ಭಾಗ ೨೩ - ಮೇಕೆಯ ತೊಗಲು ಹೊದ್ದ ತೋಳ, ಮೆಕಾಲೆ ವಿದ್ಯಾ ವಿಧಾನ: ಪ್ರಕಾಶಕರ ಭಿನ್ನಹ

ಭಾಗ ೨೩ - ಮೇಕೆಯ ತೊಗಲು ಹೊದ್ದ ತೋಳ, ಮೆಕಾಲೆ ವಿದ್ಯಾ ವಿಧಾನ: ಪ್ರಕಾಶಕರ ಭಿನ್ನಹ

ಚಿತ್ರ

ಚಿತ್ರ: ತಂಗೇಡುಕುಂಟ ಹೆಬ್ಬಾರ್ ನಾಗೇಶ್ವರ್ ರಾವ್ - ಮೂಲ ಲೇಖಕರು (ತೆಲುಗು)
ಮೂಲ ಲೇಖಕರ ಸಂಕ್ಷಿಪ್ತ ಪರಿಚಯ - ಹೆಬ್ಬಾರ್ ನಾಗೇಶ್ವರ್ ರಾವ್ ಅವರ ಹೆಸರೇ ಸೂಚಿಸುವಂತೆ ಇವರ ಪೂರ್ವಿಕರು ಕರ್ನಾಟಕದವರು. ಇವರು ಹುಟ್ಟಿದ್ದು ಅನಂತಪುರ ಜಿಲ್ಲೆಯ ತಂಗೇಡುಕುಂಟ - ಎರ್ರಪಲ್ಲಿ ಗ್ರಾಮ. ಇವರು ಶ್ರೀಮತಿ ಲಕ್ಷ್ಮೀನರಸಮ್ಮ ಹಾಗು ಶ್ರೀ ಭಾಸ್ಕರರಾವ್ ಇವರ ಸುಪುತ್ರರು. ತಂಗೇಡುಕುಂಟ ಹೆಬ್ಬಾರ್ ನಾಗೇಶ್ವರ್ ರಾವ್ ಅವರು ನ್ಯಾಯಶಾಸ್ತ್ರ ಪದವೀಧರರು. ಆದರೆ ವೃತ್ತಿ ರೀತ್ಯಾ ಅವರು ಆರಿಸಿಕೊಂಡದ್ದು ಬರವಣಿಗೆಯನ್ನು. ಅವರು ನ್ಯಾಯಶಾಸ್ತ್ರದ ವಿದ್ಯಾರ್ಥಿಯಾಗಿದ್ದಾಗಲೇ ’ಮಾತೃಭೂಮಿ’ ಎನ್ನುವ ಶೀರ್ಷಿಕೆಯ ಅಡಿಯಲ್ಲಿ ’ಲಾಯರ್’ ಪತ್ರಿಕೆಗೆ ಲೇಖನಗಳನ್ನು ಬರೆಯುತ್ತಿದ್ದವರು. ೧೯೮೪ರಿಂದ ವಿವಿಧ ಪತ್ರಿಕೆಗಳಲ್ಲಿ ರಚನೆಯೊಂದಿಗೆ ಹಲವಾರು ಹುದ್ದೆಗಳನ್ನು ನಿರ್ವಹಿಸಿದ್ದಾರೆ. ಆಂಧ್ರಪ್ರಭ, ಆಂಧ್ರಭೂಮಿ, ಋಷಿಪೀಠದವರ ದಿವ್ಯಧಾತ್ರಿ ಮಾಸಪತ್ರಿಕೆ, ಜಾಗೃತಿ, ವಿಶ್ವಹಿಂದೂ ಪತ್ರಿಕೆ ಮೊದಲಾದವುಗಳಲ್ಲಿ ನಾಲ್ಕು ಸಾವಿರಕ್ಕೂ ಅಧಿಕ ಲೇಖನಗಳನ್ನು ಬರೆದಿರುತ್ತಾರೆ. ಪ್ರಸ್ತುತ ಅವರು ಆಂಧ್ರಭೂಮಿ ಪತಿಕ್ರೆಯಲ್ಲಿ ಪ್ರಮುಖ ರಚನಾಕಾರ ಹಾಗು ಉಪಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ಕವಿ ಪಂಡಿತು, ಸದ್ವಿಮರ್ಶಕರು ಹಾಗೂ ಅಂಕಣಕಾರರು. ಇವರ ಕೆಲವು ಪ್ರಕಟಣೆಗಳು - ಪ್ರಭವಗೀತಾಲು, ವಿವೇಕಾನಂದ ಸ್ವಾಮಿ ಏಂಚೇಶಾರು?... ಏಂ ಚೆಪ್ಪಾರು?!, ವಂದೇ ಮಾತರಂ, ಅಯೋಧ್ಯ ಕಥ, ತರತರಾಲ ಭರತಿ ಜಾತಿ - ಚರಿತ್ರಲೋ ವಕ್ರೀಕರಣಲು...ವಾಸ್ತವಾಲು, ಮೊದಲಾದವುಗಳು.
****
ಭಾರತ್ ಮಾತಾ ಕೀ ಜಯ್! ವಂದೇ ಮಾತರಂ! 
ಪ್ರಕಾಶಕರ ಭಿನ್ನಹ
            ಕೆಲವು ವರ್ಷಗಳ ಹಿಂದೆ (೨೦೦೮) ಜಾಗೃತಿ ವಾರಪತ್ರಿಕೆಯಲ್ಲಿ (ತೆಲುಗು) ಧಾರಾವಾಹಿಯಾಗಿ ಪ್ರಕಟಗೊಂಡು ಓದುಗರನ್ನು ವಿಶೇಷವಾಗಿ ಆಕರ್ಷಿಸಿದ ಲೇಖನಗಳ ಸರಮಾಲೆ ಇದು.
            ನಾವು ಇಂದಿಗೂ ಒಂದು ರಾಷ್ಟ್ರವಾಗಿ ಎಂತಹ ಮಾನಸಿಕ ಗುಲಾಮಿತನಕ್ಕೆ (ಭಾವದಾಸ್ಯ) ಸಿಲುಕಿ ದಾರಿಗಾಣದೆ, ತೀರವನ್ನು ಸೇರಲಾಗದೆ, ದಿನದಿನಕ್ಕೂ ಕೃಶರಾಗಿ, ನಮನ್ನು ಬಂಧಿಸಿರುವ ಸಂಕೋಲೆಗಳು ಇನ್ನೂ ಎಷ್ಟೆಷ್ಟು ಬಿಗಿಯಾಗುತ್ತಾ ಇವೆಯೋ - ಈ ವಿಷಯಗಳನ್ನು ವಿವರಿಸಿ ಹೇಳುವ ಒಂದು ಪ್ರಯತ್ನವೇ ಈ ಲೇಖನ ಸರಣಿ.
          ಪ್ರಪಂಚದಲ್ಲೇ ಮಾನವರಿಗೆ ಅದರಲ್ಲೂ ಹಿಂದೂಗಳಿಗೆ ವಿಶೇಷವಾಗಿ ದೊರೆತ ಸಂಪತ್ತು - ವೈವಿಧ್ಯತೆಯಿಂದ ಕೂಡಿದ ಪ್ರಕೃತಿ; ನಮ್ಮ ಸುತ್ತಲೂ ಇದೆ. ವೈವಿಧ್ಯತೆಯಿಂದ ಕೂಡಿದ ಆ ಪ್ರಕೃತಿ ನಮ್ಮ ದೃಷ್ಟಿಗೆ ಗೋಚರವಾಗುತ್ತಾ, ಕಿವಿಗಳಿಗೆ ಕೇಳಿಸುತ್ತಾ, ಇತರೇ ಇಂದ್ರಿಯಗಳನ್ನು ಸ್ಪರ್ಶಿಸುತ್ತಾ ನಮಗೆ ಉತ್ತೇಜನವನ್ನು ಕೊಡುತ್ತಾ ಇದ್ದರೆ - ಬುದ್ಧಿ ಚುರುಕಾಗುತ್ತದೆ, ಎಷ್ಟೋ ವಿಷಯಗಳನ್ನು ಅದು ಗ್ರಹಿಸಬಲ್ಲುದು, ಆಲೋಚಿಸಬಲ್ಲುದು, ತರ್ಕಿಸಬಲ್ಲುದು, ವಿಶ್ಲೇಷಿಸಿ ತೀರ್ಮಾನಕ್ಕೆ ಬರಬಲ್ಲುದು.
          ಕೇವಲ ಇಂದ್ರಿಯಗೋಚರವಾದ, ವಿಜ್ಞಾನಕ್ಕೆ ಪರಿಮಿತವಾಗದೆ ಅಪೌರುಷೇಯವಾದ ವೇದಗಳಿಂದ ಹಾಗು ಇತರೇ ಪ್ರಾಚೀನ ಗ್ರಂಥಗಳಿಂದಲೂ ಸಹ ಎಷ್ಟೋ ಜ್ಞಾನ ಸಂಪದವು ತಲೆಮಾರುಗಳಿಂದ ನಮಗೆ ಲಭಿಸುತ್ತಲೇ ಇದೆ. ಪ್ರಕೃತಿಯಲ್ಲಿ ವೈವಿಧ್ಯೆಯಿಲ್ಲದ ದೇಶಗಳಲ್ಲಿ ನಿವಸಿಸುವವರಿಗೆ ಇವುಗಳನ್ನು ಗ್ರಹಿಸುವುದು ಸುಲಭ ಸಾಧ್ಯವಲ್ಲ. ಈ ವಿಧವಾಗಿ ಬೇರಲ್ಲೂ ಸಾಧ್ಯವಾಗದಂತಹ ಜ್ಞಾನಸಂಪದವನ್ನು ಒಂದು ಪರಂಪರೆಯಾಗಿ ಪಡೆದುಕೊಳ್ಳುತ್ತಿರುವ ನಮ್ಮ ಭಾರತೀಯರು - ಯಾವುದೋ ಕೆಲವು ಕಾರಣಗಳಿಂದಾಗಿ ರಾಜಕೀಯ ದಾಸ್ಯದಲ್ಲಿ ಮುಳುಗಿದ್ದ ಕಾಲದಲ್ಲಿ, ಆ ದಿನಗಳ ಆಡಳಿತಾರೂಢರು ನಮ್ಮ ತಲೆಗೆ ಕಟ್ಟಿದ ಮೆಕಾಲೆ ವಿದ್ಯಾವಿಧಾನದ ಪ್ರಭಾವಕ್ಕೆ ಒಳಗಾಗಿ ತಮ್ಮ ವಿವೇಕ, ವಿವೇಚನೆಗಳನ್ನು ಕಳೆದುಕೊಂಡಿದ್ದಾರೆ. ಅಂಗರಂಗ ವೈಭವಗಳಿಂದ ತಮ್ಮ ಮುಂದೆ ತಿರುಗುತ್ತಿದ್ದ ಆಂಗ್ಲರ ಥಳಕು-ಬೆಳಕುಗಳಿಗೆ ಮಾರುಹೋಗಿ ಅಥವಾ ಚಿತ್ತಭ್ರಮಣೆಯಾಗಿ ನಾವೂ ಅವರಂತೆ ಜೀವಿಸಿದರೆ ಚೆನ್ನಾಗಿರುತ್ತದೆಂದು ಭಾವಿಸಿದರು. "ನಮ್ಮ ಕಂಡಗಳನ್ನು ಹಿಂಡಿದ ನೆತ್ತರೇ ಅವರು ತಮ್ಮ ಮದುವೆಗಳಲ್ಲಿ ಚಲ್ಲಿಕೊಳ್ಳುವ ಅತ್ತರೆಂದೂ, ನಮ್ಮ ಮೊಗಗಳಿಂದ ಸುರಿದ ಕಣ್ಣೀರೇ ಅವರ ಪಾಲಿನ ಪನ್ನೀರೆಂದೂ" ನಮ್ಮವರು ಅರಿಯದಾದರು.
          ಬಾಹ್ಯಾಲಂಕರಣಗಳಲ್ಲಿ, ವೇಷಭೂಷಣಗಳಲ್ಲಿ, ನಾಗರೀಕ ಶೈಲಿಗಳಲ್ಲಿ, ಆಟಪಾಟಗಳಲ್ಲಿ ಅವರನ್ನು ಅನುಸರಿಸಿದರೆ ತಾವೂ ಬಿರುದು ಬಾವಲಿಗಳನ್ನು, ಪದವಿ, ಪ್ರತಿಷ್ಠೆಗಳನ್ನು ಹೊಂದಬಹುದೆಂದೂ ಆ ಮೂಲಕ ತಾವೂ ಸಹ ಸುಖದ ಸುಪ್ಪತ್ತಿಗೆಯಲ್ಲಿ ತೇಲಾಡಬಹುದೆಂದೂ ಆಶಿಸಿ ಆಂಗ್ಲರ ಪದ್ಧತಿಗಳನ್ನೆಲ್ಲಾ ಹೊಗಳುವುದಕ್ಕೆ ಮೊದಲು ಮಾಡಿದರು. ಆಂಗ್ಲರನ್ನು ಪ್ರತ್ಯಕ್ಷವಾಗಿ ನೋಡದವರೂ ಸಹ ’ಗಿರೀಶಂ*’ ಎನ್ನುವಂತಹ ವಿದ್ವಾಂಸರ ಮಾತುಗಳಿಗೆ ಮರುಳಾಗಿ, ತಾವಲ್ಲದಿದ್ದರೂ ತಮ್ಮ ಮಕ್ಕಳಾದರೂ ಹೀಗೆ ಓದಿಕೊಂಡು ಮೇಲಕ್ಕೆ ಬರಬೇಕೆಂದು ಆಸೆ ಪಟ್ಟರು. (*ತೆಲುಗಿನ ಕವಿ ಸಾಮ್ರಾಟ್ ವಿಶ್ವನಾಥ ಸತ್ಯನಾರಾಯಣ ಅವರು ರಚಿಸಿದ ಕಾದಂಬರಿಗಳಲ್ಲಿನ ಒಂದು ಪಾತ್ರ)
          ಆಶೆ ಎನ್ನುವ ಪಾಶವು ಅತ್ಯಂತ ದೀರ್ಘವಾದುದು..... ಕೆಲವೊಂದು ತಲೆಮಾರುಗಳಿಂದ ಪಾಶ್ಚಿಮಾತ್ಯರನ್ನು ಅನುಸರಿಸುವ ಸಾಧನೆಯು ಮುಂದುವರೆಯುತ್ತಿದೆ. ಈ ಸಾಧನೆಯಲ್ಲಿ ಕೆಲವಾರು ಕುಟುಂಬಗಳು ತಮ್ಮ ತಿಜೋರಿಯನ್ನು ತುಂಬಿಸಿಕೊಂಡಿರಬಹುದು. ಇನ್ನೂ ಕೆಲವರ ’ಬ್ಯಾಂಕ್ ಬ್ಯಾಲೆನ್ಸು’ಗಳು ಹೆಚ್ಚಿರಬಹುದು, ಆದರೆ ಭರತ ಖಂಡವು ದಿನದಿನಕ್ಕೂ ಪತನದತ್ತ ಸಾಗುತ್ತಲೇ ಇದೆ. ಸ್ವಾಭಿಮಾನದ ಸ್ಪೃಹೆಯನ್ನು ಮರೆತದ್ದರ ಫಲವಾಗಿ ಒಂದು ದಿನ ಎಲ್ಲಾ ರಂಗಗಳಲ್ಲಿಯೂ, ಎಲ್ಲಾ ದೇಶಗಳಿಗಿಂತಲೂ ಅಗ್ರಸ್ಥಾನದಲ್ಲಿ ನಿಂತ ನಾವುಗಳು, ಇಂದು ಬಡ ರಾಷ್ಟ್ರವಾಗಿ, ಭಿಕ್ಷೆಬೇಡುವವರಾಗಿ ಅಧಃಪತನದತ್ತ ಸಾಗುತ್ತಿದ್ದೇವೆ ಎನ್ನುವುದನ್ನೂ ಸಹ ಗ್ರಹಿಸಲಾರದ ದುರವಸ್ಥೆಯಲ್ಲಿ ನಾವಿಂದು ಓಲಾಡುತ್ತಿದ್ದೇವೆ. ವಿದೇಶಿಯರ ’ಭಾವದಾಸ್ಯ ಬಂಧನ’ದಿಂದ (ಮಾನಸಿಕ ಗುಲಾಮಿತನದಿಂದ) ಬಿಡುಗಡೆ ಹೊಂದುವ ಸ್ವಭಾವವೆನ್ನುವ ವಸಂತವು ಚಿಗುರುವಂತೆ ಕೃಷಿ ಮಾಡುವುದೇ ನಮ್ಮ ಪ್ರಗತಿಗೆ, ಸುಗತಿಗೆ ಇರುವ ಏಕೈಕ ಮಾರ್ಗವೆನ್ನುವ ವಿಷಯವನ್ನು ಸುಲಭವಾಗಿ ಅರ್ಥವಾಗುವ ಚಿಕ್ಕ ಚಿಕ್ಕ ವಿಷಯಗಳ ಮೂಲಕ ಶ್ರೀಯುತ ಹೆಬ್ಬಾರ್ ನಾಗೇಶ್ವರ್ ರಾವ್ ಅವರು ಈ ಲೇಖನಗಳಲ್ಲಿ ಚೊಕ್ಕವಾಗಿ ಪ್ರಸ್ತುತಪಡಿಸಿದ್ದಾರೆ.
          ಯಾರು ರೋಗರಹಿತರು? ಎಂದರೆ ಯಾರು ಪರಿಮಿತವಾಗಿ, ಹಿತವಾಗಿ ಭೋಜನವನ್ನು ಸಕಾಲದಲ್ಲಿ ಮಾಡುತ್ತಾರೋ ಅವರು ಮಾತ್ರವೇ ರೋಗವಿಲ್ಲದವರಾಗಬಹುದೆಂದು ಗ್ರಹಿಸಿ ಅದಕ್ಕನುಗುಣವಾದ ಅಭ್ಯಾಸಗಳನ್ನು, ಆಚಾರಗಳನ್ನು, ಜನಸಾಮಾನ್ಯರು ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ಮಾಡಿರುವುದು ನಮ್ಮ ಸಂಸ್ಕೃತಿಯ ವಿಶಿಷ್ಟತೆ. ಆದರೆ ಈ ಸದಭ್ಯಾಸಗಳನ್ನು, ಸದಾಚಾರಗಳನ್ನು ಬದಿಗಿರಿಸಿ, ಬೂಟುಗಾಲುಗಳ ಮೇಲೆ, ಕುರ್ಚಿಗಳ ಮೇಲೆ ಕುಳಿತು, ಇಲ್ಲಾ ನಿಂತುಕೊಂಡು, ಸೊಂಟವನ್ನು ಸ್ವಲ್ಪವೂ ಬಗ್ಗಿಸದೆ ಹೊಟ್ಟೆ ತುಂಬಾ ಮುಕ್ಕಿಬಿಡುತ್ತಿದ್ದೇವೆ. ಇದು ಆಂಗ್ಲರು ನಮಗೆ ಕಲಿಸಿದ ದುರಭ್ಯಾಸ!
          ಹುಣ್ಣಿಮೆಯ ದಿನ ಹುಟ್ಟಿದ ಹುಡುಗನ ಹುಟ್ಟುಹಬ್ಬವನ್ನು ಅಮವಾಸ್ಯೆಯಂದೂ ಆಚರಿಸುತ್ತಿದ್ದೇವೆ. ತಣ್ಣನೆಯ ಬೆಳದಿಂಗಳ ಕಿರಣಕಾಂತಿಯಲ್ಲಿ ಮೊದಲರಾತ್ರಿಯನ್ನು ಕಳೆದವರು ಎರಡು ಮೂರು ವರ್ಷಗಳ ನಂತರ ಕಾರ್ಗತ್ತಲೆಯಲ್ಲಿ ತಮ್ಮ ವಿವಾಹ ವಾರ್ಷಿಕೋತ್ಸವಗಳನ್ನು ಆಚರಿಸಿಕೊಳ್ಳುತ್ತಿದ್ದಾರೆ. ಇದು ಆಂಗ್ಲರು ಅನುಸರಿಸುವ ದಿನದರ್ಶಿಕೆಯ ಪ್ರಭಾವ. ಇದು ಪ್ರಪಂಚವೆಲ್ಲಾ ಅನುಸರಿಸುತ್ತಿರುವ ಕಾಲಗಣನೆಯ ಪದ್ಧತಿಯೆಂದೂ, ನಮ್ಮ ಪಂಚಾಂಗವು ಒಂದು ಧರ್ಮಕ್ಕೆ ಸೀಮಿತವಾದುದೆಂದು ಭ್ರಮಿಸುತ್ತಿರುವ ಕಾರಣಕ್ಕಾಗಿ ಈ ಅಪಸವ್ಯಗಳು ಜರುಗುತ್ತಿವೆ.
          ಅಂದಿನ ಆಡಳಿತಾರೂಢರ ಮತಪ್ರಚಾರದ ಕಾರಣಗಳಿಗಾಗಿ ಆದಿತ್ಯವಾರದ ದಿನ ರಜೆಯ ಅವಶ್ಯಕತೆಯಿತ್ತು. ಈ ದಿನಗಳಲ್ಲಿಯೂ ಸಹ ಆದಿತ್ಯವಾರವೇ ಏಕೆ ರಜಾದಿನವಾಗಬೇಕು? ನಾವು ಪೂಜೆಗಳನ್ನು, ವ್ರತಗಳನ್ನು ಮಾಡುವ ದಿನಗಳು ರಜೆಯಿಲ್ಲದ ಕೆಲಸದ ದಿನಗಳಾಗಿ ಏಕಿರಬೇಕು?
          ವಿಪುಲವಾಗಿರುವ ನಮ್ಮ ಸಂಸ್ಕೃತ ಸಾಹಿತ್ಯದಲ್ಲಿನ ಎಷ್ಟೋ ಪದಗಳಿಗೆ ನಾನಾ ವಿಧವಾದ ಹೀನಾರ್ಥಗಳನ್ನು ಕಲ್ಪಿಸಿ, ಅಪಾರ್ಥಗಳನ್ನು ಹುಟ್ಟುಹಾಕಿ, ಅನರ್ಥಗಳನ್ನು ಪರಂಗಿಗಳು ತಂದಿಟ್ಟರು. ನಾವು ಅವರನ್ನು ಹಿಂಬಾಲಿಸುವ ಆತುರದಲ್ಲಿ ಈ ಅನರ್ಥಗಳನ್ನೆಲ್ಲಾ ಗಣನೆಗೆ ತೆಗೆದುಕೊಳ್ಳಲಿಲ್ಲ, ಅವರನ್ನು ಅನುಸರಿಸುವುದರಿಂದ ಪುರುಷಾರ್ಥವನ್ನು ಹೊಂದಿ ಪುನೀತರಾಗುತ್ತೇವೆಂದು ಭಾವಿಸಿದೆವು, ಹಾಗಾಗಿ ’ಅಮನಗಲ್’ ಅನ್ನು ’ಅಮಂಗಳ್’ ಎಂದೂ, ’ಓರುಗಲ್’ ಅನ್ನು ’ವಾರಂಗಲ್’ ಎಂದೂ ಹಾಗೆಯೇ ’ಗೋದಾವರಿ’ಯನ್ನು ’ಗೊಡೆವರಿ’ಯಾಗಿ ಉಚ್ಛರಿಸುತ್ತಿದ್ದೇವೆ. (ಇದಕ್ಕೆ ಕನ್ನಡದ ಊರುಗಳೂ ಹೊರತಾಗಿಲ್ಲ, ಮೈಸೂರು ’ಮೈಸೋರ್’ ಆದರೆ ಬೆಂಗಳೂರು ’ಬ್ಯಾಂಗಲೂರ್’ ಆಗಿದೆ. ಚಿತ್ರದುರ್ಗ ’ಚಿಟಲ್‌ಡ್ರೂಗ್’ ಆಗಿತ್ತು ಮತ್ತು ಬಳ್ಳಾರಿ ’ಬೆಲಾರಿ’ ಆಗಿತ್ತು, ಪುಣ್ಯವಶಾತ್ ಹಲವಾರು ಊರುಗಳು ಪುನಃ ತಮ್ಮ ಮೂಲ ಸ್ವರೂಪವನ್ನು ಪಡೆದಿವೆ). ನಮ್ಮ ಚರಿತ್ರೆಯಲ್ಲಿನ ಮಹೋನ್ನತ ಘಟ್ಟಗಳು ಜರುಗಲೇ ಇಲ್ಲವೆಂದು ವಾದಿಸುತ್ತಿದ್ದೇವೆ. ನಮ್ಮ ದೇಶಕ್ಕೆ ಗೌರವ ಪ್ರತಿಷ್ಠೆಗಳನ್ನು ತಂದು ಕೊಟ್ಟ ವಿಕ್ರಮ ಶಾಲಿವಾಹನರು ಹುಟ್ಟಿರಲೇ ಇಲ್ಲವೆಂದೂ, ಅವರು ಈ ಭೂಮಿಯ ಮೇಲೆ ನಡೆದಾಡಲಿಲ್ಲವೆಂದೂ, ಅವರು ಕೇವಲ ಕಾಲ್ಪನಿಕ ವ್ಯಕ್ತಿಗಳೆಂದು ಬೊಗಳೆ ಬಿಡುತ್ತಿದ್ದೇವೆ.
          ಈ ಅಪಸವ್ಯಗಳಿಗೆಲ್ಲಾ ಕಾರಣವಾಗಿರುವುದು ಮೆಕಾಲೆ ವಿದ್ಯಾವಿಧಾನದ ಪ್ರಭಾವವೇ. ಆ ಪ್ರಭಾ ವಲಯದಿಂದ ಹೊರಬರುವ ಅವಶ್ಯಕತೆಯನ್ನು ಚರ್ಚಿಸುವ ಈ ಹೊತ್ತುಗೆಯು ಎಲ್ಲರೂ ಓದಲೇಬೇಕಾದ ಪುಸ್ತಕವಾಗಿದೆ. ಇದನ್ನು ಇಷ್ಟು ದಿವಸಗಳ ನಂತರವಾದರೂ ಹೊರತರುತ್ತಿರುವುದಕ್ಕೆ ನಮಗೆ ಅತೀವ ಆನಂದವಾಗುತ್ತಿದೆ.
-ಪ್ರಕಾಶಕರು,
ನವಯುಗ ಭಾರತಿ, 
ಭಾಗ್ಯನಗರ (ಹೈದರಾಬಾದ್)
****
          ಮೆಕಾಲೆ ವಿದ್ಯಾವಿಧಾನದಿಂದ ಉಂಟಾದ ದುಷ್ಪರಿಣಾಮಗಳನ್ನು ಒಂದೊಂದಾಗಿ ವಿಶ್ಲೇಷಿಸುವುದೇ ಈ ಸರಣಿಯ ಉದ್ದೇಶ. ಮೂಲತಃ ತೆಲುಗಿನಲ್ಲಿ "ಮೇಕ ವನ್ನೆಲ ಮೇಕಂ, ಮೆಕಾಲೆ ವಿದ್ಯಾ ವಿಧಾನಂ - ಮೇಕೆಯ ತೊಗಲು ಹೊದ್ದ ತೋಳ, ಮೆಕಾಲೆ ವಿದ್ಯಾ ವಿಧಾನ" ಎನ್ನುವ ಈ ಸರಣಿಯನ್ನು ಜಾಗೃತಿ ವಾರಪತ್ರಿಕೆಯಲ್ಲಿ ೨೦೦೮ರ ಆಸುಪಾಸಿನಲ್ಲಿ ಧಾರಾವಾಹಿಯಂತೆ, ಶ್ರೀಯುತ ತಂಗೇಡುಕುಂಟ ಹೆಬ್ಬಾರ್ ನಾಗೇಶ್ವರ್ ರಾವ್ ಅವರು ಬರೆದಿರುತ್ತಾರೆ. ಆ ಲೇಖನದ ಸೊಗಡನ್ನು ಕನ್ನಡಿಗರು ಆಸ್ವಾದಿಸುವಂತೆ ಮಾಡುವ  ಒಂದು ಪ್ರಯತ್ನವನ್ನು ನಾನಿಲ್ಲಿ ಮಾಡಿದ್ದೇನೆ. ಈಗ ನಿಮ್ಮ ಮುಂದಿರುವುದು ಈ ಸರಣಿಯ ಇಪ್ಪತ್ತಮೂರು ಹಾಗು ಕಡೆಯ ಕಂತು, "ಪ್ರಕಾಶಕುಲ ಮನವಿ - ಪ್ರಕಾಶಕರ ಭಿನ್ನಹ"
       ಈ ಸರಣಿಯ ಇಪ್ಪತ್ತೊಂದನೆಯ ಕಂತು, ಇಪ್ಪತ್ತೆರಡನೆಯ ಕಂತು, ’ಸ್ವಭಾವ’ವನ್ನು ಚಿಗುರಿಸುವ ’ವಸಂತ’ನಾಗಮನ ಎಂದಿಗೆ....? ಎನ್ನುವ ಲೇಖನಕ್ಕೆ ಈ ಕೊಂಡಿಯನ್ನು ನೋಡಿ - https://sampada.net/blog/%E0%B2%AD%E0%B2%BE%E0%B2%97-%E0%B3%A8%E0%B3%A8-...
 

Rating
No votes yet

Comments

Submitted by makara Sun, 02/12/2017 - 13:05

ಈ ಸರಣಿಯ ಲೇಖನಗಳಲ್ಲಿ ಇದೇ ಅಂತಿಮ ಕಂತು. ಇದುವರೆಗೆ ಈ ಸರಣಿಯ ಎಲ್ಲಾ ಲೇಖನಗಳನ್ನು ಓದಿ ವಿಶೇಷವಾಗಿ ಸ್ಪಂದಿಸಿರುವ ಸಂಪದಿಗರಿಗೆಲ್ಲಾ ಧನ್ಯವಾದಗಳು. ಈ ಮಾಲಿಕೆಯ ಹಲವಾರು ಲೇಖನಗಳನ್ನು ವಾರದ ವಿಶೇಷ ಲೇಖನಗಳಾಗಿ ಆಯ್ಕೆ ಮಾಡಿದ ಸಂಪದದ ಸಲಹಾ ಮಂಡಳಿ ಹಾಗು ವಿಶೇಷವಾಗಿ ಹರಿಪ್ರಸಾದ್ ನಾಡಿಗರಿಗೆ ಧನ್ಯವಾದಗಳು. ಈ ಸರಣಿಯ ಎಲ್ಲಾ ಲೇಖನಗಳ ಕೊಂಡಿಯನ್ನು ತಮ್ಮ ಫೇಸ್ ಬುಕ್ಕಿನಲ್ಲಿ ಹಂಚಿಕೊಂಡು ಮೆಕಾಲೆ ವಿದ್ಯಾವಿಧಾನದ ದುಷ್ಪ್ರಭಾವವನ್ನು ಹೆಚ್ಚೆಚ್ಚು ಅರಿತುಕೊಳ್ಳಲು ಅನುವು ಮಾಡಿಕೊಟ್ಟ ಸಂಪದಿಗ ನಾಗೇಶ್ ಮೈಸೂರು ಅವರಿಗೆ ನನ್ನ ವಿಶೇಷ ಕೃತಜ್ಞತೆಗಳು. ಈ ಸರಣಿಯಲ್ಲಿ ಮಂಡಿಸಿರುವ ವಿಚಾರಗಳು ವಾಚಕ ಮಿತ್ರರಲ್ಲಿ ದೇಶದ ಘನತೆ ಹಾಗು ಸ್ವಾಭಿಮಾನವನ್ನು ಪ್ರೇರೇಪಿಸುವಲ್ಲಿ ಸಹಾಯಕವಾಗಿದ್ದರೆ ನಾನು ಕೈಗೊಂಡ ಈ ಅಳಿಲು ಸೇವೆ ಸಾರ್ಥಕವಾದಂತೆ. ಅಂತಿಮವಾಗಿ ಈ ಸರಣಿಯನ್ನು ಕನ್ನಡದಲ್ಲಿ ಅನುವಾದಿಸಲು ಅವಕಾಶ ಮಾಡಿಕೊಟ್ಟ ಹಾಗು ಮೇಲಿಂದ ಮೇಲೆ ಸೂಕ್ತ ಸಲಹೆ ಸೂಚನೆಗಳನ್ನಿತ್ತು ಈ ಮಾಲಿಕೆಯನ್ನು ಬರೆಯಲು ಪ್ರೋತ್ಸಾಹಿಸಿದ ಮೂಲ ಲೇಖಕರಾದ ತಂಗೇಡುಕುಂಟ ಹೆಬ್ಬಾರ್ ನಾಗೇಶ್ವರ್ ರಾವ್ ಅವರಿಗೆ ಸಾದರ ಪ್ರಣಾಮಗಳು. ವಂದನೆಗಳೊಂದಿಗೆ, ಶ್ರೀಧರ್ ಬಂಡ್ರಿ :)