ್ತವತ್ ಸ್ವಥ ವಿಪ್ರೇಷು ಸ್ವೇಷು ಭೃತ್ಯೇಷು ಚೈವ ಹಿ l
                               ಭುಂಜೀಯಾತಾಂ ತತಃ ಪಶ್ಚಾದವಶಿಷ್ಟಂ ತು ದಂಪತೀ ll (ಮನುಸ್ಮೃತಿ ೩-೧೧೬)
        ಶೂದ್ರರು ತಮ್ಮ ಮನೆಗೆ ಅತಿಥಿಗಳಾಗಿ ಬಂದರೆ ಅವರಿಗೆ ಮತ್ತು ತಮ್ಮ ಸೇವಕರಾದ ಶೂದ್ರರಿಗೆ ಊಟವನ್ನು ನೀಡಿದ ನಂತರವೇ ಗೃಹಸ್ಥ ದಂಪತಿಗಳು ಭೋಜನವನ್ನು ಮಾಡಬೇಕೆಂದು ಮನುವು ಹೇಳಿದ್ದಾನೆ. ಇದು ಶೂದ್ರರನ್ನು ಅವಮಾನಿಸುವ ವಿಧಾನವೇ? ಮನುಧರ್ಮವನ್ನು ನಿರ್ನಾಮಗೊಳಿಸಿ, ಜಾತಿರಹಿತ ಸಮಾಜವನ್ನು ಸ್ಥಾಪಿಸುವ ದಿಶೆಯಲ್ಲಿ ದಾಪುಗಾಲು ಹಾಕುತ್ತಿರುವ ಆಧುನಿಕ ಕ್ರಾಂತಿಕಾರಿಗಳೆಂದು ಬಡಾಯಿ ಕೊಚ್ಚಿಕೊಳ್ಳುವವರಿರುವ ಈ ಕಾಲದಲ್ಲಿ ತಮ್ಮ ಕೆಲಸದವರು ಭೋಜನ ಮಾಡಿದ ನಂತರ ಯಜಮಾನರು ಭೋಜನ ಮಾಡಬೇಕೆನ್ನುವ ಸಂಪ್ರದಾಯವನ್ನು ಯಾರಾದರೂ ಪಾಲಿಸುತ್ತಿದ್ದಾರೆಯೇ? ಕೆಲಸದವರಿಗೆ ಊಟ ನೀಡಿದ ನಂತರ ನಾವು ಊಟ ಮಾಡಬೇಕೆಂದು ಹೇಳಿದ ಮನುವೇನೋ ಕ್ರೂರವಾದ ಶೂದ್ರದ್ವೇಷಿ, ನಾವು ತಿಂದ ನಂತರ ಉಳಿದ ಪದಾರ್ಥಗಳನ್ನು ಕೆಲಸದವರ ಮುಖಕ್ಕೆ ಬಡಿಯುವ ನಾವೇನೋ ಮಹಾನ್ ಮಾನವತಾ ಮೂರ್ತಿಗಳಲ್ಲವೇ? 
ಮಾನಾರ್ಹ ಶೂದ್ರೋsಪಿ ದಶಮೀಂ ಗತಃ l (ಮನುಸ್ಮೃತಿ ೨- ೧೩೭)
         "ವಯೋವೃದ್ಧನಾದ ಶೂದ್ರನು ಎಲ್ಲರಿಂದಲೂ ಗೌರವಿಸಲ್ಪಡತಕ್ಕವನು" ಎಂದು ಹೇಳಿದ ಮನುವು ಶೂದ್ರರಿಗೆ ಶತ್ರುವಂತೆ! 
        ಅದೇ ವಿಧವಾಗಿ ನಿರ್ಧಿಷ್ಠ ಯೋಗ್ಯತೆಯನ್ನು ಉಳ್ಳ ಬ್ರಾಹ್ಮಣರು ವಿರಾಟ್ ಪುರುಷನ ಮುಖವನ್ನು, ದೇಶವನ್ನು ರಕ್ಷಿಸುವ ಕ್ಷತ್ರಿಯರು ಅವನ ಬಾಹುಗಳನ್ನು, ವಾಣಿಜ್ಯ, ವ್ಯಾಪಾರಗಳನ್ನು ಕೈಗೊಳ್ಳುವ ವೈಶ್ಯರು   ಅವನ ತೊಡೆಗಳನ್ನು ಮತ್ತು ದೈಹಿಕ ಶ್ರಮದಿಂದ ಸೇವಾಕಾರ್ಯಗಳನ್ನು ಕೈಗೊಳ್ಳುವ ಶೂದ್ರರು ವಿಶ್ವಾತ್ಮನ ಪಾದಗಳನ್ನು ಪ್ರತಿನಿಧಿಸುತ್ತಾರೆಂದು ಪುರುಷ ಸೂಕ್ತದಲ್ಲಿ ಹೇಳಿರುವುದರಿಂದ ಶೂದ್ರರನ್ನು ಅವಮಾನಿಸಲಾಗಿದೆ ಎನ್ನುವುದು ಎಷ್ಟು ಸಮಂಜಸವಾಗಿದೆ? ತನ್ನ ತಲೆ ಬಹಳ ಶ್ರೇಷ್ಠವಾದದ್ದು, ತನ್ನ ಪಾದಗಳು ಬಹಳ ನಿಕೃಷ್ಟವಾದವುಗಳು ಎಂದು ಯಾವ ಮನುಷ್ಯನಾದರೂ ಹೇಳಬಲ್ಲನೇ? ಸರ್ವಸಮಾನತೆಯನ್ನು ಸಾಧಿಸುವುದಕ್ಕೋಸ್ಕರ ಶರೀರದಲ್ಲಿರುವ ಕೈ, ತೊಡೆ ಮತ್ತು ಪಾದಗಳನ್ನು ಒಂದೇ ಕಡೆ ಸೇರಿಸುವುದು ಎಂತಹ ರಷ್ಯನ್ ಸರ್ಕಸ್ಸಿನ ಕಲಾಕಾರನಿಗಾಗಲಿ ಸಾಧ್ಯವಾಗುವ ಕೆಲಸವೇ? ಪ್ರಪಂಚವು ಕಷ್ಟಜೀವಿಗಳ ಶ್ರಮದ ಮೇಲೆ ಆಧರಿಸಿದೆ ಎಂದು ಹೇಳುವುದು  ಕಷ್ಟಜೀವಿಗಳನ್ನು ಕೀಳಾಗಿ ಕಂಡಂತೆ ಎಂದು ಹೇಳುವವರಿಗೆ ಬುದ್ಧಿ ಇದೆಯೆಂದು ಭಾವಿಸಬೇಕೋ ಅಥವಾ ಇಲ್ಲವೆಂದು ಭಾವಿಸಬೇಕೋ? (ಒಂದು ಸಕ್ಕರೆಯ ಗೊಂಬೆಯ ಯಾವ ಭಾಗವು ಸಿಹಿಯಾಗಿರುತ್ತದೆ ಎಂದು ಕೇಳಿದರೆ, ಎಲ್ಲಾ ಭಾಗಗಳು ಸಮಾನವಾಗಿ ಸಿಹಿಯಿಂದ ಕೂಡಿರುತ್ತವೆ ಎಂದು ಉತ್ತರಿಸುತ್ತೇವಲ್ಲವೇ? ಅದೇ ವಿಧವಾಗಿ ಪರಮಾತ್ಮನ ವಿವಿಧ ಅಂಗಗಳನ್ನು ಪ್ರತಿನಿಧಿಸುವ ಸಮಾಜದಲ್ಲಿನ ವಿವಿಧ ವರ್ಗಗಳೂ ಸಹ ಸಮಾನ ರುಚಿಯಿಂದ ಕೂಡಿರುತ್ತವಲ್ಲವೇ? ಹೀಗೆಂದು, ಸ್ವಾಮಿ ಹರ್ಷಾನಂದರು ಪುರುಷಸೂಕ್ತದ ಶ್ಲೋಕಗಳನ್ನು ವಿವರಿಸುವ ಪುಸ್ತಕವೊಂದರಲ್ಲಿ ಹೇಳಿರುತ್ತಾರೆ). 
ಮುಂದುವರೆಯುವುದು.................
          (ಆಧಾರ: ತೆಲುಗಿನಲ್ಲಿ ಶ್ರೀಯುತ ಎಂ.ವಿ.ಆರ್ ಶಾಸ್ತ್ರಿ ಅವರು ರಚಿಸಿರುವ "ಮನುಧರ್ಮ - ನಮಗೆ ಬೇಡವಾದ ಮನು: ಮನುಧರ್ಮಂ, ಮನಕು ಗಿಟ್ಟನಿ ಮನುವು" ಪುಸ್ತಕದ ಹನ್ನೊಂದನೆಯ ಅಧ್ಯಾಯ).
*****
ಈ ಸರಣಿಯ‌ ಹಿಂದಿನ‌ ಲೇಖನ ಭಾಗ - ೧೦ ಮನುವಿನ ಧರ್ಮ: ಡಾ. ಅಂಬೇಡ್ಕರರ ಮಾತುಗಳು ಓದಲು ಈ ಕೊಂಡಿಯನ್ನು ನೋಡಿ: https://sampada.net/blog/%E0%B2%AD%E0%B2%BE%E0%B2%97-%E0%B3%A7%E0%B3%A6-...
 
ಚಿತ್ರಗಳ ಕೃಪೆ: ಗೂಗಲ್

Rating
Average: 5 (1 vote)

Comments