ಭಾಗ - ೨: ಕೊನೆಯುಸಿರೆಳೆಯುತ್ತಿರುವ ಕಮ್ಯೂನಿಸಂ!

ಭಾಗ - ೨: ಕೊನೆಯುಸಿರೆಳೆಯುತ್ತಿರುವ ಕಮ್ಯೂನಿಸಂ!

ಹೀಗೇಕಾಯಿತು......?
       ಹಿಂದೆ ಒಂದಾನೊಂದು ಕಾಲದಲ್ಲಿ ಧನಿಕನೊಬ್ಬನು ತೆಪ್ಪವೊಂದರಲ್ಲಿ ಕುಳಿತು ನದಿಯನ್ನು ದಾಟುತ್ತಿದ್ದ. "ವಜ್ರವು ಹೇಗಿರುತ್ತದೆ ಗೊತ್ತಾ?" ಎಂದು ಹುಟ್ಟು ಹಾಕುತ್ತಿದ್ದ ಅಂಬಿಗನನ್ನು ಕೇಳಿದ ಆ ಧನಿಕ. "ಗೊತ್ತಿಲ್ಲ, ಸ್ವಾಮಿ" ಎಂದು ಹೇಳಿದ ಆ ದೋಣಿಯವ. "ವಜ್ರವೆಂದರೆ ಏನು ಎನ್ನುವುದು ನಿನಗೆ ತಿಳಿಯದೇ? ನಿನ್ನ ಜೀವನ ವ್ಯರ್ಥ!" ಎಂದು ಅವನನ್ನು ಹಂಗಿಸಿ ವಜ್ರದ ಹಿರಿಮೆಯನ್ನು ಆ ಧನವಂತನು ವಿವರಿಸಿದ. ಆಮೇಲೆ ಸುಂದರವಾದ ಭವನಗಳ ಕುರಿತು, ಹಂಸತೂಲಿಕಾ ತಲ್ಪದ ಕುರಿತು, ರೇಷ್ಮೆಯಿಂದ ತಯಾರಿಸಿದ ಜರತಾರಿ ವಸ್ತ್ರಗಳ ಕುರಿತು, ಇತರ ದೇಶಗಳ ಕುರಿತು ಅಲ್ಲಿರುವ ’ಭೂತಲ ಸ್ವರ್ಗ’ದ ಕುರಿತು ಆ ದೋಣಿಯವನಿಗೆ ವಿವರಿಸಿದ ಆ ಧನವಂತ. 
      "ಸ್ವಾಮಿ ನಿಮಗೆ ಈಜಲು ಬರುತ್ತದೆಯೇ?" ಎಂದು ಕೇಳಿದ ಹುಟ್ಟು ಹಾಕುತ್ತಿದ್ದ ಅಂಬಿಗ. "ಪ್ಚ್! ಪ್ಚ್! ಅದರಲ್ಲೇನಿದೆ, ಅದು ನನಗೆ ಬರುವುದಿಲ್ಲ, ಅದನ್ನು ಕಲಿಯುವ ಅವಶ್ಯಕತೆಯೂ ನನಗಿಲ್ಲ!" ಎನ್ನುವ ಉಡಾಫೆಯ ಉತ್ತರವನ್ನು ಕೊಟ್ಟ ಆ ಧನಿಕ. "ಹಾಗಾದರೆ ನಿಮ್ಮ ಜೀವನವೇ ವ್ಯರ್ಥ" ಎಂದು ಹೇಳಿದ ಆ ಅಂಬಿಗ. "ಏಕೆ?" ಎಂದು ಕುಪಿತನಾಗಿಯೇ ಪ್ರಶ್ನಿಸಿದ ಆ ಧನಿಕ. ಅದಕ್ಕೆ ಆ ಅಂಬಿಗ, ನಾನು ನಡೆಸುತ್ತಿರುವ ದೋಣಿಯಲ್ಲಿ ರಂಧ್ರವುಂಟಾಗಿದೆ, ಇದು ಮುಳುಗಿ ಹೋಗುತ್ತಿದೆ.... ನಿಮ್ಮನ್ನೂ ಸೇರಿಸಿಕೊಂಡು" ಎಂದ. ಆ ಪಂಡಿತನಿಗೆ ಎಷ್ಟು ಜ್ಞಾನವಿದ್ದರೇನು? ಈಜುವುದಕ್ಕೆ ಮಾತ್ರ ಬರುತ್ತಿರಲಿಲ್ಲ!
      ಅದೇ ವಿಧವಾಗಿ ಕಮ್ಯೂನಿಸಂ ಸಹ ಪ್ರಜಾ ಜಾಗೃತ ಸಾಗರದಲ್ಲಿ ಮುಳುಗಿ ಹೋಗಿ ಪಾತಾಳವನ್ನು ಸೇರಿದೆ. ಕಾರಣವೇನೆಂದರೆ, "ಚಾರಿತ್ರಿಕ ವಿಶ್ಲೇಷಣೆಗಳು (Historical Analysis)", "ಗತ ತಾರ್ಕಿಕ ಭೌತಿಕವಾದಗಳು (Dialectical materialism)", "ಶೇಷ ಮೌಲ್ಯಗಳ ಪ್ರಯೋಜನಗಳು (Surplus Value Utility)", "ವರ್ಗ ಸಂಘರ್ಷ" (Class Conflict), ಶೋಷಕರು (Exploiters), ಶೋಷಿತರು (Exploited), ಬೂರ್ಜ್ವಾಗಳು - ಉಳ್ಳವರು (Haves - Rich Class), ಪ್ರೊಲಿಟರೇಟ್‌ಗಳು - ಇಲ್ಲದವರು (Have nots - Poor Class), ಸಾಮಾಜಿಕ ದೃಷ್ಟಿ (Social Outlook), ವಾಮಪಂಥೀಯ ಚಿಂತನೆ (Leftist Ideas), ಮೊದಲಾದವುಗಳ ಕುರಿತು ಕಮ್ಯೂನಿಷ್ಟರು ಬಡಬಡಾಯಿಸುತ್ತಿರುತ್ತಾರೆ. ಇವೆಲ್ಲಾ ಬೇರೆಯವರಾರಿಗೂ ತಿಳಿಯದ ಬ್ರಹ್ಮವಿದ್ಯೆಗಳೆಂದೂ, ತಾವು ಮಾತ್ರವೇ ಮೇಧಾವಿಗಳೆನ್ನುವುದು ಅವರ ಪ್ರಗಾಢವಾದ ನಂಬಿಕೆ, ನಿಶೆ ಏರಿದಾಗ ಅವರ ಆತ್ಮವಿಶ್ವಾಸ ಮತ್ತಷ್ಟು ಗಾಢವಾಗುತ್ತದೆ. ಆದರೇನು ಪ್ರಯೋಜನ ಈಜು ಬಾರದ ಪಂಡಿತನಂತೆ ಕಮ್ಯೂನಿಸಂ ಮುಳುಗಿ ಹೋಗುತ್ತಿದೆ. ಕಾರಣವೇನೆಂದರೆ, ಪ್ರಜೆಗಳಿಗೆ ಅವಶ್ಯವಾಗಿರುವುದೇನು ಎನ್ನುವುದು ಕಮ್ಯೂನಿಷ್ಟರಿಗೆ ತಿಳಿಯದು. 
     ಕಮ್ಯೂನಿಷ್ಟರು ಕಾರ್ಮಿಕರ ವಿರೋಧಿಗಳು, ಕಮ್ಯೂನಿಷ್ಟರು ಕೃಷಿಕರ ವಿರೋಧಿಗಳು, ಕಮ್ಯೂನಿಷ್ಟರು ಪ್ರಜಾ ವಿರೋಧಿಗಳು. "ಬಸಿರಾದವಳು ಹಡೆಯದೇ ಇರಲಾರಳು" ಎಂದು ಕಮ್ಯೂನಿಷ್ಟರು ಉದ್ಘೋಷಿಸಿದ್ದಾರೆ. ಆದರೆ ವಿಶ್ವದೆಲ್ಲೆಡೆ ಎಲ್ಲಾ ದೇಶಗಳಲ್ಲಿ ಪ್ರಜಾಪ್ರಭುತ್ವದ ಶಿಶುಗಳು ಜನಿಸುತ್ತಿವೆ. ಹೊಟ್ಟೆಯಲ್ಲಿ ಇರುವುದು ಕಮ್ಯೂನಿಷ್ಟು ಶಿಶುಗಳಲ್ಲ! ಆದರೆ, ಈ ವಾಸ್ತವವನ್ನು ಭಾರತೀಯ ಕಮ್ಯೂನಿಷ್ಟರು ಯಾವಾಗ ಒಪ್ಪಿಕೊಳ್ಳುತ್ತಾರೊ!
’ಪರ’ತತ್ತ್ವದ ಚಿಂತೆಯಲಿ
ಹಣ್ಣಾದವು ಕೇಶಗಳು,
ಪರರ ಹಾಡಿ ಹೊಗಳಿ
ಒಣಗಿದವು ಅದರಗಳು!
ಸೋವಿಯತ್ ಸತ್ಯವ ನಂಬಿ
ತನ್ಮಯತ್ವದಲಿ ಮುಳುಗಿದ್ದ
ಮಿಥ್ಯಾ ಪಕ್ಷಿಗೆ ತಗುಲಿತು
’ಪೆರಾಸ್ಟ್ರೋಯಿಕಾ’ ಕವಣೆಯ ಕಲ್ಲು!
****
ಬಯಸಿದ್ದೊಂದು - ಆದದ್ದು ಮತ್ತೊಂದು
ಹಡೆದ ಕೂಸಿನ ಹೊಟ್ಟೆಯ ತುಂಬಲು
ಸಿಗಲಿಲ್ಲ ಸಣ್ಣ ರೊಟ್ಟಿಯ ತುಂಡು
ಇದ್ದದ್ದು ಇದ್ಹಾಗೆ ಹೇಳಿದವನ
ಕಾಯದ ಮೇಲಿನ ತಲೆಯೇ ತುಂಡು!
ಪ್ರಜೆಗಳೆಲ್ಲರೂ ಊಳಿಗದವರೆ,
ಅದರಲ್ಲಿ ಜಾತಿ, ಮತ ಭೇದವಿಲ್ಲ
ಸಮಾನತ್ವ ಸಿದ್ಧಾಂತವೆಂದರೆ
ಇದೇ ಇದರಲಿ ಸಂಶಯವಿಲ್ಲ!
       ಹೀಗೆಂದು ಕಮ್ಯೂನಿಷ್ಟರು ನಿರೂಪಿಸಿದರು. ಅವರು ಹೇಳಿದ್ದು ಒಂದು, ಮಾಡಿದ್ದು ಮತ್ತೊಂದು, ಆದದ್ದು ಬೇರೊಂದು!
      ಎರಡನೇ ಪ್ರಪಂಚ ಯುದ್ಧದ ನಂತರ ಪೂರ್ವ ಯೂರೋಪಿನ ದೇಶಗಳಲ್ಲಿ ಕಮ್ಯುನಿಷ್ಟ್ ವ್ಯವಸ್ಥೆ ಏರ್ಪಟ್ಟಿತು. ಕ್ರಿ.ಶ.೧೯೧೭ರಲ್ಲಿ ಸೋವಿಯತ್ ರಷ್ಯಾದಲ್ಲಿ ಕಮ್ಯೂನಿಸಂನ ಸ್ಥಾಪನೆಯಾಯಿತು. ಸೋವಿಯತ್ ರಷ್ಯಾದ ಪ್ರಭಾವದಿಂದಾಗಿ, ಆರ್ಮೇನಿಯಾ (೧೯೪೪), ಬಲ್ಗೇರಿಯಾ (೧೯೪೬), ಜೆಕಸ್ಲೋವಕೀಯಾ (೧೯೪೮), ಪೂರ್ವ ಜರ್ಮನಿ (೧೯೪೯), ಹಂಗೇರಿ (೧೯೪೭), ರುಮೇನಿಯಾ (೧೯೪೭) ದೇಶಗಳಲ್ಲಿಯೂ ಕಮ್ಯೂನಿಷ್ಟ್ ಸರ್ಕಾರಗಳು ಏರ್ಪಟ್ಟವು. ಒಂದೇ ಪಕ್ಷದ ನಿರಂಕುಶ ಆಡಳಿತವು ಅಲ್ಲಿ ಮೊದಲಾಯಿತು. ಅದೇ ಸಮಯದಲ್ಲಿ, ಪ್ರತ್ಯೇಕವಾಗಿ ಯುಗಸ್ಲೋವಿಯಾ. ಚೈನಾ, ಕ್ಯೂಬಾ, ಉತ್ತರ ಕೊರಿಯಾ, ವಿಯತ್ನಾಂಗಳೂ ಸಹ ’ಕಮ್ಯೂನಿಸಂ’ ಅನ್ನು ಸ್ವೀಕರಿಸಿದವು. 
     ಅತ್ಯಧಿಕ ಸಂಖ್ಯೆಯ ಪ್ರಜೆಗಳನ್ನು ದೋಚುವ ಬಂಡವಾಳಶಾಹಿ ವ್ಯವಸ್ಥೆಯನ್ನು ಧಿಕ್ಕರಿಸಿ ದೋಚಿಕೊಳ್ಳದ ಸಮಾಜವನ್ನು ಏರ್ಪಡಿಸುತ್ತೇವೆಂದು ಕಮ್ಯೂನಿಷ್ಟರು ಪ್ರಚಾರ ಮಾಡಿದರು. ಕಮ್ಯೂನಿಷ್ಟ್ ಸಮಾಜದಲ್ಲಿ ಬಡವ, ಧನಿಕ ಭೇದಗಳಿರುವುದಿಲ್ಲವೆಂದು ಪ್ರಜೆಗಳಿಗೆ ಆಶ್ವಾಸನೆಯಿತ್ತರು. ಸಾವಿರಾರು ವರ್ಷಗಳಿಂದ ಬೂರ್ಜ್ವಾಗಳ (ಉಳ್ಳವರ) ಶೋಷಣೆಗೆ ಒಳಗಾಗಿ ತುಳಿತಕೊಳ್ಳಗಾದ ಕಾರ್ಮಿಕರಿಗೆ ಸುಖಕರವಾದ ಜೀವನವು ಪ್ರಾಪ್ತವಾಗುತ್ತದೆಂದರು. ಕಮ್ಯೂನಿಷ್ಟ್ ಸ್ವರ್ಗದಲ್ಲಿ ಎಲ್ಲರಿಗೂ ಆಹಾರ, ಬಟ್ಟೆ, ವಸತಿ ದೊರೆಯುತ್ತವೆಂದೂ, ಸಮಾಜದಲ್ಲಿ ಸಮಾನತ್ವವು ಏರ್ಪಡುತ್ತದೆಂದೂ, ಬಡಜನರು ಧನಿಕರ ಮೇಲೆ ಅಧಿಕಾರ ಚಲಾಯಿಸುವ ಅವಕಾಶ ದೊರೆಯುತ್ತದೆಂದು ಬಾಯಲ್ಲಿ ನೀರೂರುವಂತೆ ಮಾಡಿದರು! 
   ಕಮ್ಯೂನಿಷ್ಟರು ಹೇಳಿದ್ದೇನೆಂದರೆ ಅನಾದಿಕಾಲದಿಂದಲೂ ಸಮಾಜದಲ್ಲಿ ಎರಡು ವರ್ಗದ ಜನರಿದ್ದಾರೆ. ಒಂದು ಶೋಷಿಸುವ ಅಥವಾ ದೋಚುವ ವರ್ಗವಾದರೆ ಇನ್ನೊಂದು ದೋಚಲ್ಪಡುವ ಅಥವಾ ಶೋಷಣೆಗೆ ಗುರಿಯಾಗುವ ವರ್ಗ. ಶೋಷಿಸುವ ವರ್ಗದವರು ಯಾರೆಂದರೆ - ಧನವಂತರು, ರಾಜರು, ಜಮೀನ್ದಾರರು, ಪುರೋಹಿತಶಾಹಿಗಳು, ಬಂಡವಾಳಶಾಹಿಗಳು, ಮೊದಲಾದವರು. ಎರಡನೇ ವರ್ಗಕ್ಕೆ ಸೇರಿದವರು ಬಡವರು ಹಾಗು ಕಾರ್ಮಿಕರು. ಎರಡನೇ ವರ್ಗದವರನ್ನು ನಿರಂತರವಾಗಿ ಶೋಷಿಸಲು ಮೊದಲನೇ ವರ್ಗದವರು ಹುಟ್ಟುಹಾಕಿದ್ದೇ ಜಾತಿ, ಮತ, ಧರ್ಮ, ಹಾಗು ದೇವರುಗಳು. ಬಡಬಗ್ಗರನ್ನು ನಿರಂತರವಾಗಿ ಊಳಿಗದವಾರಾಗಿಯೇ ಉಳಿಸಲು ಧನಿಕ ವರ್ಗದವರು ಈ ವ್ಯವಸ್ಥೆಗಳನ್ನು ಉಪಯೋಗಿಸಿಕೊಳ್ಳುತ್ತಾರೆ. ರಾಜ್ಯ ವ್ಯವಸ್ಥೆ, ಜಮೀನ್ದಾರಿ ವ್ಯವಸ್ಥೆ, ಬಂಡವಾಳಶಾಹಿ ವ್ಯವಸ್ಥೆ, ಪುರೋಹಿತಶಾಹಿ ವ್ಯವಸ್ಥೆ, ಪ್ರಜಾಪ್ರಭುತ್ವ ವ್ಯವಸ್ಥೆ, ಮೊದಲಾದವು ದೋಚುವ ಪ್ರವೃತ್ತಿಗೆ ಪೂರಕವಾಗಿರುವಂತಹವು. ಆದ್ದರಿಂದ ಶೋಷಣೆಗೆ ಗುರಿಯಾದ ಕಾರ್ಮಿಕರು, ಕಷ್ಟಜೀವಿಗಳು, ಬಡವರು, ಶೋಷಿಸುವ ವರ್ಗದವರ ಮೇಲೆ ತಿರುಗಿ ಬೀಳುತ್ತಾರೆ. ಇದೇ ವರ್ಗ ಸಂಘರ್ಷ, ಇದನ್ನು ಸಾಯುಧ ಹೋರಾಟದ ಮೂಲಕ ಶೋಷಿತರು ಎದುರಿಸುತ್ತಾರೆ. ಹಿಂಸಾ ಮಾರ್ಗದ ಕ್ರಾಂತಿಯಿಂದ ಶೋಷಿತರು ವರ್ಗ ಸಂಘರ್ಷವನ್ನು ಜಯಿಸುತ್ತಾರೆ. ಆಗ ಯಾವುದೇ ವಿಧವಾದ ವರ್ಗಗಳಾಗಲಿ, ಭೇದ ಭಾವಗಳಾಗಲಿ ಇಲ್ಲದ ಕಮ್ಯೂನಿಷ್ಟ್ ವ್ಯವಸ್ಥೆ ಏರ್ಪಡುತ್ತದೆ! ಆಗ ಜಾತಿ, ಮತ, ಧರ್ಮ, ದೇವರು ಮೊದಲಾದವುಗಳಿಂದ ಕೂಡಿದ ದೋಚಿಕೊಳ್ಳುವ ಸಂಸ್ಕೃತಿ ಮಾಯವಾಗುತ್ತದೆ. ದೇಶ ದೇಶಗಳ ಮಧ್ಯದ ಗಡಿಗಳು ಇಲ್ಲವಾಗಿ ಪ್ರಪಂಚವೆಲ್ಲಾ ಒಂದೇ ಸಮಾಜವಾಗಿ ಏರ್ಪಡುತ್ತದೆ. ಆಗ ನಿರುದ್ಯೋಗವಿರುವುದಿಲ್ಲ. ಎಲ್ಲರೂ ಸುಖಶಾಂತಿಗಳಿಂದ ಜೀವಿಸುತ್ತಾರೆ. ಆಗ ಶೋಷಣೆಯಿರುವುದಿಲ್ಲ, ಕಳ್ಳತನ ಅಥವಾ ಬೇರಾವುದೇ ವಿಧವಾದ ಅಪರಾಧಗಳಿರುವುದಿಲ್ಲ. ಆದ್ದರಿಂದ ಸರ್ಕಾರಗಳಿಗೆ ಕೆಲಸವಿರುವುದಿಲ್ಲ. ಕಡೆಯಲ್ಲಿ ಸರ್ಕಾರಗಳೂ ಮಾಯವಾಗುತ್ತವೆ. ಆಗ ಭೂಮಿಯೇ ಸ್ವರ್ಗತುಲ್ಯವಾಗುತ್ತದೆ ಅಥವಾ ಭೂತಲ ಸ್ವರ್ಗವೇರ್ಪಡುತ್ತದೆ! 
ಇದು ಸ್ಥೂಲವಾಗಿ ಕಮ್ಯುನಿಸಂನ ವಿವರಣೆ. 
     ಕಾರ್ಲ್‌ಮಾರ್ಕ್ಸ್‌ ಈ ಸಿದ್ಧಾಂತಕ್ಕೆ ಅಂತಿಮ ರೂಪರೇಷೆಗಳನ್ನು ಕೊಟ್ಟನು. ಇನ್ನೂ ಅನೇಕ ಮೇಧಾವಿಗಳೂ ಸಹ ಈ ಸಿದ್ಧಾಂತವನ್ನು ರೂಪಿಸುವಲ್ಲಿ ಮಹತ್ತರ ಪಾತ್ರವನ್ನು ವಹಿಸಿದ್ದಾರೆ. ಆದರೆ ಮಾರ್ಕ್ಸ್‌ ಹೇಳಿದ್ದನ್ನು ಬದಿಗಿರಿಸಿ, ರಷ್ಯಾದಲ್ಲಿ ಲೆನಿನ್ ಮತ್ತು ಸ್ಟಾಲಿನ್ ಹಾಗು ಚೈನಾದಲ್ಲಿ ಮಾವೋ ಮಾಡಿ ತೋರಿಸಿದ್ದು ಮಾತ್ರವೇ ಕಮ್ಯೂನಿಸಂ ಎಂದು ಪ್ರಖ್ಯಾತವಾಗಿದೆ. ಇತರೇ ದೇಶಗಳ ಕಮ್ಯೂನಿಷ್ಟರಿಗೆ ಲೆನಿನಿಸಂ, ಮಾವೋಯಿಸಂಗಳೇ ಮಾರ್ಗದರ್ಶಕ ಸೂತ್ರಗಳಾಗಿವೆ. 
ಮುಂದುವರೆಯುವುದು.........
*****
ವಿ.ಸೂ.: ಇದು ೧೯೯೦ರಲ್ಲಿ ಮೂಲತಃ ತೆಲುಗಿನಲ್ಲಿ ಪ್ರಕಟಗೊಂಡ ಸುಡುಗಾಡು ಸೇರುತ್ತಿರುವ ಸಮತಾವಾದ - ಕಾಟಿಕಿ ಪೋತುನ್ನ ಕಮ್ಯೂನಿಜಂ, ಲೇಖಕರು - ಶ್ರೀಯುತ ತಂಗೇಡುಕುಂಟ ಹೆಬ್ಬಾರ್ ನಾಗೇಶ್ವರ್ ರಾವ್ ಅವರ ಕೃತಿಯ ಕನ್ನಡ ಅನುವಾದ. ಇಪ್ಪತ್ತೇಳು - ಇಪ್ಪತ್ತೆಂಟು ವರ್ಷಗಳ ಹಿಂದೆಯೇ ಪಾಶ್ಚಿಮಾತ್ಯ ದೇಶಗಳಲ್ಲಿನ ಕಮ್ಯೂನಿಸಂನ ನಿಜವಾದ ಮುಖವೇನು, ಕಮ್ಯೂನಿಸಂನ ಸಿದ್ಧಾಂತ ಎಲ್ಲಿ ಎಡವಿತು ಮತ್ತು ಕಮ್ಯೂನಿಷ್ಟ್‌ಪ್ರಭುತ್ವಗಳು ಮಾಡಿದ ಮಾರಣ ಹೋಮ, ಅಲ್ಪಸಂಖ್ಯಾತರ ಮೇಲಿನ ದಬ್ಬಾಳಿಕೆ, ವಿಫಲವಾದ ಕಮ್ಯೂನಿಷ್ಟರ ಆರ್ಥಿಕ ನೀತಿ, ನಿರಂಕುಶ ಆಡಳಿತ, ಮೊದಲಾದ ವಿಷಯಗಳ ಸಮಗ್ರ ಚಿತ್ರಣವನ್ನು  ಆ ಕಿರುಹೊತ್ತಗೆ ಸಫಲವಾಗಿ ಹಿಡಿದುಕೊಟ್ಟಿದೆ. 
ಹಿಂದಿನ ಲೇಖನ ಭಾಗ - ೧: ಕೊನೆಯುಸಿರೆಳೆಯುತ್ತಿರುವ ಕಮ್ಯೂನಿಸಂ ಓದಲು  ಈ ಕೊಂಡಿಯನ್ನು ನೋಡಿ. 
https://sampada.net/blog/%E0%B2%AD%E0%B2%BE%E0%B2%97-%E0%B3%A7-%E0%B2%95...
 
 
 
 

Rating
No votes yet

Comments

Submitted by makara Fri, 09/07/2018 - 22:58

ಈ ಮಾಲಿಕೆಯ ಎರಡನೆಯ ಲೇಖನವನ್ನೂ ಸಹ ವಿಶೇಷ ಬರಹಗಳಲ್ಲೊಂದಾಗಿ ಆಯ್ಕೆ ಮಾಡಿದ ಶ್ರೀಯುತ ಹರಿಪ್ರಸಾದ್ ನಾಡಿಗ್ ಹಾಗು ಸಂಪದ ಕಾರ್ಯಕಾರಿಣಿ ಸಮಿತಿಗೆ ನಾನು ಚಿರಋಣಿ. ಈ ಮಾಲಿಕೆಯ ಲೇಖನಗಳನ್ನು ಓದಿ ನಿರಂತರವಾಗಿ ಪ್ರೋತ್ಸಾಹಿಸುತ್ತಿರುವ ಸಂಪದ ಹಾಗು ಮೊಗಹೊತ್ತಗೆಯ ಬಳಗದ ಮಿತ್ರರಿಗೂ ಸಹ ಧನ್ಯವಾದಗಳು. ವಂದನೆಗಳೊಂದಿಗೆ, ಶ್ರೀಧರ್ ಬಂಡ್ರಿ :)