ಭಾಗ - ೧ : ಪಾಂಚರಾತ್ರ ಆಗಮಗಳು (ಒಂದು ಕಿರು ಪರಿಚಯ)

ಭಾಗ - ೧ : ಪಾಂಚರಾತ್ರ ಆಗಮಗಳು (ಒಂದು ಕಿರು ಪರಿಚಯ)

ಪಾಂಚರಾತ್ರ ಆಗಮಗಳು
(ಒಂದು ಕಿರು ಪರಿಚಯ)
- ಸ್ವಾಮಿ ಹರ್ಷಾನಂದ.
ಪ್ರಕಟಣೆ: ರಾಮಕೃಷ್ಣ ಮಠ, ಬೆಂಗಳೂರು - ೫೬೦ ೦೧೯, ಕರ್ನಾಟಕ.
****
ಮುನ್ನುಡಿ
          ಭಾಗವತ ಪಂಥವು ಹಲವಾರು ಧಾರ್ಮಿಕ ಗ್ರಂಥಗಳನ್ನು ಆಧರಿಸಿದೆ. ಮಹಾಭಾರತದ ನಾರಯಣೀಯ ಖಂಡದ ಶಾಂತಿಪರ್ವ (ಅಧ್ಯಾಯ ೩೩೪ರ ನಂತರ), ಭಗವದ್ಗೀತೆ, ವಿಷ್ಣುಪುರಾಣ, ಭಾಗವತಪುರಾಣ ಮತ್ತು ನಾರದ ಹಾಗು ಶಾಂಡಿಲ್ಯರ ಭಕ್ತಿ ಸೂತ್ರಗಳಿಂದಲೂ ಅವು ಪ್ರಭಾವಿತಗೊಂಡಿವೆ. 
          ಭಾಗವತ ಪಂಥದಲ್ಲಿ ಪ್ರಮುಖವಾಗಿ ಎರಡು ಪಂಗಡಗಳಿವೆ – ‘ಪಾಂಚರಾತ್ರ’ ಮತ್ತು ‘ವೈಖಾನಸ’. ಮೊದಲನೆಯದಾದ ಪಾಂಚರಾತ್ರ ಪಂಗಡವು ವಿಪುಲವಾದ ಆಗಮ ಸಾಹಿತ್ಯವನ್ನು ಹೊಂದಿ ಹೆಚ್ಚು ಜನಪ್ರಿಯವಾಗಿದೆ ಮತ್ತು ಬಹುತೇಕ ವೈಷ್ಣವ ದೇವಾಲಯಗಳು ಈ ಪದ್ಧತಿಯನ್ನು ಅನುಸರಿಸುತ್ತವೆ. ಪಾಂಚರಾತ್ರ ಪದ್ಧತಿಯ ಒಂದು ಸ್ಥೂಲ ಪರಿಚಯವು ಹಿಂದೂ ಧರ್ಮದ ವಿವಿಧ ಪಂಥಗಳನ್ನು ತಿಳಿಯಬಯಸುವವರಿಗೆ ಮತ್ತು ಹೆಚ್ಚು ಪರಿಚಿತವಲ್ಲದ ಈ ಪಂಥದ ಕುರಿತು ತಿಳಿಯಲಿಚ್ಛಿಸುವವರಿಗೆ ಈ ಪುಟ್ಟ ಹೊತ್ತುಗೆಯ ಅವಲೋಕನವು ಉಪಯೋಗವಾಗವಾದರೆ ನಮ್ಮ ಶ್ರಮ ಸಾರ್ಥಕವಾದಂತೆ. 
-ಸ್ವಾಮಿ ಹರ್ಷಾನಂದ
ಪರಿಚಯ
ಆಗಮಗಳು ಹಿಂದೂ ಧಾರ್ಮಿಕ-ವೈಚಾರಿಕ ಸಾಹಿತ್ಯದ ವಿಶೇಷ ಕೃತಿಗಳಾಗಿದ್ದು ಅವು ಪುರಾತನ ಕಾಲದಿಂದಲೂ ಗುರುಮುಖೇನ ಪೀಳಿಗೆಯಿಂದ ಪೀಳಿಗೆಗೆ ಹರಿದುಬಂದಿವೆ.
ಆಗಮಗಳು ವೈದಿಕ ಪದ್ಧತಿಗಳಿಗೆ ಸ್ವತಂತ್ರವಾಗಿ, ಪರ್ಯಾಯವಾಗಿ ಬೆಳೆದುಬಂದಂತಹುವೇ ಅಥವಾ ಅವುಗಳ ಮುಂದುವರೆದ ಭಾಗಗಳೇ ಎನ್ನುವುದನ್ನು ನಿರ್ಧರಿಸುವುದು ವಿದ್ವಾಂಸರಿಗೆ ಬಿಟ್ಟಿರತಕ್ಕಂತಹ ವಿಚಾರ.
ಅದೇನೆ ಇರಲಿ, ಯಾಮುನಾಚಾರ್ಯರು (ಕ್ರಿ.ಶ. ೯೧೮ - ೧೦೩೮) ತಮ್ಮ ಪಾಂಡಿತ್ಯಪೂರ್ಣವಾದ ’ಆಗಮಪ್ರಮಾಣ್ಯ’ ಕೃತಿಯಲ್ಲಿ ಅನುಮಾನಕ್ಕೆಡೆಯಿಲ್ಲದಂತೆ ಪಾಂಚರಾತ್ರ ಆಗಮಗಳ ಮೂಲವು ವೇದಗಳಲ್ಲಿದೆ ಎಂದು ನಿರೂಪಿಸಿರುತ್ತಾರೆ.
ಪ್ರಚಲಿತವಿರುವ ಮೂರು ವಿಧದ ಆಗಮಗಳಾದ ಶೈವ, ಶಾಕ್ತ (ಅಥವಾ ತಂತ್ರ) ಮತ್ತು ವೈಷ್ಣವಗಳಲ್ಲಿ, ಪಾಂಚರಾತ್ರಾಗಮನಗಳು ಕಡೆಯ ಪ್ರಕಾರಕ್ಕೆ ಸೇರುತ್ತವೆ.
ವೈಷ್ಣವಾಗಮಗಳ ಇನ್ನೊಂದು ಶಾಖೆಯೇ ’ವೈಖಾನಸ ಆಗಮ’ ಅಥವಾ ’ವೈಖಾನಸ ಸೂತ್ರ’ಗಳು.
ಪಾಂಚರಾತ್ರದ ನಾಮ ಸ್ವರೂಪ
ಪಾಂಚರಾತ್ರದ ಶಬ್ದಶಃ ಅರ್ಥವು - ಯಾವುದು ಐದು ರಾತ್ರಿಗಳಿಗೆ ಸಂಬಂಧಿಸಿದೆಯೋ ಅದು ಎಂದಾಗುತ್ತದೆ.
ಕೇಶವ ದೇವರು (ವಿಷ್ಣು ಅಥವಾ ನಾರಾಯಣ) ಈ ಬ್ರಹ್ಮ ವಿದ್ಯೆಯನ್ನು ಅನಂತ, ಗರುಡ, ವಿಷ್ವಕ್ಸೇನ, ಬ್ರಹ್ಮ ಮತ್ತು ರುದ್ರರಿಗೆ ಐದು ರಾತ್ರಿಗಳ ಪರ್ಯಂತ (ಪಾಂಚರಾತ್ರ) ಉಪದೇಶಿಸಿದನೆಂದು ಹೇಳಲಾಗುತ್ತದೆ.
ರಾತ್ರ ಶಬ್ದಕ್ಕೆ ಜ್ಞಾನವೆನ್ನುವ ಅರ್ಥವೂ ಇದೆ. ಅದು ಐದು ವಿಧವಾದ ಜ್ಞಾನಗಳನ್ನು ಹೇಳಿಕೊಡುವುದರಿಂದ ಅದನ್ನು ಪಾಂಚರಾತ್ರ ಎಂದು ಕರೆಯಲಾಗಿದೆ. ಅವುಗಳೆಂದರೆ, ತತ್ತ್ವ (ಪಂಚಭೂತಗಳೇ ಮೊದಲಾದ ತತ್ತ್ವಗಳು), ಮುಕ್ತಿಪ್ರದ (ಯಾವುದು ಮುಕ್ತಿಯನ್ನುಂಟು ಮಾಡುತ್ತದೆಯೋ ಅದು), ಭಕ್ತಿಪ್ರದ (ಯಾವುದು ಭಕ್ತಿಯನ್ನುಂಟು ಮಾಡುತ್ತದೋ ಅದು), ಯೌಗಿಕ (ಯೋಗ ಮಾರ್ಗ); ವೈಷಯಿಕ (ವಿಷಯ ಅಥವಾ ಪ್ರಾಪಂಚಿಕ ಭೋಗಲಾಲಸೆಗಳಿಗೆ ಸಂಬಂಧಿಸಿದ್ದು).
ಪಾಂಚರಾತ್ರವನ್ನು ಇನ್ನೊಂದು ವಿಧವಾಗಿಯೂ ವ್ಯಾಖ್ಯಾನಿಸಬಹುದು. ಅದೆಂದರೆ, ಅದು ದೇವರ (ಪುರುಷೋತ್ತಮ) ಐದು ರೂಪಗಳನ್ನು ಕುರಿತು ಚರ್ಚಿಸುವುದರಿಂದ ಅದು ಪಾಂಚರಾತ್ರವಾಗಿದೆ. ಐದು ರೂಪಗಳು - ಪರಾ (ಅತ್ಯುನ್ನತವಾದ ರೂಪ), ವ್ಯೂಹ (ಮೂಲ ರೂಪದಿಂದ ಮಾರ್ಪಟ್ಟು ಹೊರಹೊಮ್ಮಿದ ರೂಪ), ವಿಭವ (ಅವತಾರ ರೂಪ ಅಂದರೆ ಮಾನವನ ರೂಪದಲ್ಲಿ ಅವತರಣ), ಅಂತರ್ಯಾಮಿ (ಅಂತರಂಗದಲ್ಲಿ ನೆಲೆಸಿರುವ ರೂಪ) ಮತ್ತು ಅರ್ಚ (ಅರ್ಚನೆಯ ರೂಪ).
ಪಾಂಚರಾತ್ರಕ್ಕೆ ಸಂಬಂಧಿಸಿದ ಸಾಹಿತ್ಯ
ಪಾಂಚರಾತ್ರ ಸಾಹಿತ್ಯವು ಬಹಳ ವಿಪುಲವಾಗಿದೆ. ಪಾಂಚರಾತ್ರ ಸಾಹಿತ್ಯವನ್ನು ಸಾಮಾನ್ಯವಾಗಿ ’ಸಂಹಿತೆ’ ಅಥವಾ ’ತಂತ್ರ’ ಎಂದು ಕರೆಯಲಾಗಿದೆ. ಇಂದು ಲಭ್ಯವಿರುವ ವಿವಿಧ ಗ್ರಂಥಗಳಲ್ಲಿ ಉಲ್ಲೇಖಿಸಲ್ಪಟ್ಟಿರುವ ಗ್ರಂಥಗಳನ್ನು ಕ್ರೋಢೀಕರಿಸಿ ಹೇಳುವುದಾದರೆ ಪಾಂಚರಾತ್ರದ ಒಟ್ಟು ಕೃತಿಗಳ ಸಂಖ್ಯೆಯು ಇನ್ನೂರಕ್ಕೂ ಹೆಚ್ಚು. ಇದರಲ್ಲಿ ಕೆಲವು ಮಾತ್ರವೇ ಮುದ್ರಣಗೊಂಡಿವೆ. ಹಲವಾರು ಗ್ರಂಥಗಳು ತಾಳೆಗರಿಗಳಲ್ಲಿ ಪುರಾತನ ಗ್ರಂಥಗಳನ್ನು ಸಂಗ್ರಹಿಸಿಡುವ ಪೌರ್ವಾತ್ಯ ಗ್ರಂಥ ಭಂಡಾರಗಳಲ್ಲಿ ನಮಗೆ ಲಭ್ಯವಿವೆ. ಇನ್ನೂ ಅನೇಕವು ಇಂದು ನಮಗೆ ಯಾವ ವಿಧದಲ್ಲಿಯೂ  ಲಭ್ಯವಿಲ್ಲ - ಗ್ರಂಥಗಳ ಹೆಸರನ್ನು ನಾವು ಇತರೇ ಕೃತಿಗಳಲ್ಲಿ ನೋಡಬಹುದಷ್ಟೇ!
ಈಗ ಲಭ್ಯವಿರುವ ಕೃತಿಗಳು ಮತ್ತು ಅವುಗಳ ಸಾರಾಂಶಗಳು ಸ್ಥೂಲವಾಗಿ ಈ ಕೆಳಕಂಡಂತೆ ಇವೆ.
) ಅಹಿರ್ಬುದ್ನ್ಯ ಸಂಹಿತಾ - ೬೦ ಅಧ್ಯಾಯಗಳಲ್ಲಿ ೩೮೮೦ ಶ್ಲೋಕಗಳನ್ನೊಳಗೊಂಡ ಇದು ಸ್ವಲ್ಪ ಬೃಹತ್ತಾಗಿಯೇ ಇರುವ ಕೃತಿ. ಈ ಕೃತಿಯ ವಿಶೇಷವೇನೆಂದರೆ, ಇದು ಭಗವಂತನ ನಾಲ್ಕು ವ್ಯೂಹಗಳು ಅಥವಾ ರೂಪಾಂತರಗಳನ್ನು ಕುರಿತು ಹೇಳುವುದರೊಂದಿಗೆ ಅನೇಕ ಮಂತ್ರಗಳ ಬೀಜಾಕ್ಷರಗಳ ಕುರಿತು ಹೇಳುತ್ತದೆ. ಅದರೊಂದಿಗೆ ಈ ಕೃತಿಯು ರೋಗ ನಿವಾರಕ ಯಂತ್ರಗಳ ರಚನೆಯ ಕುರಿತ ವಿವರಣೆಗಳನ್ನೂ ಒಳಗೊಂಡಿದೆ.
) ಅನಿರುದ್ಧ ಸಂಹಿತಾ - ಈ ಕೃತಿಯನ್ನು ’ಅನಿರುದ್ಧಸಂಹಿತಾ ಮಹೋಪನಿಷದ್’ ಎಂದೂ ಕರೆಯಲಾಗುತ್ತದೆ. ಈ ಗ್ರಂಥವು ೩೪ ಅಧ್ಯಾಯಗಳನ್ನೊಳಗೊಂಡು ವಿವಿಧ ಅರ್ಚನಾ ವಿಧಾನಗಳು, ದೀಕ್ಷಾ ಪದ್ಧತಿಗಳು, ಪಾಪ ಪರಿಹಾರರ್ಥವಾಗಿ ಕೈಗೊಳ್ಳಬೇಕಾದ ಪ್ರಾಯಶ್ಚಿತ್ತ ವಿಧಾನಗಳೊಂದಿಗೆ ದೇವರ ವಿಗ್ರಹಗಳನ್ನು ಪ್ರತಿಷ್ಠಾಪಿಸುವಾಗ ಅನುಸರಿಸಬೇಕಾದ ಹಲವು ವಿಧಿ ವಿಧಾನಗಳಿಗೆ ಸಂಬಂಧಿಸಿದ ವಿಷಯಗಳನ್ನು ತಿಳಿಸುತ್ತದೆ. 
) ಹಯಶೀರ್ಷ ಸಂಹಿತಾ - ‌ಇದು ೧೪೪ ಅಧ್ಯಾಯಗಳು ಮತ್ತು ನಾಲ್ಕು ಕಾಂಡಗಳನ್ನೊಳಗೊಂಡ ಬೃಹದ್ಗ್ರಂಥವಾಗಿದೆ. ಅವೆಂದರೆ ಕ್ರಮವಾಗಿ, ಪ್ರತೀಕ್ಷಾಕಾಂಡ, ಸಂಕರ್ಷಣ ಕಾಂಡ, ಲಿಂಗಕಾಂಡ ಮತ್ತು ಸೌರಕಾಂಡ. ಈ ಕೃತಿಯಲ್ಲಿ ವಿಶೇಷವಾಗಿ ಪರಿವಾರ ದೇವತಾ ಮೂರ್ತಿಗಳ ಪ್ರತಿಷ್ಠಾಪನೆ ಮತ್ತು ಅವುಗಳನ್ನು ತಯಾರಿಸುವ ವಿಧಾನಗಳನ್ನು ವಿವರಿಸಲಾಗಿದೆ.
) ಈಶ್ವರ ಸಂಹಿತಾ - ಈ ಗ್ರಂಥವು ೨೪ ಅಧ್ಯಾಯಗಳನ್ನೊಳಗೊಂಡಿದ್ದು ಅದರಲ್ಲಿ ೧೬ ಅಧ್ಯಾಯಗಳು ಉಪಾಸನಾ ವಿಧಾನಗಳ ಕುರಿತು ಚರ್ಚಿಸುತ್ತವೆ. ಈ ಗ್ರಂಥವು ಒಳಗೊಂಡಿರುವ ಇತರ ವಿಷಯಗಳೆಂದರೆ - ವಿಗ್ರಹಗಳ ವಿವರಣೆ, ದೀಕ್ಷಾ ಪದ್ಧತಿ, ಧ್ಯಾನದ ಅಭ್ಯಾಸ, ಮಂತ್ರಗಳ ವಿವರಣೆ, ಇಂದ್ರಿಯ ನಿಗ್ರಹದ ವಿಧಾನಗಳು ಮತ್ತು ಯಾದವಾದ್ರಿ ಅಥವಾ ಮೇಲುಕೋಟೆಯ ಮಹಿಮೆ. (ಮೇಲುಕೋಟೆಯು ಮೈಸೂರಿನ ಸಮೀಪವಿರುವ ಮಂಡ್ಯ ಜಿಲ್ಲೆಗೆ ಸೇರಿದ ಬೆಟ್ಟದ ಮೇಲಿರುವ ವೈಷ್ಣವ ಕ್ಷೇತ್ರವೆನ್ನುವುದು ಬಹುತೇಕರಿಗೆ ತಿಳಿದಿರುವ ವಿಷಯವೇ ಆಗಿದೆ).
 ) ಜಯಾಖ್ಯ ಸಂಹಿತಾ - ಪಾಂಚರಾತ್ರ ಸಾಹಿತ್ಯಕ್ಕೆ ಸಂಬಂಧಿಸಿದಂತೆ ಪ್ರಮುಖವಾಗಿರುವ ಮೂರು ಕೃತಿಗಳಲ್ಲೊಂದು ಈ ಗ್ರಂಥ. ಇದರಲ್ಲಿ ೩೩ ಪಾಠಾಳಗಳು ಅಥವಾ ಅಧ್ಯಾಯಗಳಿವೆ ಮತ್ತು ಅವು ಈ ಕೆಳಗಿನ ವಿಷಯಗಳನ್ನು ಕುರಿತು ಚರ್ಚಿಸುತ್ತವೆ - ಸೃಷ್ಟಿ ಕ್ರಿಯೆಯ ಅಮೂಲಾಗ್ರ ವಿವರಣೆ; ಯೋಗಾಭ್ಯಾಸ, ಮಂತ್ರೋಪಾಸನೆ, ವಿವಿಧ ವೈಷ್ಣವ ಮಂತ್ರಗಳು, ಪೂಜೆ ಮತ್ತು ಹೋಮಗಳು, ಮಂತ್ರ ದೀಕ್ಷೆ, ದೇವಸ್ಥಾನಗಳು ಮತ್ತು ಅವುಗಳಲ್ಲಿನ ಪೂಜಾ ಪದ್ಧತಿಗಳು; ವೈಷ್ಣವ ಆಚಾರಗಳು ಮತ್ತು ಪಾಪ ಪರಿಹಾರಕ್ಕಾಗಿ ಕೈಗೊಳ್ಳಬೇಕಾದ ಪ್ರಾಯಶ್ಚಿತ್ತ ವಿಧಾನಗಳು.
) ಕಾಶ್ಯಪ ಸಂಹಿತಾ - ಇದು ಇತರ ಕೃತಿಗಳಿಗೆ ಹೋಲಿಸಿದಲ್ಲಿ ೧೨ ಅಧ್ಯಾಯಗಳನ್ನೊಳಗೊಂಡ ಬಹಳ ಕಿರಿದಾದ ಗ್ರಂಥ. ಇದು ಪ್ರಮುಖವಾಗಿ ವಿವಿಧ ವಿಷಗಳು ಮತ್ತು ಸೂಕ್ತ ಮಂತ್ರಗಳ ಮೂಲಕ ಅವುಗಳನ್ನು ನಿವಾರಿಸುವ ಉಪಾಯಗಳನ್ನು ಕುರಿತು ಚರ್ಚಿಸುತ್ತದೆ.
) ಮಹಾ ಸನತ್ಕುಮಾರ ಸಂಹಿತಾ - ಇದು ಒಂದು ಬೃಹದ್ಗ್ರಂಥವಾಗಿದ್ದು, ಇದರಲ್ಲಿ ಒಟ್ಟು ಹತ್ತು ಸಾವಿರ ಶ್ಲೋಕಗಳಿವೆ, ಅವು ನಲವತ್ತು ಪ್ರಕರಣಗಳನ್ನೊಳಗೊಂಡ ೪ ಅಧ್ಯಾಯಗಳಲ್ಲಿ ಹಂಚಲ್ಪಟ್ಟಿವೆ. ಈ ಗ್ರಂಥವು ಸಂಪೂರ್ಣವಾಗಿ ವಿವಿಧ ರೀತಿಯ ಉಪಾಸನಾ ಪದ್ಧತಿಗಳನ್ನು ವಿವರಿಸುವುದಕ್ಕೆ ಮೀಸಲಾಗಿದೆ. 
) ಪದ್ಮ ಸಂಹಿತಾ - ಈ ಗ್ರಂಥವು ಪ್ರಮುಖವಾಗಿ ಪೂಜಾ ಪದ್ಧತಿ ಹಾಗು ಮಂತ್ರೋಚ್ಛಾರಣೆಗೆ ಸಂಬಂಧಿಸಿದ ವಿಷಯಗಳನ್ನು ಚರ್ಚಿಸುತ್ತದೆ. ಈ ಕೃತಿಯು ೩೧ ಅಧ್ಯಾಯಗಳನ್ನು ಒಳಗೊಂಡಿದೆ.
) ಪರಮ ಸಂಹಿತಾ - ಈ ಗ್ರಂಥವೂ ಸಹ ೩೧ ಅಧ್ಯಾಯಗಳನ್ನು ಒಳಗೊಂಡು ಈ ಕೆಳಕಂಡ ವಿವಿಧ ವಿಷಯಗಳನ್ನು ಚರ್ಚಿಸುತ್ತದೆ - ಸೃಷ್ಟಿ ಕ್ರಿಯೆ, ಮಂತ್ರ ದೀಕ್ಷೆ ಮತ್ತು ಪೂಜಾ ಕ್ರಮಗಳು ಹಾಗು ಜ್ಞಾನಯೋಗ ಮತ್ತು ಕರ್ಮಯೋಗವೆಂದು ವಿಭಜಿಸಲಾದ ಯೋಗ.
ಈ ಗ್ರಂಥವು ಪ್ರಾಣಯಾಮ ಮತ್ತು ಸಮಾಧಿ ಸ್ಥಿತಿಗಳನ್ನೊಳಗೊಂಡ ಜ್ಞಾನಯೋಗವು ಕರ್ಮಯೋಗಕ್ಕಿಂತ ಮಿಗಿಲಾದುದು ಎಂದು ಘೋಷಿಸುತ್ತದೆ. ಇಲ್ಲಿ ಕರ್ಮಯೋಗವೆಂದರೆ ವಿಷ್ಣುವನ್ನು ಪೂಜಿಸುವ ವಿವಿಧ ಉಪಾಸನಾ ಕ್ರಮಗಳು.
೧೦) ಪರಮೇಶ್ವರ ಸಂಹಿತಾ - ಇದು ಕೇವಲ ಹದಿನೈದು ಅಧ್ಯಾಯಗಳನ್ನೊಂಡ ಬಹು ಚಿಕ್ಕದಾದ ಗ್ರಂಥ. ಇದರಲ್ಲಿ ಮಂತ್ರಗಳನ್ನುಚ್ಛರಿಸುತ್ತಾ ಕೈಗೊಳ್ಳುವ ಧ್ಯಾನ, ಯಜ್ಞ-ಯಾಗಾದಿಗಳ ವಿಧಿ ವಿಧಾನಗಳು ಮತ್ತು ಪ್ರಾಯಶ್ಚಿತ್ತ ಆಚರಣೆಗಳ ಕುರಿತ ವಿವರಣೆಗಳಿವೆ.
೧೧) ಪರಾಶರ ಸಂಹಿತಾ - ಇದು ಕೇವಲ ಎಂಟೇ ಎಂಟು ಅಧ್ಯಾಯಗಳನ್ನೊಳಗೊಂಡ ಸಂಕ್ಷಿಪ್ತ ಗ್ರಂಥವಾಗಿದ್ದು ಇದು ಜಪ ಅಥವಾ ಭಗವಂತನ ನಾಮಸ್ಮರಣೆ ಮಾಡುವ ವಿಧಾನಗಳನ್ನು ಒಳಗೊಂಡಿದೆ.
೧೨) ಪೌಷ್ಕರ ಸಂಹಿತಾ - ಪಾಂಚರಾತ್ರ ಪದ್ಧತಿಯ ಅತೀ ಪ್ರಾಚೀನ ಗ್ರಂಥಗಳಲ್ಲಿ ಒಂದಾದ ಈ ಕೃತಿಯು ೪೩ ಅಧ್ಯಾಯಗಳನ್ನೊಳಗೊಂಡಿದೆ. ಇದರಲ್ಲಿ ವಿವಿಧ ರೀತಿಯ ವಿಗ್ರಹಗಳ ಆರಾಧನೆಯ ಜೊತೆಗೆ ಕೆಲವೊಂದು ಆಧ್ಯಾತ್ಮಿಕ ವಿಷಯಗಳನ್ನೂ ಪ್ರತಿಪಾದಿಸಲಾಗಿದೆ. ಅಂತೇಷ್ಟಿಯ (ಶವ ಸಂಸ್ಕಾರದ) ಕೆಲವೊಂದು ಯಾಗಗಳನ್ನೂ ಕುರಿತು ಇದರಲ್ಲಿ ಚರ್ಚಿಸಿರುವುದು ಕುತೂಹಲಕಾರಿಯಾಗಿದೆ.
೧೩) ಸುದರ್ಶನ ಸಂಹಿತಾ - ೪೧ ಅಧ್ಯಾಯಗಳನ್ನೊಳಗೊಂಡ ಈ ಗ್ರಂಥವು ಪ್ರಧಾನವಾಗಿ ಮಂತ್ರಗಳ ಮೇಲಿನ ಧ್ಯಾನ ಹಾಗು ಪ್ರಾಯಶ್ಚಿತ್ತ ಮಂತ್ರಗಳ ಕುರಿತಾಗಿ ಹೇಳುತ್ತದೆ.
೧೪) ವಿಹಗೇಂದ್ರ ಸಂಹಿತಾ - ಈ ಸಂಹಿತೆಯಲ್ಲಿ ೨೪ ಅಧ್ಯಾಯಗಳಿವೆ. ಮಂತ್ರ ಧ್ಯಾನವನ್ನು ಕುರಿತು ವಿವರಿಸುವುದಲ್ಲದೇ ಈ ಗ್ರಂಥವು ಯಜ್ಞಗಳಲ್ಲಿ ಬಳಸಬೇಕಾದ ಆಹುತಿಗಳ ಕುರಿತಾಗಿ ಚರ್ಚಿಸುತ್ತದೆ. ಈ ಗ್ರಂಥದ ಹನ್ನೆರಡನೇ ಅಧ್ಯಾಯವು ಅರ್ಚನೆಯ ಭಾಗವಾಗಿ ಪ್ರಾಣಯಾವವನ್ನು ಅಮೂಲಾಗ್ರವಾಗಿ ವಿಶ್ಲೇಷಿಸುತ್ತದೆ.
೧೫) ವಿಷ್ಣು ಸಂಹಿತಾ - ೩೦ ಅಧ್ಯಾಯಗಳನ್ನೊಳಗೊಂಡ ಈ ಕೃತಿಯು ಅರ್ಚನಾ ವಿಧಿಗಳನ್ನು ಕುರಿತು ಚರ್ಚಿಸುತ್ತದೆ. ಇದರಲ್ಲಿ ಹೇಳಲ್ಪಟ್ಟಿರುವ ತತ್ತ್ವವು ಸಾಂಖ್ಯದರ್ಶನವನ್ನು ಬಹುತೇಕ ಹೋಲುತ್ತದೆ. ಅಲ್ಪಸ್ವಲ್ಪ ವ್ಯತ್ಯಾಸಗಳೊಂದಿಗೆ ಈ ಕೃತಿಯು, ಪುರುಷವು (ವ್ಯಕ್ತಿಗತ ಆತ್ಮ) ಸರ್ವಾಂತರಯಾಗಿದ್ದು ಅದು ಪ್ರಕೃತಿಯನ್ನು ಪ್ರಚೋದಿಸಿ (ಕ್ರಿಯಾಶೀಲಗೊಳ್ಳುವಂತೆ ಮಾಡಿ) ಈ  ಪ್ರಪಂಚದ ಉಗಮಕ್ಕೆ ಕಾರಣವಾಗುವುದನ್ನು ವಿವರಿಸುತ್ತದೆ.
೧೬) ವಿಷ್ಣುತತ್ತ್ವ ಸಂಹಿತಾ - ೩೯ ಅಧ್ಯಾಯಗಳನ್ನೊಳಗೊಂಡ ಈ ಗ್ರಂಥವು ಮೂರ್ತಿಪೂಜೆ, ನಿತ್ಯಕರ್ಮ, ವೈಷ್ಣವ ಚಿಹ್ನೆಗಳ ಧಾರಣೆಯ ಕ್ರಮ ಮತ್ತು ಶುದ್ಧೀಕರಣ ಕ್ರಿಯೆಗಳ ಕುರಿತಾಗಿ ವಿವರಿಸುತ್ತದೆ. 
*****
(ಆಂಗ್ಲ ಮೂಲ : ಬೆಂಗಳೂರಿನ ಶ್ರೀ ರಾಮಕೃಷ್ಣಾಶ್ರಮದ ಅಧ್ಯಕ್ಷಕರಾದ ಸ್ವಾಮಿ ಹರ್ಷಾನಂದರು ರಚಿಸಿದ PANCHARATRA AGAMAS (An Introduction) ಪುಟಗಳು ೩ - ೧೩)

Rating
No votes yet

Comments

Submitted by makara Thu, 08/11/2016 - 23:02

ಹಿಂದೂ ಧರ್ಮದಲ್ಲಿರುವ ಪಂಥಗಳು, ಪಂಗಡಗಳು, ಒಳಪಂಗಡಗಳು ಮತ್ತು ಒಂದೊಂದೂ ಪಂಗಡಕ್ಕೆ ಇರುವ ಧರ್ಮಗ್ರಂಥಗಳು ಅವಕ್ಕೆ ಲೆಕ್ಕವಿಲ್ಲ. ಖಂಡಿತಾ ಒಂದು ಜೀವಿತಾವಧಿ ಸಾಲದು ಎಲ್ಲವುದರ ಹೆಡ್ಡಿಂಗ್ ಅರಿಯಲು. ಹಾಗಾಗಿ ನಮ್ಮಂತಹ ಪಾಮರರ ಪಾಲಿಗೆ ಪೆನ್ನಿಧಿಯಾಗಿದ್ದಾರೆ ಬೆಂಗಳೂರಿನ ಶ್ರೀ ರಾಮಕೃಷ್ಣ ಆಶ್ರಮದ ಅಧ್ಯಕ್ಷರಾಗಿರುವ ಸ್ವಾಮಿ ಹರ್ಷಾನಂದರು. ಅವರು ರಚಿಸಿರುವ ಅನೇಕಾನೇಕ ಕೃತಿಗಳಲ್ಲಿ ಇದೂ ಸಹ ಒಂದು. ಈ ಕೃತಿಯ ಕನ್ನಡ ಅನುವಾದ ಇದೆಯೋ ಇಲ್ಲವೋ ಗೊತ್ತಿಲ್ಲ, ಆದ್ದರಿಂದ ಇದನ್ನು ಕನ್ನಡಕ್ಕೆ ಅನುವಾದಿಸುವ ಸಾಹಸಕ್ಕೆ ಕೈಹಾಕಿದ್ದೇನೆ. ಇದರ ಮೂಲಕ ನನ್ನ ಅರಿವನ್ನು ಹೆಚ್ಚಿಸಿಕೊಳ್ಳುವುದರೊಂದಿಗೆ ಓದುಗರಿಗೂ ಇದರ ಸಾರವನ್ನು ಉಣಬಡಿಸೋಣವೆಂದು ಇದನ್ನು ಸಂಪದದಲ್ಲಿ ಹಂಚಿಕೊಳ್ಳುತ್ತಿದ್ದೇನೆ. ಧನ್ಯವಾದಗಳೊಂದಿಗೆ.