ಭಾಗ - ೧೩ ಮನುವಿನ ಧರ್ಮ: ದಲಿತರ ಪ್ರಸ್ತಾವನೆ ಎಲ್ಲಿದೆ?

ಭಾಗ - ೧೩ ಮನುವಿನ ಧರ್ಮ: ದಲಿತರ ಪ್ರಸ್ತಾವನೆ ಎಲ್ಲಿದೆ?

ಚಿತ್ರ

        "ಮನುಸ್ಮೃತಿಯ ಮೇಲೆ ಏಕಿಷ್ಟು ಕೋಪ?" ಎಂದು ಈ ದೇಶದಲ್ಲಿ ಯಾವುದೇ ಅತ್ಯಂತ ಬುದ್ಧಿವಂತರಾದ ಮೇಧಾವಿಗಳನ್ನು ಪ್ರಶ್ನಿಸಿ, ಅವರು ಎಡಪಂಥೀಯರಿರಬಹುದು ಅಥವಾ ಬಲಪಂಥೀಯರಿರಬಹುದು ಭೇದಭಾವವಿಲ್ಲದೆ ಅವರೆಲ್ಲಾ ಹೇಳುವುದೇನೆಂದರೆ...... ಮನುಸ್ಮೃತಿ ಶೂದ್ರರ ಮೇಲೆ, ದಲಿತರ ಮೇರೆ ಧಾರುಣವಾದ ಪಕ್ಷಪಾತವನ್ನು ತೋರಿಸಿದೆ ಎಂದು! ಹರಿಜನರು ಒಂದು ವೇಳೆ ವೇದಗಳನ್ನು ಕೇಳಿಸಿಕೊಂಡರೆ ಅವರ ಕಿವಿಗಳಲ್ಲಿ ಕಾದ ಸೀಸವನ್ನು ಹಾಕಬೇಕೆನ್ನುವುದು! ವೇದಮಂತ್ರಗಳನ್ನು ಉಚ್ಛರಿಸಿದರೂ, ಬ್ರಾಹ್ಮಣರನ್ನು ಬಯ್ದರೂ ಸಹ ಅವರ ನಾಲಿಗೆಯನ್ನು ಸೀಳಿಬಿಡಬೇಕೆನ್ನುವುದು! ಅಸಲಿಗೆ ದಲಿತರ ನೆರಳೂ ಸಹ ಬ್ರಾಹ್ಮಣರಿಗೆ ಸೋಕಬಾರದೆನ್ನುವ ಕಠೋರ ನಿಯಮಗಳನ್ನು ಅದು ರೂಪಿಸಿದೆ ಎಂದು! ಚಿಕ್ಕ-ಪುಟ್ಟ ತಪ್ಪುಗಳಿಗೂ ಸಹ ಶೂದ್ರರನ್ನು, ದಲಿತರನ್ನು ಸಜೀವವಾಗಿ ಸುಟ್ಟುಹಾಕಬೇಕೆಂದೂ, ಅವನ ಶರೀರದ ಅಂಗಗಳನ್ನೋ ಅಥವಾ ಇಡಿಯಾಗಿ ಆ ಮನುಷ್ಯನನ್ನೇ ಕತ್ತರಿಸಿ ಹಾಕಬೇಕೆನ್ನುವ ಕ್ರೂರವಾದ ಶಿಕ್ಷಿಯನ್ನು ವಿಧಿಸಿದೆಯೆಂದೂ, ಪಂಚಮರ ಮೇಲೆ  ಅಮಾನವೀಯವಾದ ಅಸ್ಪೃಶ್ಯತೆಯನ್ನು ಪಾಲಿಸಬೇಕೆನ್ನುವುದೂ.... ಇನ್ನೂ, ಇನ್ನೂ......
        ಇದು ಅನ್ಯಾಯವೇ ಸರಿ. ಈ ಕಾಲದ ದೃಷ್ಟಿಕೋನದಿಂದ ನೋಡಿದಾಗ ಮನುಸ್ಮೃತಿಯಲ್ಲಿ ನಡುವಿನಲ್ಲಿ ಇರುಕಿಸಲಾದ ಕೆಲವೊಂದು ಶ್ಲೋಕಗಳನ್ನು ಗಮನಿಸಿದರೆ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗ, ಮೊದಲಾದ ಜಾತಿಗಳಿಗೆ ಮನುವು ದೊಡ್ಡ ಶತ್ರು ಎನ್ನುವ ದುರಭಿಪ್ರಾಯವು ಉಂಟಾಗುವುದು ಸಹಜ. ಆದರೆ ನಿಜವಾಗಿ ನೋಡಿದರೆ..... ನಾವಿಂದು ಪರಿಶಿಷ್ಟ ಜಾತಿ, ಪಂಗಡ, ದಲಿತರು ಎಂದು ಕರೆಯುತ್ತಿರುವ ಜಾತಿಗಳ ಪ್ರಸ್ತಾವನೆಯೇ ಮನುಸ್ಮೃತಿಯಲ್ಲಿ ಎಲ್ಲಿಯೂ ಕಂಡುಬರುವುದಿಲ್ಲ. ಇಂತಿಂತಹ ಪಾಪಗಳನ್ನು, ಅಪರಾಧಗಳನ್ನು ಮಾಡಿದವರಿಗೆ - ಅವರು ಯಾವುದೇ ವರ್ಣಕ್ಕೆ ಸೇರಿದವರಾಗಲಿ ಅವರನ್ನು ಅಸ್ಪೃಶ್ಯರಾಗಿ ಪರಿಗಣಿಸಬೇಕೆಂದು ಹೇಳಲಾಗಿದೆಯೇ ಹೊರತು ಕೆಲವೊಂದು ವರ್ಣದಲ್ಲಿ ಜನಿಸಿದವರೆಲ್ಲರನ್ನೂ ಅವರ ಹುಟ್ಟಿನ ಕಾರಣದಿಂದಾಗಿ ಅವರನ್ನು ಅಸ್ಪೃಶ್ಯರಾಗಿ ಕಾಣಬೇಕೆಂದು ಮನುಸ್ಮೃತಿಯಲ್ಲಿ ಎಲ್ಲಿಯೂ ಹೇಳಿಲ್ಲ. ಬ್ರಾಹ್ಮಣ ಸ್ತ್ರೀ ಮತ್ತು ಶೂದ್ರ ಪುರುಷನಿಗೆ ಜನಿಸಿದವನು ಚಂಡಾಲನೆಂದು ಹೇಳಲಾಗಿದೆಯೇ ಹೊರತು ಚಂಡಾಲ ಎನ್ನುವುದು ಒಂದು ಜಾತಿಯೆಂದೂ, ಆ ಜಾತಿಯಲ್ಲಿ ಜನಿಸಿದವರೆಲ್ಲರೂ ಅಸ್ಪೃಶ್ಯರೆಂದು ಮನುವು ಎಲ್ಲಿಯೂ ಹೇಳಿಲ್ಲ. ಈಗ ನಾವು ಹರಿಜನರೆಂದು ಕರೆಯುವ ಜಾತಿಗಳಲ್ಲಿ ಅಥವಾ ಪಂಚಮ ಜಾತಿಯಲ್ಲಿ ಜನಿಸಿದವರನ್ನು ಮುಟ್ಟಿದರೆ ಅಗ್ರವರ್ಣದವರು ಎಕ್ಕುಟ್ಟಿಹೋಗುತ್ತಾರೆಂದೋ, ನಿಮ್ನ ಜಾತಿಯವರ ನಾಲಿಗೆಯನ್ನು ಸೀಳಬೇಕೆಂದೋ, ಅವರನ್ನು ಉದ್ದುದ್ದವಾಗಿ ನಿಂತ ನಿಲುವಿನಲ್ಲೇ ಸೀಳಿ ಸಂಪೂರ್ಣವಾಗಿ ಸುಟ್ಟುಬಿಡಬೇಕೆಂದೋ ಮನುಸ್ಮೃತಿಯಲ್ಲಿ ಎಲ್ಲಿಯೂ ಹೇಳಿಲ್ಲ. ಪುಸ್ತಕದಲ್ಲಿ ಏನು ಬರೆದಿದೆ ಎನ್ನುವುದನ್ನು ಓದದಯೇ, ತಿಳಿದುಕೊಳ್ಳುವ ಗೋಜಿಗೇ ಹೋಗದೆ ಹಿಂದೂ ಧರ್ಮದ ಮೇಲೆ ದ್ವೇಷ ಬೆಳೆಸಿಕೊಂಡು ಸುಳ್ಳಿನ ಸರಮಾಲೆಯನ್ನೇ ಉದುರಿಸುವ ಮೂರ್ಖರಿಗೆ ಸತ್ಯಾಸತ್ಯೆಯ ಕುರಿತ ತಿಳುವಳಿಕೆಯೇ ಇಲ್ಲ! 
ಬ್ರಾಹ್ಮಣಃ ಕ್ಷತ್ರಿಯೋ ವೈಶ್ಯಸ್ತ್ರಯೋ ವರ್ಣಾ ದ್ವಿಜಾತಯಃ I
ಚತುರ್ಥ ಏಕಜಾತಿಸ್ತು ಶೂದ್ರೋ ನಾಸ್ತಿ ತು ಪಂಚಮಃ II
(ಮನುಸ್ಮೃತಿ ೧೦- ೩)
         ಭಾವಾರ್ಥ: ಬ್ರಾಹ್ಮಣ, ಕ್ಷತ್ರಿಯ, ವೈಶ್ಯರೆಂಬ ಮೂರು ವರ್ಣದವರೂ ದ್ವಿಜರು. ಉಳಿದ ನಾಲ್ಕನೆಯ ವರ್ಣದವರೆಲ್ಲ ಒಂದೇ ಜಾತಿಯವರಾದ ಶೂದ್ರರು, ಐದನೆಯದೆಂಬ ವರ್ಣವಿಲ್ಲ.  .......ಹೀಗೆಂದು ಮನುಸ್ಮೃತಿಯು ಸ್ಪಷ್ಟವಾಗಿ ಸಾರಿ ಹೇಳಿರಬೇಕಾದರೆ ಪಂಚಮ ವರ್ಣವನ್ನು ನಾವೇ ಹುಟ್ಟುಹಾಕಿ ಅವರ ಮೇಲೆ ಮನುವು ದ್ವೇಷಕಾರಿದ್ದಾನೆಂದು ಅವನನ್ನು ಹೀಯಾಳಿಸುವುದು ಎಷ್ಟರ ಮಟ್ಟಿಗೆ ಸರಿ?!
        ಹೋಗಲಿ ಈಗಿರುವ ದಲಿತ ಜಾತಿಗಳನ್ನು ಮನುವು ಪ್ರತ್ಯೇಕವಾಗಿ ಐದನೆಯ ವರ್ಗದಲ್ಲಿ ಸೇರಿಸದೇ ಇರಬಹುದು. ಆದರೆ ನಾಲ್ಕನೆಯದಾದ ಶೂದ್ರವರ್ಣದಲ್ಲೇ ಅವುಗಳನ್ನು ಸೇರಿಸಿ...... ಅದರೊಂದಿಗೆ ಇಂದಿನ ಪರಿಶಿಷ್ಠ ಜಾತಿ, ಜನಾಂಗ, ಹಿಂದುಳಿದ ಜನಾಂಗಗಳೆಲ್ಲವನ್ನೂ ಶೂದ್ರರ ಖಾತೆಗೆ ವರ್ಗಾಯಿಸಿ.... ಒಟ್ಟಾಗಿ ಅವರೆಲ್ಲರನ್ನೂ ಅಸ್ಪೃಶ್ಯರಾಗಿ, ಅಗ್ರವರ್ಣದವರಿಗೆ ಅವರ ಉಸಿರೂ ಸಹ ತಾಕದಂತೆ ಅವರನ್ನು ನೀಚರಾಗಿ ಪರಿಗಣಿಸಿ ಅವರನ್ನು ದೂರ ಇಟ್ಟಿದ್ದರೇನೋ?!
          ಆ ಅನುಮಾನಕ್ಕೂ ಆಸ್ಪದವಿಲ್ಲ. ಏಕೆಂದರೆ ದ್ವಿಜರ ಮನೆಗೆಲಸ ಮುಂತಾದ ಸೇವೆಗಳನ್ನು ಶೂದ್ರರು ಮಾಡಬಹುದೆಂದು ಮನುವು ಹೇಳಿದ್ದಾನೆ. ಶೂದ್ರರನ್ನು ಅಸ್ಪೃಶ್ಯರು ಎಂದು ಅವರು ಪರಿಗಣಿಸಿದರೆ ದ್ವಿಜಾತರಾದ ಬ್ರಾಹ್ಮಣ, ಕ್ಷತ್ರಿಯ ಮತ್ತು ವೈಶ್ಯರ ಮನೆಗಳಲ್ಲಿ ಅವರನ್ನು ಹೇಗೆ ಒಳಗೆ ಬಿಟ್ಟುಕೊಳ್ಳುತ್ತಾರೆ?!
ಸಮಾಪೀ ಪ್ರಪಾ ಸಹ ವೋನ್ನಭಾಗಃ ಸಮಾನೇ ಯೋಕ್ತ್ರೇ ಸಹಾ l
ವೋ ಯುನಜ್ಮಿ. ಸಮ್ಯಂಚೋಗ್ನಿಂ ಸಪರ್ಯತಾರಾ ನಾಭಿಮಿವಾಭಿತಃ ll 
(ಅಥರ್ವಣ ವೇದ - ೩.೩೦.೬) 
         ಭಾವಾರ್ಥ - ರಥದ ನಾಲ್ದೆಸೆಗಳಲ್ಲಿ ಗಾಲಿಗಳನ್ನು ಸಮನಾಗಿ ಅಮರಿಸಿದಂತೆ ಮನುಜರೆಲ್ಲರೂ ವೇದವಿಹಿತವಾದ ಅಗ್ನಿಕಾರ್ಯಗಳನ್ನು ಕೈಗೊಂಡು, ಯಜ್ಞೇಶ್ವರನನ್ನು ಒಟ್ಟಾಗಿ ಪೂಜಿಸಿ ಎಲ್ಲರೂ ಕಲೆತು ಭೋಜನವನ್ನು ಮಾಡಬೇಕೆಂದು ಅಥರ್ವಣ ವೇದದಲ್ಲಿನ ಮೇಲಿನ ಶ್ಲೋಕವು ಹೇಳುತ್ತದೆ. 
         ದಶರಥನು ಕೈಗೊಂಡ ಅಶ್ವಮೇಧ ಯಾಗದಲ್ಲಿ, "ಬ್ರಾಹ್ಮಣಾ ಭುಂಜತೇ ನಿತ್ಯಂ ನಾಥವಂತಶ್ಚ ಭುಂಜತೇ" - ಬ್ರಾಹ್ಮಣರು ಭೋಜನವನ್ನು ಮಾಡಿದರು, ಶೂದ್ರರೂ (ಸೇವಕರು) ಸಹ ಭೋಜನವನ್ನು ಮಾಡಿದರು; ಹೀಗೆಂದು ವಾಲ್ಮೀಕಿ ರಾಮಾಯಣದ ಬಾಲಕಾಂಡದಲ್ಲಿ (೧೪-೧೩) ಹೇಳಲಾಗಿದೆ. 
        ಶ್ರೀರಾಮನು ವನವಾಸ ಕಾಲದಲ್ಲಿ ಈಗಿನ ಕಾಲದಲ್ಲಿ ಪರಿಶಿಷ್ಠ ಜನಾಂಗಕ್ಕೆ ಸೇರಿದವನೆಂದು ಗುರುತಿಸಲ್ಪಡುವ ಗುಹನನ್ನು ಅಭಿಮಾನದಿಂದ ಆಲಿಂಗಿಸಿಕೊಳ್ಳುತ್ತಾನೆ. ಆ ನಿಷಾದ ರಾಜನು ಶ್ರೀರಾಮನ ಪಾದಗಳನ್ನು ತೊಳೆದು ನಾಲ್ಕು ವಿಧವಾದ ಆಹಾರ, ಪಾನೀಯಗಳನ್ನು ಅವನ ಕೈಗೆ ಕೊಟ್ಟಾಗ ಅವುಗಳನ್ನು ರಾಮನು ಭುಜಿಸುತ್ತಾನೆ. ನಿಷಾದನು ಅಸ್ಪೃಶ್ಯನೆನ್ನುವ ಭಾವನೆ ಅವನಲ್ಲಿ ಎಳ್ಳಷ್ಟೂ ಇರಲಿಲ್ಲ. 
      ಇದೇ ಕೋದಂಡರಾಮ ಮುಂದೆ ಸೀತೆಯನ್ನು ಹುಡುಕುತ್ತಾ ಶಬರಿಕಾಶ್ರಮಕ್ಕೆ ಬಂದಾಗ ಆ ಗಿರಿಜನ ಮಹಿಳೆ ಅವನಿಗೆ ತಾನು ಕಚ್ಚಿ ತಿಂದು ರುಚಿನೋಡಿದ ಹಣ್ಣನ್ನು ಕೊಟ್ಟಾಗ ಅದನ್ನು ಎಂಜಲು ಎಂದು ಭಾವಿಸದೆ ಸಂತೋಷದಿಂದ ತಿನ್ನುತ್ತಾನೆ. "ತಪೋಧನೇ - ತಪಸ್ಸನ್ನೇ ಧನವಾಗಿಯುಳ್ಳವಳು" ಎಂದು ಆಕೆಯನ್ನು ಸಂಬೋಧಿಸಿ, "ನಿನ್ನ ತಪಸ್ಸು ಸರಿಯಾಗಿ ಸಾಗುತ್ತಿದೆಯೇ?" ಎಂದು ಕುಶಲ ಪ್ರಶ್ನೆಗಳನ್ನು ಮಾಡುತ್ತಾನೆ. ಅಷ್ಟೇ ಹೊರತು ತನ್ನಂತಹ ಕ್ಷತ್ರಿಯನನ್ನು ಮುಟ್ಟುವುದಷ್ಟೇ ಅಲ್ಲ ತನಗೆ ಎಂಜಲು ಮಾಡಿದ ಹಣ್ಣನ್ನು ಸಮರ್ಪಿಸುತ್ತೀಯಾ ಎಂದು ಆ ಗಿರಿಜನ ಮಹಿಳೆಯ ಮೇಲೆ ಹಲ್ಲು ಮಸೆಯುವುದಿಲ್ಲ. (ತಪಸ್ಸು ಚೆನ್ನಾಗಿ ನಡೆಯುತ್ತಿದೆಯೇ ಎಂದು ಒಬ್ಬ ವನವಾಸಿ ಮಹಿಳೆಯನ್ನೇ ಆಪ್ಯಾಯವಾಗಿ ಪ್ರಶ್ನಿಸಿದ ಶ್ರೀರಾಮನ ಮೇಲೆ ತಪೋನಿರತನಾಗಿದ್ದ ಶಂಭೂಕನೆನ್ನುವ ಶೂದ್ರನ ತಲೆಯನ್ನು ತರಿದುಹಾಕಿದನೆಂದು ಕಾಲಾಂತರದಲ್ಲಿ ಕಟ್ಟುಕಥೆಯೊಂದನ್ನು ಹುಟ್ಟುಹಾಕಿ ಆರೋಪಿಸಿರುವುದು ನಿಜಕ್ಕೂ ಘೋರವಾದ ಅನ್ಯಾಯವಲ್ಲದೆ ಮತ್ತೇನೂ ಅಲ್ಲ!) 
ಅಂತರಾಣ ವೀಥ್ಯಶ್ಚ ಸರ್ವೇ ಚ ನಟನರ್ತಕಾಃ l 
ಶೂದ್ರಾ ನಾರ್ಯಶ್ಚ ಬಹವೋ ನಿತ್ಯಂ ಯೌವನಶಾಲಿನಃ ll
(ರಾಮಾಯಣ - ಉತ್ತರಕಾಂಡ ೯೧-೨೨)
        ಭಾವಾರ್ಥ- ಪಟ್ಟಾಭಿಷೇಕದ ನಂತರ ತಾನು ಮಾಡಿದ ಯಜ್ಞಕ್ಕೆ ಆಗಮಿಸಿ ಔತಣವನ್ನು ಸವಿದು ಹೋಗಿರೆಂದು ಶ್ರೀರಾಮಚಂದ್ರನು ಬೀದಿಯಲ್ಲಿನ ವರ್ತಕರು, ನಾಟ್ಯಕಾರರು, ನರ್ತಕರು, ಸ್ತ್ರೀಯರು ಮತ್ತು ಶೂದ್ರರು ಹಾಗು ಸಮಸ್ತ ಜನರಿಗೂ ಆಹ್ವಾನವನ್ನು ಕಳುಹಿಸಿದನು. 
ಧೃತರಾಷ್ಟ್ರ ಮಹಾರಾಜನು ಕೈಗೊಂಡ ಯಜ್ಞದಲ್ಲಿ ಬೃಹತ್ ಉತ್ಸವದಲ್ಲಿ ಸೂಪಕಾರರು ಮತ್ತು ಆಳುಗಳು ಅಡುಗೆಗಳನ್ನು ಮಾಡುತ್ತಿದ್ದರೆಂದು ಮಹಾಭಾರತದ ಆಶ್ರಮ ಪರ್ವದಲ್ಲಿ (೧.೧.೯) ಇದೆ. ಯುಧಿಷ್ಠಿರನು ಮಾಡಿದ ಅಶ್ವಮೇಧಯಾಗದಲ್ಲಿ ಶೂದ್ರವರ್ಣಕ್ಕೆ ಸೇರಿದ ಸೇವಕರು ಸಾವಿರಾರು ಬ್ರಾಹ್ಮಣರಿಗೆ ಆಹಾರ, ನೀರುಗಳನ್ನು ಉಣಬಡಿಸಿದರೆಂದು ಮಹಾಭಾರತದ ಅಶ್ವಮೇಧ ಪರ್ವದಲ್ಲಿ (೮೫.೪೧-೪೨) ಹೇಳಲಾಗಿದೆ. ಪಶುಪಾಲನೆ, ವ್ಯವಸಾಯ ಮಾಡುವವರು, ಮನೆಯಲ್ಲಿನ ಸೇವಕರು ಮತ್ತು ಕ್ಷೌರಿಕ ವೃತ್ತಿಯವರು ನೀಡುವ ಆಹಾರವನ್ನು ಯಾರು ಬೇಕಾದರೂ ಸ್ವೀಕರಿಸಬಹುದೆಂದು; ಕೇವಲ ಮನುಸ್ಮೃತಿಯೊಂದೇ ಅಲ್ಲ.... ಗೌತಮ, ಪರಾಶರ, ಯಾಜ್ಞವಲ್ಕ್ಯ, ವಿಷ್ಣು ಸ್ಮೃತಿ, ಮೊದಲಾದವುಗಳು ಹೇಳಲಾಗಿದೆ. 
        ನಮ್ಮ ಪವಿತ್ರ ಗ್ರಂಥಗಳಲ್ಲಿ ಇಷ್ಟು ಪ್ರಬಲವಾದ ದೃಷ್ಟಾಂತಗಳು ಕಂಡು ಬರುವಾಗ ಹಿಂದೂ ಧರ್ಮವು ಶೂದ್ರರನ್ನು, ದಲಿತರನ್ನು, ತನ್ನ ಸಂಕುಚಿತ ಬುದ್ಧಿಯಿಂದ ಅಸ್ಪೃಶ್ಯರಾಗಿ ಪರಿಗಣಿಸಿತೆಂದು ಎಂತಹ ಬುದ್ಧಿಹೀನನಾದರೂ ಎದೆತಟ್ಟಿಕೊಂಡು ಹೇಳಬಲ್ಲನೇ? 
ಹುಟ್ಟನ್ನು ಆಧರಿಸಿ ಕೆಲವು ವರ್ಗಗಳನ್ನು ಅಸ್ಪೃಶ್ಯರಾಗಿ ಕಾಣುವ ಪ್ರಕ್ರಿಯೆಯು ಕಾಲಾಂತರದಲ್ಲಿ ಹಿಂದೂ ಸಮಾಜದಲ್ಲಿ ಅಂಟಿದ ಮಾಯಾರೋಗ. ಇಂತಹ ಅಸ್ಪೃಶ್ಯತೆಗಳಿಗೆ ಶ್ರುತಿ, ಸ್ಮೃತಿ, ಪುರಾಣಗಳಲ್ಲಿ ಎಳ್ಳಷ್ಟೂ ಅನುಮೋದನೆಯಿಲ್ಲ. ಅನಾದಿಕಾಲದಿಂದಲೂ ಪ್ರಚಲಿತವಿದ್ದ, ಮನುವು ಅನುಮೋದಿಸಿದ, "ಕರ್ಮಣಾ ವರ್ಣ ವ್ಯವಸ್ಥೆ"ಯನ್ನು ಕಾಲಾನಂತರದಲ್ಲಿ "ಜನ್ಮತಃ ಜಾತಿ ವ್ಯವಸ್ಥೆ"ಯಾಗಿ ಮಾರ್ಪಡಿಸಿ ಆ ವ್ಯವಸ್ಥೆಯನ್ನು ಭ್ರಷ್ಟಗೊಳಿಸಿ, ದೌರ್ಭಾಗ್ಯಕರವಾದ ಕುಲವ್ಯವಸ್ಥೆಯನ್ನು ಹುಟ್ಟುಹಾಕಿ, ಬಡವ, ಬಲಹೀನ ವರ್ಗಗಳು ಮತ್ತು ದಲಿತ ವರ್ಗಗಳನ್ನು ಅಮಾನುಷವಾದ ಪಕ್ಷಪಾತಕ್ಕೆ ಗುರಿ ಮಾಡಿರುವ ಪಾಪವು ಮನುವಿನದಲ್ಲ. ಮೂಲತಃ ಈ ವಿಚಾರವು ಹಿಂದೂ ಧರ್ಮಕ್ಕೆ ಸಂಬಂಧಿಸಿದ್ದಲ್ಲವೇ ಅಲ್ಲ. ಮಹೋನ್ನತವಾದ, ವಿಶಾಲಮನೋಭಾವದ ಸಮಸ್ತ ಮಾನವ ಜನಾಂಗವು ಹೆಮ್ಮೆ ಪಡುವ ಸನಾತನ ಧರ್ಮವನ್ನು, ವೈದಿಕ ಸಂಸ್ಕೃತಿಯನ್ನು; ವಿವೇಚನೆಯ ದೃಷ್ಟಿಯಿಂದ ನೋಡದೆ  ನಾವು ಕಾಲಾಂತರದಲ್ಲಿ ಅಳವಡಿಸಿಕೊಂಡು ತಪ್ಪಾಗಿ ಅನುಸರಿಸಿದ ಜಾತಿವ್ಯವಸ್ಥೆಯನ್ನು ದಾಳವಾಗಿ ಮಾಡಿಕೊಂಡು ಹಿಂದೂ ಧರ್ಮವನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿ ಅದನ್ನು ನಾಶಪಡಿಸಲು ವಿದೇಶಿ ಮತಸ್ಥರು ಷಡ್ಯಂತ್ರವೊಂದನ್ನು ರಚಿಸಿದ್ದಾರೆ ಎನ್ನುವುದನ್ನು ಭಾರತೀಯರೆಲ್ಲರೂ ಮನಗಾಣಬೇಕಿದೆ. 
*****
ಈ ಸರಣಿಯ‌ ಹಿಂದಿನ‌ ಲೇಖನ ಭಾಗ - ೧೨  ಮನುವಿನ ಧರ್ಮ: ಹಂತಕ ರಾಮನ ಪಿತ! ಓದಲು ಈ ಕೊಂಡಿಯನ್ನು ನೋಡಿ: https://sampada.net/blog/%E0%B2%AD%E0%B2%BE%E0%B2%97-%E0%B3%A7%E0%B3%A8-%E0%B2%AE%E0%B2%A8%E0%B3%81%E0%B2%B5%E0%B2%BF%E0%B2%A8-%E0%B2%A7%E0%B2%B0%E0%B3%8D%E0%B2%AE-%E0%B2%B9%E0%B2%82%E0%B2%A4%E0%B2%95-%E0%B2%B0%E0%B2%BE%E0%B2%AE%E0%B2%A8-%E0%B2%AA%E0%B2%BF%E0%B2%A4/10-5-2019/48705
 
ಚಿತ್ರಗಳ ಕೃಪೆ: ಗೂಗಲ್
 
 
 
 
 

Rating
No votes yet

Comments

Submitted by makara Thu, 09/12/2019 - 07:10

ಕಾರಾಣಾಂತರಗಳಿಂದ ಈ ಸರಣಿಯ ಲೇಖನಗಳನ್ನು ಮುಂದುವರೆಸಲಾಗಿರಲಿಲ್ಲ. ಈ ಸರಣಿಯಲ್ಲಿ ಇದು ಕಡೆಯ ಲೇಖನವಾದರೂ ಸಹ ಈ ಸರಣಿಗೆ ಅನುಬಂಧವಿರುವ ಕೆಲವೊಂದು ಪರಿವಿಡಿಗಳನ್ನೂ ಸೇರಿಸುವ ಉದ್ದೇಶವಿರುವುದರಿಂದ ಈ ಸರಣಿಗೆ ಇನ್ನೂ ಕೆಲವು ಲೇಖನಗಳನ್ನು ಪೋಣಿಸುವ ಉದ್ದೇಶವಿದೆ. ಸಹೃದಯರಾದ ಸಂಪದಿಗರು ಎಂದಿನಂತೆ ಈ ಮಾಲಿಕೆಯನ್ನು ಓದಿ ಪ್ರೋತ್ಸಾಹಿಸುತ್ತಿರುವುದಕ್ಕೆ ನಾನು ಚಿರಋಣಿ.