ಭಾಗ ೧೮ - ಮೇಕೆಯ ತೊಗಲು ಹೊದ್ದ ತೋಳ, ಮೆಕಾಲೆ ವಿದ್ಯಾ ವಿಧಾನ: ಮೇಧಾವಿಗಳು ಬ್ರಿಟಿಷರಿಗೆ ಸಹಜ ಮಿತ್ರರು!
ಚಾರ್ಲ್ಸ್ ವುಡ್, ಆನಂದ ಮೋಹನ್ ದಾಸ್, ಸುರೇಂದ್ರನಾಥ್ ಬ್ಯಾನರ್ಜಿ ಚಿತ್ರಕೃಪೆ: ಗೂಗಲ್
ಅದುವರೆಗೆ ಮತಾಂತರದ ಕಾರ್ಯಗಳನ್ನು ಕೈಗೊಳ್ಳಲು ಪ್ರಚಾರ ಸಾಮಗ್ರಿ ಮತ್ತು ಸಹಾಯವನ್ನು ಒದಗಿಸುತ್ತಿದ್ದ ಮಿಷಿನರಿಗಳು ಕ್ರಿಸ್ತ ಶಕ ೧೮೩೪ರ ನಂತರ ವಿದ್ಯಾರಂಗವನ್ನು ದುರಾಕ್ರಮಿಸಲು ಮೊದಲು ಮಾಡಿದರು. ಚಾರ್ಲ್ಸ್ ವುಡ್ ಎನ್ನುವ ಬ್ರಿಟಿಷ್ ಅಧಿಕಾರಿಯು ಮಿಷನರಿಗಳು ನಿರ್ವಹಿಸುವ ಪಾಠಶಾಲೆಗಳಿಗೆ ಸರ್ಕಾರದ ಸಹಾಯ ನಿಧಿ (ಗ್ರಾಂಟ್ ಇನ್ ಏಡ್) ಒದಗಿಸುವ ಅವಶ್ಯಕತೆಯನ್ನು ಕುರಿತು ಒಂದು ಸಮೀಕ್ಷಾ ವರದಿಯನ್ನು ತಯಾರಿಸಿದ. ಯೂರೋಪಿಯನ್ನರ ಕಲಾಪ್ರಕಾರಗಳು, ವಿಜ್ಞಾನ ಶಾಸ್ತ್ರಗಳು, ತಾತ್ತ್ವಿಕ ವೇದಾಂತ ವಿಷಯಗಳು, ಸಾಹಿತ್ಯ, ಇವೆಲ್ಲವೂ ಭಾರತದಲ್ಲಿನ ಆಯಾ ವಿಷಯಗಳಿಗಿಂತ ಬಹಳ ಶ್ರೇಷ್ಠವಾದವುಗಳೆಂದು ಚಾರ್ಲ್ಸ್‌ವುಡ್ ನಿರ್ಧರಿಸಿದ. ಆ ಶ್ರೇಷ್ಠವಾದ ಸಕಲ ವಿದ್ಯೆಗಳೆಲ್ಲವನ್ನೂ ಭಾರತೀಯ ವಿದ್ಯಾಲಯಗಳಲ್ಲಿ ಇಂಗ್ಲೀಷ್ ಮಾಧ್ಯಮದ ಮೂಲಕ ಮತ್ತು ಆಧುನಿಕ ಭಾರತೀಯ ಭಾಷೆಗಳ ಮೂಲಕವೂ ಬೋಧಿಸಬೇಕೆಂದು ಚಾರ್ಲ್ಸ್ ವುಡ್ ತನ್ನ ಸಮೀಕ್ಷೆಯಲ್ಲಿ ನಿವೇದಿಸಿದ್ದ. ಇಂಗ್ಲೀಷ್ ಅನ್ನು ಕೇವಲ ಒಂದು ಭಾಷೆಯಾಗಿ ಕಲಿಸುವುದಷ್ಟೆ ಅವನ ಉದ್ದೇಶವಾಗಿರಲಿಲ್ಲ. ಭಾರತೀಯರ ಚಿಂತನೆಯನ್ನು ಯೂರೋಪಿಯನ್ನರ ಸಂಸ್ಕೃತಿಗೆ ಅನುಗುಣವಾಗಿ ತಿದ್ದಿತೀಡುವುದಕ್ಕೆ ಇಂಗ್ಲೀಷ್, ಹಾಗು ಆಧುನಿಕ ಭಾರತೀಯ ಭಾಷೆಗಳೂ ಸಹ ಈ ಲಕ್ಷ್ಯ ಸಾಧನೆಗೆ ಮಾಧ್ಯಮಗಳಾಗ ಬೇಕೆನ್ನುವುದು ಚಾರ್ಲ್ಸ್‌ವುಡ್‌ಕೊಟ್ಟ ಸಮೀಕ್ಷಾ ವರದಿಯ ಸಾರಾಂಶವಾಗಿತ್ತು. ಇದಲ್ಲದೆ ಭಾರತೀಯ ಭಾಷೆಗಳಲ್ಲಿ ಕೆಲವು ಮಾತ್ರವೇ ಯೂರೋಪಿಯನ್ನರ ಚಿಂತನೆಗಳನ್ನು ಪ್ರಸಾರ ಮಾಡಬಲ್ಲ "ಆಧುನಿಕ" ಭಾಷೆಗಳಾಗಿವೆಯೆಂದೂ ಉಳಿದವುಗಳು ಕೆಲಸಕ್ಕೆ ಬಾರದ "ಪುರಾತನ" ಭಾಷೆಗಳೆಂದು ಮೆಕಾಲೆ ಅನುಮೋದಕರು ನಿರ್ಣಯಿಸಿದರು. ಸಂಸ್ಕೃತವು ಅವರ ದೃಷ್ಟಿಯಲ್ಲಿ ಅಂತಹ ಒಂದು ಕೆಲಸಕ್ಕೆ ಬಾರದ ಹಳೆಯ ಭಾಷೆ.... ಈ ಹೊಸ ವಿದ್ಯೆಯ ಮೂಲಕ ತಯಾರಾಗುವ ವಿದ್ಯಾವಂತರಿಗೆ ಬ್ರಿಟಿಷ್ ಸರ್ಕಾರದಲ್ಲಿ ಉದ್ಯೋಗಗಳನ್ನು ಸಹ ಕೊಡಮಾಡಬೇಕೆಂದು ಉಡ್ ಶಿಫಾರಸು ಮಾಡಿದ. ಹೀಗೆ ’ಪದವಿ ಗ್ರಹಣ’ ಮಾಡಿದ ಭಾರತೀಯ ನವ ವಿದ್ಯಾವಂತರು ಯೂರೋಪಿಯನ್ನರ ಪದ್ಧತಿಗಳೆಲ್ಲವೂ ಉನ್ನತವಾದವುಗಳೆಂದು ನಂಬಿದರು, ಅವನ್ನೇ ಅನುಸರಿಸಿದರು ಮತ್ತು ಅವನ್ನೇ ಪ್ರಚಾರ ಮಾಡಿದರು!
*****
ಮೇಧಾವಿಗಳು ಬ್ರಿಟಿಷರಿಗೆ ಸಹಜ ಮಿತ್ರರು!
ಸ್ವತಂತ್ರಪೂರ್ವ ಭಾರತದಲ್ಲಿ ಒಂದು ಕಡೆ, ಒಂದು ದಿನ......
ಒಂದು ಮನೆುಯಲ್ಲಿ ವೇದಮಂತ್ರಗಳು ಕೇಳಿಸುತ್ತಿದ್ದವು. ಆ ಮನೆಯಲ್ಲಿ ದೇವತಾರ್ಚನೆಯು ನಡೆಯುತ್ತಿತ್ತು! ’ಪಂಚಾಯತನ ಪೂಜೆ’ಯ ಭಾಗವಾಗಿ ತಟ್ಟೆಯಲ್ಲಿ ಒಂದು ರೂಪಾಯಿಯ ಬೆಳ್ಳಿ ನಾಣ್ಯವನ್ನೂ ಇಟ್ಟು ಪೂಜಿಸುತ್ತಿದ್ದರು! ಬೆಳ್ಳಿ ರೂಪಾಯಿಯನ್ನು ಧನಲಕ್ಷ್ಮೀ ಸ್ವರೂಪವೆಂದು ಭಾವಿಸಿ ಆ ಗೃಹಸ್ಥನು ಪೂಜಿಸುತ್ತಿದ್ದನೋ ಏನೋ? ಆ ಕುಟುಂಬದ ಸದಸ್ಯರು ಆರಾಧಿಸುತ್ತಿದ್ದರೋ ಏನೋ?
ಆ ಮನೆಗೆ ಒಬ್ಬ ವೇದಪಂಡಿತನು ಬಂದನು! ಅವನು ಆ ಗೃಹಸ್ಥನ ದೇವತಾರ್ಚನೆಯ ವಿಧಾನವನ್ನು ಆಸಕ್ತಿಯಿಂದ ಗಮನಿಸುತ್ತಿದ್ದನು! ಅವರು ಆಚರಿಸುತ್ತಿದ್ದ ಪಂಚಾಯತನ ಪೂಜೆಯೊಂದಿಗೆ ಅವರು ಪೂಜಿಸುತ್ತಿದ್ದ ಬೆಳ್ಳಿ ನಾಣ್ಯವನ್ನೂ ಸಹ ಅವನು ಗಮನಿಸಿದ. ಆ ಬೆಳ್ಳಿ ರೂಪಾಯಿಯ ಒಂದು ಕಡೆ ಕಿಂಗ್ ಜಾರ್ಜನ ಚಿತ್ರವೂ ಇತ್ತು. ಕ್ರಿ.ಶ. ೧೯೧೩ರಲ್ಲಿ ಆ ಬೆಳ್ಳಿ ರೂಪಾಯಿಯನ್ನು ಟಂಕಿಸಿದ್ದರು!
ಆ ಗೃಹಸ್ಥನು ಆಚರಿಸುತ್ತಿದ್ದ ಪೂಜೆಯನ್ನು ಆ ವೇದಪಂಡಿತನು ಬಹುವಾಗಿ ಕೊಂಡಾಡಿದನು! ಗೃಹಸ್ಥನಿಗೆ ತಿಳಿಯದೇ ಇದ್ದ ಒಂದು ಮಹತ್ತರವಾದ ಸಂಗತಿಯನ್ನು ಆ ವೇದಪಂಡಿತನು ಹೇಳಿ ಹೋಗಿದ್ದ. "ರಾಜನನ್ನು ಪೂಜಿಸುತ್ತಿದ್ದೀಯ ಅಂದರೆ ಪೃಥಿವೀಪತಿಯನ್ನು ಪೂಜಿಸುತ್ತಿದ್ದೀಯ. "ವಿಷ್ಣುವಲ್ಲದವನು ಸಾಮ್ರಾಟನಾಗನು - ನ ಅವಿಷ್ಣುಃ ಪೃಥಿವೀ ಪತಿಃ - ಹೀಗೆ ವಿಷ್ಣುಸ್ವರೂಪನಾದ ಜಾರ್ಜ್ ಸಾಮ್ರಾಟನನ್ನು ನೀನು ಆರಾಧಿಸುತ್ತಿದ್ದೀಯ........." ಎಂದು ಆ ಪಂಡಿತನು ಹೇಳಿದ್ದನ್ನು ಕೇಳಿ ಆ ಗೃಹಸ್ಥನು ಇನ್ನಷ್ಟು ಉಬ್ಬಿ ಹೋದ. ಬ್ರಿಟಿಷರು ನಮ್ಮ ದೇಶದಿಂದ ನಿಷ್ಕ್ರಮಿಸಿದ ಮೇಲೆಯೂ ಈ ಉದಂತವನ್ನು ಆ ಗೃಹಸ್ಥನು ತನ್ನ ಮಕ್ಕಳು ಹಾಗು ಮೊಮ್ಮಕ್ಕಳಿಗೆ ಹೇಳಿಕೊಂಡು ಬೀಗುತ್ತಿದ್ದ.....!
ಯೂರೋಪಿಯನ್ನರ "ಶ್ರೇಷ್ಠ" ಪದ್ಧತಿಗಳನ್ನು ನಾವು ಮತ್ತಷ್ಟು ’ಶ್ರೇಷ್ಠ’ಗೊಳಿಸಿ ತಲೆಯಮೇಲೆ ಹೊತ್ತುಕೊಂಡು ಆಚರಿಸುತ್ತಿದ್ದೇವೆ. ಹೌದು ಮತ್ತೆ! ಬ್ರಿಟಿಷರು ಬಂದು ರೈಲ್ವೆ ವ್ಯವಸ್ಥೆಯನ್ನು ಸ್ಥಾಪಿಸಿದರು. ಹೀಗೆ ಅವರು ರೈಲುಗಳನ್ನು ಓಡಿಸಿದ್ದರಿಂದ ವಿವಿಧ ಪ್ರಾಂತಗಳ ಪ್ರಜೆಗಳು ಮತ್ತಷ್ಟು ಹತ್ತಿರವಾಗಿ ಹೋದರಂತೆ! ಅದರ ಮೂಲಕ ಈ ದೇಶದಲ್ಲಿ ರಾಷ್ಟ್ರೀಯತೆಯ ಭಾವನೆಯು ಅಂಕುರಗೊಂಡಿತಂತೆ! ಒಂದು ರಾಷ್ಟ್ರವಾಗಿ ನಾವು ಏರ್ಪಡಬೇಕೆನ್ನುವ ’ಉತ್ಕಂಠತೆ’ಯು ಈ ದೇಶವಾಸಿಗಳಲ್ಲಿ ಉಂಟಾಯಿತಂತೆ. ಕ್ರಿ.ಶ. ೧೮೬೦ ಸರಿಸುಮಾರಿನಲ್ಲಿ ವಾಣಿಜ್ಯ ಸಂಬಂಧಗಳನ್ನು ಆಧಾರವಾಗಿಟ್ಟುಕೊಂಡು ಚರಿತ್ರೆಯಲ್ಲಿ ಮೊಟ್ಟಮೊದಲ ಬಾರಿಗೆ ಭಾರತದ ಪ್ರಜೆಗಳು ಒಂದು ರಾಷ್ಟ್ರವಾಗಿ ರೂಪುಗೊಳ್ಳುತ್ತಿದ್ದಾರೆಂದೂ ಶ್ರೇಷ್ಠವಾದ ಪಾಶ್ಚಿಮಾತ್ಯ ವಿದ್ಯೆಯನ್ನು ತಲೆಗೇರಿಸಿಕೊಂಡ ಮೇಧಾವಿಗಳು ಭಾವಿಸುವುದು ಮೊದಲಾಯಿತು! ಹಾಗೆ ಭಾವಿಸದ ಮೇಧಾವಿಗಳು ಮತ್ತು ನೈಜ ರಾಷ್ಟ್ರೀಯವಾದಿಗಳು ಕ್ರಮೇಣ ತಮ್ಮ ಪ್ರಾಧಾನ್ಯತೆಯನ್ನು ಕಳೆದುಕೊಂಡರು. ಬ್ರಿಟಿಷ್ ಆಳರಸರ ವಿರುದ್ಧ ಆರಂಭಗೊಂಡ ಸ್ವಾತಂತ್ರ್ಯ ಉದ್ಯಮವು ಮುಂದೆ ಹಿಡಿದ ಹಾದಿ ಇದಕ್ಕೆ ನಿದರ್ಶನ!
ವಂಗ ಪ್ರಾಂತದಲ್ಲಿ ಬ್ರಿಟಿಷರು ರೈಲುಗಳನ್ನು ಹಾಕಿದ ನಂತರ ಹಳ್ಳಿಗಳಲ್ಲಿ ಬಡಬಗ್ಗರಿಗೆ ಒದಗಿದ ಸ್ಥಿತಿಯನ್ನು ಕುರಿತು ಬಂಕಿಮಚಂದ್ರ ಚಟರ್ಜಿಗಳು ಶರಶ್ಚಂದ್ರ ಚಟರ್ಜಿಗೆ ವಿವರಿಸಿದರಂತೆ. "ರೈಲುಗಳು ಬರುವ ಪೂರ್ವದಲ್ಲಿ ಬಡಬಗ್ಗರಿಗೆ ಕಾಯಿಪಲ್ಯೆಗಳು ಸಿಗುತ್ತಿದ್ದವು, ಹಾಲು, ಮೊಸರು, ತುಪ್ಪಗಳು ದೊರಕುತ್ತಿದ್ದವು. ರೈಲುಗಳು ಆರಂಭವಾದ ಮೇಲೆ ಗ್ರಾಮಗಳಲ್ಲಿ ಇವೆಲ್ಲಾ ಬಡಬಗ್ಗರಿಗೆ ನಿಲುಕದಷ್ಟು ದೂರವಾಗಿ ಪಟ್ಟಣ ಪ್ರದೇಶಗಳಿಗೆ ಹರಿದು ಹೋಗುತ್ತಿವೆ! ಹಂಚಿಕೊಳ್ಳುವ ಪ್ರವೃತ್ತಿ ಕ್ಷೀಣಿಸಿ ಕೆಲವರೇ ಹೊಂಚಿಕೊಳ್ಳುವ ವಿಕೃತಿ ಬಲಿತಿತು. ಇದು ರೈಲುಗಳು ಬರುವುದರಿಂದ ಉಂಟಾಗಲಿಲ್ಲ, ಆದರೆ ರೈಲುಗಳನ್ನು ಆರಂಭಿಸವುದರ ಹಿಂದಿದ್ದ ಲೂಟಿ ಮಾಡುವ ಬ್ರಿಟಿಷರ ಕುಟಿಲತೆ ಅದರಿಂದ ಅಮಲಿಗೆ ಬಂತು. ಇಂಗ್ಲೀಷ್ ಭಾಷೆ ಬಹಳ ಒಳ್ಳೆಯದು. ಹೊಸದೊಂದು ಭಾಷೆಯನ್ನು ಕಲಿತುಕೊಂಡರು. ಆದರೆ ಪಾಶ್ಚಿಮಾತ್ಯ ಮತ್ತು ಐರೋಪ್ಯರ ಶ್ರೇಷ್ಠತೆಗಳು ಭಾರತೀಯತೆಯನ್ನು ಆಪೋಶನ ತೆಗೆದುಕೊಂಡವು. ಐರೋಪ್ಯರ ಶ್ರೇಷ್ಠತೆಯಿಂದ ಅಲಂಕೃತಗೊಂಡವರು, ಬ್ರಿಟಿಷರ ವಿರುದ್ಧ ನಡೆಯುತ್ತಿದ್ದ ಸ್ವಾತಂತ್ರ್ಯ ಸಂಗ್ರಾಮವನ್ನು, ಅದು ನಾವು ಒಂದು ರಾಷ್ಟ್ರವಾಗಿ ಏರ್ಪಡಲು ನಡೆಯುತ್ತಿರುವ ’ರಾಷ್ಟ್ರೀಯ ಸಂಗ್ರಾಮ’ವೆಂದು ವರ್ಣಿಸಿದರು. ಅಷ್ಟೇ ಅಲ್ಲದೆ, ರೈಲು ಮಾರ್ಗಗಳ ಸ್ಥಾಪನೆಯಾದ್ದರಿಂದ ವಿವಿಧ ಪ್ರಾಂತಗಳ ಮಧ್ಯೆ ವಾಣಿಜ್ಯ ವ್ಯವಹಾರಗಳು ಬಲಗೊಳ್ಳುವ ವಾಣಿಜ್ಯ ಸಂಗ್ರಾಮವೆಂದು ಅದನ್ನು ಬಣ್ಣಿಸಿದರು. "ಭಾರತೀಯರ ಹಕ್ಕುಗಳಿಗಾಗಿ ನಡೆಯುವ ಹೋರಾಟಗಳು ಭಾರತದ ರಾಷ್ಟ್ರೀಯ ಸಮುದಾಯಗಳನ್ನು ತಾತ್ಕಾಲಿಕವಾಗಿ ಸಂಘಟಿತಗೊಳಿಸಬಹುದು. ಆ ಹಕ್ಕುಗಳು ಸಿಕ್ಕ ಕೂಡಲೇ ರಾಷ್ಟ್ರೀಯತೆಯ ಭಾವವು ನಶಿಸಿ ಹೋಗುತ್ತದೆ. ಆದರೆ ವಿವಿಧ ಪ್ರಾಂತಗಳಲ್ಲಿನ ರಾಷ್ಟ್ರೀಯ ಸಮುದಾಯಗಳ ಮಧ್ಯೆ ವಾಣಿಜ್ಯ ಸಂಬಂಧಗಳು ಏರ್ಪಟ್ಟರೆ ಅವು ಎಂದಿಗೂ ಸಡಿಲಿ ಹೋಗವು! ಆದ್ದರಿಂದ ವ್ಯಾಪಾರ ವಾಣಿಜ್ಯೋದ್ಯಮ ವ್ಯವಹಾರಗಳು ದೃಢವಾದ ಏಕೀಕರಣಕ್ಕೆ ದಾರಿ ಮಾಡಿಕೊಡುತ್ತವೆ. ಮಹಾನ್ ಭಾರತೀಯ ಜನಾಂಗವು - ಗ್ರೇಟ್ ಇಂಡಿಯನ್ ನೇಷನ್ - ಉಗಮವಾಗುವುದಕ್ಕೆ ಇದು ಆಧಾರ ಸ್ತಂಭವಾಗಬಲ್ಲುದು" ಎಂದು ಸುರೇಂದ್ರನಾಥ ಬ್ಯಾನರ್ಜಿಯವರು ’ಬೆಂಗಾಲಿ’ ಎನ್ನುವ ತಮ್ಮ ಪತ್ರಿಕೆಯಲ್ಲಿ ಒಕ್ಕಣಿಸಿದರು.
೧೮೮೫ರಲ್ಲಿ ’ಕಾಂಗ್ರೆಸ್’ ಅನ್ನು ಆರಂಭಿಸಿದವರಲ್ಲಿ ಸುರೇಂದ್ರನಾಥ್ ಬ್ಯಾನರ್ಜಿಯವರು ಪ್ರಮುಖರು. ಅವರು ಪ್ರತಿಪಾದಿಸಿದ ಸಿದ್ಧಾಂತವು ’ಆರ್ಥಿಕ ರಾಷ್ಟ್ರೀಯತೆ’ (ಎಕನಾಮಿಕ್ ನ್ಯಾಷನಲಿಸಂ) ಎಂದು ಪ್ರಸಿದ್ಧವಾಯಿತು. ರೈಲ್ವೆ ವ್ಯವಸ್ಥೆಯಿಂದ ಬ್ರಿಟಿಷರಿಗೆ ವ್ಯಾಪಾರ ವಾಣಿಜ್ಯಗಳ ಮೇಲೆ ಸಿಕ್ಕ ಅಧಿಪತ್ಯದಿಂದ ಈ ಆರ್ಥಿಕ ರಾಷ್ಟ್ರೀಯತೆಯು ಅಂಕುರಿಸಿ ಬೇರೂರಿತೆಂದು ಮೆಕಾಲೆ ಮಾನಸ ಪುತ್ರರು ಇತಿಹಾಸ ಚಕ್ರವು ಉರುಳಿದ ದಿಕ್ಕನ್ನು ನಿರ್ಣಯಿಸಿದ್ದಾರೆ! ಒಟ್ಟಾರೆಯಾಗಿ ಅವರ ಅಭಿಪ್ರಾಯವೇನೆಂದರೆ, ಬ್ರಿಟಿಷರು ನಮ್ಮ ದೇಶದಲ್ಲಿ ರೈಲು ವ್ಯವಸ್ಥೆಯನ್ನು ಏರ್ಪಡಿಸುವ ಮೊದಲು, "ಈ ದೇಶವು ಒಂದು ರಾಷ್ಟ್ರವಾಗಿ ಇರಲಿಲ್ಲ ಮತ್ತು ವಿವಿಧ ಪ್ರಾಂತಗಳ ಮಧ್ಯೆ ವಾಣಿಜ್ಯ ಸಂಬಂಧಗಳೂ ಇರಲಿಲ್ಲ....! ಎಂದು ನಂಬುವ ಸ್ಥಿತಿಗೆ ಭಾರತೀಯ ಚಿಂತನೆಯು ನೆಲ ಕಚ್ಚಿತು! ಅದೇನು ಸ್ವಾಮಿ, ಕ್ರಿಸ್ತ ಪೂರ್ವದಲ್ಲಿಯೇ ಶತಮಾನಗಳ ಹಿಂದೆ ಭಾರತೀಯ ವಾಣಿಜ್ಯವು ಪ್ರಪಂಚ ವ್ಯಾಪ್ತಿಯಾಗಿತ್ತಲ್ಲವೇ! ಹಾಗಿರುವಾಗ ಈ ದೇಶದಲ್ಲಿನ ವಿವಿಧ ಪ್ರಾಂತಗಳ ಮಧ್ಯೆ ವಾಣಿಜ್ಯ ಅನುಬಂಧಗಳೇ ಇರಲಿಲ್ಲವೆನ್ನುವುದು ಎಷ್ಟರ ಮಟ್ಟಿಗೆ ಸರಿ? ಈಗ ವಾಣಿಜ್ಯ ವ್ಯವಹಾರ ಜಾಲವು ಏರ್ಪಟ್ಟಿತೆಂದು ಹೇಳುವುದರ ಔಚಿತ್ಯವೇನು? ’ಆರ್ಥಿಕ ರಾಷ್ಟ್ರೀಯತೆ’ ಎನ್ನುವುದರ ಅರ್ಥವಾದರೂ ಏನು? ಎನ್ನುವ ಪ್ರಶ್ನೆಗಳು ಅಂದಿನ ಮೇಧಾವಿಗಳಿಗೆ ಉಂಟಾಗಲಿಲ್ಲ. ಮೆಕಾಲೆ ವಿದ್ಯೆ ಅವರ ಚಿಂತನೆಗೆ ಕಡಿವಾಣ ಹಾಕಿತ್ತು. "ಯೂರೋಪಿಯನ್ನರು ಭರತ ಖಂಡದೊಳಕ್ಕೆ ಕಾಲಿಟ್ಟ ಮೇಲೆಯೇ ಇಲ್ಲಿಯ ಪ್ರಜೆಗಳು ಅನ್ನವನ್ನು ತಿನ್ನಲು ಮೊದಲು ಮಾಡಿದರು" ಎಂದು ಬ್ರಿಟಿಷರು ಹೇಳಲಿಲ್ಲ! ಒಂದು ವೇಳೆ ಹೇಳಿದ್ದರೆ, ಯೂರೋಪಿಯನ್ನರ ಆ ಶ್ರೇಷ್ಠತೆಯನ್ನೂ ಭಾರತೀಯ ಮೇಧಾವಿಗಳು ತಪ್ಪದೇ ಪ್ರಚಾರ ಮಾಡುತ್ತಿದ್ದರು!
ಮನೆಯೊಳಗೆ ಹೊಕ್ಕ ಕಳ್ಳರು ಮನೆಯಲ್ಲಿದ್ದವರನ್ನು ಸಾಕಿ ಸಲುಹುವ ಸ್ಥಿತಿ ಏರ್ಪಟ್ಟ ಮೇಲೆ ಮುಂದಿನ ತಲೆಮಾರಿನವರು ಆ ಕಳ್ಳರ ಮಾತನ್ನೇ ನಂಬುವುದು ಆರಂಭವಾಯಿತು. ಅರವತ್ತು ವರ್ಷಗಳಲ್ಲಿ ಮೆಕಾಲೆ ವಿದ್ಯೆ ಆ ಸ್ಥಿತಿಯನ್ನು ಸಾಧಿಸುವಲ್ಲಿ ಸಫಲವಾಯಿತು. ಕ್ರಿ.ಶ. ೧೯೮೯ರಲ್ಲಿ ಕಾಂಗ್ರಸ್ ಅಧ್ಯಕ್ಷರಾಗಿದ್ದ ಆನಂದ್ ಮೋಹನ್ ಬೋಸ್ ಅವರು ಹೀಗೆ ಒಕ್ಕಣಿಸಿದ್ದಾರೆ. "ಭಾರತೀಯ ಮೇಧಾವಿಗಳು ಇಂಗ್ಲೆಂಡಿನ ಮಿತ್ರರು, ಶತ್ರುಗಳಲ್ಲ! ಇಂಗ್ಲೆಂಡು ದೇಶವು ಸಾಧಿಸಲು ಹೊರಟಿರುವ ಮಹತ್ತರವಾದ ಗುರಿಗಳನ್ನು ಹೊಂದಲು ಮಾಡುವ ಕೃಷಿಯಲ್ಲಿ ಅವರು (ಭಾರತೀಯ ಮೇಧಾವಿಗಳು) ಆ ದೇಶಕ್ಕೆ ಸಹಜವಾದ, ಅತ್ಯವಶ್ಯಕವಾದ ನಿಷ್ಠೆಯ ಅನುಯಾಯಿಗಳು........" ಈ ’ಸಹಜ’ವಾದ ಸ್ವಭಾವವನ್ನು ಹುಟ್ಟುಹಾಕಿದ್ದು ಮೆಕಾಲೆ ವಿದ್ಯಾವಿಧಾನ. ಇಂಗ್ಲೀಷ್ ಮಾತನಾಡುವುದೊಂದೆ ಎಲ್ಲಾ ಪ್ರಾಂತಗಳಲ್ಲಿರುವ ಸಮಾನತೆ (ಸಾರೂಪ್ಯತೆ) ಎನ್ನುವ ದುಃಸ್ಥಿತಿ ಅಂದಿಗೆ ಏರ್ಪಟ್ಟಿತ್ತು! ಹಾಗೆ ಇಂಗ್ಲೀಷ್ ಭಾಷೆಯನ್ನು ಮಾತನಾಡುವವರಿಗೆ ಗೌರವವು ಹೆಚ್ಚಾಯಿತು. ಆ ಗೌರವಾನ್ವಿತರೆಲ್ಲರೂ ಒಂದು ಕಡೆ ಗುಂಪಾಗಿ ಸೇರುವುದು ಆರಂಭವಾಯಿತು. ಇಂಗ್ಲೀಷ್ ಭಾಷೆಯಿಂದ ಈ ದೇಶದಲ್ಲಿ ”ರಾಷ್ಟ್ರೀಯತೆಯ ಭಾವ’ವು ಅಂಕುರಿಸಿತೆಂದು ಮತ್ತೊಂದು ಸಿದ್ಧಾಂತವು ಪ್ರಚಾರಕ್ಕೆ ಬಂದಿತು. "ಲಕ್ಷಾಂತರ ವರ್ಷಗಳಿಂದ ಈ ದೇಶವು ಒಂದು ರಾಷ್ಟ್ರವಾಗಿತ್ತು" ಎನ್ನುವ ಸತ್ಯವು ವೇದಗಳ ಮೂಲಕ, ಇತಿಹಾಸದ ಮೂಲಕ, ಅನೇಕ ಭಾರತೀಯ ಸಾಹಿತ್ಯ ಪ್ರಕಾರಗಳ ದ್ವಾರಾ ಬ್ರಿಟಿಷರು ನಮ್ಮ ದೇಶದೊಳಗೆ ಕಾಲಿಡುವುದಕ್ಕೆ ಮುಂಚೆಯೇ ಭಾರತೀಯರ ಚಿಂತನೆಗೆ ನಿಲುಕಿತ್ತು! ನೂರು ವರ್ಷಗಳಲ್ಲೇ ಆ ಸ್ಮೃತಿಯು ಮೇಧಾವಿಗಳ ಮೆದುಳಿನಿಂದ ವಿಸ್ಮೃತಿಗೊಂಡಿತ್ತು! ವಿಲಿಯಂ ಜೋನ್ಸ್ ಮಹಾಶಯನಿಂದ ಆ ವಿಸ್ಮೃತಿಯ ಕಾಂಡವು ಮೊದಲುಗೊಂಡಿತ್ತು......
"ಈ ದೇಶವು ಒಂದು ರಾಷ್ಟ್ರವಲ್ಲ" ಎನ್ನುವ ಅಸತ್ಯವನ್ನು ಸತ್ಯವೆಂದು ನಂಬಿದ ಮೇಧಾವಿಗಳಿಗೆ ಈ ದೇಶವು ಯಾವ ವಿಧವಾಗಿ ಕಂಡಿತ್ತು? ಬ್ರಿಟಿಷ್ ಆಳರಸರ ಸಾಮ್ರಾಜ್ಯದ ಒಂದು ಭಾಗವಾಗಿ ಕಾಣಿಸಿತ್ತು! "ಬ್ರಿಟಿಷರು ನಮ್ಮನ್ನು ನ್ಯಾಯವಾಗಿ ಪರಿಪಾಲಿಸಿದರೆ ಸಾಕು, ಬ್ರಿಟಿಷ್ ಸಾಮ್ರಾಜ್ಯದಲ್ಲಿನ ಪ್ರಜೆಗಳೆಲ್ಲರಿಗೂ ಸಿಗುವಂತೆ ತಮಗೂ ಸಮಾನ ಹಕ್ಕುಗಳು ಸಿಕ್ಕರೆ ಸಾಕು....!" ಕ್ರಿ.ಶ. ಹತ್ತೊಂಬತ್ತನೆಯ ಶತಮಾನದ ಕಡೆಯವರೆಗೂ ಕಾಂಗ್ರೆಸ್ ಹೋರಾಟದ ಮುಂಚೂಣಿ ನಾಯಕರಿಗಿದ್ದ ಆಲೋಚನೆಯ ವೈಖರಿ ಇದಾಗಿತ್ತು! (ಲೋಕಮಾನ್ಯ ತಿಲಕ್, ಬಿಪಿನ್ ಚಂದ್ರ ಪಾಲ್, ಲಾಲಾ ಲಜಪತ್ ರಾಯ್ ಮೊದಲಾದವರು ರಂಗಪ್ರವೇಶ ಮಾಡಿದ ಮೇಲೆ ಕಾಂಗ್ರೆಸ್ ಹೋರಾಟದ ದಿಕ್ಕು ಬದಲಾಯಿತು.... ಅದು ಬೇರೆ ವಿಷಯ.....)
ಮುರಾರ್ಜಿ ದೇಸಾಯಿಯವರು ಪ್ರಧಾನಿಗಳಾಗಿದ್ದಾಗ ಅಮೇರಿಕಾ ಸಂಯುಕ್ತ ಸಂಸ್ಥಾನಗಳ ಅಧ್ಯಕ್ಷರಾದ ಜಿಮ್ಮಿ ಕಾರ್ಟರ್ ನಮ್ಮ ದೇಶಕ್ಕೆ ಬಂದಿದ್ದರು. ಆ ಪರ್ಯಟನೆಯ ಸಂದರ್ಭದಲ್ಲಿ ಒಂದು ಪ್ರಮುಖ ಆಂಗ್ಲ ಪತ್ರಿಕೆಯಲ್ಲಿ ಒಬ್ಬ ಪ್ರಮುಖ ಪತ್ರಕರ್ತ ಹೀಗೆ ವ್ಯಾಖ್ಯಾನಿಸಿದ. "ಮುರಾರ್ಜಿ ದೇಸಾಯಿಯವರು ಪುರಾತನ ದೇಶದ ಹೊಸ ರಾಷ್ಟ್ರಕ್ಕೆ ಪ್ರತಿನಿಧಿ, ಜೇಮ್ಸ್ ಎರ್ಲ್ ಕಾರ್ಟರ್ ಹೊಸ ದೇಶದ ಆದರೆ ಹಳೆ ರಾಷ್ಟ್ರದ ಪ್ರತಿನಿಧಿ..... Representative of an old country but new Nation and Representative of New country but old Nation...." ಈ ಪದಜಾಲವು ಮೆಕಾಲೆ ವಿದ್ಯಾವಿಧಾನದ ಪ್ರಭಾವದಿಂದ ಆವಿರ್ಭಾವಗೊಂಡಿದ್ದಲ್ಲದೆ ಮತ್ತೇನೂ ಅಲ್ಲ! ಭಾರತ ದೇಶದ ಕುರಿತು ಸಾವಿರಾರು ವರ್ಷಗಳ ಪೂರ್ವದಿಂದಲೂ ಪಾಶ್ಚಾತ್ಯರಿಗೆ ತಿಳಿದಿತ್ತು, ಪ್ರಪಂಚಕ್ಕೇ ತಿಳಿದಿತ್ತು. ಆದ್ದರಿಂದ ಭಾರತ ದೇಶವು ಅಮೇರಿಕಾಕ್ಕಿಂತ ಪ್ರಾಚೀನ ದೇಶವೆನ್ನುವುದು ಆ ಪತ್ರಕರ್ತನ ಅನಿಸಿಕೆ. ಹಾಗಾದರೆ ಅಮೇರಿಕಾವು ಪ್ರಾಚೀನ ರಾಷ್ಟ್ರವು ಹೇಗಾಯಿತು? "ರಾಜಕೀಯ ಸ್ವಾತಂತ್ರ್ಯವನ್ನು ಹೊಂದಿದ ಜನಾಂಗವು ಮಾತ್ರವೇ ಒಂದು ರಾಷ್ಟ್ರ" ಎನ್ನುವುದು ಬ್ರಿಟಿಷರು ನಮಗೆ ಕಲಿಸಿಕೊಟ್ಟು ಹೋದ ಗಿಳಿಪಾಠ. ಅಮೇರಿಕಾವು ಕ್ರಿ.ಶ. ೧೭೭೪ರಲ್ಲಿ ಬ್ರಿಟಿಷರಿಂದ ಸ್ವಾತಂತ್ರ್ಯವನ್ನು ಪಡೆಯಿತು. ಆದ್ದರಿಂದ ಅಮೇರಿಕಾ ೧೭೭೪ರಲ್ಲಿ ಒಂದು ರಾಷ್ಟ್ರವಾಗಿ ಏರ್ಪಟ್ಟಿತೆನ್ನುವುದು ಅವನ ಲೆಕ್ಕ. ೧೯೪೭ರಲ್ಲಿ ಬ್ರಿಟನ್ ಭಾರತಕ್ಕೆ ಸ್ವಾತಂತ್ರ್ಯವನ್ನು ಪ್ರಸಾದಿಸಿತು, ಆದ್ದರಿಂದ ಭಾರತವು ೧೯೪೭ರಿಂದ ಇತ್ತೀಚೆಗಷ್ಟೇ ಒಂದು ರಾಷ್ಟ್ರವಾಗಿ ಏರ್ಪಟ್ಟಿತೆಂದು ಬ್ರಿಟಿಷರ ಭಾವದಾಸ್ಯ ಸುರಾಪಾನದ ಅಮಲು ತಲೆಗೇರಿದವರು ಭಾವಿಸುತ್ತಿದ್ದಾರೆ. ಈ ದೃಷ್ಟಿಯಿಂದ ಅಮೇರಿಕಾವು ಭಾರತಕ್ಕಿಂತ ಹಳೆಯ ರಾಷ್ಟ್ರವಂತೆ! ಈ ರಾಷ್ಟ್ರೀಯತೆಗೆ ರಾಜಕೀಯ ಸ್ವಾತಂತ್ರ್ಯವು ಮಾನದಂಡ. ಈ ರಾಜಕೀಯ ರಾಷ್ಟ್ರೀಯತಾ ಭಾವವು ಇಂಗ್ಲೀಷರ ಪರಿಪಾಲನೆಯಿಂದ ಉಂಟಾಯಿತೆಂದು ಮತ್ತೊಂದು ಅಪದ್ಧವು ಪ್ರಚಾರವಾಗುತ್ತಿದೆ. ಈ ಅಪದ್ಧದ ಕಾರಣದಿಂದಾಗಿ ಬ್ರಿಟಿಷರ ವಿರುದ್ಧ ರಾಜಕೀಯ ಸ್ವಾತಂತ್ರ್ಯಕ್ಕಾಗಿ ನಡೆದ ಹೋರಾಟವು ’ರಾಜಕೀಯ ರಾಷ್ಟ್ರೀಯತೆ’ಯನ್ನು ರೂಪಿಸಿಕೊಳ್ಳಲು ನಡೆದ ಹೋರಾಟವಂತೆ ಮತ್ತು ಇತಿಹಾಸದಲ್ಲಿ ಪ್ರಪ್ರಥಮ ಬಾರಿಗೆ ಭಾರತೀಯರು ಒಂದು ಜನಾಂಗವಾಗಿ ರೂಪುಗೊಳ್ಳಲು ಸ್ವಾತಂತ್ರ್ಯೋದಮವು ಕಾರಣೀಭೂತವಾಯಿತೆಂದು ನಮ್ಮ ಶಾಲಾ ಕಾಲೇಜುಗಳಲ್ಲಿ ಇಂದಿಗೂ ಬೋಧಿಸಲಾಗುತ್ತಿದೆ.
*****
ಮೆಕಾಲೆ ವಿದ್ಯಾವಿಧಾನದಿಂದ ಉಂಟಾದ ದುಷ್ಪರಿಣಾಮಗಳನ್ನು ಒಂದೊಂದಾಗಿ ವಿಶ್ಲೇಷಿಸುವುದೇ ಈ ಸರಣಿಯ ಉದ್ದೇಶ. ಮೂಲತಃ ತೆಲುಗಿನಲ್ಲಿ "ಮೇಕ ವನ್ನೆಲ ಮೇಕಂ, ಮೆಕಾಲೆ ವಿದ್ಯಾ ವಿಧಾನಂ - ಮೇಕೆಯ ತೊಗಲು ಹೊದ್ದ ತೋಳ, ಮೆಕಾಲೆ ವಿದ್ಯಾ ವಿಧಾನ" ಎನ್ನುವ ಈ ಸರಣಿಯನ್ನು ಜಾಗೃತಿ ವಾರಪತ್ರಿಕೆಯಲ್ಲಿ ೨೦೦೮ರ ಆಸುಪಾಸಿನಲ್ಲಿ ಧಾರಾವಾಹಿಯಂತೆ, ಶ್ರೀಯುತ ತಂಗೇಡುಕುಂಟ ಹೆಬ್ಬಾರ್ ನಾಗೇಶ್ವರ್ ರಾವ್ ಅವರು ಬರೆದಿರುತ್ತಾರೆ. ಆ ಲೇಖನದ ಸೊಗಡನ್ನು ಕನ್ನಡಿಗರು ಆಸ್ವಾದಿಸುವಂತೆ ಮಾಡುವ ಒಂದು ಪ್ರಯತ್ನವನ್ನು ನಾನಿಲ್ಲಿ ಮಾಡಿದ್ದೇನೆ. ಈಗ ನಿಮ್ಮ ಮುಂದಿರುವುದು ಈ ಸರಣಿಯ ಹದಿನೆಂಟನೆಯ ಕಂತು, "ಮೇಧಾವುಲು ಬ್ರಿಟಿಷ್‌ವಾರಿಕಿ ಸಹಜ ಮಿತ್ರುಲು! - ಮೇಧಾವಿಗಳು ಬ್ರಿಟಿಷರಿಗೆ ಸಹಜ ಮಿತ್ರರು!
ಈ ಸರಣಿಯ ಹದಿನೇಳನೆಯ ಕಂತು, "ವೈಷ್ಣವರಲ್ಲದವರೆಲ್ಲಾ ಶೈವರೇ.....?" ಎನ್ನುವ ಲೇಖನಕ್ಕೆ ಈ ಕೊಂಡಿಯನ್ನು ನೋಡಿ - https://sampada.net/blog/%E0%B2%AD%E0%B2%BE%E0%B2%97-%E0%B3%A7%E0%B3%AD-...
Comments
ಉ: ಭಾಗ ೧೮ - ಮೇಕೆಯ ತೊಗಲು ಹೊದ್ದ ತೋಳ, ಮೆಕಾಲೆ ವಿದ್ಯಾ ವಿಧಾನ:...
ಚಾರ್ಲ್ಸ್ ವುಡ್, ಆನಂದ ಮೋಹನ್ ದಾಸ್, ಸುರೇಂದ್ರನಾಥ್ ಬ್ಯಾನರ್ಜಿ ಈ ಮೂರು ಜನರ ಫೋಟೋಗಳನ್ನು ಮಿನ್ನೇರಿಸಿದರೂ ಸಹ ಅವು ಇಲ್ಲಿ ಕಂಡುಬರುತ್ತಿಲ್ಲ. ಹಾಗಾಗಿ ಚಾರ್ಲ್ಸ್ ವುಡ್, ಆನಂದ ಮೋಹನ್ ದಾಸ್, ಸುರೇಂದ್ರನಾಥ್ ಬ್ಯಾನರ್ಜಿ ಚಿತ್ರಕೃಪೆ: ಗೂಗಲ್ ಎನ್ನುವುದು ಹೆಚ್ಚುವರಿಯಾಗಿ ಅಚ್ಚಾಗಿದೆ. ಅದಕ್ಕಾಗಿ ಕ್ಷಮೆಯಿರಲಿ. ಸಂಪದದ ಆಡಳಿತ ಮಂಡಳಿಯು ಅದನ್ನು ಸರಿಪಡಿಸಲೆಂದು ಈ ಮೂಲಕ ವಿನಂತಿಕೊಳ್ಳುತ್ತೇನೆ. :)
In reply to ಉ: ಭಾಗ ೧೮ - ಮೇಕೆಯ ತೊಗಲು ಹೊದ್ದ ತೋಳ, ಮೆಕಾಲೆ ವಿದ್ಯಾ ವಿಧಾನ:... by makara
ಉ: ಭಾಗ ೧೮ - ಮೇಕೆಯ ತೊಗಲು ಹೊದ್ದ ತೋಳ, ಮೆಕಾಲೆ ವಿದ್ಯಾ ವಿಧಾನ:...
ಮಿನ್ನೇರಿಸು ಪದ ಆಕರ್ಷಣೀಯವಾಗಿದೆ.
In reply to ಉ: ಭಾಗ ೧೮ - ಮೇಕೆಯ ತೊಗಲು ಹೊದ್ದ ತೋಳ, ಮೆಕಾಲೆ ವಿದ್ಯಾ ವಿಧಾನ:... by nannisunil
ಉ: ಭಾಗ ೧೮ - ಮೇಕೆಯ ತೊಗಲು ಹೊದ್ದ ತೋಳ, ಮೆಕಾಲೆ ವಿದ್ಯಾ ವಿಧಾನ:...
ಆ ಪದವನ್ನು ಶಂಕರಭಟ್ಟರೆ ಹುಟ್ಟು ಹಾಕಿದ್ದು ನನ್ನಿ ಸುನೀಲರೆ :)
ಉ: ಭಾಗ ೧೮ - ಮೇಕೆಯ ತೊಗಲು ಹೊದ್ದ ತೋಳ, ಮೆಕಾಲೆ ವಿದ್ಯಾ ವಿಧಾನ:...
ಎಂದಿನಂತೆ ಈ ಸರಣಿಯ ಇತರೇ ಲೇಖನಗಳಂತೆ ಈ ಕಂತಿನ ಲೇಖನವನ್ನೂ ಹೃತ್ಪೂರ್ವಕವಾಗಿ ಸ್ವಾಗತಿಸಿ ಇದರ ಕೊಂಡಿಯನ್ನು ಫೇಸ್ ಬುಕ್ಕಿನಲ್ಲೂ ಹಂಚಿಕೊಂಡು ಹೆಚ್ಚಿನ ಓದುಗರನ್ನು ತಲುಪಲು ಅನುವು ಮಾಡಿಕೊಟ್ಟ ನಾಗೇಶರಿಗೂ ಹಾಗೂ ನಿರಂತರ ಪ್ರೋತ್ಸಾಹಿಸುತ್ತಿರುವ ಸಮಸ್ತ ಸಂಪದದ ವಾಚಕ ಮಿತ್ರರಿಗೂ ಧನ್ಯವಾದಗಳು. ಸುಭಾಷ್ ಚಂದ್ರ ಬೋಸ್ ಅವರು ಜನಿಸಿದ ಈ ಪುಣ್ಯ ದಿನದಂದು (೨೩-೦೧-೨೦೧೭) ಅಖಂಡ ಭಾರತದಲ್ಲಿ ಅತಂತ್ರವಾದ ಟಿಬೆಟ್ಟನ್ನು ಕುರಿತ ಈ ಸರಣಿಯ ಮುಂದಿನ ಲೇಖನ ಬ್ರಿಟಿಷರು ಪ್ರಸಾದಿಸಿದ ಭೌಗೋಳಿಕ ವಾರಸತ್ವವಿದು.....! ಪ್ರಕಟಿಸುತ್ತಿರುವುದು ಸಮಯೋಚಿತವೆನಿಸುತ್ತಿದೆ. ಆಸಕ್ತರು ಈ ಕೊಂಡಿಯನ್ನು ಚಿಟುಕಿಸಿhttps://sampada.net/blog/%E0%B2%AD%E0%B2%BE%E0%B2%97-%E0%B3%A7%E0%B3%AF-...
ಉ: ಭಾಗ ೧೮ - ಮೇಕೆಯ ತೊಗಲು ಹೊದ್ದ ತೋಳ, ಮೆಕಾಲೆ ವಿದ್ಯಾ ವಿಧಾನ:...
>>ಕ್ರಿ.ಶ. ೧೯೮೯ರಲ್ಲಿ ಕಾಂಗ್ರಸ್ ಅಧ್ಯಕ್ಷರಾಗಿದ್ದ ಆನಂದ್ ಮೋಹನ್ ಬೋಸ್ ಅವರು ಹೀಗೆ ಒಕ್ಕಣಿಸಿದ್ದಾರೆ. "ಭಾರತೀಯ ಮೇಧಾವಿಗಳು ಇಂಗ್ಲೆಂಡಿನ ಮಿತ್ರರು, ಶತ್ರುಗಳಲ್ಲ! ಇಂಗ್ಲೆಂಡು ದೇಶವು ಸಾಧಿಸಲು ಹೊರಟಿರುವ ಮಹತ್ತರವಾದ ಗುರಿಗಳನ್ನು ಹೊಂದಲು ಮಾಡುವ ಕೃಷಿಯಲ್ಲಿ ಅವರು (ಭಾರತೀಯ ಮೇಧಾವಿಗಳು) ಆ ದೇಶಕ್ಕೆ ಸಹಜವಾದ, ಅತ್ಯವಶ್ಯಕವಾದ ನಿಷ್ಠೆಯ ಅನುಯಾಯಿಗಳು........" << ಇಲ್ಲಿ ೧೮೯೮ರ ಬದಲಾಗಿ ೧೯೮೯ ಎಂದು ಕಣ್ತಪ್ಪಿನಿಂದಾಗಿ ಅಚ್ಚಾಗಿದೆ. ಅದನ್ನು ಸರಿಪಡಿಸಿಕೊಂಡು ಓದಬೇಕೆಂದು ವಾಚಕರಲ್ಲಿ ಮನವಿ ಮಾಡಿಕೊಳ್ಳುತ್ತಿದ್ದೇನೆ. ವಂದನೆಗಳೊಂದಿಗೆ, ಶ್ರೀಧರ್ ಬಂಡ್ರಿ :)