ಭಾಗ ೧೭ - ಮೇಕೆಯ ತೊಗಲು ಹೊದ್ದ ತೋಳ, ಮೆಕಾಲೆ ವಿದ್ಯಾ ವಿಧಾನ: ವೈಷ್ಣವರಲ್ಲದವರೆಲ್ಲಾ ಶೈವರೇ.....?
ರಾಜ ದಿಲೀಪ, ಕಾಳಿದಾಸ ಹಾಗು ಶಂಕರಾಚಾರ್ಯರ ಚಿತ್ರಕೃಪೆ - ಗೂಗಲ್
ನಮ್ಮ ದೇಶದ ಸನಾತನ ರಾಷ್ಟ್ರೀಯತೆಯನ್ನು (ನೇಷನ್ಯಾಲಿಟಿ) ಕೇವಲ ಒಂದು ಮತ ಅಥವಾ ಧರ್ಮದ (ರೆಲಿಜಿಯನ್) ಸ್ಥಾಯಿಗೆ ಇಳಿಸಿದ್ದು ಮೆಕಾಲೆ ವಿದ್ಯಾವಿಧಾನದಿಂದ ಉಂಟಾದ ಪ್ರಧಾನವಾದ ದುಷ್ಪರಿಣಾಮ. ಅನಾದಿ ಕಾಲದಿಂದಲೂ ವೇದಗಳಲ್ಲಿ ಅಡಕವಾಗಿರುವ ತತ್ತ್ವವು ಈ ದೇಶದ ರಾಷ್ಟ್ರೀಯತೆಗಿರುವ ಪ್ರಧಾನ ಭೂಮಿಕೆ. ವೇದಗಳ ಸಾರವು ರಾಷ್ಟ್ರೀಯತೆಯ ಆತ್ಮವಾದರೆ ಅದರಿಂದ ಹೊರಹೊಮ್ಮಿದ ಸಂಸ್ಕೃತಿಯು ರಾಷ್ಟ್ರೀಯತೆಯ ಪ್ರಾಣವಾಗಿದೆ. ಮತಗಳು, ಭಾಷೆಗಳು, ಸಂಪ್ರದಾಯಗಳು, ಆಚಾರ, ವಿಚಾರಗಳು, ವೈಜ್ಞಾನಿಕ ಚಿಂತನೆಗಳು, ಜೀವನ ಪದ್ಧತಿಗಳು, ಮೊದಲಾದವೆಲ್ಲವೂ ಸಮಗ್ರ ರಾಷ್ಟ್ರೀಯತೆಯ ಭಾಗಗಳು ಮತ್ತು ರಾಷ್ಟ್ರೀಯ ಸಂಸ್ಕೃತಿಯ ಸ್ವರೂಪಗಳು. ಪಾಶ್ಚಿಮಾತ್ಯರ ತಿಳುವಳಿಕೆಯು ಎರಡು ಸಾವಿರ ವರ್ಷಗಳವರೆಗೆ ಕೇವಲ ಧಾರ್ಮಿಕ ಅಥವಾ ಮತೀಯ ಆಚರಣೆಗಳಿಗಷ್ಟೇ ಪರಿಮಿತವಾಗಿತ್ತು. ಅವರಿಗೆ ರಾಷ್ಟ್ರೀಯತೆ ಎಂದರೇನು ಎನ್ನುವ ಕಲ್ಪನೆಯೇ ಇರಲಿಲ್ಲ! ಕ್ರಿಸ್ತಶಕ ಹದಿನಾರನೇ ಶತಮಾನದ ನಂತರ ಹುಟ್ಟಿದ ಯೂರೋಪಿನ ದೇಶಗಳಲ್ಲಿ ರಾಷ್ಟ್ರೀಯತೆಯು ಕೇವಲ ಒಂದು ಮತ ಅಥವಾ ಧರ್ಮಕ್ಕೆ ಪರಿಮಿತವಾಗಿತ್ತು. ಹಾಗಾಗಿ ಪ್ರತಿಯೊಂದು ದೇಶದಲ್ಲೂ ಕೇವಲ ಒಂದೇ ಒಂದು ಮತವು ಅಂತಿಮವಾಗಿ ಉಳಿದುಕೊಂಡಿತು. ಅದಕ್ಕೂ ಮುಂಚೆ ಮತ್ತೊಂದು ಮತವು ಕಾಣಿಸಿಕೊಂಡ ಕೂಡಲೇ ಘರ್ಷಣೆಗಳು ಸಂಭವಿಸಿದವು, ರಕ್ತಪಾತಗಳು ಉಂಟಾದವು, ಪರಮತದ ನಿರ್ಮೂಲನೆಗಳೂ ಅವ್ಯಾಹತವಾಗಿ ನಡೆದವು. ಉದಾ: ಕ್ರೈಸ್ತ ಮತಾನುಯಾಯಿಗಳಾದ ಕ್ರುಸೇಡರುಗಳು ಇಸ್ಲಾಂ ಮತವನ್ನು ತೊಡೆದು ಹಾಕುವ ದೀಕ್ಷೆಯನ್ನು ತೊಟ್ಟರು. ಬ್ರಿಟಿಷ್ ಮೇಧಾವಿಗಳ "ರಾಷ್ಟ್ರವೆಂದರೆ ಅದಕ್ಕೆ ಒಂದೇ ಮತವಿರಬೇಕು" ಎಂದು ದೃಢವಾಗಿ ನಂಬಿದ್ದ ಸೀಮಿತ ಬುದ್ಧಿಗೆ ವಿವಿಧ ಮತಗಳ ಸಮಾಹಾರವಾದ ನಮ್ಮ ರಾಷ್ಟ್ರೀಯತೆಯ ಅಗಾಧತೆಯು ಮೊದಮೊದಲು ಅರ್ಥವಾಗಲಿಲ್ಲ ಏಕೆಂದರೆ ಅದು ಅವರ ಮೆದುಳಿಗೆ ನಿಲುಕದ ವಿಷಯ! ನಮ್ಮ ರಾಷ್ಟ್ರೀಯತೆಯ ಬೃಹತ್ ಚಿಂತನೆಯು ಅರ್ಥವಾದ ಮೇಲೆ ದುರ್ಬುದ್ಧಿ, ಕುಟಿಲ ನೀತಿ, ದ್ರೋಹ ಚಿಂತನೆ, ಮೊದಲಾದವುಗಳು ಬ್ರಿಟಿಷರ ಆಡಳಿತ ವೈಖರಿಯನ್ನು ನಿರ್ಧರಿಸಿದವು! ಕ್ರಮೇಣ ದೇಶದಲ್ಲಿದ್ದ ವಿವಿಧ ಮತಗಳನ್ನೆಲ್ಲಾ ಒಂದೇ ಮತ ಧರ್ಮವೆಂದು ಪರಿಗಣಿಸಿ ಅದನ್ನು ’ಹಿಂದೂ ಮತ’ ಅಥವಾ ’ಧರ್ಮ’ವೆಂದು ಸಂಕುಚಿತಗೊಳಿಸಿ ಪಠ್ಯಪುಸ್ತಕಗಳಲ್ಲೂ ಅಚ್ಚು ಹಾಕಿಸಿದರು, ಅದೇ ಮುದ್ರೆಯನ್ನು ಅವರು ಕ್ರಮೇಣ ಭಾರತೀಯರ ಮಿದುಳಿನಲ್ಲೂ ಅಚ್ಚು ಹಾಕುವಲ್ಲಿ ಸಫಲರಾದರು. ರಾಷ್ಟ್ರೀಯತೆ ಅಥವಾ ಇಂಗ್ಲೀಷಿನವರ ಸೀಮಿತ ಚಿಂತನೆಯ ನೇಷನ್ಯಾಲಿಟಿಯನ್ನು ಕೇವಲ ಒಂದು ಮತಕ್ಕೆ (ರಿಲಿಜಿಯನ್) ಪರಿಮಿತಗೊಳಿಸಿ ಬ್ರಿಟಿಷರು ಅದನ್ನೇ ಸಿದ್ಧಾಂತೀಕರಿಸಿದರು. ಹಾಗಾದರೆ, ಈ ದೇಶದ ರಾಷ್ಟ್ರೀಯತೆ ಏನು ಎನ್ನುವ ಪ್ರಶ್ನೆಗೆ ಉತ್ತರವಾಗಿ ಇಲ್ಲಿಯವರೆಗೆ ಈ ದೇಶದಲ್ಲಿ ರಾಷ್ಟ್ರೀಯತೆ ಎನ್ನುವುದೇ ಇರಲಿಲ್ಲ ಎನ್ನುವ ಸಿದ್ಧ ಉತ್ತರ ಅವರಿಂದ ಸಿಗುತ್ತಿತ್ತು. ಈ ದೇಶವು ಇನ್ನೂ ಒಂದು ರಾಷ್ಟ್ರವಾಗಿ ಉದಯಿಸಿಲ್ಲ ಎನ್ನುವ ದಾರ್ಷ್ಟ್ಯವನ್ನು ಅವರು ತೋರುತ್ತಿದ್ದರು! ಬ್ರಿಟಿಷರ ಧೂರ್ತತೆ ಮತ್ತು ಸುಳ್ಳಗಳ ಹುತ್ತದಿಂದ ಹೊರಬಂದದ್ದೇ "ದ್ವಿರಾಷ್ಟ್ರ ಸಿದ್ಧಾಂತ"ವೆನ್ನುವ ವಿಷಸರ್ಪ....... ಮಹ್ಮದ್ ಆಲಿ ಜಿನ್ನಾನ ರೂಪದಲ್ಲಿ!
*****
ವೈಷ್ಣವರಲ್ಲದವರೆಲ್ಲಾ ಶೈವರೇ.....?
ಸುಮಾರು ಐದು ಸಾವಿರ ವರ್ಷಗಳ ಹಿಂದೆ ಯದುಕುಲ ಕೃಷ್ಣನು ಗೋವುಗಳನ್ನು ಮೇಯಿಸಿದ. ಅದಕ್ಕೂ ಮುಂಚೆ ಯುಗಗಳ ಪೂರ್ವದಲ್ಲಿ ಇನಕುಲ ದಿಲೀಪನು ಗೋವುಗಳನ್ನು ಮೇಯಿಸಿದ. ಒಮ್ಮೆ ದಿಲೀಪನು ಅವಸರವಸರವಾಗಿ ಮನೆಗೆ ಹಿಂದಿರುಗುತ್ತಿದ್ದಾಗ ಕಾಮಧೇನುವನ್ನು ಗಮನಿಸಲಿಲ್ಲ; ಆ ಗೋಮಾತೆಗೆ ನಮಸ್ಕರಿಸಲಿಲ್ಲ. ಆ ಪರಪಾಟನ್ನು ತಿದ್ದಿಕೊಳ್ಳಲು ದಿಲೀಪನು ತನ್ನ ರಾಜಧಾನಿಯಿಂದ ಅಡವಿಯಲ್ಲಿದ್ದ ತನ್ನ ಗುರು ವಸಿಷ್ಠರ ಆಶ್ರಮವನ್ನು ಸೇರಿದನು. ನಂದಿನಿ ಎನ್ನುವ ವಸಿಷ್ಠರ ಆಕಳನ್ನು ದಿಲೀಪನು ಅಡವಿಗೆ ಹೊಡೆದುಕೊಂಡು ಹೋಗಿ ಮೇಯಿಸುತ್ತಿದ್ದ. ಒಮ್ಮೆ ಅದು ಹುಲಿಯ ಬಾಯಿಗೆ ಸಿಲುಕಿ ಸಾಯುವುದರಲ್ಲಿತ್ತು ಆಗ ದಿಲೀಪನು ತನ್ನ ಪ್ರಾಣವನ್ನೇ ಪಣವಾಗಿಟ್ಟು ಹುಲಿಯೊಂದಿಗೆ ಹೋರಾಡಿ ನಂದಿನಿಯನ್ನು ಕಾಪಾಡಿದ. ಹೀಗೆ ದಿಲೀಪ ಮಹಾರಾಜನು ಗೋಪಾಲಕ ವ್ರತವನ್ನು ಕೈಗೊಂಡಿದ್ದ ಸಮಯದಲ್ಲಿ ಒಂದು ದಿನ ಬೆಳಿಗ್ಗೆ ಅವನ ರಾಣಿಯಾದ ಸುದಕ್ಷಿಣಾದೇವಿಯು ಗೋವನ್ನು ಪೂಜಿಸಿದಳು. ಅನಂತರ, ಮಹಾರಾಜ ದಿಲೀಪನು ಹಸುವಿನ ಕೊರಳಿಗೆ ಕಟ್ಟಿದ್ದ ಹಗ್ಗವನ್ನು ತುಂಡರಿಸಿ ಅದನ್ನು ಸ್ವತಂತ್ರಗೊಳಿಸಿದ. ಆ ಹಸುವು ಮುಂದೆ ಓಡುತ್ತಿದ್ದಾಗ ಅದರ ಪವಿತ್ರವಾದ ಪಾದಧೂಳಿಯಿಂದ ಪಾವನವಾದ ಮಾರ್ಗದಲ್ಲಿ ಅದರ ಹಿಂದೆ ಪವಿತ್ರಳಾದ ಸುದಕ್ಷಿಣಾದೇವಿಯು ನಡೆದಳು! "ವೇದಮಾರ್ಗವನ್ನು ಧರ್ಮಶಾಸ್ತ್ರವು ಅನುಸರಿಸುವಂತೆ, ಸುದಕ್ಷಿಣಾದೇವಿಯು ಆಕಳಿನ ಮಾರ್ಗವನ್ನು ಅನುಸರಿಸಿದಳು - "ಶ್ರುತೇರಿವಾರ್ಥಂ ಸ್ಮತಿರನ್ವಗಚ್ಛತ್" ಎಂದು ಮಹಾಕವಿ ಕಾಳಿದಾಸನು ತನ್ನ ಕುಮಾರ ಸಂಭವ ಕಾವ್ಯದಲ್ಲಿ ವರ್ಣಿಸಿದ್ದಾನೆ.
ಹೀಗೆ ಶ್ರುತಿಯನ್ನು (ವೇದ) ಪ್ರಮಾಣವಾಗಿ ತೆಗೆದುಕೊಂಡು ಅವುಗಳ ಆಧಾರದ ಮೇಲೆ ನಮ್ಮ ದೇಶದಲ್ಲಿ ಸ್ಮೃತಿಗಳು - ಧರ್ಮಶಾಸ್ತ್ರಗಳು, ದರ್ಶನಗಳು, ಪುರಾಣಗಳು, ಆಗಮಗಳು, ಇತಿಹಾಸ ಮೊದಲಾದ ಗ್ರಂಥಗಳು ರಚಿಸಲ್ಪಟ್ಟವು. ಹಾಗಾಗಿ ರಾಷ್ಟ್ರೀಯ ತತ್ತ್ವಜ್ಞಾನಿಯಾದ ಕಾಳಿದಾಸನು ಅಂಥಹ ಉಪಮೆಯನ್ನು ಕೊಟ್ಟಿದ್ದಾನೆ. ಬ್ರಿಟಿಷರು ಬಂದ ನಂತರ ಆ ಉಪಮಾನವು ಬದಲಾಯಿತು, ಆ ಸತ್ಯವೂ ಬದಲಾಯಿತು. ಮೆಕಾಲೆ ವಿದ್ಯೆಯನ್ನು ಉಳಿದವು ಅನುಸರಿಸಿದವು! ಅದರಿಂದಾಗಿ ನಮ್ಮದೆನ್ನುವುದೆಲ್ಲವುಗಳೂ ಅದಲು ಬದಲಾದವು!
ಪಾಶ್ಚಾತ್ಯನಾದ ಸಿ.ಪಿ. ಬ್ರೌನ್ ಅವರ ಸಂಪಾದಕತ್ವದಲ್ಲಿ ರೂಪುಗೊಂಡ ತೆಲುಗು ನಿಘಂಟಿನಲ್ಲಿಯೂ ಸಹ ’ಮತ’ ಶಬ್ದಕ್ಕೆ ಭಾರತೀಯ ಪದ್ಧತಿಯಲ್ಲೇ ಉದಾಹರಣೆಗಳನ್ನು ಕೊಡುತ್ತದೆ. ಅಂದಿಗೆ ಮತ ಅಥವಾ ಧರ್ಮವು ಇನ್ನೂ ಮೆಕಾಲೆಗ್ರಸ್ತವಾಗಿರಲಿಲ್ಲ! "ವೈಷ್ಣವ, ಮಾಧ್ವ, ಸ್ಮಾರ್ತ" ಎನ್ನುವುವು ತ್ರಿಮತಗಳು ಎಂದು ಆ ನಿಘಂಟಿನಲ್ಲಿ ವಿವರಿಸಲಾಗಿದೆ. ಅದೇ ವಿಧವಾಗಿ ಷಣ್ಮತಗಳ ಕುರಿತು ವಿವರಿಸುತ್ತಾ, "ವೈಷ್ಣವ, ಶೈವ, ಶಾಕ್ತ, ಗಾಣಪತ್ಯ, ಸೌರ ಮತ್ತು ಕಾಪಾಲಿಕ" ಎಂದು ಹೇಳಲಾಗಿದೆ. ಮೆಕಾಲೆ ವಿದ್ಯಾಪ್ರಣೀತವಾದ ’ಹಿಂದೂಮತ’ವು ಆ ನಿಘಂಟಿನಲ್ಲಿ ಇಲ್ಲ. ಅಷ್ಟೇ ಅಲ್ಲ, "ಇಂಡಿಯಾ ದೇಶಕ್ಕೆ ಸಂಬಂಧಿಸಿದ್ದು" ಎಂದು ’ಹಿಂದೂ’ ಶಬ್ದಕ್ಕೆ ಬ್ರೌನ್ ನಿಘಂಟಿನಲ್ಲಿ ಅರ್ಥ ವಿವರಣೆಯು ಸಿಗುತ್ತದೆ! ಹೀಗೆ ಹಿಂದೂ ದೇಶಕ್ಕೆ ಸಂಬಂಧಿಸಿದ್ದು ಹಿಂದೂ ರಾಷ್ಟ್ರೀಯತೆ! ಈ ರಾಷ್ಟ್ರೀಯತೆಯ ಮೇಲೆ ಇಪ್ಪತ್ತನೆಯ ಶತಮಾನದಲ್ಲಿ ಧರ್ಮ ಅಥವಾ ಮತವೆಂಬ ಮುದ್ರೆಯನ್ನು ಹಾಕಲಾಯಿತು. ಈ ಮುದ್ರೆಯನ್ನು ಮೆಕಾಲೆ ಪಂಡಿತರು ತಯಾರು ಮಾಡಿದರು! ಹಿಂದೂ ಎಂದರೆ, "ಭಾರತ ವರ್ಷೀಯ, ಭಾರತೀಯ" ಎಂದು ಸೂರ್ಯರಾಯಾಂಧ್ರ ನಿಘಂಟು ವಿವರಿಸುತ್ತದೆ. "ಹಿಂದುತ್ವ" ಎನ್ನುವುದು ಹೀಗೆ ರಾಷ್ಟ್ರೀಯತೆಯನ್ನು (ನೇಷನ್ಯಾಲಿಟಿ) ಸೂಚಿಸುತ್ತದೆ. ಆದರೆ ಅದು ಮತೀಯ ಶಬ್ದವೆಂದು ರೂಢಿಗತವಾಗಿದೆಯೆಂದು ಮೆಕಾಲೆ ವಿದ್ಯಾವೇತ್ತರಲ್ಲಿ ಬಹುತೇಕರು ವಾದಿಸುತ್ತಾರೆ. ೧೯೯೬ನೇ ಇಸವಿಯಲ್ಲಿ ಅಟಲ್ ಬಿಹಾರಿ ವಾಜಪೇಯಿಯವರ ಸರ್ಕಾರವು ಬಿದ್ದುಹೋಗುವ ಸಂದರ್ಭದಲ್ಲಿ ಲೋಕಸಭೆಯಲ್ಲಿ ಚರ್ಚೆ ಜರುಗಿತು. ಅದಕ್ಕೆ ಹದಿಮೂರು ದಿನಗಳ ಪೂರ್ವದಲ್ಲಿ ಪ್ರಧಾನಮಂತ್ರಿ ಪದವಿಯನ್ನು ಕಳೆದುಕೊಂಡಿದ್ದ ಪಿ.ವಿ. ನರಸಿಂಹರಾವ್ ಅವರು ಚರ್ಚೆಯ ಸಂದರ್ಭದಲ್ಲಿ ಮಾತನಾಡುತ್ತಾ, "ಹಿಂದುತ್ವ" ಎಂದರೆ ಈ ದೇಶದ ರಾಷ್ಟ್ರೀಯತೆ ಎಂದು ಕೇವಲ "ಸಂಘಪರಿವಾರ"ದವರು ಮಾತ್ರವೇ ಹೇಳುತ್ತಿದ್ದಾರೆ, ಇದನ್ನು ಬೇರೆಯವರ‍್ಯಾರೂ ಒಪ್ಪಿಕೊಳ್ಳುತ್ತಿಲ್ಲ ಎಂದು ಅವರು ಹೇಳಿದರು. ನಿಘಂಟಿನಲ್ಲಿರುವ ಅರ್ಥಕ್ಕಿಂತ ವ್ಯವಹಾರದಲ್ಲಿ ’ರೂಢಿ’ ಆಗಿರುವ ಅರ್ಥವನ್ನಷ್ಟೆ ಸ್ವೀಕರಿಸಬೇಕೆಂದು ಅವರು ಮನವಿ ಮಾಡಿಕೊಂಡರು. ’ಹಿಂದುತ್ವ’ ಎನ್ನುವುದು ಒಂದು ಮತವಾಗಿ ರೂಢಿಗತವಾಗಿದೆ ಎಂದೂ ಸಹ ಅವರು ಹೇಳಿದರು. ಆದರೆ ಹೀಗೆ ಹಿಂದೂ ಎಂದರೆ ಒಂದು ಮತವೆನ್ನುವ ಭಾವ ಅಥವಾ ಅರ್ಥವನ್ನು ರೂಢಿಸಿದವರು ಅಥವಾ ರೂಢಿಸಿಕೊಂಡವರು ಹಿಂದೂ ರಾಷ್ಟ್ರೀಕರಲ್ಲ, ಸ್ವದೇಶಿಯರಲ್ಲ! ಅದನ್ನು ರೂಢಿಸಿದ್ದು ಮೆಕಾಲೆ ವಿದ್ಯೆ ಹಾಗು ವಿದೇಶಿಯರ ಕುಟಿಲತೆ!
ಅನಾದಿಕಾಲದಿಂದಲೂ ಭರತ ಖಂಡದಲ್ಲಿ ಕಂಡುಬಂದ ಮತಗಳಿಗೆಲ್ಲಾ ವೇದವೇ ಕೇಂದ್ರಬಿಂದು. ಸಂಸ್ಕೃತ ಪಂಡಿತನದೂ, ವೈಜ್ಞಾನಿಕ ಶಾಸ್ತ್ರಜ್ಞನನದೂ, ಹೊಲವನ್ನೂಳುವ ಜನಸಾಮಾನ್ಯನದೂ, ಅಡವಿಯಲ್ಲಿ ವಾಸಿಸುತ್ತಿದ್ದವನದೂ - ಎಲ್ಲರದೂ ಒಂದೇ ಭಾವ, ಅವರೆಲ್ಲಾ ಒಂದೇ ಜೀವನ ಲಕ್ಷ್ಯವನ್ನು ವೇದಗಳಿಂದ ಗ್ರಹಿಸಿದರು. ವೇದವನ್ನು ಪ್ರಮಾಣವಾಗಿರಿಸಿಕೊಂಡು ಕೆಲವೊಂದು ಮತಗಳು ಅವತರಿಸಿದವು. ಕೆಲವೊಂದು ಮತಗಳು, ವೇದಗಳನ್ನು ಅಂಗೀಕರಿಸಲಿಲ್ಲ. ವೇದಪ್ರಮಾಣಗಳನ್ನು ಅಂಗೀಕರಿಸದ ಮತಗಳು ಹುಚ್ಚು ಅಲೆಗಳಂತೆ ಕೆಲವೊಮ್ಮೆ ಮೇಲೆದ್ದರೂ ಸಹ ಅವು ಮತ್ತೆ ಮತ್ತೆ ಮೇಲೇಳಲಾರದೆ ಕಾಲಗರ್ಭದಲ್ಲಿ ಮಾಯವಾದವು. ಪ್ರಜೆಗಳಿಗೆ ಅವು ರುಚಿಸಲಿಲ್ಲ! "ಒಳ್ಳೆಯ ಕೆಲಸಕ್ಕೆ ಒಳ್ಳೆಯ ಫಲ, ಕೆಟ್ಟ ಕೆಲಸಗಳಿಗೆ ಕೆಟ್ಟ ಫಲ - ಮಾಡಿದ್ದುಣ್ಣೋ ಮಹರಾಯ" ಎನ್ನುವ ಕರ್ಮ ಸಿದ್ಧಾಂತವು ಈ ದೇಶವನ್ನು ಸತ್ಕರ್ಮಭೂಮಿಯಾಗಿ ರೂಪಿಸಲು ಸಹಕಾರಿಯಾಗಿತ್ತು. ಎಷ್ಟು ಕೋಟಿ ವರ್ಷಗಳಾದರೂ ಸಹ ಮಾಡಿದ ಕೆಲಸಕ್ಕೆ ಫಲವನ್ನನುಭವಿಸುವುದು ತಪ್ಪುವುದಿಲ್ಲ... ಅದು ಒಳ್ಳೆಯದಿರಬಹುದು ಅಥವಾ ಕೆಟ್ಟದ್ದಿರಬಹುದು! "ನಾ ಭುಕ್ತ್ವಾ ಕ್ಷೀಯತೇ ಕರ್ಮ ಕಲ್ಪಕೋಟಿ ಶತೈರಪಿ....." "ಅವಶ್ಯಂ ಅನುಭೋಕ್ತವ್ಯಂ ಕೃತಂ ಕರ್ಮ ಶುಭಾಶುಭಂ". ಈ ಕರ್ಮಫಲವೇ "ದೈವ" ಮತ್ತು ಈ ಕರ್ಮಸಿದ್ಧಾಂತವೇ ಪುನರ್ಜನ್ಮಕ್ಕೆ ಕಾರಣ. ಇದೆಲ್ಲಾ ಧರ್ಮಜಿಜ್ಞಾಸೆ! ಈ ಧರ್ಮಜಿಜ್ಞಾಸೆಯನ್ನು ಬೆಳೆಸುವುದಕ್ಕೆ ಮತ್ತು ಪರಿರಕ್ಷಿಸುವುದಕ್ಕೆ "ಪೂರ್ವ ಮೀಮಾಂಸ"ವೆನ್ನುವ ವೈದಿಕ ದರ್ಶನವು ಪುಷ್ಟಿಯೊದಗಿಸಿತು. ಇಲ್ಲಿ ಆಧುನಿಕರು ವ್ಯಾಖ್ಯಾನಿಸುವ ಮತೀಯ ಆಚರಣೆಗಳಿಗೆ ಜಾಗವಿರಲಿಲ್ಲ. ಪುಣ್ಯಪಾಪಗಳು ಪುನರ್ಜನ್ಮಕ್ಕೆ ಕಾರಣೀಭೂತವಾದವುಗಳು. ಪಾಪ ಪುಣ್ಯಗಳು ನಶಿಸಿದಾಗ ಮೋಕ್ಷ ಅಥವಾ ಜನ್ಮರಾಹಿತ್ಯತೆಗಳು (ಮುಕ್ತಿ) ಸಿದ್ಧಿಸುತ್ತದೆ. ಈ ದೇಶದಲ್ಲಿನ ಎಲ್ಲಾ ಮತಗಳಲ್ಲಿ ಅವು ವೈದಿಕವಾಗಿರಲಿ, ಅವೈದಿಕವಾಗಿರಲಿ ಅದು ಮೋಕ್ಷ, ನಿರ್ವಾಣ ಅಥವಾ ಬೇರೆ ಏನೇ ಆಗಿರಲಿ ಅವೆಲ್ಲವೂ ಜನ್ಮರಾಹಿತ್ಯತೆಯನ್ನೇ ಸೂಚಿಸುತ್ತವೆ. ಈ ಜನ್ಮರಾಹಿತ್ಯ ಸ್ಥಿತಿಗೆ ಪುಷ್ಟಿ ನೀಡುವುದೇ ’ಬ್ರಹ್ಮಜಿಜ್ಞಾಸೆ’. ಬ್ರಹ್ಮಜಿಜ್ಞಾಸೆಯನ್ನು ಪೋಷಿಸಿದ್ದು "ಉತ್ತರ ಮೀಮಾಂಸ"ವೆನ್ನುವ ವೈದಿಕ ದರ್ಶನ. ಧರ್ಮಜಿಜ್ಞಾಸೆ ಮತ್ತು ಬ್ರಹ್ಮಜಿಜ್ಞಾಸೆಗಳ ಸಂಗಮಸ್ಥಿತಿಯೇ ಭಾರತೀಯರ ಮತ. ನಿತ್ಯ ನಿರಂತರ ಸತ್ಯವಾಗಿರುವ ಬ್ರಹ್ಮವು ಊಹೆಗೆ ನಿಲುಕದ್ದು. "ಋತ"ವಾಗಿ ಪ್ರಸ್ಫುಟಿಸುವ "ಸತ್ಯ"ವು ಸೃಷ್ಟಿಯಾಗಿ ಕಾಣಿಸುತ್ತದೆ! ಋತ ಅಂದರೆ ವಿಶ್ವವ್ಯವಸ್ಥೆಯೊಂದಿಗೆ ನಿರಂತರವೂ ಜೊತೆಯಾಗಿ, ಒಂದುಗೂಡಿ ಸತ್ಯವನ್ನು ಸಾಧಿಸುವುದಕ್ಕೆ ಸಾಧನವಾಗಿರುವ ಋತವೇ ಭಾರತೀಯರ ಮತ! ದೇವರನ್ನು ಸೇರಲು ಜೀವರು ಮಾಡುವ ನಿರಂತರ ಪ್ರಯತ್ನದಲ್ಲಿನ ವಿವಿಧ ಹಂತಗಳೇ ಅಸಂಖ್ಯಾತವಾದ ಜನ್ಮಗಳು..... ಈ ಪುನರ್ಜನ್ಮಗಳು "ಜನ್ಮರಾಹಿತ್ಯ ಸ್ಥಿತಿಯನ್ನು ಹೊಂದಲು ಪೂರಕವಾಗಿರುವ ಮಾರ್ಗವೇ ಮತ ಅಥವಾ ಧರ್ಮ!
ವೇದವು ಭೂಮಿಕೆಯಾಗಿ ನೆಲೆಗೊಂಡ ಅನೇಕ ಅಂಶಗಳಲ್ಲಿ ಮತ ಅಥವಾ ಧರ್ಮವೆನ್ನುವುದು ಒಂದು ಭಾಗವಷ್ಟೆ, ಅದು ಪೂರ್ಣವಲ್ಲ! ಅದು ಬೇರೆ ವಿಷಯ. ವಾಸ್ತವವಾಗಿ ಮತಗಳು ನಾವು ರೂಢಿಸಿಕೊಂಡ ವಿವಿಧ ಸಂಪ್ರದಾಯಗಳಷ್ಟೆ. ಆದರೆ ಈ ಸಂಪ್ರದಾಯಗಳೇ ಇಂದು ರೂಢಿಯಲ್ಲಿ ಮತಗಳಾಗಿವೆ. ಪೂರ್ವ ಸಾಹಿತ್ಯದಲ್ಲಿ ವೈಷ್ಣವ ಸಂಪ್ರದಾಯ, ಶೈವ ಸಂಪ್ರದಾಯ, ಅದ್ವೈತ ಸಂಪ್ರದಾಯ, ದ್ವೈತ ಸಂಪ್ರದಾಯ ಎನ್ನುವ ಶಬ್ದಗಳೇ ಪ್ರಧಾನವಾಗಿ ಕಾಣಸಿಗುತ್ತವೆ. ಈ ಎಲ್ಲಾ ಮತ ಸಂಪ್ರದಾಯಗಳಿಗೂ ವೇದಗಳೇ ಆಧಾರ. ಎಲ್ಲಾ ಮತಗಳೂ ಸಹ ಅನಾದಿ ಕಾಲದಿಂದಲೇ ಇದ್ದಂಥವುಗಳು! ವೈಷ್ಣವ ಸಂಪ್ರದಾಯವು ರಾಮಾನುಜರಿಂದಾಗಲಿ ಅಥವಾ ವೀರಶೈವ ಸಂಪ್ರದಾಯವು ಬಸವೇಶ್ವರರಿಂದಾಗಲೀ ಮೊದಲಾಗಲಿಲ್ಲ. ಆದಿಶಂಕರರೂ ಸಹ ಅದ್ವೈತ ಸಿದ್ಧಾಂತವನ್ನು ಹುಟ್ಟುಹಾಕಲಿಲ್ಲ ಅಥವಾ ಉಳಿದವರ‍್ಯಾರೂ ಹೊಸ ಮತಗಳನ್ನು ಹುಟ್ಟು ಹಾಕಲಿಲ್ಲ. ಆ ಮತಗಳಿಗೆ ಇವರು ಮರುಹುಟ್ಟು ನೀಡದವರಷ್ಟೆ. ಈ ಎಲ್ಲಾ ಸಂಪ್ರದಾಯಗಳೂ ಸಹ ಬಹು ಹಿಂದಿನಿಂದಲೇ ಭರತ ಖಂಡದಲ್ಲಿ ಪ್ರಚಲಿತವಿದ್ದವು. ಅನೇಕ ಮತಗಳಷ್ಟೆ ಅಲ್ಲ, ಅನೇಕಾನೇಕ ಇತರ ವಿಷಯಗಳಿಗೂ ನಿಲಯವಾಗಿದ್ದ ವೈವಿಧ್ಯತೆಯ ಸಂಪುಟ ನಮ್ಮ ರಾಷ್ಟ್ರೀಯ ತತ್ತ್ವ! ಅದು ಸನಾತನವಾದದ್ದು, ಅದೇ ಭಾರತೀಯ ತತ್ತ್ವ, ಅದೇ ಹಿಂದುತ್ವ...... ಇದನ್ನೇ ಕೇವಲ ಒಂದು ಮತದ ಸ್ಥಾಯಿಗೆ ಇಳಿಸಿದವರು ಬ್ರಿಟಿಷರು. ಅನೇಕ ಕೋಣೆಗಳಿದ್ದ ಒಂದು ಭವ್ಯ ಕಟ್ಟಡವನ್ನು ಒಂದೇ ಕೋಣೆ ಎಂದು ಗುರುತಿಸಿದಂತೆ!
ಹುಟ್ಟಿ, ಬೆಳೆದು ಪತನವಾದ ಅನೇಕಾನೇಕ ಮತಗಳಲ್ಲಿ ಆರು ಪ್ರಧಾನ ಮತಗಳನ್ನು ಆದಿ ಶಂಕರರು ಗುರುತಿಸಿದರೆಂದು ಚರಿತ್ರೆಯಿಂದ ನಮಗೆ ತಿಳಿಯುತ್ತದೆ. ಆದಿ ಶಂಕರರು ಕ್ರಿಸ್ತ ಪೂರ್ವ ಆರನೇ ಶತಮಾನದ ಅಂತ್ಯದಲ್ಲಿ ಜನಿಸಿ ಐದನೇ ಶತಮಾನದ ಆರಂಭದಲ್ಲಿ ಜೀವಿಸಿದ್ದವರು.
"ಶೈವಂ ಚ ವೈಷ್ಣವಂ ಶಾಕ್ತಂ ಸೌರಂ ವೈನಾಯಕಂ ತಥಾ l
ಸ್ಕಾಂದಂಚ ಭಕ್ತಿ ಮಾರ್ಗಸ್ಯ ದರ್ಶನಾನಿ ಷಡೇವ ಹಿ ll"
ಕರ್ಮ ಮಾರ್ಗ, ಭಕ್ತಿ ಮಾರ್ಗ, ದರ್ಶನಗಳು, ಮೊದಲಾದವುಗಳು ಮತಗಳು. ಈ ದೇಶದಲ್ಲಿ ಇತ್ತೀಚೆಗೆ ರೂಪುಗೊಂಡ ಮತವೆಂದರೆ ಆರ್ಯ ಸಮಾಜ! ಶೈವಮತದಲ್ಲಿಯೂ ಸಹ ವಿವಧ ಪಂಥಗಳಿದ್ದವು - ಪಾಶುಪತ, ಕಾಪಾಲಿಕ, ಕಾಳಾಮುಖ, ವೀರಶೈವ, ಮೊದಲಾದವು. ವೈಷ್ಣವಮತ ಮತ್ತು ಶಾಕ್ತಮತಗಳಲ್ಲಿಯೂ ಸಹ ಅನೇಕಾನೇಕ ಪಂಥಗಳು ಹುಟ್ಟಿಕೊಂಡಿವೆ. ಹೀಗೆ ಜನ್ಮತಾಳಿದ ಅನೇಕಾನೇಕ ಮತಗಳು ಇಂದು ಲಭ್ಯವಿಲ್ಲ, ಅವು ಕಾಲಗರ್ಭದಲ್ಲಿ ಕಲಿಸಿ ಹೋಗಿವೆ.
ಮೆಕಾಲೆ ವಿದ್ಯೆಯು ಹಿಂದುತ್ವವನ್ನೇ ಒಂದು ಮತವಾಗಿ ಪ್ರಚಾರ ಮಾಡಿತು. ಮೆಕಾಲೆ ವಿದ್ಯೆಯಿಂದ ಉಂಟಾದ ಮತ್ತೊಂದು ದುಷ್ಪರಿಣಾಮವೇನೆಂದರೆ, "ಶೈವರಲ್ಲದವರೆಲ್ಲರೂ ವೈಷ್ಣವರು, ವೈಷ್ಣವರಲ್ಲದವರೆಲ್ಲರೂ ಶೈವರು!" ಎನ್ನುವ ವರ್ಗೀಕರಣ. ಈ ವರ್ಗೀಕರಣದ ವಿಷಪ್ರಭಾವವು ಕ್ರಮೇಣ ಭಾರತೀಯರ ಮೆದುಳನ್ನು ಹೊಕ್ಕಿತು. ವಿದ್ಯಾವಂತರು, ಮೇಧಾವಿಗಳು, ಸಾಹಿತಿಗಳು, ಸಂಶೋಧಕರು, ವ್ಯಾಖ್ಯಾನಕಾರರು ಎಲ್ಲರೂ ಅದರ ವಿಷಪ್ರಭಾವಕ್ಕೆ ಒಳಗಾಗಿ ಅದನ್ನೇ ಪ್ರಚಾರ ಮಾಡುತ್ತಿದ್ದಾರೆ. "ಮಹಾಕವಿ ಕಾಳಿದಾಸ ಶೈವನಾಗಿದ್ದರೂ ಸಹ....... ಅವನು ರಘುವಂಶವನ್ನು ರಚಿಸಿದ!" ಎಂದು ಒಬ್ಬ ಸಂಸ್ಕೃತ ಸಾಹಿತ್ಯ ಸಂಶೋಧಕ ಕಂಡು ಹಿಡಿಯುತ್ತಾನೆ. "ಶ್ರೀ ಕೃಷ್ಣ ದೇವರಾಯ ವೈಷ್ಣವನಾಗಿದ್ದ....." ಎಂದು ಮತ್ತೊಬ್ಬ ಇತಿಹಾಸ ಸಂಶೋಧಕ ಕಂಡು ಹಿಡಿಯುತ್ತಾನೆ! ಸಾಮಾನ್ಯವಾಗಿ ಜನರು ಶ್ರಾವಣ ಮಾಸದಲ್ಲಿ ವೆಂಕಟೇಶ್ವರನನ್ನು ವಿಶೇಷವಾಗಿ ಪೂಜಿಸಿದರೆ, ಕಾರ್ತೀಕ ಮಾಸದಲ್ಲಿ ಶಿವನಿಗೆ ಅಭಿಷೇಕ ಮಾಡುತ್ತಾರೆ. ದೇವಿ ನವರಾತ್ರಿಗಳಲ್ಲಿ ಶಾಕ್ತೇಯ ಮತಾನುಯಾಯಿಗಳಾಗುತ್ತಾರೆ, ಅದೇ ವಿಧವಾಗಿ ಸೌರಮತಸ್ಥರು, ಗಾಣಪತ್ಯಮತಸ್ಥರು, ಸ್ಕಾಂದ ಮತಸ್ಥರಾಗಿ ಒಂದೇ ಕುಟುಂಬದವರು ವಿವಿಧ ಸಂದರ್ಭಗಳಲ್ಲಿ ಜೀವಿಸುತ್ತಿದ್ದಾರೆ. "ಪಾರ್ವತೀಪತಿ ಪದಾಬ್ಜ ಧ್ಯಾನಪೂಜಾಹೋತ್ಸವ"ವು ತನಗೆ ಬಹಳ ಪ್ರಿಯವಾದ ಕೆಲಸ ಎಂದು ರಾಜರಾಜ ನರೇಂದ್ರನು ಕವಿ ನನ್ನಯ್ಯನೊಂದಿಗೆ ಹೇಳಿಕೊಂಡನಂತೆ. ಆದ್ದರಿಂದ ರಾಜನು ಶೈವನೋ ಅಥವಾ ವೈಷ್ಣವನೋ?
ಏಕೈವ ಮೂರ್ತಿರ್ಬಿಭಿದೇ ತ್ರಿಧಾ ಸಾ ಸಾಮಾನ್ಯಮೇಷಾಂ ಪ್ರಥಮಾವರತ್ವಮ್ ।
ವಿಷ್ಣೋರ್ಹರಸ್ತಸ್ಯ ಹರಿಃ ಕದಾಚಿದ್ವೇಧಾಸ್ತಯೋಸ್ತಾವಪಿ ಧಾತುರಾದ್ಯೌ ।।
ಒಂದೇ ಮೂರ್ತಿ ಮೂರು ವಿಧವಾದ ರೂಪಗಳನ್ನು ತಾಳುತ್ತದೆ. ಮೂವರಿಗೂ ಸಹ ಸಮಾನ ಸ್ಥಾನವಿದೆ. ಒಮ್ಮೆ ವಿಷ್ಣುವಿಗಿಂತ ಶಿವನು ದೊಡ್ಡವನು. ಮತ್ತೊಮ್ಮೆ ಶಿವನಿಗಿಂತ ವಿಷ್ಣುವು ದೊಡ್ಡವನು. ಹಲವೊಮ್ಮೆ ಬ್ರಹ್ಮನು ಅವರಿಬ್ಬರಿಗಿಂತಲೂ ದೊಡ್ಡವನು, ಇನ್ನೂ ಕೆಲವೊಮ್ಮೆ ಅವರಿಬ್ಬರೂ ಬ್ರಹ್ಮನಿಗಿಂತ ದೊಡ್ಡವರು ಎಂದು ವರ್ಣಿಸಿರುವ ಕಾಳಿದಾಸ ಮಹಾಕವಿಯು ಅದು ಹೇಗೆ ತಾನೆ ಶೈವಮತಸ್ಥನಾಗುತ್ತಾನೆ?
ಈ ವಿಧವಾದ ಚಿಂತನೆ ಕೇವಲ ಒಬ್ಬ ಮಹಾಕವಿಗಷ್ಟೇ ಪರಿಮಿತವಾಗಿರಲಿಲ್ಲ. ಈ ದೇಶದಲ್ಲಿ ಅನಾದಿಕಾಲದಿಂದಲೂ ವೇದಧರ್ಮದ ಅನುಯಾಯಿಗಳಲ್ಲಿ ಶೇಖಡಾ ತೊಂಬತ್ತಾರಕ್ಕಿಂತ ಅಧಿಕ ಮಂದಿ ವೈಷ್ಣವ ಮತಸ್ಥರು, ಶೈವ ಮತಸ್ಥರು, ಶಾಕ್ತಮತಸ್ಥರು, ಗಾಣಪತ್ಯ, ಸೌರ ಹಾಗು ಸ್ಕಾಂದ ಮತಸ್ಥರೂ ಕೂಡಾ! ಏಕೆಂದರೆ, ಈ ಮತಗಳು ಆರಾಧಿಸುವ ಭಗವಂತನ ವಿವಿಧ ಸ್ವರೂಪಗಳನ್ನು ಈ ಶೇಖಡಾ ತೊಂಬತ್ತಾರು ಜನರೂ ಆರಾಧಿಸುತ್ತಾರೆ. ಕೇವಲ ವಿಷ್ಣುವನ್ನು ಮಾತ್ರವೇ ಪೂಜಿಸುವವರು ಜನಸಂಖ್ಯೆಯಲ್ಲಿನ ಶೇಖಡ ಒಂದು ಅಥವಾ ಎರಡು ಮಾತ್ರ. ಅದೇ ವಿಧವಾಗಿ ಕೇವಲ ಶಿವನನ್ನು ಮಾತ್ರವೇ ಪೂಜಿಸುವವರು ಶೇಖಡಾ ಒಂದು ಅಥವಾ ಎರಡು ಮಾತ್ರ. ಉಳಿದಂತೆ ಶಾಕ್ತ, ಗಾಣಪತ್ಯ, ಸೌರ, ಸ್ಕಾಂದ ಮತಗಳು ಈಗ ಪ್ರಚಲಿತವಿಲ್ಲ. ಆದರೂ ಸಹ ಆ ಮತಗಳಲ್ಲಿ ಹೇಳಿರುವ ಭಗವಂತನ ಸ್ವರೂಪಗಳನ್ನು ಮಿಕ್ಕ ಶೇಖಡಾ ತೊಂಬತ್ತಾರು ಜನ ಇಂದಿಗೂ ಪೂಜಿಸುತ್ತಿದ್ದಾರೆ.
ಈ ಅತ್ಯಧಿಕ ಜನಸಂಖ್ಯೆಯ ಜನರು ಸರ್ವಮತ ಸಮಾಹಾರವಾದ ಸನಾತನ ಧರ್ಮಕ್ಕೆ ಸೇರಿದವರು... ಆದ್ದರಿಂದ ಮತಕ್ಕೆ ಪ್ರಾಧಾನ್ಯತೆ ಈ ದೇಶದಲ್ಲಿ ಎಂದಿಗೂ ಇರಲಿಲ್ಲ! ಈ "ಸರ್ವಮತ ಸಮಾಹಾರ ಧರ್ಮ"ದ ಕುರಿತು ಕ್ರೈಸ್ತಮತಾನುಯಾಯಿಗಳಿಗಾಗಲಿ ಅಥವಾ ಇಸ್ಲಾಮಿನ ಅನುಯಾಯಿಗಳಿಗಾಗಲಿ ತಿಳಿದಿರಲಿಲ್ಲ! ಆದ್ದರಿಂದ ಶೈವ ಮತಸ್ಥರಲ್ಲದವರೆಲ್ಲರೂ ವೈಷ್ಣವರೆಂದೂ, ವೈಷ್ಣವರಲ್ಲದವರೆಲ್ಲರೂ ಶೈವರೆಂದೂ ಮೆಕಾಲೆ ವಿದ್ಯಾವಿಧಾನವು ಪ್ರಚಾರ ಮಾಡಿತು. "ನೀವು ಶೈವರೇ? ವೈಷ್ಣವರೇ?" ಎಂದು ಪ್ರಶ್ನಿಸಿದರೆ "ಅವೆರಡೂ ಅಲ್ಲ" ಎಂದು ಹೇಳುವ "ಸರ್ವದೇವತೆಗಳನ್ನೂ ಆರಾಧಿಸುವ ಸನಾತನ ಧರ್ಮದವರು ನಾವು!" ಹೀಗೆ, ಹಿಂದೂ ರಾಷ್ಟ್ರೀಯ ಸಮಾಜದಲ್ಲಿ ಅನಾದಿ ಕಾಲದಿಂದಲೂ ವೈಷ್ಣವ, ಶೈವ, ಶಾಕ್ತ, ಗಾಣಪತ್ಯ, ಸೌರ, ಸ್ಕಾಂದ ಮತಗಳನ್ನು ವಿಶೇಷವಾಗಿ ಅನುಸರಿಸುತ್ತಿದ್ದವರ ಸಂಖ್ಯೆಯು ಕೇವಲ ಶೇಖಡ ಎರಡರಿಂದ ಮೂರಕ್ಕೆ ಪರಿಮಿತವಾಗಿತ್ತು. ಪ್ರಚಲಿತವಿದ್ದ ಉಳಿದೆಲ್ಲಾ ಮತಗಳನ್ನೂ ಗಣನೆಗೆ ತೆಗೆದುಕೊಂಡರೂ ಅದೆಂದಿಗೂ ಶೇಖಡ ಹತ್ತಕ್ಕಿಂತ ಹೆಚ್ಚಾಗಿರಲಿಲ್ಲ. ಉಳಿದವರೆಲ್ಲರೂ ಎಲ್ಲಾ ಮತಗಳನ್ನೂ ಸ್ವೀಕರಿಸಿದ ಸನಾತನ ಧರ್ಮದವರು. ಹಾಗೆ ಪ್ರಚಲಿತವಿದ್ದ ಮತಗಳೂ ಸಹ ಸನಾತನವಾದವುಗಳೇ! ಈ ಕಾರಣಕ್ಕಾಗಿಯೇ ಆದಿ ಶಂಕರರು ಷಣ್ಮತಗಳನ್ನೂ ಮತ್ತೊಮ್ಮೆ ಹಿಂದೂ ಧರ್ಮದೊಳಗೆ ಅನುಸಂಧಾನಗೊಳಿಸಿದರು. ಮಹಾಕವಿ ಕಾಳಿದಾಸನು ಈ ಸನಾತನ ಧರ್ಮಕ್ಕೆ ಸೇರಿದವನು, ಅವನು ಶೈವ ಮತಸ್ಥನಲ್ಲ, ಅವನು ಶಿವಭಕ್ತ, ವಿಷ್ಣುಭಕ್ತ ಕೂಡ........ ಶಿವಾಜಿ, ಕೃಷ್ಣದೇವರಾಯ..... ರಾಜರಾಜ ನರೇಂದ್ರ, ತ್ಯಾಗಯ್ಯ, ಭಕ್ತ ಪೋತನ, ಪುರಂದರ ದಾಸರು, ಕನಕದಾಸರು..... ಎಲ್ಲರೂ ಸಹ ಹಾಗೆ ಸನಾತನ ಧರ್ಮಕ್ಕೆ ಸೇರಿದವರು.
*****
ಮೆಕಾಲೆ ವಿದ್ಯಾವಿಧಾನದಿಂದ ಉಂಟಾದ ದುಷ್ಪರಿಣಾಮಗಳನ್ನು ಒಂದೊಂದಾಗಿ ವಿಶ್ಲೇಷಿಸುವುದೇ ಈ ಸರಣಿಯ ಉದ್ದೇಶ. ಮೂಲತಃ ತೆಲುಗಿನಲ್ಲಿ "ಮೇಕ ವನ್ನೆಲ ಮೇಕಂ, ಮೆಕಾಲೆ ವಿದ್ಯಾ ವಿಧಾನಂ - ಮೇಕೆಯ ತೊಗಲು ಹೊದ್ದ ತೋಳ, ಮೆಕಾಲೆ ವಿದ್ಯಾ ವಿಧಾನ" ಎನ್ನುವ ಈ ಸರಣಿಯನ್ನು ಜಾಗೃತಿ ವಾರಪತ್ರಿಕೆಯಲ್ಲಿ ೨೦೦೮ರ ಆಸುಪಾಸಿನಲ್ಲಿ ಧಾರಾವಾಹಿಯಂತೆ, ಶ್ರೀಯುತ ತಂಗೇಡುಕುಂಟ ಹೆಬ್ಬಾರ್ ನಾಗೇಶ್ವರ್ ರಾವ್ ಅವರು ಬರೆದಿರುತ್ತಾರೆ. ಆ ಲೇಖನದ ಸೊಗಡನ್ನು ಕನ್ನಡಿಗರು ಆಸ್ವಾದಿಸುವಂತೆ ಮಾಡುವ ಒಂದು ಪ್ರಯತ್ನವನ್ನು ನಾನಿಲ್ಲಿ ಮಾಡಿದ್ದೇನೆ. ಈಗ ನಿಮ್ಮ ಮುಂದಿರುವುದು ಈ ಸರಣಿಯ ಹದಿನೇಳನೆಯ ಕಂತು, "ವೈಷ್ಣವುಲು ಕಾನಿವಾರು ಅಂದರೂ ಶೈವುಲಾ...... ವೈಷ್ಣವರಲ್ಲದವರೆಲ್ಲಾ ಶೈವರೇ.....?"
ಈ ಸರಣಿಯ ಹದಿನಾರನೆಯ ಕಂತು, "ಕಬಂಧನು ಕದಲನು...... ಮಿಸುಕದಿದ್ದರೆ ಒಳಿತು ಮಾಡುತ್ತಾನೆ" ಎನ್ನುವ ಲೇಖನಕ್ಕೆ ಈ ಕೊಂಡಿಯನ್ನು ನೋಡಿ – https://sampada.net/blog/%E0%B2%AD%E0%B2%BE%E0%B2%97-%E0%B3%A7%E0%B3%AC-...
Comments
ಉ: ಭಾಗ ೧೭ - ಮೇಕೆಯ ತೊಗಲು ಹೊದ್ದ ತೋಳ, ಮೆಕಾಲೆ ವಿದ್ಯಾ ವಿಧಾನ:...
ಎಂದಿನಂತೆ ಈ ಲೇಖನವನ್ನು ಆಸಕ್ತಿಯಿಂದ ಓದಿ ಪ್ರೋತ್ಸಾಹಿಸುತ್ತಿರುವ ಸಂಪದಿಗ ಮಿತ್ರರೆಲ್ಲರಿಗೂ ಧನ್ಯವಾದಗಳು. ಈ ಸರಣಿಯ ಮುಂದಿನ ಲೇಖನವನ್ನು - ಮೇಧಾವಿಗಳು ಬ್ರಿಟಿಷರಿಗೆ ಸಹಜ ಮಿತ್ರರು! ಓದಲು ಈ ಕೊಂಡಿಯನ್ನು ನೋಡಿ https://sampada.net/blog/%E0%B2%AD%E0%B2%BE%E0%B2%97-%E0%B3%A7%E0%B3%AE-...