ಭಾಗ - ೨೪ ಭೀಷ್ಮ ಯುಧಿಷ್ಠಿರ ಸಂವಾದ: ಭಂಗಾಸ್ವನನ ಉಪಾಖ್ಯಾನ ಅಥವಾ ಸಂಸಾರ ಸುಖ ಯಾರಿಗೆ ಹೆಚ್ಚು?
ಇದು ಭೀಷ್ಮ ಯುಧಿಷ್ಠಿರ ಸಂವಾದ ಅರ್ಥಾತ್ ರಾಜನೀತಿ ಶಾಸ್ತ್ರದಿಂದ ಆಯ್ದ ಮತ್ತೊಂದು ನೀತಿ ಕಥೆ.
ಯುಧಿಷ್ಠಿರನು ಹೀಗೆ ಕೇಳಿದನು, "ಪಿತಾಮಹಾ! ಸ್ತ್ರೀ ಪುರುಷರೀರ್ವರಲ್ಲಿ ಯಾರಿಗೆ ಸಂಸಾರ ಸುಖವು ಅಧಿಕವಾದುದು? ಹಾಗೆಯೇ, ಮಕ್ಕಳ ಮೇಲೆ ವಾತ್ಸಲ್ಯವು ತಂದೆಗಿಂತ ತಾಯಿಗೇ ಹೆಚ್ಚು ಎನ್ನುತ್ತಾರಲ್ಲ, ಅದು ಹೇಗೆ? ಈ ವಿಷಯದಲ್ಲಿ ನಿಮ್ಮ ಅಭಿಪ್ರಾಯವೇನಿರುವುದೋ ತಿಳಿಸುವಂತಹವರಾಗಿರಿ"
ಭೀಷ್ಮನು ಹೀಗೆ ಉತ್ತರಿಸಿದನು, "ಧರ್ಮಜನೇ! ಈ ವಿಷಯದಲ್ಲಿ ಭಂಗಾಸ್ವನನೆಂಬ ರಾಜನ ಕುರಿತ ಉಪಾಖ್ಯಾನವೊಂದನ್ನು ನಾನು ಬಹು ಹಿಂದೆ ಕೇಳಿದ್ದೆ, ಅದನ್ನು ನಿನಗೆ ಹೇಳುವಂತಹವನಾಗುತ್ತೇನೆ, ಚಿತ್ತವಿಟ್ಟು ಆಲಿಸುವಂತಹವನಾಗು. ಅದೇ ನೀನು ಕೇಳಿದ ಎರಡೂ ಪ್ರಶ್ನೆಗಳಿಗೆ ಸಮಂಜಸವಾದ ಉತ್ತರವಾಗಲಿದೆ."
"ಭಂಗಾಸ್ವನನೆಂಬ ರಾಜನು ಧರ್ಮವಂತನಾಗಿಯೂ, ಪ್ರಜಾರಂಜಕನಾಗಿಯೂ ಪರಿಪಾಲನೆಯನ್ನು ಮಾಡುತ್ತಿದ್ದನು. ಆದರೆ ಅವನಿಗೆ ಸಂತಾನ ಭಾಗ್ಯವಿರಲಿಲ್ಲ. ಪುತ್ರಪ್ರಾಪ್ತಿಗಾಗಿ ಅವನು, "ಅಗ್ನಿಷ್ಟುತ" ಯಜ್ಞವನ್ನು ಕೈಗೊಂಡನು. ಭಂಗಾಸ್ವನನು ಕೈಗೊಂಡ ಯಜ್ಞದಲ್ಲಿ ಇಂದ್ರನಿಗೆ ಪ್ರಾಧಾನ್ಯತೆಯು ಇರಲಿಲ್ಲ. ಯಜ್ಞಫಲದ ಪುಣ್ಯದಿಂದಾಗಿ ಭಂಗಾಸ್ವನ ಮಹಾರಾಜನಿಗೆ ನೂರುಜನ ಸುಪುತ್ರರು ಜನಿಸಿದರು. ತನಗೆ ಪ್ರಾಧಾನ್ಯತೆಯನ್ನು ಕೊಡದೇ ಹೋದುದರಿಂದ ಇಂದ್ರನಿಗೆ ಭಂಗಾಸ್ವನ ರಾಜನ ಮೇಲೆ ಕೋಪವುಂಟಾಯಿತು, ಅವನ ಮೇಲೆ ಸೇಡು ತೀರಿಸಿಕೊಳ್ಳಲು ಅವನು ಬಯಸಿದ."
"ಒಮ್ಮೆ ಭಂಗಾಸ್ವನನು ಭೇಟೆಯಾಡಲು ಅರಣ್ಯಕ್ಕೆ ಹೋದನು. ಇದೇ ಸೂಕ್ತ ಸಮಯವೆಂದು ಅರಿತ ಇಂದ್ರನು ಭಂಗಾಸ್ವನನಿಗೆ ಮತಿಭ್ರಮಣೆಯುಂಟಾಗುವಂತೆ ಮಾಡಿದನು. ಇಂದ್ರನಿಂದ ಚಿತ್ತಭ್ರಮಣೆಗೊಳಗಾದ ರಾಜನು ಹುಚ್ಚನಂತೆ ಕಾಡಿನಲ್ಲಿ ತಿರುಗತೊಡಗಿದನು. ಹಾಗೆ ಕಾಡಿನಲ್ಲಿ ಅಲೆಯುತ್ತಿದ್ದ ರಾಜನಿಗೆ ಬಾಯಾರಿಕೆಯುಂಟಾಯಿತು. ಆಗ ಅವನಿಗೆ ಸುಂದರವಾದ ಒಂದು ನೀರಿನ ಕೊಳವು ಕಣ್ಣಿಗೆ ಬಿತ್ತು. ರಾಜನು ತನ್ನ ಕುದರೆಯನ್ನು ಆ ಕೊಳದತ್ತ ದೌಡಾಯಿಸಿದನು. ಕೊಳವನ್ನು ಸಮೀಪಿಸಿದ ನಂತರ ಕುದುರೆಯಿಂದ ಇಳಿದ ರಾಜನು, ತನ್ನ ಕುದುರೆಗೆ ನೀರನ್ನು ಕುಡಿಸಿ ಅದನ್ನು ಹತ್ತಿರದಲ್ಲೇ ಇದ್ದ ಮರವೊಂದಕ್ಕೆ ಕಟ್ಟಿ ಹಾಕಿದನು. ತದನಂತರ ತಾನೂ ಕೊಳದ ನೀರನ್ನು ಕುಡಿದು, ಅದರಲ್ಲಿ ಇಳಿದು ಸ್ನಾನ ಮಾಡಿದನು."
"ರಾಜನು ನೀರಿನಲ್ಲಿ ಮುಳುಗಿ ಮೇಲೇಳುವಷ್ಟರಲ್ಲಿ ನೋಡನೋಡುತ್ತಿದ್ದಂತೆಯೇ ಅವನು ಒಬ್ಬ ಸ್ತ್ರೀಯಾಗಿ ಮಾರ್ಪಟ್ಟನು. ಅವನಿಗಿದ್ದ ಕಾಠಿಣ್ಯತೆ, ಪೌರುಷ, ಪರಾಕ್ರಮ ಮೊದಲಾದ ಪುರಷ ಲಕ್ಷಣಗಳೆಲ್ಲಾ ಮಾಯವಾಗಿ ಆ ಜಾಗದಲ್ಲಿ ಮೃದುತ್ವ, ಕೃಶತ್ವ, ಚಂಚಲತ್ವ, ಮೊದಲಾದ ಸ್ತ್ರೀ ಗುಣಗಳು ಅವನಿಗೆ ಉಂಟಾದವು. ಇದನ್ನು ನೋಡಿ ರಾಜನಿಗೆ ಆಶ್ಚರ್ಯವಾಯಿತು. ಈ ಸ್ತ್ರೀ ರೂಪದಲ್ಲಿ ತಾನು ಕುದುರೆಯನ್ನು ಹತ್ತುವುದಾದರೂ ಹೇಗೆ? ತನ್ನ ರಾಜ್ಯಕ್ಕೆ ಹಿಂದಿರುಗಿ ಹೋಗುವುದಾದರೂ ಹೇಗೆ? ಹೀಗೆಂದು ಅವನು ಆಲೋಚನೆಗೆ ಬಿದ್ದನು. ಹಾಗೂ ಹೀಗೂ ಸ್ವಲ್ಪ ಸುಧಾರಿಸಿಕೊಂಡು, ನಿಧಾನವಾಗಿ ಕುದುರೆಯನ್ನು ಹತ್ತಿ ತನ್ನ ರಾಜ್ಯಕ್ಕೆ ಹಿಂದಿರುಗಿದನು. ನಡೆದ ವೃತ್ತಾಂತವನ್ನು ಸ್ತ್ರೀಯಾಗಿ ಮಾರ್ಪಟ್ಟಿದ್ದ ರಾಜನು ತನ್ನ ಸಭಾಸದರಿಗೆ ವಿವರಿಸಿದನು. ತನ್ನ ಮಕ್ಕಳನ್ನು ಕರೆದು, "ಮಕ್ಕಳೇ, ದೈವವಶಾತ್ ನನಗೆ ಈ ಗತಿಯು ಒದಗಿದೆ. ನಡೆಯಬಾರದ್ದೇನೋ ನಡೆದುಹೋಯಿತು. ಇನ್ನು, ನಾನು ಅರಣ್ಯಕ್ಕೆ ತೆರಳುತ್ತಿದ್ದೇನೆ. ನೀವು ನೂರೂ ಜನ ಪರಸ್ಪರ ಪ್ರೇಮಾಭಿಮಾನಗಳಿಂದ ಐಕ್ಯತೆಯಿಂದ ರಾಜ್ಯವನ್ನು ಪರಿಪಾಲಿಸಿರಿ" ಎಂದು ಹೇಳಿ ಕಾಡಿಗೆ ಹೊರಟುಹೋದನು(ಳು). ಕಾಡಿಗೆ ಹೋಗಿ ಅಲ್ಲಿ ಒಬ್ಬ ಮುನಿಯ ಆಶ್ರಯದಲ್ಲಿ ಸ್ತ್ರೀಯಾಗಿ ಮಾರ್ಪಟ್ಟಿದ್ದ ರಾಜನು ಕಾಲಾಯಾಪನೆ ಮಾಡತೊಡಗಿದ."
"ಅಡವಿಯಲ್ಲಿ ಆ ಮುನಿಯ ಸಹವಾಸದ ಫಲದಿಂದಾಗಿ ಆ ಸ್ತ್ರೀಗೆ (ಭಂಗಾಸ್ವನಿಗೆ) ಪುನಃ ನೂರು ಜನ ಪುತ್ರರು ಜನಿಸಿದರು. ಭಂಗಾಸ್ವನಿಯು, ಈ ನೂರು ಜನ ಕುಮಾರರನ್ನು ತನ್ನ ರಾಜ್ಯಕ್ಕೆ ಕರೆದುಕೊಂಡು ಹೋದಳು. ಅಲ್ಲಿ ಈ ಮುಂಚೆ ತನಗೆ ಜನಿಸಿದ್ದ ನೂರು ಕುಮಾರರನ್ನು ಹಾಗೂ ಈಗ ಸ್ತ್ರೀರೂಪದಲ್ಲಿರುವಾಗ ಜನಿಸಿದ ನೂರು ಮಕ್ಕಳನ್ನೂ ಉದ್ದೇಶಿಸಿ, ಎಲ್ಲರೂ ಕೂಡಿ ಬಾಳಿರಿ ಎಂದು ಹೇಳಿದಳು. ಆದರೆ, ಇಂದ್ರನ ಕಾರಣದಿಂದಾಗಿ ಅವರೆಲ್ಲರ ನಡುವೆ ವಿದ್ವೇಷವೇರ್ಪಟ್ಟಿತು. ಅವರೆಲ್ಲರಿಗೂ ಪರಸ್ಪರ ಕಲಹವೇರ್ಪಟ್ಟು ಎರಡು ನೂರು ಜನರೂ ಮರಣಿಸಿದರು."
"ಈ ವಾರ್ತೆಯನ್ನು ಕೇಳಿದ ಭಂಗಾಸ್ವನಿಗೆ ಬಹಳ ಬಾಧೆಯುಂಟಾಯಿತು. ಆಕೆಯು ದುಃಖದಿಂದ ಆರ್ತಳಾಗಿ ರೋಧಿಸತೊಡಗಿದಳು. ಆ ಸಮಯದಲ್ಲಿ ಇಂದ್ರನು ಒಬ್ಬ ಬ್ರಾಹ್ಮಣನ ವೇಷದಲ್ಲಿ ಬಂದು ಆಕೆಯನ್ನು ಸಮಾಧಾನ ಪಡಿಸಿದನು. ಭಂಗಾಸ್ವನಿಯು ಅವನಲ್ಲಿ ತನ್ನ ಗೋಳನ್ನು ತೋಡಿಕೊಂಡಳು. ಆಗ ಇಂದ್ರನು ನಿಜರೂಪವನ್ನು ಧಾರಣೆ ಮಾಡಿ, ಆ ಇನ್ನೂರು ಜನರಲ್ಲಿ ಕೇವಲ ನೂರು ಜನರನ್ನು ಮಾತ್ರವೇ ನಾನು ಬದುಕಿಸುತ್ತೇನೆ. ಅವರಲ್ಲಿ ಯಾರನ್ನು ಬದುಕಿಸಬೇಕು ಎಂದು ಕೇಳಿದನು."
"ಅದಕ್ಕೆ ಪ್ರತಿಯಾಗಿ ಭಂಗಾಸ್ವನಿಯು, "ನಾನು ಸ್ತ್ರೀರೂಪದಲ್ಲಿ ಜನ್ಮವಿತ್ತ ನೂರು ಜನ ಮಕ್ಕಳನ್ನು ಬದುಕಿಸು" ಎಂದು ಪ್ರಾರ್ಥಿಸಿದನು."
"ಅದಕ್ಕೆ ಪ್ರತಿಯಾಗಿ ಇಂದ್ರನು, "ಹಾಗೇಕೆ?" ಎಂದು ಪ್ರಶ್ನಿಸಿದನು."
"ಇಂದ್ರನೇ! ಸ್ತ್ರೀಗೆ ತನ್ನ ಸಂತಾನದ ಬಗ್ಗೆ ಅಪಾರವಾದ ಪ್ರೇಮವಿರುತ್ತದೆ. ಅವರ ಮೇಲೆ ಮಮಕಾರ, ವಾತ್ಸಲ್ಯಗಳು ಆಕೆಗೆ ಅಧಿಕವಾಗಿಯೇ ಇರುತ್ತವೆ. ಎಷ್ಟೇ ಆಗಲಿ ಅವರು ಆಕೆಯ ರಕ್ತದಲ್ಲಿ ರಕ್ತವಾಗಿ, ಆಕೆಯ ಕರುಳಿನಲ್ಲಿ ಕರುಳಾಗಿ ಜನಿಸಿದ ಸಂತಾನವಲ್ಲವೇ? ಆದರೆ ಪುರುಷನಿಗೆ ಅಂತಹ ವಾತ್ಸಲ್ಯವಿರುವುದಿಲ್ಲ. ಆದ್ದರಿಂದ ನಾನು ಹಾಗೆ ಬೇಡಿಕೊಂಡೆ" ಎಂದು ಹೇಳಿದಳು."
"ಒಳ್ಳೆಯದೇ! ನಾನು ನಿನ್ನ ಇನ್ನೂರು ಮಂದಿ ಸುಪುತ್ರರನ್ನೂ ಬದುಕಿಸುತ್ತೇನೆ. ಅಷ್ಟೇ ಅಲ್ಲ ನಿನ್ನನ್ನು ಪುನಃ ಪುರುಷನನ್ನಾಗಿ ಮಾರ್ಪಡಿಸುತ್ತೇನೆ" ಎಂದು ಇಂದ್ರನು ಹೇಳಿದನು."
"ಎಲ್ಲರನ್ನೂ ಬದುಕಿಸು, ಅದರಿಂದ ನನಗೆ ಸಂತೋಷವುಂಟಾಗುತ್ತದೆ. ಆದರೆ ದೇವೇಂದ್ರನೇ, ನನಗೆ ಪುರುಷತ್ವವು ಬೇಡ. ನಾನು ಸ್ತ್ರೀಯಾಗಿಯೇ ಇರಲು ಬಯಸುತ್ತೇನೆ" ಎಂದನು ಸ್ತ್ರೀರೂಪಿ ಭಂಗಾಸ್ವನ ಮಹಾರಾಜ.
"ಅದೇಕೆ, ಹಾಗೆ?" ಎಂದು ಇಂದ್ರನು ಪ್ರಶ್ನಿಸಲಾಗಿ, ಅದಕ್ಕೆ ಪ್ರತ್ಯುತ್ತರವಾಗಿ ಆಕೆಯು, "ಏಕೆಂದರೆ ಸಂಸಾರದಲ್ಲಿ ಸ್ತ್ರೀಯರಿಗೇ ಸುಖವು ಅಧಿಕವಾಗಿರುತ್ತದೆ, ಆದ್ದರಿಂದ ಹೀಗೆ ಬೇಡಿಕೊಳ್ಳುತ್ತಿದ್ದೇನೆ!" ಎಂದು ಹೇಳಿದಳು."
"ಆದ್ದರಿಂದ ಧರ್ಮಜನೇ! ಸ್ತ್ರೀಯೇ ಸಂಸಾರದಲ್ಲಿ ಪ್ರಧಾನ ಪಾತ್ರವನ್ನು ಪೋಷಿಸುವವಳು. ಕೇವಲ ಸ್ತ್ರೀಗೆ ಮಾತ್ರವೇ ಮಾತೃತ್ವದ ಗೌರವ ಲಭ್ಯವಾಗುತ್ತದೆ. ಸ್ತ್ರೀಗೇ ಪುತ್ರ ಸ್ನೇಹವು ದೊರಕುತ್ತದೆ. ಸ್ತ್ರೀ ಅಂದರೆ ಪ್ರಕೃತಿಯೇ!"
(ಗುರುವಿಗಿಂತ ತಂದೆಯ ಸ್ಥಾನ ದೊಡ್ಡದು, ತಂದೆಗಿಂತ ನೂರರಷ್ಟು ಹಿರಿದಾದ ಸ್ಥಾನ ತಾಯಿಯದು. ಅದಕ್ಕೇ ಮಾತೃದೇವೋ ಭವ ಎಂದ ನಂತರ ಪಿತೃ ದೇವೋ ಭವ ಎಂದು ಹೇಳಿರುವುದು).
*****
(ಆಧಾರ - ಶ್ರೀಯುತ ದೋನೇಪುಡಿ ವೆಂಕಯ್ಯನವರು ತೆಲುಗಿನಲ್ಲಿ ರಚಿಸಿರುವ ಭೀಷ್ಮ ಯುಧಿಷ್ಠಿರ ಸಂವಾದ ಅರ್ಥಾತ್ ರಾಜನೀತಿ ಶಾಸ್ತ್ರ ಎಂಬ ಗ್ರಂಥದಿಂದ ಆಯ್ದ ಭಾಗದ ಅನುವಾದ. ಈ ಸರಣಿಯನ್ನು ಈ ಹಿಂದೆ ಮೊಗಹೊತ್ತಗೆ - ಫೇಸ್ ಬುಕ್ಕಿನಲ್ಲಿ ನನ್ನ ವ್ಯಕ್ತಿಗತ ಪುಟದಲ್ಲಿ ಪ್ರಕಟಿಸಲಾಗಿತ್ತು).
ಚಿತ್ರಕೃಪೆ: ಗೂಗಲ್
ಹಿಂದಿನ ಲೇಖನ ಭಾಗ - ೨೩ ಭೀಷ್ಮ ಯುಧಿಷ್ಠಿರ ಸಂವಾದ: ವಶಿಷ್ಠ ಬ್ರಹ್ಮ ಸಂವಾದ ಅರ್ಥಾತ್ ದೈವಬಲವೋ ಪುರುಷಪ್ರಯತ್ನವೋ! ಓದಲು ಈ ಕೆಳಗಿನ ಕೊಂಡಿಯನ್ನು ನೋಡಿ https://sampada.net/blog/%E0%B2%AD%E0%B2%BE%E0%B2%97-%E0%B3%A8%E0%B3%A9-...
Comments
ಉ: ಭಾಗ - ೨೪ ಭೀಷ್ಮ ಯುಧಿಷ್ಠಿರ ಸಂವಾದ: ಭಂಗಾಸ್ವನನ ಉಪಾಖ್ಯಾನ ಅಥವಾ...
ಈ ಲೇಖನದ ಮುಂದಿನ ಭಾಗ - ೨೫ ಭೀಷ್ಮ ಯುಧಿಷ್ಠಿರ ಸಂವಾದ: ಸಹಧರ್ಮಾಚರಣೆ! ಓದಲು ಈ ಕೆಳಗಿನ ಕೊಂಡಿಯನ್ನು ನೋಡಿ https://sampada.net/node/48499
ಉ: ಭಾಗ - ೨೪ ಭೀಷ್ಮ ಯುಧಿಷ್ಠಿರ ಸಂವಾದ: ಭಂಗಾಸ್ವನನ ಉಪಾಖ್ಯಾನ ಅಥವಾ...
ತುಂಬಾ ಚೆನ್ನಾಗಿ ಮೂಡಿ ಬಂದಿದೆ ನಿಮ್ಮ ಲೇಖನ.
In reply to ಉ: ಭಾಗ - ೨೪ ಭೀಷ್ಮ ಯುಧಿಷ್ಠಿರ ಸಂವಾದ: ಭಂಗಾಸ್ವನನ ಉಪಾಖ್ಯಾನ ಅಥವಾ... by skomkar
ಉ: ಭಾಗ - ೨೪ ಭೀಷ್ಮ ಯುಧಿಷ್ಠಿರ ಸಂವಾದ: ಭಂಗಾಸ್ವನನ ಉಪಾಖ್ಯಾನ ಅಥವಾ...
ಧನ್ಯವಾದಗಳು ಓಂಕಾರ್ ಅವರೆ :) ವಂದನೆಗಳು .