ಭಾಗ - ೨೯ ಭೀಷ್ಮ ಯುಧಿಷ್ಠಿರ ಸಂವಾದ: ಶಾಂಡಲೀದೇವಿ ಸುಮನ ಸಂವಾದ ಅಥವಾ ಸಾಧ್ವಿಯ ಲಕ್ಷಣಗಳು!

ಭಾಗ - ೨೯ ಭೀಷ್ಮ ಯುಧಿಷ್ಠಿರ ಸಂವಾದ: ಶಾಂಡಲೀದೇವಿ ಸುಮನ ಸಂವಾದ ಅಥವಾ ಸಾಧ್ವಿಯ ಲಕ್ಷಣಗಳು!

ಚಿತ್ರ

       ಇದು ಭೀಷ್ಮ ಯುಧಿಷ್ಠಿರ ಸಂವಾದ ಅರ್ಥಾತ್ ರಾಜನೀತಿ ಶಾಸ್ತ್ರದಿಂದ ಆಯ್ದ ಮತ್ತೊಂದು ನೀತಿ ಕಥೆ.  
     ಯುಧಿಷ್ಠಿರನು ಹೀಗೆ ಕೇಳಿದನು, "ಪಿತಾಮಹಾ! ಸ್ತ್ರೀಯರು ಸದಾಚಾರ ಸಂಪನ್ನರಾಗಿರಬೇಕೆಂದು ತಾವು ಈ ಹಿಂದೆ ತಿಳಿಸಿದ್ದೀರಿ. ಸಾಧ್ವೀಮಣಿಯರಾದ ಸ್ತ್ರೀಯರಿಂದಲೇ ಈ ಪ್ರಪಂಚವು ಈಗಿರುವಂತೆ ಇದೆ ಎಂದೂ ಸಹ ತಾವು ವಿವರಿಸಿದ್ದೀರಿ. ಸ್ತ್ರೀಯರು ದುಷ್ಟ ಸ್ವಭಾವವನ್ನು ಹೊಂದಿದವರಾಗಿದ್ದರೆ ಸಮಾಜದಲ್ಲಿ ಸಂಕರವು ಉಂಟಾಗುತ್ತದೆಂದು ಹೇಳಿದ್ದೀರಿ. ಅಷ್ಟಕ್ಕೂ ಸ್ತ್ರೀಯರಲ್ಲಿ ಸದಾಚಾರವೆಂದರೇನು? ಪತಿವ್ರತೆಯರಾದ ಸ್ತ್ರೀಯರ ಲಕ್ಷಣವು ಹೇಗಿರುತ್ತದೆ? ಮೂಲಭೂತವಾಗಿ ಪಾತಿವ್ರತ್ಯವೆಂದರೇನು ಎಂದೂ ಸಹ ತಿಳಿದುಕೊಳ್ಳಲು ಉತ್ಸುಕನಾಗಿದ್ದೇನೆ. ದಯಮಾಡಿ ತಿಳಿಸಿಕೊಡುವಂತಹವರಾಗಿ."
      ಭೀಷ್ಮನು ಹೀಗೆ ಉತ್ತರಿಸಿದನು, "ಧರ್ಮನಂದನನೇ! ಎಂತಹ ಸೂಕ್ಷ್ಮವಾದ ವಿಷಯವನ್ನು ಪ್ರಸ್ತಾಪಿಸಿರುವೆ! ಪಾತಿವ್ರತ್ಯದ ಕುರಿತು ನಾವಿಂದು ಸಂಭಾಷಿಸುತ್ತಿದ್ದೇವೆ. ಪಾತಿವ್ರತ್ಯ ಎನ್ನುವ ಪದವನ್ನು ಉಚ್ಛರಿಸುವುದೇ ಅನಾಗರೀಕತೆ ಎನ್ನುವ ಕಾಲವೂ ಮುಂದೆ ಬಂದರೂ ಬರಬಹುದು. ಕಲಿಯುಗಧರ್ಮವು ಕ್ರಮೇಣವಾಗಿ ಪ್ರಬಲಿಸುತ್ತಿವೆ. ಇರಲಿ, ಜಿಜ್ಞಾಸೆಯಿಂದ ಪ್ರಶ್ನಿಸಿದ್ದೀಯ, ಇದನ್ನು ವಿವರಿಸಲು ಹಿಂದೆ ದೇವಲೋಕದಲ್ಲಿ ನಡೆದ ಒಂದು ಸಂಭಾಷಣೆಯು ಉಪಯುಕ್ತವಾಗಿದೆ. ಶಾಂಡಲೀದೇವಿ ಎನ್ನುವ ಸ್ತ್ರೀಯನ್ನು ಸುಮನ ಎನ್ನುವಾಕೆ ಪ್ರಶ್ನಸಿದಳು-
       "ಶಾಂಡಿಲೀದೇವಿ, ನಿನ್ನ ತೇಜಸ್ಸನ್ನು ಗಮನಿಸುತ್ತಿದ್ದರೆ ಯಾವುದೋ ಮಹತ್ತರವಾದ ತಪಸ್ಸನ್ನು ಮಾಡಿ ಅತ್ಯಂತ ದುಷ್ಕರವಾದ ಸಾಧನೆಯನ್ನೇನೊ ಮಾಡಿ ಈ ಲೋಕಕ್ಕೆ ನೀನು ಬಂದಂತೆ ತೋರುತ್ತಿದೆ. ಅದ್ಯಾವುದೋ ನನಗೆ ತಿಳಿಸುವಂತಹವಳಾಗು"
       "ಸುಮನ ಕೇಳಿದ ಪ್ರಶ್ನೆಗೆ ಕಿರುನಗೆ ನಕ್ಕು, ಶಾಂಡಲೀದೇವಿ ಹೀಗೆ ಉತ್ತರಿಸಿದಳು -
       "ಸುಮನಾದೇವಿ ನಾನು ಯಾವ ತಪಸ್ಸನ್ನೂ ಆಚರಿಸಲಿಲ್ಲ. ಯಾವುದೇ ಕಾಷಾಯ ವಸ್ತ್ರವನ್ನೂ ಧರಿಸಲಿಲ್ಲ, ನಾರುಮಡಿಯುಟ್ಟು ಕಾಲಕಳೆಯಲಿಲ್ಲ. ಶಿರೋಮುಂಡನವನ್ನು ಮಾಡಿಕೊಂಡು ವೈರಾಗ್ಯ ವೃತ್ತಿಯನ್ನೂ ಕೈಗೊಳಲಿಲ್ಲ ಅಥವಾ ಜಟೆಗಳನ್ನು ಬಿಟ್ಟುಕೊಂಡು ಕುಳಿತುಕೊಳ್ಳಲಿಲ್ಲ."
       "ಆದರೆ, ಏನೆಂದು ನೀನು ಕೇಳಿರುವೆಯಾದ್ದರಿಂದ ಹೇಳುತ್ತೇನೆ ಕೇಳು. ನಾನು ಮಾಡಿದ್ದೆಲ್ಲಾ ಒಂದೇ ಒಂದು ಕೆಲಸ, ಅದೇನೆಂದರೆ ನನ್ನ ಪತಿಯೊಂದಿಗೆ ತ್ರಿಕರಣ ಶುದ್ಧಿಯಿಂದ ಸಂಸಾರ ಮಾಡಿರುವುದು!"
       "ಸುಮನಳು, ಆಶ್ಚರ್ಯ ಚಕಿತಳಾಗಿ ಸ್ತಬ್ದಳಾಗಿ ನಿಂತುಕೊಂಡಳು. ಶಾಂಡಲೀದೇವಿಯು ತನ್ನ ಮಾತುಗಳನ್ನು ಮುಂದುವರೆಸುತ್ತಾ ಹೀಗೆ ಹೇಳಿದಳು -
       "ಒಬ್ಬ ಸ್ತ್ರೀಯು ಒಬ್ಬ ಪುರುಷನೊಂದಿಗೆ ಸಹಜೀವನವನ್ನು ಮಾಡುವುದು, ಸಹಧರ್ಮವನ್ನು ಆಚರಿಸುವುದು, ಸಹಧರ್ಮಚಾರಿಣಿಯಾಗಿ ವ್ಯವಹರಿಸುವುದು - ಇದು ಒಂದು ವ್ರತ. ಇದು ಆಜನ್ಮ ವ್ರತವಾಗಿದೆ."
     "ಪಾತಿವ್ರತ್ಯವೆಂದರೆ ’ಸ್ತ್ರೀಯು ಪುರುಷನಿಗೆ ಅಡಿಯಾಳಾಗಿರುವುದು’ ಎನ್ನುವ ಭ್ರಮೆಯುಂಟಾಗಬಹುದು. ಆದರೆ, ’ಅಡಿಯಾಳು’ ಎನ್ನುವ ಪದವನ್ನೇ ಬಳಸಲಿಚ್ಛಿಸಿದರೆ ಸ್ತ್ರೀಯು ತನ್ನ ಜೀವಮಾನಕಾಲದಲ್ಲಿ ಕೇವಲ ಒಬ್ಬ ವ್ಯಕ್ತಿಗೇ ಅಡಿಯಾಳು. ಬಾಲ್ಯದಲ್ಲಿ ತಂದೆಗೆ ಅಡಿಯಾಳು, ಯೌವ್ವನ ಕಾಲದಲ್ಲಿ ಪತಿಗೆ ಅಡಿಯಾಳು ಮತ್ತು ಮುಪ್ಪಿನ ಕಾಲದಲ್ಲಿ ಮಗನಿಗೆ ಅಡಿಯಾಳು. ಅಂದರೆ ಆಕೆ ಸದಾ ಒಬ್ಬರಿಗೇ ಅಡಿಯಾಳು! ಆದರೆ ಪುರುಷನಾದವನು ಎಷ್ಟು ಜನಕ್ಕೆ ಅಡಿಯಾಳು? ಪುರುಷನಾದವನು ತಂದೆಗೆ ಅಡಿಯಾಳು, ತಾಯಿಗೆ ಅಡಿಯಾಳು, ಗುರುವಿಗೆ ಅಡಿಯಾಳು, ಯಜಮಾನನಿಗೆ ಅಡಿಯಾಳು, ರಾಜನಿಗೆ ಅಡಿಯಾಳು, ಸಮಾಜದಲ್ಲಿ ಯಾರಿಂದಲಾದರೂ ಯಾವುದೇ ಕೆಲಸವಾಗಬೇಕೆಂದರೂ ಸಹ ಅವರೆಲ್ಲರಿಗೂ ಅವನು ಅಡಿಯಾಳು. ಅವನು ಯಾವತ್ಪ್ರಪಂಚಕ್ಕೆ ಅಡಿಯಾಳು. ಅವನು ಎಲ್ಲರಿಗೂ ಏಕಕಾಲಕ್ಕೆ ಅಡಿಯಾಳು. ಆದರೆ ಸ್ತ್ರೀಯು ತನ್ನ ಜೀವಿತ ಕಾಲದಲ್ಲಿ ಎಲ್ಲಾ ಸಮಯದಲ್ಲೂ ಕೇವಲ ಒಬ್ಬನಿಗೇ ಅಡಿಯಾಳು. ಅಡಿಯಾಳು ಎನ್ನುವ ಪದವನ್ನು ಬಳಸಬೇಕೆಂದಾಗ ಹೇಳಬೇಕಾದ ಮಾತಿದು."
       "ಪತಿವ್ರತೆಯಾದ ಸ್ತ್ರೀಯು ಏನು ಮಾಡಬೇಕು?" ಎಂದು ಸುಮನಳು ಪ್ರಶ್ನಿಸಿದಳು"
       "ಶಾಂಡಲೀದೇವಿ ಅದಕ್ಕೆ ಪ್ರತಿಯಾಗಿ ಹೀಗೆ ಉತ್ತರಿಸಿದಳು, "ಏನು ಮಾಡಬೇಕು, ಏನು ಮಾಡಬಾರದು ಎನ್ನುವ ವಿಷಯದಲ್ಲಿ ತ್ರಿಕಾಲಾಬಾಧಿತವಾದ ಶಾಶ್ವತವಾದ ಬಾಹ್ಯ ಸೂತ್ರಗಳಾವುವೂ ಇಲ್ಲ. ದೇಶಕಾಲ ಪರಿಸ್ಥಿತಿಗಳಲ್ಲಿ ನಿರಪೇಕ್ಷವಾಗಿ ಇರುವುದು ಮನಸ್ಸಿನಲ್ಲಿರುವ ಭಾವನೆ ಮಾತ್ರ."
      "ಪತಿವ್ರತೆಯಾದ ಸ್ತ್ರೀಯು, ’ಮಳೆಯಾದರೆ ಕೇಡಿಲ್ಲ, ಭರ್ತನಿದ್ದರೆ ಬಡತನವಿಲ್ಲ’ ಎನ್ನುವ ತತ್ತ್ವವನ್ನು ವಿಶ್ವಸಿಸುತ್ತಾಳೆ. ಪತಿಯೇ ಸ್ತ್ರೀಯರ ಆಸ್ತಿ. ಪತಿಯೇ ಆಸ್ತಿಯಾಗಿರುವಾಗ ಆತನಿಗಿರುವ ಯಾವದಾಸ್ತಿಯೂ ಸಹ ಆಕೆಯ ಆಸ್ತಿಯೇ. ಸ್ತ್ರೀಯು ಪುರುಷನ ಅರ್ಧಾಂಗಿ, ಅವನ ದೇಹದಲ್ಲಿನ ಅರ್ಧ ಭಾಗವಾಗಿದ್ದಾಳೆ ಎಂದರೆ ಅವರಿಬ್ಬರೂ ಸೇರಿ ಒಂದು ಎಂದರ್ಥ, ಇದೇ ಪತಿವ್ರತಾ ವ್ರತ!"
        "ಸುಮನಳು ಶಾಂಡಲೀದೇವಿಯ ಮಾತುಗಳನ್ನು ಅರ್ಧಕ್ಕೆ ತುಂಡರಿಸಿ, "ಹಾಗದರೆ ಸ್ತ್ರೀಯರಿಗೆ ಕೇವಲ ಕರ್ತವ್ಯಗಳು ಮಾತ್ರವೇ ಇರುವವೇ? ಆಕೆಗೆ ಹಕ್ಕುಗಳಾವುವೂ ಇಲ್ಲವೇ?" ಎಂದು ಪ್ರಶ್ನಿಸಿದಳು."
       "ಹಕ್ಕುಗಳು ಮತ್ತು ಕರ್ತವ್ಯಗಳು ಕುರಿತು ಪ್ರಶ್ನೆಯನ್ನು ಎತ್ತಿರುವುದರಿಂದ ಹೇಳಬೇಕಾಗಿದೆ ಕೇಳು. ಈ ವ್ರತದಲ್ಲಿ ಸ್ತ್ರೀಯರಿಗೇ ಹಕ್ಕುಗಳು ಹೆಚ್ಚು, ಕರ್ತವ್ಯಗಳು ಕಡಿಮೆ. ಒಂದು ಚಿಕ್ಕ ಅಂಶವನ್ನು ವಿವರಿಸುತ್ತೇನೆ ನೋಡು. ಪುರುಷನು ಮಾಡುವ ಕಾರ್ಯಗಳಲ್ಲಿ ಪುಣ್ಯದ ಕರ್ಮಗಳೂ, ಪಾಪದ ಕರ್ಮಗಳೂ ಇರುತ್ತವೆ. ಪುರುಷನ ಪುಣ್ಯಫಲದಲ್ಲಿ ಸ್ತ್ರೀಯರಿಗೆ ಅರ್ಧ ಭಾಗ, ಆದರೆ ಅವನ ಪಾಪದ ಫಲದಲ್ಲಿ ಸ್ತ್ರೀಯರಿಗೆ ಭಾಗವಿಲ್ಲ. ಇಲ್ಲಿ ಕೇವಲ ಹಕ್ಕಿದೆ ಆದರೆ ಕರ್ತವ್ಯವಿಲ್ಲ. ಇನ್ನು ಸತಿಯು ಮಾಡುವ ಸತ್ಕಾರ್ಯಗಳಿರುತ್ತವೆ. ಆಕೆಯು, ತಿಳಿಯದೆಯೋ, ಆಕಸ್ಮಿಕವಾಗಿಯೋ ಮಾಡುವ ದುಷ್ಕಾರ್ಯಗಳೂ ಸಹ ಇರಬಹುದು, ಹೇಳಲಾಗದು. ಅವುಗಳಲ್ಲಿ ಸತ್ಕಾರ್ಯಗಳ ಫಲವೆಲ್ಲಾ ಸತಿಯದೇ. ಆದರೆ ದುಷ್ಕಾರ್ಯಗಳ ಫಲದಲ್ಲಿ ಅರ್ಧ ಮಾತ್ರ ಖಂಡಿತವಾಗಿ ಪತಿಯದೇ! ಆದ್ದರಿಂದ ಇಲ್ಲಿಯೂ ಸಹ ಸ್ತ್ರೀಯರಿಗೆ ಹೆಚ್ಚು ಹಕ್ಕು ಕಡಿಮೆ ಕರ್ತವ್ಯ!"
      "ಇದು ಹೇಗೆ ಸಾಧ್ಯವೆನಿಸಬಹುದು. ತನ್ನ ಜೀವನವನ್ನು ಒಬ್ಬ ವ್ಯಕ್ತಿಗೆ ಸಮರ್ಪಿಸಿಕೊಳ್ಳುವುದರಿಂದ ಇದು ಸಾಧ್ಯವಾಗುತ್ತದೆ. ಒಬ್ಬ ಪುರುಷನೊಂದಿಗೆ ಜೀವಮಾನವೆಲ್ಲಾ ತಾದಾತ್ಮ್ಯ ಭಾವನೆಯಿಂದ ಇರುವುದರ ಮೂಲಕ ಇದು ಸಾಧ್ಯವಾಗುತ್ತದೆ. ಈ ತಾದಾತ್ಮ್ಯತೆಯಿಂದ ಸ್ತ್ರೀಯು ಪುರುಷನಿಗೆ ಬಾಹ್ಯ ಪ್ರಾಣವಾಗಿ ಇರುತ್ತಾಳೆ. ಅವನ ಹೃದಯದ ಸ್ಪಂದನವಾಗಿ, ಮೇಧಸ್ಸಾಗಿ, ನೆರಳಾಗಿ, ಬೆನ್ನೆಲುಬಾಗಿ, ಮಂತ್ರಿಯಾಗಿ, ದಾಸಿಯಾಗಿ, ಅವನ ಜೀವನ ಚಕ್ರರಥದ ಸಾರಥಿಯಾಗಿರುತ್ತಾಳೆ. ಆಕೆ ಅರ್ಧನಾರೀಶ್ವರ ಸ್ವರೂಪಳಾಗಿ ಕಾಣಿಸುತ್ತಾಳೆ."
        "ಆದ್ದರಿಂದ ಧರ್ಮನಂದನನೇ! ಪತಿವ್ರತೆಯಾದ ಸ್ತ್ರೀಯರಿಗೆ ಅದ್ಭುತವಾದ ಶಕ್ತಿಗಳು ದೊರೆಯುವವೆಂದು ನಾವು ಕೇಳುತ್ತಿರುತ್ತೇವೆ. ಏಕೆಂದರೆ, ಇದು ಅಗ್ನಿಪಥ, ಅಸಿಧಾರಾವ್ರತವಾಗಿದೆ. ಅಪರಾಜೇಯವಾದ ವ್ರತವಾಗಿದೆ."
*****
(ಆಧಾರ - ಶ್ರೀಯುತ ದೋನೇಪುಡಿ ವೆಂಕಯ್ಯನವರು ತೆಲುಗಿನಲ್ಲಿ ರಚಿಸಿರುವ ಭೀಷ್ಮ ಯುಧಿಷ್ಠಿರ ಸಂವಾದ ಅರ್ಥಾತ್ ರಾಜನೀತಿ ಶಾಸ್ತ್ರ ಎಂಬ ಗ್ರಂಥದಿಂದ ಆಯ್ದ ಭಾಗದ ಅನುವಾದ. ಈ ಸರಣಿಯನ್ನು ಈ ಹಿಂದೆ ಮೊಗಹೊತ್ತಗೆ - ಫೇಸ್ ಬುಕ್ಕಿನಲ್ಲಿ ನನ್ನ ವ್ಯಕ್ತಿಗತ ಪುಟದಲ್ಲಿ ಪ್ರಕಟಿಸಲಾಗಿತ್ತು).  
ಚಿತ್ರಕೃಪೆ:  ಗೂಗಲ್
ಹಿಂದಿನ ಲೇಖನ  ಭಾಗ - ೨೮ ಭೀಷ್ಮ ಯುಧಿಷ್ಠಿರ ಸಂವಾದ: ವ್ಯಾಸ ಕೀಟಕ ಸಂವಾದ ಅಥವಾ ಸರ್ವಭೂತ ದಯೆ! ಓದಲು ಈ ಕೆಳಗಿನ ಕೊಂಡಿಯನ್ನು ನೋಡಿ https://sampada.net/blog/%E0%B2%AD%E0%B2%BE%E0%B2%97-%E0%B3%A8%E0%B3%AE-...
 
 
 
 

Rating
No votes yet

Comments

Submitted by makara Mon, 11/19/2018 - 07:54

ಹಿಂದಿನ ಲೇಖನ ಭಾಗ - ೨೮ ಭೀಷ್ಮ ಯುಧಿಷ್ಠಿರ ಸಂವಾದ: ವ್ಯಾಸ ಕೀಟಕ ಸಂವಾದ ಅಥವಾ ಸರ್ವಭೂತ ದಯೆ! ಓದಲು ಈ ಕೆಳಗಿನ ಕೊಂಡಿಯನ್ನು ನೋಡಿ https://sampada.net/blog/%E0%B2%AD%E0%B2%BE%E0%B2%97-%E0%B3%A8%E0%B3%AE-...

Submitted by makara Tue, 11/20/2018 - 19:11

ಈ ಲೇಖನದ ಮುಂದಿನ ಭಾಗ - ೩೦ ಭೀಷ್ಮ ಯುಧಿಷ್ಠಿರ ಸಂವಾದ: ದಾನವೆಂದರೇನು? ಓದಲು ಈ ಕೆಳಗಿನ ಕೊಂಡಿಯನ್ನು ನೋಡಿhttps://sampada.net/blog/%E0%B2%AD%E0%B2%BE%E0%B2%97-%E0%B3%A9%E0%B3%A6-...