ಭಾಗ - ೧೩ ಭೀಷ್ಮ ಯುಧಿಷ್ಠಿರ ಸಂವಾದ: ವಿಶ್ವಾಮಿತ್ರ ಚಂಡಾಲ ಸಂವಾದ ಅಥವಾ ಆಪದ್ಧರ್ಮ

ಭಾಗ - ೧೩ ಭೀಷ್ಮ ಯುಧಿಷ್ಠಿರ ಸಂವಾದ: ವಿಶ್ವಾಮಿತ್ರ ಚಂಡಾಲ ಸಂವಾದ ಅಥವಾ ಆಪದ್ಧರ್ಮ

ಚಿತ್ರ

ವಿಶ್ವಾಮಿತ್ರ ಚಂಡಾಲ ಸಂವಾದ ಅಥವಾ ಆಪದ್ಧರ್ಮ 
 
         ಭೀಷ್ಮ ಯುಧಿಷ್ಠಿರ ಸಂವಾದ ಅರ್ಥಾತ್ ರಾಜನೀತಿ ಶಾಸ್ತ್ರದಿಂದ ಆಯ್ದ ಮತ್ತೊಂದು ನೀತಿ ಕಥೆ ಇದು. 
     ಯುಧಿಷ್ಠಿರನು ಕೇಳಿದನು, "ಪಿತಾಮಹಾ, ಲೋಕದಲ್ಲಿ ಧರ್ಮವು ಕ್ಷೀಣಿಸಿ ಹೋಗುತ್ತಿದೆ. ಅಧರ್ಮವೇ ಧರ್ಮದ ಹೆಸರಿನಲ್ಲಿ ಚಲಾವಣೆಯಾಗುತ್ತಿದೆ. ದೇಶದಲ್ಲಿ ಎತ್ತ ನೋಡಿದರತ್ತ ದಹನಕಾಂಡಗಳು, ದಾರುಣ ಹತ್ಯೆಗಳೇ ಕಾಣಿಸುತ್ತಿವೆ. ಮಳೆಗಳು ಇಲ್ಲ. ಅನಾವೃಷ್ಟಿಯಿಂದ ಕ್ಷಾಮಡಾಮರಗಳು ತಾಂಡವವಾಡುತ್ತಿವೆ. ಭೂಮಿಯ ಮೇಲೆ ಜೀವಿಸುವುದಕ್ಕೆ ಅವಶ್ಯವಾದ ವಸ್ತುಗಳೆಲ್ಲಾ ದರೋಡೆಕೋರರ ಪಾಲಾಗುತ್ತಿವೆ. ಇಂತಹ ಘೋರ ಪರಿಸ್ಥಿತಿ ಏರ್ಪಟ್ಟಾಗ ಸಜ್ಜನನಾದವನು ಯಾವ ಉಪಾಯದಿಂದ ತನ್ನ ಜೀವನವನ್ನು ನಿರ್ವಹಿಸಿಕೊಳ್ಳಬಲ್ಲ? ಅವನು ತನ್ನ ಸತಿ-ಸುತರನ್ನು ಹೇಗೆ ಪೋಷಿಸಿಕೊಳ್ಳಬಲ್ಲ? ದೇಶದಲ್ಲಿ ಪಾಪಾತ್ಮರು ಹೆಚ್ಚಾದಾಗ ರಾಜನಾದವನು ಯಾವ ವಿಧವಾಗಿ ವ್ಯವಹರಿಸಬೇಕು? ಪರಿಸ್ಥಿತಿಯ ಒತ್ತಡಕ್ಕೆ ಸಿಲುಕಿ ಭ್ರಷ್ಟನಾಗದೆ ಜೀವಿಸುವುದು ಹೇಗೆ? ದಯಮಾಡಿ ತಿಳಿಸುವಂತಹವರಾಗಿ". 
        ಭೀಷ್ಮನು ಹೀಗೆ ಉತ್ತರಿಸಿದನು. "ಧರ್ಮನಂದನನೇ! ಇಂತಹ ಪರಿಸ್ಥಿತಿಗಳಲ್ಲಿ ಸತ್ಪುರುಷನಿಗಾಗಲಿ, ರಾಜನಿಗಾಗಲಿ ವಿಜ್ಞಾನಬಲವೊಂದೇ ಆಧಾರ. ವಿವೇಕದಿಂದ, ವಿಜ್ಞಾನದಿಂದ ಅಂತಹ ಕ್ಲಿಷ್ಟಕರ ಪರಿಸ್ಥಿತಿಯನ್ನು ಎದುರಿಸಿ ಮುಂದಕ್ಕೆ ಸಾಗಬೇಕೇ ಹೊರತು, ನಿರಾಶರಾಗಬಾರದು. ಈ ವಿಷಯದಲ್ಲಿ ’ವಿಶ್ವಾಮಿತ್ರ ಚಂಡಾಲ ಸಂವಾದ’ವೆನ್ನುವ ಉಪಾಖ್ಯಾನವೊಂದಿದೆ. ಅದನ್ನು ಹೇಳುತ್ತೇನೆ ಕೇಳುವಂತಹವನಾಗು." 
       "ತ್ರೇತಾ ದ್ವಾಪರ ಯುಗಗಳ ಸಂಧಿಕಾಲದಲ್ಲಿ ದೈವವಶಾತ್ ಒಂದು ಪರ್ಯಾಯ ೧೨ ಸಂವತ್ಸರಗಳು ಮಳೆಬೆಳೆಗಳಾಗದೆ ಅನಾವೃಷ್ಟಿ ಏರ್ಪಟ್ಟಿತ್ತು. ಜನಸಂಖ್ಯೆಯ ಹೆಚ್ಚಳವಾಯಿತು ಆದರೆ ಮಳೆ ಕಡಿಮೆಯಾಯಿತು, ಹೀಗಿರುವಾಗ ಪ್ರಳಯಕಾಲ ಸನ್ನಿಹಿತವಾಗದೇ ಇನ್ನೇನಾದೀತು!"
       "ಇಂತಹ ಸಮಯದಲ್ಲಿ ಮಹರ್ಷಿ ವಿಶ್ವಾಮಿತ್ರನು ಕ್ಷುದ್ಭಾದೆಯಿಂದ ತಹತಹಿಸುತ್ತಾ ತನ್ನ ಆಶ್ರಮವನ್ನು ಬಿಟ್ಟು ಊರ ಹಾದಿ ಹಿಡಿದು ಹೊರಟನು. ಎಲ್ಲಿ ನೋಡಿದರೂ ಭಿಕ್ಷೆ ನೀಡುವವರಿಲ್ಲ. ಒಂದು ಊರಿನಲ್ಲಿ ಒಬ್ಬ ಚಂಡಾಲನ (ಕಟುಕನ) ಮನೆಯು ಕಂಡು ಬಂದಿತು. ಬೀಳುತ್ತೇಳುತ್ತಾ ವಿಶ್ವಾಮಿತ್ರನು ಅಲ್ಲಿಗೆ ಹೋದ. ಪಕ್ಕದಲ್ಲೇ ಶುನಕವೊಂದರ ತೊಡೆಯ ಮಾಂಸವು ಬಿದ್ದಿತ್ತು. ಹಗಲು ಹೊತ್ತಿನಲ್ಲಿ ಅದನ್ನು ತೆಗೆದುಕೊಳ್ಳುವುದಾದರೂ ಹೇಗೆ? ನಿಶ್ಶಕ್ತನಾಗಿದ್ದ ಅವನು ಅಲ್ಲೇ ಕುಸಿದು ಬಿದ್ದು ನಿದ್ರೆಹೋದ. ಸರಿ ರಾತ್ರಿಯಲ್ಲಿ ಅವನಿಗೆ ಎಚ್ಚರವಾಯಿತು. ಎಲ್ಲರೂ ನಿದ್ರಿಸುತ್ತಿರುವುದರಿಂದ ಆ ಮಾಂಸದ ತುಂಡನ್ನು ಈ ಕತ್ತಲೆಯಲ್ಲಿ ತೆಗೆದುಕೊಳ್ಳಲು ಇದೇ ಸುಸಮಯವೆಂದು ಭಾವಿಸಿ ವಿಶ್ವಾಮಿತ್ರನು ಎದ್ದು ಒಂದಡಿ ಮುಂದಿಟ್ಟನೋ ಇಲ್ಲವೋ ಆಗ ಕಟುಕನು ನಿದ್ದೆಯಿಂದ ಎಚ್ಚೆತ್ತು ’ಯಾರದು’ ಎಂದು ಗಟ್ಟಿಯಾಗಿ ಗದರಿದ. ಹತಾಶನಾದ ವಿಶ್ವಾಮಿತ್ರನು ಸಂಕೋಚಪಟ್ಟುಕೊಂಡನು, ಭಯಗೊಂಡನು. ಆದರೂ ಸಹ ತನ್ನ ಪರಿಚಯವನ್ನು ಹೇಳಿಕೊಂಡ". 
        "ಆ ಚಂಡಾಲನು ದಿಗ್ಗನೆದ್ದು, ಕರಗಳನ್ನು ಜೋಡಿಸಿ, ಆನಂದಾಶ್ರುಗಳಿಂದ "ಮಹಾತ್ಮಾ! ನೀವಾ? ಈ ಅಪರಾತ್ರಿಯಲ್ಲಿ, ಇದೇನಿದು ಇಲ್ಲಿ! ಇದೇನು ನಿಮ್ಮ ಕೆಲಸ? ನಿಮಗೇನು ಬೇಕು? ಎಂದು ಕೇಳಿದನು"
        "ಅಯ್ಯಾ ನನಗೆ ಹಸಿವೆಯಾಗುತ್ತಿದೆ. ಪ್ರಾಣಗಳು ವಾಯುವಿನಲ್ಲಿ ಲೀನವಾಗುತ್ತಿವೆ ಎನಿಸುತ್ತಿದೆ. ಆ ಶುನಕದ (ನಾಯಿಯ) ಮಾಂಸವನ್ನು ತೆಗೆದುಕೊಂಡು ಹೋಗುತ್ತೇನೆ" ಎಂದನು ವಿಶ್ವಾಮಿತ್ರ"
        "ಮಹನೀಯರೇ! ನಿಮಗೆ ಬೋಧಿಸುವಷ್ಟು ನಾನು ದೊಡ್ಡವನಲ್ಲ. ಆದರೆ ಶುನಕವು ಎಲ್ಲದಕ್ಕಿಂತ ನೀಚವಾದ ಪ್ರಾಣಿ. ನರಿಗಿಂತಲೂ ಹೀನವಾದದ್ದು. ಅದರ ತೊಡೆ ಇನ್ನೂ ಹೀನವಾದದ್ದು. ಅಂತಹ ಮಾಂಸವನ್ನು ನೀವು ತಿನ್ನುವುದೆಂದರೇನು?" ಎಂದು ಆ ಚಂಡಾಲನು ಹೇಳಿದನು"
      "ವಿಶ್ವಾಮಿತ್ರನು ಅವನ ಪ್ರಶ್ನೆಗೆ ಮಾರುತ್ತರವಿತ್ತನು. "ಏನು ಮಾಡಲಯ್ಯ! ಎಲ್ಲಿಯೂ ಆಹಾರವು ದೊರಕಲಿಲ್ಲ. ಎಲ್ಲಾ ಪ್ರಯತ್ನಗಳೂ ವಿಫಲವಾದವು. ಪ್ರಾಣರಕ್ಷಣೆಗೆ ಯಾವ ಉಪಾಯವೂ ಕಂಡುಬರಲಿಲ್ಲ. ಕ್ಷುದ್ಬಾಧೆಯನ್ನು ನಿವಾರಿಸಿಕೊಳ್ಳಲು ಏನನ್ನಾದರೂ ತಿನ್ನಲೇಬೇಕು! ಭಕ್ಷಾಭಕ್ಷ್ಯದ ಆಲೋಚನೆ ಆಮೇಲೆ. ಸತ್ತು ಸಾಧಿಸುವುದಾದರೂ ಏನು? ಆದ್ದರಿಂದ ಸಾಯುವುದಕ್ಕಿಂತ ಬದುಕುವುದು ಒಳ್ಳೆಯದು. ಜೀವವುಳಿಸಿಕೊಳ್ಳಲು ಈ ನಿರ್ಣಯಕ್ಕೆ ಬಂದಿದ್ದೇನೆ. ಬದುಕುಳಿದ ನಂತರ ತಪಸ್ಸು ಮಾಡಿ ಪ್ರಾಯಶ್ಚಿತ್ತವನ್ನು ಮಾಡಿಕೊಳ್ಳುತ್ತೇನೆ!" 
      "ಇದಕ್ಕೆ ಆ ಚಂಡಾಲನು ಒಪ್ಪಿಕೊಳ್ಳಲಿಲ್ಲ. "ಸ್ವಾಮಿ ನೀವು ಶಾಸ್ತ್ರ ಕೋವಿದರು. ಶಾಸ್ತ್ರಗಳನ್ನು ರಚಿಸಿದವರು. ಆಪತ್ಕಾಲದಲ್ಲಿ ಐದು ಬೆರಳುಗಳನ್ನುಳ್ಳ ಪ್ರಾಣಿಗಳನ್ನು ಮಾತ್ರವೇ ಭಕ್ಷಿಸಬಹುದೆಂದು ತಮ್ಮಂತಹ ಹಿರಿಯರು ಬೋಧಿಸಿರುತ್ತಾರೆ. ಆ ಶಾಸ್ತ್ರ ಪ್ರಮಾಣವನ್ನು ನಿಮಗೆ ಜ್ಞಾಪಿಸುತ್ತಿದ್ದೇನೆ. ನಿಮಗೆ ಬೇಕೆಂದರೆ ಆ ನಾಯಿಯ ಮಾಂಸವನ್ನು ತೆಗೆದುಕೊಂಡು ಹೋಗಿ. ನಾನು ಹೇಳಬೇಕಾದ್ದನ್ನು ಹೇಳಿದ್ದೇನೆ. ನೀವು ಬೇರೆ ಮಾರ್ಗವನ್ನು ಆಲೋಚಿಸುವುದು ಒಳಿತು".
        "ಸಾಕು ಸುಮ್ಮನಿರಯ್ಯಾ! ಈ ನಾಯಿಯ ಮಾಂಸವೇ ನನಗಿಂದು ಪವಿತ್ರವಾದ ಬೋಜನ. ಅಗಸ್ತ್ಯನೂ ಸಹ ವಾತಾಪಿಯನ್ನು ಬೇಯಿಸಿ ತಿಂದಿದ್ದಾನೆ ಗೊತ್ತಾ ನಿನಗೆ?" ಎಂದು ವಿಶ್ವಾಮಿತ್ರನು ಪ್ರತಿ ನುಡಿದನು. 
         "ವಾತಾಪಿಯನ್ನು ಬೇರೆಯವರ ಜೀವವನ್ನು ರಕ್ಷಿಸಲಿಕ್ಕಾಗಿ ಅಗಸ್ತ್ಯನು ತಿಂದಿದ್ದಾನೆ. ಆದರೆ ನೀವು ನಿಮ್ಮ ಹಸಿವೆಯನ್ನು ನೀಗಿಸಿಕೊಳ್ಳಲು ಈ ಕೆಲಸವನ್ನು ಮಾಡುತ್ತಿದ್ದೀರಿ!" ಪ್ರತಿ ಪ್ರಶ್ನೆಯನ್ನು ಕೇಳಿದ ಆ ಕಟುಕ. 
       "ನಾನೂ ಸಹ ನನ್ನ ಮಿತ್ರನನ್ನು ರಕ್ಷಿಸಿಕೊಳ್ಳುವುದಕ್ಕಾಗಿಯೇ ಈ ನಾಯಿಯ ಮಾಂಸವನ್ನು ತಿನ್ನುತ್ತಿದ್ದೇನೆ. ನನಗೆ ನನ್ನ ಶರೀರವೇ ಮಿತ್ರನಾಗಿದೆ. ಈ ಶರೀರವೇ ನನಗೆ ಧರ್ಮಸಾಧನೆಯ ಮಾಧ್ಯಮವಾಗಿದೆ. ಆಪತ್ಕಾಲದಲ್ಲಿ ಒಂದು ಬಾರಿ ಅನಿವಾರ್ಯವಾದ ಈ ಸಾಮಾನ್ಯ ದೋಷವು ಆಜನ್ಮಾಂತರವಾಗಿ ಕೈಗೊಳ್ಳುವ ಪುಣ್ಯಕಾರ್ಯಗಳಿಗೆ ಭಂಗ ತರುವುದೆಂದು ನಾನು ಭಾವಿಸುವುದಿಲ್ಲ. ’ಧರ್ಮವೇ ಬೇರೆ, ಆಪದ್ಧರ್ಮವೇ ಬೇರೆ" ಎಂದು ಹೇಳಿದ ವಿಶ್ವಾಮಿತ್ರನು ಆ ಶುನಕದ ಮಾಂಸವನ್ನು ತೆಗೆದುಕೊಂಡು ಬಂದು ದೇವತೆಗಳಿಗೆ ನೈವೇದ್ಯ ಮಾಡಿ, ದೇವಕರ್ಮ, ಪಿತೃಕರ್ಮಗಳ ನಂತರ ಹೆಂಡತಿ ಮಕ್ಕಳೊಡನೆ ಸಹ ಭೋಜನಕ್ಕೆ ಕುಳಿತನು. ಇಷ್ಟರಲ್ಲಿ ಮಳೆ ಸುರಿದು, ಬೆಳೆಗಳು ಬೆಳೆದು ಸಮಸ್ಯೆಗಳು ನೀಗಿದವು". 
       "ಆದುದರಿಂದ ಧರ್ಮನಂದನನೇ! ಸಂಕಟ ಪರಿಸ್ಥಿತಿಗಳಲ್ಲಿ ಪ್ರಾಣವನ್ನು ರಕ್ಷಿಸಿಕೊಳ್ಳಲು ವಿವೇಕಿಯಾದವನು ನಿರಾಶನಾಗಬಾರದು. ಯಾವುದೋ ಒಂದು ಉಪಾಯವನ್ನು ಆಲೋಚಿಸಬೇಕು. ಯಾವ ವಿಧವಾದ ಉಪಾಯವಾದರೂ ಸರಿ ಮೊದಲು ಆಪತ್ತಿನಿಂದ ಪಾರಾಗಿ ದಡ ಸೇರುವ ಮಾರ್ಗವನ್ನು ಅನ್ವೇಷಿಸಬೇಕು. ಬುದ್ಧಿಬಲದ ಸಹಾಯದಿಂದ ಪ್ರಾಣಗಳನ್ನು ಉಳಿಸಿಕೊಳ್ಳಬೇಕು. ಜೀವಿಸಿದ್ದರೆ ತಾನೆ ಸತ್ಕಾರ್ಯಗಳನ್ನು ಮಾಡುವ ಅವಕಾಶ ದೊರೆಯುವುದು. ಸತ್ತು ಏನನ್ನೂ ಸಾಧಿಸಲಾಗದು. ಸಾಯುವುದನ್ನೇ ಒಂದು ಮಹಾಕಾರ್ಯವನ್ನಾಗಿ ಭಾವಿಸಿ, ಏನಾದರಾಗಲಿ ಎಂದು ಪ್ರಾಣತ್ಯಾಗದ ಉಪಾಯಗಳನ್ನು ಆಶ್ರಯಿಸುವುದು ವಿವೇಕವುಳ್ಳವರ ಲಕ್ಷಣವಲ್ಲ. ಜೀವವನ್ನುಳಿಸಿಕೊಂಡು ಆಜನ್ಮ ಪರ್ಯಂತ ಧರ್ಮಾಚರಣೆಗಾಗಿ ಪ್ರಾಣ ಸವೆಸುವುದು ಸರಿಯಾದ ಮಾರ್ಗ ಎನ್ನುವುದು ನನ್ನ ಅಭಿಪ್ರಾಯ."
***
     ವಿ.ಸೂ.: ದೇಶಕ್ಕಾಗಿ ನಾನು ಪ್ರಾಣಾರ್ಪಣೆ ಮಾಡುತ್ತೇನೆ ಎನ್ನುವುದಕ್ಕಿಂತ ದೇಶಕ್ಕಾಗಿ, ಧರ್ಮಕ್ಕಾಗಿ ನಾನು ಜೀವಿಸುತ್ತೇನೆ" ಎನ್ನುವುದು ಮಹತ್ತರವಾದುದು. ಇಲ್ಲಿ ಗಮನಿಸಬೇಕಾದ ಮುಖ್ಯವಾದ ಧರ್ಮಸೂಕ್ಷ್ಮವೊಂದಿದೆ. ಈ ವಿಧವಾಗಿ ಪ್ರಾಣಕ್ಕೆ ಕುತ್ತು ಬಂದಾಗ ಧರ್ಮಾಚರಣೆಯಿಂದ ವಿಮುಖನಾಗಬಹುದೆಂದು ಹೇಳಿರುವುದು ಕೇವಲ ಸಂಸಾರಿಗಳು ಅಥವಾ ಗೃಹಸ್ಥರಿಗಾಗಿ. ಆದರೆ ಧರ್ಮಸಂಕಟವೊದಗಿದಾಗ ಸಂನ್ಯಾಸಿಗಳಾದವರು ಪ್ರಾಣವನ್ನು ಅರ್ಪಿಸಲು ಸಿದ್ಧರಾಗಬೇಕೇ ಹೊರತು ಯಾವುದೋ ಒಂದು ಉಪಾಯದಿಂದ ತನ್ನ ಜೀವವನ್ನು ಉಳಿಸಿಕೊಳ್ಳಲು ಹವಣಿಸಬಾರದು. 
*****
(ಆಧಾರ - ಶ್ರೀಯುತ ದೋನೇಪುಡಿ ವೆಂಕಯ್ಯನವರು ತೆಲುಗಿನಲ್ಲಿ ರಚಿಸಿರುವ ಭೀಷ್ಮ ಯುಧಿಷ್ಠಿರ ಸಂವಾದ ಅರ್ಥಾತ್ ರಾಜನೀತಿ ಶಾಸ್ತ್ರ ಎಂಬ ಗ್ರಂಥದಿಂದ ಆಯ್ದ ಭಾಗದ ಅನುವಾದ. ಈ ಸರಣಿಯನ್ನು ಈ ಹಿಂದೆ ಮೊಗಹೊತ್ತಗೆ - ಫೇಸ್ ಬುಕ್ಕಿನಲ್ಲಿ ನನ್ನ ವ್ಯಕ್ತಿಗತ ಪುಟದಲ್ಲಿ ಪ್ರಕಟಿಸಲಾಗಿತ್ತು).  
ಚಿತ್ರಕೃಪೆ:  ಗೂಗಲ್
 
ಹಿಂದಿನ ಲೇಖನ ಭಾಗ - ೧೨ ಭೀಷ್ಮ ಯುಧಿಷ್ಠಿರ ಸಂವಾದ: ಸಮುದ್ರಸರಿತ್ಸಂವಾದ ಅಥವಾ ಜೊಂಡು ಹುಲ್ಲಿನ ವೃತ್ತಾಂತವು! ಓದಲು ಈ ಕೆಳಗಿನ ಕೊಂಡಿಯನ್ನು ನೋಡಿ https://sampada.net/blog/%E0%B2%AD%E0%B2%BE%E0%B2%97-%E0%B3%A7%E0%B1%A8-...
 

Rating
No votes yet

Comments

Submitted by makara Sun, 10/07/2018 - 06:33

ಈ ಲೇಖನದ ಮುಂದಿನ ಭಾಗ - ೧೪ ಭೀಷ್ಮ ಯುಧಿಷ್ಠಿರ ಸಂವಾದ: ಕುಟಿಲ ನೀತಿ! ಓದಲು ಈ ಕೆಳಗಿನ ಕೊಂಡಿಯನ್ನು ನೋಡಿhttps://sampada.net/blog/%E0%B2%AD%E0%B2%BE%E0%B2%97-%E0%B3%A7%E0%B3%AA-...