ಭಾಗ ೨೦ - ಮೇಕೆಯ ತೊಗಲು ಹೊದ್ದ ತೋಳ, ಮೆಕಾಲೆ ವಿದ್ಯಾ ವಿಧಾನ: ಕೇಂದ್ರೀಯ ರಾಜ್ಯಾಂಗ ವ್ಯವಸ್ಥೆ ಏರ್ಪಟ್ಟಿದ್ದು ಯಾವಾಗ......?

ಭಾಗ ೨೦ - ಮೇಕೆಯ ತೊಗಲು ಹೊದ್ದ ತೋಳ, ಮೆಕಾಲೆ ವಿದ್ಯಾ ವಿಧಾನ: ಕೇಂದ್ರೀಯ ರಾಜ್ಯಾಂಗ ವ್ಯವಸ್ಥೆ ಏರ್ಪಟ್ಟಿದ್ದು ಯಾವಾಗ......?

ಚಿತ್ರ

ಅಲೆಗ್ಜಾಂಡರ್, ಎಲ್ಫಿನ್‌ಸ್ಟೋನ್, ಶಾಲಿವಾಹನ, ಚಿತ್ರಕೃಪೆ: ಗೂಗಲ್
 
        ಇಂಗ್ಲೀಷ್ ಭಾಷೆಯನ್ನು ಭಾರತೀಯರಿಗೆ ಬೋಧಿಸುವುದರ ಮೂಲಕ ಕ್ರೈಸ್ತಮತದ ಪ್ರಚಾರವು ವೇಗಗೊಳ್ಳುತ್ತದೆನ್ನುವುದು ಕ್ರಿಸ್ತ ಶಕ ಹದಿನೇಳನೇ ಶತಮಾನದ ಉತ್ತರಾರ್ಧದಲ್ಲಿ ಕ್ರೈಸ್ತ ಮಿಷನರಿಗಳ ದೃಢವಾದ ನಂಬುಗೆಯಾಗಿತ್ತು. ಅಮೇರಿಕಾದಲ್ಲಿ, ಅಲ್ಲಿನ ಮೂಲ ಜನಾಂಗವನ್ನು ನಿರ್ಮೂಲಿಸಿ, ಹೊಸ ಜನಾಂಗ ಮತ್ತು ರಾಷ್ಟ್ರವನ್ನು ರೂಪಿಸಿದಂತೆ ಭಾರತದಲ್ಲಿಯೂ ಸಹ ಕ್ರೈಸ್ತ ನಂಬಿಕೆಗಳ ಬುನಾದಿಯ ಮೇಲೆ ಹೊಚ್ಚಹೊಸ ರಾಷ್ಟ್ರವೊಂದನ್ನು ನಿರ್ಮಿಸಬಹುದೆಂದು ಮಿಷನರಿಗಳು ಭಾವಿಸಿದರು. ಅಮೇರಿಕಾ ಖಂಡದಲ್ಲಿ ಅಲ್ಲಿನ ಮೂಲ ನಿವಾಸಿಗಳನ್ನು ನಾಶ ಮಾಡಿದಂತೆ ಭಾರತದಲ್ಲಿ ಮಾಡುವುದು ಅಸಾಧ್ಯವೆಂದರಿತ ಬ್ರಿಟಿಷ್ ಮೇಧಾವಿಗಳು, ಇಲ್ಲಿನ ಮೂಲ ನಿವಾಸಿಗಳು ತಮ್ಮ ’ರಾಷ್ಟ್ರೀಯ ಸ್ಪೃಹೆ’ಯನ್ನು ಮರೆಯುವಂತೆ ಮಾಡುವ ಕುತಂತ್ರವನ್ನು ರೂಪಸಿದರು. ಈ ಕುತಂತ್ರದ ಭಾಗವಾಗಿ ’ಇಂಗ್ಲೀಷ್ ಮಾಧ್ಯಮ ಬೋಧನಾ ವಿಧಾನ’ವು ಜಾರಿಗೆ ಬಂದಿತು. ಸಂಸ್ಕೃತ ಭಾಷಾ ಮಾಧ್ಯಮದ ಮೂಲಕ ವಿದ್ಯೆಯನ್ನು ಕಲಿತುಕೊಂಡ ವಿದ್ಯಾವಂತರು ಇದ್ದಾರೆನ್ನುವ ಸತ್ಯವು ಬ್ರಿಟಿಷರ ಅರಿವಿಗೆ ಬಂದಿತು. ಮೂಲನಿವಾಸಿಗಳನ್ನು ಹೊಸ ಜನಾಂಗಗಳನ್ನಾಗಿ  ರೂಪಿಸುವ ’ಬುದ್ಧಿವಂತಿಕೆ’ ಮುಸ್ಲಿಂ ಪರಿಪಾಲಕರ ಕಾಲದಲ್ಲಿಯೂ ಇದ್ದಿಲ್ಲವೆಂದಲ್ಲ! ಅರಬ್ಬೀ, ಪಾರಶಿಕ (ಪಾರಸೀ) ಭಾಷೆಗಳನ್ನು ಭಾರತೀಯರು ಅಧ್ಯಯನ ಮಾಡಿದರೂ ಸಹ ಭಾರತೀಯ ವಿದ್ಯೆಗಳನ್ನು ಮಾತ್ರ ಸಂಸ್ಕೃತ ಭಾಷಾ ಮಾಧ್ಯಮದ ಮೂಲಕವೇ ಅಭ್ಯಸಿಸುವುದು ಮುಂದುವರೆಯಿತು. ಈ ಪದ್ಧತಿಯನ್ನು ಮೆಕಾಲೆ ವಿದ್ಯಾವಿಧಾನವು ಮುಂದುವರೆಯಲು ಬಿಡಲಿಲ್ಲ. ಸಾವಿರ ವರ್ಷಗಳ ಮತೋನ್ಮಾದವು ಮಾಡಲಾರದ ಕೆಲಸವನ್ನು, ಇಂಗ್ಲೀಷ್ ಭಾಷಾ ಮಾಧ್ಯಮ ಬೋಧನಾ ವಿಧಾನವು ಕೇವಲ ಅರವತ್ತು ವರ್ಷಗಳ ಕಾಲದಲ್ಲಿ ಮಾಡುವಲ್ಲಿ ಸಫಲವಾಯಿತು. "ಭಾರತೀಯರು ಇನ್ನೂ ಒಂದು ರಾಷ್ಟ್ರವಾಗಿ (ನೇಷನ್) ರೂಪುಗೊಂಡಿಲ್ಲ" ಎನ್ನುವ ಅಸತ್ಯವು ಕ್ರಿಸ್ತಶಕ ಹತ್ತೊಂಬತ್ತನೇ ಶತಮಾನದ ಕಡೆಯ ವರ್ಷಗಳಲ್ಲಿ ಸತ್ಯವಾಗಿ ಮಾರ್ಪಾಡಾಯಿತು. ಕ್ರಿ.ಶ. ೧೭೧೬ರಿಂದ ನಮ್ಮ ದೇಶದಲ್ಲಿ ಅಲ್ಲಲ್ಲಿ ಮಿಷನರಿಗಳ ಇಂಗ್ಲೀಷ್ ಪಾಠಶಾಲೆಗಳು ಆರಂಭವಾದವು. ಆದರೆ ಅವು ಇಂಗ್ಲೀಷನ್ನು ಕೇವಲ ಭಾಷೆಯಾಗಿ ಮಾತ್ರವೇ ಕಲಿಸಿದವು, ಕ್ರೈಸ್ತ ಮತವನ್ನು ಇಂಗ್ಲೀಷಿನ ಮೂಲಕ ಬೋಧಿಸಿ ಮತಪ್ರಚಾರಕರನ್ನು ತಯಾರು ಮಾಡುವುದಕ್ಕೆ ಅದು ಪರಿಮಿತವಾಯಿತು. ಈ ಭಾಷಾಬೋಧನೆಯಿಂದ (ಕ್ಲಾಸಿಕಲ್ ಟೀಚಿಂಗ್) ಲಾಭವಿಲ್ಲವೆಂದರಿತ ಅಂದಿನ ಬಾಂಬೆ ಪ್ರೆಸಿಡೆನ್ಸಿಯ ಗವರ್ನರನಾಗಿದ್ದ ಎಲ್ಫಿನ್‌ಸ್ಟೋನ್ ಕ್ರಿ.ಶ. ೧೮೨೩ರಲ್ಲಿ ಇಂಗ್ಲೀಷ್ ಭಾಷೆಯನ್ನು ಬೋಧನಾ ಮಾಧ್ಯಮವಾಗಿ (ಮೀಡಿಯಂ ಆಫ್ ಇನ್‌ಸ್ಟ್ರಕ್ಷನ್) ಆರಂಭಿಸಬೇಕೆಂದು ಶಿಫಾರಸು ಮಾಡಿದನು. ’ಬೋಧನಾ ಮಾಧ್ಯಮ’ವು ಬದಲಾದ್ದರಿಂದ ಭಾರತೀಯ ವಿದ್ಯಾವಂತರಿಗೆ ರಾಷ್ಟ್ರೀಯ ಸ್ಪೃಹೆಯು ತಪ್ಪಿಹೋಯಿತು, ಮತಿಯೂ ತಪ್ಪಿ ಹೋಯಿತು.......!  ಸಂಸ್ಕೃತ ಮಾಧ್ಯಮದ ಮೂಲಕ ಬೋಧಿಸಿದ ಚರಿತ್ರೆಯ ಪ್ರಭಾವದಿಂದಾಗಿ, "ಅನಾದಿ ಕಾಲದಿಂದಲೂ ಈ ದೇಶವು ಒಂದು ರಾಷ್ಟ್ರ" ಎನ್ನುವ ಸ್ಮೃತಿಯು ಇಲ್ಲಿನ ಮೂಲ ನಿವಾಸಿಗಳಲ್ಲಿ ಸಜೀವವಾಗಿತ್ತು. ಇಂಗ್ಲೀಷ್ ಮಾಧ್ಯಮದ ಚರಿತ್ರೆಯ ಬೋಧನೆಯಿಂದಾಗಿ ಈ ವಿಷಯವು ಕಣ್ಮರೆಯಾಯಿತು! ನಿಜವಾದ ಚರಿತ್ರೆ ಅಟ್ಟದ ಮೂಲೆ ಸೇರಿತು.....!
*****    
    ಕ್ರಿಸ್ತ ಶಕ ನಾಲ್ಕನೇ ಶತಮಾನದಲ್ಲಿ ಕಾಶ್ಮೀರದಲ್ಲಿ ಒಂದು ಪಟ್ಟಣವಿತ್ತು... ಅದರ ಸಮೀಪ ಗ್ರಾಮವೊಂದರಲ್ಲಿ ಯುವ ದಂಪತಿಗಳಿಬ್ಬರು ಹಾಗು ಅವರ ಮಕ್ಕಳು ಜೀವಿಸುತ್ತಿದ್ದರು. ಅವರಿಗೆ ಸ್ವಲ್ಪ ಹೊಲವಿತ್ತು,  ಬೇಸಾಯ ಮಾಡಿ ಅದರಲ್ಲಿ ಅವರು ಅಲ್ಪ ಸ್ವಲ್ಪ ಧವಸ ಧಾನ್ಯಗಳನ್ನು ಬೆಳೆದುಕೊಳ್ಳುತ್ತಿದ್ದರು. ಆದರೆ ವ್ಯವಸಾಯದಿಂದ ಬರುವ ವರಮಾನವು ಅಷ್ಟಕಷ್ಟೆ ಇತ್ತು. ಆದ್ದರಿಂದ ಪತಿಯು ವ್ಯಾಪಾರ ಮಾಡಲು ನಿರ್ಧರಿಸಿದ. ವ್ಯಾಪಾರ ಮಾಡಲು ಮೂಲಧನ ಬೇಕು ಮತ್ತು ಹಣವನ್ನು ಸಂಪಾದಿಸಲು ದೇಶಾಂತರ ತಿರುಗಬೇಕು. ಆದ್ದರಿಂದ ಆ ಯುವ ಪತಿಯು ಪಟ್ಟಣದಲ್ಲಿದ್ದ ಒಬ್ಬ ದೊಡ್ಡ ವರ್ತಕನಿಗೆ ತನ್ನ ಹೊಲವನ್ನು ಮಾರಿದ. ಅವನು ಮಾರಿದ ಹೊಲವು ಅವನ ಮನೆಯ ಸಮೀಪವೇ ಇತ್ತು. ತಾನು ಹಿಂದಿರುಗಿ ಬರುವವರೆಗೆ ಹೆಂಡತಿ ಮಕ್ಕಳು ಜೀವನ ಸಾಗಿಸಬೇಕಲ್ಲವೇ? ಹಾಗಾಗಿ ತಮ್ಮ ಮನೆಯ ಸುತ್ತಲಿದ್ದ ಜಾಗದಲ್ಲಿ ಹಣ್ಣು ಹಂಪಲುಗಳನ್ನು ಬೆಳೆದುಕೊ ಎಂದು ಅವನು ಹೆಂಡತಿಗೆ ಸಲಹೆಯಿತ್ತ. ಇದಕ್ಕೆ ಅನುಕೂಲವಾಗಲೆಂದು ತನ್ನ ಹೊಲ ಹಾಗು ಮನೆಗೆ ಹೊಂದಿಕೊಂಡಿದ್ದ ಬಾವಿಯನ್ನು ಹೊರತು ಪಡಿಸಿ ಉಳಿದ ಹೊಲವನ್ನು ಮಾತ್ರವೇ ಅವನು ಆ ದೊಡ್ಡ ವರ್ತಕನಿಗೆ ಮಾರಿದ್ದ.
          ಪತಿಯು ವ್ಯಾಪಾರ ನಿಮಿತ್ತ ದೇಶಾಂತರ ಹೋದಮೇಲೆ ಆ ಗೃಹಿಣಿಯು ಆ ಬಾವಿಯ ನೀರನ್ನು ಏತದ (ಕಪಿಲೆ) ಮೂಲಕ ಮೇಲಕ್ಕೆತ್ತಿ ತಮ್ಮ ಮನೆಯ ಸುತ್ತಲಿದ್ದ ಜಾಗದಲ್ಲಿ ಹಣ್ಣು ಹಂಪಲುಗಳನ್ನು ಬೆಳೆಸಿಕೊಳ್ಳುತ್ತಿದ್ದಳು. ಹೀಗೆ ಸುಮಾರು ಎರಡು ವರ್ಷಗಳು ಕಳೆದರೂ ಆಕೆಯ ಗಂಡನು ಹಿಂದಿರುಗಿ ಬರಲಿಲ್ಲ. ವ್ಯಾಪಾರದ ಸಲುವಾಗಿ  ದೇಶಾಂತರ ಹೋದವರು ವರ್ಷಾನುಗಟ್ಟಲೆ ಹಿಂದಿರುಗಿ ಬರದೇ ಇರುತ್ತಿದ್ದುದು ಆ ಕಾಲದಲ್ಲಿ ಸರ್ವೇಸಾಮಾನ್ಯವಾಗಿತ್ತು! ಹೀಗಿರುವಾಗ, ಆ ಹೊಲವನ್ನು ಕೊಂಡುಕೊಂಡ ಆ ದೊಡ್ಡ ವರ್ತಕನು ಬಂದು ಬಾವಿಯನ್ನು ತನ್ನ ವಶಕ್ಕೆ ತೆಗೆದುಕೊಂಡನು. ಅದೇಕೆ ಎಂದು ಆ ಗೃಹಿಣಿಯು ಪ್ರಶ್ನಿಸಿದರೆ, "ಅಮ್ಮಾ, ನಿನ್ನ ಗಂಡ ಹೊಲದೊಂದಿಗೆ ಬಾವಿಯನ್ನೂ ಸಹ ನನಗೆ ಮಾರಿದ್ದಾನೆ. ಹೋಗಲಿ ಬಿಡು ಎಂದು ಎರಡು ವರ್ಷ ಬಾವಿಯನ್ನು ನಿನ್ನ ಸ್ವಾಧೀನದಲ್ಲೇ ಬಿಟ್ಟು ನಾನು ಸುಮ್ಮನೇ ಬಿಟ್ಟಿದ್ದೆ" ಎಂದು ಉತ್ತರಿಸಿದನು. "ಇಷ್ಟು ದಿನ ನಾನು ಬೆಳೆಯನ್ನು ಮಳೆಯಾಶ್ರಯದಲ್ಲಿ ಬೆಳೆಸುತ್ತಿದ್ದೆ. ಇನ್ನು ಮೇಲೆ ನಮ್ಮ ಬಾವಿಯ ನೀರನ್ನೂ ಕೂಡಾ ನಮ್ಮ ಹೊಲಕ್ಕೆ ಹಾಯಿಸಿಕೊಳ್ಳುತ್ತೇನೆ......." ಎಂದು ಹೇಳಿ ಹೋದ ಆ ದೊಡ್ಡ ವರ್ತಕ!
         ಆಗ ಆ ಮೆನೊಯೊಡತಿಯು ಊರಿನ ನ್ಯಾಯಾಧಿಕಾರಿಯ ಬಳಿಗೆ ಈ ವಿಷಯವಾಗಿ ದೂರು ಕೊಟ್ಟಳು. ವಿಚಾರಣೆ ನಡೆಯಿತು. ಪತ್ರವನ್ನು ತೆಗೆದುಕೊಂಡು ಬರಲು ನ್ಯಾಯಾಧಿಕಾರಿ ಆ ದೊಡ್ಡ ವರ್ತಕನಿಗೆ ಆಜ್ಞಾಪಿಸಿದ. ಆ ಪತ್ರದಲ್ಲಿ ’ಕೂಪಸಹಿತ’ವಾಗಿ (ಬಾವಿಯೊಂದಿಗೆ) ಹೊಲವನ್ನು ಮಾರಿರುವುದಾಗಿ ಬರೆಯಲಾಗಿತ್ತು. ಇನ್ನು ಆ ಅಮಾಯಕ ಹೆಂಗಸಿಗೆ ದಿಕ್ಕಾರು? ಆದರೆ ಆ ನ್ಯಾಯಾಧಿಕಾರಿ ಬುದ್ಧಿವಂತನಾಗಿದ್ದ. ಆ ದೊಡ್ಡ ವರ್ತಕನೊಂದಿಗೆ ಆ ಮಾತು ಈ ಮಾತು ಆಡುತ್ತಾ ಅವನನ್ನು ತನ್ನ ಬಳಿಯಲ್ಲಿಯೇ ಇರಿಸಿಕೊಂಡು, ರಕ್ಷಕಭಟರನ್ನು ಆ ವರ್ತಕನ ಮನೆಗೆ ಕಳುಹಿಸಿದನು. ಆ ಭಟರು ವರ್ತಕನ ಮನೆಯನ್ನೆಲ್ಲಾ ಶೋಧಿಸಿ ಎರಡು ವರ್ಷಗಳ ಹಿಂದಿನ ’ಲೆಕ್ಕದ ದಿನಚರಿ ಪುಸ್ತಕ’ವನ್ನು ತೆಗೆದುಕೊಂಡು ಬಂದರು. ಅದರಲ್ಲಿ, ಕೂಪರಹಿತವಾಗಿ ಹೊಲವನ್ನು ಕೊಂಡುಕೊಂಡಂತೆ ವರ್ತಕನು ಬರೆದುಕೊಂಡಿದ್ದನು. ಹೀಗೆ ಆ ಕಳ್ಳ ಸಿಕ್ಕಿಬಿದ್ದ. ದೇವನಾಗರಿ ಲಿಪಿಯಲ್ಲಿ ಆ ಕ್ರಯಪತ್ರದಲ್ಲಿ ರಹಿತ ಎನ್ನುವುದನ್ನು ಸಹಿತ ಎಂದು ಆ ವರ್ತಕನು ತಿದ್ದಿದ್ದ. ’ರ’ र ಅಕ್ಷರದ ಪಕ್ಕದಲ್ಲಿ ಒಂದು ಉದ್ದಗೆರೆಯನ್ನು ಎಳೆದು ಅದನ್ನು ’ಸ’ स ಎಂದು ಮಾಡಿದ್ದ; ಆಗ ”रहितम् ರಹಿತಮ್’ ಎಂದು ಇದ್ದದ್ದು ’सहितम् ಸಹಿತಮ್’ ಎಂದು ಆಗಿತ್ತು! ಹೀಗೆ, ಆ ಬಡ ಮಹಿಳೆಗೆ ನ್ಯಾಯ ದೊರೆಯಿತು.
           ಕಾಶ್ಮೀರದ ಇತಿಹಾಸದಲ್ಲಿ ಈ ಕಥೆ ಇದೆ. ದಾಖಲೆಗಳನ್ನು ತಿದ್ದುವುದು (ಫೋರ್ಜರಿ ಮಾಡುವುದು), ಅಕ್ರಮಗಳನ್ನು ಕಂಡು ಹಿಡಿಯುವುದು ಅಂದಿಗೂ ಇತ್ತು. ಈಗಿರುವ ವ್ಯವಸ್ಥೆಗಳು ಆಗಲೂ ಇದ್ದವು. ಅದರಲ್ಲಿ ಕೆಲವು ರಾಜಕೀಯ ವ್ಯವಸ್ಥೆಗಳು ಅಂದರೆ ರಾಜ್ಯಾಂಗ ಅಥವಾ ಆಡಳಿತದ ವ್ಯವಸ್ಥೆಗಳಿದ್ದರೆ, ಇನ್ನೂ ಕೆಲವು ಧಾರ್ಮಿಕ, ಸಾಂಸ್ಕೃತಿಕ ವ್ಯವಸ್ಥೆಗಳಾಗಿದ್ದವು! ವೇದಗಳನ್ನು ಗುರುವು ಕಲಿಸುತ್ತಿದ್ದರೆ ಶಿಷ್ಯರು ಅದನ್ನು ಕಂಠಪಾಠ ಮಾಡಿ ಒಪ್ಪಿಸುವ ವ್ಯವಸ್ಥೆ ಲಕ್ಷ್ಯಾಂತರ ವರ್ಷಗಳ ಕಾಲ ಸಾಗಿ ಬಂದಿತು. ಅದು ಒಂದು ವ್ಯವಸ್ಥೆ. ಹೀಗೆ ‘ಭಟ್ಟಿ’ ಹೊಡೆದು ವಿಷಯಗಳನ್ನು ತಲೆಯಲ್ಲಿ ತುಂಬಿಸಿಕೊಳ್ಳುವ ಪದ್ಧತಿ ಜಾರಿಯಲ್ಲಿದ್ದುದರಿಂದ, ಆ ಕಾಲದಲ್ಲಿ ಲಿಪಿ ಇರಲಿಲ್ಲ, ಅವರಿಗೆ ಅಕ್ಷರಗಳು ಬರುತ್ತಿದ್ದಿಲ್ಲ..." ಎಂದು ಮೆಕಾಲೆ ಮಾನಸ ಪುತ್ರರು ಸಿದ್ದಾಂತಗಳನ್ನು ಮಾಡುತ್ತಾರೆ! ಆದರೆ ಬ್ರಿಟನ್ನಿನಲ್ಲಿ  ಇಂದಿಗೂ ಲಿಖಿತ ಸಂವಿಧಾನವಿಲ್ಲ. ಆದರೆ ಅಲ್ಲಿ ಆಡಳಿತ ವ್ಯವಸ್ಥೆಯಿಲ್ಲ ಎಂದು ಯಾರೂ ಹೇಳರು! ಬ್ರಿಟಿಷರಿಗೆ ಬರೆಯಲು ಬರುವುದಿಲ್ಲವೆಂದೂ ಯಾರೂ ಹೇಳರು!
           ಬ್ರಿಟಿಷರು ಭಾವಿಸಿದಂತೆ ಒಂದು ಜನ ಸಮುದಾಯವು ರಾಷ್ಟ್ರವಾಗಿ (ನೇಷನ್) ಏರ್ಪಡಲು ಸ್ವತಂತ್ರವಾದ ಆಡಳಿತ ವ್ಯವಸ್ಥೆಯೊಂದನ್ನೇ ಮಾನದಂಡವಾಗಿ ತೆಗೆದುಕೊಂಡರೂ ಸಹ, ಆ ದೃಷ್ಟಿಕೋನದಿಂದಲೂ ನಮ್ಮ ದೇಶದಲ್ಲಿ ಪೂರ್ವ ಯುಗಗಳಲ್ಲಿಯೇ ಆ ವ್ಯವಸ್ಥೆ ಏರ್ಪಟ್ಟಿತ್ತು. ರಾಜಕೀಯ ಅಥವಾ ಆಡಳಿತ ವ್ಯವಸ್ಥೆ ಏರ್ಪಟ್ಟರೆ ಮಾತ್ರ ಒಂದು ದೇಶವು ಒಂದು ರಾಷ್ಟ್ರವಾಗಿ ಬದಲಾಗುತ್ತದೆನ್ನುವುದು ಮೆಕಾಲೆ ವಿದ್ಯೆ ಹುಟ್ಟುಹಾಕಿದ ಭ್ರಮೆ. ಈ ಭ್ರಮೆಯನ್ನೇ ಮಾನದಂಡವಾಗಿ  ತೆಗೆದುಕೊಂಡರೂ ಸಹ (ವಾದಕ್ಕಾಗಿ) ಈ ದೇಶವು ಸಾವಿರಾರು ವರ್ಷಗಳಿಂದಲೂ ಒಂದು ರಾಷ್ಟ್ರವಾಗಿಯೇ ಇತ್ತೆನ್ನುವ ಸತ್ಯವು ಸಾಕ್ಷಾತ್ಕಾರವಾಗುತ್ತಲೇ ಇದೆ. ಕೃತಯುಗದಲ್ಲಿ ಸಮಾಜವು ಸಹಜವಾಗಿ ಸುವ್ಯವಸ್ಥಿತವಾಗಿ ಇರುತ್ತದೆ. ಧರ್ಮವು ಕೃತವಾಗಿ (ಸಿದ್ಧವಾಗಿ) ಇರುತ್ತದೆ, ಆದ್ದರಿಂದ ಕೃತಯುಗದಲ್ಲಿ ರಾಜ್ಯಾಂಗ (ಆಡಳಿತ) ವ್ಯವಸ್ಥೆಯ ಅವಶ್ಯಕತೆಯಿಲ್ಲವೆಂದು ಭಾರತೀಯ ಪುರಾಣೇತಿಹಾಸಗಳು ಸಾರುತ್ತವೆ. ಕೃತಯುಗದಲ್ಲಿ "ರಾಜ್ಯ ವ್ಯವಸ್ಥೆಯಾಗಲಿ, ಆಡಳಿತ ನಡೆಸುವ ರಾಜನಾಗಲಿ ಇರಲಿಲ್ಲ, ತಪ್ಪು ಮಾಡುವವರೂ ಇರಲಿಲ್ಲ, ಹಾಗಾಗಿ ಅವರನ್ನು ದಂಡಿಸುವ ವ್ಯವಸ್ಥೆಯೂ ಇರಲಿಲ್ಲ, ಧರ್ಮಬದ್ಧರಾದ ಪ್ರಜೆಗಳು ಪರಸ್ಪರ ಒಬ್ಬರನ್ನೊಬ್ಬರು ರಕ್ಷಿಸುತ್ತಿದ್ದರು....."
"ನ ರಾಜ್ಯಂ ನೈವ ರಾಜಾಸೀತ್ ನ ದಂಡ್ಯೋ ನ ಚ ದಾಂಡಿಕಃ l
ಧರ್ಮೇಣೈವ ಪ್ರಜಾಸ್ಸರ್ವೇ ರಕ್ಷನ್ತಿಸ್ಮ ಪರಸ್ಪರಮ್ ll
        ತ್ರೇತಾಯುಗದ ಆರಂಭ ಕಾಲದಲ್ಲಿಯೇ ನಮ್ಮ ದೇಶದಲ್ಲಿ ಸುಸಂಘಟಿತವಾದ ರಾಜ್ಯಾಂಗ ವ್ಯವಸ್ಥೆಯ ಆರಂಭವಾಯಿತು. ದ್ವಾಪರ ಯುಗದಲ್ಲಿ ಆ ರಾಜಕೀಯ ವ್ಯವಸ್ಥೆ ಮುಂದುವರೆದು ಕಲಿಯುಗದ ೫,೧೦೭ನೇ ವರ್ಷದವರೆಗೂ ಅದು ಪ್ರಚಲಿತವಿತ್ತು. ರಾಜ್ಯಾಂಗ ವ್ಯವಸ್ಥೆಯನ್ನು ಮಾನದಂಡವಾಗಿ ಸ್ವೀಕರಿಸಿದರೂ ಸಹ ನಮ್ಮ ದೇಶವು ಲಕ್ಷಾಂತರ ವರ್ಷಗಳಿಂದಲೂ ಒಂದು ರಾಷ್ಟ್ರವಾಗಿ (ನೇಷನ್) ಆಗಿ ಮುಂದುವರೆಯುತ್ತಲೇ ಇದೆ. ಲಕ್ಷಾಂತರ ವರ್ಷಗಳ ನಡೆದ ಸಂಗತಿಗಳನ್ನೆಲ್ಲಾ ಬರೆಯುತ್ತಾ ಕುಳಿತರೆ ಆ ಗ್ರಂಥಗಳ ಹಾಳೆಗಳು ಆಕಾಶದಷ್ಟೆತ್ತರಕ್ಕೆ ನಿಲ್ಲುತ್ತವೆ ಎಂದು ತೆಲುಗಿನ ಕವಿಸಾಮ್ರಾಟ್ ವಿಶ್ವನಾಥ ಸತ್ಯನಾರಾಯಣ ಒಂದೆಡೆ ವ್ಯಾಖ್ಯಾನಿಸಿದ್ದಾರೆ. ಅವನ್ನೆಲ್ಲಾ ಓದುವವರು ಯಾರು? ಒಂದು ವೇಳೆ ಓದಿದರೂ ಅವನ್ನೆಲ್ಲಾ ನೆನಪಿನಲ್ಲಿಟ್ಟುಕೊಳ್ಳುವವರು ಯಾರು?
         ಆದ್ದರಿಂದ ಪುರಾಣೇತಿಹಾಸಕಾರರು ಪೂರ್ವಯುಗಗಳ ರಾಜ್ಯಾಂಗ ವ್ಯವಸ್ಥೆಯನ್ನು ಸಂಕ್ಷಿಪ್ತವಾಗಿ ಹೇಳಿ, ಕಲಿಯುಗದ ರಾಜ್ಯಾಂಗ ವ್ಯವಸ್ಥೆಯನ್ನು ವಿಶದವಾಗಿ ತಿಳಿಸಿದ್ದಾರೆ! ದ್ವಾಪರ ಯುಗದ ಅಂತ್ಯ ಹಾಗು ಕಲಿಯುಗವು ಆರಂಭವಾಗುವ ಸಮಯಕ್ಕಾಗಲೇ ನಮ್ಮ ದೇಶದಲ್ಲಿ ಈಗಿನ ಕೇಂದ್ರ ಸರ್ಕಾರದಂತಹ ’ಸಾಮ್ರಾಜ್ಯ ಪ್ರಭುತ್ವ’ವು ಅಸ್ತಿತ್ವದಲ್ಲಿ ಇತ್ತು. ಇಂದಿನ ರಾಜ್ಯ ಸರ್ಕಾರಗಳಂತೆ ಅಂದೂ ಸಹ ’ರಾಜ್ಯ ಪ್ರಭುತ್ವ’ಗಳು ಇದ್ದವು; ಅಂದಿನ ಪರಿಭಾಷೆ ಬೇರೆ ಇರಬಹುದು. ಆ ಕೇಂದ್ರ ರಾಜ್ಯಾಂಗ ವ್ಯವಸ್ಥೆಯು ಸಮಸ್ತ ದೇಶಕ್ಕೆ ಸಮಾನವಾಗಿ ಅನ್ವಯಿಸುತ್ತಿತ್ತು! ದೇಶದಿಂದ ಬೇರ್ಪಡುತ್ತೇವೆ ಎಂದು ದೇಶ ವಿದ್ರೋಹಕ ಕಾರ್ಯಗಳನ್ನು ಇಂದು ಎಸಗುತ್ತಿರುವಂತೆ ಅಂದೂ ಕೂಡಾ ಕೆಲವು ರಾಜ್ಯಗಳು ಸಾಮ್ರಾಜ್ಯ ಪ್ರಭುತ್ವವನ್ನು ಧಿಕ್ಕರಿಸಿದ್ದಿರಬಹುದು, ರಾಜಧಾನಿಗಳು ಕಾಲದಿಂದ ಕಾಲಕ್ಕೆ ಬದಲಾಗಿರಬಹುದು. ಒಂದು ಕಾಲಕ್ಕೆ ಸಮಸ್ತ ದೇಶವು ಚಪ್ಪನ್ನಾರು ದೇಶಗಳಾಗಿ (ಐವತ್ತಾರು ಪ್ರಾಂತಗಳಾಗಿ) ವಿಭಜಿಸಲ್ಪಟ್ಟಿತ್ತು. ಮತ್ತೊಂದು ಸಮಯದಲ್ಲಿ ಹದಿನೆಂಟು ಜನಪದಗಳಾಗಿ ವಿಭಜಿಸಲ್ಪಟ್ಟಿತ್ತು. ಆದರೆ ಕಲಿಯುಗದ ಮೂರು ಸಾವಿರದ ಏಳುನೂರು ವರ್ಷಗಳವರೆಗೂ ಕೇಂದ್ರಾಡಿಳತವನ್ನು ಹೊಂದಿದ ಒಂದು ಸಾಮ್ರಾಜ್ಯವಾಗಿಯೇ ನಮ್ಮ ದೇಶವು ಇತ್ತು! ಯುಧಿಷ್ಠರನಿಂದ ಶಾಲಿವಾಹನನವರೆಗೂ ಆಡಳಿತಾರೂಢರಾಗಿದ್ದ ಕೇಂದ್ರೀಯ ಪರಿಪಾಲಕರು ರಾಜಕೀಯ ಐಕ್ಯತೆಗೆ ಭಂಗವುಂಟಾದಾಗ ರಾಜಸೂಯ, ಅಶ್ವಮೇಧ, ಮುಂತಾದ ಯಾಗಗಳನ್ನು ಮಾಡುವ ಮೂಲಕ ರಾಜ್ಯಾಂಗ ವ್ಯವಸ್ಥೆಯನ್ನು ಮತ್ತೆ ಪುನರುಜ್ಜೀವನಗೊಳಿಸುತ್ತಿದ್ದರು.
          ಗತ ಹದಿನಾಲ್ಕು ನೂರು ವರ್ಷಗಳಿಂದೀಚೆಗೆ ಈ ಸಮೈಕ್ಯತೆಯು ಸಂಪೂರ್ಣವಾಗಿ ಭಗ್ನವಾಗಿದೆ. ಕ್ರಿ.ಶ. ೧೯೪೭ರಲ್ಲಿ ದೇಶವೇ ತುಂಡಾಯಿತು. ಹೀಗೆ ವಿದೇಶೀಯರ ಆಡಳಿತದ ಫಲವಾಗಿ ಒಂದೇ ರಾಷ್ಟ್ರವಾಗಿ ಇದ್ದ ದೇಶವು, ಕ್ರಮೇಣವಾಗಿ ರಾಷ್ಟ್ರೀಯತೆಯು ನಶಿಸಿದ್ದರಿಂದ ಪ್ರಸ್ತುತ ಪರಿಸ್ಥಿತಿಯಲ್ಲಿ ಭೌಗೋಳಿಕವಾಗಿ, ರಾಜಕೀಯವಾಗಿ ವಿಘಟಿತವಾಗಿ ಇದೆ. ಐತಿಹಾಸಿಕ ವಾಸ್ತವತೆಯು ಹೀಗೆ ಗೋಚರವಾಗುತ್ತಿದ್ದರೂ ಸಹ, ವಿದೇಶಿ ಆಡಳಿತಗಾರರಿಂದ ಪರಿಪಾಲಿಸಲ್ಪಟ್ಟದ್ದರಿಂದ ನಾವು ಒಂದು ರಾಷ್ಟ್ರವಾಗಿ ಏರ್ಪಟ್ಟೆವು ಎನ್ನುವ ಅಸತ್ಯ ಪ್ರಚಾರವು ಜರಗುತ್ತಿದೆ! ಮೆಕಾಲೆ ವಿದ್ಯೆ ಚಾಲನೆಗೆ ಬರುವುದಕ್ಕೆ ಮುಂಚೆ ಸ್ವದೇಶಿ ಪ್ರಜೆಗಳು ತಾವು ವಿದೇಶೀಯರನ್ನು ಎದುರಿಸುತ್ತಿದ್ದೇವೆಂದು ಭಾವಿಸಿ ಅವರನ್ನು ಎದುರಿಸಿದರು. ಆದರೆ ಮೆಕಾಲೆ ವಿದ್ಯೆ ಅಮಲಿಗೆ ಬಂದ ಮೇಲೆ ಎದುರಿಸುವ ತತ್ತ್ವ ಹಾಗು ಎದುರಿಸಬೇಕೆನ್ನುವ ಸ್ಪೃಹೆ ಎರಡೂ ನಿದುರಿಸುತ್ತಿವೆ...!
         ಕಲಿಯುಗದ ಆರಂಭದವರೆಗೂ ಬೃಹದ್ರಥ ರಾಜವಂಶದವರು ಭಾರತದೇಶದ ಸಾಮ್ರಾಟರಾಗಿದ್ದರು. ದೇಶದಲ್ಲಿದ್ದ ಉಳಿದ ರಾಜ್ಯಗಳೆಲ್ಲಾ ಆ ಸಾಮ್ರಾಜ್ಯದ ಪರಧಿಯೊಳಗಿನವೇ. ಇಂದು ಪ್ರಾಂತೀಯ (ರಾಜ್ಯ) ಸರ್ಕಾರಗಳಿಗೆ "ಹೆಚ್ಚಿನ ಅಧಿಕಾರ (ಸ್ವಾಯತ್ತತೆ)" ಬೇಕೆಂದು ಸಂವಿಧಾನ ನಿಪುಣರು ಹಾಗು ರಾಜಕೀಯ ಮುತ್ಸುದ್ಧಿಗಳು ಪ್ರತಿಪಾದಿಸುತ್ತಿದ್ದಾರೆ. ನಿರಂಕುಶವಾಗಿ ಆಡಳಿತ ನಡೆಸುವ ಕೇಂದ್ರ ಪ್ರಭುತ್ವವಿರಬಾರದೆಂದೂ, ಆಡಳಿತ ವಿಕೇಂದ್ರೀಕರಣವು ಏರ್ಪಡಬೇಕೆನ್ನುವ ಆಶಯವು ವ್ಯಕ್ತವಾಗುತ್ತಿದೆ. ಆದರೆ ಕ್ರಿಸ್ತಶಕ ಆರನೆಯ ಶತಮಾನಕ್ಕಿಂತ ಬಹು ಹಿಂದಿನಿಂದಲೇ ಸಂಪೂರ್ಣ ಸಮಗ್ರ ವಿಕೇಂದ್ರಿಕೃತ ಆಡಳಿತ ವ್ಯವಸ್ಥೆಯು ನಮ್ಮ ದೇಶದಲ್ಲಿ ಏರ್ಪಟ್ಟಿತ್ತೆಂದು  ಪುರಾಣಗಳ ಮೂಲಕ ನಮಗೆ ಸ್ಪಷ್ಟವಾಗಿ ತಿಳಿದು ಬರುತ್ತದೆ.
        ಬೃಹದ್ರಥ ವಂಶದ ಜರಾಸಂಧನು ಮಹಾಭಾರತ ಯುದ್ಧಕ್ಕೆ ಪೂರ್ವದಲ್ಲಿ ಭಾರತದ ಸಾಮ್ರಾಟನಾಗಿದ್ದ! ಈ ಬೃಹದ್ರಥ ವಂಶದವರು ಮಹಾಭಾರತ ಆರಂಭವಾಗುವುದಕ್ಕೆ ಸಾವಿರ ವರ್ಷಗಳಷ್ಟು ಮುಂಚಿನಿಂದಲೇ ಭಾರತ ದೇಶದ ಸಾಮ್ರಾಟರಾಗಿದ್ದರೆಂದು ಪುರಾಣಗಳ ಆಧಾರದ ಮೇಲೆ ಶ್ರೀಯುತ ಕೋಟ ವೆಂಕಟಾಚಲಂ ಅವರು ತಮ್ಮ ಚಾರಿತ್ರಿಕ ಗ್ರಂಥಗಳಲ್ಲಿ (ತೆಲುಗು) ಪ್ರತಿಪಾದಿಸಿದ್ದಾರೆ. ಜರಾಸಂಧನ ಕಾಲದಲ್ಲಿ ಆಗಿನ ಕೇಂದ್ರ ರಾಜಧಾನಿ ಗಿರಿವ್ರಜವಾಗಿತ್ತು. ಕಲಿಯುಗಾರಂಭದ ಸುಮಾರು ನಾಲ್ಕರಿಂದ ಐದುನೂರು ವರ್ಷಗಳ ಕಾಲ ಇಂದ್ರಪ್ರಸ್ತ ಹಾಗು ಹಸ್ತಿನಾಪುರಗಳನ್ನು ಕೇಂದ್ರವಾಗಿರಿಸಿಕೊಂಡ ಕುರುವಂಶದ ರಾಜರು ಭಾರತ ದೇಶದ ಸಾಮ್ರಾಟರಾಗಿದ್ದರು. ತದನಂತರ ಗಿರಿವ್ರಜವೇ ಮತ್ತೊಮ್ಮೆ ಕೇಂದ್ರ ರಾಜಧಾನಿಯಾಯಿತು. ಗಿರಿವ್ರಜವು (ಇಂದಿನ ರಾಜಗೃಹ/ರಾಜಗಿರ್) ಮಗಧ ಪ್ರಾಂತದಲ್ಲಿ (ಬಿಹಾರ್ ಹಾಗು ಝಾರ್‌ಖಂಡ್ ಪ್ರಾಂತಗಳ ಸಂಗಮ ಕ್ಷೇತ್ರ) ಇತ್ತು. ಆದ್ದರಿಂದ ’ಮಗಧ ಸಾಮ್ರಾಜ್ಯ’ವೆನ್ನುವ ಹೆಸರು ಚರಿತ್ರೆಯಲ್ಲಿ ಚಿರಸ್ಥಾಯಿಯಾಗಿ ಉಳಿದಿದೆ. ಕ್ರಿಸ್ತಪೂರ್ವ ನಾಲ್ಕನೇ ಶತಮಾನದಲ್ಲಿ ಗುಪ್ತವಂಶದವರು ಸಾಮ್ರಾಟರಾಗಿ ರಾಜಧಾನಿಯನ್ನು ಗಿರಿವ್ರಜದಿಂದ ಪಾಟಲಿಪುತ್ರಾ ಅಥವಾ ಪಾಟ್ನಾಕ್ಕೆ (ಕುಸುಮಪುರವೆನ್ನುವುದು ಅದರ ಇನ್ನೊಂದು ಹೆಸರು) ಬದಲಾಯಿಸಿದರು. (ಆದರೆ ಗುಪ್ತ ವಂಶದ ಸಾಮ್ರಾಟರು ರಾಜಧಾನಿಯನ್ನು ಪಾಟಲಿಪುತ್ರದಿಂದ ಉಜ್ಜಯಿನಿಗೆ ಬದಲಾಯಿಸಿದರೆಂದು ಮೆಕಾಲೆ ವಿದ್ಯಾಗ್ರಸ್ತರು ಪ್ರಚಾರ ಮಾಡಿದರು. ಅಷ್ಟೇ ಅಲ್ಲ ಗುಪ್ತವಂಶಕ್ಕೆ ಸೇರಿದ ಎರಡನೇ ಚಂದ್ರಗುಪ್ತ ಹಾಗು ಶಕಕರ್ತ ವಿಕ್ರಮ ಇಬ್ಬರೂ ಒಂದೇ ಎಂದು ಬ್ರಿಟಿಷ್ ಬೀಭತ್ಸಕಾರ ವಿಲಿಯಂ ಜೋನ್ಸ್ ’ಕಂಡುಹಿಡಿದ’. ಶಕಕರ್ತನಾದ ವಿಕ್ರಮನು ವಾಸ್ತವವಾಗಿ ಗುಪ್ತರ ನಂತರ ಕ್ರಿ.ಪೂ. ಒಂದನೇ ಶತಮಾನದಲ್ಲಿ ಭಾರತದ ಸಾಮ್ರಾಟನಾಗಿದ್ದವನು. ಅವನ ರಾಜಧಾನಿ ಉಜ್ಜಯಿನಿಯಾಗಿತ್ತು).
       ಬೃಹದ್ರಥ ವಂಶಸ್ಥನಾಗಿದ್ದ ಜರಾಸಂಧನು ಪರಮ ದುರ್ಮಾಗಿಯಾಗಿದ್ದ, ಹಾಗಾಗಿ ಯದುಕುಲ ನಂದನನಾದ ಕೃಷ್ಣನು ಅವನನ್ನು ತೊಲಗಿಸಿ ಕುರುವಂಶಕ್ಕೆ ಸೇರಿದ ಧರ್ಮರಾಯನನ್ನು ಸಾಮ್ರಾಟನಾಗಿ ಪ್ರತಿಷ್ಠಾಪಿಸಿದ. ನಾಲ್ಕು ನೂರು ವರ್ಷಗಳ ನಂತರ ಪುನಃ ಈ ಬೃಹದ್ರಥ ವಂಶದವರೆ ಮತ್ತೆ ಸಾಮ್ರಾಟರಾದರು. ಹಾಗೆ ಗಿರಿವ್ರಜವನ್ನು ರಾಜಧಾನಿಯಾಗಿಸಿಕೊಂಡು ಬೃಹದ್ರಥ, ಪ್ರದ್ಯೋತ, ಶಿಶುನಾಗ, ನಂದ, ಮೌರ್ಯ, ಶುಂಗ, ಕಾಣ್ವ, ಆಂಧ್ರ ಶಾತವಾಹನ ವಂಶದವರು ಕ್ರಿಸ್ತಪೂರ್ವ ನಾಲ್ಕನೆಯ ಶತಮಾನದವರೆಗೂ (ಕಲಿಯುಗಾರಂಭದಿಂದ ಎರಡು ಸಾವಿರದ ಎಂಟು ನೂರು ವರ್ಷಗಳವರೆಗೆ) ಆಳಿದರು. ಕ್ರಿಸ್ತಪೂರ್ವ ೩೨೩ನೇ ಸಂವತ್ಸರದಲ್ಲಿ ಗುಪ್ತವಂಶದವರ ಪರಿಪಾಲನೆಯು ಆರಂಭವಾಯಿತು. ಗುಪ್ತ ವಂಶದ ಚಂದ್ರಗುಪ್ತನು ಅಲೆಗ್ಜಾಂಡರ್ ಎನ್ನುವ ಗ್ರೀಕ್ ದುರಾಕ್ರಮಣಕಾರನನ್ನು ಸೋಲಿಸಿದರೆ. ಅಲೆಗ್ಜಾಂಡರ್‌ನ ನಂತರ ನಮ್ಮ ದೇಶದ ಮೇಲೆ ದಂಡೆತ್ತಿ ಬಂದ ಸೆಲ್ಯೂಕಸ್‌ನನ್ನು ಚಂದ್ರಗುಪ್ತನ ಮಗನಾದ ಸಮುದ್ರಗುಪ್ತನು ಸೋಲಿಸಿ ಓಡಿಸಿದನು. ಕ್ರಿಸ್ತಪೂರ್ವ ಒಂದನೇ ಶತಮಾನದಲ್ಲಿ ಪ್ರಮರ ವಂಶದ ವಿಕ್ರಮನು ಸಾಮ್ರಾಟನಾದನು. ಅವನ ಆಸ್ಥಾನದಲ್ಲಿಯೇ ಮಹಾಕವಿ ಕಾಳಿದಾಸ, ವರಾಹಮಿಹಿರರಂಥಹ ’ನವರತ್ನ’ಗಳಿದ್ದರು. ವಿಕ್ರಮನು ವಿದೇಶೀ ದುರಾಕ್ರಮಣಕಾರರನ್ನು ಹೊಡೆದೋಡಿಸಿ ಶಕಕರ್ತನಾದನು! ಶಾಲಿವಾಹನನು ವಿಕ್ರಮನ ಮರಿಮೊಮ್ಮಗ! ಅವನು ಮತ್ತೊಬ್ಬ ಶಕಕರ್ತ!
        ಇಂದ್ರಪ್ರಸ್ತ, ಗಿರಿವ್ರಜ, ಪಾಟಲೀಪುತ್ರ, ಉಜ್ಜಯಿನಿಗಳು ’ಕೇಂದ್ರ ರಾಜಧಾನಿ’ಗಳಾಗಿ ಉಳ್ಳ ಸಾಮ್ರಾಜ್ಯಗಳು ರೂಪಿಸಿದ ಸ್ವತಂತ್ರವಾದ ಸಮಗ್ರ ಆಡಳಿತ ವ್ಯವಸ್ಥೆಯು ಸಮಸ್ತ ಭಾರತಕ್ಕೆ ಅನ್ವಯಿಸುವಂತೆ ಕ್ರಿಸ್ತಶಕ ಆರನೆಯ ಶತಮಾನದವರೆಗೂ ಪ್ರಚಲಿತದಲ್ಲಿತ್ತು. ಒಂದು ರಾಷ್ಟ್ರಕ್ಕೆ (ನೇಷನ್) ರಾಜ್ಯಾಂಗ (ಆಡಳಿತ) ವ್ಯವಸ್ಥೆಯೊಂದೇ ಮಾನದಂಡವೆಂದು ಪ್ರತಿಪಾದಿಸುವ ಪಾಶ್ಚಾತ್ಯರ ’ರಾಜಕೀಯ ರಾಷ್ಟ್ರೀಯತೆ’ಯ  (ಪೊಲಿಟಿಕಲ್ ನೇಷನ್ಯಾಲಿಟಿ) ಸಿದ್ದಾಂತದ ದೃಷ್ಟಿಕೋನದಿಂದಲೂ ಸಹ ಈ ದೇಶವು ಸಾವಿರಾರು ವರ್ಷಗಳಿಂದ ಒಂದೇ ರಾಷ್ಟ್ರವಾಗಿ ಇತ್ತು. ೧೯೪೭ರಿಂದ ನೂತನ ರಾಷ್ಟ್ರವಾಗಿ ನಮ್ಮ ದೇಶವು ಅವತರಿಸಿತು ಎನ್ನುವುದು ಹಾಸ್ಯಾಸ್ಪದವಲ್ಲದೆ ಮತ್ತೇನೂ ಅಲ್ಲ!
*****
       ಮೆಕಾಲೆ ವಿದ್ಯಾವಿಧಾನದಿಂದ ಉಂಟಾದ ದುಷ್ಪರಿಣಾಮಗಳನ್ನು ಒಂದೊಂದಾಗಿ ವಿಶ್ಲೇಷಿಸುವುದೇ ಈ ಸರಣಿಯ ಉದ್ದೇಶ. ಮೂಲತಃ ತೆಲುಗಿನಲ್ಲಿ "ಮೇಕ ವನ್ನೆಲ ಮೇಕಂ, ಮೆಕಾಲೆ ವಿದ್ಯಾ ವಿಧಾನಂ - ಮೇಕೆಯ ತೊಗಲು ಹೊದ್ದ ತೋಳ, ಮೆಕಾಲೆ ವಿದ್ಯಾ ವಿಧಾನ" ಎನ್ನುವ ಈ ಸರಣಿಯನ್ನು ಜಾಗೃತಿ ವಾರಪತ್ರಿಕೆಯಲ್ಲಿ ೨೦೦೮ರ ಆಸುಪಾಸಿನಲ್ಲಿ ಧಾರಾವಾಹಿಯಂತೆ, ಶ್ರೀಯುತ ತಂಗೇಡುಕುಂಟ ಹೆಬ್ಬಾರ್ ನಾಗೇಶ್ವರ್ ರಾವ್ ಅವರು ಬರೆದಿರುತ್ತಾರೆ. ಆ ಲೇಖನದ ಸೊಗಡನ್ನು ಕನ್ನಡಿಗರು ಆಸ್ವಾದಿಸುವಂತೆ ಮಾಡುವ  ಒಂದು ಪ್ರಯತ್ನವನ್ನು ನಾನಿಲ್ಲಿ ಮಾಡಿದ್ದೇನೆ. ಈಗ ನಿಮ್ಮ ಮುಂದಿರುವುದು ಈ ಸರಣಿಯ ಇಪ್ಪತ್ತನೆಯ ಕಂತು, "ಸಮೈಕ್ಯ ರಾಜಕೀಯ ವ್ಯವಸ್ಥ ಸಮಕೂರಿಂದಿ ಎಪ್ಪುಡು? - ಕೇಂದ್ರೀಯ ರಾಜ್ಯಾಂಗ ವ್ಯವಸ್ಥೆ ಏರ್ಪಟ್ಟಿದ್ದು ಯಾವಾಗ......?
 
    ಈ ಸರಣಿಯ ಹತ್ತೊಂಬತ್ತನೆಯ ಕಂತು, "ಬ್ರಿಟಿಷರು ಪ್ರಸಾದಿಸಿದ ಭೌಗೋಳಿಕ ವಾರಸತ್ವವಿದು.....!" ಎನ್ನುವ ಲೇಖನಕ್ಕೆ ಈ ಕೊಂಡಿಯನ್ನು ನೋಡಿ - https://sampada.net/blog/%E0%B2%AD%E0%B2%BE%E0%B2%97-%E0%B3%A7%E0%B3%AF-...
 

Rating
No votes yet

Comments

Submitted by makara Sat, 02/04/2017 - 21:22

ವಾಟ್ಸಪ್, ಟ್ವಟ್ಟರ್, ಫೇಸ್ ಬುಕ್ಕುಗಳ ಈ ಜಮಾನಾದಲ್ಲಿಯೂ ಸಹ ಆಸಕ್ತಿಯಿಂದ ಹಿಂದೂ ಪುರಾಣಗಳಂತೆ ಉದ್ದವಾಗಿರುವ ನನ್ನ ಲೇಖನಗಳನ್ನು ಸಂಪದಿಗರೆಲ್ಲರೂ ಓದಿ ಪ್ರೋತ್ಸಾಹಿಸುತ್ತಿದ್ದೀರಿ. ನಿಮಗೆಲ್ಲಾ ಧನ್ಯವಾದಗಳು. ಈ ಲೇಖನದ ಕೊಂಡಿಯನ್ನು ತಮ್ಮ ಫೇಸ್ ಬುಕ್ಕಿನ ಪುಟದಲ್ಲಿ ಹಂಚಿಕೊಂಡು ಈ ಲೇಖನವು ಹೆಚ್ಚು ಓದುಗರನ್ನು ತಲುಪುವಂತೆ ಮಾಡಿರುವ ನಾಗೇಶರಿಗೂ ಈ ಮೂಲಕ ಧನ್ಯವಾದಗಳನ್ನರ್ಪಿಸುತ್ತಿದ್ದೇನೆ. ಆಸಕ್ತರು ಈ ಸರಣಿಯ ಮುಂದಿನ ಲೇಖನಕ್ಕೆ ಈ ಕೊಂಡಿಯನ್ನು ಚಿವುಟಿಸಿ.https://sampada.net/blog/%E0%B2%AD%E0%B2%BE%E0%B2%97-%E0%B3%A8%E0%B3%A7-...
ವಂದನೆಗಳೊಂದಿಗೆ, ಶ್ರೀಧರ್ ಬಂಡ್ರಿ :)