ಭಾಗ ೨೧ - ಮೇಕೆಯ ತೊಗಲು ಹೊದ್ದ ತೋಳ, ಮೆಕಾಲೆ ವಿದ್ಯಾ ವಿಧಾನ: ಕ್ಷತಗಾತ್ರವಾಗಿಹ‌ ನಮ್ಮ ಇತಿಹಾಸ....

ಭಾಗ ೨೧ - ಮೇಕೆಯ ತೊಗಲು ಹೊದ್ದ ತೋಳ, ಮೆಕಾಲೆ ವಿದ್ಯಾ ವಿಧಾನ: ಕ್ಷತಗಾತ್ರವಾಗಿಹ‌ ನಮ್ಮ ಇತಿಹಾಸ....

ಚಿತ್ರ

 ಮ್ಯಾಕ್ಸ್ ಮುಲ್ಲರ್, ಗುಪ್ತ ಚಂದ್ರಗುಪ್ತ, ಸೈರಸ್ ಚಕ್ರವರ್ತಿ, ಚಿತ್ರಕೃಪೆ: ಗೂಗಲ್ 
      ಗ್ರೀಕ್ ಬೀಭತ್ಸಕಾರ ಅಲೆಗ್ಜಾಂಡರ್ ಭಾರತದ ಮೇಲೆ ದಂಡಯಾತ್ರೆ ಮಾಡಿದ್ದನ್ನು ಭಾರತದ ಚರಿತ್ರೆಯ ಮೈಲುಗಲ್ಲನ್ನಾಗಿ ಪರಿಗಣಿಸುವುದು ಬ್ರಿಟಿಷ್ ಇತಿಹಾಸಕಾರರ ವಿಧಾನ. ಅಲೆಗ್ಜಾಂಡರ್ ಭಾರತಕ್ಕೆ ಬಂದಾಗ ಅಥವಾ ಗಾಂಧಾರ ದೇಶದೊಳಕ್ಕೆ ನುಸುಳಿದಾಗ ಭಾರತವನ್ನು ಮೌರ್ಯ ಚಂದ್ರಗುಪ್ತನು ಪರಿಪಾಲಿಸುತ್ತಿದ್ದನು ಎಂದು ವಿಲಿಯಂ ಜೋನ್ಸ್ ‘ಸಂಶೋಧನೆ’ ಮಾಡಿದನು. ಆದರೆ ಭಾರತೀಯ ಪುರಾಣಗಳ ಪ್ರಕಾರ ಈ ಸಮಯದಲ್ಲಿ ಅಂದರೆ ಕ್ರಿ.ಪೂ. ೩೨೬ನೇ ವರ್ಷದ ಸುಮಾರಿನಲ್ಲಿ ಗುಪ್ತವಂಶಕ್ಕೆ ಸೇರಿದ ಚಂದ್ರಗುಪ್ತನ ಆಳ್ವಿಕೆಯಿತ್ತು. ಮೌರ್ಯ ಚಂದ್ರಗುಪ್ತ ಹಾಗು ಆಚಾರ್ಯ ಚಾಣಕ್ಯರು ಅಲೆಗ್ಜಾಂಡರ್‌ಗಿಂತ ಸುಮಾರು ೧೨೦೦ ವರ್ಷಗಳ ಹಿಂದೆ ಜೀವಿಸಿದ್ದವರು. ಅಲೆಗ್ಜಾಂಡರ್‌ನ ನಂತರ ಭಾರತದ ಮೇಲೆ ದಾಳಿ ಮಾಡಿದ ಸೆಲ್ಯೂಕಸ್‌ನನ್ನು ಸೋಲಿಸಿದವನು ಗುಪ್ತವಂಶದ ಸಮುದ್ರಗುಪ್ತ. ಸೆಲ್ಯೂಕಸ್‌ನು ತನ್ನ ಮಗಳನ್ನು ಸಮುದ್ರಗುಪ್ತನಿಗೆ ವಿವಾಹ ಮಾಡಿಕೊಟ್ಟನೆಂದು ಚರಿತ್ರೆ ಹೇಳುತ್ತದೆ. ಆದರೆ ಸೆಲ್ಯೂಕಸ್‌ನನ್ನು ಸೋಲಿಸಿದ್ದು ಮತ್ತು ಅವನ ಮಗಳನ್ನು ಮದುವೆಯಾದದ್ದು ಮೌರ್ಯ ಚಂದ್ರಗುಪ್ತನೆಂದು ವಿಲಿಯಂ ಜೋನ್ಸ್‌ನಂತಹ ’ಏಷಿಯಾಟಿಕ್ ಸೊಸೈಟಿ’ ಇತಿಹಾಸಕಾರರು ನಿರ್ಧರಿಸಿದರು. ಹೀಗೆ ಕ್ರಿ.ಪೂ. ಹದಿನಾರನೇ ಶತಮಾನದ ಮೌರ್ಯರನ್ನು ಓಡಿಸಿಕೊಂಡು ಬಂದು ಕ್ರಿ.ಪೂ. ನಾಲ್ಕನೇ ಶತಮಾನದಲ್ಲಿ ಕೂರಿಸುವುದರ ಮೂಲಕ ಮೆಕಾಲೆ ಪಂಡಿತರು ಹನ್ನೆರಡು ನೂರು ವರ್ಷಗಳ ಚರಿತ್ರೆಯನ್ನು ನುಂಗಿ ಹಾಕಿದರು. ಕಲಿಯುಗದ ಭಾರತೀಯ ಚರಿತ್ರೆಯ ಪ್ರಾಚೀನತೆಯನ್ನು ಕಡಿತಗೊಳಿಸಿದ ವಿಕೃತ ‘ಕಾಲಾಂತಕ’ರು ಬ್ರಿಟಿಷ್ ಮೇಧಾವಿಗಳು! ಕ್ರಿ.ಶ. ೧೭೮೪ರಲ್ಲಿ ಜೋನ್ಸ್‌ ಪ್ರಭೃತಿಗಳು ’ಏಷಿಯಾಟಿಕ್ ಸೊಸೈಟಿ’ ಪತ್ರಿಕೆಗಳಲ್ಲಿ ಭಾರತೀಯ ಚರಿತ್ರೆಯನ್ನು ತಿರುಚಿ ಬರೆದ ಲೇಖನಗಳನ್ನು ಅಂದು ಇಂಗ್ಲೀಷ್ ಬಾರದ, ಸಂಸ್ಕೃತ ಮಾತ್ರವೇ ಬರುತ್ತಿದ್ದ ಭಾರತೀಯ ವಿದ್ವಾಂಸರು ಗಣನೆಗೆ ತೆಗೆದುಕೊಳ್ಳಲಿಲ್ಲ. ಸರಿಸುಮಾರು ನೂರು ವರ್ಷಗಳ ಕಾಲ ಮೆಕಾಲೆ ವಿದ್ಯೆಯ ಪ್ರಭಾವದ ಪುಣ್ಯವಿಶೇಷದಿಂದಾಗಿ ಸಂಸ್ಕೃತವನ್ನು ಮರೆತ ಹಾಗು ಇಂಗ್ಲೀಷ್ ಕಲಿತ ಭಾರತೀಯ ಮೇಧಾವಿಗಳಿಗೆ ಬ್ರಿಟಿಷರ ಅಬದ್ಧಗಳೇ ಪರಮಪ್ರಮಾಣಗಳಾದವು........! ಪ್ರಾಚೀನತೆ ಕಡಿಮೆಯಾದರೆ ಏನು? ಹೆಚ್ಚಾದರೆ ಏನು? ಅದರಿಂದೊದಗುವ ಲಾಭವೇನು? ಎಂದು ಪ್ರಶ್ನಿಸುವವರು ಈಗ ಹೇರಳವಾಗಿದ್ದಾರೆ. ತಮ್ಮ ಉದ್ಯೋಗಗಳಲ್ಲಿ ಸೇವಾ ಹಿರಿತನ (ಸೀನಿಯಾರಿಟಿ) ಎರಡು ದಿನ ಕಡಿಮೆಯಾದರೂ ಅಥವಾ ವ್ಯತ್ಯಾಸವಾದರೂ ನ್ಯಾಯಾಲಯದ ಮೆಟ್ಟಿಲುಗಳನ್ನೇರಿ ಅದನ್ನೇ ತಮ್ಮ ಜೀವನ್ಮರಣದ ಸಮಸ್ಯೆಯನ್ನಾಗಿ ಮಾಡಿಕೊಂಡು ಹೋರಾಡುವುದು ಕಂಡುಬರುತ್ತದೆ, ಆದರೆ ರಾಷ್ಟ್ರೀಯ ಚರಿತ್ರೆಯಲ್ಲಿ ಶತಮಾನಗಳ ಕಾಲ ಸಮಾಧಿಯಾದರೂ ಸಹ ಅದು ಅವರಿಗೆ ಲೆಕ್ಕಕ್ಕಿಲ್ಲ, ಇತಿಹಾಸವನ್ನು ಹತ್ಯೆಗೈದ ದುರ್ಮಾರ್ಗಿಗಳ ಆಟವನ್ನು ಕೊನೆಗೊಳಿಸಬೇಕೆಂಬ ಬುದ್ಧಿಯೂ ಇಲ್ಲ! ಮೆಕಾಲೆ ವಿದ್ಯೆಯು ಸೃಷ್ಟಿಸಿದ ಮಾಯಾಜಾಲದಲ್ಲಿ ಭಾರತದೇಶದ ಇತಿಹಾಸವು ಬಂಧಿಯಾಗಿದೆ... ಈ ಶೃಂಖಲೆಗಳಿಂದ ಅದನ್ನು ಮುಕ್ತಗೊಳಿಸಲು ಟಿ.ಎಸ್. ನಾರಾಯಣ ಶಾಸ್ತ್ರಿ, ನಡಿಂಪಲ್ಲಿ ಜಗನ್ನಾಥರಾವ್, ಕೋಟ ವೆಂಕಟಾಚಲಂ, ಪಿ.ಎನ್. ಓಕ್, ಶ್ರೀ ರಾಮ್ ಸಾಠೆ ಮೊದಲಾದ ರಾಷ್ಟ್ರೀಯ ಇತಿಹಾಸ ಸಂಶೋಧಕರು ಶತಮಾನಗಳ ಕಾಲ ಕೃಷಿ ಮಾಡಿದ್ದಾರೆ. ಎಮ್. ವಿ. ಆರ್. ಶಾಸ್ತ್ರಿ, ಎನ್. ಎಸ್. ರಾಜಾರಾಂ, ಕಲ್ಯಾಣ ರಾಮನ್ ಮೊದಲಾದ ಮಹನೀಯರು ಆ ಕೃಷಿಯನ್ನು ಪ್ರಸ್ತುತ ಕಾಲದಲ್ಲಿ ಮುಂದುವರೆಸಿಕೊಂಡು ಹೋಗುತ್ತಿದ್ದಾರೆ! ಆದರೆ ಭಾರತೀಯ ಇತಿಹಾಸವು ಇಂದಿನವರೆಗೂ ಮೆಕಾಲೆ ವಿದ್ಯಾಗ್ರಹಣದಿಂದ ಮುಕ್ತಿ ಹೊಂದಿಲ್ಲ!
*****
       ಸ್ವಚ್ಛ ನೀಲಾಕಾಶದಲ್ಲಿ ಅನಾದಿಕಾಲದಿಂದಲೂ ’ಸಪ್ತರ್ಷಿ ಮಂಡಲ’ವು ಮಿರಮಿರನೆ ಹೊಳೆಯುತ್ತಿದೆ. ಅಶ್ವಿನಿಯಿಂದ ರೇವತಿವರೆಗೂ ಇರುವ ೨೭ ನಕ್ಷತ್ರಗಳು ಪ್ರತಿದಿನವೂ ಉದಯಿಸಿ ಅಸ್ತಮಿಸುತ್ತಿವೆ. ಒಂದು ನಕ್ಷತ್ರವು ಉದಯಿಸಿದ ನಂತರ ಅದರ ಹಿಂದಿರುವ ನಕ್ಷತ್ರವು ಉದಯಿಸಲು ಸುಮಾರು ನಲವತ್ತೆಂಟು ನಿಮಿಷಗಳು ಬೇಕಾಗುತ್ತವೆ. ಚಂದ್ರನೂ ಸಹ ಪ್ರತಿದಿನವೂ ಹಿಂದೆ ಉಳಿಯುತ್ತಿದ್ದಾನೆ. ಈ ದಿನ ಅಶ್ವಿನಿ ನಕ್ಷತ್ರದೊಂದಿಗೆ ಉದಯಿಸುವ ಚಂದ್ರನು ನಾಳೆ ಭರಣಿ ನಕ್ಷತ್ರದೊಂದಿಗೆ ಉದಯಿಸುತ್ತಾನೆ. ಹೀಗೆ ಇಪ್ಪತ್ತೇಳು ದಿನಗಳು ಕಳೆಯುವುದರೊಳಗೆ ಚಂದ್ರನು ಎಲ್ಲಾ ನಕ್ಷತ್ರಗಳೊಂದಿಗೆ ಸೇರಿ ಹಿಂದೆ ಉಳಿಯುತ್ತಾನೆ. ಇಪ್ಪತ್ತೆಂಟನೇ ದಿವಸ ಚಂದ್ರನು ಪುನಃ ಅಶ್ವಿನಿ ನಕ್ಷತ್ರದೊಂದಿಗೆ ಉದಯಿಸುತ್ತಾನೆ. ಸೂರ್ಯನೂ ಸಹ ಇದೇ ವಿಧವಾಗಿ ಒಂದೊಂದು ನಕ್ಷತ್ರದೊಂದಿಗೆ ಹದಿಮೂರು ಇಲ್ಲಾ ಹದಿನಾಲ್ಕು ದಿನಗಳ ಕಾಲ ಉದಯಿಸುತ್ತಾನೆ. ಅಶ್ವಿನಿ ನಕ್ಷತ್ರದ ಅವಧಿಯಲ್ಲಿ ಅಶ್ವಿನಿಯೊಂದಿಗೆ ಉದಯಿಸುವ ಸೂರ್ಯನು ಹದಿಮೂರು ಅಥವಾ ಹದಿನಾಲ್ಕು ದಿನಗಳ ನಂತರ ಹಿಂದೆ ಸರಿದು ಭರಣಿ ನಕ್ಷತ್ರದೊಂದಿಗೆ ಉದಯಿಸುತ್ತಾನೆ. ಆದ್ದರಿಂದ ಸೂರ್ಯನು ಪುನಃ ಅಶ್ವಿನಿ ನಕ್ಷತ್ರದೊಂದಿಗೆ ಉದಯಿಸಲು ಒಂದು ಸಂವತ್ಸರ ಕಾಲವು ಬೇಕಾಗುತ್ತದೆ. ‘ಸಪ್ತರ್ಷಿ ಮಂಡಲ’ಕ್ಕೆ ಹಾಗು ನಕ್ಷತ್ರಗಳಿಗೆ ಈ ’ಸಾಪೇಕ್ಷ ಗಮನ ಅನುಬಂಧ’ವು ಮತ್ತಷ್ಟು ನಿಧಾನವಾಗಿ ಆಗುತ್ತದೆ! ಸಪ್ತರ್ಷಿ ಮಂಡಲವು ಒಂದೊಂದು ನಕ್ಷತ್ರದೊಂದಿಗೆ ಉದಯಿಸಲು ಒಂದು ನೂರು ವರ್ಷಗಳ ಕಾಲವನ್ನು ತೆಗೆದುಕೊಳ್ಳುತ್ತದೆ. ಹೀಗೆ ಒಂದು ನೂರು ವರ್ಷಗಳ ಕಾಲ ಅಶ್ವಿನಿಯೊಂದಿಗೆ ಉದಯಿಸುವ ಸಪ್ತರ್ಷಿ ಮಂಡಲವು ಪುನಃ ಅಶ್ವಿನಿಯೊಂದಿಗೆ ಉದಯಿಸಲು ಎರಡು ಸಾವಿರದ ಆರು ನೂರು ವರ್ಷಗಳ ಕಾಲವು ಬೇಕಾಗುತ್ತದೆ! ಇದರ ಅರ್ಥ ಸಪ್ತರ್ಷಿ ಮಂಡಲವು ಇಪ್ಪತ್ತೇಳು ನಕ್ಷತ್ರಗಳೊಂದಿಗೆ ಸುತ್ತಿಬಂದು ಪುನಃ ಅಶ್ವಿನಿ ನಕ್ಷತ್ರದೊಂದಿಗೆ ಉದಯಿಸಲು ಇಪ್ಪತ್ತೇಳು ನೂರು ವರ್ಷಗಳ ಕಾಲವು ಬೇಕಾಗುತ್ತದೆ. ಇದು ವಾಸ್ತವವಾದ ಖಗೋಳ ಸತ್ಯ.
       ಈ ಖಗೋಳ ವಾಸ್ತವವನ್ನು ಆಧಾರವಾಗಿಟ್ಟುಕೊಂಡು ನಮ್ಮ ಪೂರ್ವಿಕರು ನಮ್ಮ ಚರಿತ್ರೆಯನ್ನು ದಾಖಲಿಸಿದ್ದಾರೆ. ಅದೇ ವಿಧವಾಗಿ ಸಮಯವನ್ನು ಲೆಕ್ಕ ಹಾಕಿದ್ದಾರೆ. ಅನೇಕಾನೇಕ ಪುರಾಣ ಹಾಗು ಇತಿಹಾಸ ಗ್ರಂಥಗಳಲ್ಲಿ ಈ ವಿಷಯವನ್ನು ಹೇಳಿದ್ದಾರೆ.
                        "ಸಪ್ತರ್ಷುಯೋ ಮಘಾ ಯುಕ್ತಾ
                        ಕಾಲೇ ಯೌಧಿಷ್ಠಿರೇ ಶತಂ"
      ಯುಧಿಷ್ಠಿರನ ಕಾಲದಲ್ಲಿ ಸಪ್ತರ್ಷಿಗಳು ಮಘ ನಕ್ಷತ್ರದಲ್ಲಿ ನೂರು ವರ್ಷಗಳ ಕಾಲವಿದ್ದರು ಎನ್ನುವುದು ಈ ಶ್ಲೋಕದ ಭಾವಾರ್ಥ. ಸೂರ್ಯ,  ಚಂದ್ರರು ಇಪ್ಪತ್ತೇಳು ನಕ್ಷತ್ರಗಳ ಚಲನೆಯೊಂದಿಗೆ ಹೋಲಿಸಿದಾಗ ಕ್ರಮೇಣ ಹಿಂದೆ ಉಳಿಯುತ್ತಿದ್ದಾರೆ. ಆದ್ದರಿಂದ ಅಶ್ವಿನಿ ಮುಂದೆ ಹೋಗಿ ಭರಣಿ ನಕ್ಷತ್ರ ಬಂದು ಸೇರುತ್ತದೆ. ತದನಂತರ, ಕೃತ್ತಿಕ, ರೋಹಿಣಿ, ಮೃಗಶಿರ - ಮೊದಲಾದವು ಚಂದ್ರನೊಂದಿಗೆ ಸೇರಿಕೊಳ್ಳುತ್ತವೆ. ಆದರೆ ಸಪ್ತರ್ಷಿ ಮಂಡಲವು ನಕ್ಷತ್ರಗಳನ್ನು ಹಿಮ್ಮೆಟ್ಟಿಸಿ ಒಂದು ನೂರು ವರ್ಷಗಳಿಗೊಮ್ಮೆ ಅದು ಮುಂದಕ್ಕೆ ಸಾಗುತ್ತದೆ! ಆದ್ದರಿಂದ ಸಪ್ತರ್ಷಿಗಳು ಅಶ್ವಿನಿಯ ನಂತರ ಭರಣಿಗೆ ಬರುವುದಿಲ್ಲ, ಆದರ ಬದಲು ಅವರು ರೇವತಿಗೆ ಹೋಗುತ್ತಾರೆ. ರೇವತಿಯಿಂದ, ಉತ್ತರಾಭಾದ್ರ, ಪೂರ್ವಭಾದ್ರ ಹೀಗೆ ಹಿಮ್ಮುಖವಾಗಿ ಸಪ್ತರ್ಷಿ ಮಂಡಲದ ಚಲನೆಯು ಸಾಗುತ್ತದೆ. ಆದ್ದರಿಂದ ಮಹಾಭಾರತ ಯುದ್ಧದ ಸಮಯದಲ್ಲಿ ಮಘ ನಕ್ಷತ್ರದಲ್ಲಿದ್ದ ಸಪ್ತರ್ಷಿಗಳು ಅದರ ನಂತರ ಆಶ್ಲೇಷ ನಕ್ಷತ್ರದಲ್ಲಿ ನೂರು ವರ್ಷಗಳ ಕಾಲ ಇದ್ದರು. ಧರ್ಮರಾಯನ ನಂತರ ಪರೀಕ್ಷಿತ ಮಹಾರಾಜನ ಕಾಲದಲ್ಲಿಯೂ ಕೂಡಾ ಸಪ್ತರ್ಷಿ ಮಂಡಲವು ಕೆಲವರ್ಷಗಳು ಮಘ ನಕ್ಷತ್ರದಲ್ಲಿಯೇ ಇತ್ತು.
                        "ಸಪ್ತರ್ಷಯೋ ಮಘಾಯುಕ್ತ
                       ಕಾಲೇ ಪಾರಿಕ್ಷಿತೇ ಶತಂ"
     ಎನ್ನುವ ಪುರಾಣ ವಾಕ್ಯವು, "ಪರೀಕ್ಷಿತ ಮಹಾರಾಜನ ಕಾಲದಲ್ಲಿ ನೂರು ವರ್ಷಗಳ ಮಘ ನಕ್ಷತ್ರ ಬಂಧದ ಕುರಿತು ಹೇಳುತ್ತದೆ. ಹೀಗೆ ಸಪ್ತರ್ಷಿ ಮಂಡಲವು ಇಪ್ಪತ್ತೇಳು ನಕ್ಷತ್ರಗಳನ್ನು ಸುತ್ತುವ ಖಗೋಳ ವಾಸ್ತವವನ್ನು ಆಧರಿಸಿ ಕ್ರಿಸ್ತ ಪೂರ್ವ ೩,೧೩೮ನೇ ವರ್ಷದಲ್ಲಿ ಮಹಾಭಾರತ ಯುದ್ಧವು ನಡೆಯಿತೆಂದು ರಾಷ್ಟ್ರೀಯ ಇತಿಹಾಸಕಾರರು ನಿರ್ಧರಿಸಿದ್ದಾರೆ. ವಿಲಿಯಂ ಜೋನ್ಸ್ಕ್ರಿ.ಶ. ೧೭೭೪ರಲ್ಲಿ ಇದರ ಬಗ್ಗೆ ಅನುಮಾನ ವ್ಯಕ್ತಪಡಿಸಿದನು, ಆ ನಂತರ ಅದನ್ನು ನಿರಾಕರಿಸಿದನು! ಆದ್ದರಿಂದ ಕ್ರಮೇಣ ಸತ್ಯವು ಭೂಸ್ಥಾಪಿತವಾಯಿತು.
       ಮಹಾಭಾರತ ಯುದ್ಧದ ನಂತರ ಮೂವತ್ತಾರು ವರ್ಷಗಳಿಗೆ ಕೃಷ್ಣನು ಮರಣಿಸಿದ. ಆ ದಿನದಂದೇ ದ್ವಾಪರವು ಮುಗಿದು ಕಲಿಯುಗದ ಆರಂಭವಾಯಿತು.
                        "ಯಸ್ಮಿನ್ ಕೃಷ್ಣ ದಿವಂ ಯಾತಃ
                         ತಸ್ಮಿನ್ ಏವ ತದಾಹನಿ
                         ಪ್ರತಿಪನ್ನಂ ಕಲಿಯುಗಂ......"
     ಎನ್ನುವ ಪುರಾಣ ವಾಕ್ಯವು ಕಲಿಯುಗದ ಆರಂಭವನ್ನು ಸೂಚಿಸುತ್ತದೆ. ’ಸಪ್ತರ್ಷಿ ಮಂಡಲದ ಚಲನೆಯನ್ನು ಆಧರಿಸಿ ಕ್ರಿ.ಪೂ. ೩೧೦೨ನೇ ವರ್ಷದಲ್ಲಿ ಕಲಿಯುಗವು ಆರಂಭವಾಯಿತು ಎನ್ನುವ ಸತ್ಯವೇ ರಾಷ್ಟ್ರೀಯ ಚರಿತ್ರೆಗೆ ಮಾನದಂಡ. ಅಮೇರಿಕಾದ ’ನಾಸಾ’ (NASA - National Aeronautics and Space Administration) ಸಂಸ್ಥೆಯು ನಾಲ್ಕೈದು ವರ್ಷಗಳ ಕೆಳಗೆ ಈ ವಿಷಯವನ್ನು ಧ್ರುವೀಕರಿಸಿದೆ. ಕೃಷ್ಣನು ಕ್ರಿ.ಪೂ. ೩೧೦೨ರಂದು ದಿವಂಗತನಾದದ್ದನ್ನು ನಾಸಾ ಧ್ರುವೀಕರಿಸಿದೆ. ಆದರೆ ಮೆಕಾಲೆ ವಿದ್ಯಾಗ್ರಸ್ತರು ಗತ ನೂರಾ ಐವತ್ತು ವರ್ಷಗಳಿಗೂ ಅಧಿಕ ಕಾಲದಿಂದಲೂ ಈ ಸತ್ಯವನ್ನು ಅಂಗೀಕರಿಸಲಿಲ್ಲ! ಕ್ರಿ.ಪೂ. ೩೧೦೨ಕ್ಕೂ ಮುಂಚಿತವಾಗಿಯೇ ವೇದವ್ಯಾಸರು ವೇದಗಳನ್ನು ನಾಲ್ಕು ವಿಭಾಗಗಳಾಗಿ ವರ್ಗೀಕರಿಸಿದ್ದಾರೆ. ಹಾಗಿರುವಾಗ, ೧೨೦೦, ೧೫೦೦ ಸಂವತ್ಸರ ಮಧ್ಯ ಕಾಲದಲ್ಲಿ ಋಗ್ವೇದವನ್ನು ರಚಿಸಲಾಯಿತೆಂದು ಜೋನ್ಸ್, ಮ್ಯಾಕ್ಸ್ಮುಲ್ಲರ್ಗಳಂತಹ ಮೇಧಾವಿಗಳು "ಕಂಡು ಹಿಡಿದಿದ್ದಾರೆ". ನಮ್ಮ ರಾಷ್ಟ್ರೀಯ ಚರಿತ್ರೆಯ ಪ್ರಕಾರ ಕ್ರಿ.ಪೂ. ೧೫೦೦ನೇ ವರ್ಷದಲ್ಲಿ (ಕಲಿಯುಗಾಬ್ದಿ ೧೬೦೨ರಲ್ಲಿ) ಮೌರ್ಯ ಚಂದ್ರಗುಪ್ತನ ಆಳ್ವಿಕೆಯು ಮುಗಿದು ಅವನ ಮಗ ಬಿಂದುಸಾರನು ರಾಜನಾದನು! ಹಾಗಾದರೆ ಮೌರ್ಯರ ಕಾಲದಲ್ಲಿ ಋಗ್ವೇದವನ್ನು ರಚಿಸಲಾಯಿತಾ? ಅದಕ್ಕಾಗಿ ಮೌರ್ಯರನ್ನು ಕ್ರಿ.ಪೂ. ೧೫೦೦ರಿಂದ ಕ್ರಿ.ಪೂ. ೩೨೦ಕ್ಕೆ ಬ್ರಿಟಿಷರು ಎಳೆದು ತಂದರು. ಮ್ಯಾಕ್ಸ್ಮುಲ್ಲರ್ ಸ್ವಲ್ಪ ಔದಾರ್ಯವನ್ನು ತೋರಿಸಿ, "ವೇದ ಮಂತ್ರಗಳನನ್ನು ಎಂದಿಗೆ ರಚಿಸಲಾಯಿತು ಎನ್ನುವುದನ್ನು ನಿರ್ಧಾರಿಸಲಾಗದು! ಕ್ರಿ.ಪೂ. ೧೫೦೦ ಇರಬಹುದು, ಕ್ರಿ.ಪೂ. ೨೦೦೦ ಇರಬಹುದು...." ಎಂದು ಪ್ರಕಟಿಸಿದನು. ಈ ಔದಾರ್ಯವೂ ಕೂಡಾ ಕ್ರಿ.ಪೂ. ೩೦೦೦ವನ್ನು ದಾಟಿ ಪೂರ್ವಕ್ಕೆ ಹೋಗಲಿಲ್ಲ. ಇತರೇ ಪಾಶ್ಚಾತ್ಯ ಪಂಡಿತರು, "ವೇದಗಳಿಗೆ ಹೆಚ್ಚಿನ ಪ್ರಾಚೀನತೆಯನ್ನು ಕಲ್ಪಿಸುವುದು ಪ್ರಮಾದಕರೆವೆಂದು!" ಖಗೋಳ ವಿಜ್ಞಾನವನ್ನು ಆಧರಿಸಿ ಚರಿತ್ರೆಯನ್ನು ನಿರ್ಧರಿಸುವುದು ಸರಿಯಲ್ಲವೆಂದು" ಅವನ ಬಾಯಿ ಮುಚ್ಚಿಸಿದರು...... ಈ ವಿಧವಾಗಿ ಪಾಶ್ಚಾತ್ಯ ವಿದ್ವಾಂಸರು ನೂರು ವರ್ಷಗಳ ಕಾಲ ನಮಗೆ ಮತ್ತೆ ಮತ್ತೆ ಒತ್ತಿ ಒತ್ತಿ ಹೇಳಿದ್ದಾರೆ. ಕ್ರಿ.ಶ. ೧೭೭೪ರಿಂದ ಕ್ರಿ.ಶ. ೧೮೭೪ರವರೆಗೆ ನಡೆದ ಈ ಭೋಧನೆಯಿಂದ ಭಾರತೀಯರ ಆಲೋಚನಾ ವಿಧಾನವೇ ಬದಲಾಗಿ ಹೋಯಿತು. ಕೃತಯುಗ, ತ್ರೇತಾಯುಗ, ದ್ವಾಪರಯುಗ, ಕಲಿಯುಗ ಎನ್ನುವುದನ್ನು ನಾವು ಕೈಬಿಟ್ಟು, ಹಳೆ ಶಿಲಾಯುಗ, ಹೊಸ ಶಿಲಾಯುಗ, ಲೋಹಯುಗ ಎಂದು ಹೇಳುವುದನ್ನು ಕಲಿತುಕೊಂಡೆವು.  
     ಕ್ರಿ.ಶ.೧೭೪೬ರಲ್ಲಿ ಲಂಡನ್ನಿನಲ್ಲಿ ಜನ್ಮತಳೆದ ವಿಲಿಯಂ ಜೋನ್ಸ್ ಕ್ರಿ.ಶ. ೧೭೭೪ರಲ್ಲಿ ಕಲ್ಕತ್ತಾ ನಗರಕ್ಕೆ ಬಂದನು. ಅಷ್ಟರಲ್ಲಾಗಲೇ ಭಯಂಕರವಾದ ಬೀಭತ್ಸಕಾಂಡವನ್ನು ಜರುಗಿಸಿ, ಲಂಚಕೋರತನ ಮೊದಲಾದ ಅಕ್ರಮಗಳನ್ನು ಪ್ರತಿಷ್ಠಾಪಿಸಿದ ರಾಬರ್ಟ್ ಕ್ಲೈವ್‌ ನಿಷ್ಕ್ರಮಿಸಿ ವಾರೆನ್ ಹೇಸ್ಟಿಂಗ್ಸ್ ೧೭೭೨ರಲ್ಲಿ ಈಸ್ಟ್ ಇಂಡಿಯಾ ಕಂಪನಿಯ ಗವರ್ನರ್ ಜನರಲ್ ಆಗಿ ಪದವಿಗ್ರಹಣ ಮಾಡಿದ್ದ. ಹೇಸ್ಟಿಂ ವಿಲಿಯೊಂ ಜೋನ್ಸ್ ಇಬ್ಬರೂ ಸ್ನೇಹಿತರು. ವಾರೆನ್ ಹೇಸ್ಟಿಂಗ್ಸ್ ಮಾಡಿದ ಅಕ್ರಮಗಳನ್ನು ಹಾಗು ಅಪರಾಧಗಳನ್ನು ಉಲ್ಲೇಖಿಸುತ್ತಾ ನಂದಕುಮಾರ್ ಎನ್ನುವ ರಾಷ್ಟ್ರೀಯವಾದಿ ’ಗವರ್ನರುಗಳ ಸಲಹಾ ಮಂಡಳಿಗೆ’ ದೂರು ಕೊಟ್ಟನು. ನಂದಕುಮಾರ್ ವಾರೆನ್ ಹೇಸ್ಟಿಂಗ್ಸನಿಗೆ ವಿರುದ್ಧವಾಗಿ ಬಂಗಳಾ ಪ್ರಾಂತದಲ್ಲೆಲ್ಲಾ ಚಳವಳಿಯನ್ನು ಆರಂಭಿಸಿದನು. ವಾರೆನ್ ಹೇಸ್ಟಿಂಗ್ಸ್,  ರಾಬರ್ಟ್ ಕ್ಲೈವನಿಗಿಂತ ಹೆಚ್ಚಿನ ದುರ್ಮಾರ್ಗಿ, ಅಕ್ರಮಗಳನ್ನೆಸಗುವವನು ಹಾಗು ಕೊಲೆಗಾರನಾಗಿದ್ದ. ಕ್ಲೈವ್ ಹಾಗು ಹೇಸ್ಟಿಂಗ್ಸ್ ಇವರಿಬ್ಬರೂ ಎಸಗಿದ ಅಕ್ರಮಗಳಿಗೆ ಅವರ ಮೇಲೆ ಕ್ರಮ ಕೈಗೊಳ್ಳಬೇಕೆನ್ನುವ ಪ್ರಸ್ತಾವನೆಯೊಂದು ಬ್ರಿಟನ್ನಿನ ಪಾರ್ಲಿಮೆಂಟಿನಲ್ಲಿ ಚರ್ಚೆಗೆ ಬಂದಿತು. ಪ್ರಸಿದ್ಧ ನ್ಯಾಯಾಂಗ ನಿಷ್ಣಾತನಾದ ಬರ್ಕ್, ‘ವಾರೆನ್ ಹೇಸ್ಟಿಂಗ್ಸ್‌’ನನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡನು. ಹೇಸ್ಟಿಂಗ್ಸ್ ನಂದಕುಮಾರ ಪಂಡಿತನನ್ನು ಕೊಲೆ ಮಾಡಿಸಿದ. ಈ ಹತ್ಯೆಯನ್ನು ಪ್ರತಿಭಟಿಸಿ ವಂಗ ಪ್ರಾಂತವು ಹೊತ್ತಿ ಉರಿಯಿತು. ಸಂನ್ಯಾಸಿಗಳು ಹಾಗೂ ಬ್ರಹ್ಮಚಾರಿಗಳ ನೇತೃತ್ವದಲ್ಲಿ ಬ್ರಿಟಿಷರ ವಿರುದ್ಧ ಒಂದು ಬೃಹತ್ ಚಳವಳಿಯು ನಡೆಯಿತು. ಇದೇ ’ಸಂನ್ಯಾಸಿಗಳ ಕ್ರಾಂತಿ’ ಎಂದು ಚರಿತ್ರೆಯಲ್ಲಿ ದಾಖಲಾಗಿದೆ. ಈ ನೈಜ ಕ್ರಾಂತಿಯ ಘಟನೆಯನ್ನು ಆಧಾರವಾಗಿಟ್ಟುಕೊಂಡು ಸುಮಾರು ನೂರು ವರ್ಷಗಳ ನಂತರ ಬಂಕಿಮ ಚಂದ್ರ ಚಟರ್ಜಿಯವರು ’ಆನಂದ ಮಠ’ ಎನ್ನುವ ಕಾದಂಬರಿಯನ್ನು ರಚಿಸಿದರು. ಹೇಸ್ಟಿಂಗ್ಸ್ ಕೈಗೊಂಡ ಭೌತಿಕ ಬೀಭತ್ಸಕಾಂಡದ ಪರಿಣಾಮವಾಗಿ ಬ್ರಿಟಿಷರ ವಿರುದ್ಧದ ಹೋರಾಟವು ತೀವ್ರ ಸ್ವರೂಪವನ್ನು ಪಡೆಯಿತು. ಆದ್ದರಿಂದ ಅವನ ಸ್ನೇಹಿತನಾಗಿದ್ದ ವಿಲಿಯಂ ಜೋನ್ಸ್ ಸದ್ದಿಲ್ಲದೆ ಗುಟ್ಟಾಗಿ ಭಾರತೀಯರ ವಿರುದ್ಧವಾಗಿ ಬೌದ್ಧಿಕ ಬೀಭತ್ಸವನ್ನು ಆರಂಭಿಸಿದ. ಭಾರತೀಯ ಚರಿತ್ರೆಯನ್ನು ಸದ್ದು ಗದ್ದಲವಿಲ್ಲದೆ ಹತ್ಯೆಗೈದ! ಹೀಗೆ ಚರಿತ್ರೆಯನ್ನು ಹತ್ಯೆಮಾಡುವ ಅನೇಕ ಮಂದಿ ತಯಾರಾದರು! ಮೆಕಾಲೆ ವಿದ್ಯೆ ಸಾಧಿಸಿದ ಪ್ರಧಾನ ಲಕ್ಷ್ಯವು ಈ ಚರಿತ್ರೆಯ ಹತ್ಯೆಯೇ! ವಿಲಿಯಂ ಜೋನ್ಸ್‌ಕಲ್ಕತ್ತಾ ಸುಪ್ರೀಂ ಕೋರ್ಟಿನ ನ್ಯಾಯಾಧೀಶನಾಗಿದ್ದ. ಅವನು ‘ಏಷಿಯಾಟಿಕ್ ಸೊಸೈಟಿ’ ಎನ್ನುವ ಸಂಸ್ಥೆಯನ್ನು ಸ್ಥಾಪಿಸಿ ಅದರ ಮೂಲಕ ಸಂಸ್ಕೃತ ಗ್ರಂಥಗಳನ್ನು ಇಂಗ್ಲೀಷಿಗೆ ತರ್ಜುಮೆ ಮಾಡಿದ ಹಾಗು ಮಾಡಿಸಿದ.  ಅದನ್ನೇ ಇಂದಿಗೂ ದೊಡ್ಡದಾಗಿ ಪ್ರಚಾರ ಮಾಡಲಾಗುತ್ತಿದೆ. ಕಾಳಿದಾಸ ಕೃತ ಶಾಕುಂತಲ ನಾಟಕವನ್ನು ಜೋನ್ಸ್ ಆಂಗ್ಲೀಕರಿಸಿದ! ಹೀಗೆ ಒಳ್ಳೆಯವನ ಸೋಗು ಹಾಕುತ್ತಾ ವಿಲಿಯಂ ಜೋನ್ಸ್ ಭಾರತೀಯ ಚರಿತ್ರೆಯನ್ನು ವಿಕೃತಗೊಳಿಸಿದ.... ಅದರ ಹಿರಿಮೆಯನ್ನೂ, ಪ್ರಾಚೀನತೆಯನ್ನೂ ಕಡಿತಗೊಳಿಸಿದ!
    ಆದಿ ಶಂಕರಾಚಾರ್ಯರು ಕ್ರಿ.ಪೂ. ೫೦೯ರಲ್ಲಿ ಜನಿಸಿದರು, ಆ ಕಾಲಕ್ಕೆ ನಮ್ಮ ದೇಶದಲ್ಲಿ ಒಂದು ಶಕವು ಜಾರಿಯಲ್ಲಿತ್ತು. ಅದು ಪಾರಶೀಕ ಸಾಮ್ರಾಟನಾದ ಸೈರಸ್ (ಎರಡನೆಯ ಸೈರಸ್ ಅಥವಾ ಸೈರಸ್ ದ ಗ್ರೇಟ್) ಕ್ರಿ.ಪೂ. ೫೫೦ರಲ್ಲಿ ಆರಂಭಿಸಿದ ಶಕವದು. ಇದರರ್ಥ ಶಕವು (ಪಾರಶೀಕ) ಅಮಲಿಗೆ ಬಂದ ೪೧ನೇ  ವರ್ಷಕ್ಕೆ ಆದಿ ಶಂಕರರ ಜನನವಾಯಿತು. ಆ ಸಮಯದಲ್ಲಿ ಗಾಂಧಾರದಿಂದ ಪಂಜಾಬಿನವರೆಗಿನ ಪಶ್ಚಿಮ, ವಾಯವ್ಯ ಭಾರತವು ಪಾರಶೀಕರ ಆಕ್ರಮಣದಲ್ಲಿ ಇತ್ತು. ಕ್ರಿ.ಪೂ. ೮೩೩ರಿಂದ (ಕಲಿ ಶತಾಬ್ದಿ ೨೨೬೯ನೇ ಸಂವತ್ಸರದಿಂದ) ಕ್ರಿ.ಪೂ. ೩೨೭ರವರೆಗೆ (ಕಲಿ ಶತಾಬ್ದಿ ೨೭೭೫ರವರೆಗೆ) ಸಮಸ್ತ ದೇಶವನ್ನು ಪಾಲಿಸಿದ ಬೌದ್ಧಾನುಯಾಯಿಗಳಾದ ಆಂಧ್ರ ಶಾತವಾಹನರ ಕಾಲದಲ್ಲಿ ಪಾರಶೀಕರು ವಿಜೃಂಭಿಸಿ ದುರಾಕ್ರಮಣ ಮಾಡಿದರು. ಆದಿ ಶಂಕರರು ಜನಿಸುವ ಸಮಯದಲ್ಲಿ ಇದ್ದ ಪರಿಸ್ಥಿತಿ ಅದು! ಹೊಸದಾದ ಪಾರಶೀಕರ ಶಕವನ್ನು ಸುಮಾರು ಐದರಿಂದ ಆರುನೂರು ವರ್ಷಗಳ ಕಾಲ "ಶಕ" ಎನ್ನುವ ಹೆಸರಿನಿಂದ ಭಾರತೀಯರು ಕರೆದರು. (ಶಕರು ಸ್ಥಾಪಿಸಿದ ಕಾಲಗಣನಾ ಪದ್ಧತಿಯಾದ್ದರಿಂದ ಶಕ ಎನ್ನುವ ಹೆಸರು ಬಂದಿರಬಹುದೆಂದು ಸಂಸ್ಕೃತ ವಿದ್ವಾಂಸರಾದ ಬ್ರಹ್ಮಶ್ರೀ ತೇಲಕಪಲ್ಲೆ ವಿಶ್ವನಾಥ ಶರ್ಮ ಅವರು ಅಭಿಪ್ರಾಯ ಪಟ್ಟಿರುತ್ತಾರೆ). ಈ ಸೈರಸ್ ಶಕವು ಆರಂಭವಾಗಿ ಆರುನೂರಾ ಇಪ್ಪತ್ತೆಂಟು ವರ್ಷಗಳಿಗೆ (ಕಲಿಯುಗ ೩,೧೭೯ನೇ ಸಂವತ್ಸರದಲ್ಲಿ) ಶಾಲಿವಾಹನನು ತನ್ನ ಶಕವನ್ನು ಸ್ಥಾಪಿಸಿದನು (ಅದು ಕ್ರಿ.ಶ. ೭೮ನೇ ವರ್ಷ).  ವಿಲಿಯಂ ಜೋನ್ಸ್‌ನಿಂದ ಮೊದಲುಗೊಂಡ ಹೊಸ ಇತಿಹಾಸಕಾರರು ಸೈರಸ್ ಶಕಕ್ಕೆ ಸಂಬಂಧಿಸಿದ ಸಂವತ್ಸರಗಳನ್ನು, ತಿಥಿಗಳನ್ನು ಶಾಲಿವಾಹನ ಶಕಕ್ಕೆ ತಳುಕು ಹಾಕಿದರು. ಇದರಿಂದ ಸೈರಸ್ ಶಕದ ೪೧ನೇ ವರ್ಷದಲ್ಲಿ ಜನಿಸಿದ ಆದಿ ಶಂಕರರು ಶಾಲಿವಾಹನ ಶಕ ೪೧ಕ್ಕೆ ಜನಿಸಿದರೆಂದು ಕೆಲವರು ಪ್ರಚಾರ ಮಾಡಿದರು. ಇದರ ಪರಿಣಾಮವಾಗಿ ಕ್ರಿ.ಪೂ. ೫೦೯ರಲ್ಲಿ ಜನಿಸಿದ ಶಂಕರರನ್ನು ಕ್ರಿ.ಶ. ೧೧೯ನೇ ಸಂವತ್ಸರಕ್ಕೆ ತಂದು ಕೂರಿಸಿದರು. ಅದೇ ವಿಧವಾಗಿ ಕ್ರಿ.ಪೂ. ಒಂದನೇ ಶತಮಾನದ ವರಾಹಮಿಹಿರನನ್ನು ಕ್ರಿ.ಶ. ಆರನೇ ಶತಮಾನಕ್ಕೆ ಎಳೆದು ತಂದರು! ಅದೇ ವಿಧವಾಗಿ ೩೧೩೮ನೇ ಸಂವತ್ಸರದಲ್ಲಿ ನಡೆದ ಮಹಾಭಾರತ ಯುದ್ಧವನ್ನು ೬೨೮ ವರ್ಷಗಳನ್ನು ಕಡಿಮೆ ಮಾಡಿ ಕ್ರಿ.ಪೂ. ೨೫೦೦ರ ಸರಿಸುಮಾರಿನಲ್ಲಿ ಈ ಯುದ್ಧವು ನಡೆದಿರಬಹುದೆಂದು ನಿರ್ಧರಿಸಿಬಿಟ್ಟರು!
    ಹೀಗೆ ಮೌರ್ಯರನ್ನು ಗುಪ್ತರ ಬಳಿಗೆ ಎಳೆತಂದುದರ ಪರಿಣಾಮವಾಗಿ ಪಾಶ್ಚಾತ್ಯರು ೧೨೦೦ ವರ್ಷಗಳ ಭಾರತೀಯ ಇತಿಹಾಸ ಕಾಲವನ್ನು ನುಂಗಿ ಹಾಕಿದರು. ಸೈರಸ್ ಶಕವನ್ನು ಶಾಲಿವಾಹನ ಶಕಕ್ಕೆ ತಳಕು ಹಾಕುವುದರ ಮೂಲಕ ಕೆಲವರು ೬೦೦ ವರ್ಷಗಳನ್ನು ನುಂಗಿದರು. ಹೀಗೆ ಪಾಶ್ಚಾತ್ಯ ಪರಿಶೋಧಕರು ವಿಭಿನ್ನ ಕಥಾನಕಗಳ ಮೂಲಕ ಐತಿಹಾಸಿಕ ಗೊಂದಲಗಳನ್ನು ಹುಟ್ಟು ಹಾಕಿದರು. ಅವರು ಸೃಷ್ಟಿಸಿದ ಗೊಂದಲವು ಪುರಾಣಗಳಲ್ಲಿ ಹೇಳಿರುವ ಸತ್ಯಕ್ಕೆ ವಿರುದ್ಧವಾಗಿದೆ. ಆದ್ದರಿಂದ ಪುರಾಣಗಳೇ ಗೊಂದಲಮಯವಾಗಿವೆಯೆಂದು, ಅವುಗಳನ್ನು ನಂಬಲಾಗದೆಂದು ಮೆಕಾಲೆ ವಿದ್ಯಾಗ್ರಸ್ತರು ನಿರ್ಧರಿಸಿದರು! ಈ ಗೊಂದಲವನ್ನು ಆಧಾರವಾಗಿಟ್ಟುಕೊಂಡು ಇನ್ನೂ ಕೆಲವರು ಆದಿ ಶಂಕರರನ್ನು ಕ್ರಿ.ಶ. ಎಂಟನೇ ಶತಮಾನಕ್ಕೆ ಕರೆತಂದಿದ್ದಾರೆ!
   ಪುರಾಣಗಳಲ್ಲಿನ ಚಾರಿತ್ರಿಕ ಸತ್ಯಗಳನ್ನು, ಖಗೋಳ ಸತ್ಯಗಳನ್ನು ಪುಟಕಿಟ್ಟ ಚಿನ್ನದಂತೆ ಶುದ್ಧಗೊಳಿಸಿ ಕೋಟ ವೆಂಕಟಾಚಲಂರಂಥಹ ದೇಶೀಯ ಇತಿಹಾಸ ಸಂಶೋಧನಾಕಾರರು ಕೃಷ್ಣನ ಅವಸಾನದಿಂದ ಹಿಡಿದು ಶಾಲಿವಾಹನನವರೆಗೂ ಇರುವ ಮೂರು ಸಾವಿರದ ಎರಡುನೂರು ವರ್ಷಗಳ ವಾಸ್ತವ ಚರಿತ್ರೆಯನ್ನು ಅನಾವರಣ ಮಾಡಿದ್ದಾರೆ. ಖಗೋಳ ಶಾಸ್ತ್ರಜ್ಞನನಾದ ಆರ್ಯಭಟ್ಟನು ಕಲಿಯುಗದ ೩೬೦ನೇ ವರ್ಷದಲ್ಲಿ (ಕ್ರಿ.ಪೂ. ೨೭೪೨ರಲ್ಲಿ) ಜನಿಸಿದ್ದನೆನ್ನುವುದನ್ನು ಅವರ ಸಂಶೋಧನೆಯು ಪ್ರತಿಪಾದಿಸುತ್ತದೆ. ಸಂಸ್ಕೃತ ವ್ಯಾಕರಣವೇತ್ತ ಪಾಣಿನಿಯೂ ಸಹ ಸರಿಸುಮಾರು ಅದೇ ಕಾಲದವನು. ಗೌತಮ ಬುದ್ಧನು ಕಲಿಯುಗಾಬ್ದಿ ೧೨೧೫ (ಕ್ರಿ.ಪೂ. ೧೮೮೭ರಲ್ಲಿ) ಜನಿಸಿದವನು. ಮೌರ್ಯ ಚಂದ್ರಗುಪ್ತನು ಕಲಿಯುಗಾಬ್ಧಿ ೧೫೬೮ (ಕ್ರಿ.ಪೂ. ೧೫೩೪)ರಲ್ಲೂ, ಪುಷ್ಯಮಿತ್ರನು ಕಲಿ ೧೮೮೪ರಲ್ಲೂ (ಕ್ರಿ.ಪೂ. ೧೨೧೮) ಸಾಮ್ರಾಟರಾದರು. ಮಹಾಭಾಷ್ಯಕಾರನಾದ ಪತಂಜಲಿಯು ಪುಷ್ಯಮಿತ್ರನ ಸಮಕಾಲೀನನಾದವನು. ಗ್ರೀಕ್ ಅಲೆಗ್ಜಾಂಡರ್‌ನ ಸಮಕಾಲೀನರಾದ ಗುಪ್ತವಂಶದ ಚಕ್ರವರ್ತಿಗಳು ಕಲಿ ಯುಗಾಬ್ಧಿ ೨೭೭೫ರಲ್ಲಿ (ಕ್ರಿ.ಪೂ. ೩೨೭ರಲ್ಲಿ) ಸಾಮ್ರಾಜ್ಯವನ್ನು ಸ್ಥಾಪಿಸಿದರು. ಕಲಿಯುಗಾಬ್ಧಿ ೩೦೪೪ರಲ್ಲಿ (ಕ್ರಿ.ಪೂ. ೫೮ರಲ್ಲಿ) ವಿಕ್ರಮನು ವಿಕ್ರಮ ಶಕವನ್ನಾರಂಭಸಿದರೆ, ಕಲಿ ೩೧೭೯ರಲ್ಲಿ (ಕ್ರಿ.ಶ. ೭೮ರಲ್ಲಿ) ಶಾಲಿವಾಹನನು ಶಾಲಿವಾಹನ ಶಕವನ್ನು ಆರಂಭಿಸಿದರು. ಮಹಾಕವಿ ಕಾಳಿದಾಸ, ವರಾಹಮಿಹಿರರು ವಿಕ್ರಮನ ಸಮಕಾಲೀನರು. ಈಗ ನಡೆಯುತ್ತಿರುವ ದುರ್ಮುಖಿನಾಮ ಸಂವತ್ಸರದ ಯುಗಾದಿಯಿಂದ ಕಲಿಯುಗದ ೫೧೧೬ನೇ ಸಂವತ್ಸರವು ಆರಂಭವಾಗಿದೆ.
    ಈ ರಾಷ್ಟ್ರೀಯ ಐತಿಹಾಸಿಕ ವಾಸ್ತವಗಳಲ್ಲಿ ಯಾವೊಂದನ್ನೂ ವಿಲಿಯಂ ಜೋನ್ಸ್‌ ಒಪ್ಪಿಕೊಳ್ಳಲಿಲ್ಲ. ಮೆಕಾಲೆ ವಿದ್ಯಾಗ್ರಸ್ತರೂ ಒಪ್ಪಿಕೊಳ್ಳಲಿಲ್ಲ. ದೇಶದ ವಿವಿಧ ಮಹಾಪುರುಷರ ಪ್ರಾಚೀನತೆಯನ್ನು ಹಲವಾರು ವಿಧಗಳಲ್ಲಿ ಅವರು ಕುಂಠಿತಗೊಳಿಸಿದರು. ಪ್ರಸ್ತುತ ಅನೇಕ ರಾಷ್ಟ್ರೀಯವಾದಿ ಲೇಖಕರೂ ಸಹ ಈ ಐತಿಹಾಸಿಕ ಸತ್ಯಗಳಿಗೆ ಭಿನ್ನವಾಗಿ ಬ್ರಿಟಿಷರು ಆಯಾ ಮಹಾಪುರುಷರಿಗೆ ತಳಕು ಹಾಕಿದ ಸಂವತ್ಸರ ಹಾಗು ತೇದಿಗಳನ್ನು ಪ್ರಮಾಣವಾಗಿ ಸ್ವೀಕರಿಸುತ್ತಿದ್ದಾರೆ. ಇದೆಲ್ಲವೂ ಮೆಕಾಲೆ ಪ್ರಭಾವ, ಮೆಕಾಲೆ ವಿದ್ಯಾಪ್ರಲೋಭ!!
*****
    ಮೆಕಾಲೆ ವಿದ್ಯಾವಿಧಾನದಿಂದ ಉಂಟಾದ ದುಷ್ಪರಿಣಾಮಗಳನ್ನು ಒಂದೊಂದಾಗಿ ವಿಶ್ಲೇಷಿಸುವುದೇ ಈ ಸರಣಿಯ ಉದ್ದೇಶ. ಮೂಲತಃ ತೆಲುಗಿನಲ್ಲಿ "ಮೇಕ ವನ್ನೆಲ ಮೇಕಂ, ಮೆಕಾಲೆ ವಿದ್ಯಾ ವಿಧಾನಂ - ಮೇಕೆಯ ತೊಗಲು ಹೊದ್ದ ತೋಳ, ಮೆಕಾಲೆ ವಿದ್ಯಾ ವಿಧಾನ" ಎನ್ನುವ ಈ ಸರಣಿಯನ್ನು ಜಾಗೃತಿ ವಾರಪತ್ರಿಕೆಯಲ್ಲಿ ೨೦೦೮ರ ಆಸುಪಾಸಿನಲ್ಲಿ ಧಾರಾವಾಹಿಯಂತೆ, ಶ್ರೀಯುತ ತಂಗೇಡುಕುಂಟ ಹೆಬ್ಬಾರ್ ನಾಗೇಶ್ವರ್ ರಾವ್ ಅವರು ಬರೆದಿರುತ್ತಾರೆ. ಆ ಲೇಖನದ ಸೊಗಡನ್ನು ಕನ್ನಡಿಗರು ಆಸ್ವಾದಿಸುವಂತೆ ಮಾಡುವ  ಒಂದು ಪ್ರಯತ್ನವನ್ನು ನಾನಿಲ್ಲಿ ಮಾಡಿದ್ದೇನೆ. ಈಗ ನಿಮ್ಮ ಮುಂದಿರುವುದು ಈ ಸರಣಿಯ ಇಪ್ಪತ್ತೊಂದನೆಯ ಕಂತು, "ಮನ ಚರಿತ್ರ ಕ್ಷತಗಾತ್ರ...... - ಕ್ಷತಗಾತ್ರವಾಗಿಹ ನಮ್ಮ ಇತಿಹಾಸ.... 
    ಈ ಸರಣಿಯ ಇಪ್ಪತ್ತನೆಯ ಕಂತು, ಕೇಂದ್ರೀಯ ರಾಜ್ಯಾಂಗ ವ್ಯವಸ್ಥೆ ಏರ್ಪಟ್ಟಿದ್ದು ಯಾವಾಗ......? ಎನ್ನುವ ಲೇಖನಕ್ಕೆ ಈ ಕೊಂಡಿಯನ್ನು ನೋಡಿ - https://sampada.net/blog/%E0%B2%AD%E0%B2%BE%E0%B2%97-%E0%B3%A8%E0%B3%A6-...

Rating
Average: 5 (2 votes)

Comments

Submitted by makara Sat, 02/11/2017 - 03:53

ಮೆಕಾಲೆ ವಿದ್ಯಾವಿಧಾನ ಸರಣಿಯ ಈ ಲೇಖನವನ್ನು ವಾರದ ವಿಶೇಷ ಲೇಖನಗಳಲ್ಲೊಂದಾಗಿ ಆಯ್ಕೆ ಮಾಡಿದ ಸಂಪದದ ಆಡಳಿತ ಮಂಡಳಿ ಹಾಗೂ ಹರಿಪ್ರಸಾದ್ ನಾಡಿಗರಿಗೆ ಧನ್ಯವಾದಗಳು. ಈ ಸರಣಿಯ ಲೇಖನಗಳನ್ನು ಓದಿ ಪ್ರೋತ್ಸಾಹಿಸುತ್ತಿರುವ ಸಂಪದದ ವಾಚಕರ ಬಳಗಕ್ಕೆ ನಾನು ಚಿರಋಣಿ. ಈ ಸರಣಿಯ ಮುಂದಿನ ಲೇಖನವನ್ನು ಓದಲು ಆಸಕ್ತರು ಈ ಕೊಂಡಿಯನ್ನು ನೋಡಿ https://sampada.net/blog/%E0%B2%AD%E0%B2%BE%E0%B2%97-%E0%B3%A8%E0%B3%A8-...