ಭಾಗ - ೧೯ ಮನುವಿನ ಧರ್ಮ, ನಮಗೆ ಬೇಡವಾದ ಮನು - ಪುಸ್ತಕಕ್ಕೆ ಬರೆದ ಮುನ್ನುಡಿ
ಮನುವಿನ ಧರ್ಮ, ನಮಗೆ ಬೇಡವಾದ ಮನು
ಲೇಖಕರ ಪರಿಚಯ
ಹೆಸರು : ಎಂ.ವಿ.ಆರ್. ಶಾಸ್ತ್ರಿ
ಜನನ: ೨೨ ಏಪ್ರಿಲ್, ೧೯೫೨; ಕೃಷ್ಣಾ ಜಿಲ್ಲೆಯ ಜಗ್ಗಯ್ಯಪೇಟ, ಆಂಧ್ರ ಪ್ರದೇಶ್
೧೯೭೫ರಲ್ಲಿ ಆಂಧ್ರಜ್ಯೋತಿಯಲ್ಲಿ ಗ್ರಾಮೀಣ ಭಾಗದ ಪತ್ರಕರ್ತರಾಗಿ (ಮೊಫಸಿಲ್ ವಿಲೇಕರಿ - ತೆಲುಗು) ಅಡಿಯಿರಿಸಿ ಆ ತಳಮಟ್ಟದ ಸ್ಥಾಯಿಯಿಂದ ಮೇಲ್ದರ್ಜೆಯ ಸ್ಥಾಯಿಗೆ ಏರಿದ್ದಾರೆ.
೧೯೭೮ರಿಂದ ೧೯೯೦ರವರೆಗೆ ’ಈ ನಾಡು’ ಪತ್ರಿಕೆಯಲ್ಲಿ ಸಹಾಯಕ ಸಂಪಾದಕರ ಹುದ್ದೆಯವರೆಗೆ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿದ್ದಾರೆ.
೧೯೯೦ರಿಂದ ೧೯೯೪ರವರೆಗೆ "ಆಂಧ್ರಭೂಮಿ"ಯಲ್ಲಿ ಸಹಸಂಪಾದಕರಾಗಿ ಮತ್ತು ೧೯೯೪ರಿಂದ ೨೦೧೭ ಜುಲೈವರೆಗೆ "ಆಂಧ್ರಭೂಮಿ" ದಿನಪತ್ರಿಕೆಯಲ್ಲಿ ಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ.
ನಾಲ್ಕು ದಶಕಗಳ ಪತ್ರಿಕಾರಂಗದಲ್ಲಿ ’ವೀಕ್ ಪಾಯಿಂಟ್’, ’ಉನ್ನಮಾಟ’ (ಪ್ರಚಲಿತ ಸಂಗತಿ), ಮೊದಲಾದ ಅಂಕಣಗಳ ಬರಹಗಾರರಾಗಿ ನೂರಾರು ಸಂಖ್ಯೆಯಲ್ಲಿ ಸಂಪಾದಕೀಯ ಮತ್ತು ವಿಶೇಷ ಲೇಖನಗಳನ್ನು ಬರೆದಿದ್ದಾರೆ.
ಪ್ರಕಾಶಗೊಂಡಿರುವ ಅವರ ಇತರೇ ಕೃತಿಗಳು (ತೆಲುಗು)
(ಇವುಗಳಲ್ಲಿ ಹಲವು ಪುಸ್ತಕಗಳು ಕನ್ನಡಕ್ಕೂ ಅನುವಾದಗೊಂಡಿವೆ)
ಅಸಲು ಮಹಾತ್ಮುಡು ಏದಿ ಚರಿತ್ರ
ಮನ ಚದುವುಲು ಇದಿ ಚರಿತ್ರ
ಕಾಶ್ಮೀರ್ ಕಥ ೧೮೫೭
ಕಾಶ್ಮೀರ್ ವ್ಯಥ ಮನ ಮಹಾತ್ಮುಡು
ಉನ್ನಮಾಟ ಅಲ್ಲೂರಿ ಸೀತಾರಾಮರಾಜು
ವೀಕ್ ಪಾಯಿಂಟ್ ಲೇ ಮೇಲುಕೋ
ಆಂಧ್ರುಲ ಕಥ ತೆಲುಗು ತಗವು
ಭಗತ್ ಸಿಂಗ್ ಐಲಯ್ಯ ಪೈತ್ಯಂ
****
ಈ ಪುಸ್ತಕವೇಕೆ?
ಈ ದಿನಗಳಲ್ಲಿ ಕೂತರೆ ಏಳಲಾರದವರು ಕೂಡಾ ಹಿಂದೂ ಧರ್ಮದ ಮೇಲೆ, ಹಿಂದೂಗಳ ಮನೋಭಾವ, ನಂಬಿಕೆ, ಆಚಾರ, ವಿಚಾರ, ಸಂಪ್ರದಾಯಗಳ ಮೇಲೆ ಹರಿಹಾಯಲು ತುದಿಗಾಲ ಮೇಲೆ ಎದ್ದು ನಿಲ್ಲುತ್ತಿದ್ದಾರೆ. ಕೆಲಸಕ್ಕೆ ಬಾರದ ಪತ್ರಿಕೆಗಳು, ಸುದ್ದಿ ವಾಹಿನಿಗಳು, ಕುಕ್ಕರುಗಾಲಿನಲ್ಲಿ ಕೂತುಕೊಂಡು ಚಿಕ್ಕಪುಟ್ಟ ವಿಷಯಗಳನ್ನೆಲ್ಲಾ ವಿವಾದಾಸ್ಪದವಾಗಿಸಿ, ದಾರಿಯಲ್ಲಿ ಹೋಗುವ ದಾಸಯ್ಯಗಳನ್ನೆಲ್ಲಾ ಒಂದೆಡೆ ಸೇರಿಸಿ, ಬಾಯಿಗೆ ಬಂದ ಹಾಗೆ ಕಿರುಚಿಸಿಸಿ ಹಿಂದೂ ಧರ್ಮದ ಮೇಲೆ ಕೆಸರೆರಚುವಂತೆ ಮಾಡಿ ಸೂಕರಾನಂದವನ್ನು ಪಡೆಯುತ್ತಿದ್ದಾರೆ. ನಿರಾಧಾರವಾದ ನಿಂದನೆಗಳು, ಇಲ್ಲಸಲ್ಲದ ಆರೋಪಗಳು, ಅಭೂತಪೂರ್ವವಾದ ಕಲ್ಪನೆಗಳು, ಹಸಿ ಹಸಿ ಸುಳ್ಳುಗಳನ್ನೂ ಸಹ ವಿಜ್ಞಾನದ ಮುಸುಗಿನಲ್ಲಿ ವೈಚಾರಿಕತೆಯ ಹೆಸರು ಹೇಳಿಕೊಂಡು ಸುದ್ದಿ ಮಾಧ್ಯಮಗಳ ಪ್ರೋದ್ಬಲ, ಪ್ರೋತ್ಸಾಹಗಳಿಂದ ಸೊಕ್ಕಿನಿಂದ ಬುದ್ಧಿಜೀವಿಗಳೆನಿಸಿಕೊಂಡವರು ಮಾತನಾಡುತ್ತಿದ್ದರೆ; ಅಮಾಯಕರಾದ ಜನಸಾಮಾನ್ಯರು ಅವು ನಿಜವಿರಬಹುದೆಂಬ ಭ್ರಮೆಯಲ್ಲಿ ಮುಳುಗಿ ಮೋಸಹೋಗುತ್ತಿದ್ದಾರೆ. ವಾಮಾಚಾರದ ವಾಮಪಕ್ಷಗಳು, ಬುದ್ಧಿ ಭ್ರಮಣೆಯಾಗಿರುವ ಬುದ್ಧಿಜೀವಿಗಳು, ವಿದೇಶಿ ಮತಗಳಿಗೆ ಮಾರಾಟವಾಗಿರುವ ಕತ್ತೆ ಕಿರುಬಗಳು ಮಾಡುತ್ತಿರುವ ಅವ್ಯಾಹತವಾದ, ದುರ್ಮಾರ್ಗದ ದಾಳಿಗಳ ದುಷ್ಪ್ರಭಾವಗಳಿಂದ ಕಕ್ಕಾಬಿಕ್ಕಿಯಾಗಿರುವ ಸಾಮಾನ್ಯ ಹಿಂದೂಗಳಿಗೂ ಸಹ ಇಲ್ಲಸಲ್ಲದ ಅನುಮಾನಗಳು ಉಂಟಾಗುತ್ತಿವೆ. ನಿಜವಾಗಲೂ ಹಿಂದೂ ಧರ್ಮದಲ್ಲಿ ನಾಚಿಕೆಪಟ್ಟುಕೊಳ್ಳುವಂತಹ, ಮುಚ್ಚುಮರೆ ಮಾಡಬೇಕಾದಂತಹ, ತಲೆತಗ್ಗಿಸುವಂತಹ ವಿಷಯಗಳು ಇರಬಹುದೇನೋ ಎಂದು ಕಳವಳಗೊಳ್ಳುತ್ತಿದ್ದಾರೆ. ಪ್ರತಿನಿತ್ಯ ಎಲ್ಲಾ ಕಡೆಗಳಿಂದ ಬಂದು ಬೀಳುವ ಎಗ್ಗು ಸಿಗ್ಗಿಲ್ಲದೆ ಹಿಂದೆ ಮುಂದೆ ನೋಡದೇ ಮೂಗಿನ ನೇರಕ್ಕೇ ಕೇಳುವ ಪ್ರಶ್ನೆಗಳಿಗೆ ಏನು ಉತ್ತರಿಸಬೇಕೋ, ತಮ್ಮ ನಿಲುವನ್ನು ಹೇಗೆ ಸಮರ್ಥಿಸಿಕೊಳ್ಳಬೇಕೋ, ಎದುರಾಳಿಗಳ ವಾದವನ್ನು ಹೇಗೆ ತರ್ಕಬದ್ಧವಾಗಿ, ಆಧಾರಗಳೊಂದಿಗೆ ಎದುರಿಸಬೇಕೋ ತಿಳಿಯದೆ ತತ್ತರಿಸುತ್ತಿದ್ದಾರೆ.
ನಿಜವಾಗಿ ನೋಡಿದರೆ ಇದು ಅನಾವಶ್ಯಕವಾದ ಹಗ್ಗ ಜಗ್ಗಾಟದ ಪ್ರಕ್ರಿಯೆ. ಅಮಾಯಕ ಕುರಿಗಳನ್ನು ಕಪಟ ತೋಳದಂತೆ ಹೊಂಚು ಹಾಕಿ ಕಬಳಿಸುವಂತೆ, ಪರಕೀಯರ ದುಡ್ಡಿನಾಸೆಗೆ ಜೊಲ್ಲುಸುರಿಸಿಕೊಂಡು ಅವರ ಕಡೆಗೆ ಕೊಡೆ ಹಿಡಿಯುವ ಲಜ್ಜೆಗೆಟ್ಟ ಮಾಧ್ಯಮಗಳವರು, ವಿಜ್ಞಾನವೆಂದರೇನಂದು ಅರಿಯದ ವೈಜ್ಞಾನಿಕ ಚಿಂತಕರು, ಸಾಮಾನ್ಯ ಜ್ಞಾನವಿಲ್ಲದ ಬಾಡಿಗೆ ಬುದ್ಧಿಜೀವಿಗಳು, ವಿಚಾರವಾದಿಗಳೆಂಬ ಭ್ರಮೆಯಲ್ಲಿರುವ ವಿಚಾರವ್ಯಾಧಿಗಳು, ಮುಂತಾದವರು ಕೇಳುವ ವಿವೇಚನಾರಹಿತ ಪ್ರಶ್ನೆಗಳಿಗೆ ಅವರು ನವರಂಧ್ರಗಳನ್ನು ಮುಚ್ಚಿಕೊಳ್ಳುವಂತಹ ಪ್ರತ್ಯುತ್ತರಗಳನ್ನು ನಾವು ಕೊಡಬಲ್ಲೆವು! ವಿರೋಧಿಗಳು ಎಸೆಯುವ ಪ್ರತಿ ಸವಾಲನ್ನೂ ಸ್ವೀಕರಿಸಿ, ಅನುಮಾನಕ್ಕೆಡೆಯಿಲ್ಲದ ಸಾಕ್ಷಾಧಾರಗಳಿಂದ ಮತ್ತು ಖಚಿತವಾದ ಚಾರಿತ್ರಿಕ ರುಜುವುಗಳೊಂದಿಗೆ ಅವರು ಕಮಕ್-ಕಿಮಕ್ ಎನ್ನದಂತೆ ಮಾಡಬಲ್ಲ ಅನೇಕ ಪ್ರಮಾಣಗಳನ್ನೂ ಸಹ ನಾವು ತೋರಿಸಬಲ್ಲವೆನ್ನುವುದು ನಮ್ಮಲ್ಲನೇಕರಿಗೆ ತಿಳಿಯದು. ಹಿಂದೂಗಳ ಪರವಾಗಿ ಮಾತನಾಡುವುದಕ್ಕೆ ಹಿಂದೂ ವಿರೋಧಿ ಮಾಧ್ಯಮಗಳು ಬಹಳ ಜಾಗರೂಕತೆಯಿಂದ ಆಯ್ಕೆ ಮಾಡುವ ಜಾಣರಿಗೆ ಏನು ಮಾತನಾಡಬೇಕು, ಹೇಗೆ ಮಾತನಾಡಬೇಕು ಎನ್ನುವುದು ತಿಳಿಯದು. ಅಸಲಿಗೆ ಅವರಿಗೆ ವಿಷಯದ ಮೇಲೆ ಪ್ರಭುತ್ವವೇ ಇರುವುದಿಲ್ಲ. ವಿಷಯದ ಮೇಲೆ ಹಿಡಿತವಿರುವವರಿಗೆ ಸಾಮಾನ್ಯವಾಗಿ ಅವಕಾಶ ಸಿಗುವುದಿಲ್ಲ, ಒಂದು ವೇಳೆ ಸಿಕ್ಕರೂ ಅವರಲ್ಲಿ ಬಹುತೇಕರು ವಿವಾದಗಳ ಸುಳಿಯೊಳಗೆ ಸಿಲುಕಿಕೊಳ್ಳಲು ಇಷ್ಟಪಡುವುದಿಲ್ಲ.
ಹಿಂದೂ ಧರ್ಮದ ಪರವಾಗಿ ಹೋರಾಡಲು ರಕ್ತ ಕುದಿಯುವ ಯುವಕ-ಯುವತಿಯರು ಲಕ್ಷ-ಲಕ್ಷ ಜನರಿದ್ದಾರೆ. ಆದರೆ ಅವರ ಕೈಯ್ಯಲ್ಲಿ ಸರಿಯಾದ ಪ್ರಚಾರಾಯುಧಗಳು ಇಲ್ಲ. ವಿರೋಧ ಪಕ್ಷದವರ ವಾದಸರಣಿಯನ್ನು ನಿಷ್ಪ್ರಯೋಜನಗೊಳಿಸಲು ಅವರ ಹತ್ತಿರ ಸರಿಯಾದ ಸಾಕ್ಷಾಧಾರಗಳು ಮತ್ತು ಪ್ರಮಾಣಗಳು ಹಾಗು ವಿಚಾರವಂತಿಕೆಯಿಂದ ಕೂಡಿದ ಆಯುಧಗಳನ್ನು ಕೊಟ್ಟಲ್ಲಿ ಅವರು ವೀರಭದ್ರರಂತೆ ಮುಂದಕ್ಕೆ ನುಗ್ಗಬಲ್ಲರು. ಸುಳ್ಳುಗಳ ಸರಮಾಲೆಯನ್ನು ತುಂಡರಿಸಿ, ಅವಶ್ಯವಾದರೆ ಆ ಸುಳ್ಳಿಗರನ್ನು ಒದ್ದು ಓಡಿಸಬಲ್ಲರು. ಸಾಮಾಜಿಕ ಜಾಲತಾಣಗಳಲ್ಲಿ ಈಗ ಹಿಂದೂ ಜನಾಂಗದಲ್ಲಿ ಉಕ್ಕಿ ಹರಿಯುತ್ತಿರುವ ಚೈತನ್ಯದ ಅಲೆಗಳಿಗೆ ವಾದಬಲವೂ ಸೇರಿಕೊಂಡರೆ ಅವು ಬಹುಮುಖವಾಗಿ ಕಾರ್ಯಪ್ರವೃತ್ತರಾಗಿರುವ ಹಿಂದೂ ದ್ರೋಹಿಗಳು ಮತ್ತು ಹಿಂದೂ ವಿರೋಧಿಗಳ ಕುಟಿಲ ಯೋಜನೆ, ಕುತಂತ್ರಗಳನ್ನು ಕುಟ್ಟಿ ಪುಡಿಪುಡಿ ಮಾಡಬಲ್ಲವು. ಪ್ರತಿ ಹಿಂದುವೂ ಧೈರ್ಯವಾಗಿ, ಸಮರ್ಥವಾಗಿ, ಪ್ರತಿಯೊಂದು ಅಂಶವನ್ನೂ ನಿರ್ಧಿಷ್ಟವಾಗಿ ಮತ್ತು ಕೂಲಂಕಷವಾಗಿ ಮಾತನಾಡಲು ಪ್ರಾರಂಭಿಸಿದರೆ ೬೦-೭೦ ವರ್ಷಗಳಿಂದ ನಮ್ಮ ದೇಶದ ಮೇಲೆ, ಧರ್ಮದ ಮೇಲೆ ಷಡ್ಯಂತ್ರವನ್ನು ರಚಿಸಿ ಅದರ ಪ್ರಕಾರ ವ್ಯವಸ್ಥಿತವಾಗಿ ದಾಳಿ ಮಾಡುತ್ತಿರುವ ನಕಲಿ ಜಾತ್ಯತೀತವಾದಿಗಳು, ಬುದ್ಧಿಜೀವಿಗಳು, ದುಷ್ಟರಾಜಕೀಯ ಮತ್ತು ದುಷ್ಟ ಮತೀಯ ಶಕ್ತಿಗಳ ಆಟವನ್ನು ಸಮರ್ಥವಾಗಿ ನಿರ್ನಾಮಗೊಳಿಸಬಹುದು.
ಹಿಂದೂ ಸಮಾಜದ ಮೇಲೆ ತೀವ್ರವಾದ ಆಕ್ಷೇಪಣೆ ಎತ್ತಬೇಕೆಂದಾಗಲೆಲ್ಲ ಜನರಿಗೆ ಮೊದಲು ನೆನಪಾಗುವುದೇ ಮನುಸ್ಮೃತಿ. ಇತ್ತೀಚೆಗೆ, ಹಿಂದೂ ವಿರೋಧಿ ಮಾಧ್ಯಮಗಳಲ್ಲಿ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡದಾಗಿ ಮನುಸ್ಮೃತಿಯ ಮೇಲೆ ಕೆಂಡ ಕಾರುತ್ತಿದ್ದಾರೆ. ಮನುವಾದ ಅಥವಾ ಮನುವಾದಿ ಎನ್ನುವುದು ಭಯಂಕರವಾದ ಅವಹೇಳನಕಾರಿ ಪದವಾಗಿದೆ. ಮನುಧರ್ಮಶಾಸ್ತ್ರದ ಹೆಸರು ಹೇಳುತ್ತಲೇ ಬಹಳ ಜನ ಹಿಂದೂಗಳು ಸಂಕಷ್ಟಕ್ಕೆ ಸಿಲುಕಿದಂತೆ ಒದ್ದಾಡುತ್ತಿದ್ದಾರೆ. ಎಲ್ಲಾ ಕೋನಗಳಿಂದ ಅದರ ಮೇಲೆ ಬರುತ್ತಿರುವ ಆಕ್ಷೇಪಣೆಗಳು, ಅಭ್ಯಂತರಗಳಿಗೆ ಹೇಗೆ ಸ್ಪಂದಿಸಬೇಕು ಎಂದು ತಿಳಿಯದೆ ಕಕ್ಕಾಬಿಕ್ಕಿಯಾಗುತ್ತಿದ್ದಾರೆ.
ಇದು ಎಲ್ಲರಿಗೂ ಗೊತ್ತಿರುವ ಕಥೆಯೇ! ಅಮಾಯಕನೊಬ್ಬ ಮೇಕೆಯೊಂದನ್ನು ಸಂತೆಯಲ್ಲಿ ಕೊಂಡು ಅದನ್ನು ಭುಜದ ಮೇಲೆ ಹೊತ್ತುಕೊಂಡು ತನ್ನ ಊರಿಗೆ ಪಯಣಿಸುತ್ತಿದ್ದ. ಅದನ್ನು ಹೇಗಾದರೂ ಮಾಡಿ ಲಪಟಾಯಿಸಬೇಕೆಂದು ನಾಲ್ಕು ಜನ ಮೋಸಗಾರರು ಆಲೋಚಿಸಿದರು. ಆ ವ್ಯಕ್ತಿಯು ಹೋಗುತ್ತಿದ್ದ ದಾರಿಯಲ್ಲಿ ನಾಲ್ಕು ಜನ ನಾಲ್ಕು ಕಡೆ ಹೊಂಚು ಹಾಕಿ ಕಾಯುತ್ತಿದ್ದರು. "ಅದೇನಯ್ಯ ನಾಯಿಯನ್ನು ಹೊತ್ತುಕೊಂಡು ಹೋಗುತ್ತಿದ್ದೀಯಾ?" ಎಂದು ಮೊದಲಿನವನು ಕೇಳಿದಾಗ ಅತ್ತಲಿರುವವನಿಗೆ ಕಣ್ಣು ಸರಿಯಾಗಿ ಕಾಣುವುದಿಲ್ಲವೆಂದು ಆ ಅಮಾಯಕ ತನ್ನಷ್ಟಕ್ಕೆ ತಾನೇ ಸಮಾಧಾನ ಪಟ್ಟುಕೊಂಡ. ಸ್ವಲ್ಪ ದೂರ ಸಾಗುತ್ತಿದ್ದಂತೆ ಮತ್ತೊಬ್ಬ, ಇನ್ನೂ ಸ್ವಲ್ಪ ಹೊತ್ತಿಗೆ ಮತ್ತೊಬ್ಬ ಹೀಗೆ ಮೂರನೆವನೂ ಸಹ ಅದೇ ಪ್ರಶ್ನೆಯನ್ನು ಕೇಳುವ ಹೊತ್ತಿಗೆ ಮೇಕೆಯನ್ನು ಹೊರುತ್ತಿದ್ದ ನಮ್ಮವನಿಗೆ ತನ್ನ ಕಣ್ಣುಗಳೇ ಸರಿಯಾಗಿ ಕಾಣುತ್ತಿಲ್ಲವೇನೋ ಎನ್ನುವ ಅನುಮಾನ ಕಾಡತೊಡಗಿತು. ಕಡೆಗೆ ನಾಲ್ಕನೆಯವನು ಸಹ ಅದೇ ಪ್ರಶ್ನೆಯನ್ನು ಕೇಳುತ್ತಿದ್ದಂತೆ, ನಿಜವಾಗಲೂ ತಾನು ಹೊತ್ತುಕೊಂಡಿರುವುದು ನಾಯಿಯನ್ನೇ ಎಂದು ನಂಬಿ ಅದನ್ನು ಅಲ್ಲೇ ಬಿಟ್ಟು ಪರಾರಿಯಾದ. ಆ ನಾಲ್ಕು ಜನ ಕದೀಮರು ಮೇಕೆಯನ್ನು ಹೊತ್ತೊಯ್ದು ಅದನ್ನು ಕೊಯ್ದು ತಿಂದು ತೇಗಿದರು. ಮನುಧರ್ಮಶಾಸ್ತ್ರದ ಕಥೆಯೂ ಸಹ ಇದೇ ತೆರನಾದದ್ದು. ಮನು ಮತ್ತು ಆತನ ಸ್ಮೃತಿಗಳು ಕೆಲಸಕ್ಕೆ ಬಾರದವುಗಳೆಂದು, ಅವು ಪ್ರಮಾದಕರವಾದವುಗಳೆಂದು, ಅನ್ಯಮತಗಳ ಏಜೆಂಟರು, ಬುದ್ಧಿಜೀವಿಗಳೆನಿಸಿಕೊಂಡವರು ಸಹ ತಲೆಮಾರುಗಳಿಂದ ಬಿಟ್ಟ ಕೆಲಸ ಬಿಟ್ಟು ಅದನ್ನೇ ಒತ್ತಿಒತ್ತಿ ಹೇಳುವ ಹೊತ್ತಿಗೆ ಅದು ನಿಜವಾಗಲೂ ಯಾವುದೇ ಕೆಲಸಕ್ಕೆ ಬಾರದೆಂದು, ಆಧುನಿಕ ಕಾಲಕ್ಕೆ ಅನರ್ಥಕವಾದದ್ದು ಎಂದು ಹಿಂದೂಗಳಲ್ಲಿ ಸಹ ವಿದ್ಯಾವಂತರನೇಕರಲ್ಲಿ ಗಟ್ಟಿಯಾದ ನಂಬಿಕೆಯುಂಟಾಗಿದೆ. ಮನುವಾದವನ್ನು, ಮನುಧರ್ಮ ಶಾಸ್ತ್ರವನ್ನು ಅವಹೇಳನ ಮಾಡುವುದೇ ಪ್ರಗತಿಪರ ದೃಷ್ಟಿಕೋನಕ್ಕೆ, ಆಧುನಿಕ ವೈಚಾರಿಕತೆಗೆ ಮೈಲಿಗಲ್ಲಾಗಿದೆ! ಆಸ್ತಿಕರಾ, ನಾಸ್ತಿಕರಾ, ಸಂಪ್ರದಾಯವಾದಿಗಳಾ, ಸಂಪ್ರದಾಯ ವಿರೋಧಿಗಳಾ ಎನ್ನುವ ವ್ಯತ್ಯಾಸವಿಲ್ಲದೆ ನಾಗರೀಕರೆಂದುಕೊಳ್ಳುವವರೆಲ್ಲರಿಗೂ ಮನುವು ಬದ್ಧ ಶತ್ರುವಾಗಿ ಹೋಗಿದ್ದಾನೆ!
ಹಿಂದೂ ಧರ್ಮವನ್ನು, ಸನಾತನ ಧರ್ಮವನ್ನು ಅಸಹ್ಯಪಟ್ಟುಕೊಳ್ಳುವ ವಿದೇಶಿ ಮತಸ್ಥರು, ವಿದೇಶಿಯರು, ಕಮ್ಯೂನಿಷ್ಟರು, ಮೊದಲಾದವರ ದೃಷ್ಟಿಯಲ್ಲಿ ಮನುಸ್ಮೃತಿ ಕೆಟ್ಟದ್ದೆಂಬ ಭಾವನೆಯುಂಟಾಗಿದ್ದರೆ ನಾವು ಬೇಸ್ತುಬೀಳುವ ಕೆಲಸವಿಲ್ಲ. ಆದರೆ ಸೋಜಿಗದಲ್ಲೇ ಸೋಜಿಗವೆನಿಸುವ ಸಂಗತಿ ಏನೆಂದರೆ ಹಿಂದೂ ಧರ್ಮವನ್ನು, ಸನಾತನ ಧರ್ಮವನ್ನು, ಗೌರವಿಸುತ್ತಾರೆಂದುಕೊಳ್ಳುವ ಮಹಾನುಭಾವರಲ್ಲಿ ಸಹ ಬಹುತೇಕರಿಗೆ ಮನುಸ್ಮೃತಿಯ ಮೇಲೆ ಅದೇ ವಿಧವಾದ ಹೀನ ಅಭಿಪ್ರಾಯವಿರುವುದು!
ಕಟ್ಟರ್ ಹಿಂದೂವಾದಿಗಳಾದ ಮತ್ತು ಹಿಂದೂ ಧರ್ಮಕ್ಕೋಸ್ಕರ ಪ್ರಾಣವನ್ನೇ ಅರ್ಪಿಸುತ್ತೇವೆಂದು ಹೇಳುವ ಶೇಖಡಾ ೮೦ರಷ್ಟು ಜನರೇ ಮನುವಿನ ಹೆಸರು ಹೇಳುತ್ತಲೇ ಹರಳೆಣ್ಣೆ ಕುಡಿದವರಂತೆ ಮುಖ ಸಿಂಡಿರಿಸಿಕೊಳ್ಳುತ್ತಾರೆ. "ಮನುವಾದ" ಎನ್ನುವ ಮಾತು ಕೇಳುತ್ತಲೇ ಮೈಮೇಲೆ ಹಾವು ಹರಿದಾಡಿದಂತೆ ಬೆಚ್ಚಿ ಬೀಳುತ್ತಾರೆ. ಮನುವಾದಿಗಳೆನ್ನುವ ಪಾಪಿಷ್ಠ ಮುದ್ರೆ ತಮ್ಮ ಮೇಲೆ ಎಲ್ಲಿ ಬೀಳುತ್ತದೋ ಎಂದು ನಿರಂತರವಾಗಿ ಬಹಳ ಎಚ್ಚರಿಕೆಯಿಂದಿರುತ್ತಾರೆ. "The Vishwa Hindu Parishad totally rejects the Manusmrithi as it has no place in a civilized and cultured Society". ನಾಗರೀಕ ಮತ್ತು ಸುಸಂಸ್ಕೃತ ಸಮಾಜದಲ್ಲಿ ಎಳ್ಳಷ್ಟೂ ಅವಕಾಶವಿಲ್ಲದಿರುವ ಮನುಸ್ಮೃತಿಯನ್ನು ವಿಶ್ವಹಿಂದೂ ಪರಿಷತ್ತು ಸಂಪೂರ್ಣವಾಗಿ ಬಹಿಷ್ಕರಿಸುತ್ತದೆ ಎಂದು ಅಶೋಕ್ ಸಿಂಘಲ್‌ರಂತಹ ಮಹನೀಯರೇ ಕೆಲವು ವರ್ಷಗಳ ಹಿಂದೆ ಅಧಿಕಾರಿಕವಾಗಿ ಪ್ರಕಟಿಸಿದ್ದಾರೆ. ಮನುಸ್ಮೃತಿ ಈ ಕಾಲಕ್ಕೆ ಕೆಲಸಕ್ಕೆ ಬಾರದೆಂದು ಅದೆಷ್ಟೋ ಮಂದಿ ಹೈಂದವ ಮತಾಚಾರ್ಯರು, ಆಧ್ಯಾತ್ಮಿಕ ಗುರುಗಳು ಖಂಡಿಸಿದ್ದಾರೆ. ತಾವು ಮನುವಾದವನ್ನು, ಮನುಧರ್ಮವನ್ನು ಒಂದಿಷ್ಟೂ ಸಮರ್ಥಿಸುವವರಲ್ಲವೆಂದೂ, ದಿಕ್ಕುದೆಸೆಯಿಲ್ಲದ ಮನುಸ್ಮೃತಿಯನ್ನು ಸೀಳಿ ಚಂಡಾಡುವುದರಲ್ಲಿ ತಾವು ಬೇರೆಯಾರಿಗೂ ಕಮ್ಮಿಯಿಲ್ಲವೆಂದು ನಿರೂಪಿಸಿಕೊಳ್ಳಲು ಹಿಂದೂ ಮೇಧಾವಿಗಳೇನಕರು ನಾನಾ ವಿಧವಾದ ತಾಪತ್ರಯಗಳನ್ನು ಪಡುತ್ತಿರುತ್ತಾರೆ. ಮನುಸ್ಮೃತಿಯನ್ನು ಸುಟ್ಟುಹಾಕಿ ಲೋಕೋತ್ತರವಾದ ಪುಣ್ಯಕಾರ್ಯದಲ್ಲಿ ಭಾಗಿಗಳಾದ್ದೀವೆಂದು ಬೀಗುವ ಹಿಂದೂಧರ್ಮದ ಕಟ್ಟಾಭಿಮಾನಿಗಳೂ ಇದ್ದಾರೆ!
ವಿಚಿತ್ರವಾದ ವಿಷಯವೇನೆಂದರೆ ನಮ್ಮವರು ಮನುವಾದವೆನ್ನುವ ಕೆಸರನ್ನು ತೊಳೆದುಕೊಳ್ಳಬೇಕೆಂದು ಎಷ್ಟು ಗಟ್ಟಿಯಾಗಿ ಪ್ರಯತ್ನಿಸುತ್ತಾರೋ ಅಷ್ಟೇ ಶಕ್ತಿಯುತವಾಗಿ ಅವರಿಗೆ ಮನುವಾದಿಗಳೆಂಬ ಹಣೆಪಟ್ಟಿ ಗಟ್ಟಿಯಾಗಿ ಅಂಟಿಕೊಳ್ಳುತ್ತಿದೆ. ಎಷ್ಟೇ ವಿಧವಾದ ಭೂತೋಚ್ಛಾಟನೆಗಳನ್ನು ಮಾಡಿಸಿದರೂ ಸಹ ’ಮನುಭೂತ’ವು ಅವರನ್ನು ಬಿಟ್ಟು ತೊಲಗುತ್ತಿಲ್ಲ. ಬ್ರಾಹ್ಮಣಾಧಿಕ್ಯ ಭಾವಬಲದಿಂದ ಬಡ, ಬಲಹೀನ, ದಲಿತ ವರ್ಗಗಳ ಮೇಲೆ ತಲತಲಾಂತರಗಳಿಂದ ಘೋರವಾದ ಮಹಾಪರಾಧಗಳೇನೋ ಘಟಿಸಿದವೆಂದು ಮೆಕಾಲೆ ಮಾನಸಪುತ್ರರ ದುಷ್ಪ್ರಚಾರಗಳನ್ನು ನಮ್ಮವರೂ ತಲೆಗೇರಿಸಿಕೊಂಡು ಆಗ ಜರುಗಿದ ಘೋರವಾದ ಚಾರಿತ್ರಿಕ ಮಹಾಪಾಪಗಳಿಗೆ ಪ್ರಾಯಶ್ಚಿತ್ತಗಳನ್ನು ಮಾಡಿಕೊಳ್ಳಬೇಕೆಂದು ಎಷ್ಟೇ ಕಾತುರತೆಯಿಂದ ತೊಳಲಾಡಿ ಬಾಯಿಬಾಯಿ ಬಡಿದುಕೊಂಡು ಸಂಕಟಪಟ್ಟರೂ ಸಹ ಪ್ರಯೋಜನವಿಲ್ಲದಂತಾಗಿದೆ.
ಅದಕ್ಕೆ ಕಾರಣವೊಂದೇ...... ಮೇಲ್ನೋಟಕ್ಕೆ ಗುಮ್ಮನೆಂದು ಮನುವಾದವನ್ನು ತೋರಿಸಿದರೂ ಸಹ ಅದರ ಹಿಂದಿರುವ ಅಸಲಿ ಉದ್ದೇಶ ಹಿಂದೂ ಧರ್ಮವನ್ನು ನಾಶ ಮಾಡಬೇಕೆನ್ನುವುದೇ ಆಗಿದೆ! ಮತ್ತದಕ್ಕೆ ಮೂಲಾಧಾರವಾಗಿರುವ ಸನಾತನ ಧರ್ಮವನ್ನು ನಾಶಮಾಡುವುದಾಗಿದೆ! ವೈಚಾರಿಕತೆ, ಮಾರ್ಕ್ಸ್‌ವಾದ, ಪ್ರಗತಿಪರಚಿಂತನೆ, ಮೂಲನಿವಾಸಿಗಳ ಮೇಲೆ ಅನುರಾಗ ಮೊದಲಾದ ಮುಸುಗುಗಳಲ್ಲಿ ದಾಳಿ ಮಾಡುತ್ತಿರುವುದು ಮೇಲ್ನೋಟಕ್ಕೆ ಮನಸ್ಸು ಗಾಯಗೊಂಡಂತೆ ಕಾಣುತ್ತಿರುವ ಹೆಚ್ಚು ಓದಿಕೊಂಡವರು! ವಾಸ್ತವವಾಗಿ ಅವರಿಗೆ ಬೆನ್ನಲುಬಾಗಿ ನಿಂತಿರುವುದು ಲಕ್ಷವಲ್ಲ ಕೋಟಿಗಟ್ಟಳೆ ರೂಪಾಯಿಗಳ ಬಂಡವಾಳ ಹೂಡಿರುವ ರಹಸ್ಯವಾದ ಕುಟಿಲ ಯೋಜನೆಗಳನ್ನು ರೂಪಿಸಿ ಜಾರಿಗೆ ತರುತ್ತಿರುವ ಹಿಂದೂ ಧರ್ಮದ ನಾಶವನ್ನು ಗುರಿಯಾಗಿಟ್ಟುಕೊಂಡಿರುವ ಅನ್ಯಮತಸ್ಥರಾದ ವಿದೇಶಿ ಶಕ್ತಿಗಳು! ಹಿಂಬಾಗಿಲಿನ ಮೂಲಕ ನಡೆಸುತ್ತಿರುವ ಅಂತರರಾಷ್ಟ್ರೀಯ ಷಡ್ಯಂತ್ರದ ರೂವಾರಿಗಳ ಅಸಲಿಯತ್ತನ್ನು ನಾವು ಅರ್ಥಮಾಡಿಕೊಂಡರಷ್ಟೆ ಮನುವಾದದ ಮೇಲೆ ನಿರಂತರವಾಗಿ, ಅದೊಂದನ್ನೇ ಲಕ್ಷವಾಗಿರಿಸಿಕೊಂಡು ದಾಳಿ ಮಾಡುತ್ತಿರುವ ಕಣ್ಣಿಗೆ ಕಾಣದ ಈ ಭಯಾನಕವಾದ ಕುತಂತ್ರಗಳನ್ನು ಅರ್ಥಮಾಡಿಕೊಳ್ಳಬಹುದು.
ಮನುವಿರೋಧಿಗಳನ್ನು ಮೀರಿದ ಮನುವಿನ ಕುರಿತು ವಿರೋಧವನ್ನು ಪ್ರದರ್ಶಿಸಿ ಎಷ್ಟು ವಿಧವಾಗಿ ಭ್ರಷ್ಟರಾದರೂ, ಮನುವಾದವೆನ್ನುವ ಮುದ್ರೆಯನ್ನು ಅಳಿಸಿಹಾಕಲಾಗದೆನ್ನುವುದನ್ನು ಅರಿತಮೇಲಾದರೂ ನಮ್ಮೆಲ್ಲರ ಆಲೋಚನಾ ವಿಧಾನವು ಬದಲಾಗುವುದೊಳಿತು. ಅಷ್ಟಕ್ಕೂ ಮನುವು ಮಾಡಿದ ತಪ್ಪೇನು? ಮನುಧರ್ಮದಲ್ಲಿರುವ ಲೋಪಗಳೇನು ಎನ್ನುವ ಸತ್ಯಾನ್ವೇಷಣೆಯಲ್ಲಿ ತೊಡಗಬೇಕು. ಮಾನವ ಸಮಾಜಕ್ಕೆ ನ್ಯಾಯಮಾರ್ಗವನ್ನು ನಿರ್ದೇಶಿಸಿದ ಮೊದಲು ಮನುಜನಾದ ಮನುವನ್ನು ಯಾವತ್ ಪ್ರಪಂಚವು ಕೊಂಡಾಡುತ್ತಿದ್ದರೆ, ಮನುವಿನ ವಾರಸುದಾರರೆಂದು ಹೆಮ್ಮೆಯಿಂದ ಹೇಳಿಕೊಳ್ಳಬೇಕಾದ ನಾವು ಅವನ ಹೆಸರನ್ನು ಜ್ಞಾಪಿಸಿಕೊಳ್ಳುವುದಕ್ಕೆ ನಾಚಿಕೆಯಿಂದ ತಲೆತಗ್ಗಿಸಿವಂತಹ ದುರವಸ್ಥೆಯಲ್ಲಿ ಏಕಿದ್ದೇವೆ ಎನ್ನುವುದನ್ನು ಆತ್ಮಾವಲೋಕನ ಮಾಡಿಕೊಳ್ಳಬೇಕು.
ಮನುಧರ್ಮ ಯಾವ ಕಾರಣಕ್ಕೆ ಕೆಟ್ಟದ್ದು? ಅದರಲ್ಲಿ ನಾಚಿಕೆಯಿಂದ ತಲೆಕೆಳಗು ಮಾಡುವಂತಹ ವಿಷಯಗಳೇನಿವೆ? ತರ್ಕಬದ್ಧವಾಗಿ ವಿವರಣೆಯನ್ನು ಕೊಡಲಾಗದ ಅಂಶಗಳು ಏನಿವೆ? ಸಭ್ಯ ಸಮಾಜಕ್ಕೆ ಕೆಲಸಕ್ಕೆ ಬಾರದ್ದೆಂದು ಸಾರಾಸಗಟಾಗಿ ತಳ್ಳಿಹಾಕಬೇಕಾದಂತಹ ದೋಷಪೂರಿತವಾದ ವಿಷಯಗಳು, ಸಂಗತಿಗಳು ಮನುಸ್ಮೃತಿಯಲ್ಲಿ ಏನೇನಿವೆ? ಮನುವನ್ನು ಆತನ ಧರ್ಮಶಾಸ್ತ್ರವನ್ನು ಸಂಪೂರ್ಣವಾಗಿ ವೈಜ್ಞಾನಿಕ ದೃಷ್ಟಿಕೋನದಿಂದ ಅಧ್ಯಯನ ಮಾಡಿ, ನಿಜಕ್ಕೂ ಅದು ಯಾವುದೇ ವಿಧದಲ್ಲಿ ಪ್ರಯೋಜನಕಾರಿಯಾದುದಲ್ಲವೆನ್ನುವ ನಿರ್ಣಯಕ್ಕೆ ಬಂದು ಮನುಸ್ಮೃತಿಯನ್ನು ಸಮುದ್ರಕ್ಕೆಸದರೆ ಯಾರಿಗೂ ಅಭ್ಯಂತರ ವ್ಯಕ್ತಮಾಡುವ ಕೆಲಸವಿಲ್ಲ. ಚೋದ್ಯವೇನೆಂದರೆ, ಈ ದಿನಗಳಲ್ಲಿ ಮನುಸ್ಮೃತಿಯನ್ನು ದ್ವೇಷಿಸುವವರಿಗೆ ನಿಜವಾಗಿ ಅದರಲ್ಲಿ ಏನಿದೆಯೋ ಸಾಧಾರಣವಾಗಿ ತಿಳಿಯದು. ಅರ್ದಂಬರ್ದ ವಿಷಯಗಳನ್ನು ತಿಳಿದುಕೊಂಡ ಬುದ್ಧಿಜೀವಿಗಳೆನಿಸಿಕೊಂಡ ಬಹುತೇಕರು ಎಲ್ಲಿಯೋ ಬರೆದ, ಯಾವಾಗಲೋ ಕೇಳಿದ್ದನ್ನೇ ನಿಜವೆಂದು ನಂಬಿ, ಅಲ್ಲಿಂದ ಇಲ್ಲಿಂದ ಕೆಲವು ಅರೆಬೆರೆ ಸೂತ್ರಗಳನ್ನು ಹೆಕ್ಕಿಕೊಂಡು ಮುಖಕ್ಕೆ ಹಿಡಿಯುವವರೇ ಬಹುದೊಡ್ಡ ಸಂಶೋಧಕರೆಂದು ಚಲಾವಣೆಯಾಗುತ್ತಿದ್ದಾರೆ! ಹಾಗೆ ನೋಡಿದರೆ, ಮನುವಿನ ಮೇಲೆ ಮನುಧರ್ಮದ ಮೇಲೆ ಗೌರವವಿರುವವರೂ ಸಹ ನಿಜವಾಗಿಯೂ ಅದನ್ನು ಸಂಪೂರ್ಣವಾಗಿ ಓದದವರೇ ಹೆಚ್ಚಾಗಿದ್ದಾರೆ. ಎತ್ತ ಸಾಗಬೇಕು ಎಂದು ಹೊಯ್ದಾಡುವ ಮನಸ್ಥಿತಿಯುಳ್ಳವರು ಹೆಚ್ಚಾಗಿರುವುದರಿಂದ ಮತ್ತು ವಿರೋಧಿಗಳ ಭಯಭೀತಗೊಳಿಸುವ ಯುದ್ಧೋನ್ಮಾದಪೂರಿತ ಧ್ವನಿಯಿಂದ ಪ್ರಭಾವಿತರಾಗಿ, ಮನುಸ್ಮೃತಿಯ ಮೇಲೆ ಗೌರವಿರುವವರೂ ಸಹ ನಿಜವಾಗಲೂ ಅದು ಬಹಳ ಕೆಟ್ಟದ್ದೇನೋ ಎನ್ನುವ ಭ್ರಮೆಗೊಳಗಾಗುತ್ತಿದ್ದಾರೆ!
ಏಕಾಏಕೀ ದಬ್ಬಾಳಿಕೆ ನಡೆಸುವುದು, ಬೆದರಿಸುವ ರೀತಿಯಲ್ಲಿ ಗುಟುರು ಹಾಕುವ ಮನುವಾದದ ವಿರೋಧಿಗಳನ್ನು ಗಟ್ಟಿಯಾಗಿ ಪ್ರಶ್ನಿಸಿದರೆ ಅವರ ಬಂಡವಾಳ ಹೊರಗೆ ಬೀಳುತ್ತದೆ. ೧೯೮೯ರಲ್ಲಿ ರಾಜಸ್ಥಾನದ ಜೈಪುರದಲ್ಲಿರುವ ಉಚ್ಚನ್ಯಾಯಾಲಯದ ಪ್ರಾಂಗಣದಲ್ಲಿ ಪ್ರತಿಷ್ಠಾಪಿಸಲ್ಪಟ್ಟ ಮನುವಿನ ವಿಗ್ರಹದ ವಿಷಯದಲ್ಲಿ ದೇಶಾದ್ಯಂತ ದೊಡ್ಡ ವಿರೋಧ ವ್ಯಕ್ತವಾಯಿತು. ಅದನ್ನು ಪುರಸ್ಕರಿಸಿ ಅಲ್ಲಿನ ನ್ಯಾಯಾಲಯವು ಮನುವಿನ ವಿಗ್ರಹವನ್ನು ಅಲ್ಲಿಂದ ತೆರವುಗೊಳಿಸುವಂತೆ ಆದೇಶಿಸಿತು; ಆ ಆದೇಶಕ್ಕೆ ಆಕ್ಷೇಪಣೆಯಾಗಿ ಸಲ್ಲಿಸಿದ ಅರ್ಜಿವಿಚಾರಣೆಯಲ್ಲಿ ವಿಗ್ರಹ ಸಮರ್ಥಕರು ಮಾಡಿದ ವಾದಕ್ಕೆ ಪ್ರತ್ಯರ್ಥಿಗಳು ಏನೂ ಉತ್ತರಿಸಲಾರದೇ ಹೋದರು. ನ್ಯಾಯಾಲಯವು, "ಪ್ರತ್ಯರ್ಥಿಗಳ ಉತ್ತರಕ್ಕಾಗಿ ಸಂಪೂರ್ಣ ಇಪ್ಪತ್ತು ನಿಮಿಷಗಳಷ್ಟು ಕಾಲ ಕಾದು ನೋಡಿ ಅವರು ಯಾವುದೇ ವಿಧವಾಗಿ ಉತ್ತರಿಸಲು ಅಸಮರ್ಥರಾಗಿದ್ದರೆಂದು ದಾಖಲಿಸಿ ತಾನು ವಿಗ್ರಹವನ್ನು ಸ್ಥಳಾಂತರಿಸಲು ಇತ್ತಿದ್ದ ಆದೇಶಕ್ಕೆ ತಡೆಯಾಜ್ಞೆ ನೀಡಿತು. (ಈ ವಿವರಗಳನ್ನು ಪುಸ್ತಕದ ಕಡೆಯಲ್ಲಿ ಕೊಟ್ಟಿರುವ ಅನುಬಂಧ ಮೂರರಲ್ಲಿ ನೋಡಬಹುದು).
ಇದು ಕೇವಲ ಒಬ್ಬ ಮನುವಿಗೆ, ಆತನ ಧರ್ಮಸೂತ್ರಗಳಿಗೆ ಮಾತ್ರವೇ ಸಂಬಂಧಿಸಿದ ವ್ಯವಹಾರವಾಗಿದ್ದರೆ ಆಧುನಿಕ ಸಮಾಜವು ಅಷ್ಟು ದೊಡ್ಡದಾಗಿ ತಲೆಕಡಿಸಿಕೊಳ್ಳುವ ಅವಶ್ಯಕತೆಯಿಲ್ಲ. ಆದರೆ ಮನುವಿನ ಮೇಲೆ ಬಂದೂಕಿನ ನಳಿಕೆಯನ್ನಿರಿಸಿ ಒಟ್ಟಾರೆಯಾಗಿ ಹಿಂದೂ ಧರ್ಮವನ್ನು, ವೈದಿಕ ಸಂಸ್ಕೃತಿಯನ್ನು, ನಮ್ಮ ಉಜ್ವಲ ಪರಂಪರೆಯನ್ನು, ನಾಶ ಮಾಡಬೇಕೆನ್ನುವ ಭಯಂಕರವಾದ ಹುನ್ನಾರ ನಡೆಯುತ್ತಿದೆ. ಅದಕ್ಕೇ ಹಿಂದೂ ಸಮಾಜ ಯಾವತ್ತೋ ಅಟ್ಟಕ್ಕೇರಿಸಿದ್ದ ಮನುಸ್ಮೃತಿಯನ್ನು ಗಟ್ಟಿಯಾಗಿ ಹಿಡಿದುಕೊಂಡು ಅದನ್ನು ದೂಷಿಸಿ, ಅನುಮಾನಿಸುವುದನ್ನೇ ಕಾಯಕ ಮಾಡಿಕೊಂಡಿದ್ದಾರೆ. ಎಲ್ಲಾ ಅನಿಷ್ಟಗಳಿಗೂ ಮನು ಮಹರ್ಷಿಯೇ ಮೂಲಕಾರಣನೆಂದು ಪದೇ ಪದೇ ಕಿರುಚಿಕೊಳ್ಳುವುದು ಹೆಚ್ಚಾಗಿದೆ. ನಾವು ಸುಮ್ಮನಿದ್ದರೂ ನಮ್ಮ ವಿರೋಧಿಗಳು ಸುಮ್ಮನಾಗುವುದಿಲ್ಲ. ಆದ್ದರಿಂದ ನಮಗೆ ಇಷ್ಟವಿರಲಿ ಬಿಡಲಿ ಅವರನ್ನು ನಿವಾಳಿಸಿ ಒಗೆಯುವುದರಲ್ಲಿ ತಪ್ಪೇನಿಲ್ಲ. ಅಂತಹ ಪುನರಾಲೋಚನೆಗೆ, ಪುನರ್ವಿಮರ್ಶೆಗೆ ಅಡಿಪಾಯ ಹಾಕುವುದೇ ಈ ಪುಸ್ತಕದ ಉದ್ದೇಶ.
ಇಷ್ಟು ಕೆಟ್ಟದಾಗಿ, ಮನುವಾದವನ್ನು ಭಯಂಕರ ಪಿಶಾಚಿಯಂತೆ ಚಿತ್ರೀಕರಿಸುವ, ಕುತರ್ಕಿಗಳ, ವಿತಂಡವಾದಿಗಳ ಹೇಳಿಕೆಗಳನ್ನು ಕೇಳಿ ಕೇಳಿ ಅದರ ಮೇಲೆ ಇಲ್ಲಸಲ್ಲದ ತಪ್ಪು ಅಭಿಪ್ರಾಯಗಳನ್ನು ಕಲ್ಪಸಿಕೊಂಡು ತೊಳಲಾಡುತ್ತಿರುವ ಜನಸಾಮಾನ್ಯರಿಗೆ ಈ ವಿವಾದದ ಎರಡೂ ಪಾರ್ಶ್ವಗಳ ಪರಿಚಯ ಮಾಡಿಕೊಡುವ ಪ್ರಯತ್ನವಿದು. ಇದು ಎಷ್ಟರ ಮಟ್ಟಿಗೆ ಸಫಲವಾಗಿದೆಯೋ ಎನ್ನುವುದನ್ನು ಪ್ರಾಜ್ಞರೇ ಹೇಳಬೇಕು.
ಭಾಗ್ಯನಗರ (ಹೈದರಾಬಾದ್) ಎಂ.ವಿ.ಆರ್. ಶಾಸ್ತ್ರಿ
ಜುಲೈ ೧, ೨೦೧೮
*****
ಈ ಸರಣಿಯ ಹಿಂದಿನ ಲೇಖನ ಭಾಗ - ೧೮ ಮನುವಿನ ಧರ್ಮ: ಪರಿಚ್ಛೇದ ೩ ಜೈಪೂರ್ ವಿಗ್ರಹ ವಿಜಯ ಓದಲು ಈ ಕೊಂಡಿಯನ್ನು ನೋಡಿ: https://sampada.net/blog/bhaaga-18-manauvaina-dharama-paraicachaeeda-3-jaaipaura-vaigaraha-vaijaya/17-10-2019/48954
Taxonomy Upgrade Extras: ಎಂ.ವಿ.ಆರ್ ಶಾಸ್ತ್ರಿ, ಮನುಧರ್ಮ
ಬ್ಲಾಗ್ ವರ್ಗಗಳು: ಮನುಸ್ಮೃತಿ, ಮನುಭೂತ
ಸರಣಿ: ಮನುವಿನ ಧರ್ಮ - ೧೯
Comments
ಆತ್ಮೀಯ ಸಂಪದಿಗರೇ, ಈ…
ಆತ್ಮೀಯ ಸಂಪದಿಗರೇ,
ಈ ಸರಣಿಯ ಲೇಖನಗಳನ್ನೆಲ್ಲಾ ವಾರದ ವಿಶೇಷ ಬರಹಗಳಲ್ಲೊಂದಾಗಿ ಆಯ್ಕೆ ಮಾಡಿ ಹೆಚ್ಚಿನ ವಾಚಕರು ಇಲ್ಲಿ ಚರ್ಚಿತವಾಗಿರುವ ವಿಷಯಗಳನ್ನು ತಿಳಿಯಲು ಅನುಕೂಲ ಮಾಡಿಕೊಟ್ಟ ಶ್ರೀಯುತ ಹರಿಪ್ರಸಾದ್ ನಾಡಿಗ್ ಮತ್ತು ಅಡ್ಡೂರು ಕೃಷ್ಣಾರಾವ್ ಅವರ ನೇತೃತ್ವದ ಸಂಪದದ ನಿರ್ವಾಹಕ ಮಂಡಳಿಯವರಿಗೆ ನನ್ನ ವಿಶೇಷ ಕೃತಜ್ಞತೆಗಳು. ಎಂದಿನಂತೆ ನನ್ನ ಬರಹಗಳನ್ನು ಓದಿ ಪ್ರೋತ್ಸಾಹಿಸುತ್ತಿರುವ ಸಂಪದದ ಸದಸ್ಯ ಮಿತ್ರರಿಗೂ ಸಹ ನನ್ನ ಅನಂತಾನಂತ ವಂದನೆಗಳು. ಮುನ್ನಡಿಯ ಬರಹ ಸ್ವಲ್ಪ ಕಟುವಾದ ಭಾಷೆಯಿಂದ ಕೂಡಿದೆ ಎನಿಸಿದರೆ ಅದಕ್ಕೆ ಕ್ಷಮೆಯಿರಲಿ, ಮೂಲ ಲೇಖಕರು ತಮ್ಮ ಸಾತ್ವಿಕ ಸಿಟ್ಟನ್ನು ಹಾಗೆ ಹೊರಹಾಕಿದ್ದಾರಷ್ಟೆ - ವಿರೋಧಿಗಳಿಗೆ ಗಟ್ಟಿಯಾಗಿ ಪ್ರತ್ಯುತ್ತರ ಕೊಡಬೇಕೆನ್ನುವ ಉದ್ದೇಶವಷ್ಟೇ ಇದರಲ್ಲಿ ಅಡಗಿದೆ :)
ಮುಂದಿನ ಲೇಖನ ಮಾಲಿಕೆಯೊಂದಿಗೆ ಮತ್ತೊಮ್ಮೆ ನಿಮ್ಮ ಮುಂದೆ ಬರುವೆ. ಅಲ್ಲಿಯವರೆಗೆ ಎಲ್ಲರಿಗೂ ನಮಸ್ಕಾರ, ಎಲ್ಲರಿಗೂ ಶುಭವಾಗಲಿ. -^-