ಭಾಗ - ೨೨ ಭೀಷ್ಮ ಯುಧಿಷ್ಠಿರ ಸಂವಾದ: ಇಂದ್ರ ಶುಕ ಸಂವಾದ

ಭಾಗ - ೨೨ ಭೀಷ್ಮ ಯುಧಿಷ್ಠಿರ ಸಂವಾದ: ಇಂದ್ರ ಶುಕ ಸಂವಾದ

ಚಿತ್ರ

        ಇದು ಭೀಷ್ಮ ಯುಧಿಷ್ಠಿರ ಸಂವಾದ ಅರ್ಥಾತ್ ರಾಜನೀತಿ ಶಾಸ್ತ್ರದಿಂದ ಆಯ್ದ ಮತ್ತೊಂದು ನೀತಿ ಕಥೆ.  
        ಯುಧಿಷ್ಠಿರನು ಹೀಗೆ ಕೇಳಿದನು, "ಪಿತಾಮಹಾ! ನಾನು ಯುದ್ಧದಲ್ಲಿ ವಿಜಯಗಳನ್ನು ಹೊಂದಿರುವೆನೆಂದರೆ, ರಾಜ್ಯವನ್ನು ಸಂಪಾದಿಸಿದ್ದೇನೆಂದರೆ ಅವಕ್ಕೆಲ್ಲಾ ಕಾರಣೀಭೂತರಾದ ಎಷ್ಟೋ ಜನ ಹಿರಿಯರು, ಮಿತ್ರರು, ಆಪ್ತರು, ಮೊದಲಾದವರು ಇರುವರು. ಏನು ಕೊಟ್ಟರೆ ಅವರ ಋಣವು ತೀರುವುದೊ ನಾನು ಅರಿಯಲಾರದವನಾಗಿದ್ದೇನೆ. ಆದರೂ ಸಹ ಮಿತ್ರ ಧರ್ಮವನ್ನು ಕುರಿತು, ಸೂಕ್ತ ಸಮಯದಲ್ಲಿ ಸಹಾಯಮಾಡಿ ಬೆನ್ನಿಗೆ ನಿಂತವರ ವಿಷಯದಲ್ಲಿ ವ್ಯವಹರಿಸಬೇಕಾದ ರೀತಿಯನ್ನು ತಿಳಿಸಿಕೊಡಬೇಕಾಗಿ ಪ್ರಾರ್ಥಿಸುತ್ತಿದ್ದೇನೆ. 
        ಭೀಷ್ಮನು ಹೀಗೆ ಉತ್ತರಿಸಿದನು, "ಧರ್ಮಜನೇ! ಒಳ್ಳೆಯ ಪ್ರಶ್ನೆಯನ್ನೇ ಕೇಳಿರುವೆ. ನಾನೇ ಇದರ ಕುರಿತು ಹೇಳಬೇಕೆಂದಿದ್ದೆ. ಇರಲಿ, ಈ ವಿಷಯದಲ್ಲಿ ’ಇಂದ್ರ ಶುಕ ಸಂವಾದ’ವೆನ್ನುವ ಪ್ರಸಂಗವು ಪ್ರಖ್ಯಾತವಾಗಿದೆ. ಅದನ್ನು ನಿನಗೆ ಹೇಳುತ್ತೇನೆ ಚಿತ್ತವಿಟ್ಟು ಕೇಳುವಂತಹವನಾಗು."
      "ಕಾಶಿರಾಜನು ಪರಿಪಾಲಿಸುತ್ತಿದ್ದ ದಿನಗಳವು. ಒಂದು ದಿನ ಒಬ್ಬ ವ್ಯಾಧನು ಕಾಡಿಗೆ ಹೊರಟನು. ಭೇಟೆಯಾಡುವ ಉದ್ದೇಶ ಹೊಂದಿದ್ದ ಅವನು ತನ್ನ ಧನುರ್ಬಾಣಗಳನ್ನೂ ಜೊತೆಯಲ್ಲಿರಿಸಿಕೊಂಡು ಹೊರಟಿದ್ದ. ಆ ವ್ಯಾಧನು ಬಾಣಗಳ ತುದಿಗಳನ್ನು ವಿಷದಲ್ಲಿ ಅದ್ದಿಕೊಂಡು ತನ್ನ ಬತ್ತಳಿಕೆಯಲ್ಲಿಟ್ಟುಕೊಂಡಿದ್ದನು. ಬಾಣದ ಪೆಟ್ಟಿನ ಜೊತೆಗೆ ವಿಷವೂ ಜೊತೆಯಾದರೆ ಅದರಿಂದ ಘಾಸಿಗೊಂಡ ಮೃಗಗಳು ಕೂಡಲೇ ಸಾವನ್ನಪ್ಪುವವು ಎನ್ನುವುದು ಅವನ ಆಲೋಚನೆ. ಹೀಗೆ, ಮೃಗಗಳನ್ನು ಅರಸಿ ಹೊರಟಿದ್ದ ಆ ಭೇಟೆಗಾರನ ಕಣ್ಣಿಗೆ ಹರಿಣಗಳ (ಜಿಂಕೆಗಳ) ಗುಂಪೊಂದು ಕಂಡಿತು. ಅವುಗಳನ್ನು ನೋಡಿದ ತಕ್ಷಣವೇ, ಅವನು ಸ್ವಲ್ಪವೂ ತಡ ಮಾಡದೆ ಅವುಗಳಿಗೆ ಗುರಿಯಿಟ್ಟು ಬಾಣವನ್ನು ಬಿಟ್ಟನು. ಸಾಧಾರಣವಾಗಿ ಅವನ ಬಾಣವು ಗುರಿ ತಪ್ಪುತ್ತಿರಲಿಲ್ಲ. ಆದರೆ ಅದೇನು ಕಾರಣವೋ ಏನೋ ಬಾಣವು ಯಾವುದೇ ಹರಿಣಕ್ಕೆ ತಗುಲದೆ ಅದು ಒಂದು ವಿಶಾಲವಾದ ವೃಕ್ಷವನ್ನು ಛೇದಿಸಿತು." 
    "ತೀವ್ರವಾದ ವೇಗದಿಂದ ಬಂದ ವಿಷಪೂರಿತ ಬಾಣವು ತಗಲುತ್ತಿದ್ದಂತೆಯೇ ಅಂತಹ ಮಹಾನ್ ವೃಕ್ಷವು ಸ್ತಂಭಿಸಿತು. ವಿಷವು ಆ ವೃಕ್ಷವನ್ನೆಲ್ಲಾ ವ್ಯಾಪಿಸಿತು. ಅದರ ಕಾಯಿಗಳು ಬಿದ್ದುಹೋದವು. ಎಲೆಗಳು ವಿಷದ ತಾಪಕ್ಕೆ ಸುಟ್ಟು ಕರಕಲಾದವು, ಕ್ರಮೇಣ ಆ ವೃಕ್ಷವು ಒಣಗಲಾರಂಭಿಸಿತು."
       "ಆ ಮರದ ಪೊಟರೆಯಲ್ಲಿ ಒಂದು ಶುಕವು (ಗಿಳಿಯು) ಬಹುಕಾಲದಿಂದಲೂ ತನ್ನ ಪರಿವಾರದೊಂದಿಗೆ ವಾಸವಾಗಿತ್ತು. ಆ ಗಿಳಿಗೆ ಆ ಮರದ ಮೇಲೆ ಅಸದಳವಾದ ಭಕ್ತಿ, ಪ್ರೇಮಾಭಿಮಾನಗಳು ಇದ್ದವು. ಮರವು ಒಣಗಿ ಹೋದರೂ ಸಹ ಅದು ಆ ಮರವನ್ನು ಬಿಟ್ಟು ದೂರ ಹೋಗಲಿಲ್ಲ, ಅದು ಅಲ್ಲಿಯೇ ಇರತೊಡಗಿತು. ಅಷ್ಟೇ ಅಲ್ಲ ಅದು ಇತರೆಡೆಗೆ ಹೋಗುವುದನ್ನೂ ಬಿಟ್ಟು ಬಿಟ್ಟಿತು. ಅದಕ್ಕೆ ಹೆಕ್ಕಿ ತಿನ್ನಲು ಕಾಳುಗಳಾಗಲಿ, ಕಚ್ಚಿ ತಿನ್ನಲು ಫಲಗಳಾಗಲಿ ದೊರಕದೆ ಅದು ಕೃಶವಾಗಿ ಮೂಳೆಚಕ್ಕಳವಾಯಿತು. ಅದಕ್ಕೆ ಬಾಯಿಂದ ಮಾತುಗಳೂ ಹೊರಡದಾದವು. ಮರದೊಂದಿಗೆ ಅದೂ ಸಹ ಒಣಗತೊಡಗಿತು."
        "ಮರದ ಕಷ್ಟಸುಖಗಳಲ್ಲಿ ಭಾಗಿಯಾಗುವುದಕ್ಕೆ ಸಿದ್ಧವಾದ ವ್ರತದೀಕ್ಷೆಯಲ್ಲಿರುವಂತೆ ತೋರುತ್ತಿದ್ದ ಆ ಗಿಳಿಯ ಬಳಿಗೆ ಇಂದ್ರನು ಓರ್ವ ಬ್ರಾಹ್ಮಣನ ವೇಷದಲ್ಲಿ ಹೋದನು. ಅವನು, ಆ ಗಿಳಿಯನ್ನು ಉದ್ದೇಶಿಸಿ "ನೀನು, ಈ ಮರವನ್ನು ಏತಕ್ಕಾಗಿ ಬಿಟ್ಟು ಕದಲುತ್ತಿಲ್ಲ?" ಎಂದು ಕೇಳಿದನು."
       "ಅದಕ್ಕೆ ಪ್ರತ್ಯುತ್ತರವಾಗಿ ಆ ಗಿಳಿಯು, "ದೇವರಾಜನಾದ ಇಂದ್ರನೇ ನಿನಗಿದೋ, ಸ್ವಾಗತ! ನೀನು ಮಾರುವೇಷದಲ್ಲಿ ಬಂದಿದ್ದರೂ ಸಹ, ಬಹುಶಃ ನನ್ನ ತಪೋಬಲದಿಂದ ಇರಬಹುದು ನೀನು ದೇವೇಂದ್ರನೆನ್ನುವುದನ್ನು ನಾನು ಗ್ರಹಿಸಿದ್ದೇನೆ. ಇನ್ನು ನಿನ್ನ ಪ್ರಶ್ನೆ, "ಒಣಗಿ ಹೋದ ಈ ಮರಕ್ಕೇಕೆ ಅಂಟಿಕೊಂಡು ಕುಳಿತಿದ್ದೀಯಾ? ಬೇರೊಂದು ಮರವನ್ನು ಆಶ್ರಯಿಸಬಹುದಲ್ಲವೇ, ಎಂದು ನೀನು ಕೇಳ ಬಯಸಿದ್ದು?"
        "ನಾನು ಈ ಮರದ ಮೇಲೆಯೇ ಹುಟ್ಟಿರುವೆನು. ಈ ಮರದ ಮೇಲೆಯೇ ಆಟಪಾಟಗಳನ್ನಾಡಿದ್ದೇನೆ. ಈ ಮರದಿಂದ ಎಷ್ಟೋ ಒಳ್ಳೆಯ ವಿಷಯಗಳನ್ನು ಅರಿತುಕೊಂಡಿದ್ದೇನೆ. ಸುಜ್ಞಾನವನ್ನು ಪಡೆದುಕೊಂಡಿದ್ದೇನೆ. ಸದ್ಗುಣಗಳನ್ನು ರೂಢಿಸಿಕೊಂಡಿದ್ದೇನೆ. ತನ್ನದೇ ಸಂತಾನವೆನ್ನುವಂತೆ ಈ ಮರವು ನನ್ನನ್ನು ಬೆಳೆಸಿ ದೊಡ್ಡವನನ್ನಾಗಿಸಿದೆ, ರಕ್ಷಿಸಿದೆ, ಶತ್ರುಗಳ ದಾಳಿಯಿಂದ ನನ್ನನ್ನು ಕಾಪಾಡಿದೆ."
        "ಆದ್ದರಿಂದ, ದೇವೇಂದ್ರನೇ, ಸಹಜವಾಗಿಯೇ ನನಗೆ ಈ ವೃಕ್ಷದ ಮೇಲೆ ಶ್ರದ್ಧಾಭಕ್ತಿಗಳು ಇರುವವು. ಈ ಮರವೇ ನನ್ನ ಜೀವಾಳ. ಇಂತಹ ಮರವು ಈಗ ಈ ಸ್ಥಿತಿಯಲ್ಲಿದೆ ಎಂದ ಮಾತ್ರಕ್ಕೆ ಅದನ್ನು ಬಿಟ್ಟು ನಾನು ಹೊರಟುಹೋಗಲೇ? ನಾನು ಅಷ್ಟು ಕೃತಘ್ನನೇ?"
        "ಏನೇ ಆಗಲಿ, ಈ ಮರದೊಂದಿಗೇ ನಾನು ಇರುತ್ತೇನೆ. ನೀನು ನನ್ನನ್ನು ಅರ್ಥಮಾಡಿಕೊಳ್ಳುವೆ ಎಂದುಕೊಳ್ಳುತ್ತೇನೆ. ಆದ್ದರಿಂದ ದಯಮಾಡಿ ನನ್ನನ್ನು ಈ ಮರದಿಂದ ಬೇರ್ಪಡಿಸುವ ಪ್ರಯತ್ನವನ್ನು ನೀನು ಮಾಡಬೇಡ!"
        "ಕೋಮಲವೂ, ಆರ್ದ್ರವೂ ಆದ ಆ ಗಿಳಿಯ ಮಾತುಗಳನ್ನು ಕೇಳಿ ದೇವರಾಜನಾದ ಇಂದ್ರನು ಸಂಭ್ರಮಾಶ್ಚರ್ಯಗಳಲ್ಲಿ ಮುಳುಗಿಹೋದನು. ಓ ಶುಕರಾಜನೇ! ಏನಾದರು ವರವನ್ನು ಕೋರಿಕೋ ನಿನಗೆ  ಅದನ್ನು ಪ್ರಸಾದಿಸುತ್ತೇನೆ" ಎಂದು ಹೇಳಿದನು."
       "ಈ ವೃಕ್ಷವು ಹಿಂದಿನಂತೆಯೇ ಹಚ್ಚ ಹಸಿರಿನ ಎಲೆಗಳಿಂದಲೂ, ಸುಂದರವಾದ ಪುಷ್ಪಗಳಿಂದಲೂ ರಾರಾಜಿಸುವಂತೆ ಮಾಡು" ಅದನ್ನೇ ನಾನು ಬಯಸುವುದು ಎಂದು ಗಿಳಿಯು ಹೇಳಿತು. ತಕ್ಷಣವೇ ಇಂದ್ರನು ಅಮೃತದ  ಮಳೆಯುಂಟಾಗುವಂತೆ ಮಾಡಿದನು. ಸುಟ್ಟು ಕರಕಲಾದಂತಿದ್ದ ವೃಕ್ಷವು ಪುನಃ ಚಿಗುರಿ, ಫಲ, ಪತ್ರ, ಪುಷ್ಪಾದಿಗಳಿಂದ ಕಂಗೊಳಿಸತೊಡಗಿತು. ಆ ಗಿಳಿಗೆ ಇದ್ದ ದೃಢಭಕ್ತಿಯಿಂದಾಗಿ ಅದು ಸಿರಿಸಂಪದಗಳಿಂದ ವಿರಾಜಮಾನವಾಯಿತು." 
     "ಆದ್ದರಿಂದ, ಧರ್ಮನಂದನನೇ ಉನ್ನತ ಸ್ಥಾನಕ್ಕೆ ಏರಿದ ನಂತರ ತನ್ನ ಗತವನ್ನು ಮರೆಯುವುದು, ಮೇಲಕ್ಕೇರಿದ ನಂತರ ಏಣಿಯನ್ನು ಕಾಲಿನಿಂದ ಒದೆಯುವುದು, ಹಾಲುಣಿಸಿದ ಕೆಚ್ಚಲನ್ನೇ ಕತ್ತರಿಸುವುದು, ನದಿ ದಾಟಿದ ನಂತರ ತೆಪ್ಪವನ್ನು ಒದೆಯುವುದು, ಮುಂತಾದವು ಪ್ರಯೋಜನಕ್ಕೆ ಬಾರವು. ತನಗೆ ಆಸರೆಯಾಗಿ ನಿಂತ ಅಣ್ಣ-ತಮ್ಮಂದಿರು, ಮಿತ್ರರು, ಆಪ್ತರು, ಹಿರಿಯರು, ಮೊದಲಾದವರು ಯಾವುದೇ ಸ್ಥಿತಿಯಲ್ಲಿದ್ದರೂ ಅವರನ್ನು ಕಡೆಗಣಿಸಬಾರದು. ಅಷ್ಟೇ ಅಲ್ಲ, ಅವರ ಸಂಕಟ ಸ್ಥಿತಿಗಳಲ್ಲಿ ಸಹಾಯಕನಾಗಿರಲು ಸಿದ್ಧನಾಗಿರಬೇಕು. ಅವರ ಭುಜಗಳ ಮೇಲಿಂದ ಹತ್ತಿ ದೊಡ್ಡವನಾದ ಮೇಲೆ ಆ ಭುಜಗಳನ್ನು ಕತ್ತರಿಸಿ ಹಾಕಬೇಕೆಂದುಕೊಳ್ಳುವುದು ಕೃತಘ್ನತೆ ಅದು ಮಹಾನ್ ಪಾಪಕರವಾದದ್ದು." 
      ನೀತಿ: ಕೇವಲ ಮಿತ್ರರು, ಬಂಧುಗಳ ವಿಷಯದಲ್ಲಷ್ಟೇ ಅಲ್ಲ, ದೇಶದ ವಿಷಯದಲ್ಲೂ ಸಹ ಇದೇ ಅನುಕರಣೀಯ ಧರ್ಮವಾಗಿದೆ. ತಾನು ಜನಿಸಿದ ದೇಶವನ್ನು ಕಡೆಗಣಿಸಿ, ತನಗೆ ಪರಂಪರಾಗತವಾಗಿ ಬಂದ ಧರ್ಮವನ್ನು ಅಲ್ಲಗಳೆದು, ಗತದಲ್ಲಿ ಸಕಲ ವೈಭವಗಳಿಂದ ಕಂಗೊಳಿಸಿದ್ದ ತನ್ನ ದೇಶ, ಧರ್ಮ ಹಾಗು ಸಿದ್ಧಾಂತಗಳನ್ನು ತುಚ್ಛವಾಗಿ ಕಾಣುತ್ತಾ ಅನ್ಯದೇಶ ನಿಷ್ಠೆ, ಅನ್ಯಧರ್ಮ ನಿಷ್ಠೆ, ಅನ್ಯ ಸಿದ್ಧಾಂತಗಳ ಬಗ್ಗೆ ನಿಷ್ಠೆಯನ್ನು ಬೆಳೆಸಿಕೊಂಡರೆ ಅದೂ ಸಹ ದ್ರೋಹಬುದ್ಧಿಯೇ ಆಗುತ್ತದೆ. 
*****
(ಆಧಾರ - ಶ್ರೀಯುತ ದೋನೇಪುಡಿ ವೆಂಕಯ್ಯನವರು ತೆಲುಗಿನಲ್ಲಿ ರಚಿಸಿರುವ ಭೀಷ್ಮ ಯುಧಿಷ್ಠಿರ ಸಂವಾದ ಅರ್ಥಾತ್ ರಾಜನೀತಿ ಶಾಸ್ತ್ರ ಎಂಬ ಗ್ರಂಥದಿಂದ ಆಯ್ದ ಭಾಗದ ಅನುವಾದ. ಈ ಸರಣಿಯನ್ನು ಈ ಹಿಂದೆ ಮೊಗಹೊತ್ತಗೆ - ಫೇಸ್ ಬುಕ್ಕಿನಲ್ಲಿ ನನ್ನ ವ್ಯಕ್ತಿಗತ ಪುಟದಲ್ಲಿ ಪ್ರಕಟಿಸಲಾಗಿತ್ತು).  
ಚಿತ್ರಕೃಪೆ:  ಗೂಗಲ್
ಹಿಂದಿನ ಲೇಖನ ಭಾಗ - ೨೧ ಭೀಷ್ಮ ಯುಧಿಷ್ಠಿರ ಸಂವಾದ: ದ್ಯುಮತ್ಸೇನ ಮತ್ತು ಸತ್ಯವಾನರ ಸಂವಾದ ಓದಲು ಈ ಕೆಳಗಿನ ಕೊಂಡಿಯನ್ನು ನೋಡಿ https://sampada.net/blog/%E0%B2%AD%E0%B2%BE%E0%B2%97-%E0%B3%A8%E0%B3%A7-...

Rating
No votes yet

Comments

Submitted by makara Fri, 10/26/2018 - 11:55

ಈ ಲೇಖನದ ಮುಂದಿನ ಭಾಗ - ೨೩ ಭೀಷ್ಮ ಯುಧಿಷ್ಠಿರ ಸಂವಾದ: ವಶಿಷ್ಠ ಬ್ರಹ್ಮ ಸಂವಾದ ಅರ್ಥಾತ್ ದೈವಬಲವೋ ಪುರುಷಪ್ರಯತ್ನವೋ! ಓದಲು ಈ ಕೆಳಗಿನ ಕೊಂಡಿಯನ್ನು ನೋಡಿ https://sampada.net/blog/%E0%B2%AD%E0%B2%BE%E0%B2%97-%E0%B3%A8%E0%B3%A9-...

Submitted by makara Thu, 11/08/2018 - 11:13

ಈ ಮಾಲಿಕೆಯ ಈ ಲೇಖನವನ್ನು ವಿಶೇಷ ಬರಹಗಳಲ್ಲೊಂದಾಗಿ ಆಯ್ಕೆ ಮಾಡಿದ ಸಂಪದ ನಿರ್ವಹಣಾ ತಂಡ ಹಾಗು ನಾಡಿಗರೆ ಧನ್ಯವಾದಗಳು. ಈ ಸರಣಿಯನ್ನು ಓದಿ ಪ್ರೋತ್ಸಾಹಿಸುತ್ತಿರುವ ಸಂಪದ ಬಳಗದ ಮಿತ್ರರಿಗೂ ಧನ್ಯವಾದಗಳು. ಸರ್ವರಿಗೂ ದೀಪಾವಳಿ ಹಬ್ಬದ ಶುಭಾಶಯಗಳು. ವಂದನೆಗಳೊಂದಿಗೆ ಶ್ರೀಧರ್ ಬಂಡ್ರಿ :)