ಭಾಗ ೧೫ - ಮೇಕೆಯ ತೊಗಲು ಹೊದ್ದ ತೋಳ, ಮೆಕಾಲೆ ವಿದ್ಯಾ ವಿಧಾನ: ಜನಾಂಗಗಳನ್ನು ನಿರ್ಮೂಲಿಸಿದ್ದು ಯಾರು?
ಚಿತ್ರಗಳ ಕೃಪೆ: ಗೂಗಲ್
ಪಾಶ್ಚಾತ್ಯರು ತಮ್ಮ ಸ್ವಾಭಾವಿಕ ಹಾಗು ಚಾರಿತ್ರಿಕ ವಿಕೃತಿಗಳನ್ನು ಭಾರತೀಯರಿಗೆ, ಭಾರತೀಯ ಚರಿತ್ರೆಗೆ ತಳುಕು ಹಾಕುವುದಕ್ಕೆ ಮೆಕಾಲೆ ವಿದ್ಯೆಯಿಂದ ಪ್ರೋದ್ಬಲ ಸಿಕ್ಕಿತು! ಕ್ರಿಸ್ತಶಕ ಹದಿನೈದು, ಹದಿನಾರನೇ ಶತಮಾನಗಳಲ್ಲಿ ಐರೋಪ್ಯರು ಅಮೇರಿಕಾ ಖಂಡದೊಳಕ್ಕೆ ನುಸುಳಿದರು. ಆಮೇಲೆ, ಬ್ರಿಟಿಷರು ಆಸ್ಟ್ರೇಲಿಯಾ ಖಂಡದೊಳಗೆ ನುಸುಳಿದರು. ಆಯಾ ಖಂಡಗಳಲ್ಲಿ ಅಲ್ಲಿದ್ದ ಮೂಲ ನಿವಾಸಿಗಳನ್ನು ಸಾಮೂಹಿಕವಾಗಿ ಹತ್ಯೆ ಮಾಡಿದರು ಮತ್ತು ಅವರನ್ನು ಸಮೂಲಾಗ್ರವಾಗಿ ನಾಶ ಮಾಡಿದರು! ಅನಾದಿ ಕಾಲದಿಂದಲೂ ಅಲ್ಲಿದ್ದ ಮೂಲ ನಿವಾಸಿಗಳ - ಆದಿ ಜನಾಂಗಗಳ ಸಮಾಧಿಯ ಬುನಾದಿಯ ಮೇಲೆ ಈ ಹೊಸ ಸಂಕರ ಜನಾಂಗಗಳ ಭುವನಗಳು ಮೇಲೆದ್ದವು. ಹೀಗೆ ಮಾನವ ರಕ್ತವನ್ನು ಹರಿಸಿ ಹೊಸ ಜನಾಂಗಗಳನ್ನು ರೂಪಿಸುವ ಹುಟ್ಟು ಗುಣ ಯೂರೋಪಿಯನ್, ಅರಬ್ ಹಾಗು ಭಾರತೀಯ ಸಂಸ್ಕೃತಿಯಿಂದ ಸಾವಿರಾರು ವರ್ಷಗಳ ಹಿಂದೆಯೇ ದೂರವುಳಿದ ಮಾನವ ಮೃಗಗಳಾಗಿದ್ದ ಜನಾಂಗಗಳದ್ದು. ಆದರೆ ಕಾಲಾಂತರದಲ್ಲಿ ಆ ಮಾನವ ಮೃಗಗಳೇ ನಮ್ಮ ದೇಶದ ಮೇಲೆ ದುರಾಕ್ರಮಣ ಮಾಡಿದವು. ನಮ್ಮನ್ನಾಳಿದವು. "ಭಾರತೀಯರು ತಮ್ಮಂತೆಯೇ ಇರಬಹುದು, ಭಾರತೀಯರ ಪೂರ್ವಿಕರು ತಮ್ಮಂತೆಯೇ ನೀಚರಾಗಿ ಪ್ರವರ್ತಿಸಿರಬಹುದು" ಎಂದು ಮೆಕಾಲೆ ವಿದ್ವಾಂಸರು ಭಾವಿಸಿದರು. ಆದ್ದರಿಂದ ಭಾರತ ದೇಶದಲ್ಲಿ ನಿವಸಿಸುತ್ತಿರುವವರ ಪೂರ್ವಿಕರು ಅಂದರೆ ಆರ್ಯರು ಅದೆಲ್ಲಿಂದಲೋ ವಲಸೆ ಬಂದ ದುರಾಕ್ರಮಣಕಾರರಿರಬಹುದೆಂದು ಬ್ರಿಟಿಷರು ನಿರ್ಧರಿಸಿದರು. ಹಾಗೆ ಬಂದ “ಆರ್ಯ”ರು, ತಾವು ಅಮೇರಿಕಾ, ಆಷ್ಟ್ರೇಲಿಯಾ, ಖಂಡಗಳಲ್ಲಿ ಮಾಡಿದಂತೆ, ಸಿಂಧೂ ಕಣಿವೆ ನಾಗರೀಕತೆಯನ್ನು ನಾಶಗೊಳಿಸಿ ಹೊಸದಾದ “ವೈದಿಕ ಸಂಸ್ಕೃತಿ”ಯನ್ನು ಹುಟ್ಟುಹಾಕಿರಬೇಕೆಂದು ಪಾಶ್ಚಾತ್ಯರು ಮೊದಲ ಊಹಿಸಿದರು. ಆಮೇಲೆ ಈ ಅಬದ್ಧವನ್ನೇ ಸತ್ಯವೆಂದು ನಿರ್ಧರಿಸಿದರು....!
******
ವಿಂದ್ಯ ಪರ್ವತದ ತಪ್ಪಲಿನಲ್ಲಿ ಒಂದು ದೊಡ್ಡ ಜಲಾಶಯವಿತ್ತು. ಆ ಜಲಾಶಯದಲ್ಲಿ ಒಂದು ಸಣ್ಣ ಮೀನಿನ ಮರಿ ಒದ್ದಾಡುತ್ತಿತ್ತು. ಅದು ಬಹಳ ಚಿಕ್ಕ ಮೀನಾಗಿದ್ದರಿಂದ ಅದು ಸರೋವರದ ಅಲೆಗಳನ್ನು ನೋಡಿ ಕಳವಳಗೊಂಡಿತ್ತು. ಆ ಬಹು ಚಿಕ್ಕ ಮೀನಿನ ಮರಿಗೆ ಒಬ್ಬ ಮನುಷ್ಯ ಕಾಣಿಸಿಕೊಂಡ. ಅವನ ಹೆಸರು ವೈವಸ್ವತ. ಅವನು ಅನೇಕ ವರ್ಷಗಳ ಕಾಲ ತಪಸ್ಸು ಮಾಡಿದವನು! ಆ ಮಡುವಿನಲ್ಲಿ ಸ್ನಾನ ಮಾಡಲು ಆ ವೈವಸ್ವತನು ಅಲ್ಲಿಗೆ ಬಂದಿದ್ದ. ಅವನನ್ನು ನೋಡಿದ ಆ ಚಿಕ್ಕ ಮರಿಮೀನು ಹೀಗೆ ಹೇಳಿತು, "ಸ್ವಾಮಿ, ಈ ನೀರಿನ ಮಡು ಬಹಳ ದೊಡ್ಡದಾಗಿದೆ. ಇದರಲ್ಲಿ ಬಹಳ ದೊಡ್ಡ ಜಲಚರಗಳಿವೆ. ಅವುಗಳಿಂದ ನನಗೆ ಅಪಾಯವುಂಟಾಗಬಹುದು. ಹೇಗಾದರೂ ಮಾಡಿ ನನ್ನನ್ನು ಅವುಗಳಿಂದ ಕಾಪಾಡು!"
ವೈವಸ್ವತನಿಗೆ ಆ ಪುಟ್ಟ ಮೀನನ್ನು ನೋಡಿ ಅದರ ಮೇಲೆ ಕನಿಕರವುಂಟಾಯಿತು. ಅವನು ಆ ಮೀನನ್ನು ಜಾಗ್ರತೆಯಾಗಿ ಬೊಗಸೆಯಲ್ಲಿ ಹಿಡಿದುಕೊಂಡು ಅದನ್ನು ತನ್ನ ಕಮಂಡಲಿನಲ್ಲಿ ಹಾಕಿಕೊಂಡ. ಸ್ವಲ್ಪ ಕಾಲಕ್ಕೆ ಆ ಮೀನು ಬೆಳೆದು ದೊಡ್ಡದಾಯಿತು, ಅದು ಆ ಕಮಂಡಲದಲ್ಲಿ ಹಿಡಿಸಲಾರದಾಯಿತು. ಅವನು ಅದನ್ನು ಒಂದು ದೊಡ್ಡ ಹಂಡೆಯಲ್ಲಿ ಹಾಕಿದನು, ಆ ಮೀನು ಅದರಲ್ಲಿಯೂ ಹಿಡಿಸದಷ್ಟು ದೊಡ್ಡದಾಗಿ ಬೆಳೆಯಿತು. ಆಗ ಅವನು ಆ ಮೀನನ್ನು ಒಂದು ಬಾವಿಯಲ್ಲಿ ಹಾಕಿದನು. ಅನತಿ ಕಾಲದಲ್ಲೇ ಆ ಮೀನಿಗೆ ಆ ಬಾವಿಯೂ ಇರುಕಾಯಿತು. ಆ ಮೀನು, ತನ್ನ ಕಷ್ಟವನ್ನು ಪುನಃ ವೈವಸ್ವತನಲ್ಲಿ ಹೇಳಿಕೊಂಡಿತು. ಪುನಃ ಅದರ ಮೇಲಿನ ಕನಿಕರದಿಂದ ವೈವಸ್ವತನು ಅದನ್ನು ಒಂದು ಕೆರೆಯಲ್ಲಿ ಬಿಟ್ಟು ಬಂದನು. ಕೆಲವು ದಿನಗಳಲ್ಲಿ ಆ ಮೀನು ಆ ಕೆರೆಗಿಂತಲೂ ದೊಡ್ಡದಾಗಿ ಬೆಳೆಯಿತು. ಪುನಃ ಅದಕ್ಕೆ ಆ ಸ್ಥಳವೂ ಇರುಕಾಯಿತು. ಆಗ ಪುನಃ ವೈವಸ್ವತನು ಆ ಮೀನನ್ನು ಕೆರೆಗಿಂತಲೂ ದೊಡ್ಡದಾದ ಸರೋವರವೊಂದರೊಳಕ್ಕೆ ತೆಗೆದುಕೊಂಡು ಹೋಗಿ ಬಿಟ್ಟನು. ಸ್ವಲ್ಪ ದಿನಗಳಲ್ಲಿ ಆ ಸರೋವರವೂ ಮೀನಿಗೆ ಸಣ್ಣದಾಯಿತು. ಇನ್ನು ಲಾಭವಿಲ್ಲವೆಂದರಿತ ವೈವಸ್ವತನು ಒಂದು ಬೃಹತ್ತಾದ ಶಕಟದಲ್ಲಿ ಅದನ್ನು ಹೇರಿಕೊಂಡು ಅದನ್ನು ಸಮುದ್ರದೊಳಕ್ಕೆ ಬಿಟ್ಟನು! ಹೀಗೆ ಅವನು, "ನಿತಾಂತಾಪಾರಭೂತದಯ" ಎನ್ನುವುದನ್ನು ಆಚರಿಸಿದನು.
ಸೃಷ್ಟಿ ಕ್ರಮದ ಶ್ವೇತವರಾಹಕಲ್ಪದಲ್ಲಿನ ಆರನೆಯ ಮನ್ವಂತರವಾದ ಚಾಕ್ಷುಸ ಮನ್ವಂತರವು ಅಂತ್ಯವಾಗುತ್ತಿದ್ದ ಸಮಯವದು. ಭಾರತೀಯ ಕಾಲಗಣನ ಪದ್ಧತಿಯ ಪ್ರಕಾರ ಒಂದು ಕಲ್ಪದ ಅವಧಿಯು ನಾಲ್ಕುನೂರಾ ಮುವ್ವತ್ತೆರಡು ಕೋಟಿ ಸಂವತ್ಸರಗಳು. ಪ್ರತಿಯೊಂದು ಕಲ್ಪವನ್ನೂ ಹದಿನಾಲ್ಕು ಮನ್ವಂತರಗಳಾಗಿ ವಿಭಜಿಸಲಾಗಿದ, ವರ್ಷವನ್ನು ಹನ್ನೆರಡು ತಿಂಗಳುಗಳಾಗಿ ವಿಭಜಿಸಿದಂತೆ! ಒಂದು ವರ್ಷದಲ್ಲಿ ತಿಂಗಳುಗಳು ಬದಲಾಗುವುದು ನಮ್ಮ ಅನುಭವಕ್ಕೆ ಬರುತ್ತದೆ. ಆದರೆ, ಒಂದು ಕಲ್ಪ ಕಾಲದಲ್ಲಿ ಮನ್ವಂತರಗಳು ಬದಲಾಗುವುದು ನಮ್ಮ ಪ್ರತ್ಯಕ್ಷ ಅನುಭವಕ್ಕೆ ನಿಲುಕುವುದಿಲ್ಲ. ಅದನ್ನು ದಾಖಲಿಸಿಡುವುದೇ ಸ್ಮೃತಿ. ಇದು ನಮ್ಮ ದೇಶದಲ್ಲಿ ಅನಾದಿಕಾಲದಿಂದಲೂ ನಡೆದುಕೊಂಡು ಬಂದಿದೆ. ಈ ಸ್ಮೃತಿಗಳನ್ನು ನಾವು ಪುರಾಣವೆಂದು ಕರೆಯುತ್ತೇವೆ. ಹೀಗೆ, ಕಲ್ಪಗಳ ಹಾಗು ಮನ್ವಂತರಗಳ ಕಾಲದಲ್ಲಿ ಜರುಗಿದ ಘಟನೆಗಳನ್ನು ದಾಖಲಿಸಿದ ಸ್ಮೃತಿಗಳನ್ನೆ ಒಟ್ಟಾಗಿ ಇತಿಹಾಸವೆಂದು ಕರೆಯಲಾಗಿದೆ. ಹಾಗಾಗಿ ಆರು ಮನ್ವಂತರ ಅಥವಾ ಮಹಾಯುಗಗಳು (ಕೃತ, ತ್ರೇತಾ, ದ್ವಾಪರ ಮತ್ತು ಕಲಿಯುಗ ಸೇರಿ ಒಂದು ಮಹಾಯುಗ) ಮುಗಿಯುವ ಹೊತ್ತಿಗೆ ಶ್ವೇತವರಾಹ ಕಲ್ಪದಲ್ಲಿ ಸುಮಾರು ನೂರಾ ಎಂಬತ್ನಾಲ್ಕು ಕೋಟಿ ಸಂವತ್ಸರಗಳು ಗತಸಿದ್ದವು. ಈಗ ಏಳನೆಯದಾದ ವೈವಸ್ವತ ಮನ್ವಂತರವು ನಡೆಯುತ್ತಿದೆ, ಈ ಮನ್ವಂತರದಲ್ಲಿ ಸುಮಾರು ಹನ್ನೆರಡು ಕೋಟಿ ಸಂವತ್ಸರಗಳು ಮುಗಿದಿವೆ. ಹಾಗಾಗಿ ನಮ್ಮ ಪಂಚಾಂಗಗಳಲ್ಲಿ ಸೃಷ್ಟಿಯು ಆರಂಭವಾಗಿ ಸುಮಾರು ೧೯೬ ಕೋಟಿ ಸಂವತ್ಸರಗಳಾಗಿವೆ ಎಂದು ಬರೆದಿರುತ್ತಾರೆ. ಈ ವಾಸ್ತವವನ್ನು ಮೆಕಾಲೆ ವಿದ್ಯೆಯು ಅಪಹಾಸ್ಯ ಮಾಡಿತು. ಈ ಅಪಹಾಸ್ಯದ ಹಿಂದೆ ಪಾಶ್ಚಾತ್ಯರ ಕುತ್ಸಿತ ಯೋಜನೆಗಳು ಕೆಲಸ ಮಾಡಿವೆ. (ಈಗ ಪಾಶ್ಚಾತ್ಯ ವಿಜ್ಞಾನಿಗಳು ಭೂಮಿಯ ಸೃಷ್ಟಿಯಾಗಿ ೧೯.೭ ಬಿಲಿಯನ್ ಇಯರ್ಸ್ ಅಂದರೆ ೧೯೭ ಕೋಟಿ ವರ್ಷಗಳಾಗಿವೆ ಎಂದು ಸಾರುತ್ತಿದ್ದಾರೆ. ಇದೇ ಕಾಲಮಾನವನ್ನು ಎಷ್ಟು ಕರಾರುವಾಕ್ಕಾಗಿ ನಮ್ಮ ಪೂರ್ವಿಕರು ಸರಳವಾಗಿ ಲೆಕ್ಕಹಾಕಿದ್ದಾರೆನ್ನುವುದನ್ನು ಗಮನಿಸಿ). ಈ ಮನ್ವಂತರದಲ್ಲಿ ಇನ್ನೂ ೨೦ ಕೋಟಿ ಸಂವತ್ಸರಗಳು ಪೂರ್ತಿಯಾದರೆ ಈಗ ನಡೆಯುತ್ತಿರುವ ಶ್ವೇತವರಾಹ ಕಲ್ಪವು ಅರ್ಧ ಪೂರ್ಣಗೊಳ್ಳುತ್ತದೆ. ಅಂದರೆ ಅಲ್ಲಿಗೆ ಈ ಕಲ್ಪದಲ್ಲಿನ ೨೧೬ ಕೋಟಿ ಸಂವತ್ಸರಗಳು ಪೂರ್ತಿಯಾಗುತ್ತವೆ. ಹದಿನಾಲ್ಕು ಮನ್ವಂತರಗಳಲ್ಲಿ ಅರ್ಧ ಅಂದರೆ ಒಂದು ಸಾವಿರ ಮಹಾಯುಗಗಳಲ್ಲಿನ ಅರ್ಧಭಾಗವು ಪೂರ್ಣವಾಗುತ್ತದೆ. ಇನ್ನೂ ೨೧೬ ಕೋಟಿ ಸಂವತ್ಸರಗಳು ಪೂರ್ತಿಯಾದ ಮೇಲೆ ಈಗ ನಡೆಯುತ್ತಿರುವ ಶ್ವೇತವರಾಹ ಕಲ್ಪವು ಪೂರ್ಣಗೊಳ್ಳುತ್ತದೆ. ಆಗ ಸೃಷ್ಟಿಯು ವಿನಾಶವಾಗಿ ಶೂನ್ಯವು ಏರ್ಪಡುತ್ತದೆ. ಈ ಶೂನ್ಯವೂ ಸಹ ೪೩೨ ಕೋಟಿ ಸಂವತ್ಸರಗಳ ಕಾಲವಿರುತ್ತದೆ, ಅದು ಮುಗಿದ ನಂತರ ಪುನಃ ಹೊಸ ಕಲ್ಪವು ಆರಂಭಗೊಳ್ಳುತ್ತದೆ ಹಾಗು ಹೊಸ ಸೃಷ್ಟಿಯು ಪುನರಾರಂಭವಾಗುತ್ತದೆ. ಈ ’ಸೃಷ್ಟಿಸ್ಥಿತಿ’ ಹಾಗೂ ’ಶೂನ್ಯಸ್ಥಿತಿ’ ಎರಡೂ ಹಗಲು ಮತ್ತು ರಾತ್ರಿಗಳಂತೆ ನಿರಂತರವೂ ಇರುತ್ತವೆ! ಯಾರೂ ಇಷ್ಟೊಂದು ಕಾಲ ಜೀವಿಸಿ ಇವೆಲ್ಲವನ್ನೂ ನೋಡಲು ಸಾಧ್ಯವಿಲ್ಲ. ಆದ್ದರಿಂದ ವಿಜ್ಞಾನಿಗಳು ಹೇಳಿದ್ದನ್ನು ನಂಬುತ್ತಿದ್ದೇವೆ. ಆದರೆ, ಇದೇ ವಿಷಯ ’ಬ್ರಿಟಾನಿಕಾ ಎನ್ಸೈಕ್ಲೋಪೀಡಿಯಾ’ದಲ್ಲೋ ಅಥವಾ ಅಮೇರಿಕಾ ಕಂಪನಿಗಳ ’ಇಯರ್ ಬುಕ್’ಗಳಲ್ಲೋ ಅಚ್ಚಾದರೆ ಅದು "ಸೈನ್ಸ್" ಎಂದು ಪ್ರಚಾರಗೊಳ್ಳುತ್ತದೆ. ಅದೇ ವಿಷಯ ಭಾರತೀಯರ ಪಂಚಾಂಗಗಳಲ್ಲಿ ಅಚ್ಚಾದರೆ ಅವು ಮೂಡ ನಂಬಿಕೆಗಳೆಂದು ಪ್ರಚಾರ ಪಡೆಯುತ್ತವೆ. ಈ ವ್ಯತ್ಯಾಸವು ಸೃಷ್ಟಿಯಾಗಲು ಕಾರಣವಾದದ್ದು ಮೆಕಾಲೆ ವಿದ್ಯಾವಿಧಾನ! ಸೂರ್ಯನು ಕ್ರಮೇಣವಾಗಿ ವಿಸ್ತರಿಸಿ ಈ ಭೂಮಿಯನ್ನು ಕಬಳಿಸಲಿದ್ದಾನೆಂದು "ಸೈನ್ಸ್" ಊಹಿಸುತ್ತದೆ. ಮತ್ತೆ ಹೊಸ ಸೂರ್ಯ, ಹೊಸ ಸೌರ ಕುಟಂಬಗಳು ಏರ್ಪಡುತ್ತವಂತೆ. ಈ "ಸೈನ್ಸ್" ಅನ್ನು ಯಾರೂ ಅವಹೇಳನ ಮಾಡುವುದಿಲ್ಲ! ಭಾರತೀಯರು ಹೇಳಿದ ಕಲ್ಪ, ಮನ್ವಂತರ, ಮಹಾಯುಗ, ಯುಗಗಳೂ ಸಹ "ಸೈನ್ಸ್"ನ ಭಾಗವೇ! ಒಂದನ್ನು ವಿಶ್ವಸಿಸುವ ಬುದ್ಧಿ ಬೇರೊಂದನ್ನು ’ಬಿಳಿಹಲ್ಲು’ಗಳನ್ನು ತೋರುತ್ತಾ ಮುಸಿಮುಸಿ ನಗುತ್ತವೆ. ಇದಕ್ಕೆ ಕಾರಣ ಮೆಕಾಲೆ ಇಲ್ಲಿ ಪ್ರತಿಷ್ಠಾಪಿಸಿದ ಪಾಶ್ಚಾತ್ಯ ಚಿಂತನಾ ವಿಧಾನ....!
ಹನ್ನೆರಡು ಕೋಟಿ ಸಂವತ್ಸರಗಳ ಹಿಂದೆ ಆ ಮೀನಿಗೂ, ವೈವಸ್ವತನಿಗೂ ಸಂಭಾಷಣ ನಡೆಯಿತೆಂದು ಮಹಾಭಾರತ ಇತಿಹಾಸದಲ್ಲಿ ಬರೆಯಲಾಗಿದೆ. ಇದು ಕಥೆಯಲ್ಲ ಆದರೆ ವಾಸ್ತವದ ಕಥನ..... "ಸ್ವಾಮಿ ನೀನು ನನಗೆ ಉಪಕಾರ ಮಾಡಿದ್ದೀಯ ಅದಕ್ಕೆ ನಾನು ಪ್ರತ್ಯುಪಕಾರ ಮಾಡುತ್ತೇನೆ" ಎಂದು ಸಮುದ್ರವನ್ನು ಸೇರಿಕೊಂಡ ಆ ದೊಡ್ಡ ಮೀನು ವೈವಸ್ವತನಿಗೆ ಭಾಷೆ ಕೊಡುತ್ತದೆ. ಕೆಲವು ದಿನಗಳಿಗೆ ಆರನೆಯ ಮನ್ವಂತರವಾದ ಚಾಕ್ಷುಸವು ಕೊನೆಗೊಂಡಿತು. ಕುಂಭವೃಷ್ಟಿಯಿಂದ ಭೂತಲವೆಲ್ಲಾ ಜಲಮಯವಾಗಿ ಹೋಯಿತು. ಆ ಮೀನಿನ ಸಲಹೆಯಂತೆ, ವೈವಸ್ವತನು ದೊಡ್ಡದಾದ ಒಂದು ಹಡುಗನ್ನು ನಿರ್ಮಿಸಿದ್ದನು. ಆ ಹಡಗಿನಲ್ಲಿ ಅವನೊಂದಿಗೆ ಅನೇಕ ಮಂದಿ ಪ್ರಜೆಗಳು, ಜಂತುಗಳು, ಪಕ್ಷಿಗಳು, ಕುಳಿತುಕೊಂಡ ನಂತರ ಆ ಹಡುಗು ಚಲಿಸಲಾರಂಭಿಸಿತು. ಒಂದು ದೊಡ್ಡ ಹಗ್ಗದ ಸಹಾಯದಿಂದ ಆ ದೊಡ್ಡ ಮೀನಿನ ತಲೆಯಲ್ಲಿದ್ದ ಕೊಂಬಿಗೆ ಆ ಹಡುಗನ್ನು ಕಟ್ಟಲಾಯಿತು. ಆ ಬೃಹತ್ ಮೀನು ಆ ಹಡಗನ್ನು ಎಳೆದುಕೊಂಡು ಹೋಯಿತು. ಹಿಮಾಲಯದ ಶಿಖರಾಗ್ರದಲ್ಲಿ ಮಾತ್ರವೇ ಒಣನೆಲವು ಕಂಡಿತು. ಆ ಮೀನು ಆ ಹಡಗನ್ನು ಅಲ್ಲಿಗೆ ಸೇರಿಸಿತು! ಆ ಮೀನೇ ಸೃಷ್ಟಿಕರ್ತ! ವಿಶ್ವಸಂಚಾಲಕ ತತ್ತ್ವ! ಸಮಸ್ತ ಸೃಷ್ಟಿಯಲ್ಲೆಲ್ಲಾ ಅಂತರ್ಗಾಮಿಯಾಗಿರುವ ಚೈತನ್ಯವೇ ದೇವರು. ಆ ಭಗವಂತನೋ ರೂಪವಿಲ್ಲದವನು! ಆದರೆ ಸೃಷ್ಟಿಗೆ, ಸೃಷ್ಟಿಯಲ್ಲಿನ ಅಸಂಖ್ಯಾತ ವೈವಿಧ್ಯತೆಗಳಿಗೂ ರೂಪಕೊಟ್ಟವನವನು. ಹಾಗೆ ಸಕಲರಿಗೂ ರೂಪವನ್ನು ಕೊಡಬಲ್ಲವನು ತನಗೆ ತಾನೇ ಮೀನಿನ ರೂಪವೊಂದನ್ನು ಕೊಟ್ಟುಕೊಳ್ಳಲಾರನೇ? ಶಿವನ ರೂಪವನ್ನು ಕೊಟ್ಟುಕೊಳ್ಳಲಾರನೇ? ವಿಷ್ಣುವಾಗಿ ರೂಪವನ್ನು ಧರಿಸಲಾರನೇ? ಆದ್ದರಿಂದ ಮೀನು ಅದು ಹೇಗೆ ಮಾತನಾಡಿತು? ಯಾವ ಭಾಷೆಯಲ್ಲಿ ಮಾತನಾಡಿತು? ಎನ್ನುವ ಮೊದಲಾದ ಪ್ರಶ್ನೆಗಳಿಗೆ ಮಹಾಭಾರತವು ಉತ್ತರವನ್ನು ನೀಡಿಲ್ಲ! ಅದೇನೆ ಇರಲಿ, ಆ ವೈವಸ್ವತನು ಹಿಮಾಲಯ ಪರ್ವತವನ್ನೇರಿದ ಕೂಡಲೇ ಪ್ರಳಯವು ನಿಂತಿತು. ಅವನಿಗೆ ಭೂಮಿಯು ಕಾಣಿಸಿತು. ಆಗ ಏಳನೆಯ ಮನ್ವಂತರವು ಆರಂಭವಾಯಿತು. ವೈವಸ್ವತನು ಏಳನೆಯ ಮನ್ವಂತರದ ಮೊದಲ ಪರಿಪಾಲಕನಾದನು! ಅವನು ಪ್ರಜೆಗಳನ್ನು ಪರಿಪಾಲಿಸಿದನು. "ಭರ್ತಣಾತ್ ಚ ಪ್ರಜಾನಾಂವೈ ಮನುರ್ಭರತ ಉಚ್ಯತೇ - ಪ್ರಜೆಗಳನ್ನು ಭರಿಸುವವನಾದ್ದರಿಂದ ಮನುವು ಭರತನೆಂದು ಕರೆಯಲ್ಪಡುತ್ತಾನೆ....." ಹೀಗೆಂದು ನಮ್ಮ ಪುರಾಣಗಳಲ್ಲಿ ಹೇಳಲಾಗಿದೆ. "ನಿತಾಂತಾಪಾರಭೂತದಯ"ವನ್ನು ತೋರಿಸಿದ್ದರಿಂದ ಆ ಭರತನ (ಮನುವಿನ) ಹೆಸರಿನಿಂದ ಭರತ ವರ್ಷ, ಭರತ ಖಂಡಗಳು ಎನ್ನುವ ಹೆಸರುಗಳು ಉಂಟಾಗಿವೆ. ಆ ಭರತನ ಪೂರ್ವದಲ್ಲಿಯೂ ಕೂಡಾ ಪ್ರಪಂಚವು ಇತ್ತು, ಈ ದೇಶವೂ ಇತ್ತು, ಆರನೆಯ ಮನ್ವಂತರವೂ ಇತ್ತು. ಆರನೆಯ ಮನುವೂ ಸಹ ಭರತನೇ. ಮೊಟ್ಟಮೊದಲ ಮನ್ವಂತರವಾದ ಮೊದಲನೆಯ ಪ್ರಜಾಪಾಲಕನಾದ ಸ್ವಾಯಂಭುವ ಮನುವೂ ಸಹ ಭರತನೇ. ಆದ್ದರಿಂದ ಸೃಷ್ಟಿಯ ಆದಿಯಿಂದಲೂ ಇದು ಭಾರತದೇಶ, ಭಾರತ ವರ್ಷ! ಈ ಭರತರು ಭಾರತ ದೇಶದಲ್ಲೇ ಹುಟ್ಟಿ ಬೆಳೆದರೆಂದು ವೇದಗಳು ಹೇಳಿವೆ, ಪುರಾಣೇತಿಹಾಸಗಳು ಸಾರಿವೆ. ಅವರು ಉತ್ತರ ಧ್ರುವದಿಂದಾಗಲಿ ಅಥವಾ ದಕ್ಷಿಣ ಧ್ರುವದಿಂದಾಗಲಿ ಬಂದರೆಂದು ಭಾರತೀಯ ಇತಿಹಾಸಕಾರರು ಹೇಳಿಲ್ಲ. ಬ್ರಿಟಿಷ್ ಬೌದ್ಧಿಕ ಬೀಭತ್ಸಕಾರರು ಇಲ್ಲಿ ಚರಿತ್ರೆಕಾರರೆಂದು ಚಲಾವಣೆಯಾಗುವವರೆಗೂ "ಭಾರತೀಯರು ಭಾರತದೇಶದಲ್ಲಿಯೇ ಅನಾದಿಕಾಲದಿಂದಲೂ ವಿಕಾಸ ಹೊಂದಿದರು" ಎನ್ನುವ ಸತ್ಯಕ್ಕೆ ಗ್ರಹಣ ಹಿಡಿಯಲಿಲ್ಲ! ಭಾರತೀಯರ ಪೂರ್ವಿಕರು ಅಂದರೆ ಆರ್ಯರು ವಿದೇಶಗಳಿಂದ ವಲಸೆ ಬಂದು ಇಲ್ಲಿ ವಕ್ಕರಿಸಿದರೆಂದು ಮೆಕಾಲೆ ಪಂಡಿತರು ನಮ್ಮ ತಲೆಯಲ್ಲಿ ತುಂಬಿ ಹೋಗಿದ್ದಾರೆ!
ಅದೆಷ್ಟರಮಟ್ಟಿಗೆ ಆರ್ಯರು ಬೇರೆಡೆಯಿಂದ ಭರತ ಖಂಡಕ್ಕೆ ವಲಸೆ ಬಂದರೆಂದು ತುಂಬಿಬಿಟ್ಟಿದ್ದಾರೆಂದರೆ, ಈ ದೇಶದಲ್ಲಿನ ಸ್ವದೇಶಿ ಸಂಸ್ಕೃತಿಯ ಮೂರ್ತರೂಪಗಳೆಂದು ಗೌರವಿಸಲ್ಪಟ್ಟ ಮೇಧಾವಿಗಳೂ ಸಹ "ಆರ್ಯ ಜನಾಂಗ"ವು ಉತ್ತರ ಧ್ರುವದಿಂದ ಭಾರತಕ್ಕೆ ವಲಸೆ ಬಂದರೆಂದು ನಂಬುವ ಮಟ್ಟಕ್ಕೆ ಹೋದದ್ದು, ಮೆಕಾಲೆ ವಿದ್ಯಾವಿಧಾನದ ವಿಷಪ್ರಭಾವವದ ತೀಕ್ಷ್ಣತೆಗೆ ನಿದರ್ಶನವಾಗಿದೆ. ಕೇವಲ ನಂಬುವುದಷ್ಟೇ ಅಲ್ಲ, "ಆರ್ಕಟಿಕ್ ದ ಹೋಮ್ ಆಫ್ ದಿ ಆರ್ಯನ್ಸ್" Arctic the Home of the Aryans (ಆರ್ಯರ ಉತ್ತರ ಧ್ರುವ ನಿವಾಸ) ಎನ್ನುವ ಆಂಗ್ಲ ಗ್ರಂಥವನ್ನೂ ಸಹ ಬಾಲಗಂಗಾಧರ ತಿಲಕರು ರಚಿಸಿದರು. ಸುಮಾರು ಕ್ರಿ.ಶ. ೧೯೨೦ರ ಪೂರ್ವದಲ್ಲಿ ರಚಿಸಲಾದ ಈ ಗ್ರಂಥದಲ್ಲಿರುವ ವಿಷಯಗಳು ಇತಿಹಾಸಕ್ಕೆ ದೂರವಾದ ವಿಷಯಗಳಿಂದ ಕೂಡಿವೆ ಎಂದೂ ಅವು ಅಪ್ರಮಾಣಿಕವೆಂದೂ ರುಜುವಾತು ಪಡಿಸಲು ಶ್ರೀಯುತ ಕೋಟಾ ವೆಂಕಟಾಚಲಂ ಅವರು, ಕ್ರಿ.ಶ. ೧೯೪೯ರ ಸರಿಸುಮಾರಿನಲ್ಲಿ, "ಆರ್ಯುಲ ಧ್ರುವ ನಿವಾಸ ಖಂಡನಮು - ಆರ್ಯರ ಧ್ರುವ ನಿವಾಸ ಖಂಡನೆ" ಎನ್ನುವ ಗ್ರಂಥವನ್ನು ತೆಲುಗಿನಲ್ಲಿ ರಚಿಸಿದ್ದಾರೆ! ಆದರೆ ಭಾರತೀಯ ದೃಷ್ಟಿಕೋನದಿಂದ ರಚಿಸಿದ ಪುಸ್ತಕಗಳನ್ನು ಸ್ವಾತಂತ್ರ್ಯ ಬಂದು ಆರೇಳು ದಶಕಗಳೇ ಕಳೆದರೂ ಸಹ ಇಂದಿಗೂ ವಿಶ್ವವಿದ್ಯಾಲಯಗಳಲ್ಲಿ ಬೋಧಿಸಲ್ಪಡುವ ಮೆಕಾಲೆ ವಿದ್ಯೆಯು ಅವನ್ನು ಅಡ್ಡುಕೊಳ್ಳುತ್ತಿದೆ. ಭಾವದಾಸ್ಯವು ಉರ್ಫ್ ಮಾನಸಿಕ ಗುಲಾಮಿತನವು ಮುಂದುವರೆಯುತ್ತಿದೆ!
ಏಳನೆಯ ಮನ್ವಂತರದ ಆರಂಭದಲ್ಲಿ ಮನುವು ಪಶು ಪಕ್ಷ್ಯಾದಿಗಳೊಂದಿಗೆ ಇದ್ದ ಹಡಗನ್ನು ಬೃಹತ್ ಮೀನು ಉತ್ತರಕ್ಕೆ ಎಳೆದುಕೊಂಡು ಬಂದಾಗ, ಮನುವು ತನ್ನ ಸಹಚರರಿಗೆ ಹಿಮಾಲಯವನ್ನು ತೋರಿಸುತ್ತಾನೆ. "ಏ ತತ್ ಉತ್ತರಂ ಗಿರಿಂ.... ಈ ಉತ್ತರದ ಬೆಟ್ಟಗಳು...." ಎಂದು ಹಿಮಾಲಯವನ್ನು ಕುರಿತು ಹೇಳಿದ್ದನ್ನು ಪ್ರಸ್ತಾವಿಸಿದ್ದಾರೆ. ಈ ಪ್ರಸ್ತಾವನೆಯನ್ನು ಮಾಡಿದವರು ಯಾರಾದರೂ ಆಗಿರಲಿ ಅವರು ಹಿಮಾಲಯಕ್ಕೆ ದಕ್ಷಿಣ ದಿಕ್ಕಿನಿಂದ ಬಂದವರಾಗಿರಬೇಕು. ಏಕೆಂದರೆ ದಕ್ಷಿಣದಲ್ಲಿ ಇದ್ದವರಿಗೆ ಮಾತ್ರವೇ ಅದು ಉತ್ತರಕ್ಕಿರುವ ಪರ್ವತವಾಗುತ್ತದೆ. "ಸತ್ಯವ್ರತನು ಪ್ರಳಯಗಾಥದಲ್ಲಿನ ಕಥಾನಾಯಕ. ಇವನು ಭರತ ವರ್ಷದ ದಕ್ಷಿಣ ಪ್ರಾಂತದಲ್ಲಿದ್ದ ...... ಕೇರಳ ದೇಶದಲ್ಲಿ ತಪಸ್ಸು ಮಾಡಿ, ತನ್ನ ತಪೋಬಲದಿಂದ ಏಳನೆಯ ಮನುವಾಗಿ, ವೈವಸ್ವತ ಮನುವೆನ್ನುವ ನಾಮಧೇಯದಿಂದ ಈಗ ಪರಿಪಾಲಿಸುತ್ತಿದ್ದಾನೆಂದು ಶ್ರೀ ಮದ್ಭಾಗವತದ ಅಷ್ಟಮ ಸ್ಕಂದದ ಅಂತ್ಯದಲ್ಲಿ...... ಹೇಳಲ್ಪಟ್ಟಿದೆ" ಎಂದು ಶ್ರೀಯುತ ಕೋಟಾ ವೆಂಕಟಾಚಲಂ ಅವರು ತಮ್ಮ "ಆರ್ಯರ ಧ್ರುವ ನಿವಾಸ ಖಂಡನೆ" ಪುಸ್ತಕದಲ್ಲಿ ವಿವರಿಸಿದ್ದಾರೆ. ಆದರೆ ಉತ್ತರ ಧ್ರುವದಿಂದ ಬಂದವರು ಭಾರತದೇಶದ ಒಳಹೊಕ್ಕು ಹಿಮಾಲಯವನ್ನು ನೋಡಿ, "ಈ ಉತ್ತರದ ಬೆಟ್ಟಗಳು....." ಎಂದು ಪ್ರಸ್ತಾವಿಸಿದ್ದಾರೆಂದು ಮೆಕಾಲೆ ಮಾನಸ ಪುತ್ರರಾದ ಭಾರತೀಯ ಇತಿಹಾಸಕಾರರು ಬರೆಯುತ್ತಾರೆ. ಬ್ರಿಟಿಷರ ಬೀಭತ್ಸ ಪ್ರಭಾವಕ್ಕೆ ಬಲಿಯಾದ ಮೇಧಾವಿಗಳು ಈ ವಿಧವಾಗಿ ವಿಶ್ವಸಿಸುತ್ತಾರೆ! ನಿಜವಾಗಿಯೂ ಉತ್ತರ ಧ್ರುವದಿಂದ ದಕ್ಷಿಣಕ್ಕೆ ಅವರು ವಲಸೆ ಬಂದಿದ್ದರೆ, "ಈ ದಕ್ಷಿಣದ ಬೆಟ್ಟಗಳು...." ಎಂದು ಹಿಮಾಲಯವನ್ನು ಕುರಿತು ಹೇಳುತ್ತಿದ್ದರು. "ಉತ್ತರದ ಬೆಟ್ಟಗಳು...." ಎಂದು ಹೇಗೆ ಹೇಳಬಲ್ಲರು? ಎಂದು ಕೋಟ ವೆಂಕಟಾಚಲಂ ಅವರು ಮೆಕಾಲೆ ಪಂಡಿತರನ್ನು ಖಂಡಿಸಿದ್ದಾರೆ. ಇದಾಗಿ ಆರೇಳು ದಶಕಗಳೇ ಉರುಳಿದರೂ ಸಹ ಇದಕ್ಕೆ ಉತ್ತರವಿಲ್ಲ......!
ವೇದಗಳನ್ನು ದರ್ಶಿಸಿದವರಿಗೆ ದಿಕ್ಕುಗಳು ಯಾವುವು ಎಂದು ತಿಳಿಯದೆ ಗೊಂದಲವುಂಟಾಯಿತೆ? ಅಥವಾ ನಮ್ಮ ದಿಕ್ಕುಗಳನ್ನು ಬ್ರಿಟಿಷರು ಅದಲು ಬದಲು ಮಾಡಿದರೆ?
ಸಮಾಧಿಗಳ ಮೇಲೆ ಬುನಾದಿಗಳ
ಕಟ್ಟುವುದು ಪರಂಗಿಗಳ ನೀತಿ
ಸಂಸ್ಕಾರಗಳ ಸಮಾರಾಧನೆ
ತಲಾಂತರಗಳ ಭಾರತೀಯರ ರೀತಿ!
******
ಮೆಕಾಲೆ ವಿದ್ಯಾವಿಧಾನದಿಂದ ಉಂಟಾದ ದುಷ್ಪರಿಣಾಮಗಳನ್ನು ಒಂದೊಂದಾಗಿ ವಿಶ್ಲೇಷಿಸುವುದೇ ಈ ಸರಣಿಯ ಉದ್ದೇಶ. ಮೂಲತಃ ತೆಲುಗಿನಲ್ಲಿ "ಮೇಕ ವನ್ನೆಲ ಮೇಕಂ, ಮೆಕಾಲೆ ವಿದ್ಯಾ ವಿಧಾನಂ - ಮೇಕೆಯ ತೊಗಲು ಹೊದ್ದ ತೋಳ, ಮೆಕಾಲೆ ವಿದ್ಯಾ ವಿಧಾನ" ಎನ್ನುವ ಈ ಸರಣಿಯನ್ನು ಜಾಗೃತಿ ವಾರಪತ್ರಿಕೆಯಲ್ಲಿ ೨೦೦೮ರ ಆಸುಪಾಸಿನಲ್ಲಿ ಧಾರಾವಾಹಿಯಂತೆ, ಶ್ರೀಯುತ ತಂಗೇಡುಕುಂಟ ಹೆಬ್ಬಾರ್ ನಾಗೇಶ್ವರ್ ರಾವ್ ಅವರು ಬರೆದಿರುತ್ತಾರೆ. ಆ ಲೇಖನದ ಸೊಗಡನ್ನು ಕನ್ನಡಿಗರು ಆಸ್ವಾದಿಸುವಂತೆ ಮಾಡುವ ಒಂದು ಪ್ರಯತ್ನವನ್ನು ನಾನಿಲ್ಲಿ ಮಾಡಿದ್ದೇನೆ. ಈಗ ನಿಮ್ಮ ಮುಂದಿರುವುದು ಈ ಸರಣಿಯ ಹದಿನೈದನೆಯ ಕಂತು, "ಜಾತುಲನು ನಿರ್ಮೂಲಿಂಚಿಂದಿ ಎವರು? - ಜನಾಂಗಗಳನ್ನು ನಿರ್ಮೂಲಿಸಿದ್ದು ಯಾರು?"
ಈ ಸರಣಿಯ ಹದಿನಾಲ್ಕನೆಯ ಕಂತು, "ಆರ್ಯರು ಬಂದರಾ? ಭಾರತೀಯರು ಹೋದರಾ?"ಎನ್ನುವ ಲೇಖನಕ್ಕೆ ಈ ಕೊಂಡಿಯನ್ನು ನೋಡಿ https://sampada.net/blog/%E0%B2%AD%E0%B2%BE%E0%B2%97-%E0%B3%A7%E0%B3%AA-...
Comments
ಉ: ಭಾಗ ೧೫ - ಮೇಕೆಯ ತೊಗಲು ಹೊದ್ದ ತೋಳ, ಮೆಕಾಲೆ ವಿದ್ಯಾ ವಿಧಾನ:...
ಫೇಸ್ಬುಕ್, ವಾಟ್ಸಪ್ಗಳ ಹಾವಳಿಯಿರುವ ಈ ಕಾಲಯುಗದಲ್ಲೂ ಸಂಪದದಂತಹ ಬ್ಲಾಗ್ಗಳ ಬರಹಗಳನ್ನು ಓದುವವರ ಸಂಖ್ಯೆ ಕಡಿಮೆಯಾಗಿಲ್ಲವೆನ್ನುವುದು ಸಂತೋಷದಾಯಕ ಸಂಗತಿಯಾಗಿದೆ. ಇದಕ್ಕೆ ಈ ಸರಣಿಯ ಲೇಖನಗಳು ಶತಕಗಳನ್ನು ಸಾಧಿಸಿರುವುದೇ ನಿದರ್ಶನ. ಎಂದಿನಂತೆ ಸರಣಿಯ ಈ ಲೇಖನವನ್ನು ಆದರಿಸಿದ ವಾಚಕ ಬಂಧುಗಳಿಗೆ ಧನ್ಯವಾದಗಳು. ಈ ಸರಣಿಯ ಮುಂದಿನ ಲೇಖನಕ್ಕಾಗಿ ಈ ಕೊಂಡಿಯನ್ನು ನೋಡಿ https://sampada.net/blog/%E0%B2%AD%E0%B2%BE%E0%B2%97-%E0%B3%A7%E0%B3%AC-...